ಕಾದಂಬರಿ: ನೆರಳು…ಕಿರಣ 22

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಮೊದಲೇ ನಿಗದಿಯಾದಂತೆ ಬೆಳಗ್ಗೆ ಐದುಗಂಟೆಗೇ ಎದ್ದು ಶ್ರೀನಿವಾಸ ಸ್ನಾನ, ಪೂಜೆ ಮುಗಿಸಿದ. ಅತ್ತೆ ನೀಡಿದ ಕಾಫಿ ಕುಡಿಯುವ ಹೊತ್ತಿಗೆ ನಂಜುಂಡ ವಾಹನದ ಸಮೇತ ಹಾಜರಾದ. ಎಲ್ಲರಿಗೂ ಹೇಳಿ ಹೊರಟವನನ್ನು ಮನೆಮಂದಿಯೆಲ್ಲಾ ಬೀಳ್ಕೊಟ್ಟರು.

ಆ ದಿನವೆಲ್ಲ ತನ್ನಪ್ಪನಿಗೆ ಹೇಳಿ ತನಗೆ ಬೇಕಾದ ಕೆಲವು ವಸ್ತುಗಳನ್ನು ತರಿಸಿಕೊಂಡಳು ಭಾಗ್ಯ. ಅಮ್ಮನ ನೇತೃತ್ವದಲ್ಲಿ ತಂಗಿಯ ನೆರವು ಪಡೆದು ರವೆ‌ಉಂಡೆ, ಕೊಬ್ಬರಿ ಮಿಠಾಯಿ, ಅವಲಕ್ಕಿ ಚೂಡಾ ತಯಾರಿಸಿದಳು. ತನ್ನ ಮದುವೆಯಲ್ಲಿ ಬಂದಿದ್ದ ಉಡುಗೊರೆಗಳನ್ನು ಪರಿಶೀಲಿಸಿದಳು. “ನನಗೆ ಬೇಕೆನಿಸಿದಾಗ ತೆಗೆದುಕೊಂಡು ಹೋಗುತ್ತೇನೆ ಈಗ ಬೇಡವೆಂದು ಹೇಳಿದಳು. ನಮ್ಮ ಅತ್ತೆಯ ಮನೆಯಲ್ಲಿ ಮೊದಲಿಂದಲೂ ಒಟ್ಟು ಕುಟುಂಬವಾದ್ದರಿಂದ ಮೊದಲೇ ಸಾಕಷ್ಟು ಸಾಮಾನುಗಳಿವೆ. ಇವುಗಳನ್ನು ಉಪಯೋಗಿಸುವುದು ಯಾವ ಕಾಲಕ್ಕೋ ನೋಡೋಣ.” ಎಂದಳು.

“ಅವನ್ನು ಬಿಡು, ನಿನಗೆ ಬಂದಿರುವ ಕ್ಯಾಷ್ ಒಟ್ಟು ಇಪ್ಪತ್ತು ಸಾವಿರದ ವರೆಗಿದೆ. ಬಹಳಷ್ಟು ನೆಂಟರಿಷ್ಟರು, ಪರಿಚಿತರು, ನಿನ್ನ ಗುರುವೃಂದದವರು, ಸಹಪಾಠಿಗಳು ಕ್ಯಾಷ್ ಕೊಟ್ಟಿದ್ದಾರೆ. ಅದನ್ನು ನಿನ್ನ ಅಕೌಂಟಿಗೆ ಹಾಕಿಕೋ” ಎಂದಳು ಲಕ್ಷ್ಮಿ.

“ಅದನ್ನು ನೀವೇ ಇಟ್ಟುಕೊಳ್ಳಿ” ಎಂದಳು ಭಾಗ್ಯ. “ಹಾಗೆನ್ನ ಬೇಡ ಮಗಳೇ, ನಿನ್ನದೂ ಅಂತ ಸ್ವಲ್ಪ ಹಣವಿರಬೇಕು. ನಿನಗಿವೆಲ್ಲ ಅರ್ಥವಾಗುವುದಿಲ್ಲ. ನನಗೆ ಅದರ ಅರಿವಿದೆ. ಇಲ್ಲಿರುವಾಗಲೇ ಬ್ಯಾಂಕಿಗೆ ಹೋಗಿಬರೋಣ” ಎಂದಳು ಲಕ್ಷ್ಮಿ.

“ನಾಳೆಗೆ ನೀನೆಲ್ಲೆಲ್ಲಿಗೆ ಹೋಗಿ ಬರಬೇಕೆಂದಿದ್ದೀ? ಒಂದೇ ದಿನ ಎಲ್ಲಾ ಕಡೆ ಅಲೆಯಬೇಡ ಕತ್ತಲಾಗುವುದರೊಳಗೆ ಬಂದುಬಿಡಬೇಕು. ಮೊದಲು ಕೇಶವಯ್ಯಮಾಮನ ಮನೆಗೆ ಹೋಗಿ ಸಿಹಿಕೊಟ್ಟು ಅವರ ಆಶೀರ್ವಾದ ಪಡೆದುಕೋ. ಉಳಿದ ಕಡೆ ನಂತರ. ಈಗಿನ್ನೇನು ಶಾಲೆಯ ಹತ್ತಿರ ಹೋಗಲಾಗುವುದಿಲ್ಲ. ರಜೆ. ಅಲ್ಲಿ ಕಛೇರಿಯಲ್ಲಿ ಕೆಲಸ ಮಾಡುವವರು ಮಾತ್ರ ಸಿಗಬಹುದು. ಶಾಲೆ ರೀ‌ಓಪನ್ ಆದನಂತರ ಎಲ್ಲರೂ ಸಿಗುತ್ತಾರೆ. ಹಾಗೇ ಮಿಕ್ಕ ಕೆಲಸ, ಮಾಕ್ಸ್‌ಕಾರ್ಡ್, ಟಿ.ಸಿ. ಮುಂತಾದವು.”

“ಹೌದು ನಾನೂ ಹೀಗೇ ಯೋಚಿಸಿದ್ದೇನೆ. ನಿಮ್ಮಳಿಯ ಒಪ್ಪಿಕೊಂಡಿರುವ ಪೂಜಾಕಾರ್ಯಕ್ರಮ ಎಷ್ಟು ದಿನಗಳಿಗೆ ಮುಗಿಯುತ್ತದೆಯೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ಆಷಾಡ ಮಾಸ ಶುರುವಾದರೆ ನಾನಿಲ್ಲಿಯೇ ಕಂಟಿನ್ಯೂ. ಬೇಕಾದಷ್ಟು ಸಮಯ ಸಿಗುತ್ತದೆ. ನನಗೂ ಏನೇನು ಮಾಡಬಹುದೆಂಬ ಆಲೋಚನೆಗೆ ಸಮಯ ಸಿಗುತ್ತದೆ.” ಎಂದಳು ಭಾಗ್ಯ.

ಮಗಳು ಹೇಳಿದ ಮಾತುಕೇಳಿ ಲಕ್ಷ್ಮಿಗೆ ತನ್ನ ಮದುವೆಯಾದ ದಿನಗಳು ನೆನಪಾದವು. ವಿವಾಹಕಾರ್ಯ, ಸಂಬಂಧಪಟ್ಟ ಎಲ್ಲ ಶಾಸ್ತ್ರಗಳು ಮುಗಿದಮೇಲೆ ಹಲವು ದೇವಸ್ಥಾನಗಳಿಗೆ, ನೆಂಟರಿಷ್ಟರ ಮನೆಗಳಿಗೆ ಭೇಟಿನೀಡುವ ಕಾರಣದಿಂದ ತಿರುಗಾಡಿದ್ದೇ ತಿರುಗಾಡಿದ್ದು. ಹಿಂದೆ ಯಾವ ಜವಾಬ್ದಾರಿಯನ್ನೂ ನಿರ್ವಹಿಸದ ಗಂಡ, ಮನೆಯಲ್ಲಿ ಹಿರಿಯರಿದ್ದುದರಿಂದ ತನಗ್ಯಾವ ಕೆಲಸಗಳೂ ಇರಲಿಲ್ಲ. ಹೂ..ರಾಜರಾಣಿಯರಂತೆ ವಿಹಾರ ಮಾಡಿದ್ದೇ ಮಾಡಿದ್ದೆವು. ಈಗ ಈ ಹುಡುಗರ ಮರ್ಜಿಯೇ ಅರ್ಥವಾಗುವುದಿಲ್ಲ. ಆತನಿಗೆ ಕೆಲಸ, ಈಕೆಗೆ ಮುಂದಿನ ಆಲೋಚನೆ ಎಂದುಕೊಂಡಳು.

ಸಿಹಿ ಹೊತ್ತು ಮನೆಗೆ ಬಂದ ಅಕ್ಕ ತಂಗಿಯರನ್ನು ಕಂಡ ಕೇಶವಯ್ಯನವರ ಕುಟುಂಬದವರೆಲ್ಲ ಸಂತೋಷದಿಂದ ಬರಮಾಡಿಕೊಂಡರು. ಕೇಶವಯ್ಯನವರ ತಾಯಿಗೋ ಹಿಗ್ಗು. “ಬಾಳಾ ನಂಬರ್ ತೆಗೆದುಕೊಂಡು ಪಾಸು ಮಾಡಿದ್ದೀಯಂತೆ, ಪೇಪರಿನಲ್ಲಿ ನಿನ್ನ ಫೊಟೋ ಬಂದಿತ್ತು, ನಾನೂ ನೋಡಿದೆ. ನಿಮ್ಮ ಮನೆಯವರು ಮುಂದಕ್ಕೆ ಓದಿಸುತ್ತಾರೇನು?” ಎಂದು ಕೇಳಿದರು.

“ಅಜ್ಜೀ, ನನಗೇ ಕಾಲೇಜಿಗೆ ಹೋಗಲು ನಾಚಿಕೆ. ಅದಕ್ಕೇ ಸಂಗೀತದಲ್ಲಿ ವಿದ್ವತ್ ಪರೀಕ್ಷೆಗೆ ಕುಳಿತುಕೊಳ್ಳಲು ಆಲೋಚಿಸಿದ್ದೇನೆ. ನನ್ನವರ ಮನೆಯಲ್ಲಿ ಎಲ್ಲರಿಗೂ ಸಂಗೀತವೆಂದರೆ ಬಹಳ ಇಷ್ಟ. ಅದಕ್ಕಾಗಿ ಅದನ್ನೇ ಮುಂದುವರಿಸುತ್ತೇನೆ.” ಎಂಧಳು ಭಾಗ್ಯ. ಅಲ್ಲೇ ಇದ್ದ ಕೇಶವಯ್ಯನವರು, ರಾಧಮ್ಮ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತ ಪಡಿಸಲಿಲ್ಲ. ಆದರೆ ಸುಬ್ಬು ಮಾತ್ರ “ಭಾಗ್ಯಕ್ಕಾ ನಿನ್ನನ್ನು ಕಾಲೇಜಿಗೆ ಕಳುಹಿಸಿದರೆ ನೀನು ಅವರಿಗಿಂತ ಹೆಚ್ಚು ಓದಿ ಕೆಲಸ ಗಳಿಸಿಬಿಟ್ಟರೆ ಈ ಪೂಜಾರಿಯ ಗತಿಯೇನು?” ಎಂದನು.

ಅವನ ಮಾತನ್ನು ಅರ್ಧದಲ್ಲಿಯೇ ತಡೆಯುತ್ತಾ “ಲೋ ಸುಬ್ಬು, ಯಾರಮುಂದೆಯಾದರೂ ಹೀಗೆ ಹೇಳಿಬಿಟ್ಟೀಯಾ, ಜೋಕೆ. ಇಂಥಹ ಮಾತುಗಳು ಅನರ್ಥಕ್ಕೆ ಕಾರಣವಾಗುತ್ತವೆ ಜೋಪಾನ.” ಎಂದು ಕೇಶವಯ್ಯ ದಂಪತಿಗಳು ಮಗನಿಗೆ ಎಚ್ಚರಿಕೆ ನೀಡಿದರು.

ನಂತರ ಅಲ್ಲಿಯೇ ಆಸುಪಾಸಿನಲ್ಲಿದ್ದ ಕೆಲವು ಗುರುಗಳ ಮನೆಗಳಿಗೆ ಹೋಗಿ ಸಿಹಿ ಹಂಚಿ ಕೊನೆಗೆ ತನ್ನ ಸಂಗೀತದ ಗುರುಗಳಾದ ವಿದುಷಿ ಅನ್ನಪೂರ್ಣಮ್ಮನವರ ಮನೆಗೆ ಹೋದಳು ಭಾಗ್ಯ. ಅಷ್ಟು ಹೊತ್ತಿಗಾಗಲೇ ವಿಷಯ ತಿಳಿದಿದ್ದ ಅವರು ಭಾಗ್ಯಳನ್ನು ಅಪ್ಪಿಕೊಂಡು ತಮಗಾದ ಆನಂದವನ್ನು ವ್ಯಕ್ತಪಡಿಸಿದರು. ಅದರಲ್ಲೂ ಸಂಗೀತದಲ್ಲೇ ಹೆಚ್ಚಿನ ಸಾಧನೆ ಮಾಡಲು ಹೊರಟಿದ್ದಾಳೆ ಶಿಷ್ಯೆ ಎಂದು ತಿಳಿದೊಡನೆ ಹಿಗ್ಗಿನಿಂದ “ಭಾಗ್ಯಾ, ನೀನ್ಯಾವ ಗುರುಗಳಿಂದಲಾದರೂ ಕಲಿ, ಆದರೆ ನಾನೊಂದು ಸಲಹೆ ನೀಡುತ್ತೇನೆ. ಉದಾಸೀನ ಮಾಡದೆ ಅದನ್ನು ನಿಮ್ಮ ಮನೆಯವರಿಗೆ ಹೇಳಿ ಅವರನ್ನೊಪ್ಪಿಸಿ ಕಾರ್ಯರೂಪಕ್ಕೆ ತಾ. ಏನೆಂದರೆ ನಿನ್ನ ಕಲಿಕೆಯ ಜೊತೆಜೊತೆಯಲ್ಲಿ ಕಲಿಸುವಿಕೆಯ ಪ್ರಕ್ರಿಯೆ ಪ್ರಾರಂಭಿಸಿ ನಿಮ್ಕ ಮನೆಯ ಸುತ್ತಮುತ್ತಲಿರುವ ಸಂಗೀತಾಸಕ್ತರು ಸಂಗೀತವನ್ನು ಕಲಿಯುವ ಅಭಿಲಾಷೆ ವ್ಯಕ್ತಪಡಿಸಿದರೆ ತರಗತಿಗಳನ್ನು ಪ್ರಾರಂಭಿಸು. ಇದರಿಂದ ನಿನಗೆ ಹೆಚ್ಚಿನ ಅಭ್ಯಾಸ ಮಾಡಿದಂತಾಗಿ ಮುಂದಿನ ಪರೀಕ್ಷೆಗೆ ಸಹಾಯವಾಗುತ್ತದೆ. ಸ್ವಾಮಿಕಾರ್ಯ ಸ್ವಕಾರ್ಯ ಎರಡೂ ಆಗುತ್ತದೆ. ಹಾಗೆಂದು ತುಂಬಾ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಡ. ಅದೇ ನಿನ್ನ ಕಲಿಕೆಗೆ, ಅಭ್ಯಾಸಕ್ಕೆ  ಮುಳುವಾದೀತು. ಯೋಚಿಸಿ ಮುಂದುವರಿ. ಯಾವುದು ನಮಗೆ ಲಭ್ಯವಾಗುತ್ತದೆಯೋ ಅದರಲ್ಲೇ ಏನಾದರೂ ಸಾಧಿಸಬೇಕು. ಒಳ್ಳೆಯದಾಗಲಿ ಮಗೂ” ಎಂದು ಬಾಯತುಂಬ ಹರಸಿ ಬೇಡವೆಂದರೂ ಕೇಳದೆ ಅರಿಸಿನ ಕುಂಕುಮ, ತಾಂಬೂಲಸಹಿತ ಒಂದು ಶೃತಿ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದರು. ಅದನ್ನು ನೋಡಿ ಭಾವನಾ “ಅಕ್ಕಾ ನಮ್ಮ ಬಳಿಯಿರುವ ಶೃತಿಪೆಟ್ಟಿಗೆಯ ಸ್ಥಿತಿಯನ್ನು ಗಮನಿಸಿ ನಮಗೆ ಕೊಡಲೆಂದೇ ಒಂದು ಹೊಸ ಪೆಟ್ಟಿಗೆಯನ್ನು ಖರೀದಿಸಿ ಇಟ್ಟಿದ್ದರೂ ಅಂತ ಕಾಣುತ್ತೆ. ಇದೇ ಸರಿಯಾದ ಸಂದರ್ಭವೆಂದು ಉಡುಗೊರೆಯಾಗಿ ಕೊಟ್ಟುಬಿಟ್ಟರು” ಎಂದಳು.

PC: Internet

“ಇರಬಹುದು ಭಾವನಾ, ಇದನ್ನು ನೀನೇ ಇಟ್ಟುಕೋ. ನಮ್ಮ ಮನೆಯಲ್ಲಿ ಎರಡೋ, ಮೂರೋ ಇದ್ದ ಹಾಗಿವೆ. ನೀನೂ ನೋಡಿರಬೇಕಲ್ಲಾ. ತಂಬೂರಿ ಬೇರೆ ಇದೆ.” ಎಂದಳು ಭಾಗ್ಯ.

“ಹೂ ಅಕ್ಕಾ ನಾನು ನೋಡಿದ್ದೇನೆ. ವೀಣೆ, ಮೃದಂಗ ಕೂಡ ಇವೆ. ಯಾರು ನುಡಿಸುತ್ತಾರೋ ಕೇಳಬೇಕೆಂದುಕೊಂಡೆ. ಆದರೆ ಸಮಯದಲ್ಲಿ ನೆನಪಿಗೆ ಬರಲಿಲ್ಲ;.” ಎಂದಳು.

“ನನಗೂ ಗೊತ್ತಿಲ್ಲ. ನಿಧಾನವಾಗಿ ಕೇಳಿ ತಿಳಿದುಕೊಳ್ಳುತ್ತೇನೆ” ಎಂದಳು ಭಾಗ್ಯ.

ಭಾಗ್ಯ ತಾನು ಮೊದಲೇ ಸಿದ್ಧಪಡಿಸಿಕೊಂಡಿದ್ದ ಉತ್ತರವನ್ನೇ ಎಲ್ಲರೆದುರು ಹೇಳಿದಾಗ ಅವರೆಲ್ಲ ಹೆಚ್ಚು ಕೆದಕದೆ ಅವಳು ಕೈಕೊಂಡ ತೀರ್ಮಾನಕ್ಕೆ ಯಶ ಕೋರಿದರು. ಆದರೆ ಅವಳ ನೆಚ್ಚಿನ ಗುರುಗಳಾದ ಗಂಗಾಧರಪ್ಪನವರು ಮಾತ್ರ “ನಿನ್ನ ಆಯ್ಕೆಯು ತಪ್ಪೆಂದು ಹೇಳಲಾರೆ ಭಾಗ್ಯ, ನೀನಿದುವರೆಗೆ ವಿದ್ಯಾಭ್ಯಾಸ ಮಾಡಿಕೊಂಡೇ ಸಂಗೀತಾಭ್ಯಾಸವನ್ನೂ ಮಾಡಿಕೊಂಡು ಬಂದಿದ್ದೀಯ ನನಗೆ ಗೊತ್ತು. ಈಗಲೂ ಹಾಗೇ ಮುಂದುವರಿಸಬಹುದಿತ್ತು. ಎಂಥಹ ಒಳ್ಳೆಯ ಅವಕಾಶ ಇತ್ತು. ಹೇಗಾದರೂ ಮಾಡಿ ಹಿರಿಯರನ್ನು ಒಪ್ಪಿಸಬಹುದಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ನಾನೊಮ್ಮೆ ನಿಮ್ಮ ಮನೆಗೆ ಬಂದು ನಿಮ್ಮ ಹಿರಿಯರನ್ನು, ನಿಮ್ಮವರನ್ನು ಕಂಡು ಮಾತನಾಡಲೇ?” ಎಂದರು.

“ದಯವಿಟ್ಟು ಬೇಡಿ ಸರ್, ನನಗೆ ಬೇಕಾದಾಗ ನಿಮ್ಮ ಸಲಹೆ ಪಡೆಯುತ್ತೇನೆ. ಈ ವಿಷಯದಲ್ಲಿ ಇನ್ನಾವ ಚರ್ಚೆಯೂ ಬೇಡ ಪ್ಲೀಸ್ ಸರ್.” ಎಂದು ಕೋರಿದಳು ಭಾಗ್ಯ.

“ಆಯಿತಮ್ಮ, ನಿನಗೆ ಯಾವಾಗ ಏನು ಸಹಾಯ, ಸಲಹೆ ಬೇಕಾದರೂ ಕೇಳು. ಖಂಡಿತ ನಾನು ನೆರವಾಗಲು ಪ್ರಯತ್ನಿಸುತ್ತೇನೆ. ಶುಭವಾಗಲಿ” ಎಂದು ಹಾರೈಸಿ ಒಲ್ಲದ ಮನಸ್ಸಿನಿಂದವಳನ್ನು ಬೀಳ್ಕೊಟ್ಟರು ಗುರು ಗಂಗಾಧರಪ್ಪ.

ಅಂತೂ ಭಾಗ್ಯ ತಾನಂದುಕೊಂಡಂತೆ ಎಲ್ಲರನ್ನೂ ಭೇಟಿಯಾಗಿ ಬಂದಳು. ಶಾಲೆಯಲ್ಲಿ ಮಾಕ್ಸ್‌ಕಾರ್ಡ್ ಬಂದದ್ದನ್ನು ತಿಳಿದು ಅಲ್ಲಿಗೂ ಹೋಗಿ ಅದನ್ನು, ಟಿ.ಸಿ.ಯನ್ನು ತಂದಳು. ಅಲ್ಲಿಯೂ ಕೆಲವರು ಅವಳು ಶಿಕ್ಷಣವನ್ನು ಮುಂದುವರಿಸುವ ಬಗ್ಗೆ ಕೇಳಿದರು. ಅವರಿಗೂ ತನ್ನ ಸಿದ್ಧ ಉತ್ತರವನ್ನೇ ಕೊಟ್ಟು ಬಂದಳು. ಇವೆಲ್ಲವನ್ನೂ ಮಾಡುವುದರಲ್ಲಿ ದಿನಗಳುರುಳಿದ್ದೇ ತಿಳಿಯಲಿಲ್ಲ. ಈ ಮಧ್ಯೆ ಅತ್ತೆ, ಮಾವ ಒಮ್ಮೆ ಬಂದು ಹೋಗಿದ್ದರು. ಅವರಿಂದ ಗಂಡ ಶ್ರೀನಿವಾಸ ಮತ್ತೆರಡು ಪೂಜಾಕಾರ್ಯಗಳನ್ನು ಒಪ್ಪಿಕೊಂಡಿದ್ದಾನೆಂದು ತಿಳಿಯಿತು. ಆಗ ಭಟ್ಟರು ಮತ್ತು ಲಕ್ಷ್ಮಿ ಮಗಳನ್ನು ಆಷಾಢಮಾಸ ಕಳೆದಮೇಲೇ ಅವರಲ್ಲಿಗೆ ಕರೆದುಕೊಂಡು ಬರುತ್ತೇವೆ. ಹೇಗಿದ್ದರೂ ಅಳಿಯಂದಿರು ಊರಿನಲ್ಲಿಲ್ಲ” ಎಂದರು. ಜೋಯಿಸರು ದಂಪತಿಗಳು ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ಮಗನ ಕೆಲಸದಿಂದ ಹೀಗಾಯಿತೆಂದು ಮನಸ್ಸಿಗೆ ನಿರಾಸೆಯಾದರೂ ತೊರ್ಪಡಿಸಿಕೊಳ್ಳದೆ ಹಿಂದಿರುಗಿದರು. ಭಾಗ್ಯಳು ಊಹಿಸಿದಂತೆಯೇ ಆಯಿತು.

ಮನೆಗೆಲಸಗಳಲ್ಲಿ ನೆರವು, ಒಡಹುಟ್ಟಿದವರೊಡನೆ ಒಡನಾಟ, ಮುಂದಿನ ತನ್ನ ಯೋಜನೆಗಳ ಬಗ್ಗೆ ಆಲೋಚನೆಗಳು ಎಲ್ಲದರಲ್ಲೂ ತೊಡಗಿಸಿಕೊಂಡರೂ ಭಾಗ್ಯಳ ಮನಸ್ಸು ತನ್ನವರನ್ನು ಕುರಿತು ಯೋಚಿಸುತ್ತಿತ್ತು. ತನ್ನಪ್ಪ ಹಿರಿಯರಿದ್ದಾಗ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳದೆ ಒಡಾಡುತ್ತಿದ್ದವರನ್ನು ತನ್ನಮ್ಮ ಸಾಕಷ್ಟು ತಿಳಿವಳಿಕೆಯುಳ್ಳ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಎಷ್ಟು ಕಷ್ಟಪಟ್ಟಿದ್ದಾಳೆಂಬುದು ಭಾಗ್ಯಳಿಗೆ ಅರಿವಿತ್ತು. ಆದರೆ ತನ್ನ ಪತಿ ಕರ್ತವ್ಯಗಳನ್ನೇ ಆವಾಹನೆ ಮಾಡಿಕೊಂಡಂತೆ ಕಂಡುಬರುತ್ತಿದ್ದಾರೆ. ಅವರು ಅಪ್ಪ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದಿದ್ದರು ಕೆಲವರು. ಹೂಂ ಈಗ ಯಾರು ಹಾಕಿದ ಗೆರೆಯನ್ನು ಯಾರು ದಾಟುವುದಿಲ್ಲವೋ ಅರ್ಥವಾಗುತ್ತಿಲ್ಲ. ಕಷ್ಟಕರವಾದ ವಾತಾವರಣವೇನೂ ಇಲ್ಲ. ತಾನು ಕೈಹಿಡಿದ ಹೆಣ್ಣು ಸಂಪೂರ್ಣವಾಗಿ ತನ್ನ ಅಧೀನದಲ್ಲಿ ಇರಬೇಕೆನ್ನುವ ಮನೋಭಾವನೆಯವರು ಸಾಕಷ್ಟಿರುತ್ತಾರೆ. ಅದರಂತೆ ಇವರ ಸ್ವಭಾವವೂ ಕಾಣುತ್ತಿದೆ. ಯಾವುದೋ ಒಂದನ್ನು ಕಲಿಯಲು ಹಾದಿ ತೋರಿದ್ದಾರೆ. ನೋಡೋಣ ಎಂದು ತನಗೆ ತಾನೇ ಸಮಾಧಾನ ತಂದುಕೊಂಡಳು.

ಆಷಾಢಮಾಸವು ಮುಗಿಯಲು ಇನ್ನು ಒಂದೆರಡು ದಿನಗಳಿರುವಾಗಲೇ ಜೋಯಿಸರ ಮನೆಯಿಂದ “ನಾವೇ ಅಲ್ಲಿಗೆ ಬಂದು ನಮ್ಮ ಸೊಸೆಯನ್ನು ಕರೆದುಕೊಂಡು ಹೋಗುತ್ತೇವೆ” ಎಂದು ತಾವು ಬರುವ ದಿವಸ ಮತ್ತು ಸಮಯ ಎಲ್ಲವನ್ನೂ ನಂಜುಂಡನ ಮೂಲಕ ಹೇಳಿಕಳುಹಿಸಿದ್ದರು. ಭಟ್ಟರು ಬಂದವರ ಬಳಿ ಅವರು ಊಟಕ್ಕೇ ಬರಬೇಕೆಂದು ತಮ್ಮ ಅಭಿಲಾಷೆಯನ್ನು ಹೇಳಿಕಳುಹಿದರು. ಮಗಳನ್ನು ಕಳುಹಿಸಿಕೊಡಲು ತಯಾರಿ ನಡೆಸತೊಡಗಿದಳು ಲಕ್ಷ್ಮಿ. ತಿಂಡಿ, ತಿನಿಸುಗಳನ್ನು ಮಾಡಿ ಬುಟ್ಟಿಯಲ್ಲಿ ತುಂಬಿಸಿದ್ದಾಯಿತು. ಮಗಳು ಮೆಚ್ಚಿದ ಸೀರೆಯನ್ನು ತಂದಿಟ್ಟರು. ಬೀಗರಿಗೆ ಔತಣಕ್ಕೇನು ಮಾಡಬೇಕೆಂದು ಅಣಿಗೊಳಿಸಿದರು. ತಾಯಿಯ ಓಡಾಟ, ಸಂಭ್ರಮ, ಸಿದ್ಧತೆಗಳನ್ನು ನೋಡಿದ ಭಾಗ್ಯ “ಅಮ್ಮಾ, ನಾನೇನೂ ಹೊರದೇಶಕ್ಕೆ ಹೋಗುತ್ತಿಲ್ಲ. ಹೋಗಲಿ ಬೇರೆ ಊರಿಗೂ ಹೊಗುತ್ತಿಲ್ಲ. ಹತ್ತು ಕಿಲೋಮೀಟರ್ ದೂರದ ಇನ್ನೊಂದು ಬಡಾವಣೆ ಅಷ್ಟೇ. ಅದಕ್ಕೆ ಇಷ್ಟೊಂದು ಸಡಗರವೇ?” ಎಂದಳು ಭಾಗ್ಯ.

“ಹುಂ..ನಾನು ಹೆತ್ತ ಮಗಳೇ ಆದರೂ ನೀನೀಗ ಪರರ ಸೊತ್ತು. ಹತ್ತಿರವಿರಲಿ, ದೂರವಿರಲಿ, ಒಂದು ಮಾತು, ಯಾವ ಯಾವ ಸಂದರ್ಭದಲ್ಲಿ ಏನೇನು ಮರ್ಯಾದೆ ಸಲ್ಲಿಸಬೇಕೋ ಅದೆಲ್ಲವನ್ನೂ ಮಾಡಬೇಕು ಮಗಳೇ” ಎಂದಳು ಲಕ್ಷ್ಮಿ.

ಭಟ್ಟರ ಕೋರಿಕೆಯಂತೆ ಜೋಯಿಸರು ಸ್ನಾನಪೂಜಾದಿಗಳನ್ನು ಮುಗಿಸಿ ಹೆಂಡತಿ, ಮಗ, ನಾರಾಣಪ್ಪ ಸಮೇತ ಬೀಗರ ಮನೆಗೆ ಆಗಮಿಸಿದರು. ಪರಸ್ಪರ ಕುಶಲೋಪರಿಗಳಾದವು. ಊಟ ಮುಗಿಸಿದ ಎಲ್ಲರೂ ತಾಂಬೂಲ ಹಾಕಿಕೊಳ್ಳುತ್ತಾ ನಡುಮನೆಯಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಆಸೀನರಾಗಿದ್ದರು.

“ಲೋ..ನಾಣಿ, ನೀನು ಹಾಲುಹೋಳಿಗೆಯನ್ನು ತಿಂದೆಯಾ? ಹೇಗಿತ್ತು?” ಎಂದು ಕೇಳಿದರು ಜೊಯಿಸರು.

“ಯಜಮಾನರೇ, ಬಂದಕಡೆಯೂ ನನ್ನ ಮಾನ ತೆಗೆಯಬೇಡಿ ದಮ್ಮಯ್ಯ” ಎಂದು ಬೇಡಿದರು ನಾರಾಣಪ್ಪ.

ಅಲ್ಲಿಯೇ ಗಂಡನಿಗೆ ಎಲೆ ಮಡಿಸಿಕೊಡುತ್ತಿದ್ದ ಭಾಗ್ಯ “ಏಕೆ ಏನಾಯಿತು ನಾಣಜ್ಜಾ” ಎಂದಳು.

“ಏನಂತ ಹೇಳಲಿ ಭಾಗ್ಯಮ್ಮಾ, ಈ ಅಪ್ಪ, ಮಗ ಪೂಜೆಪುನಸ್ಕಾರಕ್ಕೆಂದು ಹತ್ತಾರು ಕಡೆಗೆ ಹೋಗುತ್ತಲೇ ಇರುತ್ತಾರೆ. ಅಲ್ಲಿ ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ತಿಂದು ಬರುತ್ತಾರೆ. ಅವರಿಗಿಷ್ಟವಾದ ಭಕ್ಷ್ಯಗಳ ಹೆಸರನ್ನು ಕೇಳಿಕೊಂಡು ಬರುತ್ತಾರೆ. ಮತ್ತೊಮ್ಮೆ ಅದನ್ನು ತಿನ್ನಬೇಕೆನಿಸಿದರೆ ತಯಾರಿಸಲು ನನಗೆ ಹೇಳುತ್ತಾರೆ. ಗೊತ್ತಿದ್ದರೆ ಚಿಂತೆಯಿಲ್ಲ. ಗೊತ್ತಿಲ್ಲದ್ದಾದರೆ ದೊಡ್ಡಮ್ಮನವರನ್ನು ಕೇಳುತ್ತೇನೆ. ಅವರಿಗೆ ತಿಳಿದಿದ್ದರೆ ಹೇಳಿಕೊಡುತ್ತಾರೆ. ಇಲ್ಲವಾದರೆ ನಿನಗೆ ಗೊತ್ತಿದ್ದಷ್ಟು ಮಾಡಿಬಿಡು ಎನ್ನುತ್ತಾರೆ. ಒಂದು ಬಾರಿ ಹಾಲುಹೋಳಿಗೆ ಮೆದ್ದು ಬಂದ ಇವರಿಬ್ಬರೂ ನನಗೆ ಮಾಡಲು ಹೇಳಿದರು. ನನಗೆ ಹೇಗೆಂದು ಗೊತ್ತಿರಲಿಲ್ಲ. ಆಗ ದೊಡ್ಡಮ್ಮನವರು ಅವರಣ್ಣನ ಮನೆಗೆ ಹೋಗಿದ್ದರು. ಅಕ್ಕಪಕ್ಕದವರನ್ನು ಕೇಳಲು ನಾಚಿಕೆ. ಹೋಳಿಗೆ ಮಾಡಿದೆ. ಹಾಲನ್ನು ಚೆನ್ನಾಗಿ ಕೇಸರಿ ಹಾಕಿ ಕಾಯಿಸಿದೆ. ಹೋಳಿಗೆಯ ಮೇಲೆ ಹಾಲನ್ನು ಬಡಿಸಿದೆ. ಅದನ್ನು ನೋಡಿದ ಇಬ್ಬರೂ ಹಾಲು ಹೋಳಿಗೆ ಸರಿಯಿದೆಯಲ್ಲವಾ ಎಂದು ಹೋಳಿಗೆಯನ್ನು ಮುರಿದು ಹಾಲಿನಲ್ಲಿ ಅದ್ದಿ ತಿಂದು ಕಿಚಾಯಿಸಿದರು. ಇವತ್ತು ಇಲ್ಲಿ ಮಾಡಿದ್ದು ನೋಡಿ ಹೇಗೆಂದು ತಿಳಿಯಿತು. ಬಹಳ ರುಚಿಯಾಗಿತ್ತು. ನಿಮಗೆ ಇದನ್ನು ಮಾಡಲು ಬರುತ್ತದೆಯೇ?” ಎಂದು ಕೇಳಿದರು ನಾರಾಣಪ್ಪ.

“ಓ ಅಕ್ಕ ಎಲ್ಲವನ್ನೂ ಮಾಡುತ್ತಾಳೆ. ಅಮ್ಮ ಚೆನ್ನಾಗಿ ಹೇಳಿಕೊಟ್ಟಿದ್ದಾರೆ.” ಎಂದರು ಕಿರಿಯ ಸೋದರಿಯರಾದ  ವೀಣಾ ವಾಣಿಯರು.

“ಹೌದೇ ಮಕ್ಕಳೇ ಹಾಗಾದರೆ ನಾನು ಗೆದ್ದೆ” ಎಂದು ಬೀಗಿದರು ನಾರಾಣಪ್ಪ. ಹೀಗೇ ಅದೂ ಇದು ಹರಟಿ ಮನೆಗೆ ಹೊರಟುನಿಂತರು. ಲಕ್ಷ್ಮಿ ಮಗಳಿಗೆ ಮಡಿಲುತುಂಬಿ, ಅಳಿಯನಿಗೆ ಒಂದೆಳೆ ಸರವನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದರು “ತಪ್ಪು ತಿಳಿಯಬೇಡಿ, ಮದುವೆಯ ಸಮಯದಲ್ಲಿ ಕೊಡಬೇಕೆಂದಿದ್ದೆವು ಆಗಲಿಲ್ಲ. ಈಗ ಸಂದರ್ಭ ಕೂಡಿಬಂತು ನಿರಾಕರಿಸಬೇಡಿ” ಎಂದು ಹೇಳಿದರು.

ಏನೊ ಹೇಳಲು ಹೋದ ಶ್ರೀನಿವಾಸನಿಗೆ ಸೀತಮ್ಮನವರು ಕಣ್ಸನ್ನೆ ಮಾಡಿ ಸುಮ್ಮನಿರುವಂತೆ ಮಾಡಿದರು. ಎಲ್ಲರಿಂದ ಬೀಳ್ಕೊಂಡು ಜೋಯಿಸರು ಮಗ, ಮಡದಿ, ಸೊಸೆಯೊಂದಿಗೆ ಮನೆಯ ಹಾದಿ ಹಿಡಿದರು.

ಅಂದು ರಾತ್ರಿ ಏಕಾಂತದಲ್ಲಿ ಶ್ರೀನಿವಾಸ “ನಾನು ಇಷ್ಟು ಬೇಗ ಬಹಳ ದಿವಸ ನಿನ್ನನ್ನು ಬಿಟ್ಟು ಹೋಗಿದ್ದು ಬೇಸರವಾಯಿತೇ ಭಾಗ್ಯ?” ಎಂದು ಪ್ರಶ್ನಿಸಿದ.

“ಹೌದು, ಆದರೆ ನನ್ನ ಕೆಲಸ ಕಾರ್ಯಗಳಿಗೂ ಸಮಯ ಬೇಕಾಗಿತ್ತು. ಇನ್ನು ಪಾಠಪ್ರವಚನಗಳು ಪ್ರಾರಂಭವಾದರೆ ಎಲ್ಲಿಗೂ ಹೋಗಲಾಗುವುದಿಲ್ಲ. ಹೋದರೂ ಒಂದೆರಡು ದಿನಗಳಷ್ಟೇ.” ಎಂದಳು ಭಾಗ್ಯ.

“ಹಾ ನಾನು ಹೇಳುವುದನ್ನು ಮರೆತಿದ್ದೆ, ನಿನಗೆ ಪಾಠ ಹೇಳಿಕೊಡುವುದಕ್ಕೆ ಗುರುಗಳು ಸಿಕ್ಕಿದ್ದಾರೆ. ಅವರ ಹೆಸರು ಶ್ರೀಮತಿ ಗೌರಿಸುಬ್ರಹ್ಮಣ್ಯ ವಿದುಷಿ ಆಗಿದ್ದಾರೆ, ಹಲವು ವಾದ್ಯಗಳಲ್ಲಿ ಪರಿಣತರಾಗಿದ್ದಾರೆ. ಮೊದಲು ಅವರ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಿದ್ದರು. ಇತ್ತೀಚೆಗೆ ನಿಲ್ಲಿಸಿದ್ದಾರೆ. ಕಾರಣವೇನೋ ಗೊತ್ತಿಲ್ಲ. ನಿನ್ನ ಬಗ್ಗೆ ಅವರಲ್ಲಿ ಪ್ರಸ್ತಾಪ ಮಾಡಿ ಪಾಠ ಹೇಳಿಕೊಡುತ್ತೀರಾ ಎಂದು ಕೇಳಿದೆ. ಅದಕ್ಕವರು “ಮೊದಲು ನಾನವರನ್ನು ನೋಡಬೇಕು, ಕೆಲವು ರೀತಿಯಲ್ಲಿ ಅವರೆಷ್ಟು ಕಲಿತಿದ್ದಾರೆಂಬುದಕ್ಕೆ ಕೆಲವು ಟೆಸ್ಟ್ ಮಾಡುತ್ತೇನೆ. ನನಗೆ ಸಮಾಧಾನವಾದರೆ ಖಂಡಿತ ಪಾಠ ಹೇಳಿಕೊಡುತ್ತೇನೆ” ಎಂದರು. ನಾನವರಿಗೆ ಒಮ್ಮೆ ಬನ್ನಿ ಎಂದು ಆಹ್ವಾನಿಸಿದ್ದೇನೆ. ಇಲ್ಲಿಯೇ ನಮ್ಮ ಮನೆಯಿಂದ ಒಂದೆರಡು ಮನೆಗಳನ್ನು ದಾಟಿದರೆ ಅವರ ಮನೆಯಿದೆ.” ಎಂದು ಹೇಳಿದ ಶ್ರೀನಿವಾಸ.

“ಓ ಎಂಟ್ರೆನ್ಸ್ ಟೆಸ್ಟ್, ಮಾಡಲಿ ಬಿಡಿ. ಅವರಿಗೆ ಯಾರಿಂದಲೋ ಭ್ರಮನಿರಸನವಾಗಿರಬಹುದು. ಪರೀಕ್ಷೆಗಳನ್ನು ಪಾಸು ಮಾಡಿದ್ದರೂ ಅವರ ಗಾಯನ ಇವರ ಮನಸ್ಸಿಗೆ ಹಿಡಿಸದಿರಬಹುದು. ವಿದ್ವತ್ ಪರೀಕ್ಷೆಗೆ ಪಾಠ ಹೇಳಿಕೊಡಬೇಕೆಂದಾಗ ಸಹಜವಾಗಿಯೇ ಸಂದೇಹ ಬರುತ್ತದೆ. ಮಾಡಲಿಬಿಡಿ. ಅವರು ಯಾವಾಗ ಬರುತ್ತಾರೆ?” ಎಂದು ಕೇಳಿದಳು ಭಾಗ್ಯ.

“ಮುಂದಿನವಾರ ಬರುತ್ತಾರೆ” ಎಂದ ಶ್ರೀನಿವಾಸ.

ಅವರೇನು ನನ್ನನ್ನು ಪರೀಕ್ಷಿಸುವುದು? ನಾನು ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ರ್‍ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಎಂಬ ಅಹಂ ತೋರಿಸದೆ ವಿನಯವಾಗಿ ತನಗೆ ಉತ್ತರಕೊಟ್ಟ ತನ್ನ ಹೆಂಡತಿಯ ಬಗ್ಗೆ ಹೆಮ್ಮೆಯೆನ್ನಿಸಿತು ಶ್ರೀನಿವಾಸನಿಗೆ. ಆದರೆ ಅದನ್ನು ಹೊರಗಡೆ ತೋರ್ಪಡಿಸಿಕೊಳ್ಳಲಿಲ್ಲ.

“ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲೇ?” ಎಂದಳು ಭಾಗ್ಯ.
ಪ್ರಶ್ನೆಯಾ ! ಏನಪ್ಪಾ ಅಂಥಹದ್ದು, ಕೇಳು” ಎಂದ ಶ್ರೀನಿವಾಸ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35583

ಬಿ.ಆರ್.ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ. ಬಿಡದೆ ಓದಿಸಿಕೊಂಡು ಹೋಗುವ ಕಥೆ

  2. ಧನ್ಯವಾದಗಳು ನಯನ ಮೇಡಂ

  3. ಶಂಕರಿ ಶರ್ಮ says:

    ಚಂದದ ಕಥೆಯು ಆತ್ಮೀಯವೆನಿಸಿತು…
    ಧನ್ಯವಾದಗಳು ಮೇಡಂ.

  4. ಧನ್ಯವಾದಗಳು ಶಂಕರಿ ಮೇಡಂ

  5. Padma Anand says:

    ಭಾಗ್ಯ ತನ್ನ ಪರಿಸ್ಥಿತಿಗೆ ತಕ್ಕಂತೆ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಂಡ ಪರಿ ಸೊಗಸಾಗಿ ಮೂಡಿ ಬಂದಿದೆ. ಉತ್ತಮ ಕೌಟುಂಬಿಕ ವಾತಾವರಣನವನ್ನು ಕಾದಂಬರಿಯಲ್ಲಿ ಚಂದದಿಂದ ಬಿಂಬಿಸಿರುವ ಗೆಳತಿ ನಾಗರತ್ನ ಅವರಿಗೆ ಅಭಿನಂದನೆಗಳು

  6. Padma Anand says:

    ಬದಲಾದ ವಾತಾವರಣಕ್ಕೆ ಭಾಗ್ಯ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಂಡ ಪರಿ ಸೊಗಸಾಗಿ ಮೂಡಿ ಬಂದಿದೆ. ಉತ್ತಮ ಕೌಟುಂಬಿಕ ವಾತಾವರಣನ್ನು ಚಿತ್ರಿಸುವಲ್ಲಿ ಲೇಖಕಿ ನಾಗರತ್ನ ಅವರು ವಿಜಯ ಸಾಧಿಸಿದ್ದಾರೆ.

  7. ನೀವು ಕೊಡುವ ಪ್ರತಿ ಕ್ರಿಯೆಗಳು ನಮ್ಮ ಬರಹಕ್ಕೆ… ಪ್ರೋತ್ಸಾಹ ದ ದೀವಿಗೆಗಳು.ಧನ್ಯವಾದಗಳು ಪದ್ಮಾಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: