ತಗತೆ ಸೊಪ್ಪಿನ ‘ಪತ್ರೊಡೆ’
ಈ ಭೂಮಿ ತನ್ನೊಡಲಲ್ಲಿ ಅದೆಷ್ಟು ಬೀಜಗಳನ್ನು ಹುದುಗಿಸಿರುತ್ತದೆಯೋ ಎಂದು ಅಚ್ಚರಿಯಾಗುತ್ತದೆ. ಬೇಸಗೆಯಲ್ಲಿ ಭಣಗುಟ್ಟುವ ನೆಲ ಒಂದೆರಡು ಮಳೆ ಬಿದ್ದೊಡನೆ, ವಿಧವಿಧದ ಸಸ್ಯರಾಶಿ ಮೊಳೆತು ನೆಲ ನೋಡನೋಡುತ್ತಿದ್ದಂತೆಯೇ ಹಸಿರಾಗುತ್ತವೆ. ಇವುಗಳಲ್ಲಿ ಅಲ್ಪಾಯುಷಿಯಾದ, ಅಡುಗೆಗೆ ಬಳಸಬಹುದಾದ ಗಿಡ-ಮೂಲಿಕೆಗಳು ನೂರಾರು. ಹಸಿರಾಗಿ ಕಂಗೊಳಿಸುವ ‘ ತಗತೆ ಸೊಪ್ಪು/ತಜಂಕ್ ‘ ಅಲ್ಲಲ್ಲಿ ಕಾಣಿಸಿತು ಅಂದರೆ ಆಷಾಢ ಮಾಸ (ತುಳು ನಾಡಿನ ಆಟಿ ತಿಂಗಳು) ಹತ್ತಿರವಾಯಿತು ಎಂಬ ಸೂಚನೆ ಸಿಕ್ಕಂತೆ.
ಯಾರೂ ಬೀಜ ಬಿತ್ತಿ ಬೆಳೆಸದೆ,ಯಾವ ರಾಸಾಯನಿಕ ಗೊಬ್ಬರವನ್ನೂ ಉಪಯೋಗಿಸದೆ, ತಾನಾಗಿಯೇಬೆಳೆಯುವ ಸಾವಯವ ಸಸ್ಯ ‘ತಗತೆ ಸೊಪ್ಪು’. ಈ ಸಸ್ಯದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮಳೆಗಾಲದಲ್ಲಿ ಸಹಜವಾಗಿ ಬರುವ ಶೀತ, ಅಜೀರ್ಣ ಸಂಬಂಧಿ ತೊಂದರೆಗಳಿಗೆ ಇದು ಶಮನಕಾರಿಯಂತೆ. ತಗತೆಸೊಪ್ಪಿನಲ್ಲಿ ಕಬ್ಬಿಣದ ಅಂಶ ಮತ್ತು ನಾರು ಹೇರಳವಾಗಿ ಇದೆ.
ಮೆಂತ್ಯಸೊಪ್ಪಿನಲ್ಲಿ ಏನೆಲ್ಲಾ ಅಡುಗೆ ಮಾಡಬಹುದೋ, ಅವೆಲ್ಲವನ್ನೂ ತಗತೆಸೊಪ್ಪನ್ನು ಬಳಸಿಯೂ ಮಾಡಬಹುದು. ಕೆಲವು ಉದಾಹರಣೆ ಕೊಡುವುದಾದರೆ : ಚಟ್ನಿ, ತಂಬುಳಿ, ಸಾದಾ ಪಲ್ಯ, ತೊವ್ವೆ, ಸಾಂಬಾರು, ಚಪಾತಿ, ರೊಟ್ಟಿ, ಪತ್ರೊಡೆ, ರೈಸ್ ಭಾತ್ , ಕಾಳು ಸೇರಿಸಿ ಪಲ್ಯ* ಬಸ್ಸಾರು*…..ಇತ್ಯಾದಿ.
ಮೂಲತ: ಪತ್ರೊಡೆ ತಯಾರಿಸಲು ‘ಕೆಸುವಿನ ಎಲೆ’ಯದ್ದೇ ಸಾರ್ವಭೌಮತ್ವವಿತ್ತು. ಆದರೆ ಈಗಿನ ಹೊಸರುಚಿಗಳ ಹುಡುಕಾಟದಲ್ಲಿ ಇತರ ಸೊಪ್ಪುಗಳಿಗೂ ಮಾನ್ಯತೆ ಲಭಿಸಿದೆ!
ಕರಾವಳಿಯ ಸ್ಪೆಷಲ್ ಪತ್ರೊಡೆ ಮಾಡುವ ವಿಧಾನ ಹೀಗೆ:
- 2 ಕಪ್ ಕುಸುಬುಲಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
- 4 ಚಮಚೆಯಷ್ಟು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ.
- 4 ಹುರಿದ ಒಣಮೆಣಸು, ಒಂದು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಉದ್ದಿನಬೇಳೆ, ಅರ್ಧ ಚಮಚ ಜೀರಿಗೆ, ಒಂದು ಚಿಟಿಕೆ ಇಂಗು – ಇವಿಷ್ಟನ್ನು ಹುರಿದಿಟ್ಟುಕೊಳ್ಳಿ.
- ಅರ್ಧ ನಿಂಬೆ ಹಣ್ಣಿನಷ್ಟು ಗಾತ್ರದ ಹುಣಸೇಹಣ್ಣು ತೆಗೆದಿರಿಸಿ.
- ಎಲ್ಲವನ್ನೂ ನೆನೆಸಿದ ಅಕ್ಕಿಯೊಂದಿಗೆ ಸೇರಿಸಿ, ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಇದಕ್ಕೆ ಹೆಚ್ಚಿಟ್ಟ 2 ಕಪ್ ತಗತೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ.
- 7- 8 ಆಯತಾಕಾರದ ಬಾಳೆಲೆಗಳ ಮೇಲೆ ಬಿಸಿನೀರು ಎರಚಿ ಅಥವಾ ಒಲೆಗೆ ಹಿಡಿದು ಬಾಡಿಸಿಕೊಳ್ಳಿ (ಬಾಳೆಲೆ ಬಾಡಿಲ್ಲವೆಂದಾದರೆ ಮಡಚುವಾಗ ಮುರಿಯುತ್ತದೆ).
- ಒಂದು ಸೌಟಿನಷ್ಟು ಹಿಟ್ಟನ್ನು ಬಾಳೆಲೆಯ ಮಧ್ಯಕ್ಕೆ ಸುರಿದು, ಬಾಳೆಲೆಯ ನಾಲ್ಕೂ ಅಂಚುಗಳನ್ನು ಮಡಚಿ . ಮಡಚಿದ ಬಾಳೆಲೆಯ ಅಂಚುಗಳು ಬಿಚ್ಚದಂತೆ, ಒಂದರ ಮೇಲೊಂದು ಹಿಮ್ಮುಖವಾಗಿ ಇಡ್ಲಿಪಾತ್ರೆ/ಕುಕ್ಕರ್ ನಲ್ಲಿ ಜೋಡಿಸಿ. ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿದಾಗ ತಗತೆಸೊಪ್ಪಿನ ಪತ್ರೊಡೆ ಸಿದ್ಧವಾಗುತ್ತದೆ.
ಬಿಸಿ-ಬಿಸಿ ಪತ್ರೊಡೆಗೆ ತೆಂಗಿನೆಣ್ಣೆ/ತುಪ್ಪ, ಚಟ್ನಿ/ಜೋನಿಬೆಲ್ಲ ..ಹೀಗೆ ಅವರವರ ಆಯ್ಕೆಗೆ ತಕ್ಕಂತೆ ಸಿಹಿ ಅಥವಾ ಖಾರ ನೆಂಚಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಬೆಂದ ಪತ್ರೊಡೆಯನ್ನು ಪುಡಿ ಮಾಡಿ, ಕಾಯಿ-ಬೆಲ್ಲ ಸೇರಿಸಿ ಒಗ್ಗರಣೆ ಮಾಡಿದರೂ ಚೆನ್ನಾಗಿರುತ್ತದೆ.
– ಹೇಮಮಾಲಾ.ಬಿ
* ತಗತೆ ಸೊಪ್ಪಿನ ಬಸ್ಸಾರು ಮತ್ತು ಪಲ್ಯ : ಇದರ ಬಗ್ಗೆ ಓದಬೇಕಿದ್ದರೆ ಈ ಕೊಂಡಿಯನ್ನು ಕ್ಲಿಕ್ಕಿಸಿ. http://52.55.167.220/?p=7934
ಒಳ್ಳೆಯ ತಿನಿಸು …ಚಗತೆ ಸೊಪ್ಪು ಜಂತು,ಕ್ರಿಮಿ ಬಾಧೆಗೆ ಒಳ್ಳೆಯ ಔಷಧ. ಇದನ್ನು ಅಡಿಗೆಯಲ್ಲಿ ಬಳಸಿದರೂ ಸಾಕು.
ಹೊ… ಹೂಸ ರುಚಿ.. ತಗತೆ ಸೊಪ್ಪಿಂದಲೂ ಪತ್ರೊಡೆ ಮಾಡಬಹುದೆ? ಹಿಂದೆಲ್ಲ ಅದರಿಂದ ಪಲ್ಯ ಮಾಡಿದ್ ತಿಂದಿದ್ ನೆನಪು.. ಈಗೀಗ ಇದನ್ನೆಲ್ಲ ಬಳಸುವವರೇ ಇಲ್ಲ.
ತಗತೆ ಸೊಪ್ಪು ವಡೆಯೂ ಚೆನ್ನಾಗಿರುತ್ತದೆ