ಅವಿಸ್ಮರಣೀಯ ಅಮೆರಿಕ – ಎಳೆ 47

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕಾರ್ಯಾಗಾರದತ್ತ….

ಈ ದಿನ ಬೆಳಗ್ಗೆ 9:30ಕ್ಕೆ ಹೊರಟು ತಯಾರಾಗಿರಲು ಮಕ್ಕಳಿಂದ ನಮಗೆ ಸಂದೇಶ… ಎಲ್ಲರೂ ಸಿದ್ಧರಾದರೂ ಹೋಗುವ ಸ್ಥಳದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ ನೋಡಿ… ! ಹಿಂದಿನ ದಿನ,  ಹಣ್ಣಿನ ತೋಟಗಳಿಂದ ಕಿತ್ತು ತಂದಿದ್ದ (Fruit Plucking) ರುಚಿಯಾದ ವಿವಿಧ ಹಣ್ಣುಗಳು ತುಂಬಿದ ಡಬ್ಬಗಳು ಕಾರು ಸೇರಿದವು. ಅರ್ಧತಾಸಿನಲ್ಲಿ ನಾವು ಸುಂದರವಾದ ಕಾರಂಜಿ ಕೆರೆ ಇರುವ ಬಹು ದೊಡ್ಡದಾದ ಉದ್ಯಾನವನದ ಪಕ್ಕದಲ್ಲಿದ್ದೆವು. 

ಇದು ಸನ್ನಿವೇಲ್ (Sannyvale) ಎಂಬಲ್ಲಿರುವ ಪ್ರಸಿದ್ಧ Foot Hill College ನ ಆವರಣದಲ್ಲಿದೆ. ಇಲ್ಲಿ ಬೆಳಗ್ಗಿನಿಂದ ಸಂಜೆ ತನಕ, ಪುಟ್ಟ ಮಕ್ಕಳಿಗಾಗಿ ಕರಕುಶಲ (Hands on the Arts) ಮೇಳವನ್ನು ಆಯೋಜಿಸಲಾಗಿತ್ತು.  ನಾವು ಅಲ್ಲಿಗೆ ತಲಪಿದಾಗ, ಮೇಳ ಅದಾಗಲೇ ಪ್ರಾರಂಭವಾಗಿ ಸುಮಾರು ಒಂದು ತಾಸು ಕಳೆದಿತ್ತು.  ಚಿಣ್ಣರ ಈ ಸುಂದರ ಮೇಳಕ್ಕೆ ನಮ್ಮ  ಪುಟಾಣಿಗೆ $15 ಪ್ರವೇಶ ದರ ತೆತ್ತು ಒಳ ಹೋದಾಗ, ಅವಳ ಕೈಗೆ ಒಂದು ಗುರುತಿನ ಬ್ಯಾಜ್ ಕಟ್ಟಿದರು. ಅದನ್ನು ಅಲ್ಲಿಂದ ಹೊರ ಹೋಗುವ ವರೆಗೂ ಕೈಯಿಂದ ತೆಗೆಯುವಂತಿಲ್ಲ. ಆ ಬ್ಯಾಜ್ ಕೈಯಲ್ಲಿ ಇರುವ ವರೆಗೂ, ಅಲ್ಲಿರುವ  ಎಲ್ಲಾ ಕಾರ್ಯಾಗಾರಗಳಲ್ಲಿ ಅವಳಿಗೆ ಭಾಗವಹಿಸುವ ಅವಕಾಶವಿರುತ್ತದೆ. ಈ ವಿಶಾಲವಾದ ಪಾರ್ಕಿನಲ್ಲಿ ಪುಟ್ಟ ಮಕ್ಕಳ ಕಲರವ, ಅವರು ತಮ್ಮ ಪೋಷಕರೊಂದಿಗೆ ಹಿಗ್ಗಿನಲ್ಲಿ ಓಡಾಡುವ ದೃಶ್ಯ ಕಣ್ಣಿಗೆ ತಂಪನ್ನೆರೆಯಿತು. 

ಇಲ್ಲಿ , ಸುಮಾರು 20-30 ಕಡೆಗಳಲ್ಲಿ ವಿವಿಧ ರೀತಿಯ ಕರಕುಶಲ ತಯಾರಿಯ ಕಾರ್ಯಾಗಾರಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದ್ದವು. ಮಣ್ಣಿನಿಂದ ಗೊಂಬೆಗಳ ತಯಾರಿ, ಟೈಯಿಂದ ಹಾವು, ಚಂದದ ಬಣ್ಣದ ಮಣಿ ಹಾಗೂ ಗಾಜಿನ ಚೂರುಗಳನ್ನು ಬಳಸಿ ವರ್ಣಚಿತ್ರ, ಮಣಿಹಾರ, ನೂಲಿನಿಂದ ಗೊಂಬೆಗಳು, ಬಳೆಗಳು…ಹೀಗೆ ನೋಡಿದಷ್ಟು ಸಾಲದು. ಇನ್ನೂ ಸ್ವಲ್ಪ ಬೇಗ ಬಂದಿದ್ದರೆ ಪೂರ್ತಿ ಕಾರ್ಯಾಗಾರವನ್ನು ಸರಿಯಾಗಿ ವೀಕ್ಷಿಸಬಹುದಿತ್ತು ಎಂದು ಪಶ್ಚಾತ್ತಾಪ ಪಟ್ಟುದು ಮಾತ್ರ ಸುಳ್ಳಲ್ಲ. ಮಕ್ಕಳಿಗೆ ಅವರಿಷ್ಟದ ಕರಕುಶಲಕ್ಕೆ ಸೇರಿಕೊಂಡು, ಬೇಕಾದ ರೀತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಸಾಕಷ್ಟು ಅವಕಾಶಗಳನ್ನು ಕಂಡು ಆಶ್ಚರ್ಯಪಡದಿರಲು ಸಾಧ್ಯವೇ ಇಲ್ಲ!  ಅಗತ್ಯವಿದ್ದಲ್ಲಿ ಪುಟಾಣಿಗಳಿಗೆ ಅಲ್ಲಿಯ ಸ್ವಯಂಸೇವಕರಿಂದ ಪ್ರೀತಿಯ ಸಹಾಯ ಸದಾ ಲಭ್ಯ. ತಯಾರಿಸಿದ ವಸ್ತುಗಳನ್ನು ಅವರವರೇ ಮನೆಗೊಯ್ಯಬಹುದು. ನಾವು ಹಿಂತಿರುಗುವಾಗ ಮೊಮ್ಮಗಳು ತಯಾರಿಸಿದ ತರೆಹೇವಾರು ವಸ್ತುಗಳಿಂದ ದೊಡ್ಡದಾದ ಚೀಲವೊಂದು ತುಂಬಿಬಿಟ್ಟಿತು! ಅವುಗಳಲ್ಲಿ, ಆವೆಮಣ್ಣಿನಿಂದ ಮಾಡಿದ ಮೀನು ಅವಳಿಗೆ ಬಹಳ ಖುಷಿಕೊಟ್ಟಿತು. 

ನನಗಂತೂ ಅವಳು ಟೈಯಿಂದ ತಯಾರಿಸಿದ ಹಾವು ಬಹಳ ಇಷ್ಟವಾಯ್ತು.

ಶಾಲೆಯ ಕಡೆಗೆ…

ಇಲ್ಲಿ ಸರಕಾರಿ ಶಾಲೆಗಳು ಗುಣಮಟ್ಟದಲ್ಲಿ ಬಹಳ  ಚೆನ್ನಾಗಿರುವುದರಿಂದ ಅವುಗಳಿಗೆ ಬೇಡಿಕೆಯೂ ಹೆಚ್ಚು. ಹಾಗೆಯೇ, ಅತ್ಯುತ್ತಮ ಶಾಲೆಗಳ ಸಮೀಪದ ಮನೆಗಳಿಗೆ ಬಾಡಿಗೆಯೂ ಜಾಸ್ತಿ. ಮೊಮ್ಮಗಳನ್ನು U.K.G ಗೆ ಸೇರಿಸಲು, ನಮ್ಮ ಮನೆಯಿಂದ ಕೇವಲ ಕೆಲವು ನಿಮಿಷಗಳ ನಡಿಗೆ ದೂರದಲ್ಲಿರುವ,  Pomeroy Elementary School ಬಹಳ ಚೆನ್ನಾಗಿದೆ ಎಂದು ತಿಳಿದು, ಅಲ್ಲಿಗೆ ಅದಾಗಲೇ ಅರ್ಜಿ ಗುಜರಾಯಿಸಲಾಗಿತ್ತು. ಮನೆಯವರು ಯಾವಾಗ ಶಾಲೆಗೆ ಭೇಟಿ ನೀಡಲು ಬರಬಹುದೆಂಬುದನ್ನು  ದಿನ ನಿಗದಿಪಡಿಸಿ ಮೊದಲೇ ತಿಳಿಸುತ್ತಾರೆ. ಹಾಗೆಯೇ, ನಮ್ಮ ಸರದಿಯ ದಿನ ಬಂದಾಗ ಮಧ್ಯಾಹ್ನ 3ಗಂಟೆಗೆ ಹೊರಟೆವು. ನಮ್ಮಂತೆ ಬಂದವರು ಅದಾಗಲೇ ಅಲ್ಲಿ ಜಮಾಯಿಸಿದ್ದರು. ಶಾಲೆಯ ಸುತ್ತಲೂ ಗಿಡ ಮರಗಳು ನಳನಳಸುತ್ತಿದ್ದವು. ಚಂದದ ಹಸಿರು ಸಿರಿಯ ನಡುವೆ ಇರುವ ಈ ಶಾಲೆಯನ್ನು ಹೊರಗಡೆಯಿಂದ ನೋಡಿದರೆ ಯಾವುದೇ ರೀತಿಯ ವಿಶೇಷತೆಯನ್ನು ಕಾಣಲಾಗದು. ಸರಳ, ಸುಂದರ, ಸ್ವಚ್ಛ, ಪ್ರಶಾಂತವಾದ ವಾತಾವರಣದಲ್ಲಿರುವ ಶಾಲೆ ಬಹಳ ಇಷ್ಟವಾಯ್ತು. ಒಳಗಡೆಗೆ ಪ್ರತಿ ತರಗತಿಗಳೂ ಅಚ್ಚುಕಟ್ಟಾಗಿದ್ದು, ಆಯಾ ತರಗತಿಯ ಬೋಧಕ ವರ್ಗದವರು ಅಲ್ಲಲ್ಲೇ ಇದ್ದು, ಅಲ್ಲಿಯ ಪ್ರತಿಯೊಂದು ಸವಲತ್ತುಗಳ ಬಗ್ಗೆಯೂ ವಿವರಿಸಿ, ಮಾಹಿತಿಗಳನ್ನು ನೀಡಿ, ನಮ್ಮ ಪ್ರಶ್ನೆಗಳಿಗೂ ನಗುನಗುತ್ತಾ ಉತ್ತರಿಸಿದರು. ಆಟದ ಬಯಲು, ಹೂದೋಟ ಬಹಳ ಚೆನ್ನಾಗಿದ್ದವು. ತರಗತಿಯ ಮುಂಭಾಗದ ಜಗುಲಿಯ ಮೇಲಿದ್ದ ಮೇಜಿನ ಮೇಲೆ ಮಕ್ಕಳಿಗಾಗಿ ಓದಲು ತರೆಹೇವಾರು ಪುಸ್ತಕಗಳನ್ನು ಇರಿಸಿದ್ದರು. ಮಕ್ಕಳು ಬೇಕಾದವುಗಳನ್ನು ಆರಿಸಿ ಮನೆಗೊಯ್ದು ಓದಿ ಹಿಂತಿರುಗಿಸಬಹುದಿತ್ತು. 

ಇಲ್ಲಿ ನಾವು ಹೇಗೆ ಬೇಕೆಂದರೆ ಹಾಗೆ ಮಕ್ಕಳನ್ನು ಸೇರಿವಂತಿಲ್ಲ. ಮಕ್ಕಳ ಬುದ್ಧಿಮತ್ತೆಯನ್ನು ಪರೀಕ್ಷಿಸಿ ಬಂದ ಫಲಿತಾಂಶದ ಮೇರೆಗೆ  ಹಂತ ಹಂತವಾಗಿ ಸೇರಿಸಿಕೊಳ್ಳುವರು. ನಮಗಂತೂ  ಈ ಶಾಲೆ ಬಹಳ ಇಷ್ವವಾದರೂ ಸೀಟ್ ಸಿಗುವುದರ ಬಗ್ಗೆ ಖಾತರಿಯೇನೂ ಇರಲಿಲ್ಲ ಬಿಡಿ.  ಮುಂದಕ್ಕೆ, ಮೊಮ್ಮಗಳು ಅದೇ ಶಾಲೆಗೆ ಸೇರಿ ಕಲಿತದ್ದು ಹೆಮ್ಮೆಯ ಸಂಗತಿ.

ದೇಗುಲದೆಡೆಗೆ….

ಒಮ್ಮೆ ಅಮೇರಿಕಾದ ಸೇನೋಸೆ (San Jose)ಯಲ್ಲಿರುವ ದೇವಸ್ಥಾನವೊಂದಕ್ಕೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ನಾವು ತಲಪಿದಾಗ, ತುಂಬಾ ಪ್ರಶಾಂತ ವಾತಾವರಣದಲ್ಲಿರುವ ಈ ಶ್ರೀ ಕೃಷ್ಣ ವೃಂದಾವನ ದೇವಸ್ಥಾನದಲ್ಲಿ ಸುಮಾರು ಮೂವತ್ತು ಭಕ್ತರು ಮಂತ್ರ ಪಠಣ ಮಾಡುತ್ತಿದ್ದರು. ಇಡೀ ಆವರಣದಲ್ಲಿ ಪವಿತ್ರ ಶಾಂತಿ ನಿರ್ಮಾಣಗೊಂಡಿತ್ತು. ಅಲ್ಲಿದ್ದ ಕನ್ನಡಿಗರನ್ನು ಕಂಡು ಮಾತನಾಡಿಸಿ ಮನಸ್ಸು ಮುದಗೊಂಡಿತು. 

ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 2013ರಲ್ಲಿ ಸ್ಥಾಪಿಸಿದ ಈ ಮಠವು,  ಸುತ್ತುಮುತ್ತಲಿನ ಹಿಂದೂ ಬಂಧುಗಳಿಗೆ ಉತ್ತಮ ಭಕ್ತಿ ಕೇಂದ್ರವಾಗಿದೆ. ಯುಗಾದಿ, ದೀಪಾವಳಿ, ಚೌತಿ ಇತ್ಯಾದಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಮಾತ್ರವಲ್ಲದೆ ಆಸಕ್ತ ಹಿರಿಯರಿಗೆ ಹಾಗೂ ಮಕ್ಕಳಿಗೆ ವೇದ, ಸ್ತೋತ್ರ, ಯೋಗ, ಸಂಸ್ಕೃತ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದೆ.  ಪ್ರತೀ ಸೋಮವಾರ ರಾತ್ರಿ 7ಗಂಟೆಯಿಂದ 8.30ವರೆಗೆ ಹಿಂದೂ ಬಾಂಧವರು ಸೇರಿ , ನಮ್ಮ ದೇಗುಲಗಳಲ್ಲೇ ಕೇಳಲು ಅಪರೂಪವಾಗಿರುವ ರುದ್ರ, ಪುರುಷ ಸೂಕ್ತ, ದುರ್ಗಾ ಸೂಕ್ತ, ಶ್ರೀ ಸೂಕ್ತ ಮೊದಲಾದ ದಿವ್ಯ ಮಂತ್ರಗಳನ್ನು ಸಾಮೂಹಿಕವಾಗಿ ಪಠಿಸುತ್ತಿರುವುದು  ಹೆಮ್ಮೆಯ ಸಂಗತಿ. ಏಕಾದಶಿ ಹೊರತು ಪಡಿಸಿ, ಪ್ರತಿ ದಿನ, ಬಂದ ಭಕ್ತರಿಗೆಲ್ಲಾ ರಾತ್ರಿ ಊಟ ಪ್ರಸಾದವನ್ನು ಪ್ರೀತಿಯಿಂದ ಉಣಬಡಿಸುವುದು ಶ್ಲಾಘನೀಯ. ವಿದೇಶಗಳಲ್ಲಿ ಈ ರೀತಿ ನಮ್ಮ ಹಿಂದೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯ.

ಈ ಹಿಂದೂ ಬಂಧುಗಳೆಲ್ಲರ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ.

ಸೋಜಿಗದ ಜಾಗ…Mystery Spot..!!

ಅದೊಂದು ರಜಾದಿನ…ಶನಿವಾರ. ನಂಬಲಸಾಧ್ಯವಾದಂತಹ ವಿಚಿತ್ರ ತಾಣವೊಂದನ್ನು ವೀಕ್ಷಿಸಲು ಹೋಗುವುದಿತ್ತು. ಕಳೆದಬಾರಿ, ನಾವು ಅಲ್ಲಿಗೆ ತಲಪುವಾಗಲೇ ಸಮಯ ಮೀರಿದ್ದರಿಂದ, ನಮಗೆ ವೀಕ್ಷಿಸಲು ಅವಕಾಶ ಒದಗದೆ ಬಹಳ ನಿರಾಶೆಯಿಂದ ಹಿಂತಿರುಗಿದ ನೆನಪಾಯ್ತು ನನಗೆ. ಬಹಳ ಉತ್ಸಾಹ, ಕುತೂಹಲಗಳೊಂದಿಗೆ ನಮ್ಮ ಪಯಣ ಪ್ರಾರಂಭವಾಯ್ತು. 

ಕ್ಯಾಲಿಫೋರ್ನಿಯಾದ ಸಾಂತಾಕ್ರೂಝ್ ಎಂಬಲ್ಲಿ; ಎಲೆಕ್ಟ್ರಿಶಿಯನ್, ಮೆಕ್ಯಾನಿಕ್, ಸಂಶೋಧಕ ಹೀಗೆ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ George Prather  ಎಂಬವರಿಗೆ ತನ್ನದೇ ಆದ ಒಂದು ಪುಟ್ಟ ವೆಲ್ಡಿಂಗ್ ಅಂಗಡಿ ಕೂಡ ಇತ್ತು. ಅವರ ಅಂಗಡಿ ಇದ್ದಂತಹ ಪ್ರದೇಶದಲ್ಲಿ ವಿಚಿತ್ರ ಅನುಭವವಾಗುವ ಸ್ಥಳವನ್ನು ಮೊತ್ತ ಮೊದಲ ಬಾರಿಗೆ ಅವರು 1939ರಲ್ಲಿ ಗುರುತಿಸಿದರು. ಆ ಬಳಿಕ ಅಲ್ಲಿಯೇ; 1940ರಲ್ಲಿ 3ಎಕರೆಗಳಷ್ಟು ಜಾಗವನ್ನು ಖರೀದಿಸಿದರು. ಒಮ್ಮೆ ಅವರು ಆ ಸ್ಥಳದಲ್ಲಿ ಓಡಾಡುವಾಗ ಇನ್ನೂ ಹೆಚ್ಚಿನ ವಿಚಿತ್ರವಾದ ಅನುಭವವಾಗಿ ತಲೆಸುತ್ತು ಬಂದಂತಾಯಿತು. ಅವರೊಡನಿದ್ದ ಆಯಸ್ಕಾಂತದ ಕಂಪಾಸ್ ತೀವ್ರವಾಗಿ ಕಂಪಿಸಲಾರಂಭಿಸಿತು! ಆ ಬಳಿಕ ಅದೇ ಜಾಗದಲ್ಲಿ ಪುಟ್ಟ ಮರದ ಮನೆಯನ್ನು ನಿರ್ಮಿಸಿ, 1941 ರಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟರು. 1946 ರಲ್ಲಿ ಅವರ ದೇಹಾಂತ್ಯವಾದ ಬಳಿಕ ಅವರ ಮಗ ಇದನ್ನು ಮುನ್ನಡೆಸುತ್ತಿದ್ದಾರೆ. ಇದು ಬೆಳಗ್ಗೆ 10ಗಂಟೆಯಿಂದ ಸಂಜೆ 4ಗಂಟೆಯ ವರೆಗೆ  ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ 8 ಡಾಲರ್. ಸುಮಾರು 45ನಿಮಿಷಗಳಷ್ಟು ಕಾಲ ನಮಗೆ ವೀಕ್ಷಿಸಲು ಅವಕಾಶವಿದೆ.

ಸುಮಾರು 29ಮೈಲು ದೂರದ ಕಾಡು ರಸ್ತೆಯಲ್ಲಿ  ಪಯಣಿಸಿ ಈ ವಿಶೇಷ ಜಾಗವನ್ನು ತಲಪಿದಾಗ ಅದು ಕೂಡಾ ದಟ್ಟ ಅರಣ್ಯದ ನಡುವೆ ಇರುವುದು ಗಮನಕ್ಕೆ ಬಂದಿತು. ಪಯಣಿಸಿದ ಚಂದದ ರಸ್ತೆಗಾಗಿ ಎಲ್ಲೂ ಮರಗಳ ಮಾರಣ ಹೋಮ ಆದಂತೆ ಕಾಣಲಿಲ್ಲ. ಈ ಜಾಗಕ್ಕೆ ತಲಪುವಾಗ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದ್ದರೂ ಎಲ್ಲೂ ಅವ್ಯವಸ್ಥೆಯ ಸುಳಿವೂ ಕಾಣಲಿಲ್ಲ.. ಎಲ್ಲಾ ಸ್ವಚ್ಛ…ಅಚ್ಚುಕಟ್ಟು. ಆ ತಾಣದಲ್ಲಿ ವಾಹನಗಳ ಆಗಮನ, ನಿರ್ಗಮನಗಳಿಗಾಗಿ ಇರುವ ರಸ್ತೆಗಳು ಇಕ್ಕಟ್ಟಾಗಿದ್ದರೂ; ಇದ್ದ ಮರಗಳಿಗೆ ಕೊಡಲಿಯೇಟಿನ ರುಚಿ ನೀಡದೆ, ಅವುಗಳ ನಡುವೆಯೇ ಅಚ್ಚುಕಟ್ಟಾಗಿ ರಸ್ತೆಗಳನ್ನು ನಿರ್ಮಿಸಿದ ರೀತಿ ಅದ್ಭುತ!  ಮರಗಳ ನಡುವೆಯೇ ವಾಹನಗಳನ್ನು ನಿಲ್ಲಿಸಲು ಇದ್ದ ಸೊಗಸಾದ ವ್ಯವಸ್ಥೆ ನಿಜಕ್ಕೂ ಮೆಚ್ಚುವಂತಹುದು.

ವೀಕ್ಷಣೆಗಾಗಿ ನಮಗೆ 11:15ರ ಗುಂಪು ನಿಗದಿಯಾಗಿತ್ತು. ನಾವು ಹತ್ತು ಗಂಟೆಗೆ ಅಲ್ಲಿ ತಲಪಿದ್ದರಿಂದ ಸುತ್ತಲೆಲ್ಲ ಅಡ್ಡಾಡಿಕೊಂಡಿರಲು ಬೇಕಾದಷ್ಟು ಸಮಯವಿತ್ತು.. ಆದರೂ ನನಗೋ ಕುತೂಹಲ…ಕಾತರ…ಸಮಯವೇ ಮುಂದೋಡದಂತಿತ್ತು..ಅಂತೂ ನಮ್ಮ ಸರದಿ ಬಂತು. ನಮ್ಮ ಗುಂಪಿನಲ್ಲಿ 15 ಮಂದಿ ಇದ್ದಿರಬಹುದು. ಹೃದಯ ಸಂಬಂಧ ಕಾಯಿಲೆ  ಇರುವವರಿಗೆ ಒಳಗೆ ಪ್ರವೇಶವಿಲ್ಲ. ನಾವು ಮುಂಬಾಗಿಲಿನ ಒಳಗೆ ಬಂದಾಗಲೇ ನಮ್ಮ ಗೈಡ್ ನಮಗಾಗಿ ಕಾಯುತ್ತಿದ್ದ. ತಕ್ಷಣವೇ ನಮ್ಮೆಲ್ಲರ ಎದುರಿಗೇ ಒಂದು ಪ್ರಯೋಗ ನಡೆದೇ ಹೋಯಿತು! ನಮ್ಮ ಗುಂಪಿನಿಂದ ಸಮಾನ ಎತ್ತರವಿರುವ ಇಬ್ಬರನ್ನು ಆರಿಸಿ, ಅಲ್ಲೇ ಇದ್ದ ಸಮತಲ ಮರದ ಪಟ್ಟಿಯ ಎರಡೂ ಕಡೆಗಳಲ್ಲಿ ನಿಲ್ಲಿಸಿದರು. ಸರಿ…ನಿಂತಾಗ ಏನೂ ವಿಶೇಷ ನಡೆಯಲಿಲ್ಲ. ಇಬ್ಬರ ಎತ್ತರವೂ ಸಮಾನವಾಗಿಯೇ ಇತ್ತು. ಪುನ: ಅವರ ಸ್ಥಾನವನ್ನು ಅದಲು ಬದಲು ಮಾಡಿ ನಿಲ್ಲಿಸಿದರು…ಏನಾಶ್ಚರ್ಯ..!! ಒಂದು ಕಡೆಗಿದ್ದವರು ಗಿಡ್ಡವಾಗಿಯೂ, ಇನ್ನೊಂದು ಬದಿಗಿದ್ದವರು ಎತ್ತರವಾಗಿಯೂ ಕಾಣುತ್ತಿದ್ದರು!! ಅಲ್ಲಿಂದಲೇ ಪ್ರಾರಂಭವಾಯ್ತು ನೋಡಿ…ಮಿಸ್ಟರಿ ಸ್ಪೋಟ್ ನ ಮಿಸ್ಟರಿ! ಮುಂದಕ್ಕೆ ನಮಗೆ ಸುಮಾರು 45° ಕೋನಕ್ಕಿಂತಲೂ ಅಧಿಕದ ಏರು ರಸ್ತೆಯಲ್ಲಿ ಸಾಗುವುದಿತ್ತು. ನನಗಂತೂ ನೋಡುವಾಗಲೇ ಭಯವಾಯ್ತು…ಇದನ್ನು ನಾನು ಏರಲು ಸಾಧ್ಯವೇ ಎಂದು. ಆದರೆ ಏನಾಶ್ಚರ್ಯ….ಇಳಿಜಾರಿನಲ್ಲಿ ನಡೆದಂತಹ ಅನುಭವ…ನಿರಾಯಾಸವಾಗಿ ಏರಿ ಹೋದಾಗ ಎಲ್ಲರೂ ದಂಗಾಗಿಬಿಟ್ಟೆವು! ಇನ್ನೂ ಏನೇನು ಆಶ್ಚರ್ಯಗಳು ಕಾದಿವೆಯೋ ಎಂಬ ಕುತೂಹಲದಿಂದ ಸ್ವಲ್ಪ ಮುಂದೆ ನಡೆದಾಗ ಎದುರಿಗೇ ಕಂಡಿತು; ಮರದಿಂದ ಮಾಡಿದ ಹಳೆಯದಾದ ಪುಟ್ಟ ಗುಡಿಸಲು….. 

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38061

-ಶಂಕರಿ ಶರ್ಮ, ಪುತ್ತೂರು.        

10 Responses

  1. ಎಂದಿನಂತೆ ಪ್ರವಾಸ ಕಥನ ಮುಂದುವರೆದಿದ್ದು ಓದಿಸಿಕೊಂಡು ಹೋಯಿತು… ಸೊಗಸಾದ ನಿರೂಪಣೆ… ಧನ್ಯವಾದಗಳು ಶಂಕರಿ ಮೇಡಂ..

  2. ಸುಚೇತಾ says:

    ಚೆನ್ನಾಗಿದೆ.
    ನನ್ನ ಅಮೆರಿಕ ಪ್ರವಾಸ ನೆನಪಾಯಿತು.
    ಈ ಊರನ್ನು ನಾನು ನೋಡಿಲ್ಲ.

  3. ನಯನ ಬಜಕೂಡ್ಲು says:

    Very nice

  4. Padma Anand says:

    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಮೆರಿಕನ್ನರು ನೀಡುವ ಪ್ರಾಮುಖ್ಯತೆಯನ್ನು ಮೆಚ್ಚಲೇ ಬೇಕು. ಅಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಸೊಗಸಾದ ಪರಿಚಯ.

  5. Hema says:

    ಅದೆಷ್ಟು ಸೋಜಿಗಗಳಿವೆ ನಿಮ್ಮ ಪ್ರವಾಸಕಥನದಲ್ಲಿ…ಸೂಪರ್ ಅನುಭವಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: