ಸಮಾನರಾರಿಲ್ಲಿ ಲಲಿತೆಗೆ..?!
ಸಮಾನರಾರಿಹರಿಲ್ಲಿ ತಾಯಿ ಲಲಿತಾಂಬಿಕೆಗೆ
ಅತಲ ವಿತಲ ಸುತಲ ರಸಾತಲ ಪಾತಾಳದಲಿ
ಕೋಟಿ ಕುಲ ಬ್ರಹ್ಮಾಂಡ ಅಗಣಿತ ವಿಶ್ವದ ವ್ಯಾಪ್ತಿ
ಸರಿಗಟ್ಟಬಲ್ಲವರಾರು ತಾಯವಳ ಅನಾವರಣ ||
ಸೂಕ್ಷ್ಮದಿಂದ ಸ್ಥೂಲ ಯಾವುದಿಲ್ಲಿ ಅವಳಲ್ಲ ?
ಜೀವ ನಿರ್ಜೀವ ಅರೆ ಬರೆ ಬಿಟ್ಟಿದ್ದಾದರುಂಟೇನು ?
ಅಚ್ಚರಿಯವಳದೆ ಸ್ವತ್ತು ಪಂಚಭೂತ ಮೂಲವಸ್ತು
ಕಟ್ಟಿದುದೆಂತದರಲೆ ಅನೇಕ ಏಕದದ್ವೈತ ಕುರುಹು ||
ಮಾತೆಂದರವಳೆ ಶಬ್ದಬ್ರಹ್ಮ, ಮಾತೆ ಮಾತಿಗೆ ಬಲ
ನಾದರೂಪದಲಿಹಳದುವೆ ಮಂತ್ರ ಘೋಷ ಸಕಲ
ತರಂಗಗಳುದುರಿದ ಲಯ ನಿನಾದ ತೇಲಿದಾಲಯ
ಸರಿಸೂಕ್ತವದೆ ಮಂತ್ರಶಕ್ತಿ ಕಟ್ಟಿತೇನಿ ಜಗ ಹೃದಯ ? ||
ತ್ರಿಪುಟಿಗಳಗಣಿತದೊಡತಿ ತ್ರಿಶಕ್ತಿ ತ್ರಿಗುಣ ತ್ರಿಕಾರ್ಯ
ನಿರಂತರವಾಗಿಸೆ ನಿಶ್ಚಯ ತಿರೋದಾನ ಅನುಗ್ರಹ
ಆವರ್ತ ಚಕ್ರ ಯುಗದಾ ವಿಚಿತ್ರ ಮತ್ತದೆ ಕುಲುಮೆ ತಿದಿ
ಒತ್ತಿದಂತೆ ದೇವಕೋಟಿ ನಿರತ ದೇವಿ ಕೈಂಕರ್ಯದಲಿ ||
ಏನವಳದಿಹುದೊ ಬೆಡಗು ! ಯಾವುದಿಹುದೊ ಗಮ್ಯ ?
ಬಿಡದೆ ನಡೆಸಿಹಳು ಜಗವ ಕಾಲಕಾಲದ ಯಾನ
ಕಾಲಕೆ ಮೊದಲು, ಕಾಲವೇ ತಾನವಳು ಕಾಲದಂತಿಮ
ಕಾಲಿಡಿಸುತ ನಡೆಸಿಹಳು ಎಲ್ಲೊ ಯಾವುದೊ ಗಹನಕೆ ||
– ನಾಗೇಶ ಮೈಸೂರು