ದಕ್ಷಿಣೇಶ್ವರದಲ್ಲಿ….ಪ್ರದಕ್ಷಿಣೆ
ನಮಗೆ, ನಿಮಗೆ ಎಲ್ಲರಿಗೂ ಚೆನ್ನಾಗಿ ಗೊತ್ತು ಕೋಲ್ಕತ್ತಾದ ದಕ್ಷಿಣೇಶ್ವರ ಅಂದರೆ ಪ್ರಸಿದ್ಧಿ ಯಾಕೆಂದು. ಅಲ್ಲಿನ ಭವತಾರಿಣಿ ಮಂದಿರ ಅಥವಾ ಕಾಳಿಕಾಮಾತೆಯ ದೇವಸ್ಥಾನ 19 ನೆ ಶತಮಾನದ್ದು. ಮಹಾರಾಣಿ ರಶ್ಮನಿ ದೇವಿ ಕಟ್ಟಿಸಿದ, ಈ ದೇಗುಲದಲ್ಲಿ ಬಂಗಾಳಿಗರ ಅಧಿದೇವತೆ ಕಾಳಿಕಾಂಬೆ ನೆಲಸಿದ್ದಾಳೆ. ಹೆಚ್ಚು ಕಡಿಮೆ ಸುಮಾರು ನೂರು ಅಡಿಗಳೆತ್ತರದ ಈ ಮಂದಿರ ಮೂರು ಅಂತಸ್ತುಗಳದು. ಕಾಳಿಕಾದೇವಿಯಲ್ಲದೆ ಇಲ್ಲಿ ಶಿವನ ಸಹಿತ ಇತರ ದೇವರುಗಳ ಮಂದಿರಗಳೂ ಇವೆ. ರಾಮಕೃಷ್ಣ ಪರಮಹಂಸರಿಗೆ ಮತ್ತು ಇಲ್ಲಿನ ಕಾಳಿಕಾ ಮಂದಿರಕ್ಕೆ ಬಲು ಹತ್ತಿರದ ನಂಟು. ನಾವು ಮಂದಿರಕ್ಕೆ ತಲಪಿದಾಗ ಅಲ್ಲಿ ಮಧ್ಯಾಹ್ನದ ಅರ್ಚನೆ ಮುಗಿದು ಗರ್ಭಗುಡಿ ಬಾಗಿಲು ಮುಚ್ಚಿದ್ದರು. ಹೊರಗಿಂದ ನೋಡಿಬಿಡುವಾ ಅಂತ ಸುತ್ತ ಅವಲೋಕಿಸುತ್ತ ಬಂದೆವು. ದಕ್ಷಿಣಾಭಿಮುಖಿಯಾದ ಮಂದಿರ ಅದು.
.
ಒಂದು ದೇವತಾಕ್ಷೇತ್ರವನ್ನು, ಅಲ್ಲಿನ ಪರಿಸರವನ್ನು, ಅದ್ಯಾವ ಪರಿಯಲ್ಲಿ ಗಲೀಜು ಮಾಡಬಹುದು ಎನ್ನುವದನ್ನು ಇಲ್ಲಿ ಕಾಣಬಹುದು. ಪಾವಿತ್ರ್ಯ, ಶುಭ್ರತೆ, ಇರಬೇಕಾದಲ್ಲಿ ಕಸ, ಕೊಳಕು, ತಿಂದೆಸೆದ ಆಹಾರದ ಎಂಜಲು ತುಂಬಿ ನೊಣಗಳ ಆಡುಂಬೊಲವಾಗಿತ್ತು. ಅಲ್ಲಿ ಭಕ್ತರಿಗೆ ಕೂರಲು ಇದ್ದ ಜಾಗವಷ್ಟೂ ದೂರದಿಂದ ಬಂದ ಯಾತ್ರಿಕರ ಆಹಾರಸೇವನೆಯ ತಾಣವಾಗಿತ್ತು. ಇಲ್ಲಿನ ಮಾರಾಟದ ಹೂವುಗಳಲ್ಲಿ ಕಡುಗೆಂಪಿನ ದಾಸವಾಳವೇ ಇದ್ದಿದ್ದು. ಅದು ದೇವಿಗೆ ಬಲು ಪ್ರಿಯವಂತೆ. ಮಹಿಳೆಯರ ಉಡುಗೆಯೂ ರಕ್ತಗೆಂಪಿನದು. ಸೀರೆ ಪ್ರಧಾನದ ಉಡುಗೆ. ಒಳಗೆ ನೋಡುತ್ತ ನೋಡುತ್ತಾ ಗರ್ಭಗುಡಿಯ ಎದುರಿಗೆ ಬಂದಿದ್ದೆವು. ಬಾಗಿಲು ಮುಚ್ಚಿತ್ತು . ಎದುರಾಗಿ ವಿಸ್ತಾರವಾದ ಖಾಲಿ ಜಾಗ, ಪೂಜೆ ಆಗುವಾಗ ಭಕ್ತರಿಗೆ ನಿಲ್ಲಲು ಆ ಸ್ಥಳ. ಅಲ್ಲಿ ಕಂಡ ದೃಶ್ಯ ಬೆಚ್ಚಿ ಬೀಳಿಸುವಂತೆ ಇತ್ತು. ಅಲ್ಲಿನ ಖಾಲಿ ಜಾಗದ ಅಡ್ಡಕ್ಕೆ ಕೆಂಪಿನ ದಾಸವಾಳಗಳನ್ನು ಸಾಲಾಗಿ ರಾಶಿ ಹಾಕಿ ಅದರಲ್ಲಿ ಮೇಣದ ಬತ್ತಿ ಉರಿಸಿ ಇಟ್ಟಿದ್ದರೊಬ್ಬರು. ಮಧ್ಯಾಹ್ನದ ಪೂಜಾ ವೇಳೆಗೆ ತಲಪಲಾಗದ ಪ್ರವಾಸಿಗರು ಅದನ್ನೇ ಮಹಾಪೂಜೆ ಎಂದು ತಿಳಿದು ಕೈಮುಗಿದು ಆತನ ಕೈಗೆ ಅವ ಹೇಳಿದ ಮೊತ್ತ ಇಟ್ಟು ಧನ್ಯೋಸ್ಮಿ ಎಂದು ಮುಚ್ಚಿದ ಗರ್ಭಗುಡಿಯತ್ತ ನೋಡದೆ ಬೆಂಕಿ ಹತ್ತಿ ಹೊಗೆಯಾಡುವ ಹೂಗಳಿಗೆ ನಮಸ್ಕರಿಸಿ ಹೊರಡುತ್ತಿದ್ದರು. ನಮ್ಮ ದಕ್ಷಿಣದ ಕಡೆ ಹೂಗಳಿಗೆ ಕಿಚ್ಚು ಕೊಡುವ ಅರ್ಚನೆ ಇಲ್ಲವೆನ್ನಬೇಕು. ಆತನೋ ಅಲ್ಲಿನ ಅರ್ಚಕ ವರ್ಗದ ಪೈಕಿಯಂತೂ ನಿಜ. ಅಲ್ಲವಾದರೆ ಸುಪ್ರಸಿದ್ಧವಾದ ಆ ಕ್ಷೇತ್ರದಲ್ಲಿ ಆ ಪರಿಯಲ್ಲಿ ಲೂಟಿ ಹೊಡೆಯಲು ಸಾಧ್ಯವಿಲ್ಲ. ಕಾಳಿ ಮಾತೆಗೆ ಎಲ್ಲವೂ ಕಾಣುತ್ತದೆ ಅಂತ ನಾವು ಅಲ್ಲಿಂದ ಕೈಮುಗಿದು ಹಿಂದಿರುಗಿದ್ದೆವು.
.
ಅಲ್ಲಿನ ಕಾಳೀ ವಿಗ್ರಹ ನಾಲಿಗೆ ಹೊರಚಾಚಿದ ರೌದ್ರಾವತಾರದಲ್ಲಿದೆ. ಕೋಲ್ಕತಾದಲ್ಲಿ ಹತ್ತು ಹೆಜ್ಜೆಗೊಂದರ ಹಾಗೆ ಕಾಳಿ ಮಾತೆ ರಕ್ತಗೆಂಪಿನ ನಾಲಿಗೆ ಹೊರಚಾಚಿ ಹೂಂಕರಿಸುವ ಭಂಗಿಯಲ್ಲಿ ಇರುವ ಗುಡಿಗಳಿವೆ. ಆ ಗುಡಿಗಳಲ್ಲಿ ಪ್ರವೇಶದ್ವಾರದಲ್ಲಿ ಬಾಗಿಲು ಕಾಯಲು ಅಷ್ಟೇ ರುದ್ರ ಭೀಕರವಾಗಿರುವ ಎರಡು ಸಿಂಹಗಳು ಇಕ್ಕೆಲಗಳಲ್ಲಿದೆ. ರಸ್ತೆಯಲ್ಲಿ ಹೋಗುವವರು ಅಲ್ಲಿ ಒಳಹೋಗಿ ಕೆಂಪು ದಾಸವಾಳ ದೇವಿಯ ಪಾದಕ್ಕೆ ಇಟ್ಟು ಅಲ್ಲಿಟ್ಟ ಕುಂಕುಮ ಹಚ್ಚಿ ಹೊರಬರುವ ನೋಟ ಎಲ್ಲೆಡೆ ಕಾಣುತ್ತ ಇತ್ತು. ದಾಸವಾಳದ ಹಾಗೆ ಇಲ್ಲಿ ಎಕ್ಕದ ಹೂವು ಕಾಳಿಕಾಂಬೆಗೆ ಬಲುಪ್ರಿಯ. ರಸ್ತೆಯುದ್ದಕ್ಕೆ ಸಾಲು ಸಾಲು ಮಹಿಳೆಯರು ಕಡುಗೆಂಪಿನ ಸೀರೆಗಳಲ್ಲಿ ಇದ್ದಿದ್ದು ಕಂಡೆವು. ಸುಂದರವಾದ ಕೋಲ್ಕತ್ತಾ ಕಾಟನ್ ಸೀರೆಗಳು ಹೊರತು ಸಿಂತೆಟಿಕ್ ಸೀರೆಗಳು ಉಪಯೋಗ ಇಲ್ಲಿ ಕಂಡದ್ದು ಬಲು ಕಮ್ಮಿ. ಅಪ್ಪಟ ಕೋಲ್ಕತ್ತಾ ಕಾಟನ್ ಸೀರೆ ನಮ್ಮನ್ನೂ ಸೆಳೆದಿತ್ತು. ಖರೀದಿಸು್ವಾಗ ನಮ್ಮ ಜೊತೆಗಿದ್ದ ಆಪ್ತರು ಅವರ ಶ್ರೀಮತಿಗೆ ಸೀರೆ ಆಯ್ದು ಕೊಡಲು ಕೇಳಿದರು. ಹಾಗೆ ಖರೀದಿ ಮಾಡಿದ ಸೀರೆ ಊರಲ್ಲಿ ಅವರಿಗೆ ಹಿಡಿಸದೆ (ತೆಳ್ಳಗಿನ ಮೆದು ಮೆದು ಹತ್ತಿ ಸೀರೆ) ಕೆಲಸದ ಹೆಂಗಸಿಗೆ ಕೊಟ್ಟುಬಿಟ್ಟಿದ್ದರು. ಕೋಲ್ಕತ್ತಾದ ಬಲು ಇಕ್ಕಟ್ಟಾದ ರಸ್ತೆ, ರಸ್ತೆಬದಿಯಲ್ಲಿನ ತಿಂಡಿತಯಾರಿ , ಕ್ಷಣಾರ್ಧದಲ್ಲಿ ಮಾಡಿ ಕೈಗಿಡುವ ಬಿಸಿಬಿಸಿ ಜಿಲೇಬಿ ಸರ್ವಥಾ ನಾವು ಮುಟ್ಟಲಿಲ್ಲ. ಅತ್ಯಂತ ಕೊಳಕುತನ,ಗಲೀಜು ಜಾಗ, ಬಡತನ ಕಂಡು , ಇಲ್ಲಿಗೆ ಅಭಿವೃದ್ಧಿ ಎನ್ನುವುದು ಹತ್ತಿರವೂ ಬರಲಿಲ್ಲವೆನ್ನುವ ಸತ್ಯ ಅರಿವಾಯಿತು.
.
ಮಧ್ಯಾಹ್ನದ ಊಟದ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಚಾಂದನಿಚೌಕದಲ್ಲಿ ಪುತ್ತೂರಿನವರೊಬ್ಬರ ( ಮೂಲತ ಕಾಸರಗೋಡು) ರೆಸ್ಟುರಾಗಳಿವೆ. ಅಲ್ಲಿಗೆ ಊಟಕ್ಕೆ ಆಹ್ವಾನಿಸಿದ್ದರು. ಕರಾವಳಿ ಬಿಟ್ಟು ಅದಾಗಲೇ ವಾರ ಕಳೆದಿದ್ದ ನಮಗೆ ಅಲ್ಲಿ ತಾಜಾ ಮನೆಯೂಟ ಸಿಕ್ಕಿದ್ದು ಅಮೃತಸಮಾನವಾಯ್ತು. ವಿಶೇಷವೇನೆಂದರೆ ಅಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇಲ್ಲ. ಕೇವಲ ತಿಂಡಿ ಅಷ್ಟೆ. ನಮಗಾಗಿ ಊಟದ ಏರ್ಪಾಡು ಮಾಡಿ ಪ್ರೀತಿಯಿಂದ ಉಪಚಾರ ಮಾಡಿದ್ದರು. ನಮ್ಮದೇ ಸಾರು, ಸಾಂಬಾರು, ಪಲ್ಯ, ಅಂಬುಟು, ಮೊಸರು, ಉಪ್ಪಿನಕಾಯಿ.ಇಲ್ಲಿ ಅವರು ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬಂದಿದ್ದಾರೆ. ಲಾಜಿಂಗಿನ ದರ ಕೇಳಿದರೆ ದಿನಕ್ಕೆ ಇನ್ನೂರೈವತ್ತು ರೂಪಾಯಿಗೆ ಊಟ, ತಿಂಡಿ ಸಹಿತ ರೂಮು! ರೆಸ್ಟುರಾ ಮೇಲ್ದರ್ಜೆಯದು ಎಂಬುದನ್ನು ಅಲ್ಲಿನ ನೋಟ ಹೇಳುತ್ತಿತ್ತು. ಅವರ ಸೌಜನ್ಯತೆ, ಒದಗಿಸಿದ ಆಹಾರ, ಪಾನೀಯ , ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಮಾತಾಡಿಸಿದ ನಡವಳಿಕೆ ಮರೆಯಲಾಗದ ಅನುಭವ.
.
ಕೋಲ್ಕತ್ತಾ ಅತ್ಯಂತ ದೊಡ್ಡ ನಗರ ನಿಜ. ಆದರೆ ಅದು ಅತ್ಯಂತ ಹಿಂದೆ ಉಳಿದಿದ್ದು ಹೇಗೆ ಎನ್ನುವುದನ್ನು ಅಲ್ಲಿನ ಆಡಳಿತ ಹೇಳಬೇಕು. ಪ್ರಾಥಮಿಕ ಸೌಲಭ್ಯಗಳು ಕೂಡಾ ಇಲ್ಲದ ಪ್ರಜೆಗಳನ್ನು ಕಾಣುವಾಗ ತುಂಬ ನೋವಾಗುತ್ತದೆ. ಇಕ್ಕಟ್ಟು, ಜನಸಂದಣಿ, ರಸ್ತೆಗಳನ್ನೇ ಆವರಿಸಿಕೊಂಡು ವ್ಯಾಪಾರ ನಡೆಸುವ ಕೈಗಾಡಿಗಳವರು, ಪ್ರಾಥಮಿಕ ಅವಶ್ಯಕತೆಗಳನ್ನೂ ಕಾಣದ ಜನರೇ ಹೆಚ್ಚಿಗೆ ಇಲ್ಲಿ. ನಗರದಲ್ಲಿ ಪ್ರತಿಯೊಂದು ವ್ಯಾಪಾರಕೇಂದ್ರದಲ್ಲೂ ತೇಗದ ಮರದ ಪೀಠೋಪಕರಣಗಳು ಕಣ್ಸೆಳೆಯತ್ತದೆ. ಜನರಿಗೆ ಬೆಳಗ್ಗಿನ ಉಪಾಹಾರಕ್ಕೆ ಪೇಟಾ, ಜಿಲೇಬಿ, ರಸ್ಮಲಾಯಿ ಇತ್ಯಾದಿ ಸಿಹಿಗಳು. ಉಡುಗೆ ತೊಡುಗೆ ಆಧುನಿಕ ಸ್ಪರ್ಶ ಕೂಡಾ ಕಾಣದ್ದು. ಎಲ್ಲವನ್ನೂ ಕಾಣುವಾಗ ದಕ್ಷಿಣಭಾರತ ಇಲ್ಲಿಗಿಂತ ಬಹಳಷ್ಟು ಮುಂದುವರೆದಿದೆ ಅನ್ನುವುದು ಒಪ್ಪಲೇಬೇಕಾದ ಸತ್ಯ.
.
– ಕೃಷ್ಣವೇಣಿ ಕಿದೂರು.