ಭಾವ ಚಿತ್ರ
ಊರುಕೇರಿ ಸುತ್ತಿ ಸುಳಿದ
ನೆನಪುಗಳ ಮುತ್ತಿಗೆಗೆ
ಸಂವೇದನೆಯ ಚಿತ್ರವೆ
ನಿನಾದದ ಜೋಳಿಗೆ,
ಗೋಣಾಡಿಸಿ ಹಾರುವ ಹಕ್ಕಿಯು
ಎಂದಾದರು ತನ್ನ ಅಂದವ ತಾನು
ನೋಡಿಕೊಂಡಿರಲು ಸಾಧ್ಯವೇ ?
ಇಲ್ಲದ ಸತ್ಯಾಸತ್ಯತೆಯು
ಉಸಿರಿಲ್ಲದ ಚೌಕಟ್ಟಿನಲ್ಲಿ ಬಂಧಿಯಾಗಿ
ಮನಪಟಲದಲ್ಲಿ ಅಚ್ಚಾಗಿ ಕುಳಿತಿದೆ ಸ್ವತಂತ್ರವಾಗಿ!
ಜಗತ್ತೇ ಮುಖವಾಡದ ಸೋಗಿನಲ್ಲಿದ್ದರು
ಎಲ್ಲರಿಗು ಎಲ್ಲಿಲ್ಲದ ವ್ಯಾಮೋಹ
ಅವರವರ ಮುಖದ ಮೇಲೆ
ಇರಲೇಬೇಕೆಂದಿಲ್ಲದ ಈ ವ್ಯಾಮೋಹ
ನಾವು ನಾವಾಗಿರುವ ಸಾಧ್ಯತೆಯ
ಉಳಿಸಿದರಷ್ಟೆ ಸಾಕು!
ಭಯವಿಲ್ಲದ ಭಾವನೆಗೆ
ಮುಕ್ತ ನಗೆಯ ಸೂಸಿ
ಮುಗ್ಧತೆಯ ಸಾರ ಚೆಲ್ಲಿ
ನಮ್ಮಗಳದ್ದೆ ಪ್ರತಿಬಿಂಬದಲಿ
ನಮ್ಮದಲ್ಲದ ಪಾತ್ರವನ್ನೂ ಮಾಡುತ್ತಾ
ಮತ್ತೆ ಮತ್ತೆ ನೋಡುವ ನಡೆದ ಹೆಜ್ಜೆಗಳು
ನಾವಿರದ ನಾಳೆಗಳಿಗೆ
ನಮ್ಮುಳಿವಿನ ಚಿತ್ರಗಳು
ಆತ್ಮಸಂತೋಷದ ಗಳಿಗೆಗೆ
ನಮ್ಮೊಲವಿನ ನೆನಪುಗಳು.
– ಸಂಗೀತ ರವಿರಾಜ್ , ಮಡಿಕೇರಿ
ತುಂಬಾ ಒಳ್ಳೆಯ ಕವಿತೆ, ಅಭಿನಂದನೆಗಳು
ಭಾವಪೂರ್ಣ ಕವನ…ಇಷ್ಟವಾಯಿತು.
ಸೊಗಸಾದ ಕವಿತೆ …ಹೀಗೆ ಬರೆಯುತ್ತಿರಿ..:)..