ಅವಿಸ್ಮರಣೀಯ ಅಮೆರಿಕ – ಎಳೆ 46

Spread the love
Share Button

ಪ್ರೀತಿಯ ಓದುಗ ಬಂಧುಗಳೇ,

ಸುಮಾರು ಎಂಟು ತಿಂಗಳುಗಳ ಹಿಂದೆ ನಿಲ್ಲಿಸಲಾಗಿದ್ದ  ನನ್ನ  ‘ಅವಿಸ್ಮರಣೀಯ ಅಮೆರಿಕ` ಪ್ರವಾಸ ಲೇಖನದ ಮುಂದುವರಿದ ಭಾಗವನ್ನು ಪ್ರಕಟಿಸಲು, ನಮ್ಮೆಲ್ಲರ ನೆಚ್ಚಿನ ಸುರಹೊನ್ನೆ ಇ ಪತ್ರಿಕೆಯ ಸಂಪಾದಕಿ ಶ್ರೀಮತಿ ಹೇಮಮಾಲಾ ಅವರು ಪ್ರೀತಿಯಿಂದ ಒಪ್ಪಿಗೆ ನೀಡಿರುವರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸುರಹೊನ್ನೆ ಬಳಗದ ಸಹೃದಯೀ ಓದುಗ ಬಂಧುಗಳು  ಇದನ್ನು ಪ್ರೀತಿಯಿಂದ ಸ್ವೀಕರಿಸುವಿರಾಗಿ ನಂಬುವೆ.

ವಂದನೆಗಳು.
ಶಂಕರಿ ಶರ್ಮ, ಪುತ್ತೂರು.

ಅವಿಸ್ಮರಣೀಯ ಅಮೆರಿಕ – ಎಳೆ 45 ರಿಂದ ಮುಂದುವರಿದುದು……

ಕೃತಜ್ಞತೆ ಅರ್ಪಿಸುವ ದಿನ

ಜಗತ್ತಿನ ಅದ್ಭುತ ತಾಣಗಳಲ್ಲೊಂದಾದ ಲಾಸ್ ವೇಗಸ್ ನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕುತ್ತಲೇ ದಿನಗಳು ಸರಿದವು. ಆಗಲೇ ಅಮೆರಿಕ ಮತ್ತು ಕೆನಡದಲ್ಲಿ ಆಚರಿಸುವ ವಿಶೇಷವಾದ ಹಬ್ಬವೊಂದರ ಬಗ್ಗೆ ತಿಳಿಯಿತು. ..ಅದುವೇ, ಕೃತಜ್ಞತೆ ಅರ್ಪಿಸುವ ದಿನ (Thanks giving day). ಉತ್ತರ ಅಮೆರಿಕಕ್ಕೆ ಸಮುದ್ರ ಮಾರ್ಗದಲ್ಲಿ ಬಂದ ಯಾತ್ರಿಕರ ಗುಂಪೊಂದು, ಅಲ್ಲಿಯ ಪ್ಲೆಮೆತ್ ರಾಕ್ಸ್ (Plymouth Rocks) ಎಂಬ ಫಲಭರಿತ ಪ್ರದೇಶದಲ್ಲಿ ಬೀಡುಬಿಟ್ಟು, ಅಲ್ಲೇ ನೆಲೆಸಿ ತಮ್ಮ ಕೃಷಿ ಜೀವನವನ್ನು ಪ್ರಾರಂಭಿಸಿದರು. ಇದರಿಂದಾಗಿ ಪ್ಲೆಮೆತ್ ಎಂದೇ ಹೆಸರು ಪಡೆದ ಇವರು, 1621ನೇ ಇಸವಿಯ ನವೆಂಬರ್ ನಲ್ಲಿ, ತಮ್ಮ ಹೊಲಗಳಲ್ಲಿ ಕೊಯಿಲು ಮಾಡಿ ಧಾನ್ಯವನ್ನು ಪಡೆಯುವ ಸಮಯದಲ್ಲಿ, ಜನಸಾಮಾನ್ಯರು ತಮ್ಮ ಅನ್ನದಾತನಾದ ರೈತನಿಗೆ ಕೃತಜ್ಞತೆ ಅರ್ಪಿಸಿದರು ಹಾಗೂ ರೈತರು ತಮಗೆ ಕೈತುಂಬಾ ಧಾನ್ಯ ಒದಗಿಸಿದ ದೇವನಿಗೆ ಕೃತಜ್ಞತೆ ಅರ್ಪಿಸಿದರು. ಇದು ಒಂದು ಹಂತದಲ್ಲಿ ನಮ್ಮಲ್ಲಿಯ ಸುಗ್ಗಿ ಹಬ್ಬವನ್ನು ನೆನಪಿಸುತ್ತದೆ.  ಈ ದಿನ, ತಮ್ಮ ಅತ್ಮೀಯ ಬಂಧುಗಳು, ಸ್ನೇಹಿತರನ್ನೆಲ್ಲ ಮನೆಗೆ ಕರೆದು ಎಲ್ಲರೂ ಜೊತೆಗೂಡಿ ಔತಣದೂಟ ಉಣ್ಣುವುದು ರೂಢಿ. ಇದನ್ನು ಪ್ರತೀ ವರ್ಷ ನವೆಂಬರ್ ತಿಂಗಳಿನ ನಾಲ್ಕನೇ ಗುರುವಾರದ ದಿನದಂದು ರಾಷ್ಟ್ರೀಯ ವಾರ್ಷಿಕ ಹಬ್ಬವನ್ನಾಗಿ ಬಹಳ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

ಹಲ್ಲು ಯಕ್ಷಿಣಿ(Tooth Ferry)

ಈ ಮಧ್ಯೆ ಮೊಮ್ಮಗಳ ಹಾಲುಹಲ್ಲು(Milk Teeth) ಒಂದು ಕಳಚಿಬಿತ್ತು. ಅವಳಿಗೆ ಭಾರೀ ಖುಷಿ! ಅದನ್ನು ನಮಗೆ ತೋರಿಸಿ, ನಾಳೆ Tooth Fairy ಬಂದು ತನಗೆ ಹಣ ಕೊಡುವಳು ಎಂದು ಕುಣಿದದ್ದೇ ಕುಣಿದದ್ದು. ನನಗಂತೂ ಏನೆಂದೇ ಅರ್ಥವಾಗಲಿಲ್ಲ. ಆ ಬಳಿಕ ಅದರ ಕಥೆ ಕೇಳಿ ಆಶ್ಚರ್ಯ ಹಾಗೂ ನಗು ತಡೆಯಲಾಗಲಿಲ್ಲ. ಹಿಂದೆಯೆಲ್ಲಾ, ನಮ್ಮ ಸಂಪ್ರದಾಯ ಪ್ರಕಾರ, ಉದುರಿದ ಮಕ್ಕಳ ಎಳೆ ಹಲ್ಲನ್ನು ಮನೆಯ ಅಥವಾ ಹಟ್ಟಿಯ ಹಂಚು ಅಥವಾ ಹುಲ್ಲಿನ ಮೇಲ್ಚಾವಣಿಯ  ಮೇಲೆ ಬಿಸಾಕಿ, ಹೊಸದಾದ ಚಂದದ ಹಲ್ಲು ಬರಲೆಂದು ಪ್ರಾರ್ಥಿಸಿ ಮಕ್ಕಳನ್ನು ಖುಷಿಪಡಿಸುವುದು ರೂಢಿ. ಆದರೆ ಅಮೆರಿಕದಲ್ಲಿ ಇದಕ್ಕಾಗಿ ಒಂದು ಚಂದದ ಕಥೆಯನ್ನೇ ಹೆಣೆದಿದ್ದಾರೆ ನೋಡಿ!

ಹಿಂದಿನಕಾಲದಲ್ಲಿ ಹಲ್ಲು, ಕೂದಲು ಇತ್ಯಾದಿಗಳನ್ನು ಮಾಟಮಂತ್ರಗಳಲ್ಲಿ ಉಪಯೋಗಿಸುತ್ತಿದ್ದರೆಂಬ ನಂಬಿಕೆಯಿದೆ. ಇದರಿಂದಾಗಿ, ಉದುರಿದ ಪುಟ್ಟಮಕ್ಕಳ ಹಲ್ಲುಗಳು ಇಂತಹ ಕೆಟ್ಟ ಕೆಲಸಗಳಿಗೆ ಸಿಗದಂತೆ ನಾಶ ಪಡಿಸಿ, ಮಕ್ಕಳಿಗೂ ಖುಷಿ ನೀಡಲು ಹೂಡಿದ ತಂತ್ರವಿದು. ಉದುರಿದ ಹಲ್ಲನ್ನು ಮಗುವಿನ ತಲೆದಿಂಬಿನ ಕೆಳಗಡೆಗೆ ಇರಿಸಿದರೆ, ಮರುದಿನ ಬೆಳಗ್ಗೆ ಅವರು ಎದ್ದು ನೋಡಿದಾಗ ಅದು ನಾಣ್ಯವಾಗಿ ಬದಲಾವಣೆ ಹೊಂದುತ್ತದೆ! ಅದಕ್ಕಾಗಿ ರಾತ್ರಿ ಬರುವಳೊಬ್ಬಳು ವಿಶೇಷ ಯಕ್ಷಿ…ಅವಳೇ Tooth Fairy! ಇದನ್ನು ಮುಗ್ಧ ಮಕ್ಕಳು ನಿಜವೆಂದೇ ನಂಬಿರುತ್ತಾರೆ. ಆದ್ದರಿಂದ ಯಾವುದೇ ಮಗು ಕೂಡಾ ಹಲ್ಲು ಕೀಳಲು ಗಲಾಟೆ ಮಾಡುವುದಿಲ್ಲ. (ಇಲ್ಲಿ ಯಕ್ಷಿ ರೂಪದಲ್ಲಿ ದುಡ್ಡು ಇಡುವುದು ಮಗುವಿನ ಹೆತ್ತವರು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?) ಆದರೆ, ಇಲ್ಲಿ ನನ್ನ ಮೊಮ್ಮಗಳ ಕಳಚಿದ ಹಲ್ಲು ಎಲ್ಲೋ ಕಳೆದುಹೋಗಿ ಎಡವಟ್ಟಾಗಿಬಿಟ್ಟಿತು! ಇದರಿಂದಾಗಿ ಅವಳಿಗೆ ಯಕ್ಷಿಯಿಂದ ಸಿಗುವ ಹಣಕ್ಕೆ ಕುತ್ತು ಬಂದಂತಾಯಿತಲ್ಲವೇ? ದಿಂಬಿನ ಕೆಳಗಡೆಗೆ ಹಲ್ಲು ಇದ್ದರೆ ಮಾತ್ರ ದುಡ್ಡು ಸಿಗುವುದು ತಾನೇ? ಇದಕ್ಕಾಗಿ ಅವಳು ತುಂಬಾ ದು:ಖದಿಂದ ಗೋಳೋ ಎಂದು ಅಳತೊಡಗಿದಾಗ ನಾವೇ ಒಂದು ನಾಟಕವಾಡಬೇಕಾಯಿತು! ಯಕ್ಷಿಗೆ  ಎಲ್ಲವೂ ತಿಳಿಯುತ್ತದೆ… ಆದ್ದರಿಂದ ದಿಂಬಿನ ಕೆಳಗಡೆಗೆ ಹಲ್ಲು ಇಲ್ಲದಿದ್ದರೂ ಹಣವಿಟ್ಟು ಹೋಗುವಳು ಎಂದು ಸಮಾಧಾನಪಡಿಸಿ, ಮರುದಿನ ಅವಳಿಗೆ ಅದೇ ಜಾಗದಲ್ಲಿ ದುಡ್ಡು ಸಿಗುವಂತೆ ಮಾಡಿದಾಗ ಅವಳ ಸಂಭ್ರಮವನ್ನು ಏನೆಂದು ಹೇಳಲಿ?! ಇದೇ ಸಮಯದಲ್ಲಿ, ತನ್ನ ತಾತನು ಕಳಚಿ ಇಟ್ಟಿದ್ದ ಒಂದೆರಡು ಹಲ್ಲುಗಳ ಸೆಟ್ ನ್ನು ನೋಡಿಬಿಟ್ಟಳು. ಅವರಲ್ಲಿ ಪ್ರಶ್ನೆ… “ತಾತಾ, ಫೆರ್ರಿ ದಿನಾ ನಿಮಗೆ ದುಡ್ಡು ಕೊಡ್ತಾಳೆ ಅಲ್ವಾ.. ತುಂಬಾ ದುಡ್ಡು ಇದೆ ಅಲ್ವಾ ನಿಮ್ಮ ಬಳಿ?”… ನಾವೆಲ್ಲಾ ನಕ್ಕೂ ನಕ್ಕೂ ಸುಸ್ತು!

ಬಾತುಕೋಳಿಯ ಹಿಂದೆ…..

ನಾವಿದ್ದ ಮನೆಯ ಪ್ರದೇಶವು, ನಿರಾತಂಕವಾಗಿ ಒಬ್ಬಳೇ ವಾಕಿಂಗ್ ಹೋಗಲು  ಬಹಳ ಅನುಕೂಲವಾಗಿತ್ತು. ಹಾಗೆಯೇ ಒಮ್ಮೆ ವಾಕಿಂಗ್ ಹೋಗುವಾಗ ರಸ್ತೆಯ ಪಕ್ಕದಲ್ಲಿ ವಿಶೇಷವಾದ ಸೂಚನಾ ಫಲಕವೊಂದು ಗೋಚರಿಸಿತು. “ಬಾತುಕೋಳಿ ಅಡ್ಡ ದಾಟುವ ಸ್ಠಳ”(Duck crossing Zone). ಹಾಗೆಯೇ ಸೂಕ್ಷ್ಮವಾಗಿ ಗಮನಿಸಿದಾಗ, ಪ್ರತೀ ವಾಹನ ಚಾಲಕನೂ ಆ ಜಾಗದಲ್ಲಿ ತನ್ನ ವಾಹನವನ್ನು ನಿಧಾನಿಸಿ, ಸ್ವಲ್ಪ ನಿಲ್ಲಿಸಿ, ಮುಂದೆ ಹೋಗುವುದು ಕಾಣಿಸಿತು. ಸರಿ..ಎಷ್ಟು ಯೋಚಿಸಿದರೂ, ಯಾಕಾಗಿ ಈ ಫಲಕ  ಹಾಕಿದ್ದಾರೆಂದು ನನಗೆ  ತಿಳಿಯಲಿಲ್ಲ! “ಅದು ಹೌದು..ಇಂಥಹ ಜಾಗದಲ್ಲೇ ಬಾತುಕೋಳಿಗಳು ರಸ್ತೆ ದಾಟುವವೆಂದು ಇವರಿಗೆ ಹೇಗಪ್ಪಾ ತಿಳಿಯಿತು??!” ಎಂಬುದೇ ಯಕ್ಷಪ್ರಶ್ನೆಯಾಗಿತ್ತು ನನಗೆ. ಮಗಳಲ್ಲಿ ಏನೂ ಕೇಳದೆ (ನಾನೇನೂ ತಿಳಿಯದವಳೆಂದು ಬೆಪ್ಪಳಾಗಬಾರದಲ್ಲ), ನಾನೇ ಕಂಡು ಹಿಡಿಯುವೆನೆಂದು ಪತ್ತೇದಾರಿ ಕೆಲಸಕ್ಕಿಳಿದೆ. ದಿನಾ ಅಲ್ಲಿಗೇ ವಾಕಿಂಗ್ ಹೋಗಿ, ಯಾರಿಗೂ ಸಂಶಯ ಬಾರದಂತೆ ಸ್ವಲ್ಪ ಹೊತ್ತು ಅಲ್ಲೇ ಸುಳಿದಾಡುವುದೇ ನನ್ನ ದಿನಚರಿಯಾಯಿತು. ಕೈಯಲ್ಲಿರುವ ಕ್ಯಾಮೆರಾವನ್ನು ತಯಾರಾಗಿ ಇರಿಸಿದ್ದೆ.(ಆಗ ನನ್ನಲ್ಲಿ ಈಗಿನ ತರಹದ ಮೊಬೈಲ್ ಇರಲಿಲ್ಲ) ಹೀಗೇ ನಾಲ್ಕೈದು ದಿನ ಕಳೆದಾಗ ಅದ್ಭುತ ದೃಶ್ಯವೊಂದು ಕಣ್ಣಿಗೆ ಬಿತ್ತು!  ಆ ಫಲಕದ ಬಳಿಯಿಂದಲೇ, ರಸ್ತೆಯ ಒಂದು ಪಕ್ಕದಿಂದ ದೊಡ್ಡ ಬಾತುಕೋಳಿ(ಅಮ್ಮ?)ಯೊಂದರ ಮುಂದಿನಿಂದ ನಾಲ್ಕು ಮತ್ತು ಹಿಂದಿನಿಂದ ಐದು ಮರಿಗಳು ಶಿಸ್ತಿನ ಸಿಪಾಯಿಗಳಂತೆ ಗತ್ತಿನಿಂದ ಸಾಲಾಗಿ ರಸ್ತೆಯ ಇನ್ನೊಂದು ಪಕ್ಕಕ್ಕೆ ಪುಟು ಪುಟು ಎಂದು ನಡೆದು ಹೋದವು. ನಾನು ಅದನ್ನು ಖುಷಿಯಿಂದ ನೋಡುವುದರಲ್ಲೇ ಮಗ್ನಳಾಗಿದ್ದೆ… ತಕ್ಷಣ ನೆನಪಾಗಿ ಕ್ಯಾಮೆರಾ ಕೈಯಲ್ಲಿ ಹಿಡಿಯುವುದರೊಳಗೆ ಅವುಗಳು ರಸ್ತೆ ದಾಟಿಯಾಗಿತ್ತು. ಫೋಟೋ ತೆಗೆಯಲು ಆಗಲೇ ಇಲ್ಲ. “ಛೇ‌‌..ಎಂತಹ ಕೆಲಸವಾಯ್ತು!” ಎಂದು ಬಹಳ ಬೇಸರವಾಯ್ತು. ಮನೆಗೆ ಬಂದು ಮಗಳಲ್ಲಿ ವಿಷಯ ತಿಳಿಸಿದಾಗ ಅವಳು ಜೋರಾಗಿ ನಗಬೇಕೇ? ಪೆಚ್ಚಾಗಿ ಏನೆಂದು ಕೇಳಿದಾಗ ತಿಳಿಯಿತು; ಆ ಜಾಗದಲ್ಲಿ ಎರಡೂ ಕಡೆಗಳಲ್ಲೂ ದೊಡ್ಡ ಕೊಳಗಳಿದ್ದುವು. ಅಲ್ಲಿ ಎರಡೂ ಕಡೆಗಳಲ್ಲೂ ತುಂಬಾ ಬಾತುಕೋಳಿಗಳ ಸಂಸಾರ. ಆತ್ತಿಂದಿತ್ತ, ಇತ್ತಿಂದತ್ತ ಸಂಸಾರ ಸಮೇತ ಅವುಗಳ  ವಾಕಿಂಗ್… ನಮ್ಮ ಹಾಗೆ. ಈಗ ವಿಷಯವೇನೆಂದು ನಿಮಗೂ ತಿಳಿಯಿತಲ್ಲಾ..?

ಉಚಿತ ಗ್ರಂಥಾಲಯ

ನಾವಿದ್ದ ಮನೆಯಿಂದ ಮೊಮ್ಮಗಳ ಶಾಲೆಗೆ ಹೆಚ್ಚೇನೂ ದೂರವಿಲ್ಲದಿದ್ದರೂ, ನಡುವೆ ಸಿಗುವಂತಹ ದೊಡ್ಡದಾದ ಹೈವೇ ನನ್ನನ್ನು ಅಧೀರಳನ್ನಾಗಿಸುವುದಂತೂ ನಿಜ. ಐದಾರು ಲೇನ್ ಗಳಲ್ಲಿ ರಾಮಬಾಣದಂತೆ ಅತೀ ವೇಗವಾಗಿ, ರಪ ರಪನೆ ಚಲಿಸುವ ನೂರಾರು ಕಾರುಗಳನ್ನು ನೋಡುವಾಗ, ಖುಷಿಯಾಗುವ  ಬದಲು ನನಗೆ ಬಹಳ ಹೆದರಿಕೆಯಾಗುತ್ತಿತ್ತು! ಸಿಗ್ನಲ್ ಬಂದಾಗ ಆ ಕಾರುಗಳು ಗಕ್ಕೆಂದು ನಿಂತರೂ, ನಡೆದಾಡುವವರಿಗಾಗಿ ರಸ್ತೆ ಮಧ್ಯ ಭಾಗದಲ್ಲಿ ಇರುವ ಸಿಗ್ನಲ್ ಬಟನ್ ಒತ್ತಿ ಕಾಯುವ ಕೆಲಸವೂ ನನ್ನ ಮನಸ್ಸಿಗೆ ಅಷ್ಟೇನೂ ಹಿತಕಾರಿಯಾಗಿರಲಿಲ್ಲ.  ರಸ್ತೆ  ದಾಟುವಾಗಲೂ, ಅವುಗಳೆಲ್ಲಾ ನನ್ನ ಮೈ ಮೇಲೆಯೇ ಬಂದಂತೆನಿಸಿ ಗಾಬರಿಯಲ್ಲಿ ಬಹಳ ವೇಗವಾಗಿಯೇ  ದಾಟುತ್ತಿದ್ದೆ. ಹೈವೇ ಅಲ್ಲದೆ, ಬೇರೆ ರಸ್ತೆಗಳಲ್ಲಿ ಏನೂ ಹೆದರಿಕೆಯಿರಲಿಲ್ಲವೆನ್ನಿ. 

ಒಮ್ಮೆ ಮೊಮ್ಮಗಳಿಗೆ ರಜೆ ಇದ್ದ ದಿನ, ನಾವಿಬ್ಬರೂ ಅವಳ ಶಾಲೆ ಇರುವ ದಿಕ್ಕಿನಲ್ಲಿ ವಾಕಿಂಗ್ ಹೊರಟೆವು. ನಡುವೆ ಸಿಕ್ಕಿದ ಹೈವೇಯನ್ನು ಸ್ವಲ್ಪ ಹೆದರಿಕೆಯಿಂದಲೇ ದಾಟಿಯಾಯಿತು. ಒಂದು ಕಡೆ ರಸ್ತೆ ಬದಿಯಲ್ಲಿ, ಪಾದಾಚಾರಿಗಳಿಗಾಗಿರುವ ಕಾಲುದಾರಿಯಲ್ಲಿ, ನಮ್ಮೂರಲ್ಲಿ ಜೇನು ಪೆಟ್ಟಿಗೆ ಇಡುವಂತಹ ಕಂಬದ ಮೇಲೆ ಸಣ್ಣ ಕಪಾಟಿನಂತಹ ಗಾಜಿನ ಪೆಟ್ಟಿಗೆ ಇಟ್ಟಿರುವುದು ಕಾಣಿಸಿತು. ಅದರ ಮೇಲೆ Little Free Library.com, Take a book. Return a book ಎಂದು ಬರೆದಿತ್ತು. ಸರಿಯಾಗಿ ಗಮನಿಸಿದಾಗ ಅದರೊಳಗೆ ಕೆಲವು ಪುಸ್ತಕಗಳಿದ್ದುವು ಮತ್ತು ಆ ಪೆಟ್ಟಿಗೆಗೆ ಬೀಗವೂ ಜಡಿದಿರಲಿಲ್ಲ. ಕುತೂಹಲದಿಂದ  ಬಾಗಿಲು ತೆರೆದು ನೋಡಿದರೆ ಅದರ ತುಂಬಾ ಪುಸ್ತಕಗಳು! ಆಶ್ಚರ್ಯದಿಂದ ಮೊಮ್ಮಗಳಲ್ಲಿ ಕೇಳಿದಾಗ ತಿಳಿಯಿತು.. ಅದೊಂದು ಉಚಿತವಾದ ಪುಟ್ಟ ಗ್ರಂಥಾಲಯವಾಗಿತ್ತು.  ಅದರಲ್ಲಿರುವ ಪುಸ್ತಕಗಳನ್ನು ಉಚಿತವಾಗಿ ತೆಗೆದುಕೊಂಡು ಬೇಕಾದವರು ಉಪಯೋಗಿಸಬಹುದಾಗಿತ್ತು. ಹಾಗೆಯೇ ಅವರಲ್ಲಿರುವ ಪುಸ್ತಕಗಳನ್ನು ಇತರರ ಉಪಯೋಗಕ್ಕೆ ಅಲ್ಲಿರಿಸಬಹುದಿತ್ತು. ಇಲ್ಲಿ ಯಾರೂ ಪುಸ್ತಕಗಳನ್ನು ಕದಿಯುವುದಿಲ್ಲ. ನಿಜವಾಗಿಯೂ ಎಂತಹ ಒಳ್ಳೆಯ ಉದಾತ್ತ ವ್ಯವಸ್ಥೆಯೆನ್ನಿಸಿತು. ಕೆಲವು ದಿನಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಇಂತಹದೇ ಉಚಿತ ಗ್ರಂಥಾಲಯಗಳು ರಸ್ತೆ ಬದಿಗಳಲ್ಲಿ ಕಂಡುಬಂದುವು. ನಮ್ಮಲ್ಲಿಯೂ ಇಂತಹ ವ್ಯವಸ್ಥೆಯನ್ನು ರೂಪಿಸುವ ಅನುಕೂಲತೆ ಇದ್ದರೆ ಎಷ್ಟು ಒಳ್ಳೆಯದೆನಿಸುತ್ತದೆ…ಅಲ್ಲವೇ?

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36630

-ಶಂಕರಿ ಶರ್ಮ, ಪುತ್ತೂರು.        

9 Responses

 1. Hema says:

  ಎಂದಿನಂತೆ ಚೆಂದದ ಬರಹ, ಪುನ: ನಿಮ್ಮ ಬರಹಗಳ ಮೂಲಕ ‘ಉಚಿತ ಅಮೇರಿಕಾ ಪ್ರವಾಸ’ಕ್ಕೆ ನಾನಂತೂ ಸಿದ್ಧ.

  • ಶಂಕರಿ ಶರ್ಮ says:

   ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಪ್ರವಾಸ ಕಥನ ಮತ್ತೆ ಮುಂದುವರಿಯುತ್ತಿರುವುದು ಸಂತಸದ ವಿಚಾರ.

 3. ವಾವ್… ಮತ್ತೆ ಬಂದಿರಾ ಮೇಡಂ ನಮ್ಮ ನ್ನು ಅಮೇರಿಕಾ ಕ್ಕೆ ನಿಮ್ಮೊಡನೆ ನಮ್ಮ ನ್ನು..ಕರೆದೊಯ್ಯಲು..ಓದುತ್ತಾ ಸಾಗೋಣ ಸ್ವಾಗತ ನಿಮ್ಮ ಬರಹಕ್ಕೆ..

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು…ನಾಗರತ್ನ ಮೇಡಂ.

 4. Padma Anand says:

  ಪುನಃರಾರಂಭಗೊಂಡದ್ದು ತುಂಬಾ ಸಂತಸ ತಂದಿದೆ. ಎಂದಿನಂತೆ ಆಸಕ್ತಿದಾಯಕ ವಿಷಯಗಳನ್ನೊಳಗೊಂಡು ಮುದ ನೀಡಿತು.

  • ಶಂಕರಿ ಶರ್ಮ says:

   ತಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯ ನಮನಗಳು ಪದ್ಮಾ ಮೇಡಂ.

 5. ಚಂದದ ಅನುಭವ ಕಥನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: