ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 3

Share Button

 

ನಮ್ಮ ಮೊದಲ ಪ್ರವಾಸೀ ತಾಣ –‘ಸತ್ಯಾಗ್ರಹ ಮನೆ’-ಇದು ಗಾಂಧಿಯವರು ವಾಸಿಸುತ್ತಿದ್ದ ಮನೆ.. ಗಾಂಧಿಯವರು ಭಾರತೀಯರ ಹಾಗೂ ಕರಿಯರ ಶೋಷಣೆ ನಡೆಸುತ್ತಿದ್ದ ಬಿಳಿಯರ ವಿರುದ್ಧ ಸತ್ಯಾಗ್ರಹ ಚಳುವಳಿಯನ್ನು ಆರಂಭಿಸಿದ ತಾಣ ಇದು. ಅವರು ಅಹಿಂಸೆ ಮತ್ತು ಶಾಂತಿಯ ಮೂಲಕವೇ ಸಮಾಜದಲ್ಲಿ ಸಮಾನತೆ ತರುವಲ್ಲಿ ಯಶಸ್ವಿಯಾದ ಸಾಹಸಗಾಥೆ ಇಲ್ಲಿಂದಲೇ ಆರಂಭ. ಮೋಹನದಾಸ್ ಕರಮಚಂದ ಗಾಂಧಿಯವರು ಬ್ಯಾರಿಸ್ಟರ್ ಆಗಿ ಇಲ್ಲಿಗೆ ಬಂದರು. ಸುಮಾರು ಇಪ್ಪತ್ತೊಂದು ವರ್ಷಗಳ ಕಾಲ (1893-1914) ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದರು. ‘ಎತ್ತಣ ಮಾಮರ, ಎತ್ತಣ ಕೋಗಿಲೆ’ ಎನ್ನುವ ಹಾಗೆ ಗುಜರಾತಿನಲ್ಲಿ ಜನಿಸಿದ ಗಾಂಧಿ, ಲಂಡನ್‌ನಲ್ಲಿ ಶಿಕ್ಷಣ ಪಡೆದು, ದಕ್ಷಿಣ ಆಫ್ರಿಕಾದಲ್ಲಿ ತಮ್ಮ ವಕೀಲ ವೃತ್ತಿ ಆರಂಭಿಸಿದರು. ಇಲ್ಲಿ ವರ್ಣಬೇಧದಿಂದ ನಲುಗಿದ್ದ ಭಾರತೀಯರ ಹಕ್ಕುಗಳಿಗಾಗಿ ಸತ್ಯಾಗ್ರಹ ಚಳುವಳಿ ಆರಂಭಿಸಿದರು.

ಸತ್ಯಾಗ್ರಹ ಮನೆ ಎಂದೇ ಕರೆಯಲ್ಪಡುವ ಈ ಮನೆಯ ಅರ್ಧಭಾಗ ಮ್ಯೂಸಿಯಂ ಹಾಗೂ ಇನ್ನರ್ಧ ಭಾಗ ಅತಿಥಿ ಗೃಹವನ್ನಾಗಿ ಮಾಡಿದ್ದಾರೆ. ಇದು ಬಹಳ ಸರಳವಾದ ಹಾಗೂ ಸುಂದರವಾದ ಕಾಟೇಜ್. ಸುತ್ತಲೂ ಮರಗಿಡಗಳು, ಮಧ್ಯೆ ಎರಡು ಕಾಟೇಜ್‌ಗಳು. ‘ಹರ್‍ಮನ್ ಕ್ಯಾಲನ್ ಬಾಷ್’ – ಎಂಬ ಜರ್ಮನ್ ಮೂಲದ ವ್ಯಕ್ತಿ ಇದನ್ನು ಗಾಂಧಿಯವರಿಗಾಗಿಯೇ ನಿರ್ಮಿಸಿದ. ಗಾಂಧೀಜಿಯವರು ಇಲ್ಲಿ ಒಂದು ವರ್ಷ ನೆಲೆಸಿದ್ದರು. (1908 ರಿಂದ 1909) ಗುಜರಾತಿ ಶೈಲಿಯ ಪೀಠೋಪಕರಣಗಳು, ಅವರು ನೂಲು ತೆಗೆಯುತ್ತಿದ್ದ ಚರಕ, ಓದುತ್ತಿದ್ದ ಪುಸ್ತಕಗಳು, ಬಳಸುತ್ತಿದ್ದ ಲಾಟೀನು … ಇವುಗಳನ್ನು ಕಾಣುತ್ತಿದ್ದ ಹಾಗೇ ಗಾಂಧಿಯವರು ಅಲ್ಲೇ ಸುಳಿದಾಡುತ್ತಿರುವ ಹಾಗೆ ಭಾಸವಾಗುತ್ತಿತ್ತು. ಅವರ ಫೋಟೋಗಳು ಮತ್ತು ಅವರ ಅಮೃತ ವಾಣಿಗಳು ಅಲ್ಲಿನ ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು. ಅವರ ಸರಳ ಜೀವನ ಹಾಗೂ ಆಧ್ಯಾತ್ಮಿಕ ಬದುಕನ್ನು ಪ್ರತಿಫಲಿಸುವಂತಿತ್ತು ಈ ಮನೆ. ಧ್ಯಾನಮಂದಿರದಂತಿದ್ದ ಮನೆಯಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡಿದೆವು. ಅಲ್ಲಿನ ಮೇಲ್ವಿಚಾರಕರು ಕೇಳಿದ ಪ್ರಶ್ನೆ ಹಾಗೂ ಉತ್ತರ ನಮ್ಮನ್ನು ಚಕಿತಗೊಳಿಸಿತು. ಅವರು, ಗಾಂಧಿಯವರು ಯಾರು? ಎಂದು ಕೇಳಿದರು ನಾವು ಗಾಂಧಿಯವರು ನಮ್ಮ ರಾಷ್ಟ್ರದ ತಂದೆ ಎಂಬ ಮಾಮೂಲಿ ಉತ್ತರ ನೀಡಿದೆವು.

ಸತ್ಯಾಗ್ರಹ ಮನೆ

ಅದಕ್ಕೆ ಅವರು ನೀಡಿದ ಉತ್ತರ, ಅಲ್ಲ. ಅವರು ಸತ್ಯಾಗ್ರಹ ಚಳುವಳಿಯ ತಂದೆ. ಅವರು ಇಡೀ ವಿಶ್ವದ ತಂದೆ ಹೀಗಿದೆ ನೋಡಿ ಗಾಂಧಿಯವರ ಬಗ್ಗೆ ಆಫ್ರಿಕನ್ನರ ಅಭಿಮಾನ. ಅಲ್ಲಿನ ಒಂದು ವೃತ್ತದಲ್ಲಿ ಗಾಂಧಿಯವರ ಪ್ರತಿಮೆ ಇಟ್ಟು ‘ಗಾಂಧಿ ಚೌಕ’ – ಎಂದು ಹೆಸರಿಸಿದ್ದಾರೆ. ಅಲ್ಲಿಂದ ನಾವು ‘ಪಿಯಟರ್ ಮಾರಿಟ್ಙ್ ಬರ್ಗ್’ ಗೆ ಭೇಟಿ ನೀಡಿದೆವು. ಬಿಳಿಯರಿಗೆಂದೇ ಮೀಸಲಿಟ್ಟಿದ್ದ ರೈಲ್ವೆ ಬೋಗಿಯೊಂದರಲ್ಲಿ ಪಯಣ ಮಾಡುತ್ತಿದ್ದ ಗಾಂಧಿಯವರನ್ನು ರೈಲ್ವೆ ಅಧಿಕಾರಿಗಳು ಹೊರತಳ್ಳಿದಂತಹ ಸ್ಥಳ. ಆ ದಿನ ನಾವು ನಮ್ಮ ಗೈಡ್‌ನೊಂದಿಗೆ ಗಾಂಧಿಯವರ ಬದುಕು, ವರ್ಣಬೇಧದ ವಿರುದ್ಧ ಹೋರಾಟ, ಸತ್ಯಾಗ್ರಹ ಚಳುವಳಿಯ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದೆವು. ಈ ಮನೆಯನ್ನು ‘ಐತಿಹಾಸಿಕ ಸ್ಮಾರಕ’ಎಂದು ಘೋಷಿಸಿದ್ದಾರೆ.

ನಮ್ಮ ಎರಡನೇ ಪ್ರವಾಸೀ ತಾಣ ದಕ್ಷಿಣ ಆಫ್ರಿಕಾದ ಮೊದಲನೆ ಕರಿಯ ಅಧ್ಯಕ್ಷರಾದ ನೆಲ್ಸನ್ ಮಂಡೇಲರವರ ಮನೆಗೆ. ಇವರನ್ನು ‘ಮದೀಬಾ’ ಅಥವಾ ದಕ್ಷಿಣ ಆಫ್ರಿಕಾದ ತಂದೆ ಎಂದೇ ಕರೆಯುವರು. ಪಕ್ಕದಲ್ಲಿಯೇ ನೆಲ್ಸನ್ ಮಂಡೇಲಾ ನ್ಯಾಷನಲ್ ಮ್ಯೂಸಿಯಂ ಇದೆ. ಮನೆಯ ಮುಂದೆ ಯುವತಿಯೊಬ್ಬಳು ತನ್ನ ವಾದ್ಯ ತಂಡದೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಆ ಹಾಡಿನ ಮೋಡಿಗೆ ಮರುಳಾದ ಕೆಲವರು ಆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ನಾವು ಟಿಕೆಟ್ ಕೊಂಡು ಮನೆಯೊಳಗೆ ಹೋದೆವು. ರಾಜ ಮನೆತನದಲ್ಲಿ ಜನಿಸಿದ ಮಂಡೇಲಾರವರು ಆ ಪುಟ್ಟ ಮನೆಯಲ್ಲಿ ರಾಜಕೀಯ ಹೋರಾಟವನ್ನು ಆರಂಭಿಸಿದರು. ತಮ್ಮ ಇಡೀ ಬದುಕನ್ನೇ ಅಪರ್ ಥೇಡ್ ವಿರುದ್ದದ ಹೋರಾಟಕ್ಕೆ ಮುಡಿಪಾಗಿಟ್ಟರು. ಸುಮಾರು 27  ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು (1963 – 1990) ತಮ್ಮ ಭಗೀರಥ ಪ್ರಯತ್ನದಿಂದ ತಮ್ಮ ತಾಯ್ನಾಡನ್ನು ಅಪರ್ ಥೇಡ್ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದರು. 1994 ರಿಂದ 1999 ರ ವರೆಗೆ ಮೊದಲ ಕರಿಯ ಆಫ್ರ್ರಿಕನ್ ಅಧ್ಯಕ್ಷರಾದರು.

ನೆಲ್ಸನ್ ಮಂಡೇಲಾರವರಿಗೆ ಈ ಮನೆ ಅಚ್ಚುಮೆಚ್ಚಿನ ತಾಣ. ಮನೆಯ ಎಲ್ಲ ಕೊಠಡಿಗಳ ಗೋಡೆಗಳ ಮೇಲೂ ಇವರ ಛಾಯಾಚಿತ್ರಗಳನ್ನು ತೂಗು ಹಾಕಿದ್ದಾರೆ. ಪೊಲೀಸರಿಂದ ಅಡಗಿಕೊಳ್ಳಲು ಒಂದು ನೆಲಮಾಳಿಗೆ ಸಹ ಇದೆ. ಇವರ ಎರಡನೇ ಪತ್ನಿ ವಿನ್ನಿ ಮಂಡೇಲಾರೊಂದಿಗೆ 1946 ರಿಂದ 1962 ರವರೆಗೆ ರಾಜಕೀಯ ಹೋರಾಟ ನಡೆಸಿದರು. ಇವರ ಹೋರಾಟದ ವಿವರಗಳನ್ನು ದಾಖಲಿಸುವ ಚಿತ್ರಗಳನ್ನು ನೋಡಬಹುದು. ಮಂಡೇಲಾರವರು -ನನಗೆ ಈ ಮನೆ (ನಂ.8116 ) ನನ್ನ ಪ್ರಪಂಚದ ಕೇಂದ್ರ ಬಿಂದು- ಎಂದರು. ಈ ಮನೆಯನ್ನು ‘ಸೊವೆಟೋ ಹೆರಿಟೇಜ್ ಟ್ರಸ್ಟ್’ ಗೆ ವಹಿಸಿದರು. ಅವರು ಇದನ್ನು ‘ನೆಲ್ಸನ್ ಮಂಡೇಲಾ ನ್ಯಾಷನಲ್ ಮ್ಯೂಸಿಯಂ’ ಎಂದು ಘೋಷಿಸಿ ‘ರಾಷ್ಟ್ರೀಯ ಸ್ಮಾರಕ’ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ.

ಮಂಡೇಲಾರವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಬಡತನವನ್ನು ಹೋಗಲಾಡಿಸಲು ವಿವಿಧ ಯೋಜನೆಗಳನ್ನು ಜಾರಿ ಮಾಡಿದರು. ಭೂಕಾಯ್ದೆಯನ್ನು ಮಾರ್ಪಡಿಸಿದರು. ಎಲ್ಲರಿಗೂ ವೋಟಿನ ಹಕ್ಕು ನೀಡಲಾಯಿತು. ಮಹಿಳಾ ಸಮಾನತೆಗಾಗಿ ಕಾಯ್ದೆ ರಚಿಸಿದರು. ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ಏಡ್ಸ್ ವಿರುದ್ಧ ಸಮರ ಸಾರಲಾಯಿತು. ಅವರು , ಈ ಪ್ರಪಂಚವನ್ನು ಬದಲಾಯಿಸಲು ಇರುವ ಏಕೈಕ ಅಸ್ತ್ರ ವಿದ್ಯಾಭ್ಯಾಸ ಎಂದರು. ಅವರು ‘ನೊಬೆಲ್ ಶಾಂತಿ ಪ್ರಶಸ್ತಿ’ ಗೆ ಭಾಜನರಾದರು. ಜೊತೆಗೆ ಭಾರತ ರತ್ನ ಪ್ರಶಸ್ತಿಯಿಂದ ಪುರಸ್ಕ್ರತರಾದರು.

ಮಂಡೇಲಾರವರ ಮನೆಯ ಸರಳ ಸುಂದರ ಪರಿಸರ, ವರ್ಣಬೇಧದ ವಿರುದ್ದ ಅವರ ಹೋರಾಟ, ತಾಯ್ನಾಡನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಲು ಅವರ ಪ್ರಯತ್ನ – ಇದನ್ನೆಲ್ಲಾ ಮಂಡೇಲಾ ಮ್ಯೂಸಿಯಂನಲ್ಲಿ ನೋಡಿದಾಗ ನನ್ನಲ್ಲಿ ಧನ್ಯತಾ ಭಾವ ಮೂಡಿತು. ಗಾಂಧಿ ಮತ್ತು ಮಂಡೇಲಾರವರ ಹೋರಾಟದ ಹಾದಿಯನ್ನು ಕಂಡಾಗ – ಇಂತಹ ಮಹಾಪುರುಷರು ಮತ್ತೆ ಮತ್ತೆ ಹುಟ್ಟಿ ಬರಬಾರದೇ ಎನ್ನಿಸಿತು. ಮಂಡೇಲಾರವರು ವರ್ಣಬೇಧದ ವಿರುದ್ದ ಹೋರಾಡಿದರೆ ಗಾಂಧಿಯವರು ಜಾತಿಬೇಧ ಹಾಗೂ ವರ್ಗಬೇಧದ ವಿರುದ್ಧ ಹೋರಾಟ ನಡೆಸಿದರು. ಇವರೀರ್ವರೂ ಮಹಿಳೆಯರ ಸಮಾನತೆ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು.

ನಮ್ಮ ಮುಂದಿನ ಪಯಣ ‘ಕಾನ್ಸ್ಟಿಟ್ಯುಷನ್ ಹಿಲ್’ (Constitution Hill)- ಕಡೆಗೆ. ಆಫ್ರಿಕನ್ನರ ಗುಲಾಮಗಿರಿಯ ವಿರುದ್ಧ ಹೋರಾಟದ ಪ್ರತಿಯೊಂದು ಹೆಜ್ಜೆಯನ್ನೂ ನಮ್ಮ ಮುಂದೆ ತೆರೆದಿಡುವ ಪ್ರಯತ್ನ ಇಲ್ಲಿದೆ. ಈ ಜೀವಂತ ಮ್ಯೂಸಿಯಂನಲ್ಲಿ – ಕೋಟೆ, ಕಾರಾಗೃಹ ಮತ್ತು ಕೋರ್ಟ್‌ನ ಕಟ್ಟಡಗಳು ಅವರ ನೋವು ನಲಿವಿನ ಹಾದಿಯ ಕೈಗನ್ನಡಿಯಂತಿವೆ. ಮಹಾನಾಯಕರಾದ ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲಾ ಹಾಗೂ ನೂರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ ಕಾರಾಗೃಹ ಇದು. ಪರಕೀಯರಿಂದ ಶೋಷಣೆಗೆ ಒಳಗಾದವರು ಅನ್ಯಾಯದ ವಿರುದ್ಧ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಡಿದ ಜನರ ಕಥೆ. ಈ ಹೋರಾಟದಲ್ಲಿ ಜೀವ ತೆತ್ತವರು ಲೆಕ್ಕವಿಲ್ಲದಷ್ಟು ಮಂದಿ. ಕಾರಾಗೃಹದ ಮೂಲೆಮೂಲೆಯಲ್ಲೂ ಅವರ ಹೋರಾಟದ ಕೂಗು, ಅವರ ನರಳಾಟದ ಸದ್ದು ಈಗಲೂ ಇಲ್ಲಿ ಪ್ರತಿಧ್ವನಿಸುತ್ತಿದೆ. ಅಲ್ಲಿನ ಗೋಡೆಬರಹಗಳು (Graffiti) ಅವರಲ್ಲಿದ್ದ ಕೆಚ್ಚು, ಆತ್ಮವಿಶ್ವಾಸ, ಒಂದಲ್ಲ ಒಂದು ದಿನ ಜಯ ನಮ್ಮದೇ ಎನ್ನುವ ಆಶಾವಾದದ ಕೈಗನ್ನಡಿ.

‘ದಕ್ಷಿಣ ಆಫ್ರಿಕಾ ರಿಪಬ್ಲಿಕ್ ಅಧ್ಯಕ್ಷರಾದ ‘ಪಾಲ್ ಕೃಗೇರ್’ ಬ್ರಿಟಿಷರ ಅತಿಕ್ರಮಣ ತಡೆಯಲು ನಿರ್ಮಿಸಿದ ಕೋಟೆಯಿದು. ಆದರೆ ಕಾಲಾನಂತರ ದಕ್ಷಿಣ ಆಫ್ರಿಕಾವನ್ನೇ ತಮ್ಮ ವಸಾಹತು ಮಾಡಿಕೊಂಡ ಬ್ರಿಟಿಷರು ಈ ಕೋಟೆಯನ್ನೇ ಬಂಧೀಖಾನೆಯನ್ನಾಗಿ ಮಾರ್ಪಡಿಸಿ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದರು. ಇದು ವಿಧಿಯ ಚದುರಂಗದಾಟವಲ್ಲದೇ ಮತ್ತೇನು? ಪುರಾತನವಾದ ಕೋಟೆಗೆ ಹೊಂದಿಕೊಂಡಂತೆ ಜೈಲನ್ನು ನಿರ್ಮಿಸಿದ್ದಾರೆ. ಇದನ್ನು – ನಂ. ನಾಲ್ಕು ಎನ್ನುವರು. ಜೈಲು ಸಂಕೀರ್ಣದಲ್ಲಿ ಒಂದು ಭಾಗವನ್ನು ಮಹಿಳಾ ಕೈದಿಗಳಿಗೆ ಮೀಸಲಿಟ್ಟಿದ್ದಾರೆ. ಹೆಚ್ಚಾಗಿ ರಾಜಕೀಯ ಕೈದಿಗಳನ್ನೇ ಬಂಧಿಸುತ್ತಿದ್ದ ಈ ಕಾರಾಗೃಹದಲ್ಲಿ ಕೆಲವು ಬಾರಿ ಕೈದಿಗಳು ಮಲಗಲೂ ಸ್ಥಳವಿಲ್ಲದೆ ಒಬ್ಬರ ತಲೆ ಇದ್ದ ಕಡೆ ಇನ್ನೊಬ್ಬರು ಕಾಲು ಹಾಕಿ ಮಲಗಬೇಕಾಗಿ ಬರುತ್ತಿತ್ತು. ಅವರಿಗೆ ಸ್ನಾನ ಎಂದರೆ ಬಯಲಿನಲ್ಲಿಯೇ ಬೆತ್ತಲೆಯಾಗಿ ನಿಲ್ಲಿಸಿ ಪೈಪಿನಿಂದ ರಭಸವಾಗಿ ನೀರು ಬಿಡುತ್ತಿದ್ದರಂತೆ. ಮಲವಿಸರ್ಜನೆ ಮಾಡಲೂ ಬಯಲು ಶೌಚಾಲಯವೇ ಎಲ್ಲರ ಮುಂದೆಯೇ ಮಲವಿಸರ್ಜನೆಗೆ ಕೂರಬೇಕಿತ್ತು. ಅವರನ್ನು ಪಶುಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರು. ಅವರಿಗೆ ಚಿತ್ರಹಿಂಸೆ ನೀಡಲು ಬಳಸುತ್ತಿದ್ದ ಉಪಕರಣಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿದ ನನಗೆ ಅಂಡಮಾನಿನ ‘ವೃತ್ತಾಕಾರದ ಸೆರೆಮನೆಯ’ ನೆನಪಾಗಿ ಹೊಟ್ಟೆ ತೊಳೆಸಿದಂತಾಯಿತು.

ಅಪರ್ ಥೇಡ್ ವಿರುದ್ಧದ ಹೋರಾಟದಲ್ಲಿ ಜಯ ಗಳಿಸಿದ ಬಳಿಕ ಇಲ್ಲಿಯೇ ಒಂದು ಕೋರ್ಟ್ ಕಟ್ಟಡ ನಿರ್ಮಿಸಿದ್ದಾರೆ. ಇದು ವರ್ಣಬೇಧವಿಲ್ಲದೇ ಎಲ್ಲರೂ ಒಂದೇ ಎನ್ನುವುದರ ಸಂಕೇತ. ಎಲ್ಲರಿಗೂ ಒಂದೇ ಬಗೆಯ ನ್ಯಾಯ ಸಿಗುವುದು. ದಕ್ಷಿಣ ಆಫ್ರಿಕಾದ ಮೂಲ ನಿವಾಸಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಐವತ್ತು ಪ್ರತಿಶತ ಮೀಸಲಾತಿ ಇರುವುದು. ಕಾಲೇಜುಗಳಲ್ಲಿ, ಬ್ಯಾಂಕುಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ..ಎಲ್ಲೆಡೆಯೂ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯೋಗಕ್ಕೆ ಮೀಸಲಾತಿ ಇದೆ. ಇಲ್ಲಿ ನೆಲೆಸಿರುವ ಎಲ್ಲರೂ ಸಮಾನ ಎಂದು ಸಾರುವ ಪವಿತ್ರ ಸ್ಥಳ.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ :  http://surahonne.com/?p=32483

-ಡಾ.ಗಾಯತ್ರಿದೇವಿ ಸಜ್ಜನ್

4 Responses

  1. ನಾಗರತ್ನ ಬಿ.ಆರ್ says:

    ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬರುತ್ತಿದೆ.ನೀವು ನೋಡಿದೆ ಸ್ಥಳ ಅಲ್ಲಿಯ ಪರಿಸರ ಪರಿಚಯ ನಮ್ಮ ರಾಷ್ಟ್ರಪಿತನ ಕಾರುಬಾರು ಅಲ್ಲಿ ಅವರಿಗೆ ಇರುವ ಸ್ಥಾನಮಾನ ಎಲ್ಲಾ ವಿವರಣೆಗಳು ಸೊಗಸಾಗಿದೆ.ಅವುಗಳನ್ನು ಉಣಬಡಿಸುವ ನಿಮಗೆ ನನ್ನ ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಸಾಕಷ್ಟು ವಿಷಯಗಳನ್ನೊಳಗೊಂಡ ಪ್ರವಾಸ ಕಥನ ತುಂಬಾ ಚೆನ್ನಾಗಿದೆ ಮೇಡಂ

  3. ಶಂಕರಿ ಶರ್ಮ says:

    ನಮ್ಮ ರಾಷ್ಟ್ರಪಿತ, ಅಲ್ಲಿ ವಿಶ್ವಪಿತನಾಗಿ ಹೊರಹೊಮ್ಮಿದ ಬಗೆ ನಿಜಕ್ಕೂ ಹೆಮ್ಮೆ ಪಡುವಂತಹುದು. ಸವಿವರ ಪ್ರವಾಸ ಕಥನ ಬಹಳ ಸೊಗಸಾಗಿದೆ ಮೇಡಂ.

  4. Padma Anand says:

    ಇಬ್ಬರು ಮಹಾ ಪುರುಷರ ಕಾರ್ಯಸ್ಥಾನದ ಚಿತ್ರಣದ ಸ್ಥೂಲ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟಿದ್ದೀರಿ. ಲೇಖನ ಬಿಡದೆ ಓದಿಸಿಕೊಂಡು ಹೋಗುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: