ನಡೆಗೊಂದು ಹಾದಿ
ಪಯಣದ ಹಾದಿಯುದ್ದಕ್ಕೂ
ಬರೇ ಎಡವಟ್ಟುಗಳೇ
ಎಲ್ಲೋ ಹತ್ತಿ ಮತ್ತೆಲ್ಲೋ ಇಳಿದು
ತಲುಪುವಲ್ಲಿಗೆ ತಲುಪದೆ ಹೈರಾಣಾಗಿ..
ಮತ್ತೆ ತಿರುಗಿ ಪಯಣಿಸುವ
ಗೊಂದಲದ ಗೋಜಿಗೆ ತಾಕಿಕೊಳ್ಳದೆ
ಸಿಕ್ಕ ಹಾದಿಯಲ್ಲೇ ನಿಶ್ಚಿಂತವಾಗಿ
ನಡೆಯುವ ನಿಶ್ಚಯ.
ದೈವಚಿತ್ತದ ಮುಂದೆ ಯಾವುದೂ
ಇಲ್ಲವೆಂದು ಬಡ ಬಡಿಸುತ್ತಲೇ
ಸಾಗುವಾಗ..
ದಾರಿಗುಂಟ ಸಿಕ್ಕಿದ್ದು ಕಲ್ಲು
ಚುಚ್ಚಿದ್ದು ಮುಳ್ಳು
ಜಿನುಗುತ್ತಲೇ ಇದೆ ಆಳದಲ್ಲೊಂದು
ನೋವು.
** ** **
ಶುಷ್ಕ ಹಾದಿ; ನಿರ್ಭಾವುಕ ನಡಿಗೆ
ಆದರೂ ಕಟಿಪಿಟಿಯೆನ್ನದೆ ಬಿಡಿಸಿದ
ರಂಗೋಲಿ ಮೇಲೆ
ಸಂಭ್ರಮಕ್ಕೂ ಸಡಗರಕ್ಕೂ ಕಟ್ಟಿದ
ತೋರಣಕ್ಕೆ ಸಾಕ್ಷ್ಯ ಹೇಳಬೇಕಾಗಿದೆ
ಅದೇ ಹಾದಿಯೆದೆ.
ಮುದವಿಲ್ಲದಿದ್ದರೂ ನಡೆ ಮೇಲೆ ನಡೆಯಿಟ್ಟು
ಹದಗೊಂಡ ನಡಿಗೆ
ಬಸವಳಿದು ಜೋಲಿ ಹೊಡೆದರೂ
ಬಲಗೊಂಡಿದೆ ಆ ನೇರ ಹಾದಿಯಲ್ಲೇ
ಸಾವರಿಸಿ ಬದುಕು ಸವೆಸುವ ಇರಾದೆ.
ಇಗೋ! ಇದೇ ಹೊತ್ತಲ್ಲಿ
ಧುತ್ತನೆ ದೇವಲೋಕದಿಂದ ಧರೆಗಿಳಿದಂತೆ
ಕನಸಿನ ಹಾದಿ ಕಣ್ಣ ಮುಂದೆ ಪ್ರತ್ಯಕ್ಷ
ಕೈ ಬೀಸಿ ಕರೆಯುವಷ್ಟು ಹತ್ತಿರ
ನಡೆ ತತ್ತರಗೊಳ್ಳುವಷ್ಟು ಸಮೀಪ.
ಇಟ್ಟ ಹೆಜ್ಜೆ ಗಟ್ಟಿಯಾಗಿ ಬೇರು ಬಿಟ್ಟಿದೆ
ನಂಟು ಅಳಿಸಲಾಗದಷ್ಟು ಮೀರಿ ಬೆಳೆದಿದೆ
ಹೂ ಹಾಸಿ ಕರೆವ ಕನಸ ಹಾದಿಯ ಬೆಳಕ
ತುಳುಕದಂತೆ ಕಣ್ಣಲ್ಲಿ ತುಂಬಿ
ಹಳೆ ಹಾದಿ ಮೇಲೆ ಈಗ ನವಿಲು ನಡಿಗೆ.
** ** **
ಹೀಗೆ ಅನಾದಿಯಿಂದಲೂ ನಡೆಯುತ್ತಲೇ
ಇದೆ ನಡಿಗೆ
ಯಾವುದೋ ಹಾದಿಗೆ ಸಾಥಿಯಾಗುತ್ತಾ
ಅರ್ಥವಿಲ್ಲದ ಹಾದಿ ಮೇಲೆ ಅರ್ಥ ಅರಸುತ್ತಾ..
ನಡೆಗೊಂದು ಹಾದಿ
ನಡೆಯಲೇ ಬೇಕು
ನಡಿಗೆ ಅನಿವಾರ್ಯ.
– ಸ್ಮಿತಾ ಅಮೃತರಾಜ್, ಸಂಪಾಜೆ
ನಡಿಗೆಯ ಪರಿ ಚೆನ್ನಾಗಿದೆ…