ಹಸ್ತದ ಗೆರೆ
ಹೀಗೆ ಮಾತಾಡುತ್ತ ಕುಳಿತ ಹೊತ್ತು ಮಗನ ಕೈ ಹಿಡಿದು ಸುಮ್ಮನೆ ನೋಡ್ತಾ ಇದ್ದೆ – ಹಸ್ತ ಪೂರ ಗೆರೆಗಳಿದ್ರೂ ಅಸ್ಪಷ್ಟವಾಗಿ, ನಯವಾಗಿ ಕಾಣೋ ತರವನ್ನ. ಬರಿಯ ದಪ್ಪ ಗೆರೆ ಬಿಟ್ರೆ ಮಿಕ್ಕಿದ್ದು ತೆಳು ಗೆರೆಗಳು ಕಡಿಮೆ; ಜತೆಗೆ ತೀರಾ ಇಲ್ಲವೆ ಇಲ್ಲ ಅನ್ನೊ ಹಾಗೆ ತೆಳುಗೆರೆಗಳು.
.
ಹಾಗೆ ಸುಮ್ಮನೆ ನನ್ನ ಕೈ ನೋಡಿಕೊಂಡೆ – ನಗು ಬಂತು. ಕಡ್ಡಿ ಸೌದೆ ಕಡ್ಡಿ ಪೇರಿಸಿಟ್ಟ ಹಾಗೆ, ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಹರವಿಕೊಂಡು ಬಿದ್ದಿದ್ದವು ಗೆರೆಗಳು. ಅದೇನು ಚಿಕ್ಕ ವಯಸಿಂದಲು ಹಾಗೆ ಇತ್ತಾ, ದೊಡ್ಡವರಾಗ್ತಾ ಹಾಗಾಗಿತ್ತ ನೆನಪಿಗೆ ಬರಲಿಲ್ಲ. ಆದರೆ ಚಿಕ್ಕ ವಯಸಲ್ಲಿ ದೊಡ್ಡವರು ಮಾತಾಡ್ತಾ ಹೇಳ್ತಿದ್ದ ಮಾತು ನೆನಪಾಯ್ತು – ‘ಕೈ ಮೇಲಿನ ಗೆರೆಗಳು ಜಾಸ್ತಿಯಿದ್ರೆ ಜೀವನದಲ್ಲಿ ಕಷ್ಟಗಳು ಜಾಸ್ತಿ ಇದೆ / ಇರುತ್ತೆ ಅಂತ ಲೆಕ್ಕ; ಜನರ ಕೈ ನೋಡಿದ್ರೆ ಸಾಕು ಸುಖವಾಗಿದಾರ, ಇಲ್ವಾ ಅಂತ ಹೇಳ್ಬಿಡಬೋದು!’
.
ಕಷ್ಟಗಳು ಜಾಸ್ತಿಯಾಗಿ ಅದು ದೇಹದಲ್ಲೇನೊ ರಾಸಾಯನಿಕ ಪ್ರಕ್ರಿಯೆ ನಡೆಸಿ, ಅದರ ಪರಿಣಾಮ ಅಂಗೈಯಲ್ಲಿ ಗೆರೆಗಳಾಗಿ ಕಾಣುತ್ತೆ ಅನ್ನೋದಕ್ಕೆಲ್ಲ ಸೈಂಟಿಫಿಕ್ ಎವಿಡೆನ್ಸ್ ಇದೆಯಾ, ಇಲ್ವಾ ಗೊತ್ತಿಲ್ಲ. ಆದರೆ ನಮ್ಮ ಸಾಂಪ್ರದಾಯಿಕ ನಂಬಿಕೆಗೆ ಯಾವ ಸಾಕ್ಷಿ ಬೇಕು ಹೇಳಿ ? ಅದಕ್ಕೆ ಆಯಸ್ಸಿನ ಗೆರೆ, ಸಾಮರಸ್ಯದ ಜೋಡಿಗೆರೆ, ವಿದ್ಯೆಯ ಗೆರೆ, ಮಕ್ಕಳ ಗೆರೆ, ಅನ್ನರೇಖೆ ಎಂದು ಇರೋ ಒಂದೊಂದಕ್ಕು ಒಂದೊಂದು ನಾಮಕರಣ ಮಾಡಿ ಖುಷಿ ಪಡೊ ಜನರಲ್ವೆ ನಾವು? ಅದನ್ನೆ ಹೊಟ್ಟೆಪಾಡಿಗೆ ಶಾಸ್ತ್ರ ಹೇಳೊರಿಂದ ಹಿಡಿದು, ಕಂಪ್ಯೂಟರಲ್ಲಿ ಹಾಕಿ ತೋರಿಸೊ ಜ್ಯೋತಿಷ್ಯದ ಪಂಡಿತರತನಕ ಬಳಸಿ ಅದರದೆ ಆದ ‘ಎಕೊ ಸಿಸ್ಟಂ’ ಮಾಡಿಕೊಂಡುಬಿಟ್ಟಿದ್ದೇವೆ..
.
ಬಟ್ಟೆ ಐರನ್ ಮಾಡೊ ಹಾಗೆ, ಕಷ್ಟಗಳೆಲ್ಲ ಐರನ್ ಮಾಡಿಬಿಟ್ರೆ ಗೆರೆಗಳು ಅಳಿಸಿಹೋಗುತ್ತಾ? ಅಥವಾ ನೀಟಾಗಿ ಜೋಡಿಸಿದ ಸೌದೆ ತರ ಬದಲಾಗುತ್ತ ಅಂತ ಇನ್ನೊಂದು ಪ್ರಶ್ನೆ ಮೂಡಿ ಮತ್ತೆ ನಗು ಬಂತು; ಆಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ “ನಯವಾದ, ನುಣುಪು ಹಸ್ತ ಮಾಡಿಸಿಕೊಂಡು, ಜೀವನದ ಕಷ್ಟಗಳನ್ನೆಲ್ಲ ಸರ್ಜರಿ ಮುಖಾಂತರ ಪರಿಹರಿಸಿಕೊಳ್ಳಿ” ಅನ್ನೊ ಹೊಸ ಜಾಹೀರಾತು ನೋಡ್ಬಹುದೇನೊ? ವಿಷಯ ನಿಜವೊ ಸುಳ್ಳೊ,ಅಲ್ಲೂ ಬಿಜಿನೆಸು ಕಾಲಿಕ್ಕೋದು ಮಾತ್ರ ಗ್ಯಾರಂಟಿ 🙂
ಬಟ್ಲರು ಕನ್ನಡ ಕಲಿತಿದ್ದ ಮಗ ‘ಯಾಕೆ ನಗ್ತಾ ಇರೋದು’ ಅಂದ. ಅವನಿಗೆ ಕನ್ನಡ ಕಲಿಸಿದ ಹಾಗಾಗುತ್ತೆ ಅಂತ ಹಾಗೆ ಒಂದು ಪುಟಾಣಿ ಪದ್ಯ ಬರೆದು ವಿವರಿಸಿದೆ. ಅರ್ಧ ಅವನಿಗರ್ಥವಾಗೊ ಹಾಗೆ, ಇನ್ನರ್ಧ ನನಗೆ ಅರ್ಥವಾಗೊ ಹಾಗೆ. ಆ ಲಹರಿ ಈ ಕೆಳಗೆ, ಸುರಗಿಯ ಮಡಿಲಲ್ಲಿ 🙂
.
ಹಸ್ತ
ರೇಖೆ ಅಸ್ತವ್ಯಸ್ತ
ಗೀಟು ಗೆರೆಗಳ ಕೂಟ
ಬದುಕಿಗಂತೆ ಜೂಟಾಟ ||
ಜೂಜಾಟ
ಆಡೆ ಹಸ್ತದ ಚಟ
ರಾಜಾ ರಾಣಿ ಎಕ್ಕ ಜೋಕರು
ಜಂಜಾಟದಲು ಎಂಥಾ ಖದರು ||
ಬೀಸಾಟ
ಬೀಸೊ ಕಲ್ಲು ದಿಟ್ಟ
ಕಸುವಿದ್ದರೆ ಹಿಟ್ಟಿನ ಹುಡಿ
ಕೈಲಾಗದಿರೆ ನೆಪಕೇನು ದಂಢಿ ||
ಕೈ ಹಿಡಿತ
ಬಿಗಿದಪ್ಪಿ ಇಂಗಿತ
ಬೆಸೆದ ಹಸ್ತ ಸಾಂಗತ್ಯ
ಮನಗಳ ಮನ ಸಾಹಿತ್ಯ ||
ಮಿಳಿತ
ರೇಖೆ ಸಂಕಲಿಸುತ್ತ
ಬೆರೆತು ಹೋಗಲೆ ಬಾಳು
ಜತೆಗೆದುರಿಸೆ ಬೆಳಕಿನಿರುಳು ||
.
– ನಾಗೇಶ ಮೈಸೂರು
.
“ನಯವಾದ, ನುಣುಪು ಹಸ್ತ ಮಾಡಿಸಿಕೊಂಡು, ಜೀವನದ ಕಷ್ಟಗಳನ್ನೆಲ್ಲ ಸರ್ಜರಿ ಮುಖಾಂತರ ಪರಿಹರಿಸಿಕೊಳ್ಳಿ…..ಅನ್ನೊ ಹೊಸ ಬಿಜಿನೆಸು ಕಾಲಿಕ್ಕೋದು ಮಾತ್ರ ಗ್ಯಾರಂಟಿ ” …ಇದು ನಿಜವಾಗಬಹುದು ಎನಿಸುತ್ತದೆ… ಬರಹ ಇಷ್ಟವಾಯಿತು.
ಈಗಿನ ಅಧುನಿಕ ವಾಣಿಜ್ಯ ಪೋಷಿತ ಪರಿಸರದಲ್ಲಿ ಪ್ರತಿ ಸಂಶೋಧನೆಯೂ, ಹಾಕಿದ ಬಂಡವಾಳಕ್ಕೆ ಹಿಂತಿರುಗಿ ಬಂದ ಲಾಭವೆನ್ನುವ ಲೆಕ್ಕಾಚಾರದಲ್ಲಿ – ಇದು ನಿಜವಾದಲ್ಲಿ ಅಚ್ಚರಿಯೇನು ಇಲ್ಲ. ಈಗಿನ ಕ್ರಾಂತಿಕಾರಕ ಬದಲಾವಣೆಯ ದಿನಗಳು ಇನ್ನೂ ಏನೇನನ್ನು ತಮ್ಮ ಕಾಲಗರ್ಭದಲ್ಲಿ ಹುದುಗಿಸಿಕೊಂಡಿವೆಯೆನ್ನುವುದು ಕುತೂಹಲದಿಂದ ಕಾದು ನೋಡಬೇಕಾದ ವಿಚಾರ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಹಸ್ತರೇಖೆಗೆ ಅದರದೇ ಆದ ಮಹತ್ವಗಳಿವೆ. ಅಪರೂಪದ ವಿಷಯ ಆಯ್ದುಕೊಂಡಿದ್ದೀರಿ. ಒಳ್ಳೆಯ ವಿಚಾರ ಪ್ರಸ್ತುತ ಪಡಿಸಿದ್ದಕ್ಕೆ , ಜೊತೆಗೆ ಸುರಹೊನ್ನೆ ಮೂಲಕ ನಮಗೆ ಓದಲು ಲಭ್ಯವಾಗಿದ್ದಕ್ಕೆ ಅಭಿನಂದನೆಗಳು.
ನಮಸ್ತೆ ಕೃಷ್ಣವೇಣಿಯವರೆ, ನಮ್ಮ ಪರಂಪರಾಗತ ನಂಬಿಕೆಗಳೊಡನೆ ತಳುಕು ಹಾಕಿಕೊಂಡು, ದೈನಂದಿನ ಬದುಕಲ್ಲಿ ಹಾಸುಹೊಕ್ಕಾಗಿರುವ ಕಾರಣ ಆಸಕ್ತಿದಾಯಕವಾದೀತೆಂಬ ಅನಿಸಿಕೆಯಲ್ಲಿ ಬರೆದ ಬರಹವಿದು. ತಮ್ಮ ಮೆಚ್ಚುಗೆಗೆ ಕೃತಜ್ಞತೆಗಳು