ಕಲಬುರಗಿಯ ಮಹಾ ದಾಸೋಹಿ – ಶ್ರೀ ಶರಣಬಸವೇಶ್ವರರು

Share Button

Nagaraj Bhadra

ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. 18-19 ನೇ ಶತಮಾನಗಳು ಇಂದಿನ ಭಾರತದ ಪಾಲಿಗೆ ಕರಾಳ ಅಧ್ಯಾಯಗಳು. ಅಂದಿನ ಪ್ರತಿಷ್ಠಿತ ಸಂಸ್ಥಾನಗಳು ಬ್ರಿಟಿಷರ ದೌರ್ಜನ್ಯಕ್ಕೆ ನಲುಗಿ, ಬ್ರಿಟಿಷರ ಅರಸೊತ್ತಿಗೆಯನ್ನು ಒಪ್ಪಿಕೊಂಡ ಕಾಲವದು.

ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು ಇಂತಹ ಸಂದಿಗ್ಧ ಕಾಲದಲ್ಲಿಯೇ ಕಾಯಕ, ದಾಸೋಹ, ಲಿಂಗಾಯತ ತತ್ವಗಳು ಬೋಧನೆ ಮಾಡುತ್ತಾ  ಜಿಲ್ಲೆಯ ಸುತ್ತಲೂ  ಸಂಚರಿಸಿದರು. ಆ ಕಾಲದ ಬಹುದೊಡ್ಡ ಸಮಸ್ಯೆಯಾದ ಜೀತದಾಳು ಪದ್ಧತಿಯ ವಿರುದ್ಧ ಜನತೆಗೆ  ಹೋರಾಟ ಮಾಡಲು ಹಾಗೂ ಹೊಸ ಬದುಕನ್ನು ಕಟ್ಟಿಕೊಳ್ಳಲು ಧೈರ್ಯ ಮತ್ತು ವಿಶ್ವಾಸವನ್ನು ತುಂಬಿದರು.

ಶರಣಬಸವೇಶ್ವರರು ಕಲಿಕೆಯ ದಿನಗಳಲ್ಲಿ ಆಧ್ಯಾತ್ಮಿಕದ ಕಡೆಗೆ ಹೆಚ್ಚಿನ ಒಲವನ್ನು ತೋರಿದರೂ. ಸೇರಿದ ಕೆಲವು ದಿನಗಳಲ್ಲಿಯೇ ಓಂ ಕಾರದ ಮಹಾ ಅರ್ಥವನ್ನು ಗುರುಗಳಿಗೆ ಪ್ರಶ್ನಿಸಿದರು. ಗುರುಗಳು ಕಲಿಸಿದ ಎಲ್ಲಾ ವಿದ್ಯೆಗಳನ್ನು ನಿಷ್ಠೆಯಿಂದ ಕಲಿತು, ಅವರಲ್ಲಿಯೇ ದೇವರನ್ನು ಕಂಡರು. ವಿಭೂತಿ, ರುದ್ರಾಕ್ಷಿ, ಗುರು, ಲಿಂಗ, ಜಂಗಮ, ದಾಸೋಹ ಹಾಗೂ ಕಾಯಕ ಎಲ್ಲವುದರ ಹಿರಿಮೆಯನ್ನು ಅರಿತುಕೊಂಡು ತಮ್ಮ ನಿತ್ಯದ  ಜೀವನದಲ್ಲಿ ಅಳವಡಿಸಿಕೊಂಡರು.

sharana1

ಶರಣಬಸವೇಶ್ವರರು ಮಹಾದೇವಿಯವರನ್ನು ಮದುವೆಯಾದರು. ದಂಪತಿಗಳು ಇಬ್ಬರೂ ಬೇರೆಯವರ ಮೇಲೆ ಅವಲಂಬಿಸದೆ  ಎಲ್ಲಾ ಕಾಯಕಗಳಲ್ಲಿ   ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದರು.  ಮಡದಿಯ ನೆರವಿನಿಂದ ಸಂಸಾರಿಕ ಜೀವನದಲ್ಲಿಯೂ ನಿತ್ಯವು ಲಿಂಗ ಪೂಜೆ, ದಾಸೋಹ, ಶಿವಾನುಭವ ಗೊಷ್ಠಿ, ಬಡವರಿಗೆ, ರೋಗಿಗಳಿಗೆ ಸೇವೆ ಮಾಡಿ ಎಲ್ಲರಿಗೂ ಮಾದರಿಯಾದರು. ಹೂವಿನ ಹಾರವನ್ನು ಮಾಡಲು,  ಹೊಸ ಹೂವುಗಳನ್ನು ಹಾಗೂ ಎಲೆಗಳನ್ನು ಉಪಯೋಗಿಸದೆ. ಗಿಡದಿಂದ ಉದುರಿ ಬಿದ್ದ ಹೂವುಗಳು ಹಾಗೂ ಎಲೆಗಳನ್ನು  ಉಪಯೋಗಿಸಿ, ಅವುಗಳ ಮಹತ್ವವನ್ನು ಮಂದಿಗೆ ಸಾರಿ ಹೇಳಿದರು .

ಅವರ ದಾಸೋಹ ಕಾಯಕ ಬರೀ ಮನುಜರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ,  ಇತರ ಪ್ರಾಣಿ ಹಾಗೂ ಹಕ್ಕಿಗಳಿಗೂ ನಡೆಯುತ್ತಿತ್ತು. ಶರಣಬಸವೇಶ್ವರರ ಅವರದು ಒಂದು ಅವಿಭಕ್ತ ಕುಟುಂಬ, ಎಲ್ಲಾ ಸಹೋದರರು ಒಟ್ಟಾಗಿ ಬಾಳುವೆ ಮಾಡುತ್ತಿದ್ದರು. ಶರಣಬಸವೇಶ್ವರರ ದಾಸೋಹ  ಕಾಯಕ ಸಹೋದರರಿಗೆ ಇಷ್ಟವಾಗಲಿಲ್ಲ. ಇದನ್ನು  ಗಮನಿಸಿದ ಶರಣಬಸವೇಶ್ವರರು ಆಸ್ತಿಯಲ್ಲಿ ತಮ್ಮ  ಪಾಲಿಗೆ ಬಂದಿದ್ದನು ಪಡೆದು ಅವರಿಂದ ದೂರವಾಗಿ ಮತ್ತೆ ದಾಸೋಹ ನಡೆಸಿದರು.

ಅವರು ಕೃಷಿಯನ್ನು ತಮ್ಮ ಕಾಯಕವನ್ನಾಗಿಸಿ ಕೊಂಡಿದರು. ಹೊಲದಲ್ಲಿ ಹಕ್ಕಿಗಳ ಕಾಟದಿಂದ ಎಲ್ಲರೂ ಹಕ್ಕಿಗಳನ್ನು ಓಡಿಸುತ್ತಿದ್ದರು. ಆದರೆ  ಶರಣಬಸವೇಶ್ವರರು ಕೃಷಿಯಲ್ಲಿ  ಹಕ್ಕಿಗಳ ಮಹತ್ವವನ್ನು ಅರಿತು ಕೊಂಡಿದರು.  ಹಕ್ಕಿಗಳು ಬೆಳೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು  ತಿನ್ನುವುದರಿಂದ ಬೆಳೆಗಳು ಹಾಳಾಗುವುದ್ದನು ತಡೆಗಟ್ಟುತ್ತವೆ ಎಂದು ತಿಳಿದಿದ್ದರು. ಹಕ್ಕಿಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದರಿತು ಅವರ ಹೊಲಕ್ಕೆ ಬರುವ ಹಕ್ಕಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ಮು ಮಾಡಿದರು.  ಅವರ ಹೊಲದ ಹಾದಿಯಲ್ಲಿ ಹಾದು ಹೋಗುವ ಮಂದಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ಮು ಮಾಡಿದರು.  ಅವರ ಹೊಲಕ್ಕೆ ಬರುವ ಹಕ್ಕಿಗಳಿಗೆ ನೀರು ಹಾಗೂ ನೆರಳು ಸಿಗುವುದರಿಂದ ಅಲ್ಲಿಯೇ ನೆಲೆಸಿದವು.ಶರಣಬಸವೇಶ್ವರು ತಮ್ಮ ಜೋಳದ ಬೆಳೆಯನ್ನು ಬಿತ್ತಿದ್ದರು. ಹಕ್ಕಿಗಳ ಸಾಮಾನ್ಯ ಆಹಾರವಾದ ಕ್ರಿಮಿಕೀಟಗಳನ್ನು ತಿಂದದ್ದರಿಂದ ಒಳ್ಳೆಯ ಜೋಳದ  ಬೆಳೆಯನ್ನು ಪಡೆದರು. ಇವರ ಜೋಳದ ಬೆಳೆಯನ್ನು ಕಂಡು ಊರಿನ ಮಂದಿ  ಬೆರಗಾದರು.  ಪರಿಸರದಲ್ಲಿನ ಜೀವ  ವೈವಿಧ್ಯಗಳ ನೆರವಿನಿಂದ ಕೃಷಿಯನ್ನು ಮಾಡಿ ಎಲ್ಲರಿಗೂ ಮಾದರಿಯಾದರು.

ಶರಣಬಸವೇಶ್ವರ ಒಳ್ಳೆಯ ಆಚಾರಗಳಿಂದ ಹಾಗೂ ಭೋದನೆಯಿಂದ  ಪ್ರಭಾವಿತರಾಗಿ ಕಳ್ಳತನ, ಮೋಸ ಹಾಗೂ ವಂಚನೆಗಳನ್ನು ಮಾಡುವುದನ್ನು ಕಾಯಕವನ್ನಾಗಿಸಿ ಕೊಂಡಿದ ಹಲವಾರು ಮಂದಿ ಅವರಿಂದ ಲಿಂಗ ದೀಕ್ಷೆಯನ್ನು ಪಡೆದು ಶರಣರಾಗಿ ಪರಿವರ್ತನೆಗೊಂಡರು.

ಹೀಗಿರುವಾಗಲೇ ಶರಣಬಸವೇಶ್ವರರ ಮಡದಿ ಹಾಗೂ ಮಗನು ಅಕಾಲಿಕ ಮರಣಹೊಂದರು. ನಂತರದಲ್ಲಿ ಅರಳಗುಂಡಗಿ ಗ್ರಾಮದ ಋಣವು ತೀರಿತೆಂದು ಊರಿನ ಜನರಿಗೆ ತಿಳಿಸಿ ಹಣೆಯ ಮೇಲೆ ವಿಭೂತಿ, ಹೆಗಲ ಮೇಲೆ ಒಂದು ಕಂಬಳಿ, ಕೊರಳಲ್ಲಿ ರುದ್ರಾಕ್ಷಿ, ತಲೆಯ ಮೇಲೆ  ಶಿವಾನುಭವದ  ಹೊತ್ತಿಗೆಗಳನ್ನು ಹಾಗೂ ಶಿವನ ಮಂತ್ರವನ್ನು ಜಪಿಸುತ್ತಾ ಕಲಬುರಗಿಯ ಕಡೆಗೆ ಪಯಣವನ್ನು ಬೆಳೆಸಿದರು. ಇಂದಿಗೂ ಶರಣಬಸವೇಶ್ವರರ ಕುಟುಂಬಸ್ಥರರು ಅರಳಗುಂಡಗಿ ಗ್ರಾಮದಲ್ಲಿ ವಾಸವಾಗಿದ್ದಾರೆ.

ಶರಣಬಸವೇಶ್ವರರು ಭೀಮಾ ನದಿಯನ್ನು ದಾಟಿ  ಅವರಾದ ಹಳ್ಳಿಯನ್ನು  ತಲುಪಿದರು. ಅವರಾದ ಊರಿನ ಗೌಡ ದಂಡರಾಯರು ಶರಣಬಸವೇಶ್ವರ ದಾಸೋಹ ಕಾಯಕಕ್ಕೆ ಕೈಜೋಡಿಸಿದರು. ಶರಣಬಸವೇಶ್ವರರ ದಾಸೋಹಕ್ಕೆ ಅಡುಗೆ  ಮಾಡಲು  ಮಳೆರಾಯನು ಅಡಿಪಡಿಸಿದ್ದಾಗ  ಗೌಡ ದಂಡರಾಯರರು ತಮ್ಮ ಮನೆಯ ಚಾವಣೆಯಲ್ಲಿನ ಕಟ್ಟಿಗೆಗಳನ್ನು ಉರಿಸಿ ಅಡಿಗೆ ಮಾಡಿ ಬಡಿಸಿ, ಶರಣಬಸವೇಶ್ವರ ಪ್ರೀತಿಗೆ ಪಾತ್ರರಾದರು.

ಒಂದು ದಿನ ಹೈದ್ರಬಾದಿನ ರಾಜನು ತನ್ನ ಸೈನಿಕರೊಂದಿಗೆ ಕಂದಾಯದ ಕರವನ್ನು ಕೇಳಲು ಬಂದನು. ಆದರೆ ಶರಣಬಸವೇಶ್ವರರ ದಾಸೋಹವನ್ನು ಕಂಡು ಬೆರಗಾಗಿ ಅವರ ಪಾದಗಳಿಗೆ ನಮಿಸಿ ಬರಿಗೈಯಲ್ಲಿ  ಹೊರಟನು. ಜನರಿಗೆ ಶಿವಾನುಭವದ ಗೋಷ್ಠಿಯನ್ನು ಹಾಗೂ ಹಸಿವಿನಿಂದ ಬಂದವರಿಗೆ ಅನ್ನ ದಾಸೋಹವನ್ನು ಮಾಡುತ್ತಾ ಇವರೂ ಸಾಗಿದ್ದರು. ಈ ಕಾಯಕದಿಂದ ಅವರ ಹೆಸರು ಎಲ್ಲೆಡೆಯೂ ಹರಡಿತು. ಇದನ್ನು ಗಮನಿಸಿದ ಕಲಬುರಗಿಯ ದೊಡ್ಡಪ್ಪಗೌಡರರು ಶರಣಬಸವೇಶ್ವರರಿಗೆ ಕಲಬುರಗಿಗೆ ಬರಲು ಆಮಂತ್ರಣವನ್ನು ನೀಡಿದರು. ಶರಣಬಸವೇಶ್ವರರು ಅವರ ಆಮಂತ್ರಣವನ್ನು ಒಪ್ಪಿಕೊಂಡು ಕಲಬುರಗಿಯ ಕಡೆಗೆ ಹೊರಟರು. ದಾರಿಯ ಮಧ್ಯೆದಲ್ಲಿ ಬರುವ ಪರತಾಬಾದ ಹಳ್ಳಿಯ ಮಂದಿ ಬರದಿಂದ ಕಂಗೆಟ್ಟಿದ್ದರು. ಇದನ್ನು ಗಮನಿಸಿದ ಶರಣಬಸವೇಶ್ವರರು ಅವರ ಹಸಿವಿನ ದಾಹವನ್ನು ನೀಗಿಸಲು  ಅಂಬಲಿ  ಮಾಡಿ ಕುಡಿಸಿದರು. ನಂತರ ಅಲ್ಲಿಂದ ಅವರು ತಮ್ಮ ಪಯಣವನ್ನು  ಮುಂದುವರೆಸಿ ಕಲಬುರಗಿಗೆ ಬಂದು ತಲುಪಿದರು.

ದೊಡ್ಡಪ್ಪಗೌಡರರು ಶರಣಬಸವೇಶ್ವರರಿಗೆ ನೆಲೆಸಲು  ಆಶ್ರಯವನ್ನು ನೀಡಿದರು. ದೊಡ್ಡಪ್ಪಗೌಡರ ಸಹಕಾರದಿಂದ  ನಿತ್ಯವು ಅನ್ನ ದಾಸೋಹ ಹಾಗೂ ಶಿವಾನುಭವ ಗೋಷ್ಠಿಗಳನ್ನು ನಡೆಸಿದರು. ರೋಗದಿಂದ ಹಾಗೂ ಮಕ್ಕಳಿಲ್ಲದೆ ನರಳುತ್ತಿದ್ದ ದೇಸಾಯಿಯವರ ರೋಗವನ್ನು ಗುಣಪಡಿಸಿ ಮತ್ತು ಮಗನನ್ನು ಪಡೆವಂತೆ ಹರಿಸಿದರು. ಇದರಿಂದ ಸಂತೋಷಗೊಂಡ  ದೇಸಾಯಿಯ ತಾಯಿಯವರು ಶರಣಬಸವೇಶ್ವರರಿಗೆ ದಾಸೋಹ ನಡೆಸಲು ಹಾಗೂ  ಅವರು ನೆಲೆಸಲು ಅಗತ್ಯವಾದ ಜಾಗವನ್ನು ನೀಡಿದರು.

ಒಂದು ದಿನ ಒಬ್ಬ ಭಕ್ತನು ತಕ್ಷಣವೇ ಮಗನು ಬೇಕೆಂದು ಬಂದನು. ಅವನಿಗೆ ದೊಡ್ಡಪ್ಪ ಗೌಡರರ ಮಗನನ್ನೇ ದಾನ ಮಾಡಿದರು. ಇದು ಶರಣಬಸವೇಶ್ವರ ಹಾಗೂ ದೊಡ್ಡಪ್ಪಗೌಡರ ಮಧ್ಯೆ ಗುರು ಶಿಷ್ಯರ ಬಾಂಧವ್ಯ ಎಷ್ಟು ಗಾಢವಾಗಿತ್ತು ಎಂದು ತೋರಿಸುತ್ತದೆ. ದೊಡ್ಡಪ್ಪ ಗೌಡರು ಶರಣಬಸವೇಶ್ವರರ ನೆರಳಿನಲ್ಲಿ ಬದುಕಿದರು. ಶರಣಬಸವೇಶ್ವರರ ಕಾಯಕದಿಂದ ಸಂಪಾದಿಸಿದ್ದನು ಅನ್ನ ಹಾಗೂ ಜ್ಞಾನ ದಾಸೋಹದಲ್ಲಿ ತೊಡಗಿಸಿ, ಸಮಾಜಸೇವೆಯನ್ನು ಮಾಡುತ್ತಾ ಬದುಕ ಬೇಕೆಂದು ಸಂದೇಶವನ್ನು ಸಾರಿ,ಅವರ ಅದೇ ರೀತಿಯಲ್ಲಿ ಬದುಕಿ ತೋರಿಸಿ ಎಲ್ಲರಿಗೂ ಮಾದರಿಯಾದರು. ಬದುಕಿನಲ್ಲಿ ಶಿವನನ್ನು ಹೇಗೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಅವರೇ ಒಂದು ಜ್ಞಾನದ ವಿಶ್ವವಿದ್ಯಾಲಯವಾಗಿದ್ದರು. ಅದರಲ್ಲಿ ಶುದ್ಧ ಹಾಗೂ ನಿಸ್ವಾರ್ಥ ಜೀವನವನ್ನು ನಡೆಸಲು ಬೇಕಾದ ಎಲ್ಲವೂ ಇದ್ದವು. ಯಾವುದೇ ರೀತಿಯ ಹೊಸ ತತ್ವಗಳನ್ನು ಹೇಳದೇ, ಮೌನವಾಗಿಯೇ ಎಲ್ಲವನ್ನೂ ತಾವೇ ಅನುಸರಿಸಿ ತೋರಿಸಿದರು. ಹಸಿವಿನಿಂದ ಬಂದವರಿಗೆ  ಅನ್ನ ದಾಸೋಹ ಮಾಡಿದರು.   ರೋಗಗಳಿಂದ ಬಳಲುತ್ತಿರುವರ ರೋಗಗಳನ್ನು ನಿವಾರಣೆ ಮಾಡಿದರು. ಲಿಂಗಾಯತ ತತ್ವಗಳನ್ನು ಅನುಸರಿಸಿ ಬದುಕಲು ಬಯಸಿ ಬಂದವರಿಗೆ ಲಿಂಗ ದೀಕ್ಷೆಯನ್ನು ನೀಡಿದರು. ಶರಣಬಸವೇಶ್ವರರು ತತ್ವ ಜ್ಞಾನಿ ಕಡಕೊಳ್ಳ ಮಡಿವಾಳಪ್ಪನರಿಗೆ ಸಹಾಯ ಮಾಡಲು ಮುಂದಾದರು ಇದನ್ನು ಗಮನಿಸಿದ ವಿರೋಧಿ ದಂಗೆಕೋರರ ಗುಂಪು ಅವರ ಮೇಲೆ ಆಕ್ರಮಣ ಮಾಡಲು ಬಂದಿತು. ಆದರೆ ಶರಣಬಸವೇಶ್ವರರು ಮಾತ್ರ  ತಮ್ಮ ಪ್ರೀತಿಯಿಂದಲೇ ಅವರನ್ನು ಗೆದ್ದರು. ದಂಗೆಕೋರರ ಗುಂಪು ಶರಣಬಸವೇಶ್ವರರಿಗೆ ಶರಣಾಗಿ ಪಾದಗಳಿಗೆ ನಮಿಸಿ ಹೊರಟಿತು. ಪ್ರಸಿದ್ಧ ತತ್ವ ಜ್ಞಾನಿ ಕಡಕೋಳ ಮಡಿವಾಳಪ್ಪನವರಿಗೂ ಲಿಂಗ ದೀಕ್ಷೆಯನ್ನು ನೀಡಿದರು. ಶರಣಬಸವೇಶ್ವರ ದಾಸೋಹದಿಂದ ಪ್ರೇರಣೆಗೊಂಡು  ಕಲಬುರಗಿಯ ಪ್ರತಿ ಮನೆಯಲ್ಲಿ ದಾಸೋಹ ಕಾರ್ಯ ಆರಂಭಗೊಂಡಿತು. ಕಲಬುರಗಿಯ ಪ್ರತಿ ಮನೆಯು ದಾಸೋಹದ ಮಹಾಮನೆಯಾಗಿ ಪರಿವರ್ತನೆಗೊಂಡಿತ್ತು.

ಶರಣಬಸವೇಶ್ವರರು ಫಾಲ್ಗುಣ ಮಾಸದ ಬಹುಳ ಪಂಚಮೀ ಸೋಮವಾರ  11-03-1822 ರಂದು ಅನಾರೋಗ್ಯದಿಂದ ಲಿಂಗೈಕ್ಯರಾದರು. ನಂತರ ಅವರ ಸಮಾಧಿಯ ಮೇಲೆ ಗೋಪುರವನ್ನು ನಿರ್ಮಿಸಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ಥಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಊಲಿಸಲು, ಅವರ ಲಿಂಗೈಕ್ಯರಾದ ದಿನದಂದು ಪ್ರತಿವರ್ಷವು ರಥೋತ್ಸವವನ್ನು ನಡೆಸಲಾಗುತ್ತದೆ.

sharanatemple

 

ದೇವಸ್ಥಾನದ ಗರ್ಭಗುಡಿಯಲ್ಲಿ ಶರಣಬಸವೇಶ್ವರ ಸಮಾಧಿಯಿದು, ಅಲ್ಲಿ ಶರಣಬಸವೇಶ್ವರ ಅವಳಿ ದಿವ್ಯಬಿಂಬಗಳಿರುವ ವಿಗ್ರಹವಿದೆ. ಅವುಗಳಲ್ಲಿ ಒಂದು ಅವರ ಬಿಂಬವಿದು, ಇನ್ನೊಂದು ಅವರ ಪರಮ ಆತ್ಮೀಯ ಶಿಷ್ಯ ದೊಡ್ಡಪಗೌಡರ ಬಿಂಬವಿದೆ. ಗುರು-ಶಿಷ್ಯರ ಮಧ್ಯೆ ಒಂದು ಅವಿನಾಭಾವದ ಸಂಬಂಧವಿತ್ತು. ಶಿಷ್ಯರು ಗುರುವಿನ ಪ್ರತಿಬಿಂಬವಾಗಿರಬೇಕೆಂದು ಹೇಳುತ್ತಾರೆ.

ಅದರಂತೆ ದೊಡ್ಡಪ್ಪಗೌಡರು ಶರಣಬಸವೇಶ್ವರರ ಪ್ರತಿಬಿಂಬವಾಗಿ ಬದುಕಿ ತೋರಿಸಿದರು.  ಶರಣಬಸವೇಶ್ವರರ ಜನ್ಮ ಸ್ಥಳ   ಅರಳಗುಂಡಗಿ ಹಳ್ಳಿಯಲ್ಲಿಯು ಅವರ ಪವಿತ್ರವಾದ ದೇವಸ್ಥಾನವಿದೆ. ಇಂದಿಗೂ ಅಲ್ಲಿ ಶರಣಬಸವೇಶ್ವರರ ದಾಸೋಹ ಕಾಯಕ ಮುಂದುವರೆಸಿ ಕೊಂಡು ಬರುತ್ತಿದ್ದಾರೆ. ಶರಣಬಸವೇಶ್ವರರ ಹೊಲದಲ್ಲಿ ಬೆಳೆದ ಬೆಳೆಗಳಲ್ಲಿ ಒಂದು ಭಾಗವನ್ನು ದಾಸೋಹಕ್ಕೆ ಉಪಯೋಗಿಸುತ್ತಾರೆ. ಅವರ ಲಿಂಗೈಕ್ಯರಾದ ದಿನದಂದು ಪ್ರತಿವರ್ಷವು ಅರಳಗುಂಡಗಿ ಹಳ್ಳಿಯಲ್ಲಿಯು ಶರಣಬಸವೇಶ್ವರರ ರಥೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಶರಣಬಸವೇಶ್ವರರು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಂಡರು.  ಮಹಾದಾಸೋಹಿ, ಕಲಬುರಗಿಯ ಕಣ್ಣು , ಶ್ರೀ  ಶರಣಬಸವೇಶ್ವರರು ಕಲಬುರಗಿ ಜನತೆಯ ಮನದಲ್ಲಿ ಅಮರರಾಗಿ ಉಳಿದಿದ್ದಾರೆ.

 

– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

.

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

ಕಲಬುರಗಿ : ಪ್ರೇಕ್ಷಣೀಯ ಪ್ರವಾಸಿ ತಾಣಗಳು

ಕಲಬುರಗಿ ನಗರ – ಇತಿಹಾಸದ ಒಂದು ಕಿರುಪರಿಚಯ

 

 

2 Responses

  1. N M Malipatil says:

    ಶರಣ ಬಸವೇಶ್ವರರ ಮನೆತನದ ಹೆಸರೇನು?

  2. Anonymous says:

    ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಶರಣಬಸವೇಶ್ವರರು ಹೊಲ ಮಾಡಲು ಬಂದು ನೆಲೆಸಿದರು ಎಂಬ ಪುರಾವೆಗಳಿವೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: