ಡೊಂಕುಬಾಲದ ನಾಯಕರ ಕರಾಮತ್ತು (ಬಾಲಾಮತ್ತು)!
ಇಂದು ಮುಂಜಾನೆ ಗಾಢನಿದ್ದೆಯಲ್ಲಿದ್ದ ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಸಮಯ 0330 ಗಂಟೆ. ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ನಮ್ಮ ಮನೆಯ ಸುತ್ತುಮುತ್ತಲಿನಲ್ಲಿರುವ ಯಾವುದೋ ಕೀಟಗಳು ರಾತ್ರಿಯಾಗುತ್ತಿದ್ದಂತೆ ಕಿರಿಗುಡುತ್ತವೆ, ಹಾಗೂ ಇದರ ಸದ್ದು ದೂರದಿಂದ ತೇಲಿ ಬರುವ ಕಾಲ್ಗೆಜ್ಜೆಯ ನಿನಾದದಂತಿರುತ್ತದೆ, ಇದು ನಮಗೆ ಗೊತ್ತಿರುವ ವಿಚಾರ. ಹಾಗಾಗಿ ಅಂಜಿಕೆಯೇನಿಲ್ಲ. ಆದರೆ, ನಿನ್ನೆ ಇದರ ಜತೆಗೆ ಮುಂಬಾಗಿಲಿನ ಕಡೆಯಿಂದ, ಯಾರೋ ಬಾಗಿಲಿಗೆ ಮೆಲುವಾಗಿ ಹೊಡೆಯುತ್ತಿರುವಂತೆ ಡುಂ..ಡುಂ..ಡುಂ ಎಂಬ ಸದ್ದು ಕೇಳಿಸಿತು!
ಸ್ವಲ್ಪ ಹೊತ್ತು ಕಿವಿ ನಿಮಿರಿಸಿ, ಕೇಳಿದೆ.ಈಗ ಮನೆಯ ಡೈನಿಂಗ್ ಹಾಲ್ ನ ಪಕ್ಕ ಇರುವ ಬಾಗಿಲಿನಿಂದಲೂ ಮೃದಂಗ ಬಾರಿಸುವಂತೆ ಸದ್ದಾಯಿತು! ಪಕ್ಕದಲ್ಲಿಯೇ ಇರುವ ಮಳೆನೀರು ಸಂಗ್ರಹಣೆಯ ಶೋಧಕ ಡ್ರಮ್ ಮೇಲೆಯೂ ಗುದ್ದಿದಂತಾಯಿತು! ಯಾರೋ ಆತ್ತಿತ್ತ ಓಡಾಡಿದಂತೆ…ಹೊರಗಡೆ ಇರುವ ದಾಳಿಂಬೆ ಗಿಡವನ್ನು ಯಾರೋ ಅಲುಗಾಡಿಸಿದಂತಾಯಿತು… ಈಗ ನಿಜಕ್ಕೂ ಭಯವಾಯಿತು!
ನಮ್ಮ ರಸ್ತೆಯಲ್ಲಿಯೇ, ಖಾಲಿಯಿದ್ದ ಮನೆಯೊಂದಕ್ಕೆ ಕಳೆದ ತಿಂಗಳು ಕನ್ನ ಬಿದ್ದಿತ್ತು. ಅನುಮಾನವಿಲ್ಲ… ನಮ್ಮ ಮನೆಗೂ ಕಳ್ಳರು ಬಂದಿದ್ದಾರೆ, ಯಾವ ಬಾಗಿಲು ಮುರಿಯಬಹುದು ಎಂದು ಪರೀಕ್ಷಿಸುತ್ತಿರಬೇಕು…ಇತ್ಯಾದಿ ಊಹಿಸಿದೆ. ಎದ್ದು ದೀಪ ಹಾಕಲೆ? ಮನೆಯವರನ್ನು ಎಬ್ಬಿಸಲೇ? ಹೀಗೆ ಆಲೋಚನೆ ಮಾಡುತ್ತಾ ತಬ್ಬಿಬ್ಬಾದೆ.
ಹಿಂದೊಮ್ಮೆ ಹೀಗೆ ಭಯಪಟ್ಟು, ಕೊನೆಗೆ ಏನೂ ಇಲ್ಲದಿದ್ದ/ ಕಾಣಿಸದಿದ್ದ ಕಾರಣ ‘ನಿನಗೆ ಭ್ರಮೆ’ ಎಂದು ಪರಿಹಾಸ್ಯಕ್ಕೊಳಗಾಗಿದ್ದೆ. ನಿಜಕ್ಕೂ ಅಪಾಯವಿದ್ದರೆ, ಅಗತ್ಯಕ್ಕೆ ಇರಲಿ ಎಂದು ನಮ್ಮ ಬಡಾವಣೆಯ ಸಮಿತಿಯ ಮತ್ತು ಹತ್ತಿರದ ಪೋಲಿಸ್ ಸ್ಟೇಶನ್ ನ ನಂಬರ್ ನನ್ನ ಮೊಬೈಲ್ ನಲ್ಲಿ ನಮೂದಿಸಿದ್ದೆ. ಈಗ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು, ದೀಪ ಹಾಕದೆ, ನಿಶ್ಶಬ್ದವಾಗಿ ಗಮನಿಸೋಣ ಎಂದು ಹಾಲ್ ನಲ್ಲಿ ಕುಳಿತೆ. ನಾನು ಅಂದುಕೊಂಡಂತೆ ಯಾರೂ ಬಾಗಿಲು ಮುರಿಯುವ ಪ್ರಯತ್ನ ಮಾಡಲಿಲ್ಲ. ಹತ್ತು ನಿಮಿಷ ಸುಮ್ಮನೆ ಕುಳಿತಿದ್ದು, ಪುನ: ನಿದ್ದೆ ಮಾಡಲು ಹೋದೆ. ನಸುಕಿನಲ್ಲಿ ಎದ್ದು ಬಾಗಿಲು ತೆಗೆಯುವಷ್ಟರಲ್ಲಿ ಪುನ: ಡುಂ..ಡುಂ ಸಂಗೀತ ಕೇಳಿಸಿತು!
ನಮಗೆ ಅಚ್ಚರಿಯಾಗುವಂತೆ, ಬಾಗಿಲ ಬಳಿ ನಮ್ಮ ಬೀದಿಯಲ್ಲಿರುವ ‘ಡೊಂಕುಬಾಲದ ನಾಯಕರ ಸಂಸಾರ’ ಮಲಗಿತ್ತು. ಅವುಗಳು ಆಗಿಂದಾಗ್ಗೆ ಬಾಲ ಅಲ್ಲಾಡಿಸುತ್ತಿದ್ದಾಗ, ಅದು ನಮ್ಮ ಬಾಗಿಲಿಗೆ ತಗಲಿ ಸದ್ದಾಗುತ್ತಿತ್ತು. ಲೈಟ್ ಹಚ್ಚಿದಾಗ ಕಾರಿನ ಅಡಿಯಿಂದ ಮೂರು ಮರಿನಾಯಿಗಳು ತೆವಳುತ್ತಾ ಬಂದುವು! ಇನ್ನೊಂದು ಮರಿ ನಾಯಿ ಮಳೆನೀರು ಶೋಧಕ ಡ್ರಮ್ ನಿಂದ ಟಣ್ಣನೆ ನೆಗೆಯಿತು!
ನಿನ್ನೆ ರಾತ್ರಿ ನಮ್ಮ ಮನೆಗೆ ‘ಕಳ್ಳರಂತೆ ಸುತ್ತುವರಿದಿದ್ದು’ ಇವರ ಕೆಲಸ ಎಂದು ಈಗ ಅರ್ಥವಾಯಿತು. ಮಳೆಗೆ ಒದ್ದೆಯಾಗದಂತೆ ಸುರಕ್ಷಿತ ಜಾಗ ಹುಡುಕಿ, ಡೊಂಕುಬಾಲದ ನಾಯಕರು ನಿದ್ದೆಯನ್ನೇನೂ ಮಾಡಿದರು…ಆದರೆ ನನ್ನ ನಿದ್ದೆಯನ್ನು ಕೆಡಿಸಿದ್ದರು!
– ಹೇಮಮಾಲಾ.ಬಿ
ತುಂಬಾ ಚೆನ್ನಾಗಿದೆ ನಿಮ್ಮ ನಾಯಕರ ಕಥೆ.
ಹ ಹಾ ಹಹ್ಹ 🙂
ನಿದ್ದೆ ಕೆಡಿಸಿದ ಡೊಂಕುಬಾಲದವರ ಕರಾಮತ್ತು(?) ಚೆನ್ನಾಗಿತ್ತು..!!