ನನ್ನೆದೆಯ ಭಾವಗೀತೆ
ನೋವಿನೊಳಗೂ ಅರಳುವ ಸಂಭ್ರಮ
ಅದುವೇ ನನ್ನವಳ ನಿರ್ಮಲ ಪ್ರೇಮ
ಮಗುವ ಮುಗ್ದ ಮನದವಳು
ನಗುವಿನಿಂದೆಲ್ಲಾ ಧಾರೆಯೆರೆವವಳು
ನನ್ನೆದೆಯ ಭಾವಗೀತೆ ಅವಳು
ಹಣತೆಯಾಗಿ ಮನ ಮನೆ ಬೆಳಗುವಳು
ನೋವಲ್ಲಿ ನನ್ನ ಸಂತೈಸಿ
ನಲಿವಲ್ಲಿ ಬೆರೆವಳು ಸಂಭ್ರಮಿಸಿ
ಬದುಕುವ ಬಲು ಹಂಬಲದಾಕೆ
ಅವಳೊಲವೇ ಬೆಂಬಲವದಕೆ
ಎಲ್ಲವನ್ನೂ ಎದುರಿಸೋ ಗಟ್ಟಿಗಿತ್ತಿ
ಸದಾ ನನ್ನ ಜೊತೆಗಿರುವ ಸಂಗಾತಿ
ಬಡತನದ ಬೇಗೆಯಲಿ ಬೆಂದು
ವರಿಸಿದಳು ನನ್ನ ಸತಿಯಾಗಿ ಬಂದು
ಸಂಪ್ರದಾಯದ ಪರಿಧಿಯೊಳಗೇ
ಸುಖವನರಸಿ ಪರಿಭ್ರಮಿಸುತಿಹಳು
ನೋಯದಂತೆ ಕಾಯಬೇಕು ನಾನು
ಅವಳ ಕಣ್ಣುಗಳಿಗೆ ರೆಪ್ಪೆಯಾಗಿ
ಹೆಣ್ಣು ಅವಳು ಹಣ್ಣಾಗುತಿಹಳು
ಕಾಪಾಡಿಕೊಳುವೆ ಸಿಪ್ಪೆಯಾಗಿ
ಅನುರೂಪ ನಮ್ಮ ಜೋಡಿ
ಒಲವದನು ಬಿಂಬಿಸುವ ಕನ್ನಡಿ
ಅಪರೂಪ ನಮ್ಮ ಸಂಬಂಧ
ನಗುವಿನ ಅದರ ಮಕರಂದ
– ಅಮು ಭಾವಜೀವಿ
ಭಾವಗೀತೆ ಚೆನ್ನಾಗಿದೆ…