ಹುಯಿಸವ್ವ ಒಂದೆರಡು ಅಡ್ಡಮಳೆಯ!
ಹೊದ್ದು ಬಿಸಿಲ ಜಮಖಾನ ಮಲಗಿದ
ಜ್ವರ ಬಂದ ಭೂಮಿತಾಯಿ
ಹಸಿರೆಲ್ಲ ಮಾಯವಾಗಿ
ಉಸಿರುಗಳು ನಿದಾನವಾಗಿ
ಬೋಳುಗುಡ್ಡಗಳ ಮೇಲೆ
ಕಾಲು ಮುರಿದ ನರಸತ್ತ ನವಿಲುಗಳು
ಗೊಬ್ಬರದ ಗುಂಡಿ ಕೆರೆಯುವ ಕೋಳಿಗಳು
ಹಸಿದ ಮಕ್ಕಳು ಸತ್ತವು
ಉಳ್ಳವರ ಮನಯ ಕಣಜಗಳ ಕಾಳುಗಳು ಅತ್ತವು
ಯಾರ ಕೊಟ್ಟಿಗೆಯ ಯಾವ ಹಸು ಸತ್ತಿತೋ
ಕಾದು ಕುಂತರು ಹೊತ್ತೊಯ್ಯಲು ಹಸಿದ ಜನಗಳು
ಯಾವ ಗುಡಿಸಲಲಿ ಯಾವ ಮುದುಕಿ ಸತ್ತಿತೊ
ಕಂಗಾಲಾಗಿ ಕುಂತರು ಮಣ್ಣು ಮಾಡಬೇಕಾದ ಕೆಲಸಕೆ
ಯಾವ ದೇವತೆಗಳ ಕೋಪವೊ
ಯಾವ ಸಂತರ ಶಾಪವೊ
ಉತ್ತು ಬೀಜ ಬಿತ್ತುವ ಕೈಗಳು ಬಿಕ್ಷೆಗೆ ನಿಂತವು
ಹಾಲು ಕುಡಿಯುವ ಹಸುಗೂಸಿನ ಬಾಯಿಗೆ ರಕ್ತ ಮೆತ್ತಿತು
ಎಲ್ಲ ನೋವುಗಳಿಗು ಔಷದಿ ಹೊಂದಿದ ತಾಯಿ ನೀನು
ಎಲ್ಲ ಬೇಗೆಗಳನ್ನೂ ಬಗೆಹರಿಸುವ ಕರುಣಾಳು ನೀನು
ಹುಯಿಸವ್ವ ಒಂದೆರಡು ಅಡ್ಡ ಮಳೆಯ
ಬೆಂದ ಭೂಮಿಯ ತಣಿಸವ್ವ!
ನೊಂದ ಜನರ ಪೊರೆಯವ್ವ!
– ಕು.ಸ.ಮಧುಸೂದನ
ಕವಿ ಬಿಡಿಸಿದ ಇಂದಿನ ಜೀವ ಹಿಂಡುವ ಚಿತ್ರಣವಿದು.