ಅವಿಸ್ಮರಣೀಯ ಅಮೆರಿಕ – ಎಳೆ 48

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಮರದ ಮನೆಯೊಳಗೆ…

ನಮ್ಮ ಗೈಡ್ ಬಹಳ ಚೂಟಿಯಾಗಿದ್ದ… ತಮಾಷೆಯಾಗಿ ಎಲ್ಲಾ ವಿವರಣೆಗಳನ್ನು ನೀಡುತ್ತಿದ್ದ. ಅವನು ಆ ಮನೆಯ ಮುಂದಿನ ಬಾಗಿಲಲ್ಲಿ ನೇರವಾಗಿ ನಿಂತು, ತಾನೀಗ ಹೇಗೆ ಕಾಣಿಸ್ತಾ ಇದ್ದೇನೆ? ಎಂದು ಕೇಳಿದಾಗ; ನಾವು ನಮ್ಮ ಕಣ್ಣುಗಳನ್ನು ನಂಬದಾದೆವು…ಅವನು ಓರೆಯಾಗಿ ನಿಂತಂತೆ ಭಾಸವಾಗುತ್ತಿತ್ತು! ಆ ಮನೆಯೇ ಬಾಗಿ ನಿಂತತೆ ಕಾಣಿಸುತ್ತಿತ್ತು. ಆ ಬಳಿಕ ಅಲ್ಲೇ ಹೊರಗಡೆಗೆ ನಮ್ಮನ್ನು ಅರ್ಧವೃತ್ತಾಕಾರದಲ್ಲಿ ನಿಲ್ಲಿಸಿ, ಉದ್ದನೆಯ ಮರದ ಹಲಗೆಯನ್ನು ನಮ್ಮೆದುರಿಗೆ ತಂದು; ಮಹಿಳಾ ಪ್ರವಾಸಿಗರಲ್ಲಿ ಲಿಪ್ಸ್ಟಿಕ್ ಬಾಟಲಿಯನ್ನು ಕೇಳಿ ಪಡೆದುಕೊಂಡ. ಕೈಯಲ್ಲಿದ್ದ ಮರದ ಹಲಗೆಯನ್ನು ಓರೆಯಾಗಿ ಹಿಡಿದುಕೊಂಡು ಅದರ ಮಧ್ಯದಲ್ಲಿ ಬಾಟಲಿಯನ್ನು ಅಡ್ಡಲಾಗಿ ಇರಿಸಿದ. ನಿಜವಾಗಿಯೂ ಈಗ ಏನಾಗ್ಬೇಕು??…ಬಾಟಲಿ ಉರುಳಿ ಕೆಳಗೆ ಬೀಳಬೇಕು ತಾನೆ? ಆದರೆ ಹಾಗಾಲಿಲ್ಲ…ಅದು ಉರುಳುತ್ತಾ ಮೇಲಕ್ಕೆ ಬಂತು! ಅವನು ನಮ್ಮಲ್ಲಿ ನೀರಿನ ಬಾಟಲಿಯೊಂದನ್ನು ಪಡೆದುಕೊಂಡು, ಅದರಿಂದ ನೀರನ್ನು ಆ ಹಲಗೆ  ಮೇಲೆ ಚೆಲ್ಲಿದಾಗ ಇದೇನಾಶ್ಚರ್ಯ..ನೀರು ಕೆಳಗೆ ಹರಿಯುವ ಬದಲು ಮೇಲಕ್ಕೆ ಹರಿಯುತ್ತಿದೆ! ಮುಂದಕ್ಕೆ ಅಲ್ಲೇ ಇದ್ದ ಚೆಂಡನ್ನು  ಹಲಗೆಯ ಕೆಳಭಾಗದಲ್ಲಿಟ್ಟಾಗ ಅದು ಉರುಳುತ್ತಾ ಮೇಲಕ್ಕೆ ಬಂದು ನಿಂತಿತು!…ಈ ವಿಸ್ಮಯಗಳನ್ನೆಲ್ಲಾ ಗರಬಡಿದವರಂತೆ ನೋಡುತ್ತಾ, ಉದ್ಗಾರವೆತ್ತುತ್ತಾ ನಿಂತ ನಮಗೆ ಸಮಯ ಸರಿದುದೇ ತಿಳಿಯಲಿಲ್ಲ. ಇವುಗಳನ್ನೆಲ್ಲಾ ವೀಕ್ಷಿಸಿದಾಗ,  ಅಲ್ಲಿ ಗುರುತ್ವಾಕರ್ಷಣೆಯ  ಶಕ್ತಿಯ ವಿರುದ್ಧ ದಿಕ್ಕಿನಲ್ಲಿ ಕಾರ್ಯ ನಡೆಯುವುದು ತಿಳಿಯಿತು.. ನಿಜಕ್ಕೂ ಅದ್ಭುತ!! ಒಳ್ಳೆಯ ಇಂದ್ರಜಾಲವೊಂದನ್ನು ನೋಡಿದಂತೆ ಭಾಸವಾಗಿದ್ದಂತೂ ನಿಜ!

ಅಲ್ಲಿಂದ ಮುಂದಕ್ಕೆ ನಮ್ಮನ್ನೆಲ್ಲಾ ಒಳಗಡೆಗೆ ಕರೆದೊಯ್ಯುವ ಮುನ್ನ ನಮಗೆಲ್ಲಾ ಕೆಲವು ವಿಷಯಗಳನ್ನು ತಿಳಿಸಿ, ಸಲಹೆಗಳನ್ನು ಕೊಡಲಾಯಿತು.  ಒಳಗಡೆಗೆ, ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ನಡೆಯುವ ಕ್ರಿಯೆಯಿಂದಾಗಿ, ಕೆಲವರಿಗೆ ಅದನ್ನು ತಡೆದುಕೊಳ್ಳಲಾಗದೆ, ವಿಪರೀತ ತಲೆನೋವು, ವಾಂತಿಯಾಗುವುದರ ಜೊತೆಗೆ ಪ್ರಜ್ಞೆಯೂ ತಪ್ಪುವ ಸಂಭವವಿರುವುದಾಗಿ ತಿಳಿಸಿದಾಗ, ನನಗಂತೂ ಭಯ ಸುರುವಾಯ್ತು. ಅದರೊಳಗೆ ನಡೆದಾಡುವಾಗ ಅಲ್ಲಿರುವ ರೈಲಿಂಗ್ ನ್ನು ತಪ್ಪದೇ ಹಿಡಿದುಕೊಳ್ಳುವಂತೆ ಮನದಟ್ಟು ಮಾಡಿದ. ನನಗೆ ಈಗಾಗಲೇ ಹೆದರಿಕೆ ಪ್ರಾರಂಭವಾಗಿದ್ದರೂ, ಅದರ ಜೊತೆಗೆ ಬಹಳ ಕುತೂಹಲವೂ ಇದ್ದುದರಿಂದ ನಾನಂತೂ ಒಳಗಡೆಗೆ ಧೈರ್ಯದಿಂದ ಕಾಲಿಟ್ಟೆ. ಆದರೆ ನಮ್ಮ ಪುಟ್ಟ ಮೊಮ್ಮಗನಿಗೆ ಏನಾಗುವುದೋ ಎಂಬ ಆತಂಕ ಇದ್ದೇ ಇತ್ತು. 

ಒಳಗಡೆ ಕಾಲಿಟ್ಟ ತಕ್ಷಣ ಕಾಲಿನ ಹೆಜ್ಜೆಯ ಗತಿ ಏರುಪೇರಾಗಲಾರಂಭಿಸಿತು. ಶರೀರ ಸಮತೋಲನ ಕಳಕೊಂಡು ಓಲಾಡಲಾರಂಭಿಸಿತು. ಆಧಾರ ಹಿಡಿದುಕೊಂಡು ನಡೆಯಲು ಅದಕ್ಕಾಗಿಯೇ ಕಬ್ಬಿಣದ ದಪ್ಪಗಿನ ರೈಲಿಂಗ್ ನ್ನು ಸಿದ್ಧವಾಗಿರಿಸಿದ್ದರು. ಅದನ್ನು ಗಟ್ಟಿಯಾಗಿ ಹಿಡಿದರೂ ಕಾಲು ನೆಲದಲ್ಲಿ ನೇರವಾಗಿ ನಿಲ್ಲದುದರಿಂದ ಓರೆಯಾಗಿಯೇ ನಡೆಯಲಾರಂಭಿಸಿದೆವು. ಅಯ್ಯೋ…ಏನು ಹೇಳಲಿ..??!.. ತಲೆಯೊಳಗೆ  ತಡೆಯಲಾರದ ವೇದನೆ…ಅಲ್ಲಿದ್ದ ಅಷ್ಟೂ ಜನರ ರೋದನ ಮುಗಿಲು ಮುಟ್ಟಿತ್ತು! ಮೊಮ್ಮಗನು ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಸಿಕ್ಕಾಪಟ್ಟೆ ಅಳಲಾರಂಭಿಸಿದ. ಅವನು ತನ್ನ ತಂದೆಯೊಂದಿಗೆ ಸ್ಲಿಂಗ್ ನಲ್ಲಿ ಭದ್ರವಾಗಿದ್ದರೂ ನಮಗೆ ಬಹಳ ಭಯವಾಯಿತು. ಅಳಿಯ ಅವನೊಂದಿಗೆ  ವೇಗವಾಗಿ ಮುಂದೋಡಿದರೂ ಅವನ ಅಳು ನಿಲ್ಲಲಿಲ್ಲ. ಮರದ ಮನೆಯ ಒಳಗಡೆಯಿದ್ದ ನನ್ನ ಅವಸ್ಥೆ ಹೇಳತೀರದು. ನನ್ನೆದುರಿಗೇ ಒಬ್ಬಳು ಮಹಿಳೆ ವೇದನೆ ತಡೆಯಲಾರದೆ ಅರೆ ಪ್ರಜ್ಞಾವಸ್ಥೆಗೆ ತಲಪಿದಳು. ಇನ್ನೊಬ್ಬಳು ಗಾಬರಿಯಿಂದ ಜೋರಾಗಿ ಅತ್ತೇ ಬಿಟ್ಟಳು. ಇನ್ನು ನಾನೇನು ಮಾಡಿದೆ ಎಂದು ನನಗೇ ತಿಳಿಯದಂತಾಗಿತ್ತು! ಶರೀರ ಒಂದು ಕಡೆಗಿದ್ದರೆ, ಕಾಲು ಇನ್ನೊಂದು ಕಡೆಗೆ ಒಯ್ಯುತ್ತಿತ್ತು! ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಒಳಗಡೆ ಅತ್ತಿತ್ತ ಗಮನಿಸಿದಾಗ ನಿಜವಾಗಿಯೂ ಎಲ್ಲಾ ವಿಚಿತ್ರವಾಗಿ ಕಾಣುತ್ತಿತ್ತು. ಮನೆಯ ಒಳಗಿನ ಒಂದು ಗೋಡೆಗೆ, ಎತ್ತರದಲ್ಲಿ ಉದ್ದನೆಯ ಮರದ ಹಲಗೆಯನ್ನು ಸಿಕ್ಕಿಸಲಾಗಿತ್ತು. ಕೆಲವು ಯುವಕ ಯುವತಿಯರು ಅದರ ಮೇಲೇರಿ ನಿಂತಿದ್ದಾರೆ…ಆದರೆ ಅವರು ನೇರವಾಗಿರದೆ ಮುಂದಕ್ಕೆ ಬಾಗಿದಂತಿದ್ದಾರೆ!  ಆದರೂ ಕೆಳಕ್ಕೆ ಬೀಳಲಿಲ್ಲ..ಇದನ್ನು ನೋಡಿ ಆಶ್ಚರ್ಯಪಡಲು, ಸಂತೋಷಪಡಲು ಅಥವಾ ಕುತೂಹಲಗೊಳ್ಳಲು ಮೆದುಳು ಸರಿಯಾಗಿ ಕೆಲಸಮಾಡಿದರೆ ತಾನೇ?!  ಈ ಪರಿಸ್ಥಿತಿಯಲ್ಲೂ ಕೆಲವರು ಫೋಟೋ ತೆಗೆಯುತ್ತಿದ್ದುದು ಕಂಡು ನಿಜವಾಗಿಯೂ ತಮಾಷೆಯೆನಿಸಿತು. ನನ್ನದಂತೂ ಈ ಲೋಕದಲ್ಲೇ ಇಲ್ಲವೇನೋ ಎನ್ನುವಂತಹ ಮನಸ್ಥಿತಿ! ಆದಷ್ಟು ಬೇಗ ಹೊರಬಂದರೆ ಸಾಕಿತ್ತು.    

ಮನೆಯೊಳಗಡೆಯಿಂದ ಹೊರಗಡೆ ಬಂದಾಗ ತಂಪಾದ ಗಾಳಿ ಸಿಕ್ಕಿತಾದರೂ ತಲೆಯೊಳಗಿನ ವಿಚಿತ್ರ ವೇದನೆ ಇನ್ನೂ ನಿಲ್ಲಲೇ ಇಲ್ಲ. ಆದರೂ, ಮರದ ಮನೆಯ ಹೊರಗಡೆ ನೆಟ್ಟಗೆ ನಿಂತಾಗಲೂ ಮುಂದಕ್ಕೆ ಬಾಗಿದಂತೆ ಕಾಣಿಸುತ್ತಿತ್ತಾದ್ದರಿಂದ, ಅಲ್ಲಿಯೇ ವಿವಿಧ ಭಂಗಿಗಳಲ್ಲಿ ನಿಂತು ಫೊಟೋ ತೆಗೆಸಿ ಖುಷಿಪಟ್ಟೆವು. ಅಲ್ಲಿಂದ ಒಂದೈದು ಮೀಟರ್ ದೂರಕ್ಕೆ ಸರಿದಾಗ ವಿಚಿತ್ರ ತಲೆನೋವು ಅಷ್ಟೇ ವಿಚಿತ್ರ ರೀತಿಯಲ್ಲಿ ತಕ್ಷಣ ಮಾಯವಾಯ್ತು.. ಆದರೆ ಮಗುವಿನ ಅಳು ಮಾತ್ರ ನಿಲ್ಲಲಿಲ್ಲ. ಅಬ್ಬಾ… ಆ ಚಿತ್ರಹಿಂಸೆಯನ್ನು ನೆನೆದರೆ ಈಗಲೂ ಭಯವಾಗುತ್ತಿದೆ. ನಮ್ಮ ಗೈಡ್ ಪುನ: ವಿವರಣೆಗಳನ್ನು ನೀಡುತ್ತಾ ಎಲ್ಲರನ್ನೂ ನಿಧಾನವಾಗಿ ಕೆಳಗಡೆಗೆ ಕರೆದೊಯ್ದು, Mystery Spot ಸ್ಟಿಕ್ಕರ್ ಎಲ್ಲರಿಗೂ ಹಂಚಿದ, ಮನೆಗೊಯ್ಯಲು. ಈ ಜಾಗದ ಹಿನ್ನೆಲೆ, ಈ ರೀತಿಯ ಭ್ರಮೆಗಳಿಗೆ ಪ್ರಚೋದಿಸುವ ದೃಶ್ಯಗಳಿಗೆ ಕಾರಣವಾದ ಗುರುತ್ವಾಕರ್ಷಣೆಯ ಕುತೂಹಲ ಅಂಶ ಇತ್ಯಾದಿಗಳ ಬಗ್ಗೆ ಅವರು ತಿಳಿಸಿದ ವಿಷಯಗಳು ಬಹಳ ಕುತೂಹಲಕಾರಿಯಾಗಿದ್ದರೂ ಸರಿಯಾಗಿ ಅರ್ಥವಾಗಲಿಲ್ಲ ನಿಜ… ಆದರೆ ನಮ್ಮ ಈ ಮರೆಯಲಾಗದ ವಿಚಿತ್ರ ಅನುಭವದ ಮುಂದೆ ಅದೇನೂ ಅಷ್ಟು ವಿಶೇಷವೆಂದೆನಿಸಲಿಲ್ಲ ಬಿಡಿ!

ಇಂತಹುದೇ ಭ್ರಮೆ ಹುಟ್ಟಿಸುವ ಸ್ಥಳವೊಂದು ನಮ್ಮ ದೇಶದಲ್ಲೂ ಇರುವುದು ಹೆಚ್ಚು ಪ್ರಚಾರ ಪಡೆದಿಲ್ಲವೆನಿಸುತ್ತದೆ.  ಉತ್ತರಭಾರತದ ಲಡಾಖ್ ನ ಲೇಹ್ ಬಳಿಯಿರುವ ಸೈಕ್ಲೋಪ್ಸ್ ಬೆಟ್ಟ ಪ್ರದೇಶದ ವಿನ್ಯಾಸ ಮತ್ತು ಸುತ್ತಮುತ್ತಲಿನ ಇಳಿಜಾರು ಬೆಟ್ಟಗಳ ಪ್ರಾಕೃತಿಕ ಸಂಯೋಜನೆಯು  ಆಪ್ಟಿಕಲ್ ಭ್ರಮೆಯನ್ನು  ಸೃಪ್ಟಿಸಿದೆ. ವಾಸ್ತವವಾಗಿ ರಸ್ತೆ ಇಳಿಜಾರಾಗಿದ್ದರೂ, ಅದು ಏರು ರಸ್ತೆ ಎಂಬ ಭ್ರಮೆ ಹುಟ್ಟಿಸಿದೆ. ಇಲ್ಲಿ ವಾಹನವು ಗೇರ್ ಬದಲಾಯಿಸದೆಯೇ, ವೇಗ ಹೆಚ್ಚಿಸದೆಯೇ   ಬೆಟ್ಟವೇರುವುದನ್ನು  ನೋಡುವಾಗ ಸಹಜವಾಗಿಯೇ ಆಶ್ಚರ್ಯವಾಗುವುದು ಅಲ್ಲವೇ?! ಆದರೆ ಈ ಮಿಸ್ಟರಿ ಸ್ಪಾಟ್ ನಲ್ಲಿ ಭ್ರಮೆಯ ಜೊತೆಗೆ ಶಾರೀರಿಕವಾಗಿಯೂ ಅನುಭವಕ್ಕೆ ಬರುವ ವಿಷಯಗಳು ಬಹಳ ಕುತೂಹಲದಾಯಕವಾಗಿದೆ. 

ಆಗಲೇ ಮಧ್ಯಾಹ್ನ ಊಟದ ಸಮಯವೆಂದು ಹೊಟ್ಟೆ ಹೇಳಲಾರಂಭಿಸಿತು. ಅಲ್ಲೇ ಮುಂಭಾಗದಲ್ಲಿರುವ ಚಂದದ ಹೂದೋಟದಲ್ಲಿ ಅದಕ್ಕಾಗಿಯೇ ತಯಾರಾಗಿ ಇರಿಸಿದಂತಿದ್ದ ಹಳೆಯದಾದ ಮರಗಳ ಊಟದ ಮೇಜು ಕುರ್ಚಿಗಳು ನಮ್ಮನ್ನು ಬರಮಾಡಿಕೊಂಡವು. ನಮ್ಮ ಊಟದ ಬುತ್ತಿಯಲ್ಲಿದ್ದ ಮೊಸರನ್ನ, ಪುಳಿಯೋಗರೆ ಜೊತೆಗೆ ಬಾಳೆಹಣ್ಣುಗಳ ಜಬರ್ದಸ್ತು ಭೋಜನ ಉದರ ಸೇರಿದಾಗ ಹೊಟ್ಟೆಯ ಜೊತೆಗೆ ತಲೆಯೂ ತಂಪಾಯಿತು! ಸಮಯ ಕಳೆಯಲು ಅಲ್ಲೇ ಪಕ್ಕದಲ್ಲಿರುವ ಪುಟ್ಟ ಅಂಗಡಿಯೊಳಕ್ಕೆ ನುಗ್ಗಿ, ಅಲ್ಲಿಯ ನೆನಪಿಗಾಗಿ ಫ್ರಿಜ್ ಮ್ಯಾಗ್ನೆಟ್ ಸ್ಟಿಕ್ಕರ್ ಖರೀದಿಸಿದೆವು. ಅಲ್ಲೇ ಸುತ್ತಲೂ ಕಣ್ಣಾಡಿಸಿದಾಗ ಒಂದು ಗಾಜಿನ ಬಾಟಲಿಯೊಳಗಡೆ ಏನೋ ವಿಶೇಷವಾದುದನ್ನು ಗಮನಿಸಿದೆ. ಅದರೊಳಗಿದ್ದ ಚಾಕಲೇಟ್ ಒಳಗಡೆ ಸತ್ತ ಕ್ರಿಮಿಕೀಟಗಳು ಕಂಡುಬಂದವು. ಆಶ್ಚರ್ಯದಿಂದ ಮಗಳಲ್ಲಿ ಕೇಳಿದಾಗ ತಿಳಿದ ಸಂಗತಿಯಿಂದ, ತಿಂದ ಮೊಸರನ್ನ ಹೊರಗಡೆ ಬರದಂತೆ ತಡೆಯಲು ಬಹಳ ಕಷ್ಟವಾಯ್ತು ನೋಡಿ! ಅಲ್ಲಿಯವರಿಗೆ ಅದು ಬಹಳ ಇಷ್ಟವಾದ ತಿಂಡಿಯಂತೆ…ಏನು ಹೇಳಲಿ ಅವರ ಹುಚ್ಚಿಗೆ ಅಲ್ಲವೇ? ಅಂತೂ, ಅಷ್ಟೇನೂ ಉಲ್ಲಾಸದಾಯಕವಲ್ಲದ ಆದರೆ ಅದ್ಭುತ, ಅಪರೂಪದ ಅನುಭವವನ್ನು ನೀಡಿದ ಈ ಮಿಸ್ಟರಿಯು ನಮ್ಮಲ್ಲಿ ಅತ್ಯಂತ ಕುತೂಹಲದೊಂದಿಗೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆಯನ್ನು ಉಳಿಸಿದ್ದಂತೂ ನಿಜ!

ಸಮುದ್ರ ದಂಡೆಯತ್ತ….

ಮಧ್ಯಾಹ್ನದ ಬಿಸಿಲ ಝಳವಿಲ್ಲದೆ, ಹಿತವಾದ ವಾತಾವರಣ.. ಜೊಂಪು ಹತ್ತಲು ಇನ್ನೇನು ಬೇಕು ಹೇಳಿ? ಆದರೆ ಅಳಿಯ ನಮಗಾಗಿ ಇನ್ನೊಂದು ತಾಣ ವೀಕ್ಷಣೆಯ ನಕಾಶೆ ರಚಿಸಿಯಾಗಿತ್ತು… ಅದುವೇ ಏಪ್ಟಾಸ್(Aptos) ಎಂಬಲ್ಲಿರುವ ಸುಂದರ ಸಮುದ್ರ ತೀರ..Shake Beach. ಇಳಿಹಗಲು ಮೂರು ಗಂಟೆಯಾಗಿತ್ತು…ಎತ್ತರದ ಬಯಲು ಪ್ರದೇಶದಲ್ಲಿ ಕಾರು ನಿಲ್ಲಿಸಿ, ಅಲ್ಲಿಂದ ಬಹಳಷ್ಟು ಆಳದಲ್ಲಿದ್ದ ಸಮುದ್ರದತ್ತ ನಡೆಯುತ್ತಾ ಸಾಗಿದೆವು. ನಾವೇ ಮೇಲೆದ್ದು ಹಾರಿ ಹೋಗುವಷ್ಟು ವೇಗದಲ್ಲಿ ಗಾಳಿ ಬೀಸುತ್ತಿತ್ತು. ಪುಟ್ಟ ಮಗು ಅಪ್ಪನ ಸ್ಲಿಂಗ್ ನಲ್ಲಿ ಭದ್ರವಾಗಿ ಮಲಗಿದ್ದ. ನಾನು,  ಉಪಯೋಗಕ್ಕಿರುವ  ತಿಂಡಿಗಳು, ಮಗುವಿನ ಅಗತ್ಯದ ಸಾಮಾನುಗಳು  ಇರುವ ಚೀಲಧಾರಿಯಾಗಿ,  ಗಾಳಿಗೆ ಹಾರಿಹೋಗಲು ಹವಣಿಸುತ್ತಿರುವ ಕುಳಿತುಕೊಳ್ಳುವ ಚಾಪೆ ಇತ್ಯಾದಿಗಳನ್ನು ಎರಡೂ ಕೈಗಳಲ್ಲಿ ಹಿಡಿದು ಸಮತೋಲನ ಕಾಯ್ದುಕೊಳ್ಳುತ್ತಾ ಕಷ್ಟಪಟ್ಟು ನಡೆಯುತ್ತಿದ್ದೆ. ಸಮುದ್ರದೆಡೆಗೆ ಇಳಿದು ಹೋಗಲು ಅಚ್ಚುಕಟ್ಟಾದ ಸುಮಾರು ನೂರರಷ್ಟು  ಮರದ ಮೆಟ್ಟಲುಗಳು ಇಕ್ಕೆಲಗಳಲ್ಲೂ ಹಿಡಿಕೆಯಿಂದ ಕೂಡಿದ್ದವು. ಅಲ್ಲಲ್ಲಿ ಆಯಾಸ ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಮರದ ಬೆಂಚುಗಳ ವ್ಯವಸ್ಥೆ ಕಂಡು ನಿಜಕ್ಕೂ ಖುಷಿಯಾಯ್ತು. ರಭಸದಿಂದ ಬೀಸುವ ಚಳಿಗಾಳಿಯಿಂದಾಗಿ ಸಾಮಾನ್ಯ ಜನಸಂದಣಿಯ ನಡುವೆಯೂ, ಕೈಯಲ್ಲಿರುವ ವಸ್ತುಗಳು ಹಾರಿ ಹೋಗದಂತೆ ಸಂಭಾಳಿಸುತ್ತಾ ಹರಸಾಹಸಪಟ್ಟು ಮೆಟ್ಟಲಿಳಿಯಲು ಪ್ರಾರಂಭಿಸಿದಾಗ, ಪಕ್ಕದಲ್ಲಿದ್ದ ಹಿಡಿಕೆಗಳ ಅಗತ್ಯತೆಯ ಅರಿವಾದುದು ಸುಳ್ಳಲ್ಲ.  ಸ್ವಲ್ಪ ಹೊತ್ತಿನಲ್ಲಿ; ಕೆಳಗಡೆಯಿಂದ ವೇಗದ ನಡಿಗೆಯಲ್ಲಿ ಮೆಟ್ಟಲೇರಿ ಬರುವ ಯುವತಿಯೊಬ್ಬಳನ್ನು ಕಂಡಾಗ, ಏನೋ ತರಾತುರಿ ಕೆಲಸದ ಮೇಲೆ ಹೋಗುತ್ತಿರಬಹುದೆಂದು ತಿಳಿದೆವು. ಆದರೆ, ನಾವಿನ್ನೂ ಹತ್ತು ಮೆಟ್ಟಲುಗಳನ್ನು ಇಳಿದಾಗಿರಲಿಲ್ಲ… ಅದೇ ಯುವತಿ ನಮ್ಮೊಂದಿಗೆ ರಭಸದಿಂದ ಮೆಟ್ಟಲಿಳಿಯುತ್ತಾ ಮುಂದಕ್ಕೆ ಹೋಗಿಬಿಟ್ಟಳು. ನನಗೋ ಎಲ್ಲ ಆಯೋಮಯ… ಯಾಕಾಗಿ ಇವಳು ಈ ತರಹ ಮೆಟ್ಟಲಲ್ಲಿ ಓಡುತ್ತ ಹತ್ತಿ ಇಳಿಯುತ್ತಿದ್ದಾಳೆ ಎಂದು! ಒಂದು ತರಹ ಗಾಬರಿಯಿಂದ ಬಾಯಿ ಬಿಟ್ಟುಕೊಂಡು ನೋಡಿದಲ್ಲೇ ಬಾಕಿ! ಸ್ವಲ್ಪ ಯೋಚಿಸಿದಾಗ  ತಿಳಿಯಿತು.. ಇದೂ ಒಂದು ತರಹದ ವ್ಯಾಯಾಮದ ನಡಿಗೆ ಎಂದು! ಹಾಡು ಕೇಳುತ್ತಾ ಖುಷಿಯಿಂದ ಓಡಾಡುತ್ತಿದ್ದ ಯುವತಿಯು ನಾವು ಸಮುದ್ರತೀರ ತಲಪಿದಾಗ ಅದಾಗಲೇ ನಾಲ್ಕು ಬಾರಿ ತನ್ನ ವ್ಯಾಯಾಮದ ನಡಿಗೆ ಮುಗಿಸಿದ್ದಳು…ಭಲೇ ಎನಿಸಿತು…ಮರಳಿನಲ್ಲಿ ಮುಂದಕ್ಕೆ ನಡೆಯುತ್ತಿದ್ದಾಗ….ಅದೋ… ದೂರದಲ್ಲಿ ಅದೇನೋ ಕಾಣಿಸುತ್ತಿದೆಯಲ್ಲಾ…. ಏನದು..??!         

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38086

-ಶಂಕರಿ ಶರ್ಮ, ಪುತ್ತೂರು.  

11 Responses

  1. ಸುಚೇತಾ says:

    ತುಂಬಾ ಚೆನ್ನಾಗಿದೆ. ಈ ಸರಣಿಯನ್ನು ಪುಸ್ತಕವಾಗಿಸಿ.

    • ಶಂಕರಿ ಶರ್ಮ says:

      ತಮ್ಮ ಕಾಳಜಿಯುಕ್ತ ಸಲಹೆಗೆ ಧನ್ಯವಾದಗಳು ಮೇಡಂ

  2. ಪ್ರವಾಸ ಕಥನ ಸೊಗಸಾಗಿ …ಮೂಡಿಬರುತ್ತಿದೆ…ಮೇಡಂ.. ಹೋಗಲಾಗಲಿಲ್ಲದಿದ್ದರೂ ಓದಿ ಸಂತಸ ಪಡಬಹುದಲ್ಲವೇ..

    • ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಾಗರತ್ನ ಮೇಡಂ

  3. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  4. ಆಶಾನೂಜಿ says:

    ಚೆನ್ನಾಗಿ ವಿವರಿಸಿದ ನಿಮಗೆ ಧನ್ಯವಾದಗಳು ಅಕ್ಕೋ ಹೋದಾಂಗೆ ಆವುತ್ತಾತಾ .

  5. ನಿಮ್ಮ ಅನುಭವ ಚೆನ್ನಾಗಿ ಮೂಡಿಬಂದಿದೆ
    ವಂದನೆಗಳು

  6. Anonymous says:

    ಅಮೆರಿಕದ ಅನುಭವಗಳು ಕುತೂಹಲಗಳು ಸೊಗಸಾದ ನಿರೂಪಣೆಯೊಂದಿಗೆ ಹರಿದು ಬರುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: