ಏನೋ ಹೇಳಲು ಬಂದೆ…!
ಆವತ್ತು ಫ಼ೆಬ್ರವರಿ ೧೪. ಪ್ರೇಮಿಗಳ ದಿನ.
ಅದು ಬೆಂಗಳೂರು ನ್ಯಾಶನಲ್ ಪಾರ್ಕ್.
ಒಂದು ಜೋಡಿ ಹುಡುಗ–ಹುಡುಗಿ.
“ಹಾಯ್… ತುಂಬಾ ಹೊತ್ತಾಯಿತಾ ಬಂದು?” ಹುಡುಗಿ ಕೇಳಿದಳು.
“ಇಲ್ಲ, ಜಸ್ಟ್ ಈವಾಗ ಬಂದೆಯಷ್ಟೇ” ಅಂದ ಹುಡುಗ, ಬಂದು ಒಂದೂವರೆ ಗಂಟೆಯಾಗಿದ್ದರೂ ಕೂಡ..!
ಸ್ವಲ್ಪ ಹೊತ್ತು ಮೌನ..! ಇಬ್ಬರ ನಡುವೆಯೂ ಮಾತಿಲ್ಲ..!
“ನೀನಂದ್ರೆ ನಂಗಿಷ್ಟ.. ಆದ್ರೆ ಜೊತೇಲಿ ಬಾಳೋದೇ ಕಷ್ಟ..!” ಎನ್ನುತ್ತಾ ಅವಳು ಮೌನ ಮುರಿದಳು.
“ಹಾಂ..! ಅದೂ ಗೊತ್ತಿದ್ದೂ ಕಾಯುತಿರುವೆ; ನೀನು ಬರುವೆ… ಬರುವೇ.. ಎಂದು” ಅವನು ಉತ್ತರಿಸಿದ.
“ನೀನು ನನ್ನ ಹಾಗಿಲ್ಲ; ನಿನ್ನ ಹಾಗೆ ನಾನು ಇರೋಕಾಗಲ್ಲ..!” ಅವಳು ನುಡಿದಳು.
“ನನ್ನ ತುಂಬು ಸಂಸಾರ.. ಅದು ನಿಂಗೆ ಸಸಾರ.. ನಾನೇನು ಮಾಡಲಿ ನೀನೇ ಹೇಳು?” ಹುಡುಗ ಕೇಳಿದ.
“ನೋಡೂ.. ನಾ ಒಂಟಿ.. ನಿನ್ನೊಂದಿಗಿದ್ರೆ ಮಾತ್ರ ನಾ ತುಂಟಿ.. ನಮಗ್ಯಾಕೆ ಬೇಕು ಈ ಅಂಕಲ್ ಆಂಟಿ..?” ಅವಳ ಆಶಯ.
“ನಿಂಗೆನೋ ಆಸೆ ನಾ ಪೂರೈಸಲಾಗದ್ದು… ಆದರೂ ಮತ್ಯಾಕೆ ಬಂದೆ..?” ಅವನು ಕೇಳಿದ ವಿಷಯ.
“ನಾ ಹೋಗುತಿರುವೆ ವಿದೇಶ.. ಕೊನೆಯ ಭೇಟಿ… ಏನೋ ಹೇಳುವ ತವಕ.. ಅಷ್ಟೇ..!” ಎಂದಳು ಹುಡುಗಿ.
“ಸರಿ ಹಾಗಾದರೆ, ಇನ್ನು ಹೊರಡುವ.. ನಿನ್ನ ದಾರಿ ಬೇರೆ… ನಾನೇ ಬೇರೆ..!” ಹುಡುಗ ಹೇಳಿದ.
“ಇಲ್ಲ.. ಇಲ್ಲಾ.. ನಾವಿಬ್ಬರೂ ಒಂದೇ.. ಆದರೆ ನೀನು ಕವಿ.. ಯಾವತ್ತೂ ಭ್ರಮೆಯಲ್ಲಿರ್ತಿಯಾ… ನಾನು ಲೇಖಕಿ… ರಿಯಾಲಿಟೀಲೀ ಇರ್ತೀನಿ” ಹೇಳುತ್ತಾ ಅವಳು ಮುಂದುವರೆಸಿದಳು “ಹೋಗುವ ಮುಂಚೆ ಒಂದು ಸಾರಿ..” ಎನ್ನುತ್ತಾ ಅವನ ಮುಖ ನೋಡಿದಳು.
“ಏನು…?” ನೋವು ತುಂಬಿದ ಕಂಗಳಿಂದ ಕೇಳಿದ ಹುಡುಗ.
“ಒಂದೇ ಒಂದು ಹಸ್ತಲಾಘವ..?” ಅವಳು ಕೈ ಚಾಚಿದಳು.
“ಬೇಡ… ನಾವಿಬ್ಬರೂ ಒಂದೇ… ಯಾವತ್ತೂ ಬೇರೆಯಾಗುತ್ತಿಲ್ಲವಲ್ಲಾ.. ನೀನು ರಿಯಾಲಿಟಿ.. ನಾನು ಭ್ರಮೆ.. ಜೊತೇಲೇ ಇರೋನಾ..” ಅವನು ನಮಸ್ಕರಿಸಿದ.
– ಅಶೋಕ್ ಕೆ. ಜಿ. ಮಿಜಾರ್.