ಗಣೇಶನೊಂದಿಗೆ ಮೆರವಣಿಗೆಯಲ್ಲಿ ವಾಕಿಂಗ್…
ಪ್ರತಿಬಾರಿಯೂ ಗಣೇಶ ಚತುರ್ಥಿಯ ನಂತರದ ಭಾನುವಾರ ನಮ್ಮ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಿಂದ ‘ಉತ್ಸವಮೂರ್ತಿ’ಯ ಮೆರವಣಿಗೆ ಹೊರಡುತ್ತದೆ. ವಾದ್ಯಮೇಳ, ನಾದಸ್ವರ, ಡೊಳ್ಳು ಇತ್ಯಾದಿಗಳೊಂದಿಗೆ ಹೊರಡುವ ಮೆರವಣಿಗೆಯು, ಬಡಾವಣೆಯ ಕೆಲವು ಮಾರ್ಗಗಳಲ್ಲಿ ಸಂಚರಿಸಿ, ಇನ್ನೊಂದು ದಾರಿಯಾಗಿ ದೇವಾಲಯಕ್ಕೆ ಬಂದು ಪೂಜೆಯಾಗಿ, ಪ್ರಸಾದ ವಿತರಣೆಯಾಗುತ್ತದೆ. ಈ ಮರೆವಣಿಗೆಯಲ್ಲಿ ಪಾಲ್ಗೊಳ್ಳುವುದು ಸಡಗರವೆನಿಸುತ್ತದೆ.
ಮಧ್ಯಾಹ್ನ ಸುಮಾರು 3 ಗಂಟೆಗೆ ದೇವಾಲಯದ ಕಡೆಯಿಂದ ಲಯಬದ್ಧವಾದ ಡೊಳ್ಳು, ಹಲಗೆ ಇತ್ಯಾದಿ ವಾದ್ಯಗಳ ಸದ್ದು ಕೇಳಿಸಿದೊಡನೆ ನಮ್ಮ ಬೀದಿಯಲ್ಲಿ ಗಣಪನನ್ನು ಸ್ವಾಗತಿಸುವ ತಯಾರಿ ಶುರುವಾಗಿ ಸಂಚಲನವುಂಟಾಗುತ್ತದೆ. ತತ್ಕ್ಷಣ ದಡಬಡಾಯಿಸಿ, “ಮೆರವಣಿಗೆ ಹೊರಟಿತು” ಎನ್ನುತ್ತಾ ಮನೆ ಮುಂದೆ ಗುಡಿಸಿ, ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ, ಹಣ್ಣು-ಕಾಯಿ ತಟ್ಟೆಯನ್ನು ಹಿಡಿದುಕೊಂಡು ಅಕ್ಕ-ಪಕ್ದದ ಮನೆಯವರ ಬಳಿ ಮಾತಿಗೆ ಶುರು ಹಚ್ಚುತ್ತೇವೆ. ಮೆರವಣಿಗೆಯಲ್ಲಿ ಬರುವ ಜನರಿಗೆ ಕುಡಿಯಲು ನೀರು, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡುವವರೂ ಇದ್ದಾರೆ.
ರಥದ ಮುಂದೆ, ಉದ್ದವಾದ ಕವೆಕೋಲು ಹಿಡಿದಿರುವ ಇಬ್ಬರು ಬರುತ್ತಾರೆ. ಮಾರ್ಗದ ಇಕ್ಕೆಲಗಳಲ್ಲಿ ಇರಬಹುದಾದ ಫೋನ್ ಕೇಬಲ್ ಗಳು, ಮರದ ಗೆಲ್ಲುಗಳು ರಥದ ತುದಿಗೆ ತಗಲದಂತೆ ಎತ್ತಿ ಹಿಡಿಯುವುದು ಇವರ ಕೆಲಸ. ಒಂದು ಸರಕುಸಾಗಣೆಯ ರಿಕ್ಷಾದಲ್ಲಿ ದ್ವನಿವರ್ಧಕಗಳು ಮತ್ತು ಕತ್ತಲಾದಾಗ ಬೆಳಕಿನ ವ್ಯವಸ್ಥೆಗೆ ಜನರೇಟರ್ ಅನ್ನು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿಸುತ್ತಾರೆ.
ರಥ ನಮ್ಮ ಮನೆ ಮುಂದೆ ಬಂದಾಗ ಹಣ್ಣು-ಕಾಯಿ ಅರ್ಪಿಸಿ, ಆಮೇಲೆ ನಾವೂ ಮೆರವಣಿಗೆಯನ್ನು ಅನುಸರಿಸಿ ಹೋಗಲು ಖುಶಿಯಾಗುತ್ತದೆ. ಸುಮಾರು 30 ಜನರಿಂದ ಆರಂಭವಾಗುವ ಮೆರವಣಿಗೆಯು ಕೊನೆಗೊಳ್ಳುವಾಗ 250 -300 ಜನ ಸೇರಿರುತ್ತಾರೆ.
ವಾದ್ಯಗಳ ಲಯಬದ್ಧತೆಯೊಂದಿಗೆ , ಕೀರ್ತನೆ, ಭಕ್ತಿಗೀತೆಗಳಿಂದ ಮೊದಲುಗೊಂಡ ನಾದಸ್ವರ/ ಸ್ಯಾಕ್ಸ್ ಫೋನ್ ವಾಲಗವು, ಚಲನಚಿತ್ರೆ ಗೀತೆಗಳೆಡೆಗೆ ತಿರುಗಿತು. ಕೊನೆಗೆ ಹಿಂದಿಯ “ಏಕ್ ದೋನ್ ತೀನ್ ಚಾರ್ ಪಾಂಚ್ ಸಾಥ್ ಆಠ್…” ಹಾಡಿನ ವಾಲಗ ಕೇಳಿ ಬಂದಾಗ ಬಡಾವಣೆಯ ಮಕ್ಕಳು ಸ್ವಯಪ್ರೇರಿತರಾಗಿ ಥಕಥೈ ಕುಣಿದು ಗಣೇಶನಿಗೆ ‘ನರ್ತನ ಸೇವೆ’ಯನ್ನೂ ಸಲ್ಲಿಸಿದರು!
‘ನಗರ ಸಂಚಾರ’ ಮುಗಿಸಿ ದೇವಸ್ಥಾನಕ್ಕೆ ವಾಪಸ್ಸಾದ ಉತ್ಸವಮೂರ್ತಿಯನ್ನು ಆರತಿಯೆತ್ತಿ ಸ್ವಾಗತಿಸಿ, ಪುನ: ಪೂಜಾಕೈಂಕರ್ಯಗಳು ಸಾಂಗವಾಗಿ ನೆರವೇರಿತು. ಬಂದಿದ್ದ ಭಕ್ತಾದಿಗಳಿಗೆಲ್ಲ ಬಿಸಿಬೇಳೆಭಾತ್, ಮೊಸರನ್ನದ ಪ್ರಸಾದವನ್ನು ಕೊಡಲಾಯಿತು.
ಹೀಗೆ ಗಣೇಶನೊಂದಿಗೆ ಮೆರವಣಿಗೆಯಲ್ಲಿ ಸುಮಾರು 4 ಗಂಟೆಗಳ ಕಾಲ ನಿಧಾನವಾಗಿ ವಾಕಿಂಗ್ ಹೋಗುವ ನಮಗೆ, ವರ್ಷಕ್ಕೆ ಒಂದು ಬಾರಿಯಾದರೂ ಈ ನೆಪದಲ್ಲಿ, ನಮ್ಮ ಬಡಾವಣೆಯ ಇತರ ಮನೆಗಳ ಮುಂದೆ ಹಾದು ಹೋಗುವ ಅವಕಾಶ ಸೃಷ್ಟಿಯಾಗುತ್ತದೆ, ಕೆಲವರ ಬಳಿಯಾದರೂ ಮಾತನಾಡಲು ಸಾಧ್ಯವಾಗುತ್ತದೆ ಮತ್ತು ಕನಿಷ್ಟ ಮುಖ ಪರಿಚಯವಾದರೂ ಆಗುತ್ತದೆ.
ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳುವದೇ ಒಂದು ಸಂಭ್ರಮ
ಹೌದು, ಅದೊಂದು ಸುಂದರ ಅನುಭವ. ಬಲ್ಲವರಿಗೆ ಗೊತ್ತು ಬೆಲ್ಲದ ರುಚಿ.. ಯಕ್ಷಗಾನದ ವೇಷಗಳು, ಕೀಲುಕುದುರೆ, ಬಗೆಬಗೆಯ ವಾದ್ಯಗಳು, ಅಲಂಕೃತ ವಾಹನ… ಒಂದೇತಾಯಿ ಮಕ್ಕಳಂತೆ ಕುಣಿವ, ಭಜಿಸುವ ನಾವೆಲ್ಲರೂ..