ಅಕ್ಕಾ ಕೇಳವ್ವಾ: ರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು
‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’, ಅಕ್ಕಾ, ಈ ನುಡಿಗಟ್ಟನ್ನು ಕೇಳದವರಾರು? ಆದರೆ ಸಂಪ್ರದಾಯಗಳ ಸಂಕೋಲೆಗಳಲ್ಲಿ ಹೆಣ್ಣನ್ನು ಬಂಧಿಸಿರುವ ಸಮಾಜ, ಅವಳನ್ನು ಪ್ರಗತಿ ಪಥದತ್ತ ಸಾಗಲು ಬಿಡುವುದೇ? ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತ ಹೆಣ್ಣು, ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಹರಸಾಹಸ ಪಡಬೇಕಾದಿತು ಅಲ್ಲವೇ? ಉನ್ನತ ಪದವಿ ಪಡೆದ ಹೆಣ್ಣಿನ ಅಂತರಂಗದ ತುಮುಲವನ್ನು ನೋಡೋಣ ಬನ್ನಿ.
ದಕ್ಷ, ನನಗೆ ಅಬಾರ್ಷನ್ ಆಯಿತು.. ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಸೂಸನ್. ಅರಡಿ ಎತ್ತರವಿದ್ದ ಅಜಾನುಬಾಹು ಹೆಣ್ಣು, ನೈಜೀರಿಯಾದಿಂದ ಯು.ಕೆ.ಗೆ ಬಂದಿದ್ದ ವೈದ್ಯೆ. ನಾವಿಬ್ಬರೂ ಒಂದೇ ಆಸ್ಪತ್ರೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದೆವು. ಕಳೆದ ವಾರವಷ್ಟೇ, ನಮಗೆಲ್ಲಾ ಸಿಹಿ ನೀಡಿ, ತಾನು ಎರಡು ತಿಂಗಳ ಗರ್ಭಿಣಿ ಎಂದು ಸಂಭ್ರಮದಿಂದ ಉಸುರಿದ್ದಳು. ಇದು ಅವಳಿಗೆ ಅಮೂಲ್ಯವಾದ ಗರ್ಭಧಾರಣೆಯಾಗಿತ್ತು, ಕಾರಣ, ಈಗಾಗಲೇ ಅವಳಿಗೆ ಮೂವತ್ತೈದು ವರ್ಷವಾಗಿತ್ತು. ನೈಜೀರಿಯಾದಲ್ಲಿ ಎಮ್.ಬಿ.ಬಿ.ಎಸ್. ಎಮ್.ಡಿ. ಪದವಿ ಗಳಿಸಿ, ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಆಗಿದ್ದ ಗಂಡನ್ನು ವರಿಸಿ, ನಾಲ್ಕು ವರ್ಷದ ಹಿಂದೆ ಇಂಗ್ಲೆಂಡಿಗೆ ಆಗಮಿಸಿದ್ದಳು. ಇಲ್ಲಿ ವೈದ್ಯಳಾಗಿ ಕಾರ್ಯ ನಿರ್ವಹಿಸಲು ಹಲವು ಪರೀಕ್ಷೆಗಳನ್ನು ಎದುರಿಸಬೇಕಿತ್ತು. ಮೊದಲಿಗೆ – ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ಸಾಬೀತು ಪಡಿಸಲು – ಐ.ಇ.ಎಲ್.ಟಿ.ಎಸ್ ಪರೀಕ್ಷೆ, ನಂತರದಲ್ಲಿ ಪಿ.ಎಲ್.ಎ.ಬಿ. (ಪ್ಲಾಬ್) ಸಿದ್ಧಾಂತ ಹಾಗೂ ಪ್ರಾಯೋಗಿಕ ಪರೀಕ್ಷೆ. ಎಲ್ಲಾ ಹಂತದಲ್ಲಿ ತೇರ್ಗಡೆಯಾದವಳು, ಜಿ.ಪಿ. (ಜನರಲ್ ಪ್ರಾಕ್ಟೀಷನರ್) ಆಗಲು ನಿರ್ಧರಿಸಿ, ಮೂರು ವರ್ಷದ ತರಬೇತಿ ಕೋರ್ಸ್‌ಗೆ ಸೇರಿದ್ದಳು. ಜೊತೆಜೊತೆಗೇ ತಾಯಿಯಾಗುವ ಹಂಬಲದಿಂದ ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು. ಆದರೆ ಅವಳ ಆಶಾ ಗೋಪುರ ಕುಸಿದಿತ್ತು, ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು, ಮಾರನೆಯ ದಿನ ಹೊಟ್ಟೆ ನೋವು ಕಾಣಿಸಿಕೊಂಡಾಗ, ಗಾಬರಿಯಿಂದ ಆಸ್ಪತ್ರೆಗೆ ಹೋದವಳಿಗೆ ಗರ್ಭಪಾತವಾಗಿತ್ತು. ದೂರದೂರಿನಲ್ಲಿ ಅತ್ತು ಹಗುರಾಗಲು, ಅಮ್ಮನ ಮಡಿಲಿರಲಿಲ್ಲ, ಸಾಂತ್ವನದ ನುಡಿಗಳನ್ನಾಡಲು ಬಂಧು ಬಾಂಧವರಿರಲಿಲ್ಲ. ಅವಳಿಗೆ ಸಮಾಧಾನ ಹೇಳುವ ಸರದಿ ನನ್ನದಾಗಿತ್ತು. ಸೂಸಿ, ಇನ್ನೊಂದು ಪ್ರಯತ್ನ ಮಾಡು, ಖಂಡಿತಾ ಯಶಸ್ವಿಯಾಗುವೆ. ಮುಂದಿನ ಬಾರಿ ಪುಟ್ಟ ಸೂಸಿ ನಿನ್ನ ಮಡಿಲಲ್ಲಿರುವಳು ಎನ್ನುತ್ತಾ ಬೀಳ್ಕೊಟ್ಟೆ.
ಮನಸ್ಸು, ಕಳೆದು ಹೋದ ದಿನಗಳ ನೆನಪುಗಳ ಹಿಂದೆ ಓಡುತ್ತಿತ್ತು. ನಾನು ಎಮ್.ಬಿ.ಬಿ.ಎಸ್, ಪದವಿ ಪಡೆದು ಎಮ್.ಡಿ. ಕೋರ್ಸ್‌ಗೆ ಕಾಲಿಟ್ಟಿದ್ದೆ, ನಮ್ಮ ಊರಿಗೆ ಸನಿಹದಲ್ಲಿದ್ದ ಪಟ್ಟಣದ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು, ನನಗೆ ಖುಷಿಯೋ ಖುಷಿ, ಕಾರಣ ತವರೂರಿಗೆ ಹತ್ತಿರವಾಗಿದ್ದ ಸ್ಥಳದಲ್ಲೇ ಇರಬಹುದಲ್ಲಾ ಎಂಬ ಆಸೆ. ನಾವು ಬಯಸುವುದು ಒಂದು, ಆಗುವುದು ಮತ್ತೊಂದು. ನನ್ನ ಓದು ಮುಗಿಯುವಷ್ಟರಲ್ಲಿ, ನನ್ನ ಪತಿ ವಿದೇಶಕ್ಕೆ ಹಾರಿಯೇ ಬಿಟ್ಟ. ವನವಾಸಕ್ಕೆಂದು ಹೊರಟ ರಾಮನ ಜೊತೆ ಹೆಜ್ಜೆ ಹಾಕಿದ ಸೀತೆಯ ನಾಡಿನವಳಲ್ಲವೇ ನಾನು. ನನ್ನ ಪರೀಕ್ಷೆ ಫಲಿತಾಂಶ ಬಂದ ಮರುದಿನವೇ ಗಂಡನೊಂದಿಗೆ ಬಾಳ್ವೆ ಮಾಡಲು ಹೊರಟೆ. ಒಲವಿನ ಸಂಗಾತಿಯೊಂದಿಗೆ ಬಾಳುವ ಸವಿಗನಸುಗಳು ಒಂದೆಡೆಯಾದರೆ, ನನ್ನವರೆನ್ನೆಲ್ಲಾ ತೊರೆದು ಹೊರದೇಶಕ್ಕೆ ಹೋಗಲು ಕಸಿವಿಸಿ. ಕಣ್ತುಂಬಾ ನೀರು ತುಂಬಿಕೊಂಡು ಹೊರಟವಳಿಗೆ ಮತ್ತೊಂದು ಆಘಾತ ಕಾದಿತ್ತು. ವಿದೇಶದಲ್ಲಿ ಕೆಲಸ ಮಾಡಲು ಬೇಕಾದ ಮೊದಲ ಅರ್ಹತಾ ಪರೀಕ್ಷೆಯಲ್ಲಿ (ಐ.ಇ.ಎಲ್.ಟಿ.ಎಸ್) ನಪಾಸಾಗಿದ್ದೆ. ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದ್ದೆ.
ಅದು ನನ್ನ ಮೊದಲ ವಿಮಾನಯಾನವಾಗಿತ್ತು. ಲಗೇಜಿನ ತಪಾಸಣೆ, ಸೆಕ್ಯುರಿಟಿ ಚೆಕ್ ಎಲ್ಲಾ ಮುಗಿದ ನಂತರ, ಅಲ್ಲಿಯವರೆಗೆ ತಡೆದಿದ್ದ ಅಳು ಉಕ್ಕಿ ಬಂತು. ವಾಷ್ ರೂಮಿಗೆ ಹೋಗಿ, ಮನಸ್ಸು ಹಗುರಾಗುವವರೆಗೆ ಅತ್ತೆ. ನಂತರ, ವಿಮಾನ ಏರಿ ಕುಳಿತವಳು, ಭವಿಷ್ಯದ ಹೊಂಗನಸು ಕಾಣತೊಡಗಿದೆ. ಇಲ್ಲಿಂದ ನನ್ನ ಬದುಕಿನ ಹೊಸ ಅಧ್ಯಾಯ ಆರಂಭವಾಗಿತ್ತು. ವಿದೇಶಗಳಲ್ಲಿನ ನೀತಿ, ನಿಯಮಗಳನ್ನು, ನನ್ನ ಪತಿ ತಾಳ್ಮೆಯಿಂದ, ಪ್ರೀತಿಯಿಂದ ಪರಿಚಯಿಸುತ್ತಿದ್ದ. ಮೊದಲಿಗೆ ಕಾರು ಓಡಿಸಲು ಲೈಸೆನ್ಸ್ ಪಡೆ, ಏಕೆಂದರೆ ವಿದೇಶದಲ್ಲಿ ಕಾರು ಓಡಿಸಲು ಕಲಿಯದಿದ್ದರೆ, ಕಾಲಿಲ್ಲದ ಕುಂಟನಂತೆ. ನಮ್ಮೂರಿನಲ್ಲಿ ಸಲೀಸಾಗಿ ಕಾರು ಓಡಿಸುತ್ತಿದ್ದವಳು, ಇಲ್ಲಿ ಎರಡು ಬಾರಿ ಫೇಲಾದೆ. ಅಂತೂ ಮೂರನೆಯ ಬಾರಿ ಉತ್ತೀರ್ಣಳಾದೆ. ಇನ್ನು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡಲು ಹತ್ತು ಹಲವು ನಿಬಂಧನೆಗಳು. ಐ.ಇ.ಎಲ್.ಟಿ.ಎಸ್. ಪರೀಕ್ಷೆ ಕಟ್ಟಲು ಸಿದ್ಧತೆ ನಡೆಸಿದೆ. ಪತಿಯ ಮಾರ್ಗದರ್ಶನದಲ್ಲಿ ಇಲ್ಲಿಯೂ ಯಶಸ್ವಿಯಾದೆ. ‘ಪ್ಲಾಬ್’ ಪರೀಕ್ಷೆಯ ಸಿದ್ಧಾಂತ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಉಳಿದದ್ದು ಪ್ರಾಯೋಗಿಕ ಪರೀಕ್ಷೆ. ಕೋಚಿಂಗ್ ಪಡೆಯಲು ಲಂಡನ್ನಿಗೆ ತೆರಳಬೇಕಾಗಿತ್ತು, ಅದೇ ಸಮಯಕ್ಕೆ ಗರ್ಭಿಣಿಯಾಗಿದ್ದೆ, ಊಟ ಸೇರುತ್ತಿರಲಿಲ್ಲ, ತಿಂದದ್ದೆಲ್ಲಾ ವಾಂತಿಯಾಗುತ್ತಿತ್ತು, ಸುಸ್ತು. ಬಳಿಯಲ್ಲಿ ಅಮ್ಮ ಇದ್ದಿದ್ದರೆ ಎಂದು ಹಂಬಲಿಸುತ್ತಿದ್ದೆ. ಕೋಚಿಂಗ್ ಕ್ಲಾಸಿಗೆ ಹೋಗಲಾಗಲಿಲ್ಲ. ಹೊಸ ಪರಿಸರ, ಹೊಸ ಪರೀಕ್ಷಾ ವಿಧಾನ, ಗರ್ಭಿಣಿ ಬೇರೆ ..ಪ್ರಾಯೋಗಿಕ ಪರೀಕ್ಷೆಯಲ್ಲಿ ಫೇಲಾದೆ. ಮುಂದೆರೆಡು ದಿನದಲ್ಲಿ ಗರ್ಭಪಾತವಾಗಿತ್ತು. ಎಲ್ಲರ ಮೇಲೂ ವಿನಾಕಾರಣ ರೇಗುತ್ತಿದ್ದೆ – ವಿದೇಶಕ್ಕೆ ಬಂದ ಗಂಡನ ಮೇಲೆ ಸಿಟ್ಟು, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಸಿಟ್ಟು, ಗರ್ಭಪಾತವಾಗಿದ್ದಕ್ಕೆ ಸಿಟ್ಟು. ಓದಿ ಓದಿ ಸುಸ್ತಾಗಿ ಹೋಗಿದ್ದೆ. ಹತ್ತು ವರ್ಷಗಳ ಕಾಲ, ಒಂದು ರಾತ್ರಿಯೂ ಸರಿಯಾಗಿ ನಿದ್ರೆ ಮಾಡಿದ ನೆನಪಿಲ್ಲ. ಕುಟುಂಬದ ಯಾವುದೇ ಶುಭ ಸಮಾರಂಭಗಳಿಗೂ ಹೋಗಿರಲಿಲ್ಲ.
ಆದರೆ ನನ್ನ ಬಾಳ ಸಂಗಾತಿಯ ಆರೈಕೆಯಿಂದ ಮತ್ತೆ ಮೊದಲಿನಂತಾದೆ. ಮನಸ್ಸನ್ನು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿದಾಗ ಮಾತ್ರ ನಿನ್ನಲ್ಲಿ ಚೈತನ್ಯ, ಹುರುಪು ಮೂಡುವುದು, ಎಂಬ ಅವನ ಸಲಹೆಯ ಮೇರೆಗೆ, ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ನನ್ನ ಪತಿಯೂ, ನನ್ನ ಜೊತೆಗೇ ಕುಳಿತು ಓದುತ್ತಿದ್ದ, ನನಗೆ ಅರ್ಥವಾಗದ ವಿಷಯ ಬಂದಾಗ, ಸೂಕ್ತ ವಿವರಣೆ ನೀಡುತ್ತಿದ್ದ. ಹೀಗೆ ನನ್ನ ಮನಸ್ಸೆಲ್ಲಾ ಪರೀಕ್ಷೆಯತ್ತ ಕೇಂದ್ರೀಕೃತವಾಗಿತ್ತು. ಪುನಃ ಗರ್ಭಿಣಿಯಾದೆ. ಒಂದು ತಿಂಗಳು ಕೋಚಿಂಗ್ ಕ್ಲಾಸಿಗೂ ಹಾಜರಾದೆ. ಪೂರ್ಣ ಸಿದ್ಧತೆಯೊಂದಿಗೆ ಪರೀಕ್ಷೆ ಬರೆಯಲು ಪತಿಯೊಡನೆ ಲಂಡನ್ನಿಗೆ ಹೋದೆ. ಮುಂಜಾನೆ ಏಳು ಗಂಟೆಗೇ, ಟ್ಯೂಬ್ ಟ್ರೈನ್‌ನಲ್ಲಿ ಕುಳಿತು ಪರೀಕ್ಷಾ ಕೇಂದ್ರಕ್ಕೆ ಹೋದೆ. ನಾನು ಪರೀಕ್ಷೆ ಮುಗಿಸಿ ಹೊರಬಂದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಅಲ್ಲೆಲ್ಲಿಯೂ ಗಂಡನ ಸುಳಿವಿರಲಿಲ್ಲ. ಕಾಫಿಬಾರ್‌ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವಾಗ, ಜನರು ಮಾತಾಡಿಕೊಳ್ಳುತ್ತಿದ್ದು ಕಿವಿಗೆ ಬಿತ್ತು. ಮುಂಜಾನೆಯ ಏಳೂವರೆ ಗಂಟೆಯ ಟ್ಯೂಬ್ ಟ್ರೈನ್‌ನಲ್ಲಿ ಬಾಂಬ್ ಸ್ಫೋಟವಾಗಿದೆಯೆಂದೂ, ಹಲವರು ಮೃತ ಪಟ್ಟಿದ್ದರೆ, ಮತ್ತೆ ಕೆಲವರು ಗಾಯಗೊಂಡಿದ್ದರು. ಒಮ್ಮೆ ಮೈನಡುಗಿತು ಅಬ್ಬಾ, ನಾವು ಪಯಣಿಸಿದ್ದು ಏಳು ಗಂಟೆಯ ಟ್ಯೂಬ್ ಟ್ರೈನ್‌ನಲ್ಲಿ. ವಾಹನ ಸಂಚಾರ ನಿರ್ಭಂಧಿಸಿದ್ದುದರಿಂದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಎಲ್ಲೆಡೆ ಪೊಲೀಸರ ಗಸ್ತು ತಿರುಗುತ್ತಿತ್ತು. ಈ ಗಲಭೆಯಲ್ಲಿ, ನನ್ನ ಗಂಡ ಎಲ್ಲಿಯಾದರೂ ಸಿಕ್ಕಿ ಹಾಕಿಕೊಂಡಿರಬಹುದಾ ಎಂಬ ಭಯ ಕಾಡತೊಡಗಿತು. ಅಷ್ಟರಲ್ಲಿ, ನನ್ನ ಯಜಮಾನ ಬರುತ್ತಿರುವುದನ್ನು ಕಂಡು ಮನಸ್ಸು ನಿರಾಳವಾಯಿತು.
ಜುಲೈ ತಿಂಗಳು, ಚಳಿ, ಗಾಳಿ, ಆಗಾಗ್ಗೆ ಸುರಿಯುವ ಮಳೆಯಲ್ಲಿ ತೋಯುತ್ತಾ ಹದಿನೈದು ಮೈಲಿ ದೂರದಲ್ಲಿದ್ದ ಲಾಡ್ಜಿಗೆ ಕಾಲ್ನಡಿಗೆಯಲ್ಲಿ ಹೊರಟೆವು. ನಾನು ಎಂಟು ತಿಂಗಳ ತುಂಬು ಗರ್ಭಿಣಿ. ಅಲ್ಲಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಾ ಐದು ಮೈಲಿ ನಡೆದಿರಬಹುದು. ಆಗ ದೇವದೂತನಂತೆ ಬಂದ ಪೊಲೀಸ್ ಅಧಿಕಾರಿಯೊಬ್ಬನು, ನಮ್ಮ ಪರಿಸ್ಥಿತಿ ಕಂಡು, ತನ್ನ ವಾಹನದಲ್ಲಿ, ನಮ್ಮ ಲಾಡ್ಜ್ ಬಳಿ ಬಿಟ್ಟನು. ಮಾರನೆಯ ದಿನ, ಲಂಡನ್ನಿನಿಂದ, ನಾವು ನಮ್ಮ ಮನೆಗೆ ಹಿಂತಿರುಗಿದೆವು. ಗರ್ಭದಲ್ಲಿದ್ದ ಮಗಳು ಹದಿನೈದು ದಿನ ಮೊದಲೇ ಹುಟ್ಟಿದಳು. ಬಾಣಂತನ ಮಾಡಲು ಅಮ್ಮ ಬಂದಾಗ, ಅವರ ಸಹವಾಸದಲ್ಲಿ, ಹೊಸತನ ಮೂಡಿತ್ತು. ಮಗಳ ಗುಂಡಾದ ಮುಖ, ನಕ್ಷತ್ರದಂತೆ ಹೊಳೆಯುವ ಕಣ್ಣುಗಳು, ನೀಳವಾಗಿದ್ದ ಮೂಗು, ಸೊಂಪಾಗಿ ಬೆಳೆದಿದ್ದ ಗುಂಗುರು ಕೂದಲು, ಮಗು ಅತ್ತರೂ ಚೆಂದ ನಕ್ಕರೂ ಚೆಂದ. ಮೂರು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ. ಅಮ್ಮ ಹೊರಟು ನಿಂತಾಗ ಬೇಸರವಾಗಿತ್ತು. ಕಣ್ಣರಳಿಸಿ ನಗುತ್ತಿದ್ದ ಮಗು, ಪರೀಕ್ಷೆಯಲ್ಲಿ ಪಾಸಾದ ಸುದ್ದಿ, ನನ್ನಲ್ಲಿ ಸಂತೃಪ್ತಿ ಮೂಡಿಸಿದ್ದವು. ಮಗುವಿನ ಶುಶ್ರೂಷೆಗಾಗಿ ಅತ್ತೆ ಮಾವ ಬಂದರು.
ಇಲ್ಲಿನ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು, ಅಬ್ಸರ್‌ವರ್ ಆಗಿ ನುರಿತ ವೈದ್ಯರ ತಂಡದೊಂದಿಗೆ ಕೆಲವು ಕಾಲ ಕೆಲಸ ಮಾಡಬೇಕು. ಐವತ್ತು ಮೈಲಿ ದೂರದಲ್ಲಿದ್ದ ಆಸ್ಪತ್ರೆಯೊಂದರಲ್ಲಿ, ನನಗೆ ಅಬ್ಸರ್‌ವರ್ ಪೋಸ್ಟ್ ದೊರೆಯಿತು. ನಾನಾಗ ಆಸ್ಪತ್ರೆಯಲ್ಲಿನ ರೂಮಿನಲ್ಲಿ ಉಳಿಯಬೇಕಾದ ಪ್ರಸಂಗ ಬಂತು. ಮಗುವಿಗೆ ಫಾರ್‍ಮುಲಾ ಮಿಲ್ಕ್‌ನ್ನು ಬಾಟಲಿಯಲ್ಲಿ ಕುಡಿಸುವುದು ರೂಢಿಯಾಗಿತ್ತು. ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ. ಮತ್ತೆ ಬೇಸರ, ಕಳವಳ ನನಗೆ. ಅತ್ತೆ ಅಡಿಗೆ ಮನೆಯ ಜವಾಬ್ದಾರಿ ವಹಿಸಿಕೊಂಡರೆ, ಮಗುವಿನ ಲಾಲನೆ ಪಾಲನೆ ಮಾವನದೇ. ಶುಕ್ರವಾರ ಸಂಜೆ, ಮಗುವನ್ನು ಕಾಣಲು ಆತುರದಿಂದ ಓಡಿ ಬರುತ್ತಿದ್ದೆ, ಸೋಮವಾರ ಬೇಸರದಿಂದ ಆಸ್ಪತ್ರೆಗೆ ಹಿಂತಿರುಗುತ್ತಿದ್ದೆ. ಹೀಗೆ ಎರಡು ತಿಂಗಳು ಕಳೆದಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ, ಜನರಲ್ ಪ್ರಾಕ್ಟೀಷನರ್ (ಜಿ.ಪಿ.) ಹುದ್ದೆಗೆ ಜಾಹೀರಾತು ನೀಡಲಾಗಿತ್ತು. ಸಂದರ್ಶನಕ್ಕೆ ಹಾಜರಾದ ನಾಲ್ಕು ಅಭ್ಯರ್ಥಿಗಳಲ್ಲಿ, ಇಬ್ಬರು ಸ್ಥಳೀಯರು ಇದ್ದರು. ಹೊರದೇಶವಳಾದ ನನಗೆ ಈ ಹುದ್ದೆ ದೊರೆಯಲಾರದೆಂಬ ಭಾವ. ಹಾಗಾಗಿ ಯಾವುದೇ ಆತಂಕವಿಲ್ಲದೆ ಸಂದರ್ಶನವನ್ನು ಎದುರಿಸಿದೆ. ಮನೆಗೆ ಬಂದವಳು, ಎರಡು ದಿನ ಮಗುವಿನ ಜೊತೆ ಆರಾಮವಾಗಿ ಕಳೆದು, ಕೆಲಸಕ್ಕೆ ಹೊರಡಲು ತಯಾರಾಗುತ್ತಿದ್ದೆ. ಈ ಮೇಲ್ ನೋಡುತ್ತಿದ್ದ ಪತಿರಾಯ, ಒಮ್ಮೆಲೇ ಹರ್ಷೊದ್ಗಾರ ಮಾಡಿದ. ನಾನು ಜಿ.ಪಿ. ಹುದ್ದೆಗೆ ಆಯ್ಕೆಯಾಗಿದ್ದೆ.
ಮತ್ತದೇ ಗೊಂದಲ, ಕಳವಳ – ಕಾರಣ ಜಿ.ಪಿ.ಕೋರ್ಸ್ ಮೂರು ವರ್ಷದ ಅವಧಿಯದು. ಪ್ರತೀ ಆರು ತಿಂಗಳಿಗೊಮ್ಮೆ ಆಸ್ಪತ್ರೆಯ ಬೇರೆ ಬೇರೆ ಶಾಖೆಗಳಿಗೆ ವರ್ಗಾವಣೆ, ಹನ್ನೆರಡು ಗಂಟೆಯ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಬೇಕು. ನನ್ನ ಪತಿ ಬೇರೆ ಊರಿನಲ್ಲಿ ವೈದ್ಯನಾಗಿದ್ದ, ವಾರಾಂತ್ಯದಲ್ಲಿ ಮಾತ್ರ ಮನೆಗೆ ಬರುತ್ತಿದ್ದ. ಅತ್ತೆ ಮಾವ ಹಿಂತಿರುಗುವ ಸಮಯ ಬಂದಾಗಿತ್ತು. ಐದು ತಿಂಗಳ ಮಗುವನ್ನು ಹೇಗೆ ಜೋಪಾನ ಮಾಡಲಿ, ವೈದ್ಯ ವೃತ್ತಿಯನ್ನು ಹೇಗೆ ನಿಭಾಯಿಸಲಿ? ಸ್ನೇಹಿತರ ಸಲಹೆ ಪಡೆದು, ಡೇ ಕೇರ್ ವಿಚಾರಿಸಿದೆ. ನನಗೆ ರಾತ್ರಿ ಪಾಳಿಯಿದ್ದಾಗ, ಏನು ಮಾಡುವುದು? ನ್ಯಾನಿಯ ಸಹಾಯ ಪಡೆಯಬಹುದು ಎಂದೂ ಕೆಲವರು ಸೂಚಿಸಿದರು. ಇನ್ನು ಎಳೆಯ ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಟ್ಟಾಗ, ನೆಗಡಿ, ಕೆಮ್ಮು, ಜ್ವರ ಬರುವುದು ಸಹಜ. ಜ್ವರದಿಂದ ಬಳಲುವ ಮಕ್ಕಳನ್ನು ಡೇ ಕೇರ್‌ನಲ್ಲಿ ಇಟ್ಟುಕೊಳ್ಳುವುದಿಲ್ಲ, ಬೇರೆ ಮಕ್ಕಳಿಗೆ ಖಾಯಿಲೆ ಹರಡಬಾರದೆಂಬ ಮುಂಜಾಗ್ರತಾ ಕ್ರಮ. ನನಗೆ ದಿಕ್ಕೇ ತೋಚದಂತಾಗಿತ್ತು.
ಅತ್ತೆ ಮಾವ, ಮೊಮ್ಮಗುವನ್ನು ಬಿಟ್ಟು ಹೋಗಲಾರದೆ ಚಡಪಡಿಸುತ್ತಿದ್ದರು. ‘ಮಗುವನ್ನು ನಮ್ಮ ಜೊತೆ ಕಳುಹಿಸು, ನಿನ್ನ ಓದು ಮುಗಿದ ಮೇಲೆ, ಪುಟ್ಟಿಯನ್ನು ಕರೆದುಕೊಂಡು ಹೋಗುವಿಯಂತೆ’ ಎಂದು ಮಾವನವರು ಕಳಕಳಿಯಿಂದ ಹೇಳಿದರು. ಆದರೆ ಐದು ತಿಂಗಳ ಹಸುಗೂಸನ್ನು ಹೇಗೆ ತಾನೆ ಬಿಟ್ಟಿರಲಿ, ನಾನು ಒಪ್ಪಲಿಲ್ಲ. ಜಿ.ಪಿ.ಕೋರ್ಸ್‌ಗೆ ಸೇರಿದೆ, ಮಗುವನ್ನು ಡೇಕೇರ್‌ಗೆ ಸೇರಿಸಿದೆ, ನ್ಯಾನಿಯನ್ನೂ ಗೊತ್ತು ಮಾಡಿದೆ. ಒಂದು ತಿಂಗಳು ಕಳೆಯುವುದರಲ್ಲಿ ಹೈರಾಣಾಗಿ ಹೋದೆ. ಎರಡೆರಡು ದಿನಕ್ಕೂ ಮಗುವಿಗೆ ನೆಗಡಿ, ಕೆಮ್ಮಿನ ಹಾವಳಿ, ತರಬೇತಿ ಅವಧಿಯಲ್ಲಿ, ಪದೇ ಪದೇ ರಜೆ ಹಾಕುವಂತಿಲ್ಲ. ಆಸ್ಪತ್ರೆಯಲ್ಲಿ ಕೆಲಸದ ಹೊರೆ ಜಾಸ್ತಿ ಇತ್ತು. ನನ್ನ ಆರೋಗ್ಯವೂ ಹದಗೆಟ್ಟಿತ್ತು. ದೇವಕಿ ಕೃಷ್ಣನನ್ನು ಯಶೋಧೆಯ ಬಳಿ ಕಳುಹಿಸಿದ ಪ್ರಸಂಗ ನೆನಪಿಗೆ ಬಂತು. ವಾರಾಂತ್ಯದಲ್ಲಿ ಮನೆಗೆ ಬಂದ ಗಂಡನೊಂದಿಗೆ ಸುದೀರ್ಘವಾಗಿ ಚರ್ಚಿಸಿದೆ. ನನ್ನ ಕೆಲಸದ ಒತ್ತಡದಲ್ಲಿ ಮಗುವನ್ನು ಕಡೆಗಣಿಸಲಾದೀತೆ? ಜಿ.ಪಿ. ಕೋರ್ಸ್ ಮುಗಿಯುವವರೆಗೂ, ಮಗುವನ್ನು ಅತ್ತೆ ಮಾವನ ಬಳಿ ಬಿಡುವುದೇ ಸೂಕ್ತ ಎಂದೆನಿಸಿತ್ತು.
ಹದಿನೈದು ದಿನ ರಜೆ ಪಡೆದು ಮಗುವಿನೊಂದಿಗೆ ನಮ್ಮೂರಿಗೆ ಬಂದೆವು. ಅತ್ತೆ ಮಾವಂದಿರ ಸಂತಸಕ್ಕೆ ಎಣೆಯೇ ಇರಲಿಲ್ಲ. ಹಸುಗೂಸನ್ನು ಬಿಟ್ಟು ಹೋಗಲು ಮನಸ್ಸು ಗೋಳಿಡುತ್ತಿತ್ತು. ವೈದ್ಯ ವೃತ್ತಿಯನ್ನು ಯಾಕಾದರೂ ಆಯ್ಕೆ ಮಾಡಿದೆನೋ ಎಂಬ ಹಪಾಹಪಿ. ನನ್ನ ಪಾಲಿಗೆ ಯಶೋಧೆಯಂತಿದ್ದ ಅತ್ತೆಯವರಿಗೆ ವಂದಿಸಿ, ಗಂಡನೊಂದಿಗೆ ವಿದೇಶಕ್ಕೆ ಹಾರಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿವಂತೆ ಹಲವು ಆಪಾದನೆಗಳು ಕೇಳಿ ಬರುತ್ತಿದ್ದವು. ಐದು ತಿಂಗಳ ಕೂಸನ್ನು ಕಳುಹಿಸಲು ಮನಸ್ಸಾದರೂ ಹೇಗೆ ಬಂತು? ಮಗುವಿಗಿಂತ ವೃತ್ತಿಯೇ ಮುಖ್ಯವಾಯಿತೇ? ಮಕ್ಕಳನ್ನು ಸಾಕಲಾಗದಿದ್ದವರು, ಮಕ್ಕಳನ್ನು ಹಡೆದದ್ದಾದರೂ ಏಕೆ? ಇಂತಹ ಮಾತುಗಳನ್ನು ಕೇಳಿ ಕೇಳಿ ಮನಸ್ಸು ರೋಸಿ ಹೋಗುತ್ತಿತ್ತು. ನನ್ನ ಪತಿ, ‘ನಿನ್ನ ಓದು ಮುಗಿದ ತಕ್ಷಣ, ಮಗಳನ್ನು ಕರೆಸಿಕೊಳ್ಳೋಣ. ವರ್ಷಕ್ಕೊಂದು ಬಾರಿ ಅಮ್ಮ ಮಗಳನ್ನು ಕರೆದುಕೊಂಡು ಬರುತ್ತಾರೆ. ನಾವೂ, ರಜೆ ಸಿಕ್ಕಾಗ ಹೋಗೋಣ.’ ಎಂದು ಸಮಾಧಾನ ಮಾಡುತ್ತಿದ್ದರು.
ವಿದೇಶಗಳಿಗೆ ವಲಸೆ ಬಂದ ಕೆಲವರು ಅದೃಷ್ಟವಂತರು – ವರ್ಷದಲ್ಲಿ ಆರು ತಿಂಗಳು ಅಪ್ಪ ಅಮ್ಮನನ್ನೂ, ಇನ್ನಾರು ತಿಂಗಳು ಅತ್ತೆ ಮಾವನನ್ನೂ ಕರೆಸಿಕೊಂಡು ಮಕ್ಕಳನ್ನು ಸಲಹುವರು. ಇನ್ನೂ ಕೆಲವರು ಶತಪ್ರಯತ್ನ ಮಾಡಿ ಆಯಾಳನ್ನು ಭಾರತದಿಂದಲೇ ಕರೆಸಿಕೊಳ್ಳುತ್ತಾರೆ. ಮತ್ತೆ ಕೆಲವರು, ತಮ್ಮ ವೃತ್ತಿಯನ್ನು ಕಡೆಗಣಿಸಿ, ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗುತ್ತಾರೆ. ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಐದಾರು ವರ್ಷಗಳೇ ಉರುಳಿ ಹೋಗಿರುತ್ತವೆ. ಮತ್ತೆ ವೃತ್ತಿಗೆ ಹಿಂತಿರುಗುವುದು ಹರಸಾಹಸವೇ.
ಅಮ್ಮ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡು ಬೆಳೆದವಳು ನಾನು. ಬಾಲ್ಯದಿಂದಲೇ, ಅಮ್ಮನಂತೆಯೇ ವೈದ್ಯಳಾಗುವ ಕನಸು ಹೊತ್ತವಳು. ಪ್ರತಿ ವರ್ಷ, ತರಗತಿಗೇ ಮೊದಲಿಗಳಾಗುತ್ತಿದ್ದೆ, ಯಾವುದೇ ಅಡೆತಡೆಯಿಲ್ಲದೆ ಎಮ್.ಬಿ.ಬಿ.ಎಸ್., ಎಮ್.ಡಿ. ಪದವಿ ಪಡೆದವಳು. ಮದುವೆಯ ಬಳಿಕ, ಪತಿಯೊಡನೆ ವಿದೇಶಕ್ಕೆ ವಲಸೆ ಹೋದೆ. ವಿದೇಶಕ್ಕೆ ವಲಸೆ ಬಂದವರ ಬದುಕಿನ ತಾಳ ತಪ್ಪಿದ್ದೆಲ್ಲಿ? ಓದು ಮುಗಿಸಿ ತಾಯಿಯಾಗಲು ಲೆಕ್ಕ ಹಾಕಿದ್ದ ಮೂವತ್ತೈದು ವರ್ಷದ ಸೂಸನ್, ಅಬಾರ್ಷನ್ ಆಗಿ ಕಣ್ಣಿರು ಹಾಕುತ್ತಿದ್ದಾಳೆ. ಮಕ್ಕಳು ದೊಡ್ಡವರಾಧ ಮೇಲೆ ವೃತ್ತಿಗೆ ಹಿಂತಿರುಗುವೆ ಎಂದು ಮನೆ ಸೇರಿದ್ದ ನೀಲಿಮಾ, ಪರೀಕ್ಷೆಗಳನ್ನು ಎದುರಿಸಲಾಗದೆ ಕಂಗಾಲಾಗಿದ್ದಾಳೆ. ಮಗನಿಗೆ ಆರೋಗ್ಯ ಸರಿಯಿಲ್ಲ ಎಂದು ಸವಿತ, ವೃತ್ತಿಯಿಂದ ದೂರ ಸರಿದಿದ್ದಾಳೆ. ಇದು ರೆಕ್ಕೆ ಬಿಚ್ಚಿ ಹಾರಿದವರ ಕಥೆ.
ಅಕ್ಕಾ, ನೀನು ಆಧ್ಯಾತ್ಮದ ಅರಿವಿನ ಉತ್ತುಂಗಕ್ಕೇರಲು, ಎಲ್ಲಾ ವ್ಯಾಮೋಹಗಳನ್ನೂ ಕಳಚಿ, ಎಲ್ಲಾ ಬಂಧನಗಳನ್ನೂ ಕಿತ್ತೆಸೆದು ಹೊರಟೆ. ಈ ಸಮಾಜದ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಬಸವ ಕಲ್ಯಾಣದತ್ತ ಹೆಜ್ಜೆ ಹಾಕಿದೆ. ಮತ್ತೆ ನಡೆದೆ ಶ್ರೀಶೈಲದತ್ತ, ಚನ್ನಮಲ್ಲಿಕಾರ್ಜುನನ್ನು ಸೇರಲು. ನಿನ್ನ ಧೈರ್ಯ, ಕೆಚ್ಚೆದೆ, ಸಾಹಸ, ನಮ್ಮಂತಹ ಸಾಧಾರಣ ಮಹಿಳೆಯರಿಗೆ ಸಾಧ್ಯವೇ? ಹಲವು ಉದ್ಯೋಗಸ್ಥ ಮಹಿಳೆಯರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕೌಟುಂಬಿಕ ಜವಾಬ್ದಾರಿ ನಿರ್ವಹಿಸಲಾರದೆ, ಉದ್ಯೋಗಕ್ಕೆ ತಿಲಾಂಜಲಿ ನೀಡುತ್ತಿದ್ದಾರೆ. ಹೆಣ್ಣಿನ ಈ ಪರಿಸ್ಥಿತಿಗೆ ಪರಿಹಾರ ಎಲ್ಲಿ ಹುಡುಕಲಿ – ಸಾಮಾಜಿಕ ಬದಲಾವಣೆಗಳಲ್ಲಿ ಇರಬಹುದೇ ಪರಿಹಾರ? ಅಥವಾ ಹೊಸ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಅಡಗಿರಬಹುದೇ ಪರಿಹಾರ? ಒಟ್ಟಿನಲ್ಲಿ ಸಾಮಾಜಿಕ ರಂಗದಲ್ಲಿ ಹೆಣ್ಣಿನ ಪಾತ್ರಗಳ ಬಗ್ಗೆ ಎಂದು ನಮ್ಮ ಮನಸ್ಥಿತಿ ಬದಲಾಗುವುದೋ, ಅಂದು ತಾನು ಬಯಸಿದ ಕ್ಷೇತ್ರದಲ್ಲಿ ಮುನ್ನೆಡೆಯಬಲ್ಲಳು.
–ಡಾ.ಗಾಯತ್ರಿದೇವಿ ಸಜ್ಜನ್
ಹೃದಯಸ್ಪರ್ಶಿಯಾಗಿದೆ ಬರಹ. ಕೊನೆಯ ಮಾತುಗಳು ಬಹಳ ಸತ್ಯ.
ಕೆಲಸಕ್ಕೆ ಹೋಗುವ ಹೆಣ್ಣಿಗೆ ಹಲವಾರು ಕಷ್ಟ ತೊಂದರೆಗಳು.
ವಾಸ್ತವಿಕ ಬದುಕಿನ ಅದರಲ್ಲೂ..ಉದ್ಯೋಗಸ್ಥ ಮಹಿಳೆಯರ.
ಬದುಕ ಬವಣೆಯ ಅನಾವರಣ.. ಸೊಗಸಾಗಿದೆ.
ಧನ್ಯವಾದಗಳು ಮೇಡಂ
ನಾವು ಬರೀ ವೈದ್ಯರಾಗಿದ್ದಾರೆ ಅವರಿಗೇನು ಕಡಿಮೆ ಅಂತಾ ಯೋಚಿಸುತ್ತೇವೆ. ಈ ಬರಹ ನೋಡಿದರೆ ಗೊತ್ತಾಗುತ್ತದೆ ಅವರ ಕಷ್ಟ ಕಾರ್ಪಣ್ಯಗಳು ಅವರ ತ್ಯಾಗ……ಎಂತಹುದು ಅಂತಾ. ವಿದೇಶದ ಜೀವನ ಅಷ್ಟು ಸುಲಭವಲ್ಲ ಅಲ್ಲೂ ಹೋರಾಟವಿದೆ….ತುಂಬಾ ಚೆನ್ನಾಗಿದೆ ಮೇಡಂ ಲೇಖನ
ವೈದ್ಯಳಾಗಿಯೂ ವಿದೇಶದಲ್ಲಿ ಪಟ್ಟ ಪಾಡು ನಿಜಕ್ಕೂ ಮನಮುಟ್ಟಿತು. ಸೊಗಸಾದ ಬರೆಹ.
ತಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಅನಂತಾನಂತ ವಂದನೆಗಳು
ಮನಮುಟ್ಟುವ ಬರಹ ! ಭಾವನಾತ್ಮಕ !
( ಅಂದ ಹಾಗೆ , ನಾನು ನಿರ್ಮಲಾ ಸಜ್ಜನ್ ಸಹೋದ್ಯೋಗಿ)
ಸುಧಾಮಣಿ.
ರೆಕ್ಕೆ ಬಿಚ್ಚಿ ಹಾರಿದರೂ ಮನ ಮುದುಡುವ ಸನ್ನಿವೇಶಗಳು ಎದುರಾಗುವ ಪರಿಸ್ಥಿತಿಗಳ ನೈಜ ಚಿತ್ರಣನವನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕಾಗಿ ಅಭಿನಂದನೆಗಳು.