ಉದ್ದಿನ ಸಂಡಿಗೆ
ಬೇಸಗೆಯಲ್ಲಿ ಬಿಸಿಲಿನ ಸದುಪಯೋಗ ಪಡೆದು ಮಾಡಬಹುದಾದ ಕೆಲಸ ವಿವಿಧ ಹಪ್ಪಳ-ಸಂಡಿಗೆಗಳ ತಯಾರಿ.
ಉದ್ದಿನಬೇಳೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಬಳಸಿ ಸಂಡಿಗೆಯನ್ನು ತಯಾರಿಸುವ ವಿಧಾನ ಹೀಗಿದೆ:
- ಒಂದು ಲೋಟದಷ್ಟು (ಸುಮಾರು 100 ಗ್ರಾಮ್) ಉದ್ದಿನಬೇಳೆಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಉದ್ದಿನಬೇಳೆಯನ್ನು ಸೋಸಿ ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ.
- ಕಾಲು ಕಿಲೊ ಹಸಿರುಮೆಣಸಿನಕಾಯಿಗಳನ್ನು ತೊಟ್ಟು ಬೇರ್ಪಡಿಸಿ, ಶುಚಿಗೊಳಿಸಿ, ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗಲೇ ಒಂದು ಟೇಬಲ್ ಸ್ಪೂನ್ ನಷ್ಟು ಉಪ್ಪು ಸೇರಿಸಿ. ಆಗ ಉಪ್ಪು-ಖಾರ ಚೆನ್ನಾಗಿ ಹೊಂದಿಕೊಳ್ಳುತ್ತದೆ.
- ರುಬ್ಬಿದ ಉದ್ದಿನಹಿಟ್ಟು ಮತ್ತು ಹಸಿರುಮೆಣಸಿನಕಾಯಿ ತರಿಯನ್ನು ಬೆರೆಸಿ ಚೆನ್ನಾಗಿ ಕೆದಕಿ. ಈ ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ಗಟ್ಟಿಯಿರಬೇಕು .
- ಹೀಗೆ ಸಿದ್ಧಪಡಿಸಿದ ಹಿಟ್ಟಿನಿಂದ ಬಾಳೆ ಎಲೆ ಮೇಲೆ ಪುಟ್ಟದಾಗಿ ಸಂಡಿಗೆಗಳನ್ನು ಹಾಕಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.
- ಒಣಗಿದ ಸಂಡಿಗೆಗಳನ್ನು ಗಾಳಿಯಾಡದ ಶೇಖರಿಸಿಟ್ಟರೆ ಒಂದು ವರ್ಷಕ್ಕೂ ಕೆಡುವುದಿಲ್ಲ.
ಊಟಕ್ಕೆ ನೆಂಚಿಕೊಳ್ಳಲು ಬೇಕೆನಿಸಿದಾಗ, ಕಾದ ಎಣ್ಣೆಯಲ್ಲಿ ಉದ್ದಿನ ಸಂಡಿಗೆಗಳನ್ನು ಕಂದು ಬಣ್ಣಕ್ಕೆ ಬರುವಂತೆ ಕರಿಯಬೇಕು. ಈ ಸಂಡಿಗೆಯು ತುಪ್ಪನ್ನ ಅಥವಾ ಮೊಸರನ್ನದೊಂದಿಗೆ ಉಣ್ಣಲು ಬಹಳ ರುಚಿಯಾಗಿರುತ್ತದೆ.
ವಿ.ಸೂ : ಹಸಿರುಮೆಣಸಿನಕಾಯಿಯ ಘಾಟು ತಗ್ಗಿಸಲು ಬೇಕೆನಿಸಿದರೆ, ಹಿಟ್ಟು ತಯಾರಿಸುವಾಗ ಸ್ವಲ್ಪ ಕಾಪ್ಸಿಕಮ್ , ಸೋರೆಕಾಯಿ, ಸೌತೆಕಾಯಿ ಅಥವಾ ಬೂದುಗಂಬಳಕಾಯಿ ಇವುಗಳಲ್ಲಿ ಯಾವುದಾದರೂ ಒಂದನ್ನು ತುರಿದು ಹಿಂಡಿ ಸೇರಿಸಬಹುದು. ಆದರೆ ಹಿಟ್ಟು ತೆಳುವಾಗದಂತೆ ಜಾಗರೂಕತೆ ವಹಿಸಬೇಕು.ತರಕಾರಿಯ ನೀರನ್ನು ಸೇರಿಸಬಾರದು. ಹೆಚ್ಚಿದ ಕರಿಬೇವಿನ ಸೊಪ್ಪನ್ನೂ ಸೇರಿಸಬಹುದು.
– ಚಂದ್ರಾವತಿ.ಬಿ
Good information. Thanks a lot.
good information
ಬೇಸಿಗೆಯ ಬಿಸಿಲಿನ ಸದುಪಯೋಗದಿಂದ ತಯಾರಿಸಿದ ಘಮಗುಟ್ಟುವ ಸಂಡಿಗೆ ಮಳೆಗಾಲದಲ್ಲಿ ಆಪ್ತಮಿತ್ರ.. ಒಳ್ಳೆಯ ಬರಹ .. 🙂