ಅಚ್ಚುಮೆಚ್ಚಿನ ‘ಪುಚ್ಚೆ’ ಬೆಚ್ಚಿ ಓಡಿದಾಗ..
ಮೊನ್ನೆ ರಾತ್ರಿ ಮನೆಯ ಸ್ಟೋರ್ ರೂಮ್ ಕಡೆಯಲ್ಲಿ ಡಭ್ಭಿಗಳನ್ನು ತಡಬಡಾಯಿಸಿದ ಸದ್ದು ಕೇಳಿಸಿತು. ಪ್ರಾಣಿಯೊಂದು ಅತ್ತಿತ್ತ ಓಡಾಡಿದಂತಾಯಿತು. ಇಲಿ ಇರಬಹುದು ಅನಿಸಿತು. ಎದ್ದು ದೀಪದ ಸ್ವಿಚ್ ಹಾಕಿ ನೋಡಿದಾಗ ದೊಡ್ಡದಾದ ಹೆಗ್ಗಣವೊಂದು ಅತ್ತಿಂದಿತ್ತ ಓಡಾಡುತಿತ್ತು. ಮನೆಯೊಳಕ್ಕೆ ಸೊಳ್ಳೆ ಬರಬಾರದು ಎಂದು ಕಿಟಿಕಿಗಳಿಗೆ ಬಲೆ ಅಳವಡಿಸಿದ್ದರೂ ಇದು ಹೇಗೆ ಒಳಗೆ ಬಂತು… ಬೆಳಗಾದ ಮೇಲೂ ಅದು ಅಲ್ಲಿಯೇ ಇದ್ದರೆ, ಹೇಗಾದರೂ ಮಾಡಿ ‘ಹೆಗ್ಗಣ ಸಂಹಾರ’ ಮಾಡೋಣ ಎಂದು ಮಾತನಾಡಿಕೊಳ್ಳುತ್ತಾ, ಸ್ಟೋರ್ ರೂಮ್ ನ ಚಿಲಕ ಹಾಕಿದೆವು.
ಬೆಳಗ್ಗೆ ಸ್ಟೋರ್ ರೂಂ ನಲ್ಲಿ ಹೆಗ್ಗಣ ಇನ್ನೂ ಇರುವುದಕ್ಕೆ ಪುರಾವೆಯಾಗಿ ಓಡಾಡುವ ಸದ್ದು ಕೇಳುತ್ತಿತ್ತು. ಇದನ್ನು ಕೊಂದು ನಾವ್ಯಾಕೆ ಪಾಪ ಕಟ್ಟಿಕೊಳ್ಳಬೇಕು..ಹಾಗೆಂದು ಸುಮ್ಮನೆ ಬಿಟ್ಟರೆ ಅದು ಇಲ್ಲಿಯೇ ಮನೆ ಮಾಡಿದರೆ ಏನು ಮಾಡಲಿ ಎಂದು ಚಿಂತನ-ಮಂಥನ ಮಾಡುತ್ತಿರುವಾಗ ನಮ್ಮ ಮನೆಗೆ ದಿನಾ ಬರುವ ಬೆಕ್ಕಿನ ನೆನಪಾಯಿತು.
ಪ್ರತಿದಿನ ಬೆಳಗ್ಗೆ ನಮ್ಮ ಮನೆಗೆ ಎಲ್ಲಿಂದಲೋ ಒಂದು ಬೆಕ್ಕು ಬರುತ್ತದೆ. ಅದನ್ನು ನಮ್ಮ ಆಡುಭಾಷೆಯಲ್ಲಿ ‘ಪುಚ್ಚೆ’ ಅನ್ನುತ್ತೇವೆ. ಮುಂಜಾನೆ ಹಾಲು ಹಾಕಿಸಿಕೊಂಡು ತಪ್ಪಲೆ ಒಳಗಿಡುವ ಮೊದಲೇ ಮ್ಯಾಂ ಮ್ಯಾಂ ಅನ್ನುತ್ತಿರುತ್ತದೆ. ಅದರ ಮೇಲೆ ಅಪರಿಮಿತ ಪ್ರೀತಿಯುಳ್ಳ ನಮ್ಮ ಮಗರಾಯನಿಗೆ ಬೆಕ್ಕಿನ ದರ್ಶನದಿಂದಲೇ ಬೆಳಗಾಗುತ್ತದೆ. ದಿನಾ ತಾನು ಕಾಫಿ ಕುಡಿಯುವ ಮೊದಲು ‘ಪುಚ್ಚೆಗೆ ಹಾಲು ಹಾಕಿಯಾಯಿತಾ?‘ ಎಂದು ವಿಚಾರಿಸುತ್ತಾನೆ. ‘ಆಗಿದೆ’ ಎಂದರೂ ಇನ್ನೊಮ್ಮೆ ಬೆಕ್ಕಿಗೆಂದೇ ಹೊರಗಡೆ ಇರಿಸಲಾದ ತಟ್ಟೆಗೆ ಹಾಲು ಸುರಿಯುತ್ತಾನೆ. ಒಂದಿಷ್ಟು ಚಕ್ಕುಲಿ/ತೆಂಗೋಳು ತಿನ್ನಿಸುತ್ತಾನೆ. ಕಾಲೇಜಿಗೆ ಹೋಗುವ ಮುನ್ನ ಇನ್ನೊಮ್ಮೆ ‘ಪುಚ್ಚೆ’ಯನ್ನು ಮಾತನಾಡಿಸಿ ಹೊರಟರೆ ಮಾತ್ರ ಅವನಿಗೆ ಸಮಾಧಾನ. ಇನ್ನೂ ಸ್ವಲ್ಪ ಸಮಯದ ನಂತರ ಅಪ್ಪನ ಸರದಿ. ಹೀಗೆ ಅಪ್ಪ-ಮಗನ ಸತ್ಕಾರ ಪಡೆಯುವ ಬೆಕ್ಕು, ಪುಷ್ಕಳವಾಗಿ ಹೊಟ್ಟೆ ತುಂಬಿಸಿಕೊಂಡು ಆರಾಮವಾಗಿ ಸ್ಕೂಟರ್ ಮೇಲೆಯೋ ಗೇಟ್ ನ ಬಳಿಯೋ ನಿದ್ರಿಸಿ, ಆಮೇಲೆ ಎಲ್ಲೋ ಹೋಗಿ ಮರುದಿನ ಬೆಳಗ್ಗೆ ಬರುತ್ತದೆ. ಆದರೆ ಅದು ಎಂದೂ ಮನೆಯೊಳಗೆ ಬಂದಿಲ್ಲ.
“ನಾವು ಹೆಗ್ಗಣವನ್ನು ಕೊಂದರೆ ಮನಸ್ಸಿಗೆ ಹಿಂಸೆ, ಆದರೆ ಬೆಕ್ಕು ಹಿಡಿದರೆ ತಪ್ಪೇನು ? ಅದರ ನೈಸರ್ಗಿಕ ಆಹಾರ ತಾನೇ…ಹೇಗೂ ಬೆಕ್ಕು ಬೆಳಗ್ಗೆ ಬರುತ್ತದೆ. ಅದನ್ನು ತಂದು ಸ್ಟೋರ್ ರೂಂ ನಲ್ಲಿ ಬಿಟ್ಟರಾಯಿತು.. ಹೆಗ್ಗಣವನ್ನು ಬೆಕ್ಕು ನೋಡಿಕೊಳ್ಳಲಿ ” ಎಂಬ ಪುಕ್ಕಟೆ ಸಲಹೆ ಕೊಟ್ಟೆ. .
ನನ್ನ ಸಲಹೆಯ ಮೇರೆಗೆ ನಮ್ಮ ಮನೆಯಯರು ಬೆಕ್ಕನ್ನು ಹಿಡಿದು ತಂದು ಸ್ಟೋರ್ ರೂಂ ನ ಬಾಗಿಲನ್ನು ಸ್ವಲ್ಪವೇ ಸರಿಸಿದರು. ಅಲ್ಲಿದ್ದ ಹೆಗ್ಗಣ ‘ಶ್ರ್..ಶ್ರ್..’ ಅಂದಿತು. ನಮ್ಮ ಬೆಕ್ಕು ಕೂಡ ಗುರಾಯಿಸಿತು, ಯಾಕೋ ಬೆಕ್ಕು ಸ್ವಲ್ಪ ಹೆದರುತ್ತಿದೆ ಅನಿಸಿತು. ಅದನ್ನು ಒಳಗಡೆ ಬಿಟ್ಟು, ಸ್ಟೋರ್ ರೂಮ್ ನ ಬಾಗಿಲು ಹಾಕಿದರು. ಒಳಗಡೆಯಿಂದ ಬೆಕ್ಕು-ಹೆಗ್ಗಣಗಳ ಜಗಳದ ಸದ್ದು ಕೇಳಿಸಿತು. ಸ್ವಲ್ಪ ಸಮಯದ ನಂತರ ನಿಶ್ಶಬ್ದ. ಅನುಮಾನವೇ ಇಲ್ಲ, ನಮ್ಮ ಬೆಕ್ಕು, ವೀರಾವೇಶದಿಂದ ಹೋರಾಡಿ ಹೆಗ್ಗಣವನ್ನು ಕೊಂದಿರಬೇಕು ಅನ್ನುತ್ತಾ, ಮೆಲ್ಲಗೆ ಬಾಗಿಲು ತೆಗೆದೆವು.
ಇದಕ್ಕೇ ಕಾಯುತ್ತಿದ್ದಂತೆ, ಒಂದು ಪ್ರಾಣಿ ಸರಕ್ಕನೆ ನುಸುಳಿ ಪ್ರಾಣಭಯದಿಂದ ನಾಗಾಲೋಟದಲ್ಲಿ ಓಡಿತು. “ಹೋ ಹೆಗ್ಗಣ ತಪ್ಪಿಸಿಕೊಂಡಿತು, ಆದರೂ ಪರವಾಗಿಲ್ಲ, ನಮ್ಮ ಬೆಕ್ಕು ಸಾಕಷ್ಟು ಫೈಟ್ ಕೊಟ್ಟಿದೆ “ ಅಂತ ಸಮಾಧಾನಪಟ್ಟೆವು. ಬಾಗಿಲನ್ನು ಸಂಪೂರ್ಣವಾಗಿ ತೆಗೆದಾಗ ಏನಾಶ್ಚರ್ಯ..ಹೆಗ್ಗಣ ಮುದುಡಿ ಕುಳಿತಿತ್ತು. ಹಾಗಾದರೆ ಹೆದರಿ ಓಡಿ ಹೋದದ್ದು ಬೆಕ್ಕು ಎಂದು ಖಾತ್ರಿಯಾಯಿತು!!
ಕೊನೆಗೆ ಆ ಹೆಗ್ಗಣವನ್ನು ಹೇಗೋ ಒಂದು ರಟ್ಟಿನ ಬಾಕ್ಸ್ ಸೇರುವಂತೆ ಮಾಡಿ ಹೊರಸಾಗಿಸಿದೆವು.
ಇದು ನನಗೆ ಹಾಸ್ಯದ ವಿಷಯವಾಯಿತು. “ ನಿನ್ನ ಅಚ್ಛುಮೆಚ್ಚಿನ ಪುಚ್ಚೆ ಬೆಚ್ಚಿ ಓಡಿ ಹೋಗಿದೆ. ಇದು ಬೆಕ್ಕಿಗೆ ಪ್ರಾಣಸಂಕಟ…ಹೆಗ್ಗಣಕ್ಕೆ ಆಟದ ಕೇಸ್. ಅತಿಯಾಗಿ ಹಾಲು, ಚಕ್ಕುಲಿ ಹಾಕಿ ಆರೈಕೆ ಮಾಡಿ ಪುಚ್ಛೆಗೆ ತನ್ನ ಸಹಜ ಆಹಾರ ಮತ್ತು ಬೇಟೆ ಆಡುವುದು ಮರೆತೇ ಹೋಗಿದೆ ” ಎಂದೆ ಮಗನ ಬಳಿ .
ಆದರೆ ಮಗ ” ಕೆಲವರು ಎವರೆಸ್ಟ್ ಹತ್ತಿದ್ದಾರೆ…ನಿಮ್ಮ ಕೈಲಾಗುತ್ತ? ನಾನು ಗೋಬಿ ಮಂಚೂರಿ ತಿನ್ನುತ್ತೇನೆ…ನಿಮಗೆ ಸೇರುತ್ತದೆಯೆ? ಅವರವರ ತಾಕತ್ತು, ಅವರವರ ರುಚಿ, ಇಷ್ಟ…..ನಮ್ಮ ಪುಚ್ಚೆ ಬಹಳ ಸಾಧು….ಪಾಪದ ಪುಚ್ಚೆ…ಸಸ್ಯಾಹಾರಿ ಇರಬಹುದು .. .ಅದನ್ನು ಮೆಚ್ಚಬೇಕು “ ಎಂದು ಬೆಕ್ಕಿನ ಪರವಾಗಿ ವಕಾಲತ್ತು ಆರಂಭಿಸಿದ. ” ಅನ್ಯಾಯವಾಗಿ ಬೆಕ್ಕಿನ ಮೇಲೆ ಈ ರೀತಿ ಪ್ರಯೋಗ ಮಾಡಿ, ನಾಳೆಯಿಂದ ಪುಚ್ಛೆ ಬಾರದಿದ್ದರೆ ನೀವೇ ಕಾರಣ ” ಎಂದು ಧಮಕಿಯನ್ನೂ ಹಾಕಿದ.
ಇಲ್ಲಿಗೆ, ಉತ್ತಮ ಸಲಹೆ ಕೊಟ್ಟೆ ಎಂದು ಬೀಗುತ್ತಿದ್ದ ನನ್ನಹೆಮ್ಮೆಗೆ ಕವಡೆ ಕಾಸಿನ ಬೆಲೆ ಇಲ್ಲದಾಯಿತು. ಮರುದಿನದಿಂದ ಪುಚ್ಚೆ ತನ್ನ ಎಂದಿನ ದಿನಚರಿಯನ್ನು ಶಿಸ್ತಿನಿಂದ ಪಾಲಿಸಿದೆ…. ಹಾಗಾಗಿ ನನ್ನ ಮೇಲಿನ ಆರೋಪ ವಜಾ ಆಗಿದೆ!
– ಹೇಮಮಾಲಾ.ಬಿ
ಸೂಪರ್ ಆಗಿದೆ ಬೆಕ್ಕಿನ ಕಥೆ.
ಬೆಕ್ಕು ಮತ್ತು ಹೆಗ್ಗಣದ ಕಥೆ ತು೦ಬಾ ಚೆನ್ನಾಗಿದೆ. ಹಾಗೂ ತಮ್ಮ ಬರವಣಿಗೆ ಶೈಲಿ ತು೦ಬಾ ಸೊಗಸಾಗಿದೆ
ನಮ್ಮಲ್ಲೂ ಹೆಗ್ಗಣ ಗಳನ್ನು ನೋಡಿ ಬೆಕ್ಕು ಭಯ ಪಡುತ್ತದೆ .ಬೆಕ್ಕು ಹೆಗ್ಗಣ ಕಥೆ ಸೊಗಸಾಗಿದೆ
ಮಾಲಾ,ಪುಚ್ಚಾಯಣ ಸುಪರ್ ಮಾರಾಯ್ತಿ…!!
ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.