ದ್ವೇಷಿಸುವುದ ಕಲಿಯುತ್ತಿದ್ದೇನೆ!
ನಾನು
ಪ್ರೀತಿಸುವುದ ಮರೆಯುತ್ತಿದ್ದೇನೆಯೇ?
ಅಥವಾ
ದ್ವೇಷಿಸುವುದ ಕಲಿಯುತ್ತಿದ್ದೇನೆಯೇ?
ನಡೆದ ಹಾದಿಗುಂಟ
ಎದುರಾದ ಮುಳ್ಳುಗಳ
ಪಕ್ಕಕ್ಕೆ ಸರಿಸಿ
ಹಿಂದಿನವರಿಗವು ಚುಚ್ಚದಂತೆ ಎಚ್ಚರಿಕೆ ವಹಿಸಿ
ದೂರಕ್ಕೆ ಎಸೆದು ನಡೆಯುತ್ತಿದ್ದೆ ಇಲ್ಲಿಯವರೆಗೂ!
ನಾನಾಗ ಮನುಷ್ಯರ ಪ್ರೀತಿಸುತ್ತಿದ್ದೆ!
ಆದರೆ ಇದೀಗ
ಹಾಗೆ ದೂರಕ್ಕೆಸೆದ ಮುಳ್ಳುಗಳ
ಮತ್ಯಾರೊ ತಂದು ದಾರಿಗಟ್ಟ ಹಾಕಿ
ಪ್ರಚೋದಿಸಿದಾಗ ಅನಿಸುತ್ತೆ
ಸುಮ್ಮನೆ ಮುಳ್ಳುಗಳ ದಾಟಿಕೊಂಡು
ನನ್ನ ಪಾಡಿಗೆ ನಾನು
ನಡೆದುಹೋಗಿಬಿಡಬೇಕು ಅಂತ
ಅದರರ್ಥ ನಾನೀಗ
ದ್ವೇಷಿಸುವುದ ಕಲಿಯುತ್ತಿದ್ದೇನೆ!
– ಕು.ಸ.ಮಧುಸೂದನ್ ರಂಗೇನಹಳ್ಳಿ