ನೀಲಾಂಬಿಕೆ, ಗಂಗಾಂಬಿಕೆ-ಸ್ತ್ರೀ ವಿಮೋಚನಾಕಾರ್ತಿಯರು

Share Button

ಸ್ತ್ರೀ ವಿಮೋಚನಾ ಚಳುವಳಿ: 

      ನಮ್ಮದು ಸ್ತ್ರೀ ವಿಮೋಚನಾ ಚಳುವಳಿಯ ಉತ್ತುಂಗದ ಕಾಲ. ಸ್ತ್ರೀ ಸಮಾನತೆಗೆ ಸಮಾಜ, ರಾಜ್ಯದಂತಹ ಪ್ರಬಲ ಸಂಸ್ಥೆಗಳು ತೊಡರುಗಾಲು ಆಗಿವೆ; ಇವು ತಮ್ಮ ಪುರುಷಪರವಾದ ನಿಲುವುಗಳನ್ನು ಕೈಬಿಡಬೇಕು; ಅವು ಸ್ತ್ರೀಪರ ಆಗಿರುವಂತೆ ಹೊಸದಾಗಿ ರೂಪುಗೊಳ್ಳಬೇಕು ಎಂಬುದು ಸ್ತ್ರೀವಿಮೋಚನಾವಾದಿಗಳ ಸ್ಪಷ್ಟ ನಿಲುವು. 

      “ಸ್ತ್ರೀ ಪುರುಷ ಸಮಾನತೆಯನ್ನು ಪ್ರತಿಪಾದಿಸುವವರು ಪುರಾಣಗಳ ಕಾಲದಿಂದಲೂ ಕಂಡುಬರುತ್ತಾರೆ. ಸ್ತ್ರೀ ಪಾರಮ್ಯವನ್ನು ಹೇಳುವ ದೇವೀ ಭಾಗವತದಂಥ ಪುರಾಣಗಳು ಇವೆ. ಅವುಗಳಿಗೆ ಅದೊಂದು ತಾತ್ತ್ವಿಕ ಆಶಯ. ಅವು ಸ್ತ್ರೀ ಪುರುಷ ಎನ್ನುವ ಭೇದ-ಗ್ರಹಿಕೆ ಪ್ರಾಸಂಗಿಕ ಎನ್ನುತ್ತವೆ. ಆದರೆ ವ್ಯವಹಾರದಲ್ಲಿ ಸ್ತ್ರೀ ಪುರುಷ ಎನ್ನುವ ಭೇದವೇ ವಾಸ್ತವಿಕ. ಸ್ತ್ರೀಯರು ತಮ್ಮ ಕೌಟುಂಬಿಕ ಮತ್ತುಸಾಮಾಜಿಕ ಇತಿಮಿತಿಗಳನ್ನು ಮೀರಲು ಬಯಸಿದರೆ ಅವರಿಗೆ ಇರುವ ಪರ್ಯಾಯ ಸಂಸಾರತ್ಯಾಗ ಮತ್ತು ಆಧ್ಯಾತ್ಮಿಕ ಸಾಧನೆ, ಅಷ್ಟೇ! ವಿರಾಗಿಗಳಾಗಲು ಬಯಸಿದ ಸ್ತ್ರೀಯರನ್ನು ಸಮಾಜ ಸಂಶಯದಿಂದ ನೋಡಿದುದೇ ಹೆಚ್ಚು. ಸ್ತ್ರೀಯರಿಗೆ ವೈರಾಗ್ಯ ಅಸಹಜ ಮತ್ತು ಅನಗತ್ಯ ಎಂದೇ ಸಮಾಜ ತಿಳಿದಿದೆ. ವೈರಾಗ್ಯದ ಹಾದಿಯಲ್ಲಿ ಇದ್ದವರನ್ನು ಸಮಾಜ ಹಿಂಸಿಸಿದೆ. ಇದು ಐತಿಹಾಸಿಕ ಸತ್ಯ” ಎಂಬುದು ಸ್ತ್ರೀವಿಮೋಚನೆಯ ಪರವಾದಿಗಳ ಒಂದು ಚಿಂತನೆ. 

      ಅವರು ಜೀವನವನ್ನು ಪ್ರಾಥಮಿಕವಾಗಿ ಮತ್ತು ಅಂತಿಮವಾಗಿ ಆಳುವುದು ಆರ್ಥಿಕ ಭದ್ರತೆ ಮತ್ತು ಆರ್ಥಿಕ ಉನ್ನತಿ. ಆರ್ಥಿಕ ದೃಷ್ಟಿಕೋನದಿಂದ ಸ್ತ್ರೀಯರು ಮಾನ್ಯತೆಯನ್ನು ಪಡೆಯದಿರುವುದೇ ಸ್ತ್ರೀಯರು ಎಲ್ಲಾರೀತಿಯಲ್ಲೂ ಪುರುಷರಿಗೆ ಅಧೀನವಾಗಿ ಇರುವುದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ. ಅವರಿಗೆ ಸ್ತ್ರೀಸಮಾನತೆ ಎಂದರೆ ಆರ್ಥಿಕ ಸಮಾನತೆ ಎಂದೇ ಅರ್ಥ. 

ಗಂಗಾಂಬಿಕೆ, ನೀಲಾಂಬಿಕೆ:

      ಸಾಂಸಾರಿಕ ಜೀವನವು ಸ್ತ್ರೀವಿಮೋಚನೆಯನ್ನು, ಸ್ತ್ರೀ ಸಮಾನತೆಯನ್ನು ಸಾಧ್ಯವಾಗಿಸದೇ? ಇದೊಂದು ಪ್ರಶ್ನೆ. ಆಗುತ್ತದೆ ಎಂಬುದು ಹನ್ನೆರಡನೇ ಶತಮಾನದ ಗಂಗಾಂಬಿಕೆ, ನೀಲಾಂಬಿಕೆಯರ ಸ್ಪಷ್ಟ ಉತ್ತರ. ಗಂಗಾಂಬಿಕೆ, ನೀಲಾಂಬಿಕೆಯರದ್ದು. ಬಸವಣ್ಣನವರ ಪತ್ನಿಯರಾದ ನೀಲಾಂಬಿಕೆ, ಗಂಗಾಂಬಿಕೆಯರು ಹನ್ನೆರಡನೇ ಶತಮಾನದ ತಿಲಕಪ್ರಾಯ ಸ್ತ್ರೀಯರು. ಇವರು ಸ್ತ್ರೀಸಹಜತೆಯನ್ನು ಕಳೆದುಕೊಳ್ಳದೆಯೇ, ರೂಢಿಗತ ಚೌಕಟ್ಟಿನಲ್ಲಿ ಇದ್ದುಕೊಂಡೇ ಸ್ತ್ರೀತ್ವದ ಮಿತಿಗಳನ್ನು ದಾಟಿದವರು. ಕಳಚೂರ್ಯ ಅರಸ ಬಿಜ್ಜಳ. ಅವನ ಆಸ್ಥಾನದಲ್ಲಿ ಬಲದೇವ ಒಬ್ಬ ಮಂತ್ರಿ. ಈತನ ಮಗಳು ಗಂಗಾಂಬಿಕೆ. ಬಸವಣ್ಣನವರಿಗೆ ಹಿರಿಯ ಹೆಂಡತಿಯೂ ಹೌದು.  ಅವರ ಸೋದರಮಾವನ ಮಗಳೂ ಹೌದು. ನೀಲಾಂಬಿಕೆ ಬಸವಣ್ಣನವರ ಎರಡನೆಯ ಹೆಂಡತಿ. ಈಕೆ ಬಿಜ್ಜಳನ ಆಸ್ಥಾನದಲ್ಲಿದ್ದ ಇನ್ನೊಬ್ಬ ಮಂತ್ರಿ ಸಿದ್ಧರಸನ ಮಗಳು ಅಥವಾ ಬಿಜ್ಜಳನ ತಂಗಿ.

      ಗಂಗಾಂಬಿಕೆ, ನೀಲಾಂಬಿಕೆಯರು ಜವಾಬ್ದಾರಿಯುತ ಸ್ಥಾನದಲ್ಲಿದ್ದ ತಮ್ಮ ತಾಯ್ತಂದೆಯರು ಮತ್ತು ಅವರ ಕುಟುಂಬಕ್ಕೆ ಸಮಾಜದಲ್ಲಿದ್ದ ವಿಶೇಷ ಸ್ಥಾನಮಾನಗಳಿಗೆ ಕುಂದಾಗದಂತೆ ನಡೆದುಕೊಳ್ಳಬೇಕಿತ್ತು ಹಾಗೆಯೇ ಬಸವಣ್ಣನವರ ಸಹಧರ್ಮಿಣಿಯರಾಗಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಕುಂದು ಬಾರದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯೂ ಇತ್ತು. ಇವುಗಳ ಮಧ್ಯೆ ಅವರು ತಮ್ಮ ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಅಡ್ಡಿಯಾಗದಂತೆ ತಮ್ಮ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ತುಡಿತವನ್ನು ಕಾದಿಟ್ಟುಕೊಂಡಿದ್ದರು. 

      ಇವರ ಕಾಲದ ಸಮಾಜವು ಜೈನ, ಬೌದ್ಧ ಧರ್ಮಗಳ ಪ್ರಭಾವಕ್ಕೆ ಒಳಗಾಗಿತ್ತು. ಆ ಧರ್ಮಗಳು ಸ್ತ್ರೀಯರು ಸನ್ಯಾಸಿನಿಯರಾಗುವುದನ್ನು ಪ್ರೋತ್ಸಾಹಿಸುತ್ತಿತ್ತು. ಶೈವ ಪರಂಪರೆಯ ಚೌಕಟ್ಟಿನಲ್ಲಿಯೇ ಅಕ್ಕಮಹಾದೇವಿ ವೈರಾಗ್ಯ ಶಿಖಾಮಣಿಯಾಗಿ ವಿರಾಜಿಸಿದ್ದಳು. ”ಎರದ ಮುಳ್ಳಿನಂತೆ ಪರಗಂಡರು. ಉರದಲ್ಲಿ ಮುಳ್ಳು ಉಂಟೆಂದು ನಾನಪ್ಪೆನು” ಎಂದು ವೈವಾಹಿಕ ಜೀವನವನ್ನು ತಿರಸ್ಕರಿಸಿದ್ದಳು. “ಅಕಟಕಟಾ ಸಂಸಾರದ ಹಗರಣ ಬಂದಾಡಿತಲ್ಲ” ಎಂದು ಸಾಂಸಾರಿಕ ಪ್ರಾಪಂಚಿಕ ಚೌಕಟ್ಟುಗಳನ್ನು ಕೊಡವಿಕೊಂಡಿದ್ದಳು. ಬಟ್ಟ ಬಯಲಿನಲ್ಲಿ ನಿಂತಿದ್ದಳು. ಬಸವಣ್ಣನವರ ಮಹಾಮನೆಯಲ್ಲಿ ಅನುಭವ ಮಂಟಪದಲ್ಲಿ ಅಲ್ಲಮಾದಿ ಶಿವಶರಣರು ಆಕೆಗೆ ನಡೆಮಡಿ ಹಾಸಿ ಮರ್ಯಾದಿಸಿದ್ದರು. ಆದರೂ ಗಂಗಾಂಬಿಕೆ, ನೀಲಾಂಬಿಕೆಯರು ಪತಿಪರಾಯಣರಾಗಿದ್ದರು. “ಕಾಯವಿಲ್ಲದೆ ಪ್ರಾಣ ಇರದು. ಪ್ರಾಣವಿಲ್ಲದೆ ಕಾಯ ಇರದು. ಕಾಯ, ಪ್ರಾಣಗಳಿಗೆ ಬಸವಣ್ಣ ಮೂಲಿಗನು. ಬಸವನಿಲ್ಲದೆ ಭಾವ ನೆಲೆಗೊಳ್ಳದು” ಎಂಬ ಏಕೋಭಾವದ ಸಾಂಸಾರಿಕ ಜೀವನ ನೀಲಾಂಬಿಕೆಯದು ಆಗಿತ್ತು.

      ನೀಲಾಂಬಿಕೆಯಂತೆಯೇ ಭಾವಿಸುವ ಗಂಗಾಂಬಿಕೆ “ಪತಿಯಾಜ್ಞೆಯಲ್ಲಿ ನಡೆಯುವ ಸತಿಗೆ ಯಾಕೆ ಪ್ರತಿಜ್ಞೆ? ಪ್ರತಿಜ್ಞೆಯ ಪರಿಕರದಲ್ಲಿ ನಡೆಯದಿದ್ದರೆ ಯಾತನೆಯಲ್ಲವೆ. ನನ್ನ ನಿಷ್ಠೆ ಪತಿಯಾಜ್ಞೆಯಲ್ಲಿ” ಎಂಬ ದೃಢ ನಿಲುವನ್ನು ಹೊಂದಿದ್ದಳು. ಸಹದರ್ಮಿಣಿಯಾಗಿರುತ್ತೇನೆ ಎಂಬ ಪ್ರತಿಜ್ಞೆಯೊಂದಿಗೆ ಮದುವೆಯಾದ ನಂತರ ಜೀವಂತವಾಗಿ ಕಣ್ಣಮುಂದೆ ಇರುವ ಗಂಡನಲ್ಲಿ ನಿಷ್ಠೆ ಇಡದಿದ್ದರೆ, ಗಂಡನನ್ನು ಲಕ್ಷಿಸದಿದ್ದರೆ, ನಾನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದು ನೂರು ಪ್ರತಿಜ್ಞೆ ಮಾಡಿದರೂ ಅದಕ್ಕೆ ಏನು ಬೆಲೆ? ಗಂಡನನ್ನು ಬದಿಗೆ ಸರಿಸುವ ಪ್ರತಿಜ್ಞೆ ಲಿಂಗನಿಷ್ಠೆಯಂತಹುದು ಆಗಿದ್ದರೂ ಅದು ಅರ್ಥ ರಹಿತ ಎನ್ನುವ ವಿವೇಚನೆ ಗಂಗಾಂಬಿಕೆಯದು. 

ಗಂಗಾಂಬಿಕೆ, ನೀಲಾಂಬಿಕೆಯರ ಪತಿನಿಷ್ಠೆ: 

      ಗಂಗಾಂಬಿಕೆ ನೀಲಾಂಬಿಕೆಯರ ಪತಿನಿಷ್ಠೆ ಆ ಕಾಲದ ಸಮಾಜದಲ್ಲಿ ಪ್ರಚಲಿತವಾಗಿದ್ದ ರೂಢಿಯೇ ಆಗಿತ್ತು. ಆದರೆ ಅವರದು ಸಾಂಪ್ರದಾಯಿಕವಾದ ಪತಿನಿಷ್ಠೆ ಆಗಿರಲಿಲ್ಲ. ಅವರಿಗೆ ಬಸವಣ್ಣ ಕೇವಲ ಲೌಕಿಕ ಗಂಡ ಆಗಿರಲಿಲ್ಲ. ಬಸವಣ್ಣನವರು ಎಲ್ಲ ರೀತಿಯ ಆಚಾರಗಳಿಗೆ ಲಿಂಗ-ಕುಸುಮವನ್ನು ಅಲಂಕಾರವಾಗಿಸಿದವರು ಎಂದು ಗಂಗಾಂಬಿಕೆ ಕಂಡುಕೊಂಡಿದ್ದಳು. ಬಸವಣ್ಣನವರು ಲಿಂಗದ ಪೂಜೆಗಾಗಿ ಹೂತೋಟವನ್ನು ಬೆಳೆಸಿದವರು; ಲಿಂಗದ ಪೂಜೆಗಾಗಿಯೇ ನೀರನ್ನು ಭಾವಿಸಿದವರು; ಅಭಿಷೇಕದ ನಂತರ ಲಿಂಗವನ್ನು ಒರೆಸಲು ಬಳಸುವ ವಸ್ತ್ರವನ್ನು ತನ್ನ ಅಂತರಂಗದ ವಸ್ತ್ರವನ್ನಾಗಿಸಿಕೊಂಡವರು. ಅಂತಹ ಪತಿ ತನಗಿರುವಾಗ ಪತಿಯ ಆಜ್ಞೆಯಲ್ಲಿ ಅಲ್ಲದೆ ಬೇರೆ ಇನ್ನೆಲ್ಲಿ ತನ್ನ ನಿಷ್ಠೆಯನ್ನು ಇರಿಸಲು ಸಾಧ್ಯ? ಎನ್ನುವ ನಿರ್ಣಯ ಗಂಗಾಂಬಿಕೆಯದು. 

      “ನನಗೆ ಏನೂ ತೋರದಿದ್ದಾಗ ಬಸವಯ್ಯ ನಮ್ಮವ್ವೆಯ ಮಗನಾಗಿದ್ದ. ನನಗೆ ಏನೂ ಕಾಣಿಸದಿದ್ದಾಗ ಹುಟ್ಟಿಸುವ ಕರ್ತ ಆಗಿದ್ದ. ತನು, ಮನ ಧನದ ರೂಪ ಇಲ್ಲದೆ ಇದ್ದಾಗ ರೂಪವನ್ನು ಕೊಟ್ಟ” ಎನ್ನುವ ನೀಲಾಂಬಿಕೆಗೆ ಬಸವಣ್ಣ ಸೋದರ, ತಂದೆ, ಗುರು, ಆಪದ್ಬಾಂಧವ, ಪರದೈವ ಎಲ್ಲವೂ ಆಗಿದ್ದರು. ಆದರೂ “ಬಸವಣ್ಣನು ನಮ್ಮ ಹಂಗಿನವನು ಅಲ್ಲ. ನಮ್ಮ ಸಂಗದಲ್ಲಿರುವವನೂ ಅಲ್ಲ. ನಮ್ಮ ಜತೆಯಲ್ಲಿ ಇರುವವನೂ ಅಲ್ಲ. ಆದರೂ ನಮ್ಮನ್ನು ಮೀರಿದ ಬೇರೆ ಲೋಕದವನೂ ಅಲ್ಲ” ಎಂದೆನ್ನುತ್ತ ನೀಲಾಂಬಿಕೆ ಬಸವಣ್ಣ ಮತ್ತು ತನ್ನ ನಡುವೆ ಯಾವುದೇ ರೀತಿಯ ನಿರ್ದಿಷ್ಟ ಲೌಕಿಕ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ. ಇದು ಅವಳ ಪತಿನಿಷ್ಠೆ ರೂಢಿಗತವಾದ ವೈವಾಹಿಕ ಚೌಕಟ್ಟನ್ನು ಮೀರಿದುದು ಆಗಿರುವುದನ್ನೂ ಸ್ಪಷ್ಟಪಡಿಸುತ್ತದೆ..

ಹೆಣ್ತನ-ಭಾವದ ಮೀರುವಿಕೆ: 

      ಹದಿನೇಳನೇ ಶತಮಾನದಲ್ಲಿಯೂ ಹೊನ್ನಮ್ಮ ಎಂದು ಪುರುಷರನ್ನು ಖಂಡಿಸಬೇಕಾದ ವಾತಾವರಣ ಇತ್ತು. ಆದರೆ ಹನ್ನೆರಡನೇ ಶತಮಾನದಲ್ಲಿ ಆಶ್ಚರ್ಯ ಎನ್ನಿಸುವಂತೆ ಶರಣೆಯರ ಸಮೂಹವು  ರಂಗು ರಂಗಾಗಿ ರಂಗವನ್ನೇರಿ ಹೊಳೆಯಿತು. ಇದಕ್ಕೆ ಬಸವಣ್ಣನವರ ನೇತೃತ್ವವೇ ಕಾರಣ. ಶರಣೆಯರೆಲ್ಲರೂ ತಮ್ಮ ಸಾಮರ್ಥ್ಯವು ಸಂಪೂರ್ಣವಾಗಿ ವಿಕಾಸ ಹೊಂದುವುದರಲ್ಲಿ ಬಸವಣ್ಣನವರು ವಹಿಸಿದ ಪಾತ್ರಕ್ಕೆ ಕೃತಜ್ಞರಾಗಿದ್ದರು. “ಇಹಕ್ಕೂ ಪರಕ್ಕೂ ದೂರವಾಗಿರುವ ಪುಣ್ಯವಿಲ್ಲದ ಪಾಪಿ ಎಂದೆನ್ನುವ ಹೆಣ್ಣು ಜನ್ಮದಲ್ಲಿ. ನನ್ನನ್ನು ಏಕೆ ಹುಟ್ಟಿಸಿದೆ?” ಎನ್ನುವ ವ್ಯಥೆ ನೀಲಾಂಬಿಕೆಗೂ ಇತ್ತು ಅದನ್ನು ಅವಳು ಮೀರಿದುದು “ದೇಹ ಯಾವುದು? ಮನಸ್ಸು ಯಾವುದು? ನೆನಪಿನ ಪರಿಣಾಮ ಯಾವುದು? ಅವುಗಳಿಗೆ ಹೆಣ್ಣು, ಗಂಡು ಎನ್ನುವ ಯಾವ ಗುರುತೂ ಇಲ್ಲದಿರುವಾಗ ಹೆಣ್ಣುತನ ಎಂಬುದು ಪ್ರತ್ಯೇಕವಾಗಿ ಹೇಗಿರುತ್ತದೆ?” ಎನ್ನುವ ಜಿಜ್ಞಾಸೆಯಿಂದ. ಈ ಜಿಜ್ಞಾಸೆ ಅವಳಿಗೆ “ನಾನು ಹೆಣ್ಣುರೂಪ ಧರಿಸಿ ವ್ಯವಹರಿಸಿಲ್ಲ, ಮಾತನ್ನು ಹೆಣ್ಣುರೂಪ ಧರಿಸಿ ಆಡಿಲ್ಲ. ಸತ್ಯವನ್ನು ಆಧರಿಸಿ ನನ್ನ ನಡೆ ನುಡಿ ಇರುವುದರಿಂದ ನಾನು ಹೆಣ್ಣಲ್ಲ” ಎಂದು ನಿರ್ಣಯಿಸುವಂತೆ ಮಾಡಿತು. ಹೆಣ್ಣುತನ ಎಂಬುದನ್ನು ಪ್ರತ್ಯೇಕವಾಗಿ ಇರುವ ವಾಸ್ತವತೆ ಅಲ್ಲ ಎಂದೂ ನಿರ್ಣಯಿಸುವಂತೆ ಮಾಡಿತು. ತಾನು ಹೆಣ್ಣು ಎನ್ನುವ ದೈನ್ಯತೆಯಿಂದ ಅವಳನ್ನು ಪಾರುಮಾಡಿತು. ಇಂತಹ ನಿಲುವು ತನಗೆ ಸಾಧ್ಯವಾದದ್ದು ಬಸವಣ್ಣನವರ ಪಾದದಲ್ಲಿ ಮನಸ್ಸನ್ನು ಲೀನವಾಗಿಸಿದುದರಿಂದ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾಳೆ. ಇದು ಅವಳು ಹೊಂದಿದ್ದ ಪತಿನಿಷ್ಠೆಯ ನೆಲೆಯೂ ಆಗಿತ್ತು.

      ನೀಲಾಂಬಿಕೆಯ ಪತಿನಿಷ್ಠೆ ಶರಣಸತಿ ಲಿಂಗಪತಿ ಭಾವಕ್ಕೆ ಸಂವಾದಿಯಾದದ್ದೂ ಆಗಿತ್ತು. “ಥಳಥಳಿಸಿ ಹೊಳೆಯುವ ಬೆಳಗಿನೊಳಗೆ ಬೆಳೆದ ಶಿಶುವಾಗಿ ಸಂಗಯ್ಯನಲ್ಲಿ ಬಸವಾ ಬಸವಾ ಎನ್ನುತ್ತಿದ್ದೇನೆ. ಬ್ರಹ್ಮವನ್ನು ಅರಿತು ಮೂರ್ತಿಯ ಇತಿಮಿತಿಯನ್ನು ಅರಿತೆನು. ಅದರಿಂದ ಸಂಗಯ್ಯನಲ್ಲಿ ತನ್ನ ಕುರುಹನ್ನು ಅಳಿಸಿಹಾಕಲು ಸಾಧ್ಯವಾಯಿತು” ಎನ್ನುವ ನೀಲಾಂಬಿಕೆಗೆ ಬಸವಣ್ಣನವರು ಕುರುಹು ಆಗಿದ್ದೂ ಕುರುಹಿಗೆ ಅತೀತ ಆಗುವ ಅಕ್ಷರದ (ಪರಮ ವಾಸ್ತವತೆಯ} ಕುರುಹಾಗಿದ್ದರು. ಇದರಿಂದಾಗಿ ಅಕ್ಷರದಲ್ಲಿ (ಓಂಕಾರದಲ್ಲಿ) ತನ್ನತನ ಎನ್ನುವ ಎಲ್ಲಾ ಸೀಮಿತತೆಗಳನ್ನು ಕಳೆದುಕೊಳ್ಳಲು ಸಾಧ್ಯವಾಗಿತ್ತು. ಬೆಳಕಿನಂಥ ಪ್ರೌಢತೆಯನ್ನು ಪಡೆದರೂ ಮುಗ್ಧ ಶಿಶುವಂತಿರಲು ಸಾಧ್ಯವಾಗಿತ್ತು. 

      “ನಾನು ಎತ್ತ, ಸಂಸಾರವೆತ್ತ? ನಾನು ಎತ್ತ ದೇಹವೆತ್ತ? ನಾನು ಎತ್ತ ಮಹತ್ವದ ನಿಜವೆತ್ತ? ನಾನು ಎತ್ತ ಸಂಗಯ್ಯನೆತ್ತ, ಬಸವಣ್ಣನೆತ್ತ?” ಎಂದು ವಿವೇಚಿಸುವ ನೀಲಾಂಬಿಕೆ “ಭೋಗಾದಿ ಭೋಗಗಳೆಲ್ಲ ಸಂಗಯ್ಯನ ಅಧೀನ. ಬಸವಣ್ಣನ ಹಂಗು ಹರಿದು ಸಂಗಯ್ಯನಲ್ಲಿ ಸುಖಿಯಾದೆ“; “ನನ್ನನ್ನ್ನುಬಸವಣ್ಣನಿಗೆ ಮಡದಿ ಎನ್ನಲಾಗದು. ನನಗೆ ಬಸವಣ್ಣನನ್ನು ಪತಿ ಎನ್ನಲಾಗದು ಎನ್ನುವ ನೀಲಾಂಬಿಕೆ ಲೌಕಿಕ ಸತಿಪತಿ ಭಾವವನ್ನು ಕಳೆದುಕೊಂಡಿದ್ದಳು ಸಂಗಯ್ಯರೂಪಿ ಬಸವಣ್ಣನವರಲ್ಲಿ ಲಿಂಗ-ಪತಿಯ ದರ್ಶನವನ್ನು ಪಡೆದು ಸಂಗಯ್ಯರೂಪಿ ಬಸವಣ್ಣನವರಿಗೆ ಶರಣಸತಿ ಆಗಿದ್ದಳು.

      ನೀಲಾಂಬಿಕೆಯಂತೆ ಗಂಗಾಂಬಿಕೆಯ ಅಭಿವ್ಯಕ್ತಿಯೂ ತೀವ್ರವಾದದ್ದು. “ಇದೇನೋ ಮೀರಿ ತೋರುವ ಮೂರುತಿ ಪುಷ್ಪ ಗುಂಪಿನಲ್ಲಿ ಕಾಣದೆ ಹೋಗಿದೆ. ಇದೇನೋ ಮೀರಿ ತೋರುವ ಮೂರುತಿ ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿ ತೋರುತ್ತಿದೆ, ಇಂತಪ್ಪ ಮೂರ್ತಿಯ ಕಂಡು ಗಂಗಾಪ್ರಿಯ ಕೂಡಲಸಂಗನ ಶರಣನ ಸತಿಯಳು ಧನ್ಯಳಾದಳು” ಎನ್ನುವ ಗಂಗಾಂಬಿಕೆಗೆ ಬಸವಣ್ಣನವರ ಅಸಾಧಾರಣ ವ್ಯಕ್ತಿತ್ವವನ್ನು ಕಂಡು ಪರಮ ಆಶ್ಚರ್ಯ ಆಗಿರುವುದರ ಜೊತೆಗೆ ಇಂಥ ಮೀರುವ ಮೂರ್ತಿಯಿಂದಾಗಿ ತಾನು ದೇಹವನ್ನು ಪಡೆದ ಮೂರ್ತಿ ಆಗಿದ್ದೂ ಶರಣಸತಿ-ಭಾವದ ಸಿದ್ಧಿ ಪಡೆದುದಕ್ಕೆ ಧನ್ಯತೆಯೂ ಉಂಟಾಗಿದೆ.

ಮಾತೃತ್ವ-ವ್ಯಾಮೋಹದ ಮೀರುವಿಕೆ: 

     ಗಂಗಾಂಬಿಕೆ, ನೀಲಾಂಬಿಕೆಯರಿಗೆ ಪತಿನಿಷ್ಠೆಯು ಸಹಜವಾಗಿ ಇದ್ದಂತೆ ಮಾತೃಭಾವವೂ ಇತ್ತು. ಆದರೆ ತಾವೊಂದು ಮಗುವಿನ ತಾಯಿ ಆಗಬೇಕೆಂಬ ಅವರ ಮಾತೃಭಾವವೂ ರೂಢಿಗತತೆಯನ್ನು ಮೀರಿತ್ತು. “ಅವಳ ಕಂದ ಬಾಲಸಂಗ ನಿನ್ನ ಕಂದ ಚೆನ್ನ ಲಿಂಗ ಎಂದು ಹೇಳಿದರಮ್ಮಾ ಎನ್ನ ಒಡೆಯರು. ಕಂದನೂ ಇಲ್ಲ, ಫಲವೂ ಇಲ್ಲ” ಎಂದು ನೋಯುವ ಗಂಗಾಂಬಿಕೆಗೆ ಮಗುವನ್ನು ಕಳೆದುಕೊಂಡ ದುಃಖ ಸಹಜವಾಗಿ ಇತ್ತು. ಇದು “ಅಲ್ಲಮಯ್ಯ ಮಾಡಿದ ಬೇಟ, ಹೋದುದು ನಿಶ್ಚಯವಾಗಿದ್ದರೆ ಕರುಳು ಕಳವಳಿಸುತ್ತಿದ್ದವು” ಎಂದು ನಿರ್ಣಯಿಸಿದ್ದಳು. “ಮನದಲ್ಲಿ ಮಾತಿನಲ್ಲಿ ಸೂಸುವ ಮೂರುತಿ ನೋಡ ನೋಡುತ್ತ ಬಯಲಾಯಿತಲ್ಲ” ಎಂದು ಆಶ್ಚರ್ಯ ಪಟ್ಟಿದ್ದಳು ಚೆನ್ನಬಸವಣ್ಣ ತನ್ನ ಮಗನಂತೆಯೇ ತನ್ನೊಂದಿಗೆ ಇರುವಾಗ “ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ” ಎಂದು ಸಮಾಧಾನ ಮಾಡಿಕೊಂಡಿದ್ದಳು, ತಾಯ್ತನದ ಪರಮಾನಂದವನ್ನು ಅನುಭವಿಸಿದ್ದಳು.

      “ಪಾರ್ವತಿಯ ರೂಪ ಕಂಡು ಪರಶಿವನ ಸಂಗ ನಿಸ್ಸಂಗವಾಗಿ, ತಾಯಿ ಮಗನಂಗದಿಂದ ತನುವಳಿದು ನಿರಾಧಾರ ರೂಪವನೈದಿ, ಬಸವನ ಅನುಭವದಿಂದ ವಿವರವ ಕಂಡು, ವಿಚಾರಪತ್ನಿಯಾದೆನಯ್ಯಾ” ಎನ್ನುವ ನೀಲಾಂಬಿಕೆ ಗಣಪತಿಯ ಹುಟ್ಟು, ಗಣಪತಿ ಶಿವನಿಂದ ಮೃತನಾಗಿ ಹೊಸ ಹುಟ್ಟು ಪಡೆದದ್ದು, ಶಿವ ಪಾರ್ವತಿಯ ರೂಪದಿಂದ ಆಕರ್ಷಿತನಾದರೂ ಆಕೆಯೊಂದಿಗಿನ ಅವನ ಸಂಬಂಧ ನಿಸ್ಸಂಗವೇ ಆಗಿದ್ದುದನ್ನು ಈ ವಚನದಲ್ಲಿ ಭಾವಿಸಿದ್ದಾಳೆ. ಶಿವನ ಅವತಾರ ಎಂದೆನ್ನಿಸಿದ ಬಸವಣ್ಣನವರಿಂದ ಇದನ್ನೆಲ್ಲ ಮನನ ಮಾಡಿಕೊಂಡ ಆಕೆ ಸ್ವಂತ ಮಗುವೇ ಇರಬೇಕು ಎನ್ನುವ ವ್ಯಾಮೋಹ ಯಾಕೆ? ಬೇರೆಯವರ ಮಕ್ಕಳನ್ನೂ ತನ್ನ ಮಕ್ಕಳೆಂದೇ ತಿಳಿಯಬಹುದು ಎಂದು ಸ್ವಂತ ಮಗುವಿಗೆ ಪರ್ಯಾಯವೊಂದನ್ನು ಭಾವಿಸುವ ಗಂಗಾಂಬಿಕೆಗಿಂತ ಭಿನ್ನವಾಗಿ ವಿಚಾರ ಮಾಡಿದ್ದಳು. ಆಕೆಗೆ ಮಗುವೊಂದನ್ನು ಬಸವಣ್ಣನವರಿಂದ ಪಡೆಯುವ ಪತ್ನಿಯಾಗುವುದಕ್ಕಿಂತ ಅವರ ವಿಚಾರಪತ್ನಿ ಆಗುವುದು ಸರಿಯಾದದ್ದು ಎಂದೆನ್ನಿಸಿತ್ತು.

      “ಬಸವನೆನ್ನ ಶಿಶುವಾದನು ಬಸವಂಗೆ ಶಿಶುವಾದೆನು, ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಡಗಿದೆ” ಎಂದೆನ್ನುವ ನೀಲಾಂಬಿಕೆಗೆ ತಾನು ಮಗುವನ್ನು ಕಳೆದುಕೊಂಡದ್ದು ಸಂಗಯ್ಯನು ಒಡ್ಡಿದ ದಿವ್ಯ (ಕಠಿಣವಾದ ಪರೀಕ್ಷೆ) ಆಗಿತ್ತು. ಬಸವಣ್ಣನವರಿಗೆ ತಾನು ಶಿಶುವಾಗಿ, ಬಸವಣ್ಣನವರು ತನಗೆ ಶಿಶುವಾಗಿ ಮಾತೃವಾತ್ಸಲ್ಯದ ವ್ಯಾಮೋಹದಿಂದ ಪಾರಾದೆ ಎಂದು ತನ್ನ ಭಾಗ್ಯವನ್ನು ಕೊಂಡಾಡಿದ್ದಳು.  ಗಂಗಾಂಬಿಕೆ, ನೀಲಾಂಬಿಕೆಯರಿಗೆ ಅವರ ಪತಿನಿಷ್ಠೆಯು ಹೇಗೆ ಅವರ ಸ್ವತಂತ್ರ ವ್ಯಕ್ತಿತ್ವದ ವಿಕಾಸಕ್ಕೆ ಪೂರಕ ಆಯಿತೋ ಹಾಗೆ ಅವರ ಮಾತೃಭಾವವೂ ಪೂರಕ ಆಗಿತ್ತು. 

ಅವಲಂಬನಾ ಭಾವದ ಮೀರುವಿಕೆ: 

      ಗಂಗಾಂಬಿಕೆ, ನೀಲಾಂಬಿಕೆಯರು ಶರಣಸತಿ ಲಿಂಗಪತಿ ಭಾವವನ್ನು ಸಿದ್ಧಿಸಿಕೊಂಡಿದ್ದರೂ “ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?” ಎಂದು ಪ್ರಶ್ನಿಸುವವರು ಆಗಿರಲಿಲ್ಲ. ಬಸವಣ್ಣನವರನ್ನು ಲೌಕಿಕ ಗಂಡ ಎಂದು ಒಪ್ಪಿಕೊಂಡಿದ್ದರೂ, ಬಸವಣ್ಣನವರ ಕಾರಣದಿಂದಾಗಿ ಅವರಿಗೆ ಪಾರಮಾರ್ಥಿಕವಾಗಿ ಅತ್ಯುನ್ನತ ಸಿದ್ಧಿಯನ್ನು ಪಡೆಯಲು ಸಾಧ್ಯವಾಗಿದ್ದರೂ ಅವರು ಗಂಡನ ಮೂಲಕ ದೊರೆಯುವ ವ್ಯಕ್ತಿತ್ವದ ಹೊರತಾಗಿ ತಮಗೆ ಬೇರೆ ವ್ಯಕ್ತಿತ್ವವೇ ಇಲ್ಲ ಎಂದು ತಿಳಿದಿರಲಿಲ್ಲ. 

      “ಅತೀತವಡಗಿ ನಿರಾಲಂಬದ ಮನದ ಮೂರ್ತಿಯ ತಿಳಿದು, ಮನೋವ್ಯಾಧಿಯಂ ಪರಿಹರಿಸಿಕೊಂಡು, ಭಾವದ ಸೂತಕವಳಿದು, ಬ್ರಹ್ಮನ ನೆಮ್ಮುಗೆಯಂ ತಿಳಿದು, ಮನ ವಿಶ್ರಾಂತಿಯನೆಯ್ದಿ, ವಿಚಾರದನುಭವವನರಿದು, ವಿವೇಕದಿಂದಾನು ವಿಶೇಷ ಸುಖ ಕಂಡೆನಯ್ಯಾ ಸಂಗಯ್ಯಾ ಬಸವನಿಂದಲಿ”. ಇದು ನೀಲಾಂಬಿಕೆ ಬಸವಣ್ಣನವರನ್ನು ಸ್ಮರಿಸುತ್ತಲೇ ಸ್ವತಂತ್ರವಾಗಿ ನಡೆದುಬಂದ ಹಾದಿಯ ಪರಿಚಯ. “ನಿಷ್ಕಾಮಿಯಾದ ಕಾರಣ ಪ್ರತ್ಯೇಕವಾದ ಆಸೆ ಆಕಾಂಕ್ಷೆಗಳಿಲ್ಲ, ಆಸೆ ಆಕಾಂಕ್ಷೆಗಳಿಗೆ ಹೊಂದಿಕೊಂಡಂತೆ ಇರುವ ತನ್ನನ್ನು ಕಟ್ಟಿಹಾಕುವ ಕರ್ಮಗಳೂ ಇಲ್ಲ, ಬಸವಣ್ಣನವರನ್ನೂ ಒಳಗೊಂಡಂತೆ ಯಾವ ವ್ಯಕ್ತಿಯೂ ಮನಸ್ಸನ್ನು ನಿರ್ಬಂಧಿಸುವುದಿಲ್ಲ. ಅದರಿಂದಾಗಿ ಮನೋವ್ಯಾಧಿಯೂ ಇಲ್ಲ, ಒದ್ದಾಟದ ಮನಸ್ಥಿತಿಯೂ ಇಲ್ಲ. ಬದಲಿಗೆ ಅನುಭವಗಳ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುವ ವಿಚಾರವೂ ಇದೆ, ವಿವೇಕವೂ ಇದೆ, ಅದರಿಂದಾಗಿ ವಸ್ತುಗಳಿಂದ ವ್ಯಕ್ತಿಗಳ ಸಂಸರ್ಗದಿಂದ ದೊರೆಯುವ ಸುಖಕ್ಕಿಂತ ಭಿನ್ನವಾದ ವಿಶೇಷ ಸುಖ ಇದೆ” ಎನ್ನುವುದು ನೀಲಾಂಬಿಕೆ ತನ್ನ ಬದುಕಿನ ಹಾದಿ ಯಾಕೆ ಸ್ವತಂತ್ರವಾದದ್ದು ಎಂಬುದಕ್ಕೆ ಕೊಡುವ ವಿವರಣೆ. 

      ಸ್ವತಂತ್ರ ಬದುಕಿನ ರೀತಿಯ ತುದಿ ನಿರಾಲಂಬನೆ. ತಾನು ಹೇಗೆ ನಿರಾವಲಂಬಿ ಎನ್ನುವುದಕ್ಕೂ ನೀಲಾಂಬಿಕೆ ವಿವರಣೆಯನ್ನು ಕೊಟ್ಟಿದ್ದಾಳೆ. “ಇಷ್ಟದ ಸಂಗವು ಅಳಿದು ಹೋಗಿರುವುದರಿಂದ ಪ್ರಾಣಯೋಗ ಸಾಧ್ಯವಾಗಿದೆ. ಪ್ರತ್ಯೇಕ ಪ್ರತ್ಯೇಕವಾಗಿ ಕೆಲಸ ಮಾಡುವ ಅನೇಕವಾಗಿ ಇರುವ ಅಂಗಗಳು ಏಕಾಂಗವಾಗಿವೆ. ಸಂಪೂರ್ಣವಾಗಿ ಮನಸ್ಸು ಹೆಸರು, ರೂಪಗಳು ಇಲ್ಲದ ಸಂಗಯ್ಯನಲ್ಲಿ ಮಗ್ನ ಆಗಿದೆ. ಪ್ರಾಣವು ಪ್ರಸನ್ನವಾಗಿದೆ. ಅದರಿಂದಾಗಿ ಬಸವಣ್ಣನವರನ್ನೂ ಒಳಗೊಂಡಂತೆ ಯಾರ ಮತ್ತು ಯಾವುದರ ಹಂಗೂ (ನಿರ್ಬಂಧವೂ) ಇಲ್ಲ” (ವ.೭೬೪, ಪು.೨೪೮) ಎನ್ನುತ್ತಾಳೆ ನೀಲಾಂಬಿಕೆ ಹೇಳುವ ಪ್ರಾಣಯೋಗ ಎನ್ನುವುದು ಹರಿದು ಹಂಚಿಹೋಗಿ ಕಳವಳಿಸುವ ಮನಸ್ಸನ್ನು ನಿಶ್ಚಿಂತ ಆಗಿಸುವ ಒಂದು ಯೌಗಿಕ ಸಾಧನಾ ಮಾರ್ಗ. 

      ನೀಲಾಂಬಿಕೆಯ ನಿರಾಲಂಬದ ತುಟ್ಟತುದಿ ಪ್ರತ್ಯೇಕ ನೆಲೆಯನ್ನೂ ಮೀರಿದ್ದು ಆಗಿತ್ತು. ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕಪ್ಪಡಿಸಂಗಮಕ್ಕೆ ಹೋಗಲು ನಿರ್ಧರಿಸುತ್ತಾರೆ. ತಮ್ಮ ಜೊತೆಯಲ್ಲಿ ಗಂಗಾಂಬಿಕೆ, ನೀಲಾಂಬಿಕೆಯರನ್ನು ಕರೆದುಕೊಂಡು ಹೋಗುವ ಯೋಚನೆ ಅವರಿಗೆ ಇರಲಿಲ್ಲ. ಹಾಗೆಂದು ಅವರನ್ನು ಅವರ ಪಾಡಿಗೆ ಬಿಟ್ಟು ಹೊರಟುಹೋಗುವ ಮನಸ್ಸೂ ಇರಲಿಲ್ಲ. ಆಗ “ನಾನು ಯಾರ ಹತ್ತಿರ ಇರುತ್ತೇನೆ, ಯಾರೊಂದಿಗೆ ಹೊಂದಿಕೊಂಡು ಹೋಗುತ್ತೇನೆ, ಯಾರು ನನಗೆ ಹಿತವಾಗಿರುತ್ತಾರೆ ಎಂದೆಲ್ಲಾ ಪ್ರಲಾಪಿಸುವ ಅಗತ್ಯವಿಲ್ಲ. ನನ್ನ ಕರಸ್ಥಲದಲ್ಲಿ ಬಸವಣ್ಣ ಶಿವ-ಸ್ವರೂಪಿಯಾಗಿ ಬೆಳಗುತ್ತಿರುವುದರಿಂದ ಆ ಬೆಳಕೇ ತನ್ನ ಮೂಲಾಧಾರ” ಎಂದು ಬಸವಣ್ಣನವರನ್ನು ಸಮಾಧಾನ ಪಡಿಸುವ ನೀಲಾಂಬಿಕೆ ನಿರ್ಭಯತ್ವದ ಪ್ರತೀಕವೇ ಆಗಿಬಿಟ್ಟಿದ್ದಳು. 

     “ನಾನು ನಿಮ್ಮವಳಲ್ಲವಯ್ಯಾ, ನಾನು ಅನಿಮಿಷನವರವಳು. ನಾನು ನಿಮ್ಮವಳಲ್ಲವಯ್ಯಾ ನಾನು ಅಜಗಣ್ಣನವರವಳು. ನಾನು ನಿಮ್ಮವಳಲ್ಲವಯ್ಯಾ ನಾನು ಪ್ರಭುವಿನ ಸಂತತಿಯವಳು. ನಾನು ನಿಮ್ಮವಳಲ್ಲವಯ್ಯಾ ನಾನು ಮಾದಾರ ಚೆನ್ನಯ್ಯನ ಮೊಮ್ಮಗಳು.. ನಾನು ನಿಮ್ಮವಳಲ್ಲವಯ್ಯಾ ನಾನು ಪ್ರಸಾದಿಗಳ ಮನೆಯ ಕೀಳು ತೊತ್ತು. ನಾನು ನಿಮ್ಮವಳಲ್ಲವಯ್ಯಾ ಸಂಗಯ್ಯಾ ನಾನು ಬಸವಯ್ಯ ತೊತ್ತಿನ ಮಗಳು” ಎಂದು ನೀಲಾಂಬಿಕೆ ತಾನು ಶರಣರ ಸಮೂಹದಲ್ಲಿ ಒಬ್ಬಳು, ಭಕ್ತರ ಗುಂಪಿನಲ್ಲಿ ಒಬ್ಬಳು, ಶರಣರ ಸೇವೆಯನ್ನು ಮಾಡುವ ದಾಸಿಯರಲ್ಲಿ ಒಬ್ಬಳು ಎನ್ನುತ್ತಾಳೆ. ಎಲ್ಲರಿಗೂ ಆದದ್ದು ತನಗೂ ಆಗುತ್ತದೆ, ತನಗಾಗಿ ಪ್ರತ್ಯೇಕವಾಗಿ ಕಳವಳ ಪಡುವ ಅಗತ್ಯವಾದರೂ ಎಲ್ಲಿದೆ ಎಂದು ಕೇಳುತ್ತಾಳೆ. ಸಮೂಹದೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳುತ್ತಾಳೆ. ಬಸವಣ್ಣನವರ ಹೆಂಡತಿ, ಉಚ್ಚಕುಲದವಳು, ವಿಶೇಷ ಸಿದ್ಧಿಯನ್ನು ಪಡೆದವಳು ಎಂದೆಲ್ಲಾ ಪ್ರತ್ಯೇಕ ನೆಲೆಯಲ್ಲಿ ತನ್ನನ್ನು ಗುರುತಿಸಬಹುದಾದ ಹಂಗನ್ನು, ಕುರುಹನ್ನು ಮೀರುತ್ತಾಳೆ.  

ವೈಧವ್ಯಭಾವದ ಮೀರುವಿಕೆ: 

      ಎಲ್ಲ ಭಾವದ ಹಂಗುಗಳನ್ನು, ನಿರ್ಬಂಧಗಳನ್ನು ಮೀರಿದ್ದರೂ ಪತಿಯನ್ನು ಕಳೆದುಕೊಳ್ಳುವ ಪ್ರಸಂಗದಲ್ಲಿ ಎಲ್ಲ ಸ್ತ್ರೀಯರಿಗೆ ಉಂಟಾಗುವ ಕಳವಳ ಆಕೆಯನ್ನು ಕಾಡದೇ ಬಿಡಲಿಲ್ಲ. ಬಸವಣ್ಣನವರು ಕಪ್ಪಡಿಸಂಗಮದಲ್ಲಿ ಮುಕ್ತರಾದರೆಂಬ ಸುದ್ದಿ ಕೇಳಿದಾಗ ದಿಗ್ಭ್ರಾಂತಳಾದ ನೀಲಾಂಬಿಕೆ “ಹುಯ್ಯಲಿಲ್ಲದ ಹುಲ್ಲೆಯಾದೆಯಾ, ಕಾಯವಿಲ್ಲದ ದೇಹಿಯಾದೆಯಾ, ನಿರ್ಮಲ ಮೂರುತಿಯಾದ ನೀನು ಕರ್ಮವಿರಹಿತನಾದೆಯಾ” ಎಂದು ಗೋಳಾಡುತ್ತಾಳೆ. “ಬಸವನ ಎಲೆಗಳೆದ ವೃಕ್ಷವ ಕಂಡಿರೇ, ಬಸವನ ರೂಹಿಲ್ಲದ ಚೋಹವ ಕಂಡಿರೇ, ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೇ, ಎಲೆ ಅಯ್ಯಗಳಿರಾ, ಎಲೆ ಸ್ವಾಮಿಗಳಿರಾ ನಿಮ್ಮ ನಿಲುವಿನ ದರ್ಪಣವ ಕಂಡಿರೇ” ಎಂದು ಪ್ರಲಾಪಿಸುತ್ತಾಳೆ. ಕೊನೆಗೆ “ಅಟ್ಟಡವಿಯಲ್ಲಿ ಬಿಟ್ಟುಹೋದಿರಿ; ನಟ್ಟ ನಡು ಗ್ರಾಮವ ಕೆಡಿಸಿ ಹೋದಿರಿ; ಹುಟ್ಟಿಲ್ಲದ ಬಂಜೆಗೆ ಮಕ್ಕಳ ಕೊಟ್ಟಿರಿ; ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ; ಬಸವಯ್ಯಾ ನೀನೆಂಥ ಮಹಿಮನಯ್ಯಾ” ಎಂದು ಉದ್ಗರಿಸುತ್ತಾಳೆ. 

      ಸ್ತ್ರೀಯಾದ ತನಗೆ ಸ್ತ್ರೀತ್ವದ ಕಾರಣದಿಂದಾಗಿ ಇದ್ದ ಎಲ್ಲ ನಿರ್ಬಂಧಗಳನ್ನು ಬಸವಣ್ಣನವರು ಮೀರುವಂತೆ ಮಾಡಿದ್ದಾರೆ; ತಾನು ಮತ್ತೆ ಬಸವಣ್ಣ ಎಂಬ ಭೇದವೇ ಇಲ್ಲದಿರುವಾಗ ತಾನು ಹೆಣ್ಣು ಎಂಬ ಭಾವದಲ್ಲಿ ಪತಿಯನ್ನು ಕಳೆದುಕೊಂಡು ನಿರಾಧಾರಿಯಾಗಿದ್ದೇನೆ ಎಂದು ಪರಿತಪಿಸುವುದು ಸರಿಯಲ್ಲ ಎಂದುಕೊಂಡಿದ್ದಾಳೆ, ವೈಧವ್ಯ ಭಾವವನ್ನು ನಿರಾಕರಿಸಿದ್ದಾಳೆ. ʼಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೈದುವೆನಯ್ಯಾ” ಎಂದು ಹೇಳಿಕೊಂಡಿದ್ದಾಳೆ. “ಮಾತಿಲ್ಲದೆ ಮಥನವ ಮಾಡಿ ಮೆರೆದೆ, ನೀತಿಯಿಲ್ಲದೆ ಮೆರೆದೆ ಬಸವಯ್ಯ”; ಅದರಿಂದಾಗಿ “ನೇಮವಳಿದು ಸೀಮೆಯ ಕಳೆದು ಉಭಯ ತನು ನಷ್ಟವಾಗಿ, ಕುರುಹ ನಷ್ಟವ ಮಾಡಿ, ಬಣ್ಣದ ಭ್ರಮೆಯಳಿದು, ಬಸವಭಾವವಿಲ್ಲದೆ ಬಯಲಾದೆನು” ಎಂದು ಸಮಾಧಾನದ ಉಸಿರು ತೆಗೆದಿದ್ದಾಳೆ.  ಗಂಗಾಂಬಿಕೆ ಈ ಎಲ್ಲ ಜಿಜ್ಞಾಸೆ, ವಿವೇಚನೆ, ಸಮಾಧಾನ, ನೆಮ್ಮದಿ, ನಿಶ್ಚಿಂತೆಯ ಭಾವಗಳನ್ನು ತಾನು “ಮುಕ್ತ್ಯಂಗನೆ” ಎನ್ನುವ ಒಂದು ಪದದಲ್ಲಿ ಅಡಗಿಸಿಬಿಟ್ಟಿದ್ದಾಳೆ, ಬಯಲೇ ಆಗಿಬಿಟ್ಟಿದ್ದಾಳೆ.. 

ನಿರುಪಮಾಕಾರ ಮೂರ್ತಿ – ಸ್ತ್ರೀ ಪುರುಷ ಸಮಾನತೆ:  

      ಗಂಗಾಂಬಿಕೆಗಿಂತ ನೀಲಾಂಬಿಕೆಯ ಗ್ರಹಿಕೆಯ ಅಭಿವ್ಯಕ್ತಿ ವಿಸ್ತಾರವಾದದ್ದು. ಗಂಗಾಂಬಿಕೆಗೆ ಬಸವಣ್ಣನವರು ಸಾಮಾಜಿಕ ಸೇವೆ, ರಾಜಕಾರಣ, ವೈಯಕ್ತಿಕ ಭಕ್ತಿ ಸಾಧನೆಗಳೆಲ್ಲವನ್ನೂ ಮೇಳೈಸಿದುದು ಅಚ್ಚರಿಯನ್ನುಂಟುಮಾಡಿತ್ತು. ಇವುಗಳೆಲ್ಲದರ ನಡುವೆ ಬಸವಣ್ಣನವರು ತಾನು ಮುಕ್ತ್ಯಂಗನೆ ಆಗಲು ಅವಕಾಶ ಕಲ್ಪಿಸಿಕೊಟ್ಟದ್ದು ಅವಳಿಗೆ ಅತಿ ಮುಖ್ಯವಾದದ್ದಾಗಿತ್ತು. ಗಂಗಾಂಬಿಕೆಯ ಈ ಗ್ರಹಿಕೆಯನ್ನು ವಿಸ್ತರಿಸಿ “ಬಸವಣ್ಣನವರು ಪ್ರತಿನಿತ್ಯ ಒಂದು ಲಕ್ಷ ತೊಂಬತ್ತಾರು ಸಾವಿರ ಜಂಗಮರಿಗೆ  ಉಪಚಾರ ಮಾಡಿದರು; ಯಾರ ದೇಹವೂ ಕೊಳೆಯುವ, ನಾರುವ, ರೋಗ ರುಜಿನಗಳ ಬೀಡಾಗುವ, ವಿಷಯವಾಸನೆಗಳ ಪಾಪಕೂಪ ಅಲ್ಲ, ಬದಲಿಗೆ ಜೀವಂತವಾದ ಶಿವಾಲಯ ಎಂಬುದನ್ನು ಮನಗಾಣಿಸಿಕೊಟ್ಟರು; ಭಕ್ತಿಕಾಂಡದ ಮೂಲಿಗನಾಗಿ ಭಕ್ತಿಯ ನಿಜಸಮಾಧಿಯ ಸುಖವನ್ನು ಎಲ್ಲರಿಗೂ ಕರುಣಿಸಿದ್ದರು; ಯಾವ ಯಾವುದೋ ಕಾರಣಕ್ಕಾಗಿ ಬಾಗಿ ಬಾಗಿ ಆರು ಬೆರಳಿನಷ್ಟು ಕುಬ್ಜ ಆಗಿದ್ದವರ ದೇಹವನ್ನು ಆರು ಅಡಿಯಾಗಿಸಿ ಅವರು ತಲೆಯೆತ್ತಿ ನಿಲ್ಲುವಂತೆ ಮಾಡಿದರು; ಅವರು ಇವರು ಎಂಬ ಪ್ರತ್ಯೇಕತೆಯ ಸಂಕುಚಿತ ಮನೋಭಾವವನ್ನು ಕಿತ್ತೊಗೆದಿದ್ದರು, ಎಲ್ಲರೂ ಎಲ್ಲರೊಂದಿಗೂ ಸಮರಸವಾಗಿ ಬೆರೆಯುವಂತೆ ಮಾಡಿದ್ದರು; ಅವರ ಕಾರಣದಿಂದಾಗಿ ಬಲವಂತರು ಹುಟ್ಟಿಕೊಂಡರು” ಎಂದೆನ್ನುವ ನೀಲಾಂಬಿಕೆ ಈ ಎಲ್ಲ ಸಂಗತಿಗಳಿಂದ “ಬಸವಯ್ಯ ನೀನು ತೃಪ್ತ ಆಗಿರಬಹುದು ನಾನು ತೃಪ್ತಳಲ್ಲ”ಎಂದು ಧೈರ್ಯದಿಂದ ಹೇಳುತ್ತಾಳೆ. ನೀಲಾಂಬಿಕೆಯ ಗ್ರಹಿಕೆಯಲ್ಲಿ ಯಾರಿಗಾದರೂ ಅತ್ಯಂತ ಮುಖ್ಯವಾದದ್ದು “ನಮ್ಮ ನಮ್ಮ ಸಂಸರ್ಗದಲ್ಲಿ ನಿರುಪಮಾಕಾರ ಮೂರ್ತಿಗಳಾಗಿ, ನಿರವಯವನೈದಿ ನಿಜಸುಖಿಗಳಾಗುವುದು”. ವೈಚಾರಿಕವಾದ ಅನುಭಾವಾತ್ಮಕವಾದ ಅತೃಪ್ತಿ ಇದ್ದಾಗ ಮಾತ್ರ ಚೌಕಟ್ಟು, ಆವರಣಗಳಿಲ್ಲದ ನಿರವಯವಿಗಳಾಗಿ, ಅವರವರ ಸಂಸರ್ಗದಲ್ಲಿ ನಿರುಪಮಾಕಾರ ಮೂರ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. 

      ನೀಲಾಂಬಿಕೆ ಗಂಗಾಂಬಿಕೆಯರು ಸ್ತ್ರೀತ್ವದ ಭಾವವನ್ನು ಹೊಂದಿದ್ದೂ ಸ್ತ್ರೀ ಎನ್ನುವ ಸಾಮಾಜಿಕ ಪರಿಕಲ್ಪನೆಯನ್ನು ಭಂಜಿಸಿದ್ದಾರೆ. ತಮ್ಮದು ಹೆಣ್ಣು ಎನ್ನುವ ನಾಮ ಅಲ್ಲ ಎಂಬುದನ್ನು ವ್ಯಕ್ತಪಡಿಸಿದ್ದಾರೆ, ಬಸವಣ್ಣನವರಿಂದ ವ್ಯಕ್ತಿತ್ವವನ್ನು ವಿಕಾಸಪಡಿಸಿಕೊಂಡಿದ್ದರೂ, ಶರಣರ ಸಮೂಹ ಇಂತಹ ವಿಕಾಸಕ್ಕೆ ಅನುವಾಗಿ ನಿಂತಿದ್ದರೂ ಅವರು ಯಾರ ಅನುಯಾಯಿಗಳೂ ಆಗದೆಯೇ ಉಳಿದಿದ್ದಾರೆ. ಸ್ವತಂತ್ರವಾಗಿ ಸಾಧನೆ ಮಾಡಿದ್ದಾರೆ. ನಿರುಪಮಾಕಾರ ಅಂದರೆ ವಿಶಿಷ್ಟ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ. ಅದೇ ಅರ್ಥಪೂರ್ಣವಾದ ವಿಮೋಚನೆ ಎನ್ನುತ್ತಿದ್ದಾರೆ. ಇದಕ್ಕೆ ಸಾಂಸಾರಿಕ ಜೀವನ ಅಡ್ಡಿಯಾಗುವುದಿಲ್ಲ ಎಂಬುದನ್ನು ತೋರಿದ್ದಾರೆ. ಎಲ್ಲರೂ ತಂತಮ್ಮ‌ ನಿರುಪಮಾಕಾರ ಯಾವುದೆಂಬುದನ್ನು ತಾವೇ ಸ್ವತಃ ಕಂಡುಕೊಳ್ಳಬೇಕು; ಕಂಡುಕೊಂಡದ್ದು ಹಂಗುಗಳಿಲ್ಲದ, ನಿರ್ಬಂಧಗಳಿಲ್ಲದ ಯಾವುದೇ ಶರತ್ತುಗಳಿಲ್ಲದ ಸುಖಿ ನಾನು ಎನ್ನುವ ಭಾವ ಆಗಿರಬೇಕು ಎನ್ನುತ್ತಾ ಸ್ತ್ರೀ ಸ್ವಾತಂತ್ರ್ಯ ಎನ್ನುವುದಕ್ಕೆ ಒಂದು ಗಮನಾರ್ಹ ಮಾದರಿಯನ್ನು ಮುಂದಿಟ್ಟಿದ್ದಾರೆ. 

ಆಧಾರ: ಶಿವಶರಣೆಯರ ವಚನ ಸಂಪುಟ, ಕನ್ನಡ ಸಂಸ್ಕೃತಿ ಪ್ರಚಾರ ಇಲಾಖೆ, ಬೆಂಗಳೂರು

-ಪದ್ಮಿನಿ ಹೆಗಡೆ, ಮೈಸೂರು

7 Responses

  1. ಸುಚೇತಾ says:

    ತುಂಬಾ ಚೆನ್ನಾಗಿದೆ.

  2. ವಿಚಾರ ಪೂರ್ಣ ವಾದ ಲೇಖನ ಮತ್ತೆ ಮತ್ತೆ ಮೆಲುಕುಹಾಕಿ ಚಿಂತಿಸುವಂತೆ ಮಾಡಿದೆ…ಧನ್ಯವಾದಗಳು ಪದ್ಮಿನಿ ಮೇಡಂ

  3. ನಯನ ಬಜಕೂಡ್ಲು says:

    ವಿಶಿಷ್ಟ ವಾಗಿದೆ ಮೇಡಂ ಲೇಖನ. ಬಸವಣ್ಣ ನವರ ಕುರಿತಾಗಿ ಸರ್ ಲಕ್ಷ್ಮಣ ಕೌoಟೆ ಯವರು ಬರೆದ ಕೂಡಲ ಸಂಗಮ ಅನ್ನುವ ಕಾದಂಬರಿ ಯನ್ನು ಬರೆದಿದ್ದಾರೆ. ಅದರಲ್ಲೂ ಗಂಗಾoಬಿಕೆ, ನೀಲಾoಬಿಕೆಯರ ಬಗ್ಗೆ ಬರುತ್ತದೆ. ಇಲ್ಲೂ ಬಹಳಷ್ಟು ಮಾಹಿತಿಯನ್ನು ಕಲೆ ಹಾಕಿದ್ದೀರಿ ನೀವು.

  4. Padmini Hegde says:

    ಲೇಖನದ ವಿವರಗಳನ್ನು ಭಾವಿಸಿ ಸ್ಪಂದಿಸಿದ ಹೇಮಮಾಲ ಮೇಡಂಗೆ ಸುಚೇತ ಮೇಡಂಗೆ, ಬಿ.ಆರ್. ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ ಧನ್ಯವಾದಗಳು

  5. ಗಂಗಾಂಬಿಕೆ ಮತ್ತು ನೀಲಾಂಬಿಕೆ ಹಾಗೂ ಇತರೆ ಶಿವಶರಣೆಯರ ವಚನಗಳನ್ನು ಉಲ್ಲೇಖಿಸಿ ಬರೆದಿರುವ ವಿಚಾರ ಪೂರ್ಣವಾದ ಲೇಖನ ಚೆನ್ನಾಗಿ ಬಂದಿದೆ

  6. ಶಂಕರಿ ಶರ್ಮ says:

    ಬಸವಣ್ಣನವರ ಮಡದಿಯರ ಕುರಿತ ವಿಸ್ತೃತ, ಸಂಗ್ರಹಯೋಗ್ಯ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: