ಹೊಸವರ್ಷಕ್ಕೆ, ಹರ್ಷದ ನಿರೀಕ್ಷೆ
ಹೊಸ ವರ್ಷವೆ ನೀನು ಹೊಸತಾಗಿ ಬಾ|
ಹಿಂದಿನಂತಲ್ಲದೆ ಮುಂದೆ ಬದಲಾಗಿ ಬಾ||
ಮಾನಿನಿಯರ ಮಾನ ಕಾಪಾಡುವಂತೆ
ಅತ್ಯಾಚಾರ ಅನಾಚಾರಕ್ಕೆ ಅಂತಿಮ ಹಾಡುವಂತೆ
ಸ್ವೇಚ್ಹಾಚಾರವನು ಸದೆಬಡಿಯುವಂತೆ
ಸಚ್ಹಾರಿತ್ರ್ಯವನು ನೆಲೆಗೊಳಿಸು ಬಾ ||ಹೊಸ||
ಹಿಂಡಿದ ಮನವನು ಹಿಗ್ಗಿಸು ಮೊದಲಾಗಿ
ಭ್ರಷ್ಟಾಚಾರವ ಬಡಿದೋಡಿಸು ಕಾರ್ಯವಾಗಿ
ದುಷ್ಟ-ದುರ್ಜನರ ದೂರೀಕರಿಸು ಬಾ
ಧರ್ಮ-ಸಂಸ್ಕಾರವನು ಉಳಿಸಿ, ಬೆಳೆಸು ಬಾ ||ಹೊಸ||
ನಿರ್ಮಲ,ನೀತಿಯ ನಿಯಮಿಸಲು ಬಾ
ನಿತ್ಯ-ನಿಯಮ ,ನಿಷ್ಟೆಯ ಸ್ಥಾಪಿಸಲು ಬಾ
ಅಂಧಕಾರದ ಆಡಳಿತ ಅಡಗಿಸಲು ಬಾ
ಚಂದದ ಆಡಳಿತದಿ ಬೆಳಗಿಸು ಬಾ ಇನ್ನು ಮುಂದೆ||ಹೊಸ||
– ವಿಜಯಾಸುಬ್ರಹ್ಮಣ್ಯ,ಕುಂಬಳೆ