2015 ರ ರೋಮಾನ್ ಮ್ಯಾಗ್ಸೆಸ್ಸೆ  ಪ್ರಶಸ್ತಿ ವಿಜೇತರು ..

Share Button
Nagaraj Bhadra

ನಾಗರಾಜ ಭದ್ರಾ

 

ಭವ್ಯ ಭಾರತ,ಶ್ರೀಮಂತ  ಭಾರತ,ಆಧುನಿಕ ಭಾರತ,ಡಿಜಿಟಲ್ ಇಂಡಿಯಾ  ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು ನಾವು ಇಲ್ಲಿನ ಬಡವರ  ಪರಿಸ್ಥಿತಿಯ ಬಗ್ಗೆ ಒಂದೂಸಾರಿ   ಆಲೋಚಿಸಿದ್ದರೆ ನಮಗೆ ನಿಜವಾದ  ಭಾರತದ ದರ್ಶನವಾಗುತ್ತದೆ.ನಮ್ಮ  ದೇಶದಲ್ಲಿ ಪ್ರತಿ ವರ್ಷವು ಲಕ್ಷಾಂತರ ಬಡವರು ತೋಡಲು ಸರಿಯಾಗಿ  ಬಟ್ಟೆಗಳು ಇಲ್ಲದೆ ಕೊರೆಯುವ  ಚಳಿಯಿಂದ  ಸಾಯುತ್ತಾರೆ . ಬಡವರು ರಸ್ತೆ  ಬೀದಿಗಳಲ್ಲಿ, ರೈಲು ನಿಲ್ದಾಣಗಳಲ್ಲಿ,ಬಸ ನಿಲ್ದಾಣಗಳಲ್ಲಿ  ಕೊರೆಯುವ ಚಳಿಯಲ್ಲಿ ತೋಡಲು ಸರಿಯಾಗಿ  ಬಟ್ಟೆಗಳು ಇಲ್ಲದೆ ನಡುಗುತ್ತಾ  ಮಲಗಿರೊದ್ದನ್ನು ನೀವು ನೋಡಿರುತ್ತಿರಿ. ಹಳ್ಳಿಗಳಲ್ಲಿಯೂ   ಕೋಟ್ಯಾಂತರ ಬಡವರು ಇದೇ ರೀತಿಯಲ್ಲಿ ಕೊರೆಯುವ ಚಳಿಯಲ್ಲಿ ತೋಡಲು ಸರಿಯಾಗಿ  ಬಟ್ಟೆಗಳು ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಬಡವರಿಗೆ ಬೇಕಾಗಿದ್ದಿವು ಒಂದು ಹೊತ್ತು ಊಟ,ಇರಲು ಒಂದು ಸೂರು, ಒಂದು ಜೊತೆ ಬಟ್ಟೆ.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರು ನಮ್ಮ ಸರಕಾರಗಳು ಅವುಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದು  ದುರಂತವೆ ಸರಿ. ಸುಮಾರು 70   ದಶಕದಲ್ಲಿ ಬಾಲಿವುಡನಲ್ಲಿ   ” ರೊಟ್ಟಿ ,ಕಪಡಾ ಅವರ್  ಮಕಾನ್ ಎಂಬ  ಹೆಸರಿನ ಚಲನಚಿತ್ರವೊಂದು ಬಂದಿತ್ತು. ಆ ಚಲನಚಿತ್ರವು ನಮ್ಮ ದೇಶದಲ್ಲಿ ಬಡವರು ಅನುಭವಿಸುತ್ತಿರುವ ನರಕಯಾತನೆಯನ್ನು ಬಿಂಬಿಸುತ್ತಿತ್ತು .ನಮ್ಮ ದೇಶದ ಸರಕಾರಗಳು ಬಡವರಿಗೆ ಒಂದು ಮನೆ,ಒಂದು ಹೊತ್ತು ಊಟ,ಬಟ್ಟೆ ಒದಗಿಸುವಲ್ಲಿ ವಿಫಲವಾಗಿವೆ ಎಂಬ ಕಥಾಸಾರಾಂಶವನ್ನು ಹೊಂದಿತ್ತು.ನಾವೆಲ್ಲರೂ  ಅದನ್ನು ನೋಡಿ  ಸ್ವಲ್ಪ  ದಿನಗಳಾದ ಮೇಲೆ ಮರೆತು ಬಿಟ್ಟಿದ್ದು ವಿರ್ಪಯಾಸವೆ ಸರಿ.

ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಆಸ್ಕರ ಪ್ರಶಸ್ತಿ ವಿಜೇತ ಚಲನಚಿತ್ರ “slumdog millionaire” ನಮ್ಮ ದೇಶದಲ್ಲಿ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನರ ದಾರುಣ ಬದುಕನ್ನು ತೋರಿಸಿ ಭಾರತದ  ಮಾನವನ್ನು ಇಡೀ ವಿಶ್ವದ ಮುಂದೆ ಹರಾಜ ಹಾಕಿತ್ತು. ಇಂದಿನ ಆಧುನಿಕ ಯುಗದಲ್ಲಿ   ಹೆಚ್ಚು ವೊತ್ತದ,ಪ್ರತಿಶಿಷ್ಠ  ಕಂಪನಿಯ ಬಟ್ಟೆಗಳನ್ನು ಧರಿಸುವುದು ಜನರ ಪ್ರತಿಷ್ಠೆಯಾಗಿದೆ. ನಮ್ಮಲ್ಲಿಯೂ ಒಬ್ಬರಿಗೆ ಹತ್ತರಿಂದ ಹದಿನೈದು ಜೊತೆ ಬಟ್ಟೆಗಳಲ್ಲಿದ್ದಾವೆ,ಸ್ವಲ್ಪವು ಹಾನಿಯಾದರೆ ಮತ್ತೊಂದು ಜೊತೆ ಬಟ್ಟೆಗಳನ್ನು ಕೊಂಡುಕೊಳ್ಳುತ್ತಿವಿ.

ಭಾತರದ ಅದೆಷ್ಟೋ ಹಳ್ಳಿಗಳಲ್ಲಿ ಮಹಿಳೆಯರು ಮಾಸಿಕ ಋತುಧರ್ಮದ ಸಮಯದಲ್ಲಿ ಸ್ವಚ್ಛತೆ, ಗೋಪ್ಯತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದರೆಂಬುದು ಕಠೋರ ಸತ್ಯ. ಹಳ್ಳಿಗಳಲ್ಲಿ ಎಷ್ಟೋ ಬಡ ಹುಡುಗಿಯರು  ಸ್ವಚ್ಚ, ಶುಚಿಯಾದ ಬಟ್ಟೆಗಳಿಲ್ಲದ ಕಾರಣ ಮಾಸಿಕ ಋತುಧರ್ಮದ ಸಮಯದಲ್ಲಿ ಶಾಲೆಗಳಿಗೆ ಹೋಗುವುದಿಲ್ಲ.  ಇಂತಹ ಹತ್ತಾರು ಸಮಸ್ಯೆಗಳನ್ನು ಕಣ್ಣಾರೆಕಂಡ ನಮ್ಮ ದೇಶದ ಒಬ್ಬ ಸಾಮಾನ್ಯ ಪ್ರಜೆ ,ಕಾರ್ಪೊರೇಟ ಕಂಪನಿಯ  ಉದೋಗ್ಯಿ ಅಂಶು ಗುಪ್ತಾ ಅವರು 1999 ರಲ್ಲಿ ದೆಹಲಿಯಲ್ಲಿ ಗೂಂಜ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದರು.  ಒಂದು  ತುಂಡು ಬಟ್ಟೆಯಿಂದ ಎಂತಹ ಕ್ರಾಂತಿಕಾರಿ ಬದಲಾಣೆಯನ್ನು  ತರಬಹುದೆಂದು  ತೋರಿಸಿಕೊಟ್ಟರು.

Amshu Gupta

ಈ ಉದ್ದೇಶಕ್ಕಾಗಿಯೆ ಅವರು ನಾಟ್ ಜಸ್ಟ್ ಪೀಸ್ ಆಫ್ ಕ್ಲಾತ್ಎಂಬ ಅಭಿಯಾನವನ್ನು ಆರಂಭಿಸಿದರು.   ಅವರು ತಮ್ಮ ಈ  ಉದ್ದೇಶವನ್ನು ಈಡೇರಿಸಲು  ಅನುಸರಿಸಿದ್ದ ಮಾರ್ಗ ಯಾವುದು ಗೊತ್ತಾ? ಭಾರತೀಯ ಸಂಸ್ಕೃತಿಯ ಹೆಮ್ಮೆಯ ಗುಣವಾದ ದಾನವನ್ನು  ಆರಿಸಿದರು. ಅವರು ನಗರ ಪ್ರದೇಶದಲ್ಲಿನ ಶ್ರೀಮಂತ ಜನರು ಉಪಯೋಗಿಸದ ಬಟ್ಟೆಗಳು ಮತ್ತು ತ್ಯಾಜ್ಯ ಎಂದು ಎಸೆಯುವ ವಸ್ತುಗಳನ್ನು ಪುನರ್ ಬಳಕೆ ಮಾಡಿ ಹಳ್ಳಿಯ ಬಡವರಿಗೆ ವಿತರಿಸುವ ಮಹತ್ವದ ಕಾರ್ಯವನ್ನು ಪ್ರಾರಂಭಿಸಿದರು.ಅಂಶು  ಗುಪ್ತಾ ಅವರು ಮೊದಲು ತಮ್ಮ ಮನೆ,ಬಂಧುಗಳ ಹಾಗೂ ಸ್ನೇಹಿತರ ಮನೆಗಳಿಂದಲ್ಲೆ  ಪ್ರಾರಂಭಿಸಿದರು. ಗೂಂಜ್ ಸಂಸ್ಥೆಯು ದೆಹಲಿ ಒಂದರಲ್ಲೇ ತಿಂಗಳಿಗೆ ಸುಮಾರು 45 ಟನ್ ಗಳಷ್ಟು ಬಟ್ಟೆಗಳನ್ನು ವಿತರಿಸುತ್ತಿದೆ.ಮೊದಲು ದೆಹಲಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ ಗೂಂಜ್  ಸಂಸ್ಥೆಯು ಕೆಲವೇ ವರ್ಷಗಳಲ್ಲಿ  ಕರ್ನಾಟಕ ಸೇರಿ ದೇಶದ 21  ರಾಜ್ಯಗಳಲ್ಲಿ  ತನ್ನ ಸೇವೆಯನ್ನು ವಿಸ್ತರಿಸಿದೆ. ದೇಶಾದ್ಯಂತ ಹರಡಿರುವ ಗೂಂಜ್ ಸಂಸ್ಥೆಯು ಹಾಗೂ 250  ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರ ಮೂಲಕ ವರ್ಷವೊಂದಕ್ಕೆ ಸುಮಾರು ಒಂದು ಸಾವಿರ ಟನ್ ಬಟ್ಟೆಗಳನ್ನು ವಿತರಿಸುತ್ತಿದೆ.

ಇನ್ನೂ  ತಮ್ಮಲ್ಲಿ  ಕೃಡಿಕರಣವಾದ ಬಟ್ಟೆಗಳನ್ನು ವರ್ಗೀಕರಿಸಿ, ಸರಿಯಾಗಿ ಒಗೆದು,ಒಣಗಿಸಿ,ನಿರ್ದಿಷ್ಟ  ಆಕಾರದಲ್ಲಿ  ಕತ್ತರಿಸಿ,ನ್ಯಾಪಕಿನ್ ರೂಪದಲ್ಲಿ ಪರಿರ್ವತಿಸಿ ಮೈಪ್ಯಾಡ್ ಎಂಬ ಹೆಸರಿನಲ್ಲಿ ಹಳ್ಳಿಯ ಬಡ  ಮಹಿಳೆಯರಿಗೆ ವಿತರಿಸುತ್ತಿದೆ.ಇಲ್ಲೀವರೆಗೂ ಸುಮಾರು 24  ಲಕ್ಷ ನ್ಯಾಪಕಿನ್ ಗಳನ್ನು ಗೂಂಜ್ ಸಂಸ್ಥೆಯು  ವಿತರಿಸಿದೆ.ಮನೆಯಲ್ಲಿ  ಹಳೆಯದಾದ ಗುಜರಿ  ಎಂದು  ಎಸೆಯುವ ವಸ್ತುಗಳನ್ನು ಗೂಂಜ್ ಸಂಸ್ಥೆಯು ಸಂಗ್ರಹಿಸುತ್ತದೆ.ನಂತರ ಸಂಗ್ರಹವಾದ ವಸ್ತುಗಳಲ್ಲಿ ಉಪಯೋಗಿಸಲು ಯೋಗ್ಯವಾದವುಗಳನ್ನು  ತಮ್ಮ ವ್ಯವಸ್ಥಿತ ಯೂನಿಟ್ ನಲ್ಲಿ  ರಿಪೇರಿ ಮಾಡಿ ಮರು ಬಳಕೆಗೆ ಸಿದ್ದವಾಗಿಸಿ ಬಡವರಿಗೆ  ವಿತರಿಸುತ್ತಿದ್ದಾರೆ.ಇದನ್ನು ರದ್ದಿ ಆಧರಿಸಿದ ಪರ್ಯಾಯ ಆರ್ಥಿಕತೆಎಂದು ಅಂಶುಗುಪ್ತಾರವರು ಕರೆದಿದ್ದಾರೆ. ಅವರ ಈ ಸಾಮಾಜಿಕ ಕಾರ್ಯಕ್ಕೆ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಆದರೆ ಅವರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದು  2015 ನೇ ಸಾಲಿನರೋಮಾನ್ ಮ್ಯಾಗ್ಸೆಸ್ಸೆ  ಪ್ರಶಸ್ತಿ “.ಈ ಪ್ರಶಸ್ತಿಯು ಏಷ್ಯಾ  ಖಂಡದ ನೊಬೆಲ್ ಎಂದೇ ಖ್ಯಾತಿಯಾಗಿದೆ.

2015 ನೇ ಸಾಲಿನ ” ರೋಮಾನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಗೆ ಇನೊಬ್ಬ ಭಾರತೀಯ ಆಯ್ಕೆಯಾಗಿದ್ದಾರೆ ಅವರೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಸಂಜೀವ್ ಚತುರ್ವೇದಿ. ಇವರ ದಿಟ್ಟ ಹೋರಾಟ,ದೃಢ ನಿರ್ಧಾರ, ಪ್ರಾಮಾಣಿಕತೆ,ಸಾಮಾಜಿಕ ಸೇವೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಎಲ್ಲವನ್ನೂ ಆಧರಿಸಿ 2015 ನೇ ಸಾಲಿನ ರೋಮಾನ್  ಮ್ಯಾಗ್ಸೆಸ್ಸೆ ಪ್ರಶಸ್ತಿಗೆ  ಆಯ್ಕೆಮಾಡಲಾಗಿದೆ.ಸಂಜೀವ್  ಚತುರ್ವೇದಿರವರು  2003  ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾ.ಅ.ಸೇ ಶ್ರೇಣಿಯ ಅಧಿಕಾರಿಯಾಗಿ ಸರಕಾರಿ ಸೇವೆಗೆ ಸೇರಿದರು .ಇವರು ಸರ್ಕಾರೀ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಬೆಂಬಿಡದೆ ಹೋರಾಡುತ್ತಿದ್ದಾರೆ.ಆದರೆ ನಮ್ಮ ಸರಕಾರ ಇಂತಹ  ಪ್ರಾಮಾಣಿಕ ಅಧಿಕಾರಿಗೆ ಬೆಂಬಲಿಸುವ ಬದಲಾಗಿ ವರ್ಗಾವಣೆ ಮೇಲೆ ವರ್ಗಾವಣೆ ಮಾಡುತ್ತಿರುವುದು ವಿಪರ್ಯಾಸವೆ ಸರಿ.

Sanjeev Chaturvedi

ಇವರು ಪ್ರಸ್ತುತವಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್)ನಲ್ಲಿ ಉಪರ್ಕಾಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬರೀ ವರ್ಗಾವಣೆ ಎಂಬ ಪ್ರಶಸ್ತಿವು ನಮ್ಮ  ಸರಕಾರಗಳು ನೀಡುತ್ತವೆ. ಬೇರೆ ದೇಶದ ಸರಕಾರದ ಕಣ್ಣಿಗೆ ಕಾಣುವ ಪ್ರಾಮಾಣಿಕ ಅಧಿಕಾರಿಗಳು ನಮ್ಮ ದೇಶದ ಸರಕಾರದ ಕಣ್ಣಿಗೆ  ಕಾಣದೇ ಇರುವುದು ದೊಡ್ಡ ದುರಂತವೆ ಸರಿ. ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ದೇಶದ ಸರಕಾರಗಳು ನೀಡುವ ಬೆಲೆಯೇ ಇಷ್ಟೇ. ಇನ್ನೂ ಭ್ರಷ್ಟಾಚಾರ ಮುಕ್ತ ಭಾರತದ ಕನಸು ನನಸಾಗುವುದು ಯಾವಾಗ. ಈ ಪ್ರಶ್ನೆಗೆ ದೇವರೇ ಉತ್ತರಿಸಬೇಕು.

ರೋಮಾನ್ ಮ್ಯಾಗ್ಸೆಸ್ಸೆ  ಪ್ರಶಸ್ತಿಯ ಹಿನ್ನೆಲೆ :  ಫಿಲಿಫೈನ್ಸನ ಏಳನೇ ಅಧ್ಯಕ್ಷರಾದ ರೋಮಾನ್ ಮ್ಯಾಗ್ಸೆಸ್ಸೆರವರು 1957 ರಲ್ಲಿ ಅಧಿಕಾರದಲ್ಲಿದ್ದಾಗಲೇ ವಿಮಾನ ಅಫಘಾತದಲ್ಲಿ ನಿಧನರಾದರು.ಅವರ ನೆನಪಿಗೋಸ್ಕರ ಫಿಲಿಫೈನ್ಸ ಸರಕಾರವು 1957  ರಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿತ್ತು.ರೋಮಾನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು  ಸರಕಾರಿ ಸೇವೆಯಲ್ಲಿನ ಕೊಡುಗೆ,ಸಾರ್ವಜನಿಕ ಸೇವೆ,ಸಾಮಾಜಿಕ ನಾಯಕತ್ವ,ಪ್ರತಿಕೋದ್ಯಮ,ಸಾಹಿತ್ಯ ಹೀಗೆ ಹಲವಾರು ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದರ ಕೊಡುಗೆ ಪರಿಗಣಿಸಿ  ಫಿಲಿಫೈನ್ಸ ಸರಕಾರವು ಪ್ರತಿ ವರ್ಷವು ನೀಡುತ್ತದೆ.ಈ ಪ್ರಶಸ್ತಿಯು  ಏಷ್ಯಾ ಖಂಡದ ರಾಷ್ಟ್ರಗಳ ಸಾಧಕರಿಗೆ ಮತ್ತು ಸಂಸ್ಥೆಗಳಿಗೆ ನೀಡುವದರಿಂದ ಇದನ್ನು ಏಷ್ಯಾ ಖಂಡದ ನೊಬೆಲ್ಎಂದು ಕರೆಯುತ್ತಾರೆ.

ಗೂಂಜ್ ಸಂಸ್ಥೆಯ ಸಂಸ್ಥಾಪಕ ಅಂಶು ಗುಪ್ತಾ ಮತ್ತು ಅವರ ಕಾರ್ಯಕರ್ತರಿಗೆ ಹಾಗೂ ಸಂಜೀವ್ ಚತುರ್ವೇದಿಯವರಿಗೆ  ಹಾರ್ದಿಕ ಅಭಿನಂದನೆಗಳು.

ಗೂಂಜ್ ಸಂಸ್ಥೆಯು ತನ್ನ ಸಾಮಾಜಿಕ ಸೇವೆಯು ಹೀಗೆ ಮುಂದುವರೆಸಲ್ಲಿ ಹಾಗೂ  ಸಂಜೀವ್ ಚತುರ್ವೇದಿಯವರು ತಮ್ಮ ಭ್ರಷ್ಟಾಚಾರ ವಿರುದ್ಧ ಹೋರಾಟ,ಪ್ರಾಮಾಣಿಕ ಸೇವೆಯನ್ನು ಮುಂದುವರೆಯಲ್ಲಿ ಅಂತ ಆಶಿಸೋಣ.

ನೀವು ಯಾರಾದರೂ ಗೂಂಜ್ ಸಂಸ್ಥೆಯ ಸಾಮಾಜಿಕ ಕಾರ್ಯದಲ್ಲಿ ಕೈ ಜೋಡಿಸಲು ಇಚ್ಚೆವುಳ್ಳವರಿದ್ದರೆ, ನಿಮ್ಮ ಹತ್ತಿರವು ಹಳೆಯ ಉಪಯೋಗಿಸದೇ ಇರುವ ಬಟ್ಟೆಗಳು ಮತ್ತು ಇತರೆ ವಸ್ತುಗಳಿದ್ದರೆ ಗೂಂಜ್ ಸಂಸ್ಥೆಗೆ ನೀಡಿ.

ಹೆಚ್ಚಿನ ಮಾಹಿತಿಗೆ ಗೂಂಜ್ ಸಂಸ್ಥೆಯ ಜಾಲತಾಣ ಭೇಟಿ ನೀಡಿ. http://goonj.org/

 – ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

 

 

2 Responses

  1. Hema says:

    ಬಹಳ ಉತ್ತಮವಾದ ಸಮಾಜ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೂಂಜ್ ಸಂಸ್ಥೆಯ ಅಂಶು ಗುಪ್ತಾ ಮತ್ತು ಅವರ ಕಾರ್ಯಕರ್ತರಿಗೆ ಅನಂತ ವಂದನೆಗಳು.
    ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಅಂಶು ಗುಪ್ತಾ ಅವರಿಗೂ ಸಂಜೀವ್ ಚತುರ್ವೇದಿಯವರಿಗೂ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: