ಅತ್ತು ಬಿಡಬಾರದೆ ಗೆಳತಿ ?
ಅದು ಯಾವ ಜನುಮದ ನಂಟೊ ? ಬಾಲ್ಯದ ಕನಸು ಚಿತ್ತಾರ ಬಿಡಿಸಿಕೊಂಡು ಮೊಗ್ಗಾಗಿ ಚಿಗುರೊಡೆದು ಹಿಗ್ಗಾಗಿ ಅರಳಿಕೊಂಡ ದಿನಗಳವು. ಬಾಲ್ಯದ ಎಳೆತನದ ಹೊಸಿಲು ದಾಟಿ ಟೀನೇಜಿನ ಬಾಗಿಲು ತಟ್ಟುತ್ತಿದ್ದ ಗೊಂದಲ ಸಂಭ್ರಮಗಳ ಸಮ್ಮಿಶ್ರ ಸಮಯ. ಆ ದಿನಗಳಲ್ಲೆ ಹೊಸದಾಗಿ ಬಂದು ನೆರೆಮನೆಯವರಾದ ಕುಟುಂಬವೊಂದರ ಪರಿಚಯವಾಗಿದ್ದು… ಮಕ್ಕಳ ಓದಿನ ಸಲುವಾಗಿ ಊರಿನಲ್ಲಿದ್ದ ಎಸ್ಟೇಟನ್ನು ಬಿಟ್ಟು ನಗರದ ಬೆಂಕಿಪೆಟ್ಟಿಗೆಯಂತಹ ಗೂಡಿಗೆ ಬಂದು ಸೇರಿಕೊಂಡಿದ್ದರಂತೆ. ಅವರ ನಡುವಳಿಕೆ, ಸಂಸ್ಕಾರದ ರೀತಿ ನೋಡಿದರೆ ನಮ್ಮಂತಹವರ ಜತೆ ಅವರು ಬೇರೆಯುವ ಜನರಲ್ಲವೇನೊ ಅಂದುಕೊಂಡಾಗಲೆ ಇದ್ದಕ್ಕಿದ್ದಂತೆ ಪರಿಚಯ ಬೆಳೆದಿತ್ತು – ನನ್ನದೇ ವಯಸಿನ ಮಗಳನ್ನು ಸ್ಕೂಲಿಗೆ ಹಾಕುವ ವಿಷಯ ಬಂದಾಗ. ಹೀಗೆ ಒಂದೆ ಕ್ಲಾಸಿನಲ್ಲಿ ಬಂದು ಸೇರಿಕೊಂಡು ಜತೆಯಾದವಳು, ಹೊಸ ಊರಿನ ಪರಿಸರದಲ್ಲಿ ಹತ್ತಿರದ ಗೆಳತಿಯೂ ಆದದ್ದು ಗೊತ್ತೆ ಆಗದಂತೆ ಸಹಜವಾಗಿ ನಡೆದುಹೋಗಿತ್ತು.
ಆ ನಂಟು ಅದಾವ ವ್ಯಾಖ್ಯೆಯ ಹಣೆಪಟ್ಟಿಗೆ ಹೊಂದಿಕೊಂಡು ವಿಕಸಿಸುತ್ತಿತ್ತೊ ಗೊತ್ತಾಗದಿದ್ದರು, ಆ ಸುತ್ತಲ ಪರಿಸರದಲ್ಲೆ ಇರದ ವಿಶಿಷ್ಠ ಸಂಸ್ಕಾರಯುತ ನಡೆನುಡಿ ಅವಳಲ್ಲೇನೊ ಆರಾಧನಾ ಭಾವದ ಆಕರ್ಷಣೆಯನ್ನು ಮೂಡಿಸಿಬಿಟ್ಟಿತ್ತು. ಅದಕ್ಕೆ ಪೂರಕವಾಗಿ ಅವರ ಮನೆಯವರಲ್ಲೊಬ್ಬನಂತೆ ಬೆರೆತು ಹೋದ ಹೆಮ್ಮೆ ಕಾಣದ ಮತ್ತಾವುದೊ ವಿಸ್ಮಯ ಲೋಕದ ಕದ ತೆರೆಸಿ ಪ್ರಾಯದ ಹೊತ್ತಿನ ಏನೇನೊ ಕನಸು, ಕನವರಿಕೆಗಳಿಗೆ ಮುನ್ನುಡಿ ಹಾಡಿಬಿಟ್ಟಿತ್ತು – ತನಗೆ ತಾನೆ ಹಾಡಿಕೊಳ್ಳುವ ಹಕ್ಕಿಯ ಮೌನದಲ್ಲಿ. ಅವಳಲ್ಲು ಅದೇ ಭಾವವಿತ್ತೆನ್ನುವ ಇಂಗಿತ ಅವ್ಯಕ್ತವಾಗಿ ಗೋಚರವಾಗುತ್ತಿದ್ದರು ಯಾಕೊ ಅದು ಸೌಜನ್ಯದ ಎಲ್ಲೆ ಮೀರಿ ಪ್ರಕಟವಾಗುವ ಮಟ್ಟಕ್ಕೆ ಬೆಳೆಯಲೆ ಇಲ್ಲ. ಇದ್ದದ್ದು ಕಳುವಾಗಿಬಿಟ್ಟರೆನ್ನುವ ಭೀತಿಯ ಜತೆಗೆ ವಿರುದ್ಧ ಪ್ರಪಂಚಗಳಲ್ಲಿರುವ ಎರಡು ತುದಿಗಳ ನಡುವಿನ ಅಂತರ ಕಡೆಗಣಿಸಲಾಗದ ಕೀಳರಿಮೆ, ಅಸಾಧ್ಯವಾದುದಕ್ಕೆ ಭ್ರಮಿಸುತ್ತಿರಬಹುದೆನ್ನುವ ವಿವೇಚನೆ ಎಲ್ಲವನ್ನು ಸ್ತಂಭಿತವಾಗಿಸಿ ಕಾಲವೊಂದರ ಬಿಂದುವಿಗೆ ಕಟ್ಟಿಹಾಕಿಬಿಟ್ಟಿತ್ತು. ಆ ಕಾಲ ಬದಲಾಗಿ ಮುಂದೆ ನಡೆದರು, ಕಟ್ಟಿದ್ದ ಗಂಟು ಮಾತ್ರ ಬಿಚ್ಚಿಕೊಳ್ಳದೆ ಹಾಗೆ ನಿಂತುಬಿಟ್ಟಿತ್ತು ಮಧುರಾನುಭೂತಿಯನ್ನು ಕಳೆದುಕೊಳ್ಳಲಿಚ್ಚಿಸದೆ ಜತನ ಕಾದಿರಿಸಿಕೊಂಡಂತೆ. ಕಾಲದ ಜಪ್ತಿಯಲ್ಲಿ ಚಲಿಸದೆ ಕೂತ ಅಚರ ಸ್ಥಿತಿಯೂ ಕೊಳೆಸಿ ಹಾಕಿಬಿಡುವ ಕುತಂತ್ರಿಯೆಂದು ಹೇಳುವರಾದರೂ ಯಾರಿದ್ದರಲ್ಲಿ ?
ಅನುದಿನವೂ ಭೇಟಿ, ಕ್ಷಣಕ್ಷಣವೂ ಮಾತು, ಬೆನ್ನಲ್ಲೆ ಏನೊ ಧನ್ಯತೆಯ ಭಾವ. ನಕ್ಕರೆ ಸ್ವರ್ಗಲೋಕದ ಪಾರಿಜಾತ ಕೈ ಸೇರಿದ ಅನುಭೂತಿ, ಖೇದದಿಂದಿದ್ದರೆ ಆಕಾಶ ತಲೆಯ ಮೇಲೆ ಬಿದ್ದ ಸಂಗತಿ. ಆದರೆ ಒಂದು ಬಾರಿಯೂ ಆ ಭಾವ ಲಹರಿ ಎದೆಯ ಕದ ತೆರೆದು ಮನಸ ಬಿಚ್ಚಿಡುವ ಧೈರ್ಯ ಮಾಡಲಿಲ್ಲ. ಯಾರೊ ಯಾವಾಗಲೂ ನೋಡುತ್ತಿರುವರೆಂಬ ಸ್ವಯಂಪ್ರೇರಿತ ಭೀತಿಯ ಜತೆ, ಯಾರೂ ಹಾಕದ ಲಕ್ಷ್ಮಣ ರೇಖೆಯೊಂದು ಸದಾ ಅಡ್ಡ ಹಾಕಿದಂತೆ ಅಳುಕು. ಬಹುಶಃ ಹೇಳಿಕೊಂಡು ಕಳಪೆಯಾದರೆ? ಎನ್ನುವ ಭೀತಿಯೂ ಇತ್ತೇನೊ; ಅಥವಾ ಹೇಳಿಕೊಳ್ಳದ ಅಸ್ಪಷ್ಟ ಸಂಕೇತ, ಅನಿಶ್ಚಿತತೆಗಳಲ್ಲೆ ಏನೊ ಸೊಗಡಿರುವುದೆಂಬ ಮತ್ತೊಂದು ಆಯಾಮವೂ ಇದ್ದೀತು… ನೋಡನೋಡುತ್ತಲೆ ದಿನಗಳು ವಾರಗಳಾಗಿ, ತಿಂಗಳುಗಳು ವರ್ಷಗಳಾಗಿ ಉರುಳಿ ಹೋದವು – ಒಂದಿನಿತೂ ಬದಲಾಗದ ಅದೆ ದಿನಚರಿ, ಅದೆ ಮನಸತ್ವದಲ್ಲಿ.
ಅಂದೊಂದು ದಿನ ಮನೇಗದಾರೊ ಬಂದರಂತೆ ಹೆಣ್ಣು ನೋಡುವವರು… ಆಮೇಲಿನದೆಲ್ಲ ಕನಸಿನಂತೆ ನಡೆದು ಹೋದ ವ್ಯಾಪಾರ. ಅತ್ತೆಯ ಮನೆಗೆ ಹೋಗುವ ಮುನ್ನ ಬಂದು ಹೋದವಳು ಏನೂ ಮಾತಾಡದೆ ಯಾಕೊ ಬರಿ ಬಿಕ್ಕಿಬಿಕ್ಕಿ ಅತ್ತು ಓಡಿಹೋಗಿದ್ದಳು – ಎಂದೊ ಕೊಡಿಸಿದ್ದ ಎರಡು ಕೈ ಬಳೆಗಳಲ್ಲಿ ಒಂದನ್ನು ಅಲ್ಲೆ ಬಿಟ್ಟು, ನೆನಪಿನ ಅರ್ಧ ಭಾಗವನ್ನು ಕಿತ್ತು ಕೈಗಿತ್ತು ಹೋದಂತೆ. ಅವಳುಡಿಸಿ ಹೋದ ಸಂಕೋಲೆಯಂತೆ ಅದು ಸದಾ ಉಳಿದುಕೊಂಡುಬಿಟ್ಟಿತ್ತು ಪೆಟ್ಟಿಗೆಯ ಮೂಲೆಯೊಂದರಲ್ಲಿ ಕೊಳೆಯದೆ, ಭದ್ರವಾಗಿ..
ಕಾಲವುರುಳಿ ಕಾಲಯಾನದ ಹಾದಿ ಎಲ್ಲೆಲ್ಲೊ ಗಾಲಿಯುರುಳಿಸಿ ಕೊನೆಗೊಂದು ಊರಲ್ಲಿ ನೆಲೆ ನಿಲ್ಲಿಸಿದಾಗಲೂ ಅವಳಿನ್ನು ಮರೆಯಾಗಿರಲಿಲ್ಲ ಮನಃ ಪಟಲದಿಂದ. ಹೇಗೊ ಜೀವನ ಸಾಗುತ್ತಿದೆಯೆನ್ನುತ್ತಿರುವಾಗಲೆ ಅದೆ ಊರಿನ ಆಧುನಿಕ ಸಂತೆಯೊಂದರಲ್ಲಿ ಕಣ್ಣಿಗೆ ಬಿದ್ದಿದ್ದಳು – ಹೆಚ್ಚು ಕಡಿಮೆ ಜೀವಂತ ಶವದ ಸಂಕೇತವಾಗಿ. ಕಣ್ಣಿಗೆ ಬಿದ್ದವಳ ಕಣ್ಣಲ್ಲಿ ಚಕ್ಕನೆ ಅದೇ ಮಿಂಚು, ಅದಮ್ಯ ಮಾತಿನ ಉತ್ಸಾಹ ಮತ್ತೆ ಮೂಡಿದ್ದು ಕಂಡಾಗ – ಯಾಕೆ ಕಾಡುವುದೊ ವಿಧಿ, ಸುಖದ ಬೆನ್ನಟ್ಟಿ ಹೊಡೆದೋಡಿಸುವ ತಪನೆಯಲ್ಲಿ ಅನಿಸಿದ್ದು ಸುಳ್ಳಲ್ಲ.. ಮಾತಾಡದೆ ಹೊರಡುವಳೆಂದು ಅವಿತುಕೊಂಡೆ ಜಾರಿಕೊಳುತ್ತಿದ್ದವನನ್ನು ಎಳೆದು ನಿಲ್ಲಿಸಿದ್ದು ಅದೇ ಮಾತಿನ ಸೆಳೆತವಲ್ಲವೆ..?
ಈಗ ಅಲ್ಲಿ ತಾಳಲಾಗದ ಯಾತನೆಗೆ ನೊಂದು ಬೇಯುವಂತಾದಾಗ, ಬೇಗುದಿ ಸಹನೆಯ ಕಟ್ಟೆಯೊಡಿಸಿದಾಗ ಹೇಗೊ ಓಡಿ ಬರುತ್ತಾಳೆ.. ಆದರೆ ಮಾತಿಲ್ಲ, ಕಥೆಯಿಲ್ಲ. ಏನೆಲ್ಲ ಹೇಳಬೇಕೆಂದಿದ್ದರು, ಏನೂ ಹೇಳಬಾರದೆಂದು ಅವಡುಗಚ್ಚಿ ಭೂತ ಹಿಡಿದಂತೆ ಮೌನದಲ್ಲಿ ಕೂತು ಹೋಗುತ್ತಾಳೆ. ಒಂದು ಹನಿ ನೀರು ಮುಟ್ಟದೆ, ಅತ್ತು ಕಣ್ಣೀರಾಗಿ ಹಗುರವೂ ಆಗದೆ ಮತ್ತೆ ಓಡಿ ಹೋಗುತ್ತಾಳೆ. ಅದೇನು, ‘ನೋಡು ನಿನ್ನಿಂದಲೆ ಆದದ್ದು ಎಲ್ಲಾ.. ನೀನೆ ಇದಕ್ಕೆ ಕಾರಣ, ಹೊಣೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಉದ್ದೇಶಕ್ಕೆ ಹಾಗೆ ಮಾಡುತ್ತಾಳೊ, ಅಥವಾ ‘ನನಗಾದುದಕ್ಕೆ ನಾನೆ ಹೊಣೆ, ಇನ್ನಾರಿಗು ನೋವು ಕೊಡುವುದಿಲ್ಲ, ನಾನೆ ಅನುಭವಿಸುತ್ತೇನೆ..’ ಎನ್ನುವ ಹಠವಾದಿ ಧೋರಣೆಯೊ.. ಆದರೂ ಬೇರೆಲ್ಲು ಹೋಗದೆ ಇಲ್ಲಿಗೆ ಬರುತ್ತಾಳಲ್ಲ ಎಂಬುದೆ ಸಮಾಧಾನ.
ಆದರೆ ಬಂದು ಹಗುರವಾಗಿ ಹೋಗುತ್ತಾಳೆಂಬ ನೆಮ್ಮದಿಯ ಭಾವವನ್ನು ಬಿಟ್ಟು ಹೋಗುವುದಿಲ್ಲ.. ಒಂದು ಚೂರು ವೇದನೆಯನ್ನು ತೋರಗೊಡುವುದಿಲ್ಲ, ಒಮ್ಮೆಯೂ ಬಿಕ್ಕುವುದಿಲ್ಲ.. ಬಿಮ್ಮನೆ ಕುಳಿತ ಮೌನದ ಹೊರತು ಅಲ್ಲಿ ಮತ್ತೇನೂ ಇರುವುದಿಲ್ಲ.. ಅವಳು ಅತ್ತಾದರು ಹಗುರಾಗಲೆಂದು ಆಸೆ.. ಆದರೆ ಅವಳ್ಯಾಕೊ ಅಳಳು.. ಬಂದ ಹೊತ್ತೆಲ್ಲ ಹಿತ್ತಲ ಹಿರಿ ಗಾತ್ರದ ಮರದ ಪೊಟರೆಯ ಬದಿಯಲ್ಲಿ ನೇತು ಹಾಕಿದ ಜೋಕಾಲಿಯಲ್ಲಿ ಸುಮ್ಮನೆ ಕೂತು ಜೋಲಿಯಾಡಿ ಹೋಗುತ್ತಾಳೆ – ಆ ಜೀಕಿನಲ್ಲೆ ನೋವೆಲ್ಲ ಕರಗಿಸುವವಳಂತೆ. ಅಲ್ಲೆ ಕಾದು ಕುಳಿತ ಎಷ್ಟೊ ದಿನ ಅನಿಸಿದ್ದು ನಿಜವೆ – ಹೆಪ್ಪಾಗಿ ಮಡುಗಟ್ಟಿದ್ದು ಅತ್ತು ಕಣ್ಣೀರಾಗಿ ಹರಿದರೆ ಅವಳ ಭಾರ ತುಸುವಾದರು ಹಗುರವಾದೀತೇನೊ ಎಂದು. ಅದು ಎಂದಾಗುವುದೊ ಅರಿಯದೆ ಕಾಯುವುದೆ ಯಜ್ಞವಾದ ಈ ಪರಿಯಲ್ಲಿ ಉದಿಸುವ ಒಂದೆ ಪ್ರಶ್ನೆ – ‘ಅತ್ತು ಬಿಡಬಾರದೆ ಗೆಳತಿ ?’ ಎಂದು….
ಅತ್ತು ಬಿಡಬಾರದೆ ಗೆಳತಿ?
ಬಂದಳೂ ಮತ್ತೆ ಅವಳು
ಪೂರ್ವಾಶ್ರಮದ ಗೆಳತಿ
ಸುರಿದಿತ್ತೆ ಮಳೆ ಮುಸಲ
ನೆನೆದವಳಲಿ ಕೊಡೆಯಿಲ್ಲ ||
ಹಾಳು ಗುಡುಗು ಸಿಡಿಲು
ಬಿಕ್ಕಿದ್ದಳೇನೊ ಕೇಳಿಸದೆ..
ಮಿಂಚಿನ ಬೆಳಕಲಿ ಹೆಣ್ಣು
ಕರಗಿ ಹರಿದಿತ್ತೇನು ಕಣ್ಣು ? ||
ಮರದಡಿಯ ಪೊಟರೆಗೆ
ಒರಗಿದವಳ ಒದ್ದೆ ಕೇಶ
ಮೈಗಂಟಿದ ಸೆರಗು ಬಿಡು
ಅತ್ತಂತಿದೆಯೆ ಇಡಿ ದೇಹ ||
ಹಿಡಿಯಂತಾಗಿ ನಡುಕದೆ
ತುಟಿ ಚಳಿಗದುರದಿರದೆ ?
ಸಖನಪ್ಪುಗೆ ಕನಸ ಬಾಹು
ತನ್ನನೆ ಅಪ್ಪಿ ಮುದುಡಿತೇಕೊ ? ||
ಕಟ್ಟೆಯೊಡೆದ ಮೌನ ದನಿ
ಮಾತಾಗದೆ ಕೆಸರಾಗ್ಹರಿದು
ಕಳುವಾಗಿ ಹೋಗುವ ಹೊತ್ತು
ಜಾರಿ ಒಡೆದು ಹೋದ ಮುತ್ತು ||
ಬಿಡು ಅವಿತಿರಲದೆಷ್ಟು ಕಾಲ ?
ಪೊಟರೆಯಿಂದಿಣುಕಿತೆ ಜೀವಾ
ಮಾತಿಲ್ಲದೆ ಹೊದಿಸಿ ಹೊದಿಕೆ
ಅಪ್ಪುಗೆ ಕಾಪಿಡುವ ತೊದಲಿಕೆ ||
ಯಾಕೊ ಸದ್ದಾದಳು ಹುಡುಗಿ
ನಿಗಿನಿಗಿ ಕೆಂಡದ ಕಣ್ಣಾದಳು
ಅತ್ತುಬಿಡೆ ಮಳೆಯಲೆ ಸಖಿ –
ಹೊತ್ತು ಮೂಡುವ ಮೊದಲೆ ||
ಎಚ್ಚರವಿತ್ತೆಲ್ಲಿ ಸಮಯದಲಿ ?
ನಿಂತ ಮಳೆ ನಿಶ್ಯಬ್ದಕು ಸ್ಥಬ್ದತೆ
ಅಂಟಿಕೊಂಡೊಣಗಿ ಮೇಲುಡುಗೆ
ಮಾಡಿತೇನೊ ಒಳಗೆ ಅಡಿಗಡಿಗೆ ||
ಹೊತ್ತಾಯಿತು ಹೊರಟು ಚಿತ್ತ
ಮುತ್ತ ಬಸಿದು ಬಡಿಸೊ ಹೊತ್ತ
ತಗ್ಗಿದ ತಲೆಯೆತ್ತದೆ ನಡೆದಳೆ
ಕಂಬನಿ ಕುರುಹು ಇನಿತಿಲ್ಲದೆಲೆ ||
‘
– ನಾಗೇಶ ಮೈಸೂರು
‘
ಅದ್ಭುತ …
ಅತ್ತಂತಿದೆಯೆ ಇಡಿ ದೇಹ ||ಮತ್ತು ತನ್ನನೆ ಅಪ್ಪಿ ಮುದುಡಿತೇಕೊ ? || ಈ ಎರಡು ಸಾಲು ಇಡೀ ಕವನವನ್ನು ಎರೆಡೆರಡು ಸಲ ಓದುವಂತೆ ಮಾಡಿತು.
ಈ ಸಂದರ್ಭ ಹೆಣ್ಣನ್ನು ನತದೃಷ್ಟಳಂತೆ ಚಿತ್ರಿಸಿದೆಯಾದರೂ ಆಕೆಯ ಛಲ, ಮೌನ ಮಳೆಯ ಜೊತೆಗೆ ಆರ್ದ್ರವಾಗಿ ಮೂಡಿ ಬಂದಿದೆ. ಅಪರೂಪದ ಎಳೆಯ ಕವನ.. ಪೀಠಿಕೆಯೊಂದಿಗೆ ತುಂಬಾ ಚೆನ್ನಾಗಿದೆ.
ನಿಮ್ಮ ವಿಮರ್ಶೆಯ ಸಾಲುಗಳನ್ನು ನೋಡಿ, ನಾನು ಮತ್ತೆರಡು ಸಲ ಆ ಕವನ ಓದಿ ನೋಡಿದೆ ! ಯಥಾರೀತಿ ಮೊದಲು ಬರೆದಿದ್ದು ಕವನ ಮಾತ್ರವೆ. ಆದರೆ ಒಮ್ಮೆ ಅದಕ್ಕೊಂದು ವ್ಯಾಖ್ಯೆ ಸೇರಿಸಿದರೆ ಚೆನ್ನಿರುತ್ತದೆಂದು ಗದ್ಯದ ಭಾಗವನ್ನು ಜತೆಗೂಡಿಸಿದೆ.. ಈ ಕಥೆಗಳು ಎಷ್ಟೊ ಜನರ ಬದುಕಿನ ಭಾಗಗಳೆ ಆದ ಕಾರಣ ಎಲ್ಲರೂ ತಮ್ಮ ಬದುಕಿನ ತುಣುಕುಗಳನ್ನು ಅಲ್ಲಿ ‘ಐಡೆಂಟಿಫೈ’ ಮಾಡಿಕೊಳ್ಳುವುದು ಸಾಧ್ಯವಿರುವುದರಿಂದ ಒಟ್ಟುಗೂಡಿಸಿದ ಬರಹ ಅರ್ಥಪೂರ್ಣವಾಗುವುದೆನಿಸಿ, ಒಗ್ಗೂಡಿಸಿದೆ . ನಿಮಗೆ ಮೆಚ್ಚಿಗೆಯಾದದ್ದು ನಿಜಕ್ಕು ಸಂತಸ – ಅದರಲ್ಲು ಕವಿ ಭಾವದ ಸಶಕ್ತ ಸಾಲುಗಳಿಗೆ ನೇರ ಕೈ ಹಾಕಿ ಹಿಡಿದ ನಿಮ್ಮ ಸೂಕ್ಷ್ಮ ದೃಷ್ಟಿಗೆ ನಮನಗಳು !