ಉಚಿತ ವೈದ್ಯಕೀಯ ತಪಾಸಣಾ ಶಿಬಿರ -ಏಕಲವ್ಯನಗರ
27 ಮಾರ್ಚ್ 2016 ರ, ಭಾನುವಾರ ಮೈಸೂರಿನ ಹೊರವಲಯದಲ್ಲಿರುವ ಏಕಲವ್ಯನಗರದಲ್ಲಿ ಏರ್ಪಡಿಸಲಾದ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ, ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ .
ಇಂತಹ ಶಿಬಿರಗಳಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ. ಆದರೆ ವೈದ್ಯರಲ್ಲದ ನನ್ನಂತವರಿಗೂ ಇಲ್ಲಿ ಕೆಲವು ಕೆಲಸಗಳಿರುತ್ತವೆ. ಉದಾಹರಣೆಗೆ, ಹೆಸರು ನೋಂದಾಯಿಸುವುದು, ಸಾಮಾನುಗಳನ್ನು ಜೋಡಿಸಿಡುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಇತ್ಯಾದಿ.
ಸದುದ್ದೇಶವೊಂದಕ್ಕೆ ಸಮಾನಾಸಕ್ತ, ಸಹೃದಯ ಮನಸ್ಸುಗಳ ಸಹಕಾರ ದೊರೆತಾಗ ಉತ್ತಮ ಫಲಿತಾಂಶ ದೊರೆಯುತ್ತದೆ. ನಮ್ಮಲ್ಲಿರುವ ಸಮಯ ಮತ್ತು ದುಡ್ಡಿನ ‘ಎಳ್ಳಿನ ಏಳು ಭಾಗವನ್ನಷ್ಟಾದರೂ’ ಸಮಾಜಮುಖಿ ಕಾರ್ಯಕ್ರಮಕ್ಕೆ ಬಳಸಿಕೊಂಡರೆ ಅದರಿಂದ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.
ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮತ್ತು ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕ, ಮೈಸೂರು ಇವರ ಸಹಯೋಗದೊಂದಿಗೆ ಮೈಸೂರು ಜಿಲ್ಲಾ ಕುಟುಂಬ ವೈದ್ಯರ ಸಂಘ (ನೋಂ) ಮೈಸೂರು ಇವರು ತಮ್ಮ ತಂಡದೊಂದಿಗೆ, ಏಕಲವ್ಯನಗರದ ನಿವಾಸಿಗಳಿಗಾಗಿ ಹಮ್ಮಿಕೊಂಡಿದ್ದ ಅರ್ಧ ದಿನದ ಕಾರ್ಯಕ್ರಮ ಇದಾಗಿತ್ತು. ಸುಮಾರು 170 ಮಂದಿ ಈ ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿರುವುದು ನಮ್ಮ ಶ್ರಮವನ್ನು ಸಂಪನ್ನಗೊಳಿಸಿತು. ಇಲ್ಲಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳದ, ತೆರೆಮರೆಯಲ್ಲಿ ದುಡಿದ ಇನ್ನಷ್ಟು ಸ್ವಯಂಸೇವಕರೂ ಕಾರ್ಯಕ್ರಮದ ಯಶಸ್ಸಿಗೆ ಕೈಗೂಡಿಸಿದ್ದಾರೆ.
– ಹೇಮಮಾಲಾ.ಬಿ