ಅಬ್ದಲ್ ಕಲಾಂ

Spread the love
Share Button

K.B Veeralinganagoudar

ನಮ್ಮೂರ ಮುಖ್ಯರಸ್ತೆಯ ಒಂದು ಬದಿಯಲ್ಲಿ ರಂಜಾನ್ ಪುಟ್ಟದೊಂದು ಡಬ್ಬಿ ಅಂಗಡಿ ಇಟ್ಟುಕೊಂಡಿದ್ದ, ಅದರಲ್ಲಿ ಪತ್ರಿಕೆ, ಪೆನ್ನು-ಪುಸ್ತಕ, ಪಂಚಾಂಗ್. ಅಂಚೆಪತ್ರ, ರೆವಿನ್ಯೂ ಸ್ಟ್ಯಾಂಪ್ ಹೀಗೆ ಹಲವುಗಳೆಲ್ಲಾ ಒಂದೇ ಸೂರಿನಡಿ ದೊರೆಯುತ್ತಿದ್ದವು. ರಂಜಾನ್‌ನಿಗೆ ಇಳಿವಯಸ್ಸಿನಲ್ಲಿರುವ ಅಪ್ಪ-ಅಮ್ಮ, ಇರ್ವ ತಮ್ಮಂದಿರು, ಮೂವರು ತಂಗಿಯರು, ಒಟ್ಟು ಎಂಟೂ ಜನರ ಹೊಟ್ಟೆ-ಬಟ್ಟೆಯ ವಿಷಯದಲ್ಲಿ ಈ ಪುಟ್ಟ ಅಂಗಡಿಯದ್ದೆ ಪ್ರಮುಖ ಪಾತ್ರವಿತ್ತು.
ಇಪ್ಪತ್ತಾರರ ಆಸುಪಾಸಿನ ರಂಜಾನ್ ಆಗ್ಲೆ ಪಾ.ವೆಂ.ಆಚಾರ್ಯ, ತೇಜಸ್ವಿ, ಲಂಕೇಶ್, ಫುಲೆ, ಪೆರಿಯಾರ್ ಹೀಗೆ ಹಲವರ ಬದುಕು-ಬರಹಗಳ ಮೇಲೆ ಅಂಗಡಿಯಲ್ಲಿಯೇ ಕುಳಿತು ಕಣ್ಣಾಡಿಸಿ, ತನ್ನ ಮಾತುಗಳ ಮಧ್ಯೆಮಧ್ಯೆ ಆ ಎಲ್ಲ ಪ್ರಗತಿಪರರ ಚಿಂತನೆಗಳನ್ನು ಬಳಸುವ ಕಾರಣಕ್ಕಾಗಿಯೇ ಸರ್ವರ ಪ್ರೀತಿಗೆ ಪಾತ್ರನಾಗಿದ್ದ. ಅದೊಂದು ಸಂಜೆ ನಾವಿಬ್ಬರೆ ಮಾತಾಡ್ತಾ ನಿಂತಾಗ ‘ಸರ್ ತಪ್ಪತಿಳ್ಕೊಬ್ಯಾಡ್ರಿ, ನೀವು ನಿತ್ಕೊಂಡಿದ್ದಕ್ಕ ನಮ್ಮ ಗಿರಾಕಿ ಅಂಗಡಿಕಡೆ ಬರಾಕ ಹಿಂದುಮುಂದು ನೋಡಾಕ್ಹತ್ಯಾರ, ಪ್ಲೀಜ್ ನಾಳೆ ಮಾತಾಡೋಣ’ ಅಂತಾ ಹೇಳಿದಾಕ್ಷಣ ಮರುಮಾತನಾಡ್ದೆ ಮನೆಯತ್ತ ಮುಖ ಮಾಡಿದೆ. ಅಂಗಡಿ ಮುಂದ ನಿಂತ್ರೆ ಗಿರಾಕಿಗಳಿಗೆ ಅದೆಂತಹ ತೊಂದ್ರೆ? ಅಂತಾ ದಾರಿಯುದ್ದಕ್ಕೂ ತಲೆಕೆಡಿಸ್ಕೊಂಡೆ.

ಎಂದಿನಂತೆ ಮರುದಿನ ಸಂಜೆ ರಂಜಾನ್‌ನ ಅಂಗಡಿಯತ್ತ ಬಂದಾಗ, ‘ಬಾಬಾ ನೀವು ಸ್ವಲ್ಪ ಅಂಗಡ್ಯಾಗ ಕೂಡ್ರಿ, ನಾವು ಚಹಾ ಕುಡ್ದ ಬರ್‍ತಿವಿ’ ಅಂತಾ ತನ್ನಪ್ಪನನ್ನು ಅಂಗಡಿಯಲ್ಲಿ ಕೂಡ್ರಿಸಿ, ರಂಜಾನ್ ನನ್ನನ್ನು ಕರ್‍ಕೊಂಡು ಪರಿಮಳ ಹೋಟೆಲ್ಗೆ ಬಂದ. ‘ಸರ್ ನಿನ್ನೆ ನಾನು ಹಾಗೆ ಹೇಳಿದ್ದಕ್ಕ ತಪ್ಪತಿಳ್ಕೊಂಡ್ರೊ ಏನೊ.. ಯಾಕ್ಹಂಗ್ ಹೇಳಿದ್ಯಾ ಅಂದ್ರ ನಮ್ಮ ಅಂಗಡಿಯಲಿ ಕೆಲವರು ಅಶ್ಲೀಲ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ/ಪತ್ರಿಕೆ ಒಯ್ಯತಾರ, ನೀವು ನಿಂತ್ರ ಅವ್ರು ಬರಂಗಿಲ್ಲ ಅದ್ಕ ಹಂಗ್ಹೇಳಿದೆ. ಭಾಳಾ ಮಂದಿ ‘ಮುಟ್ಟಿ ಕೈತೊಳೆದುಕೊಳ್ಳುವಂತಹ ಕೆಟ್ಟ ಪುಸ್ತಕ/ಪತ್ರಿಕೆಗಳನ್ನು ಕೊಳ್ತಾರೆ ಹೊರ್‍ತು, ಕೈತೊಳೆದು ಮುಟ್ಟುವಂತಹ ಒಳ್ಳೆಯ ಪುಸ್ತಕ/ಪತ್ರಿಕೆಗಳನ್ನು ಕೇಳದಿರುವುದು ದುರಂತ.

‘ಸರ್ ಈ ಸುದ್ದಿ ಓದ್ರಿ’ ಅಂತಾ ವಾರಪತ್ರಿಕೆಯ ಝರಾಕ್ಸ ಪ್ರತಿಯೊಂದನ್ನು ಕೈಗಿಟ್ಟ. ನಾಲ್ಕುಸಾಲು ಓದಿದಾಕ್ಷಣ ಇದೇನೊ.. ರಂಜಾನ್! ನಮ್ಮೂರ ಸವಕಾರ ಬಗ್ಗೆ ಇಷ್ಟು ಕೆಟ್ಟದಾಗಿ ಮತ್ತು ಅಶ್ಲೀಲವಾಗಿ ಬರ್‍ದಾರಲ್ಲ ಅಂದೆ ‘ಸರ್ ಇಗಾಗ್ಲೇ ನೂರು ಪ್ರತಿ ಮಾರಾಟ ಆಗ್ಯಾವು, ಇನ್ನೊಂದ್ನೂರು ಕಳಸಂತ ಪೋನ್ ಮಾಡಿನಿ, ಯಾವುದಕ್ಕೂ ಇರ್‍ಲಿ ಅಂತಾ ಇದೊಂದು ಝಾರಾಕ್ಸ ಇಟ್ಕೊಂಡಿನಿ. ಹುಚ್ಚು ಜನಾ ಇದ್ಕ ಹತ್ತ ರೂಪಾಯಿ ಕೊಟ್ಟ ತೊಗಳ್ಳಾಕ್ಹತ್ಯಾರ. ರೊಕ್ಕ ಇರ್‍ಲಾರದ್ದಕ್ಕ ಒಂದತಿಂಗಳಾಗಿತ್ರಿ ಮಟನ್ ಮಾಡಲಾರ್‍ದ, ಇವತ್ತ ನಮ್ಮ ತಮ್ಮನ ಕೈಯಾಗ ಎರಡ ಕೆಜಿ ಮಟನ್, ಉಪ್ಪು, ಮೆಣ್ಸಿನಕಾಯಿ, ಮಸಾಲಿ ಎಲ್ಲಾನೂ ಕಳಿಸಿದ್ಯಾ ಒಂಚೂರು ಸಮಾಧಾನ ಆತು. ‘ಅಲ್ಲೋ ಪೆಪರ್ ಮಾರಿ ಬಂದ ಹಣದೊಳ್ಗ ಹಿಂಗ್ ಮಜಾ ಮಾಡ್ಕೊಂತ ಹೊಂಟ್ರ ನಾಳೆ ಪೆಪರ್‍ನವರು ಬಿಲ್ ಕೇಳಾಕ ಬರ್‍ತಾರಲ್ಲ ಅವಾಗ ಏನ್ ಮಾಡ್ತಿ?’ ಸರ್, ಇಂತಹವರು ಬಿಲ್ ಕೇಳಾಕ ಬರಂಗಿಲ್ರಿ, ಅವ್ರು ತಮ್ಮ ಪತ್ರಿಕೆ ಪ್ರಚಾರಕ್ಕ ಈ ರೀತಿ ಮಾಡ್ತಾರ’ ಹೀಗೆ ಸುಮಾರು ಹೊತ್ತು ತನ್ನ ಕಷ್ಟದ ಬದುಕಿನ ಆನಾವರಣವನ್ನು ರಂಜಾನ್ ಬಿಚ್ಚಿಟ್ಟ. ಚೋಟು ಹೊಟ್ಟೆ ಗೇಣು ಬಟ್ಟೆಗಾಗಿ ಎಷ್ಟೇಲ್ಲಾ ಕಷ್ಟಪಡ್ಬೇಕಲ್ವಾ! ಅಂತಾ ಆಲೋಚಿಸಿದಾಗ ಗಂಟಲಲ್ಲಿ ಚಹಾ ಇಳಿಯಲಿಲ್ಲ.

petty-shop

ಅದೊಂದು ಸಂಜೆ ಪೋನ್ ರಿಂಗಾಯಿತು ಎತ್ತಿಕೊಂಡು ಹಲೋ ಅಂದೆ ‘ಸರ್ ನಾನು ವಸಂತ, ಪೊಲೀಸ್ರು ರಂಜಾನ್‌ನ್ನು ಈಗಷ್ಟೆ ಅರೆಸ್ಟ್ ಮಾಡ್ಕೊಂಡು ಹೋದ್ರು, ಪ್ಲೀಜ್ ಹೇಗಾದ್ರೂ ಮಾಡಿ ಬಿಡಸ್ಕೊಂಡ ಬರ್ರಿ’ ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ? ‘ಅದೇನೂ ಗೊತ್ತಿಲ್ಲ ಸರ್, ನೀವೇ ಒಂದಿಷ್ಟು ಸ್ಟೇಷನ್‌ಗೆ ಹೋಗಿ ವಿಚಾರ ಮಾಡ್ರಿ’ ಅಂತಾ ಅಲವತ್ತುಕೊಂಡ. ಪರಿಚಯಸ್ಥ ಪೊಲೀಸರ್‍ಗೆ ಪೋನ್ ಮಾಡಿದೆ ‘ಸರ್ ನೀವು ಈ ಕೇಸಿನ ಕುರಿತು ಸ್ಟೇಷನ್‌ಗೆ ಬರಬ್ಯಾಡ್ರಿ, ಇದು ಸಾವಕಾರ್ರ ಪರ್ಸನಲ್ ವಿಷ್ಯ’ ಅಂದ್ರು. ಹೋಗ್ಲಿ ಅವ್ನಮೇಲೆ ಯಾವ ಕೇಸ್ ಹಾಕಿದ್ದೀರಿ? ‘ಅಶ್ಲೀಲ ಪುಸ್ತಕ ಮಾರಾಟದ ಕೇಸ್ ಹಾಕಿದ್ದಾರೆ’ ಅಂತಾ ಹೇಳಿ ಪೋನ್ ಕಟ್ಟ ಮಾಡಿದರು.

ಆಮೇಲೆ ನಿಧಾನಕ್ಕೆ ಗೊತ್ತಾಯಿತು, ರಂಜಾನ್ ಸಾವಕಾರರ ಸುದ್ದಿ ಇರುವ ವಾರ ಪತ್ರಿಕೆಯನ್ನು ಕಂಡವರ್‍ಗೆಲ್ಲಾ ಕರೆದು ಮಾರಾಟ ಮಾಡಿದ್ದಾನೆ, ಮತ್ತು ಇವನೆ ಹೇಳಿ ಬರೆಸಿರಬಹುದಂತಾ ಭಾವಿಸಿಕೊಂಡು ಸಾವಕಾರ್ರು ಕೇಸ್ ದಾಖಲಿಸಲು ಪೊಲೀಸ್‌ರಿಗೆ ಸೂಚಿಸಿದ್ದಾರೆಂದು. ಆರೋಪಿಯಾಗಿರುವ ರಂಜಾನ್‌ನನ್ನು ಕಂಡು ಒಂದಿಷ್ಟು ಧೈರ್ಯ ತುಂಬಿ ಬರಬೇಕೆಂದು ತಿರ್ಮಾನಿಸಿ ಪೊಲೀಸ್ ಠಾಣೆಗೆ ಹೊರಡಲು ಅಣಿಯಾದಾಗ ಪತ್ನಿ ‘ರ್ರೀ ನೀವು ರಂಜಾನನ್ನು ಕಾಣಲು ಹೋದ ವಿಷ್ಯ ಆ ಸಾವಕಾರ್‍ಗೆ ಗೊತ್ತಾದ್ರೆ ನಿಮ್ಮ ಮೇಲೂ ಯಾವುದಾದ್ರೂ ಕೇಸ್ ಹಾಕಸ್ಬಹುದು ವಿಚಾರಮಾಡಿ ಹೆಜ್ಜಿ ಇಡ್ರಿ’ ಪತ್ನಿಯ ಅನುಮಾನವು ಸರಿ ಅನ್ನಿಸಿತು, ಪ್ರಸಕ್ತ ‘ರಾಜಕೀಯ’ ನನ್ನೊಳಗೂ ಭಯ ಹುಟ್ಟಿಸಿದ್ದರಿಂದ ರಂಜಾನನ್ನು ಕಾಣಲೇ ಇಲ್ಲ.
* * * * *
ಊರ ಮುಖ್ಯರಸ್ತೆಯ ಅಗಲಿಕರಣದ ಕಾಮಗಾರಿ ನಡೆದಿತ್ತು ಜೆಸಿಬಿ ಅನ್ನೊ ದೈತ್ಯ ಯಂತ್ರ ರಸ್ತೆ ಬದಿಯಲ್ಲಿದ್ದ ರಂಜಾನ್‌ನ ಅಂಗಡಿಯ ಮುಖಕ್ಕೆ ಗುದ್ದಿ, ಅಲ್ಲಿ ಮೊದಲು ಅಂಗಡಿ ಇತ್ತು ಅನ್ನೊ ಯಾವ ಗುರುತು ಸಿಗದಂತೆ ನೆಲಸಮ ಮಾಡಿತು. ಜಾಮೀನು ಪಡೆದು ಜೈಲಿಂದ ಹೊರಬಂದವ್ನೆ ತನ್ನಂಗಡಿಯ ದುಸ್ಥಿತಿ ನೋಡಿ ‘ಅಯ್ಯೊ.. ನನ್ನ ಅಂಗಡ್ಯಾಗ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲಂಕೇಶ್, ತೇಜಸ್ವಿ, ಕಾರಂತ, ಕುವೆಂಪು, ನಂಜುಂಡಸ್ವಾಮಿ ಎಲ್ಲರೂ ಇದ್ರು, ಅಂಗಡಿ ಹೋದ್ರು ಅಡ್ಡಿಯಿಲ್ಲ ನನಗವರೀಗ ಬೇಕು’ ಅಂತಾ ಮಕ್ಕಳಂತೆ ಗೊಳೋ.. ಎಂದಳತೊಡಗಿದ. ನೆರೆದವರು ಒಂದಿಷ್ಟು ಸಂತೈಸಿ ಧೈರ್ಯ ತುಂಬಿದರು. ಬೀದಿಗೆ ಬಿದ್ದ ರಂಜಾನ್ ಜೋಗಿ ಜಂಗಮನಂತೆ ಊರೂರು ತಿರುಗುತ್ತಿರುವಾಗ, ಅದೊಂದು ದಿನ ಆಕಸ್ಮಿಕವಾಗಿ ತಿರುಗಾಟದಲ್ಲಿ ಸಿಕ್ಕ ತನುಜಾಳ ಕೈ ಹಿಡಿದಿದ್ದಾನೆ. ಇತ್ತೀಚಿಗಷ್ಟೆ ಹುಟ್ಟಿದ ಮಗುವಿಗೆ ‘ಅಬ್ದುಲ್ ಕಲಾಂ’ ಹೆಸರಿಟ್ಟು, ರಂಜಾನ್ ಮತ್ತು ತನುಜಾ ದೊಡ್ಡ ಕನಸೊಂದನ್ನು ಪುಟ್ಟ ಗುಡೊಳಗೆ ತೊಟ್ಟಿಲು ತೂಗುತ್ತಾ ಕಟ್ಟುತ್ತಿದ್ದಾರೆ.

 

– ಕೆ.ಬಿ.ವೀರಲಿಂಗನಗೌಡ್ರ, ಸಿದ್ದಾಪುರ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: