ಫೋನಾಯಣ……
ಶುಭೆ ಶೋಭನೇ ಮುಹೂರ್ತೆ…ಅಸ್ಮಾಕಂ ಸಕುಟುಂಬಸ್ಯ, ಸಪರಿವಾರಸ್ಯ ಆನಂದಾಭಿವೃಧ್ಯರ್ಥಂ ಮಮ ಗೃಹೇ ಕರ್ಣ ಪಿಶಾಚಿ ಸ್ಥಾಪನಮಹಂ ಕರಿಷ್ಯೇ..ಎಂಬ ಸಂಕಲ್ಪದೊಂದಿಗೆ ನನ್ನರಮನೆಯ ಓಲಗ ಚಾವಡಿಯಲ್ಲಿ ನಾನೂ ಒಂದು ಫೋನನ್ನು ಸ್ಥಾಪಿಸಿದೆ. ದೂರವಾಣಿ ಇಲಾಖೆಯವರು ಡೆಪಾಸಿಟ್ ಇಲ್ಲದೆ ನಿಮ್ಮ ಮನೆಗೆ ಟೆಲಿಪೋನ್ ನೀಡುತ್ತೇವೆ ಅಂದಾಗ ಊರ ಮನೆಗಳಲ್ಲೆಲ್ಲ ಟೆಲಿಫೋನುಗಳು. ನಾನು ಈ ವಿಚಾರದಲ್ಲೆಲ್ಲ ಬಹಳ ಹಿಂದೆ. ‘ನಿಧಾನವೇ ಪ್ರಧಾನ’ ಎನ್ನುವ ಮನಸ್ಥಿತಿ ನನ್ನದು.
ಸಂಜೆಹೊತ್ತು ಮನೆಯಲ್ಲಿ ಮಕ್ಕಳೊಡನೆ ಊಟಕ್ಕೆ ಕುಳಿತಾಗ ಮೊನ್ನೆ ಮೇಲಿನ ಮನೆಗೆ ಫೋನು ಬಂತಂತೆ, ನಿನ್ನೆ ಹಿಂದಿನ ಮನೆಯವರು ಹಾಕಿಸಿಕೊಂಡರಂತೆ, ನಡುಮನೆಯವರಿಗೆ ಬಂದು ಒಂದು ವಾರವಾಯಿತಂತೆ… ಹೀಗೆಲ್ಲ ಮಕ್ಕಳಿಂದ ವರದಿ.
ಬಡಿಸುತ್ತಿದ ನನ್ನ ಮಕ್ಕಳ ತಾಯಿ ಅಂದರೆ ನನ್ನ ಹೆಂಡತಿ, ನಿಮಗೆ ಬೇರೇನು ಮಾತನಾಡುವುದಕ್ಕೆ ವಿಷಯವಿಲ್ಲವೇ? ಯಾರ ಮನೆಗೆ ಫೋನು ಬಂದರೆ ನಮಗೇನಂತೆ..? ನನ್ನನ್ನು ನೋಡುತ್ತಲೇ ನಿಟ್ಟುಸಿರೊಂದನ್ನು ಬಿಟ್ಟು ಸಿಟ್ಟಿನಿಂದ ಮಕ್ಕಳನ್ನು ಗದರಿಸಿದಳು. ಆ ನೋಟದಲ್ಲಿ ಊರ ಮಂದಿಯೆಲ್ಲ ಫೋನು ಹಾಕಿಸಿಕೊಳ್ಳುತ್ತಿದ್ದಾರೆ. ಇಲಾಖೆಯವರು ಬಿಟ್ಟಿ ಪೋನು ನೀಡಿದರೂ ಹಾಕಿಸಿಕೊಳ್ಳುವ ಯೋಗ್ಯತೆ ನಿಮ(ನ)ಗಿಲ್ಲ ಎಂಬ ಗೂಡಾರ್ಥವಡಗಿತ್ತು! ಹೆಂಡತಿಯ ನಿಟ್ಟುಸಿರಿನ ವೇಗ ಆವೇಗಗಳನ್ನು ಅರ್ಥಮಾಡಿಕೊಂಡು ಬದುಕುವ ಕಲೆ ನನಗೆ ತಿಳಿದಿತ್ತು. ವರುಷ ಹತ್ತಾಗಿತ್ತು ಮದುವೆಯಾಗಿ. ಅಡುಗೆ ಮನೆಯಲ್ಲಿ ಸುಂಟರಗಾಳಿಯೆದ್ದರೆ ಮನೆಯ ಯಜಮಾನ ತರಗೆಲೆಯಂತೆ ಹಾರಿಹೋಗುವ ಸಾಧ್ಯತೆಗಳ ಅರಿವಿದ್ದ ನಾನು ಒಂದಿನಿತು ತಡಮಾಡದೆ ಮರುದಿನವೆ ಮನೆಗೆ ಕರ್ಣಪಿಶಾಚಿಯನ್ನು (ಟೆಲಿಫೋನು) ತಂದೆ ಅರ್ಥಾತ್ ನನ್ನಿಂದ ತರಿಸಿಕೊಳ್ಳಲಾಯಿತು!
ಟ್ರಿಣ್…ಟ್ರಿಣ್…ಟ್ರಿಣ್…. ಮನೆಯ ಹೊಸ ಟೆಲಿಫೋನು ಮೊಳಗಿತು. ಬನ್ನಿ, ನನ್ನನೆತ್ತಿಕೊಳ್ಳಿ ಎಂಬ ಪ್ರೀತಿಯ ಆಹ್ವಾನವಿತ್ತು ಅದರಲ್ಲಿ. ಏಕಕಾಲದಲ್ಲಿ ಮನೆಯ ಐದು ಮಂದು ಟೆಲಿಫೋನಿನೆಡೆಗೆ ಧಾವಿಸಿದೆವು.. ನಿಲ್ಲಿ… ನಾನು ಯಜಮಾನನ ಠೀವಿಯಲ್ಲಿ ಘರ್ಜಿಸಿದೆ. ಮನೆಯ ಯಜಮಾನ ನಾನು, ಟೆಲಿಫೋನಿನ ಮೊದಲ ಕರೆಯನ್ನು ನಾನು ತೆಗೆದುಕೊಳ್ಳಬೇಕಾದವನು.ಆಜ್ಞೆಯಿತ್ತು ಮಾತಿನಲ್ಲಿ. ಅಸಹನೆಯಿಂದ ಹಿಂದೆ ಸರಿದರೆಲ್ಲ.
ಹಲೋ.. ಹಲೋ…
ವಾಯ್… ಭಟ್ರೋ….. ತಾಕ್ತೋ….ಸ್ವಲ್ಪ ಕಿವಿಕೊಡಿ…!
ನನಗರ್ಥವಾಗಲಿಲ್ಲ… ಯಾರು…ಯಾರು ಮಾತಾಡ್ತಾ ಇದ್ದೀರಿ..? ಏನು ತಾಗ್ಬೇಕಾಗಿತ್ತು..? ನಿಮ್ಗ್ಯಾಕೆ ಕಿವಿಕೊಡ್ಬೇಕು…?
ಗೊತ್ತಾಗಿಲ್ವ ಭಟ್ರೆ… ನಾನು ಟೆಲಿಫೋನ್ ಆಫಿಸಿಂದ ಸುಬ್ಬ ಮಾತಾಡೋದು. ಟೆಲಿಪೋನ್ ಕನೆಕ್ಟ್ ಆಗಿದೆ… ತಾಕ್ತೋ ಅಂತ ಸ್ವಲ್ಪ ಕಿವಿಕೊಡಿ ಅಂದೆ. ತಕಳ್ಳಿ…ನಂಬ್ರ ಬರ್ಕಳಿ…
ಹೀಗೆ ನಾನು ಟೆಲಿಫೋನಾಧಿಪತಿಯಾದೆ. ಮನೆಯಲ್ಲಿ ಇನ್ನಾದರೂ ಶಾಂತಿ ನೆಲೆಸೀತು ಎಂದುಕೊಂಡೆ.
ಒಂದು ಮುಂಜಾನೆ ಪೇಪರ್ ಓದುತ್ತಿದ್ದೆ… ಫೋನು ಮೊಳಗಿತು. ಯಥಾ ಪ್ರಕಾರ ನನ್ನವಳು ಧಾವಿಸಿ ಎತ್ತಿಕೊಂಡಳು.
ಹಲೋ… ಹಲೊ…ಅಮ್ಮಾ ನಾನು (ಮದುವೆಯಾಗಿ ದೂರದೂರಿನಲ್ಲಿರುವ ನನ್ನ ಮಗಳ ಧ್ವನಿ)
ಅಂದುಕೊಂಡೆ..ನೀನೆ ಇರಬೇಕು ಅಂತ..ನನ್ನವಳ ಪ್ರತ್ಯುತ್ತರ. (ಫೋನು ರಿಂಗಾಗುವ ಧ್ವನಿಯಲ್ಲೇ ಅದು ಮಗಳದ್ದೇ ಎನ್ನುವ ಟೆಲಿಪತಿ ಇವಳಿಗೆ ಗೊತ್ತು!)
ಉಭಯಕುಶಲೋಪರಿಯ ನಂತರ, ಹ್ಯಾಗಿದ್ದಾರೆ ನಿನ್ನ ಅತ್ತೆ ಮಾವ…(ನನ್ನವಳ ಪ್ರಶ್ನೆ)
…………………………………. (ನನಗೆ ಕೇಳಿಸದ ವಿವರಣೆ ಆ ಕಡೆಯಿಂದ)
ಇರ್ಲಿ… ಇರ್ಲಿ ಆಯುಷ್ಯದ ವಿಚಾರ ಯಾರೂ ಹೇಳಲಿಕ್ಕಾಗುವುದಿಲ್ಲ. ಯಾರ್ಯಾರು ಯಾವಾಗ್ಯಾವಾಗ ಕಳ್ಚೊಬೇಕೋ ಯಾರಿಗೆ ಗೊತ್ತು, ಸದ್ಯ ಬಿಡುಗಡೆಯಾದ್ರೆ ಸಾಕು..! (ಈ ಕಡೆಯಿಂದ ನನ್ನವಳ ಸಂತೈಸುವಿಕೆ)
ಎಲ್ಲಿ…ಪುಟ್ಟನ್ನ ಒಮ್ಮೆ ಮಾತಾಡ್ಸು… (ನನ್ನವಳು ಈ ಕಡೆಯಿಂದ)
ಪುಟ್ಟಾ… ಪುಟ್ಟಾ… ನನ್ನ ಮುದ್ದು…, ಬಂಗಾರು,… ಚಿನ್ನು…ಅಲೆಲೆ…ಕಂದಾ!
ಆ ಕಡೆಯಿಂದ ವಿವಿಧ ಶಬ್ದಗಳು ನನ್ನ ಮೊಮ್ಮಗನ ಬಾಯಿಯಿಂದ. ಕೊನೆಗೆ ಠುಸ್…ಪುರ್…
ನೋಡಮ್ಮಾ.. ಏನ್ ಮಾಡ್ದಾ ಅಂತ.., ಮೈಮೇಲೆಲ್ಲ ಆಯಿತು.. (ನನ್ನ ಮಗಳು ಆ ಕಡೆಯಿಂದ)
ಶಬ್ದ ಕೇಳಿಯೇ ಅನ್ಕೊಂಡೆ.. ಈಗವ್ನು ಮಾಡ್ತಾನೇ ಅಂತ.., ಸ್ವಲ್ಪ ವಾಸನೇನೂ ಬಂತು…
ಹ್ಞೂ… ಇನ್ನು ನಿನ್ಹತ್ರ ಮಾತಾಡಿದ ಹಾಗೆ. ಫೋನ್ ಇಡ್ತಿನಿ…(ನನ್ನವಳು ಈ ಕಡೆಯಿಂದ)
***************************************
ಒಂದು ದಿನ ಯಾರಿಗೊ ಕರೆ ಮಾಡುವುದಕ್ಕೆ ನಂಬರ್ ಡಯಲ್ ಮಾಡಿದೆ. ಅಡ್ಡಕರೆ (crossed call)ಯಲ್ಲಿನ ದಕ್ಷಿಣ ಕನ್ನಡದ ಪ್ರೇಮಿಗಳಿಬ್ಬರ ಸಂಭಾಷಣೆಯೊಂದನ್ನು ಕೇಳುವ ಭಾಗ್ಯ ನನ್ನದಾಯಿತು.
ಹಲೋ….ವಾರಿಜಾ… ಎಂತ ಮಾರಾಯ್ತಿ… ನೀನು ಈ ತರಹ ಸಿಟ್ಟು ಮಾಡ್ಬಾರ್ದು. ನಾನು ಹೇಳಿದ್ದು ಹೌದು, ಐದು ಗಂಟೆಗೆ ಅಜ್ಜರಕಾಡು ಪಾರ್ಕ್ ಹತ್ರ ಬರ್ತೇನೆ ಅಂತ. ಆಫೀಸಿನಲ್ಲಿ ದರಿದ್ರದವನು ಆ ಬಾಸ್ ಬಿಡ್ಲೇ ಇಲ್ಲ.. ಇವತ್ತಿನ ಕೆಲಸ ಎಲ್ಲ ಮುಗಿಸಿಯೇ ಹೋಗ್ಬೇಕು ಅಂದ. ಎಲ್ಲ ಮುಗಿವಾಗ ಗಂಟೆ ಏಳಾಯಿತು. ನೀನು ಬೇಜಾರು ಮಾಡೋದು ಬೇಡ. ಬರುವ ಭಾನುವಾರ ಖಂಡಿತ ಬರ್ತೇನೆ. ಮತ್ತೆ ಸ್ವಲ್ಪ ಜೋಪಾನ ಮಾರಾಯ್ತಿ. ಮೊನ್ನೆ ನಾವು ಬೈಕಲ್ಲಿ ಕಾಪು ಬೀಚಿಗೆ ಹೋದ್ದು ಯಾರೊ ಮನೆಯವರ ಕಿವಿ ಊದಿದ್ದಾರೆ. ಮನೆಯಲ್ಲಿ ಅಮ್ಮಂದು ಸಿಕ್ಕಾಪಟ್ಟೆ ಗಲಾಟೆ. ಅಪ್ಪ ಇಂಥಾ ವಿಷಯದಲ್ಲಿ ತುಂಬ ಅನುಭವ ಉಂಟು. ಅವರು ಸಾಫ್ ಸೀದಾ! ಮತ್ತೆ ನೀನು ಹೆದರ್ಬೇಡಾ. ನನ್ಗೆ ಯಾರ್ದೂ ಕ್ಯಾರ್ ಇಲ್ಲ. ನನ್ನಲೈಫಲ್ಲಿ ನೀನೇ ಫಸ್ಟು…ನೀನೇ ಲಾಸ್ಟೂ…
ನಾನು ಮೆಲ್ಲನೆ ಕೆಮ್ಮಿದೆ…
ನಾವು ಮಾತಾಡೋದು ಯಾರೋ ಕೇಳ್ತಿದ್ದಾರೆ… ಮತ್ತೆ ಮಾತಾಡ್ವಾ ಆಯ್ತಾ…!
ನಮ್ಮ ಕಾಲದಲ್ಲಿ ನಾವು ಫೋನಿಲ್ಲದೆ ಅನುಭವಿಸಿದ ವಿರಹವನ್ನು ನೆನೆದು ಪುಳಕಿತನಾದೆ!
*********************************
ವರುಷಗಳುರುಳಿ ಮೊಬೈಲ್ ಯುಗ ಬಂತು. ನಾನಿನ್ನು ಲ್ಯಾಂಡ್ ಲೈನಿನಲ್ಲೇ ಇದ್ದೇ. ನಿಮಗೆ ಮೊದಲೇ ತಿಳಿಸಿದ್ದೇನೆ ಇಂತಹ ವಿಷಯಗಳಲ್ಲಿ ನಾನು ಸ್ವಲ್ಪ ಹಿಂದೆ…ತೋಟದಲ್ಲಿ ಅಡಿಕೆಗೊನೆ ತೆಗೆಸಬೇಕಾಗಿತ್ತು. ಈ ಕೆಲಸಕ್ಕೆ ಚೀಂಕ್ರನಲ್ಲದೆ ಮತ್ಯಾರು? ನನ್ನವಳಿಗೆ ಹೇಳಿದೆ…ಒಮ್ಮೆ ಚೀಂಕ್ರನ ಮನೆ ಕಡೆ ಹೋಗಿ ಅವನಿಗೆ ನಾಳೆ ಅಡಿಕೆಗೊನೆ ತೆಗೆಯಲು ಹೇಳಿ ಬರುತ್ತೇನೆ. ನನ್ನವಳು ಗುಡುಗಿದಳು..ನೀವೀಗ ಚೀಂಕ್ರನ ಮನೆಗೆ ಹೋಗುವುದು ಬೇಡ. ಚೀಂಕ್ರ ಓಣಿಮನೆಯಲ್ಲಿ ಅಡಿಕೆಗೊನೆ ತೆಗಿತಾ ಇದ್ದಾನಂತೆ. ನಾಗಿ (ಚೀಂಕ್ರನ ಹೆಂಡತಿ) ಒಬ್ಬಳೇ ಮನೆಯಲ್ಲಿರೋದು!! ಚೀಂಕ್ರನ ಮನೆಗೆ ಫೋನ್ ಮಾಡಿ ಕೇಳಿ ಅಂತ ಫೋನ್ ನಂಬರ್ ಕೊಟ್ಳು! (ಎಲಾ ಹೆಣ್ಣೇ…!!!) ನಾನು ಚೀಂಕ್ರನ ಮನೆಯ ಫೋನ್ ನಂಬರ್ ತಿರುಗಿಸಿದೆ. ನಾಗಿ ಫೋನ್ ಎತ್ತಿಕೊಂಡಳು..ಏನೋಂದು ಕೇಳದಷ್ಟು ದೊಡ್ಡದಾಗಿ ‘ಬಲ್ಲೆ ಬಲ್ಲೆ ಕೈತಾಳ್ ಬಲ್ಲೆ, ಬೆಗ್ಗೊ ಬಲ್ಲೆ (ಬನ್ನಿ..ಬನ್ನಿ.. ಹತ್ತಿರ ಬನ್ನಿ..ಬೇಗ ಬನ್ನಿ ಎಂಬರ್ಥದ ಹಾಡು)ಎಂದು ರೆಡಿಯೋ ತುಳು ಚಿತ್ರಗೀತೆ ಹಾಡುತ್ತಿತ್ತು. ನಾನು ನಾಗಿಗೆ ಹೇಳಿದೆ, ಹತ್ತಿರ ಬರಲು ಇಲ್ಲಿ ನನ್ನ ಬಿಡ್ತಾ ಇಲ್ಲ! ಮೊದಲು ಒಮ್ಮೆ ಆ ರೇಡಿಯೋ ಸೌಂಡ್ ಸಣ್ಣದು ಮಾಡು ಮಾರಾಯ್ತಿ. ಅವಳಿಗೆ ನಾಳೆ ಅಡಿಕೆ ಕೊನೆ ತೆಗೆಯಲು ನಾಳೆ ಚೀಂಕ್ರ ಬರಬೇಕೆಂದು ತಿಳಿಸಿದೆ. ಅವಳು ಅವನು ಈಗ ಬಹಳ ಬಿಜಿ ಅಂತ ಅವನ ಮೊಬೈಲ್ ನಂಬರ್ ಕೊಟ್ಳು. ನಾನು ಚೀಂಕ್ರನ ಮೊಬೈಲ್ ಗೆ ಫೋನ್ ಮಾಡ್ದೆ.ಆ ಕಡೆಯಿಂದ ಚೀಂಕ್ರ ಹಲೋ ಭಟ್ರೆ ಅಂದ! ನನಗೆ ಆಶ್ಚರ್ಯವಾಯಿತು. ಎಲ್ಲಿದ್ದೀ ಎಂದು ಕೇಳಿದರೆ ಅಡಿಕೆ ಮರದ ಮೇಲಿದ್ದೇನೆ, ಗೊನೆ ತೆಗೀತಾ ಇದ್ದೀನಿ ಅಂದ. ಎಂತಾ ಭಟ್ರೆ… ನೀವಿನ್ನು ಲ್ಯಾಂಡ್ ನಲ್ಲಿಯೇ ಇದ್ದೀರಿ. ಒಂದು ಮೊಬೈಲ್ ತೆಕೊಳ್ಳೊಕ್ಕೆ ಆಗಲ್ವಾ..ಎಂತಾ ಪಿಟ್ಟಾಶಿ ನೀವು ಅನ್ನಬೇಕೆ? ಮುಂದಿನ್ವಾರ ಬರ್ತಿನಿ ಅಂದ….ಕಾಲಾಯ ತಸ್ಮೈ ನಮಃ !
***********************************************
ನಾನು ಮೊಬೈಲ್ ಕೊಂಡುಕೊಂಡೆ…..
ಮಳೆಗಾಲದ ದಿನಗಳವು. ಟೆಲಿಪೋನ್ ಸತ್ತು ಹತ್ತು ದಿನವಾಗಿತ್ತು. ನಾಲ್ಕೈದು ಸಲ ಕಂಪ್ಲೇಂಟ್ ಕೊಟ್ಟರೂ ಯಾರೊಬ್ಬರೂ ಬಂದಿರಲಿಲ್ಲ. ನಾನೇ ಖುದ್ದು ಟೆಲಿಕಾಂ ಆಫಿಸಿನೆಡೆ ನಡೆದೆ. ಇಂಜಿನಿಯರ್ ಒಬ್ಬ ಫೈಲ್ ಗಳಲ್ಲೇನೋ ಹುಡುಕುತ್ತಿದ್ದ.
ನಮಸ್ಕಾರ… ಅಂದೆ.
ತಲೆಯೆತ್ತಿ… ಓ ಭಟ್ರೆ ಏನ್ಸಮಾಚಾರ ಅಂದ..
ಏನಿಲ್ಲ…, ಒಂದು ಆಮಂತ್ರಣ ಮಾಡಿ ಹೋಗೋಣ ಅಂತ ಬಂದೆ ಎಂದೆ..
ಎಂತ ಭಟ್ರೆ ಮದ್ವೆನೋ…ಮುಂಜಿನೋ ಅಂತ ಕೇಳ್ದ
ಅದು ಎಂತದ್ದು ಅಲ್ಲ.., ಒಂದು ವೈಕುಂಠ ಸಮಾರಾಧನೆ ಅಂದೆ!
ಇಂಜಿನಿಯರ್ ಗಾಬರಿಗೊಂಡ..ಯೆಂತ..? ಯಾರು..? ಯಾವಾಗ..? ಯೆಂತ ಆಯ್ತು ಅಂದ.
ನಿನ್ನೆಗೆ ಹತ್ತು ದಿನ ಆಯ್ತು…ನಾಡಿದ್ದು ವೈಕುಂಠ. ನೀವೆಲ್ಲ ಬರ್ಬೇಕು ಅಂದೆ.
ಮತ್ತೆ ನೀವು ಬಂದು ಹೇಳಿದ ಮೇಲೆ ನಾವು ಬರದೆ ಇರಕಾಗತ್ತಾ…? ಅದು ನಿಮ್ಮಲ್ಲಿ ಭಟ್ರುಗಳಲ್ಲಿ ವೈಕುಂಠ ಅಂದ್ರ ಗಡದ್ದಾಗಿ ಮಾಡ್ತೀರಲ್ವೊ? ಅದಿರ್ಲಿ… ಯಾರು ತೀರ್ಕೊಂಡದ್ದು? ನಮ್ಗೆ ಇಷ್ಟು ತಡವಾಗಿ ತಿಳಿಸ್ತಾ ಇದ್ರಲ್ಲ!
ಇಲ್ಲ.., ನಾನು ಸತ್ತ ದಿನವೇ ತಿಳಿಸಿದ್ದೀನಿ..
ಯಾರು.. ಯಾರು ಸತ್ತಿದ್ದು?
ಸತ್ತಿದ್ದು ನಿಮ್ಮ ಡಿಪಾರ್ಟ್ ಮೆಂಟ್ ನವರು ಕೊಟ್ಟ ಟೆಲಿಫೋನು. ನಾಳೆಗೆ ಹದಿಮೂರೆನೇ ದಿನ. ಎಲ್ಲಾ ಬನ್ನಿ ಆಯ್ತಾ ಎಂದು ಹೇಳಿ ನಾನು ಟೆಲಿಫೋನು ಆಫಿಸಿನಿಂದ ಹೊರನಡೆದೆ.
ನಾನು ಮನೆಗೆ ತಲುಪುವುದರ ಒಳಗೆ ಟೆಲಿಫೋನು ರಿಪೇರಿಯಾಗಿತ್ತು.
ಇದೆಲ್ಲ ಆಪುದ್ ಹೋಪುದ್ ಅಲ್ಲವೆಂದು ನಾನೂ…ಮೊಬೈಲ್ ಕೊಂಡೆ!!!
– ದಿವಾಕರ ಡೋಂಗ್ರೆ ಎಂ.