ಅವಿಸ್ಮರಣೀಯ ಅಮೆರಿಕ-ಎಳೆ 45
ಜೂಜುಕಟ್ಟೆಯಿಂದ ಮನೆಗೆ….!!
ಜೀವಮಾನದಲ್ಲಿ ಸಾಧ್ಯವಾಗಬಹುದೆಂದು ಎಂದೂ ಅಂದುಕೊಂಡಿರದಂತಹ ಅತ್ಯದ್ಭುತ ಪ್ರದರ್ಶನವನ್ನು ಕಣ್ತುಂಬ ವೀಕ್ಷಿಸಿ, ಮನತುಂಬ ತುಂಬಿಕೊಂಡು ಹೊರಬಂದಾಗ ರಾತ್ರಿ ಗಂಟೆ ಎಂಟು. ಊಟಕ್ಕಾಗಿ ಅಲ್ಲೇ ಪಕ್ಕದಲ್ಲಿರುವ ಮೆಕ್ಸಿಕನ್ ಹೋಟೆಲ್ ಒಳಗೆ ನುಗ್ಗಿದೆವು. ಅದೊಂದು, ಪೂರ್ತಿ ಬಡಹಳ್ಳಿಯ ವಾತಾವರಣವನ್ನು ಸೃಷ್ಟಿಸಲಾಗಿದ್ದ ವಿಶೇಷ ರೀತಿಯ ಹೋಟೇಲಾಗಿತ್ತು! ನಮ್ಮಲ್ಲಿ ನಿಜವಾದ ಬಡತನದಿಂದಲೇ ಇಂತಹವುಗಳು ಇರುವವಾದರೆ, ಇಲ್ಲಿ ಶ್ರೀಮಂತ ಪ್ರವಾಸಿಗರನ್ನು ಸೆಳೆಯಲೋಸುಗ ಇಂತಹ ಉಪಾಯಗಳನ್ನು ಮಾಡುತ್ತಾರೆ. ಛಾವಣಿಯಲ್ಲಿ ತೂತಾದ ಹಳೆಯ ತೆಳು ತಗಡಿನ ಶೀಟುಗಳು, ಗೆದ್ದಲು ತಿಂದ ತೊಲೆಗಳು, ಹಳತಾದ ಬಿದಿರಿನ ಕೋಲುಗಳು ನೇತಾಡುತ್ತಿದ್ದು, ಯಾವುದು ಯಾವಾಗ ನಮ್ಮ ಮೈಮೇಲೆ ಬಿದ್ದುಬಿಡುವವೋ ಎಂದು ಭಯವಾಗುವಂತಿದ್ದವು! ಅಕ್ಕ ಪಕ್ಕಗಳಲ್ಲಿ ಗೋಡೆಯ ಬದಲಿಗೆ, ಹರಿದು ಚಿಂದಿಯಾದ ಕೊಳಕು ಬಟ್ಟೆಗಳು ಕಣ್ಣುಗಳಿಗೆ ರಾಚುವಂತಿದ್ದವು. ಅದರೊಂದಿಗೆ, ಇತರ ಕಡೆಗಳಲ್ಲಿದ್ದ ಗೋಡೆಗಳ ಇಟ್ಟಿಗೆಗಳನ್ನು ಅಲ್ಲಲ್ಲಿ ತೆಗೆದು, ಅದು ಅಸಹ್ಯಕರವಾಗಿ ಕಾಣುವಂತೆ ಮಾಡಲಾಗಿತ್ತು! ಮೇಲ್ಗಡೆಯಲ್ಲಿ ದಪ್ಪಕ್ಕೆ ನೇತಾಡುವ ಜೇಡರ ಬಲೆ, ಮುರಿದಂತೆ ಕಾಣುವ ಕುರ್ಚಿ, ಮೇಜುಗಳು…ಅಬ್ಬಬ್ಬಾ.. ಅಂತೂ ಅದು ಹೋಟೇಲ್ ಅನ್ನಿಸದೆ ನಮ್ಮಲ್ಲಿಯ ಭಿಕ್ಷುಕರ ಜೋಪಡಿಯಂತೆ ಕಾಣುತ್ತಿತ್ತು. ಆದರೆ ಒಳಗಡೆ ವಿಶಾಲವಾದ ಹಜಾರದಲ್ಲಿ ಇರಿಸಿದ ಕುರ್ಚಿ ಮೇಜುಗಳು, ತುಂಬಿ ತುಳುಕುತ್ತಿದ್ದ ಗಿರಾಕಿಗಳು ಹೋಟೇಲ್ ಇರವನ್ನು ಸಾರಿದ್ದವು…ಅಷ್ಟೆ! ಮಬ್ಬುಗತ್ತಲಲ್ಲಿ, ನಡೆದಾಡಲು ನೆಲವೇ ಸರಿಯಾಗಿ ಕಾಣದು. ಒಬ್ಬರ ಮುಖ ಒಬ್ಬರಿಗೆ ಸರಿಯಾಗಿ ಗೋಚರಿಸದಷ್ಟು ಮಂದವಾಗಿದ್ದ ಬೆಳಕಲ್ಲಿ ಮುಗ್ಗರಿಸದಂತೆ ತಡಕಾಡಿಕೊಂಡೇ ಹೋಗಬೇಕಾಯ್ತು! ಇಷ್ಟೆಲ್ಲಾ ಅಧ್ವಾನಗಳಿದ್ದರೂ ಊಟದ ಮೇಜಿನಲ್ಲಿ ಶುಚಿತ್ವಕ್ಕೆ ಏನೂ ಕೊರತೆಯಿರಲಿಲ್ಲ. ಎಲ್ಲಾ ಕೆಲಸಗಳಿಗೂ ಮಹಿಳೆಯರೇ ಓಡಾಡುತ್ತಿದ್ದರು. ನಾನು ಯಥಾಪ್ರಕಾರ ಬೆಣ್ಣೆ ಹಣ್ಣಿನ ಸಲಾಡ್ ಮತ್ತು ಚಿಪ್ಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡೆ. ಅಲ್ಲಿಯ ಇನ್ನೊಂದು ವಿಶೇಷವೆಂದರೆ; ಎರಡು ಅಡಿಗಳಷ್ಟು ಎತ್ತರದ ಲೋಟದಲ್ಲಿರುವ ಹಣ್ಣಿನ ಪಾನೀಯವನ್ನು ಕುಡಿಯಲು, ಅದಕ್ಕಿಂತಲೂ ಉದ್ದದ ಹೀರುಗೊಳವೆ… ನಾನಂತೂ ಅಚ್ಚರಿಯಲ್ಲಿ ಮುಳುಗೆದ್ದೆ!
ನಮ್ಮ ಹೊಟ್ಟೆ ತುಂಬಿತೇನೋ ನಿಜ…ಆದರೆ ನಮ್ಮ ಪುಟ್ಟ ಕಂದನು ಅದ್ಯಾವುದೋ ಕಾರಣಕ್ಕೆ ಅಳಲು ಪ್ರಾರಂಭಿಸಿದ… ನಿದ್ದೆ ಅಥವಾ ಹಸಿವು ಇದ್ದಿರಬಹುದೇನೋ. ಅದಾಗಲೇ ರಾತ್ರಿ ಗಂಟೆ ಹತ್ತು…ಈ ಸಲ ನಾವು ವಾಹನ ಬಿಟ್ಟು ನಡೆದೇ ಬಂದಿದ್ದುದರಿಂದ, ನಡೆದುಕೊಂಡೇ ಹಿಂತಿರುಗಬೇಕಿತ್ತು. ಅಳಿಯ ನಮ್ಮನ್ನು ಬರಲು ಹೇಳಿ, ಮೊದಲು ವಾಹನವನ್ನು ನಿಲ್ಲಿಸಿದ ಸ್ಥಳಕ್ಕೆ ಹೋದ…ಅದನ್ನು ಹಿಂದಕ್ಕೆ ಒಯ್ಯಲು. ನಾವು ಮೂರು ಮಂದಿ ದೊಡ್ಡವರು ಇಬ್ಬರು ಮಕ್ಕಳೊಂದಿಗೆ, ಅದರಲ್ಲೂ, ಅಳುವ ಮಗುವಿನೊಂದಿಗೆ ನಮ್ಮ ವಸತಿಗೃಹಕ್ಕೆ ಹಿಂತಿರುಗಲು ಸಜ್ಜಾದೆವು. ನಾವು ಬರುವಾಗ ಹಗಲು ಬೆಳಕಿತ್ತು…ಆದರೆ ಹಿಂತಿರುಗುವಾಗ ಈ ಮಂದಬೆಳಕಿನಲ್ಲಿ ದಾರಿತಪ್ಪುವ ಸಂಭವವೂ ಇತ್ತು. ಮೊಂಡುಧೈರ್ಯದಲ್ಲಿ, ಅಳುವ ಮಗುವನ್ನು ಅವನ ತಳ್ಳುಗಾಡಿಯಲ್ಲಿ ಮಲಗಿಸಿ ತಳ್ಳುತ್ತಾ ಅರ್ಧಗಂಟೆ ನಡೆದರೂ, ನಾವು ರಸ್ತೆ ದಾಟಬೇಕಾಗಿದ್ದ ಮೇಲ್ಸೇತುವೆಯು ಕಾಣಿಸಲೇ ಇಲ್ಲ! ಮಗುವನ್ನು ಹೊಟ್ಟೆ ತುಂಬಿಸಿ ಸಮಾಧಾನ ಮಾಡೋಣವೆಂದರೆ ಎಲ್ಲೆಂದರಲ್ಲಿ ಕೂಡುವ ಹಾಗೂ ಇರಲಿಲ್ಲ. ಆದ್ದರಿಂದ ಕಾಲುದಾರಿಯ ಪಕ್ಕದಲ್ಲಿದ್ದ ಒಂದು ಕ್ಯಾಸಿನೋದ ಒಳಗೆ ನುಗ್ಗಿ ಯಾರ ಪರವಾನಿಗಿಯನ್ನೂ ಲೆಕ್ಕಿಸದೆ ಅಲ್ಲಿರುವ ಒಂದು ಸೋಫದ ಮೇಲೆ ಕುಳಿತು ಅವನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯಿತು…ಆದರೆ ಪ್ರಯೋಜನ ಮಾತ್ರ ಶೂನ್ಯ! ನಮಗಂತೂ ದಿಕ್ಕೇ ತೋಚದ ಪರಿಸ್ಥಿತಿ! ಸಮಯ ನಿಲ್ಲುವುದೇ…ರಾತ್ರಿ ಗಂಟೆ 11:30. ನಮಗಂತೂ ನಡೆದೂ ನಡೆದೂ ಕಾಲುನೋವು, ಸುಸ್ತು..ಜೊತೆಗೆ ಆತಂಕ ಬೇರೆ! ನಮ್ಮ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತೆಂದು ಬೇರೆ ಹೇಳಬೇಕಾಗಿಲ್ಲ! ನಾವು ನಡೆಯುತ್ತಿದ್ದಲ್ಲಿಗೆ ರಸ್ತೆಯ ಇನ್ನೊಂದು ಪಕ್ಕದಲ್ಲಿ ಎದುರುಗಡೆಯಲ್ಲಿಯೇ, ನಮ್ಮ ಹೋಟೇಲಿನ ಬಹುಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ಅದರ ಹೆಸರು Polo Towers ರಾರಾಜಿಸುತ್ತಾ ನಮ್ಮ ಹೊಟ್ಟೆ ಉರಿಸುತ್ತಿತ್ತು. ಮರುಭೂಮಿಯ ಮರೀಚಿಕೆಯಂತೆ, ಇನ್ನೂ ಅಲ್ಲಿಗೆ ತಲಪುವ ಮೇಲ್ಸೇತುವೆ ಕಾಣಸಿಗಲೇ ಇಲ್ಲ! ಅಂತೂ, ಎದುರುಗಡೆ ಸಿಕ್ಕಿದ ಎಲ್ಲರಲ್ಲೂ ದಾರಿ ಕೇಳುತ್ತಾ ಒಂದು ಕಡೆಯಲ್ಲಿ ಮೇಲ್ಸೇತುವೆ ಸಿಕ್ಕಿದಾಗ ಬದುಕಿದೆಯಾ ಬಡಜೀವವೇ ಎಂದುಕೊಂಡು ಅದರ ಮೇಲೇರಿ ರಸ್ತೆ ದಾಟಿದಾಗ ತಿಳಿಯಿತು.. ನಾವು ತುಂಬಾ ಮುಂದಕ್ಕೆ ಬಂದು ಬಿಟ್ಟಿದ್ದೆವು! ನಮ್ಮಲ್ಲಿಯ ಜಾತ್ರೆಯಂತೆ, ಅಲ್ಲಿದ್ದ ದಟ್ಟ ಜನಜಂಗುಳಿಗಳ ಮಧ್ಯೆ ಹೇಗಾದರೂ ನುಸುಳಿಕೊಂಡು ಹೋಗಿ ನಮ್ಮ ಹೋಟೇಲ್ ತಲಪಿದಾಗ ರಾತ್ರಿ 12:30…ಅದಾಗಲೇ ದಿನದ ತಾರೀಕು ಬದಲಾಗಿ ಬಿಟ್ಟಿತ್ತು! ಅಬ್ಬಬ್ಬಾ… ಆ ಕ್ಷಣಗಳನ್ನು ನೆನಪಿಸಿಕೊಂಡರೆ ಈಗಲೂ ಮೈಜುಂ ಎನ್ನುತ್ತಿದೆ! ಸುತ್ತಿ ಸುತ್ತಿ ಸಾಕಾಗಿದ್ದ ನಾವು ಮಗುವನ್ನು ನಿದ್ದೆ ಮಾಡಿಸಿ ನಾವು ಮಲಗುವಾಗ ಬೆಳಗಿನ ಎರಡು ಗಂಟೆ!
ನಮ್ಮ ಯೋಜನೆಯಂತೆ ಮರುದಿನ ಬೆಳ್ಳಂಬೆಳಗ್ಗೆಯೇ ಹೊರಟು, ಅಲ್ಲಿಂದ ಸುಮಾರು 100ಮೈಲು ದೂರವಿರುವ, ಬರುವಾಗ ರಾತ್ರಿಯಾದ್ದರಿಂದ ನೋಡಲಾಗದಿದ್ದ ಜಗತ್ಪ್ರಸಿದ್ಧ ಹೂವರ್ ಅಣೆಕಟ್ಟನ್ನು ನೋಡಲು ಹೋಗುವುದಿತ್ತು. ಆದರೆ ಹಿಂದಿನ ದಿನದ ಆಯಾಸದಿಂದಾಗಿ ಬೆಳಗ್ಗೆ ಏಳುವಾಗಲೇ ಬಹಳ ತಡವಾಗಿಬಿಟ್ಟಿತ್ತು…ಹಾಗೆಯೇ ನಮ್ಮ ಯೋಜನೆಯೂ ಗಾಳಿಯಲ್ಲಿ ತೇಲಿ ಹೋದುದು ಮಾತ್ರ ನನಗೆ ಈಗಲೂ ಬೇಸರವಿದೆ… ಛೆ!…ಅವಕಾಶವೊಂದು ತಪ್ಪಿತಲ್ಲಾ ಎಂದು. ಆದರೂ ಸಿಕ್ಕಿದ ಸಮಯದಲ್ಲಿ ಪುನ: ನಗರ ಸುತ್ತಲು ತಯಾರಾದೆವು. ಬೆಳಗ್ಗಿನ ತಿಂಡಿಗೆ ನಮ್ಮೊಡನಿದ್ದ MTR ಮಿತ್ರನ ಸಹಾಯದಿಂದ ರುಚಿಯಾದ ಪೊಂಗಲ್ ಕ್ಷಣಮಾತ್ರದಲ್ಲಿ ಸಿದ್ಧವಾಯ್ತು. ಮುಂದಕ್ಕೆ, ಅಲ್ಲಿಯ ಪ್ರಸಿದ್ಧ ಮತ್ಸ್ಯಾಗಾರಕ್ಕೆ ಭೇಟಿ ನೀಡಲು ಹೊರಟೆವು. ಅಲ್ಲಿಗೆ ತಲಪಿದಾಗ ಜನಸಂದಣಿ ಹೆಚ್ಚೇನೂ ಇರದಿದ್ದರೂ ಅದರ ಅತೀ ಹೆಚ್ಚಿನ ಪ್ರವೇಶ ದರ ಮಾತ್ರ ಅದರ ಬಳಿ ಸುಳಿಯದಂತೆ ಮಾಡಿದ್ದು ಸುಳ್ಳಲ್ಲ. ಈ ಮೊದಲೇ ಬಹು ದೊಡ್ಡದಾದ ಮತ್ಸ್ಯಾಗಾರವನ್ನು ಮೊಂಟೆಸರಿಯಲ್ಲಿ ವೀಕ್ಷಿಸಿಯಾದ್ದರಿಂದ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವೆನ್ನಿ. (ಕೈಗೆಟಕದ ದ್ರಾಕ್ಷಿ ಹುಳಿಯಲ್ಲವೇ!!?)
ಹಾಗೆಯೇ ಅಲ್ಲಿಂದ ಹಿಂತಿರುಗುತ್ತಾ ಕೆಳಗಡೆ ನೋಡುವಾಗ ವಿಚಿತ್ರ ದೃಶ್ಯವೊಂದು ಕಾಣಿಸಿತು! ಸುತ್ತಲೂ ಬಹುಮಹಡಿ ಕಟ್ಟಡಗಳು… ಅವುಗಳ ಮಧ್ಯಭಾಗದಲ್ಲಿ, ಅನತಿ ದೂರದಲ್ಲಿ ಸಮುದ್ರಘೋಷ! ರಭಸದಿಂದ ಅಲೆಗಳು ಅರ್ಧವೃತ್ತಾಕಾರದಲ್ಲಿರುವ ಮರಳದಂಡೆಗೆ ಬಂದು ಅಪ್ಪಳಿಸುವುದು ಕಾಣುತ್ತಿದೆ. ನೂರಾರು ಮಂದಿ ಈಜುಡುಗೆಯಲ್ಲಿ, ಮರಳಿನ ಮೇಲೆ ಮತ್ತು ಅಲ್ಲಿಯೇ ಹರಡಿದ್ದ ಉದ್ದನೆಯ ಕುರ್ಚಿಮೇಲೆ ಮಲಗಿದ್ದರು. ಮಕ್ಕಳು ನೀರಲ್ಲಿ, ಮರಳಲ್ಲಿ ಆಟವಾಡುತ್ತಾ ಆನಂದಿಸುತ್ತಿದ್ದರು. ಇದೇನು… ಕಟ್ಟಡಗಳ ನಡುವೆ ಭೋರ್ಗರೆವ ಸಮುದ್ರ ಎಂದು ಒಮ್ಮೆಲೇ ಅರ್ಥವಾಗಲಿಲ್ಲ! ಮಾನವ ನಿರ್ಮಿತ ಸಮುದ್ರವು ನಿಜವಾದ ಸಾಗರಕ್ಕೆ ಸಡ್ಡು ಹೊಡೆಯುವಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು! ನಾವು ಅದನ್ನು ಮೇಲಿನಿಂದಲೇ ನೋಡಿ ತೃಪ್ತಿಪಟ್ಟೆವು. ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ…ನಾವೇ ತಯಾರಿಸಿ ತಂದ ಮೊಸರನ್ನದ ಜೊತೆಗೆ ಉಪ್ಪಿನಕಾಯಿಯ ರಸಗವಳ ಹೊಟ್ಟೆಗಿಳಿದಾಗ, ಮೃಷ್ಟಾನ್ನ ತಿಂದರೂ ಸಿಗದ ಮಹದಾನಂದ…ನನಗೆ! ನಾವು ಅಲ್ಲೇ ಸುತ್ತಾಡುತ್ತಾ, ಫಿರಮಿಡ್ ಆಕೃತಿಯ ಕಟ್ಟಡದೊಳಗೆ ನೆಲಮಟ್ಟದಲ್ಲಿರುವ ವೈಭವವನ್ನು ಕಣ್ತುಂಬಿಕೊಂಡೆವು. ಅಲ್ಲಿ , ನಾಲ್ಕು ಅಂತಸ್ತಿನಷ್ಟು ಎತ್ತರಕ್ಕೆ ಗೋಪುರಾಕೃತಿಯಲ್ಲಿ ಸಂಗ್ರಹಿಸಿಡಲಾದ ಬೀರು ಬಾಟಲಿಗಳನ್ನು ನೋಡಿಯೇ ನನಗೆ ತಲೆಸುತ್ತು ಬಂತು! ನರ್ತಿಸುವ ಕಾರಂಜಿಯನ್ನು ಇನ್ನೊಮ್ಮೆ ಕಣ್ತುಂಬಿಕೊಂಡು, ಅಲ್ಲಿಂದ ಮುಂದಕ್ಕೆ, ಅಲ್ಲಿಯ ಅತ್ಯಂತ ಪ್ರಮುಖ ವಿಭಾಗಕ್ಕೆ, ನಮ್ಮ ಹೊಸ ಅನುಭವಕ್ಕಾಗಿ ಅಳಿಯ ಕರೆದೊಯ್ದ… ಅದೇ ಜೂಜುಕಟ್ಟೆ!
ಹೊರಗಡೆಗೆ ಎಲ್ಲವೂ ಎಷ್ಟು ಚೆನ್ನಾಗಿವೆಯೋ, ಒಳಗಡೆಗೆ ಹೋದಾಗ ಅದರ ವಿರುದ್ಧವಾದ ವಾತಾವರಣ ಗೋಚರಿಸುತ್ತದೆ… ಹೊರ ಜಗತ್ತಿಗೆ ಸಂಬಂಧವೇ ಇಲ್ಲದಂತೆ! ಗಂಡು ಹೆಣ್ಣುಗಳ ಭೇದವಿಲ್ಲದೆ, ಎಲ್ಲರ ಪಕ್ಕದಲ್ಲೂ ತುಂಬಿದ ಪಾನೀಯದ ಬಾಟಲ್, ಕೈಯಲ್ಲಿ ಗ್ಲಾಸ್…ನಿರಂತರ ಮದಿರೆಯ ಸೇವನೆ ನಡೆಯುತ್ತಿರುತ್ತದೆ. ಜೊತೆಗೇ ಜೂಜಾಡುತ್ತಿರುವವರಿಗೆ ಇಹಲೋಕದ ಪರಿವೆಯೇ ಇದ್ದಂತಿಲ್ಲ…ಹಣ ಕಳಕೊಂಡವರ ಚಿಂತಾಕ್ರಾಂತ ಮುಖ, ಅದೃಷ್ಟ ಖುಲಾಯಿಸಿದವರ ಆನಂದದ ಕೇಕೇ ಗದ್ದಲಗಳು ಅಲ್ಲಿ ಪೂರ್ತಿ ತುಂಬಿದ್ದವು. ಇವುಗಳೊಂದಿಗೆ ಪ್ರತಿಯೊಬ್ಬರೂ ಧೂಮಪಾನ ನಿರತರು! ಪೂರ್ತಿ ಜೂಜುಕೇಂದ್ರವೇ ಅದರ ಮಬ್ಬು ಹೊಗೆ ಹಾಗೂ ದುರ್ಗಂಧದಿಂದ ತುಂಬಿ, ಉಸಿರುಕಟ್ಟಿಸಿತು. ಒಳಗೆ ಹೋದ ನನಗೆ, ತಕ್ಷಣ ಹೊರಗೋಡಿ ಬರಲು ಮನವಾದರೂ, ಕುತೂಹಲ ತಣಿಸಲಿರುವ ಅವಕಾಶವನ್ನು ಬಳಸಲೋಸುಗ ತಡೆದೆನೆನ್ನಿ. ಪುಟ್ಟ ಮಕ್ಕಳಿಗೆ ಪ್ರವೇಶ ನಿಷಿದ್ಧವಿರುವುದರಿಂದ ಮಗಳು ತನ್ನ ಮಕ್ಕಳೊಡನೆ ಒಳಗೆ ಬರಲಿಲ್ಲ. ಇಲ್ಲಿ ಅಳಿಯ ನಮ್ಮ ಮಾರ್ಗದರ್ಶಕನಾಗಿ ನಿಂತ.
ಇಲ್ಲಿರುವ ನೂರಾರು ಯಂತ್ರಗಳು ಸುಮಾರು ಒಂದೇ ತೆರನಾಗಿವೆ ಎನ್ನಬಹುದು. ಜೂಜು ಯಂತ್ರದಲ್ಲಿರುವ ಪರದೆಯ ಮೇಲೆ ಮೂರ್ನಾಲ್ಕು ಸಾಲುಗಳಲ್ಲಿರುವ ಬಹುವರ್ಣಗಳ ವಿವಿಧ ಚಿತ್ರಗಳನ್ನು ಸಮನಾಗಿ, ಒಂದೇ ತರಹ ಬರುವಂತೆ ಜೋಡಿಸಬೇಕು. ಕಡಿಮೆ ಎಂದರೆ ಒಂದು ಸೆಂಟ್ (ಒಂದು ಡಾಲರ್ ಅಂದರೆ ನೂರು ಸೆಂಟ್ಸ್) ಹಣವನ್ನು ಹೂಡಿ ಆಡಬಹುದು. ಯಂತ್ರದ ಪಕ್ಕದಲ್ಲಿರುವ ರಂಧ್ರದಲ್ಲಿ ಹಣವನ್ನು ಹಾಕಿ, ಇನ್ನೊಂದು ಪಕ್ಕದಲ್ಲಿರುವ ಕೈಹಿಡಿಕೆಯನ್ನು ಎಳೆಯಬೇಕು. ಆಗ ಚಿತ್ರಗಳು ಸರಿಯಾಗಿ ಜೋಡಣೆಯಾದರೆ ನಿಯಮದಂತೆ ತಕ್ಷಣ ಅಲ್ಲೇ ಯಂತ್ರದ ಮೂಲಕ ದುಡ್ಡು ಪಾವತಿಯಾಗುತ್ತದೆ. ಇದು ಸಂಪೂರ್ಣ ಅದೃಷ್ಟದಾಟವಾಗಿದ್ದು ದುಡ್ಡು ಪಡೆಯುವುದಕ್ಕಿಂತ ಕಳಕೊಳ್ಳುವುದೇ ಹೆಚ್ಚು ಎಂದು ಬೇರೆ ಹೇಳಬೇಕಾಗಿಲ್ಲ. ಇಲ್ಲಿ ಎಷ್ಟು ದೊಡ್ಡ ಮೊತ್ತವನ್ನೂ ಹೂಡಿ ಅದೃಷ್ಟವನ್ನು ಪರೀಕ್ಷಿಸಬಹುದು. ಅಳಿಯ ನಮ್ಮಿಬ್ಬರ ಕೈಯಲ್ಲಿ 50ಸೆಂಟ್ಸ್ ಕೊಟ್ಟು ಆಡಲು ಹೇಳಿದ. ನನಗೆ ಮುಜುಗರವಾದರೂ ಅವನ ಒತ್ತಾಯಕ್ಕೆ ಕುಳಿತಾಗ, ಅವನೇ ಆಟವಾಡುವ ರೀತಿಯನ್ನು ತಿಳಿಸಿಕೊಟ್ಟ. ನಾವಿಬ್ಬರೂ ಒಂದೊಂದಾಗಿ ದುಡ್ಡು ಕಳಕೊಂಡು ಕೈ ಖಾಲಿಮಾಡಿಕೊಂಡೆವು. ಕೊನೆಗೆ ಅಳಿಯ ಆಟವಾಡಿ $1.75 ಗಳಿಸಿಯೇ ಬಿಟ್ಟ! ಇಲ್ಲಿ ನಾವು ಆಡುವಾಗ ಆಟ ಸಾಕೆಂದೆನಿಸಿದಾಗ END ಕೊಟ್ಟರೆ ನಮಗೆ ಬರಬೇಕಾದ ಹಣವು ಚೆಕ್ ರೂಪದಲ್ಲಿ ಆ ಯಂತ್ರದಿಂದಲೇ ನಮ್ಮ ಮುಂದಕ್ಕೆ ಬರುತ್ತದೆ. ಅದನ್ನು ಅಲ್ಲೇ ಪಕ್ಕದಲ್ಲಿರುವ ಕೌಂಟರಿನಲ್ಲಿ ಕೊಟ್ಟರೆ ಅಷ್ಟೂ ಹಣ ತಕ್ಷಣ ನಮ್ಮ ಕೈಗೆ! ಈ ಅಚ್ಚುಕಟ್ಟಾದ ವ್ಯವಹಾರ ಕಂಡು ನಿಜಕ್ಕೂ ಆಶ್ಚರ್ಯವಾಯಿತು. ಅಂತೂ ಒಂದು ದಿನದ ಮಟ್ಟಿಗೆ ನಾನೂ ಜೂಜಾಡಿದೆ..ಜೂಜುಕೋರಳಾದೆ!
ವೇಗಸ್ ನಲ್ಲಿ ಇದೇ ಕೊನೆಯ ರಾತ್ರಿ… ಇಷ್ಟು ದಿನಗಳಲ್ಲಿ ಪಡೆದ ಬಹಳ ವಿಶೇಷವಾದ ಮನರಂಜನೆಗಳು, ಅನುಭವಗಳನ್ನು ಮೆಲುಕು ಹಾಕುತ್ತಿದ್ದಂತೆ, ನಿಜಕ್ಕೂ ಮನಸ್ಸು ತುಂಬಿ ಬಂತು. ಹಾಗೆಯೇ ನೋಡುವ ಸ್ಥಳಗಳೂ ಇನ್ನೂ ಬಹಳಷ್ಟು ಉಳಿದಿದ್ದವೆನ್ನಿ. ನಮ್ಮ ಯೋಜನೆಯಂತೆ ಮರುದಿನ ಬೆಳಗ್ಗೆ 4ಗಂಟೆಗೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಹೊರಡಬೇಕಾದ್ದರಿಂದ ರಾತ್ರಿಯೇ ಎಲ್ಲವನ್ನೂ ಚೆನ್ನಾಗಿ ಪ್ಯಾಕ್ ಮಾಡಿ ಮಲಗಿದೆವು. ಸುಮಾರು 1760 ಕಿ.ಮೀನಷ್ಟು ಪಯಣಿಸಿದ್ದ, ನಮ್ಮ ಬಳಿ ಇದ್ದ ಕಾರನ್ನು ಅಲ್ಲೇ ಬಿಟ್ಟು, ಮರುದಿನ ವಿಮಾನದಲ್ಲಿ ಹಿಂತಿರುಗಿ ಮನೆ ಸೇರಿದಾಗ…. ಆಹಾ…ಏನೇ ಆದರೂ ನಮ್ಮ ಮನೆಯೇ ಸುಖದರಮನೆ..!! ಅಲ್ಲವೇ?… ಏನಂತೀರಿ??
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36550
(ಮುಗಿಯಿತು)
-ಶಂಕರಿ ಶರ್ಮ, ಪುತ್ತೂರು.
‘ಅವಿಸ್ಮರಣೀಯ ಅಮೇರಿಕ’ ಪ್ರವಾಸಕಥನವು ಬಹಳಷ್ಟು ಮಾಹಿತಿಗಳೊಂದಿಗೆ, ತಮ್ಮ ಅನುಭವಗಳು, ಗಮನಿಸುವಿಕೆಗಳನ್ನೂ ಸಂಯೋಜಿಸಿಕೊಂಡು ಬಹಳ ಸೊಗಸಾಗಿ ಮೂಡಿ ಬಂತು. ಧನ್ಯವಾದಗಳು.
ನನ್ನ ಈ ಸುದೀರ್ಘ ಪ್ರವಾಸ ಕಥನವನ್ನು ಪ್ರೀತಿಯಿಂದ ಬಹಳ ಸೊಗಸಾಗಿ ತಮ್ಮ ಸುರಹೊನ್ನೆ ಅಂತರ್ಜಾಲ ಪತ್ರಿಕೆಯಲ್ಲಿ ಸಕಾಲದಲ್ಲಿ, ಬಹಳ ಸುಂದರ ರೂಪವನ್ನು ನೀಡಿ ಪ್ರಕಟಿಸುತ್ತಾ ಪ್ರೋತ್ಸಾಹಿಸಿದ ತಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಅಮೆರಿಕ ಪ್ರವಾಸ….ಕಥನ..ಅನುಭವದ ಅಭಿವ್ಯಕ್ತಿ..
ಸೊಗಸಾದ… ನಿರೂಪಣೆ ಯೊಂದಿಗೆ…ಮೂಡಿಬಂತು.. ಅದರ..ಜೊತೆಗೆ… ನಮ್ಮ ನ್ನು…ನಿಮ್ಮೊಡನೆ..ಕರೆದುಕೊಂಡು… ಹೋದಹಾಗಿತ್ತು…ಅದಕ್ಕೆ… ಧನ್ಯವಾದಗಳು.. ನಿಮ್ಮ… ಬರವಣಿಗೆಗೆ..ಒಂದು.. ಅಭಿನಂದನೆಗಳು… ಶಂಕರಿ… ಮೇಡಂ
ತಮ್ಮ ಪ್ರೀತಿಯ ನುಡಿಗಳಿಗೆ ನಮಿಸಿದೆ ಮೇಡಂ.
ಮಾಹಿತಿಪೂರ್ಣ, ಕುತೂಹಲಭರಿತ, ವಸ್ತುನಿಷ್ಠ ಪ್ರವಾಸೀ ಕಥನಮಾಲಿಕೆ ಸೊಗಸಾಗಿ ಮೂಡಿಬಂತು. ಮುದ ನೀಡಿತು. ಅಭಿನಂದನೆಗಳು.
ತಮ್ಮ ನಿರಂತರ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ನಮನಗಳು ಮೇಡಂ.
ಅಮೇರಿಕಾ ಪ್ರವಾಸ ಕಥನ ನಿಮ್ಮ ಅನುಭವಗಳ ಮೂಟೆ, ನಮ್ಮ ಪಾಲಿಗೆ ಒಂದು ಸುಂದರ ಓದಿನ ಸವಿಯನ್ನೇ ನೀಡಿತು. ಇಷ್ಟು ದಿನಗಳ ಕಾಲ ಬಹಳ ಸೊಗಸಾಗಿ ಮೂಡಿ ಬಂತು.
ಪ್ರೀತಿಯ, ಮೆಚ್ಚುಗೆಯ ನುಡಿಗಳಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು ಮೇಡಂ.