ನನ್ನವ್ವ ಒಂದು ಅದ್ಭುತ ಅಮೂರ್ತ ಕಲಾಕೃತಿ
ನನ್ನವ್ವ ಅನಕ್ಷರಸ್ಥಳು, ಸುಮಾರು ವರ್ಷಗಳ ಹಿಂದೆ ಜಾರಿಯಲ್ಲಿದ್ದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಕೇವಲ ತನ್ನ ಸಹಿ ಮಾಡುವುದನ್ನು ಮಾತ್ರ ಕಲಿತಿದ್ದಾಳೆ. ಸಂಗೀತ, ಸಾಹಿತ್ಯ, ಕಲೆ ಇಂತಹ ಯಾವ ವಾತರಣದಲ್ಲಿಯೂ ಅವ್ವ ಬೆಳೆದವಳಲ್ಲ. ಅಪ್ಪನಿಗೆ ಒಂದಿಷ್ಟು ಹವ್ಯಾಸಿ ನಾಟಕದಲ್ಲಿ ಹುಚ್ಚಿತ್ತು. ಅಪ್ಪನ ಹುಚ್ಚಿಗೆ ಅವ್ವನ ಮೌನ ವಿರೋಧವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ.
ಕಾಲೇಜು ಓದುವಾಗಲೇ ನಾನೊಂದಿಷ್ಟು ಕವಿತೆ, ಲೇಖನ ಬರೆಯುವ ಗೀಳು ಬೆಳೆಸಿಕೊಂಡೆ, ಕವಿಗೋಷ್ಠಿ ಅಂದ್ರೆ ನನಗೆ ಪಂಚಪ್ರಾಣ. ಸುಮಾರು ಗೋಷ್ಠಿಗಳನ್ನು ಆಲಿಸಿದ ಮೇಲೆ ನಾನೂ ಒಂದಿಷ್ಟು ಗಟ್ಟಿಯಾದ ಕವಿತೆ ಬರೆಯುವ ಪುಟ್ಟ ಪ್ರಯತ್ನ ಮಾಡಿದೆ, ಮುಂದೆ ಸ್ಥಳಿಯ ಕನ್ನಡ ಸಾಹಿತ್ಯ ಪರಿಷತ್/ಸಂಘಟನೆಗಳು ಕವಿತೆ ಓದುವ ಅವಕಾಶ ಕಲ್ಪಿಸಿದ ಪರಿಣಾಮ ನನ್ನ ಬರವಣಿಗೆ ಕೊಂಚ ಸುಧಾರಿಸತೊಡಗಿತು, ಮುಂದೆ ನನ್ನ ಕವಿತೆಗಳನ್ನು ಮೆಚ್ಚಿಕೊಂಡು ಅನೇಕ ಹಿರಿಯರು ಬೆನ್ನುತಟ್ಟಿದರು.
ಅನೇಕರು ಓದುವ ಕವಿತೆಗಳು ಅದೇಷ್ಟೊ ಸಾರಿ ನನಗೆ ಅರ್ಥವಾಗುವುದಿಲ್ಲ. ಇಂದಿಗೂ ನಾನಿರುವ ಕವಿಗೋಷ್ಠಿಗೆ ಅವ್ವ ಕಡ್ಡಾಯವಾಗಿ ಹಾಜರಾಗುತ್ತಾಳೆ, ಓದು ಬರಹ ಬಾರದ ನನ್ನವ್ವನಿಗೆ ನಾನೋದುವ ಕವಿತೆ ಅದ್ಹೇಗೆ ಅರ್ಥವಾಗುತ್ತದೆ? ಅನ್ನೊ ಪ್ರಶ್ನೆ ನನ್ನೊಳಗೆ ಗಾಢವಾಗಿ ಕಾಡುತ್ತಿದೆ. ಆದರೆ ಅವ್ವನಿಗೆ ನಾನ್ಯಾವತ್ತೂ ಈ ಕುರಿತು ಪ್ರಶ್ನಿಸಿಲ್ಲ. ಅದೊಂದು ಸಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾನು ‘ಗೋ ಹತ್ಯೆ ನಿಷೇಧ’ ಅನ್ನೊ ಕವಿತೆ ಓದುವಾಗ ಜನ ಭಾರೀ ಖುಷಿಯಿಂದ ಚಪ್ಪಳೆ ತಟ್ಟುತ್ತಿದ್ದರು, ನನ್ನ ಬೆನ್ನು ನಾನೇ ತಟ್ಟಿಕೊಳ್ಳುತ್ತಿಲ್ಲ ಇದೇ ಕವಿತೆಯನ್ನು ‘ಮಹಾಕೂಟ’ ಪುಟ್ಟ ಪತ್ರಿಕೆಯಲ್ಲಿ ಓದಿದ ನಾಡಿನ ಹಿರಿಯ ಚಿಂತಕರಾಗಿರುವ ಕೋ. ಚನ್ನಬಸಪ್ಪನವರು ಕೂಡಾ ಮೆಚ್ಚಿಕೊಂಡು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಜಿಲ್ಲಾ ಸಮ್ಮೇಳನದ ಗೋಷ್ಠಿ ಮುಗಿದ ಮೇಲೆ ಮನೆಗೆ ಬಂದಾಗ ನನ್ನ ಪತ್ನಿ ‘ರೀ ಇಂದು ನೀವು ಕವಿತೆ ಓದುತ್ತಿದ್ದಾಗ ಎಲ್ಲರೂ ಎದ್ದುಬಿದ್ದು ನಕ್ಕರು, ನಮ್ಮ ಪಕ್ಕದಲ್ಲಿದ್ದವರೊಬ್ಬರು ‘ಭಾರೀ ಕವನ ಬರ್‍ದಾರ, ಹಿಂಗಿರಬೇಕು ಕವಿತೆ ಅಂದ್ರ‘ ಅಂತಾ ಹೇಳಿದ್ರು, ತಕ್ಷಣ ಅತ್ತೆ ‘ಅವನು ನನ್ನ ಮಗಾ ರೀ’ ಅಂತಾ ಹೇಳಿದರು. ಮತ್ತೆ ದಾರಿಯಲ್ಲಿ ಬರುವಾಗ ಪಾಟೀಲ ಸರ್ ಭೇಟಿಯಾದ್ರು, ಅತ್ತೆಗೆ ‘ಒಳ್ಳೆಯ ಮಗನನ್ನೆ ಹೆತ್ತಿದ್ದಿಯಾ’ ಅಂತಾ ಹೇಳಿದರು. ನನ್ನವಳ ಜೊತೆ ಮಾತುಕತೆ ಮುಗಿಸಿಕೊಂಡು ಮೊಮ್ಮಕ್ಕಳೊಡನೆ ನಗೆಯಾಡುತ್ತಿದ್ದ ಅಮ್ಮ ನನಗೆ ಏನಾದರೂ ಹೇಳಬಹುದು ಅಂತಾ ಸೂಕ್ಷ್ಮವಾಗಿ ಮುಖ ನೋಡಿದೆ, ಏನೂ ಹೇಳದಿದ್ದರೂ ಏನೇಲ್ಲವನ್ನೂ ಹೇಳುವ ಒಂದು ಅದ್ಭುತ ಅಮೂರ್ತ ಕಲಾಕೃತಿಯಂತೆ ಅವ್ವನ ಮುಖ ಕಾಣಿಸಿತು
.ಕ್ರಿಕೆಟ ಆಟ ನೋಡಲು ನನ್ನವ್ವನಿಗೆ ಎಳ್ಳಷ್ಟೂ ಮನಸ್ಸಿಲ್ಲ ಮತ್ತೆ ಅವಳಿಗೆ ಪುರಸೊತ್ತು ಇಲ್ಲ. ಒತ್ತಾಯ ಮಾಡಿ ಕೂಡ್ಸಿದ್ರೆ ತೂಕಡಿಸ್ತಾಳೆ. ಹೊಲ;ಮನೆಯ ಮಧ್ಯೆಯೇ ಓಡಾಡಿ ಆಗಲೇ ಅರ್ಧ ಶತಕ ಬಾರಿಸಿದ್ದಾಳೆ ಔಟಾಗದೆ. ನನ್ನವ್ವನಿಗೆ ಚಹಾ ಕಪ್ಪು ಗೊತ್ತು ವಿಶ್ವ ಕಪಂದ್ರೆ ಗೊತ್ತೇ ಇಲ್ಲ. ನಮ್ಮ ದೇಶ ಗೆದ್ದರೆ ನಟಿ ಬೆತ್ತಲೆಯಾಗುವ ಸುದ್ದಿ(೨೦೧೧), ಖುಷಿಗೆ ಕತ್ತಲೆಯಲಿ ಖಾಲಿಯಾಗಿ ಬೀಳುವ ಸರಾಯಿ ಬಾಟಲಿಗಳ ಸದ್ದು, ಸುಟ್ಟ ಮದ್ದುಗಳ ಲೆಕ್ಕ ಈ ಯಾವುಗಳ ಗೊಡವೆಗೆ ಅವ್ವ ಹೋಗುವದೇ ಇಲ್ಲ. ಹಿಂದೊಮ್ಮೆ ನನ್ನ ದೇಶ ಗೆದ್ದ ಖುಷಿಗೆ ಕುಡಿದು, ಕುಣಿದು ಕುಪ್ಪಳಿಸಿ ಮಧ್ಯರಾತ್ರಿ ಮನೆಗೆ ಬಂದಾಗ ನನ್ನವ್ವನಿಗೆ ನಾನು ಮದ್ಯ ಕುಡಿದಿದ್ದು ಕೂಡಾ ಗೊತ್ತಿರಲಿಲ್ಲ. ಆದರೆ… ನಾನು ನಿದ್ದೆಯಲಿದ್ದಾಗ ಮಗು ನನಗೆಲ್ಲವೂ ಗೊತ್ತಿದೆ, ಗೊತ್ತಿದ್ದು ಗೊತ್ತಿಲ್ಲದಂತಿದ್ದೆ ಎಂಬ ಧ್ವನಿ ಕೆಳಿಸಿತು. ಹೌ..ಹಾರಿ.. ನಾನೆದ್ದು ನೋಡಿದೆ ಅವ್ವ ಗಾಢವಾದ ನಿದ್ದೆಯಲಿದ್ದಳು. ನಾನು ಕೆಳಿಸಿಕೊಂಡ ಆ ‘ಧ್ವನಿ’ ಕನಸೊ..ನನಸೊ.. ನಿಜಕ್ಕೂ ನನಗಿನ್ನೂ ಆಗಾಗ ಕಾಡುತ್ತಿದೆ.
ಅವ್ವ ಜಿಡ್ಡುಗಟ್ಟಿರುವ ನನ್ನ ಬಟ್ಟೆಗಳನ್ನಷ್ಟೆ ಸಾಬೂನ ಹಚ್ಚಿ ತೊಳೆದವಳಲ್ಲ, ಸಾಬೂನ ಹಚ್ಚದೆಯೇ ಬಲು ಸೂಕ್ಷ್ಮವಾಗಿ ನನ್ನ ಮನಸ್ಸಿನ ಕೊಳೆಯನ್ನು ತೊಳೆದು ನಿರ್ಮಲಗೊಳಿಸಿದ್ದಾಳೆ. ನನ್ನೊಡನೆ ಮಾತನಾಡುವ ಮನುಷ್ಯರು ಕೆಲಸಾರಿ ಮುನಿಸಿಕೊಂಡಿದ್ದಾರೆ, ಆದರೆ ಮಾತಿನ ಸೊಗಡಿರುವ ಪುಸ್ತಕಗಳು ಮಾತ್ರ ನನ್ನೊಡನೆ ಆಲೋಚನೆ, ಸಂವಾದ ಮಾಡಿ ಸರಿದಾರಿಗೆ ತಂದ ಉದಾಹರಣೆಗಳು ಸಾಕಷ್ಟಿವೆ. ನಾನು ನಾಸ್ತಿಕ, ಅವ್ವ ಆಸ್ತಿಕಳು, ನಾನು ಅಕ್ಷರಸ್ಥ ಆದರೂ ಅನಕ್ಷರಸ್ಥಳಾಗಿರುವ ‘ಅವ್ವ’ ಅನ್ನೊ ಅದ್ಭುತ ಪುಸ್ತಕ ನನಗೀಗ ತುಂಬಾ ಕಾಡುತ್ತಿದೆ, ಕಚ್ಚುತ್ತಿದೆ, ಚುಚ್ಚಿ ಎಚ್ಚರಿಸುತ್ತಿದೆ.
,
– ಕೆ.ಬಿ.ವೀರಲಿಂಗನಗೌಡ್ರ, ಸಿದ್ದಾಪುರ,
ಆಪ್ತವಾದ ಬರಹ..
Thanks
ಬಲು ಸುಂದರವಾದ ಬರಹ, ಜೊತೆಗೆ ನಿಮ್ಮಮ್ಮನನ್ನು ಹೆಚ್ಚು ಇಷ್ಟವಾಯಿತು.
ಬರಹ ತುಂಬಾ ಇಷ್ತವಾಯ್ತು…ಆಪ್ತವಾಯ್ತು…ಇದು, ನಿಮ್ಮಮ್ಮ ಒಬ್ಬರೇ ಅಲ್ಲ…ಹೀಗಿರುವ ಸಾವಿರಾರು ಅಮ್ಮಂದಿರನ್ನು ನೆನಪಿಸುವಂತಹ ಬರಹ…!
ಎಲ್ಲ ಅವ್ವಂದಿರನ್ನು ನೆನಪಿಸುವ ಸೊಗಸಾದ ಬರಹ.