ಅಲೆಮಾರಿಗಳ ಸ್ವಗತ
ಗುಡುಗು ಸಿಡಿಲಿಗೆ ನಡುಗುವುದಿಲ್ಲ
ಆ ಮಿಂಚೆ ಕೊಂಚ ಬೆಳಕಾಗುತ್ತದೆ
ಬೀಸುವ ತಂಗಾಳಿ ಹೊಳೆವ ನಕ್ಷತ್ರಗಳು
ಜೋಗುಳಹಾಡಿ ನಮ್ಮನು ಮಲಗಿಸುತ್ತವೆ.
ಕಳ್ಳಕಾಕರ ಭಯವಿಲ್ಲ
ಮಳಿ ಚಳಿ ಬಿಸಿಲಿಗೆ ಬಗ್ಗುವುದಿಲ್ಲ
ಪುಟ್ಟ ಗೂಡಿಗೆ ಗೋಡೆಗಳೆ ಇಲ್ಲ
ನಮ್ಮದು ಬಯಲೆ ಆಲಯ.
ಚೋಟುಹೊಟ್ಟೆ ಗೇಣುಬಟ್ಟೆಗಾಗಿ
ಮಗಳು ತಂತಿಯ ಮೇಲೆ ನಡೆಯುತ್ತಾಳೆ
ನಾವು ಹೆಳವರಾಗು ತ್ತೇವೆ;ಹಾವಾಡಿಗರಾಗುತ್ತೇವೆ
ಮುಖವಾಡ ಧರಿಸಿ ಬಹುರೂಪಿಗಳಾಗುತ್ತೇವೆ.
ಕುಂಚ ಮತ್ತು ಕ್ಯಾಮರಾ ಕಣ್ಣಲ್ಲಿ ಅರಳಿದ್ದೇವೆ
ಸರಕಾರದ ಕಣ್ಣಲ್ಲೊಂದಿಷ್ಟು ಅರಳಿಬಿಟ್ಟರೆ
ಎತ್ತು ನಾಯಿಯೊಡನೆ ಊರೂರು ತಿರುಗುವ
ನಮ್ಮ ಬಾಳಬಂಡಿಯ ಬಡತನದ ಚಿತ್ರ
ಇತಿಹಾಸದ ಪುಟ ಸೇರಬಹುದೆನೊ..!
– ವೀರಲಿಂಗನಗೌಡ್ರ ,ಸಿದ್ದಾಪುರ
ಮಧ್ಯದ ಪ್ಯಾರಾ ತುಂಬಾ ಧ್ವನಿಯುಕ್ತವಾಗಿದೆ ಸರ್.
ಅಲೆಮಾರಿಗಳ ಬಡತನದ ಸ್ಥಿತಿ ನೋಡುವಾಗ ಬೇಸರವಾಗುತ್ತದೆ. ನಮ್ಮಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಎಂದೂ ಬೇಜಾರಾಗುತ್ತದೆ.
“‘ಬಡತನದ ಚಿತ್ರ ಇತಿಹಾಸದ ಪುಟ ” ಸೇರುವ ದಿನ ಬೇಗನೇ ಬರಲಿ..