ಕಮರುವ ಕನಸುಗಳು
“ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಗುಣವಿರುವ ಮನುಜರೆಲ್ಲ ಮಕ್ಕಳಂತೆ. ಮಕ್ಕಳಿಗೂ ದೇವರಿಗೂ ಭೇದವಿಲ್ಲ ಇಬ್ಬರ ಮನದಲೂ ಕಪಟವಿಲ್ಲ ‘ ಹೀಗೆ ಮುದ್ದು ಮುದ್ದಾದ ಹಾಡೊಂದನ್ನು ಕೇಳಿದ ನೆನಪು. ಎಲ್ಲ ಮಕ್ಕಳಿಗೂ ಈ ರೀತಿಯ ಮುಚ್ಚಟೆಯ ಬಾಲ್ಯ ಸಿಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಈ ಭವ್ಯ ಭಾರತದಲ್ಲಿ ಮಕ್ಕಳು ಎಂಬ ದೇವರುಗಳು ಹೇಗಿದ್ದಾರೆ ಎನ್ನುವುದರ ಬಗ್ಗೆ ಒಂದು ನೋಟ.
ನಮ್ಮ ದೇಶದಷ್ಟು ವಿರೋಧಾಭಾಸಗಳನ್ನು ಹೊಂದಿರುವ ದೇಶ ಇನ್ನೊಂದಿಲ್ಲ. ಕಾಲಿಗೆ ಮಣ್ಣು ಸೋಕಿಸದೆ ಎ ಸಿ ಕಾರು, ಬಂಗಲೆ, ಪಾರ್ಕು, ಮಾಲ್, ಟೂರ್ ಎಂದು ಆರಾಮಾಗಿರುವ ಮಕ್ಕಳು ಒಂದೆಡೆ ಆದರೆ ಕಲ್ಲು ನೆಲದ ಮೇಲೆ ಟೆಂಟ್ ಗಳಡಿ ಬದುಕುವ, ಮರಗಳ ನಡುವಿನ ಜೋಕಾಲಿಯಲ್ಲಿ ನಿದ್ರಿಸುವ, ಹೊಲ ಗದ್ದೆಗಳಲ್ಲಿ ದುಡಿಯುವ, ಆರು ವರ್ಷಕ್ಕೆಲ್ಲ ಅಡಿಗೆ ಮಾಡುವ, ಹತ್ತು ವರ್ಷಕ್ಕೆ ಹೋಟೆಲ್ ಟೇಬಲ್ ಒರಸುವ, ಪಟಾಕಿ , ಊದುಗಡ್ದಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಎಳೆಯ ಕಂದಮ್ಮಗಳು. ಇನ್ನು ಬೀದಿ ಬದಿಯಲ್ಲಿ ಮಣಿಸರ ಮಾರುವ, ಭಿಕ್ಷೆ ಬೇದುವ, ದೊಂಬರಾಟ ಮಾಡುವ, ಕಟ್ಟದ ನಿರ್ಮಾಣಕ್ಕೆ ಕಲ್ಲು ಹೊರುವ, ಕಳ್ಳೆಕಾಯಿ, ಬಲೂನು ಮಾರುವ…. ಓ ಬಾಲ್ಯವೇ!
ನಮ್ಮ ದೇಶದ ಕಿತ್ತು ತಿನ್ನುವ ಬಡತನ, ಅನಕ್ಷರತೆ, ಅಜ್ನಾನ, ಮೂಢನಂಬಿಕೆಗಳು ಸದ್ಯಕ್ಕಂತೂ ಅಷ್ಟು ಸುಲಭವಾಗಿ ನಿರ್ಮೂಲನವಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಅರೆ ಹೊಟ್ತೆ ತಿಂದು ಅಪೌಷ್ಟಿಕತೆಯಿಂದ ನರಳುವ, ಎಳೆ ವಯಸ್ಸಿಗೇ ಮದುವೆಯಾಗಿ ಬಾಣಂತನದಲ್ಲಿ ಸಾವನ್ನಪ್ಪುವ, ಕಳ್ಳತನ, ಕೊಲೆ, ಸುಲಿಗೆಗಳಲ್ಲಿ ಭಾಗಿಯಾಗಿ ಜೈಲು ಸೇರುವ… ಮಗುವೇ ನೀನೆಲ್ಲಿರುವೆ?
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 12.6 ಮಿಲಿಯನ್ ಬಾಲಕಾರ್ಮಿಕರಿದ್ದಾರೆ. ಇವರಲ್ಲಿ ಹೆಚ್ಚಿನವರು ದೇಶದ ಕೊಳೆಗೇರಿಗಳಲ್ಲಿ, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇರುತ್ತಾರೆ. ಇನ್ನು ಗುಳೆ ಹೋಗುವವರ ಮಕ್ಕಳು, ತೀರಾ ಬಡ ತಂದೆ ತಾಯಿಯರ ಮಕ್ಕಳು, ಅನಾಥರು.. ಹೀಗೆ ಈ ಮಕ್ಕಳಿಗೆ ಶಾಲೆಯೊಂದು ಕನಸು. ನಮ್ಮ ಸಂವಿಧಾನದಲ್ಲಿ ಬಾಲಕಾಮಿಕ ಪದ್ಧತಿ ಮಕ್ಕಳ ಹಕ್ಕಿನ ಉಲ್ಲಂಘನೆ ಹಾಗೂ ವಿಧ್ಯಾಭ್ಯಾಸ ಅವರ ಹಕ್ಕು. ಹಾಗಿದ್ದರೂ ಈ ಪಿಡುಗು ಎಗ್ಗಿಲ್ಲದೆ ಮುಂದುವರಿದಿದೆ. ಇದಕ್ಕೆ ಕಾರಣ ನಮ್ಮ ಜನಸಂಖ್ಯೆ ಹಾಗೂ ಸಂಪನ್ಮೂಲಗಳ ಕೊರತೆ.
ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳಿಂದ ಈ ಪದ್ಧತಿ ಮುಂದುವರಿದಿದೆ.
ರೇಶ್ಮೆ ಉದ್ದಿಮೆ, ಮನೆಗೆಲಸ, ಗಣಿಗಾರಿಕೆ, ನೇಯ್ಗೆ.. ಹೀಗೆ. ನೇಜಿ ನೆಡುವ, ಶೂ ಪಾಲಿಶ್, ಟೀ ಬಾಯ್ ಗಳಾಗಿ, ಗುಜರಿ, ಹೂ ಮಾರುವ, ಮೆಕ್ಯಾನಿಕ್, ವೆಲ್ದಿಂಗ್ ಶಾಪ್ ಗಳಲ್ಲಿ, ಬಳೆ ತಯಾರಿಕಾ ಘಟಕಗಳಲ್ಲಿ, ಹತ್ತಿ, ಸೂರ್ಯ ಕಾಂತಿ ಹೂ ಬಿಡಿಸುವ, ಮಲ್ಲಿಗೆ ಕೃಷಿಯಲ್ಲಿ, ರಸ್ತೆ ಕಾಮಗಾರಿ, ಇನ್ನೂ ಭೀಕರವಾಗಿ ಬಾಲ ವೇಶ್ಯೆಯರಾಗಿ.. ಹೀಗೆ ಇದೊಂದು ಕನಸುಗಳನ್ನು ಎಳವೆಯಲ್ಲಿಯೇ ಮುರುಟಿಸುವ ಪ್ರಪಂಚ. ಸರಕಾರದ ವತಿಯಿಂದ ಪಲ್ಸ್ ಪೋಲಿಯೋ, ಗರ್ಭಿಣಿಯರ ಆರೋಗ್ಯ ಮೊದಲುಗೊಂಡು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಅನೇಕ ಸಬಲೀಕರಣ ಯೋಜನೆಗಳಿವೆ. ಮಹಿಳೆಯರ ಮತ್ತು ಮಕ್ಕಳ ಬದುಕು ಒಂದಕ್ಕೊಂದು ಮಿಳಿತವಾಗಿರುವುದೂ ಇಲ್ಲಿ ಗಮನಿಸಬೇಕಾದ ಕುತೂಹಲದ ಅಂಶ. ಇನ್ನು ಮರಳಿ ಬಾ ಶಾಲೆಗೆ, ಬಿಸಿಯೂಟ, ಭಾಗ್ಯಲಕ್ಶ್ಮಿ ಯೋಜನೆ, ಹೆಣ್ಣು ಮಕ್ಕಳಿಗೆ ಒದಗಿಸುವ ಸೈಕಲ್ ಗಳು ಎಲ್ಲವೂ ಉತ್ತಮ ಆಶಯವನ್ನು ಹೊತ್ತ ಯೋಜನೆಗಳೇ ಆಗಿವೆ.
ಮಕ್ಕಳ ಬದುಕನ್ನು ಆಧರಿಸಿ ಅನೇಕ ಸಿನೆಮಾಗಳು, ಪುಸಕಗಳು ಬಂದಿವೆ. ಚಾರ್ಲ್ಸ್ ಡಿಕನ್ಸ್ ನ ‘ಒಲಿವೆರ್ ಟ್ವಿಸ್ಟ್’ ನಿಂದ ಹಿಡಿದು ಆಧುನಿಕ ‘ಸ್ಲಮ್ ಡಾಗ್ ಮಿಲಿಯನೆರ್’ ವರೆಗೆ.
ಇನ್ನು ಕನ್ನಡದ ‘ಚಿನ್ನಾರಿ ಮುತ್ತ’, ‘ಕೊಟ್ರೇಶಿ ಕನಸು’, ಕೇರ್ ಆಫ಼್ ಫುಟ್ ಪಾಥ್, ಹೀಗೆ ಅವಕಾಶ ವಂಚಿತ ಮಕ್ಕಳ ಜಗತ್ತನ್ನು ಅರಿಯುವ , ಆ ಮೂಲಕ ಜಾಗೃತಿ ಮೂಡಿಸುವ ಅನೇಕ ಪ್ರಯತ್ನಗಳಾಗಿವೆ. ಒಟ್ಟಿನ ಮೇಲೆ ಮಗು ಮನಸ್ಸಿನ ಮುಗ್ಧತೆಯನ್ನು, ಯೌವನದ ಅಸೀಮ ಸಾಧ್ಯತೆಗಳನ್ನು ಕಾಪಾಡಿಕೊಳ್ಳುವುದು ದೇಶದ ಅಭಿವ್ರುದ್ಧಿಯ ದೃಷ್ಟಿಯಿಂದಲೂ, ಮಾನವೀಯ ನೆಲೆಯಿಂದಲೂ ಅತ್ಯಗತ್ಯವಾಗಿದೆ.
– ಜಯಶ್ರೀ ಬಿ ಕದ್ರಿ
ಸತ್ಯದ ಅನಾವರಣ . ಬರಹ ಉತ್ತಮ.
Nice article.
Nija baraha Thumba channagide….
ನಿಮ್ಮ ಆಶಯ ಚೆನ್ನಾಗಿದೆ.. ಆದರೆ ನಮ್ಮ ದೇಶವನ್ನು ಸರಿಪಡಿಸುವುದು ಕಷ್ಟದ ಕೆಲಸ. ಕನಸುಗಳು ಸತ್ತು ಮನದ ಮಸಣದಲ್ಲಿ ಬೂದಿಯಾಗುವುದೇ ಇಲ್ಲಿನ ವಾಸ್ತವ…