ನನಸಾದ ಯೂರೋಪ್ ಕನಸು…ಭಾಗ 1

Share Button

ನನ್ನ ಬಹುದಿನಗಳ ಕನಸು ಯೂರೋಪಿನ ಪ್ರವಾಸಕ್ಕೆ ಹೋಗುವ ಅವಕಾಶ ಕೂಡಿಬಂತು. ನಮ್ಮ ಸ್ನೇಹಿತರೂ ಸೇರಿ ಒಟ್ಟು 9 ಜನ ಒಂದೇ ಬಾರಿಗೆ ಹೋಗಲು ನಿರ್ಧರಿಸಿದೆವು. ಧಾಮಸ್ ಕುಕ್ ಆಫ್ ಇಂಡಿಯ ಏಜನ್ಸಿ ಮುಖಾಂತರ ಪ್ರವಾಸ ಮಾಡಲು ನಿರ್ಧರಿಸಿದೆವು. ನಾವು ಆಯ್ದುಗೊಂಡ ಜಾಗಗಳು ಲಂಡನ್, ಪ್ಯಾರಿಸ್, ಸ್ವಿಡ್ಜರ್‌ಲ್ಯಾಂಡ್, ನೆದರ್‌ಲ್ಯಾಂಡ್, ಆಸ್ಟ್ರೀಯಾ, ವೆನಿಸ್, ಫ್ಲೋರೆನ್ಸ್, ವ್ಯಾಟಿಕನ್ ಮತ್ತು ರೋಮ್ ಈ 9 ದೇಶಗಳು.

ನಮ್ಮ ಪ್ರವಾಸ ಆರಂಭವಾದ ದಿನ 12/06/2013. ಎಮಿರೈಟ್ಸ್ ಫ್ಲೈಟ್‌ನಲ್ಲಿ. ದುಬೈ ಮುಖಾಂತರ ಲಂಡನ್ ತಲುಪಿದೆವು. ನಾನು ಈ ಮೊದಲು ದುಬೈಗೆ ಹೋಗಿಲ್ಲದ ಕಾರಣ ಮೊದಲ ಬಾರಿಗೆ ದುಬೈ ಏರೋಡ್ರಮ್ ನೋಡುವ ಅವಕಾಶ ಸಿಕ್ಕಿತು. ಅತ್ಯದ್ಭುತವಾಧ ಏರೋಡ್ರಮ್.  13 ರ ಮಧ್ಯಾಹ್ನವೇ ನಾವು ಲಂಡನ್ ತಲುಪಿದೆವು. ನಾವು ಏರೋಡ್ರಮ್ ತಲುಪುವಷ್ಟರಲ್ಲಿ ನಮ್ಮ ಗ್ರೂಪ್ ಮ್ಯಾನೇಜರ್ ಅಭಿಜಿತ್ ಪ್ರಧಾನ್‌ರವರು ನಮಗಾಗಿ ಕಾಯುತ್ತಿದ್ದರು. ನಮ್ಮ ಗುಂಪಿನಲ್ಲಿ ಒಟ್ಟು  38 ಜನ ಇದ್ದೆವು. ಮಿನಿ ಇಂಡಿಯಾನೇ ಸೇರಿತ್ತು. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಬನಾರಸ್, ಡಿಲ್ಲಿ, ಆಸ್ಟ್ರೇಲಿಯಾದಿಂದ ನಮ್ಮ ಸ್ನೇಹಿತರಿಬ್ಬರೂ ಬಂದಿದ್ದರು. 38 ಜನದ ಪೈಕಿ ಮಕ್ಕಳ ಸಂಖ್ಯೆ 8.

 

ಈ ಸಂದರ್ಭದಲ್ಲಿ ನಮ್ಮ ಮ್ಯಾನೇಜರ್ ಅಭಿಜಿತ್ ಪ್ರಧಾನ್‌ರವರ ಬಗ್ಗೆ ಒಂದೆರಡು ಮಾತು ಹೇಳಬಯಸುತ್ತೇನೆ. ಅವರು ಶಾಂತ ಸ್ವಭಾವದವರು, ಮಾತು ಮೃದು, ಆದರೆ ಶಿಸ್ತಿನ ಸಿಪಾಯಿ. ಅವರ ಶಿಸ್ತು ಸಂಯಮದಿಂದ ಎಲ್ಲರ ಮನಸ್ಸನ್ನೂ ಗೆದ್ದರು. ಎರಡು ದಿವಸಗಳಲ್ಲಿ ಒಂದು ಕುಟುಂಬದ ರೀತಿ ಆಗಿದ್ದೆವು.

ಏರೋಡ್ರಮ್‌ನಿಂದ ನಮ್ಮ ಹೋಟೆಲ್ ತಲುಪುವವರೆಗೆ ಕಣ್ಣಿಗೆ ಸಂತಸ ನೀಡುವಂತ ಪ್ರಕೃತಿಯ ಸೌಂದರ್ಯ ನೋಡುತ್ತಾ ಸಾಗಿದೆವು. ನಮ್ಮ ತಂಗುವಿಕೆಗೆ ಹೋಟೆಲ್ ಹಿಲ್ಟನ್‌ನಲ್ಲಿ ಏರ್ಪಾಡು ಮಾಡಲಾಗಿತ್ತು. ಹೋಟೆಲ್ ಸಹ ನಿಸರ್ಗದ ಮಧ್ಯದಲ್ಲಿದ್ದು ಯೂರೋಪಿನ ಅಚ್ಚುಕಟ್ಟುತನ ಎದ್ದುಕಾಣುತ್ತಿತ್ತು. ಕೊಠಡಿಯ ಸೌಂದರ್ಯ ಮನಸ್ಸಿಗೆ ಮುದ ನೀಡುವಂತಿತ್ತು. ಊಟ ಮಾಡಿ ವಿಶ್ರಾಂತಿ ಪಡೆದ ನಂತರ ಸಾಯಂಕಾಲ ಶಾಪಿಂಗ್ ನೆಪದಲ್ಲಿ ನಗರದ ಕೇಂದ್ರಸ್ಥಳವನ್ನು ನೋಡಿದೆವು.

ಮಾರನೇ ದಿನ ಬೆಳಿಗ್ಗೆ ಉಪಹಾರದ ನಂತರ ಮೇಡಮ್ ಥುಸಾಡ್ಸ್ ವ್ಯಾಕ್ಸ್ ಮ್ಯೂಸಿಯಂ ನೋಡಲು ಹೋದೆವು. ಅಲ್ಲಿ ಹಾಲಿವುಡ್, ಬಾಲಿವುಡ್ ಮತ್ತು ಇತರೆ ಪ್ರಸಿದ್ದ ವ್ಯಕ್ತಿಗಳ ಪ್ರತಿರೂಪವನ್ನು ವ್ಯಾಕ್ಸ್‌ನಲ್ಲಿ ಮಾಡಲಾಗಿದೆ. ನಮಗೆ ಇಷ್ಟವಾದ ವ್ಯಕ್ತಿಗಳ ವಿಗ್ರಹಗಳ ಜೊತೆಗೆ ಛಾಯಾಚಿತ್ರ ತೆಗೆದುಕೊಂಡೆವು ಮತ್ತು ಮನರಂಜನಾತ್ಮಕವಾದ ಕೆಲವು ಕಾರ್ಯಗಳನ್ನು ಆಯೋಜಿಸಲಾಗಿತ್ತು. ಒಟ್ಟಾರೆ ಒಳ್ಳೆ ಅನುಭವ.

ದಿ.14/6/2013 ರಂದು ಬೆಳಿಗ್ಗೆ ನಗರ ವೀಕ್ಷಣೆ ಪ್ರಮುಖವಾದ ಚಾರಿತ್ರಿಕ ಕಟ್ಟಡಗಳಾದ ಬಿಗ್ ಬೆನ್ ವೆಸ್ಟ್ ಮಿನಿಸ್ಟರ್ ಅಬ್ಬೆ ಹೌಸಸ್ ಆಫ್ ಪಾರ್ಲಿಮೆಂಟ್ ಟ್ರಪಲ್‌ಗರ್ ಸ್ಕ್ವೈರ್ ಟವರ್‌ಬ್ರಿಡ್ಜ್, ಥೇಮ್ಸ್ ನದಿ, ಲಂಡನ್ ಸುಂದರವಾದ ನಗರ, ಐತಿಹಾಸಿಕ ಕಟ್ಟಡಗಳ ಜೊತೆಗೆ ಮನೆಗಳೂ ಸಹ ಅಷ್ಟೇ ಸುಂದರವಾಗಿವೆ. ಕಾಂಕ್ರಿಟ್ ಕಟ್ಟಡಗಳಿಗಿಂತ ಇಟ್ಟಿಗೆ ಮತ್ತು ಹೆಂಚಿನಿಂದ ಕಟ್ಟಿದ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮತ್ತು ಪ್ರತಿ ಮನೆಯ ಸುತ್ತಮುತ್ತ ಹೂದೋಟಗಳು ಇರುವುದರಿಂದ ಲಂಡನ್ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿವೆ.

ಬಕ್ಕಿಂಗ್‌ಹ್ಯಾಮ್ ಪಾಲೇಸ್

 

ಇಂತಹ ಸುಂದರವಾದ ನಗರದಲ್ಲಿದ್ದಾಗಲೂ ಬೆಳಿಗ್ಗೆ ಏಳುವಾಗ ಪ್ರತಿನಿತ್ಯ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ನಾದ, ಕೋಗಿಲೆಯ ಸವಿಗಾನ ಇಲ್ಲದ ಕೊರತೆ ಕಂಡುಬಂತು. ಬಕ್ಕಿಂಗ್‌ಹ್ಯಾಮ್ ಪಾಲೇಸ್ ತಲುಪಿದಾಗ ಛೇಂಜಸ್ ಗಾರ್ಡ್ ನೋಡುವ ಅವಕಾಶ ಸಿಕ್ಕಿತು. ನಮ್ಮ ಜೊತೆಯಲ್ಲಿ ಬಂದ ಗೈಡ್ ಪ್ರತಿಸ್ಥಳದ ಇತಿಹಾಸವನ್ನು ವಿವರಿಸುತ್ತಿದ್ದ ಕಾರಣ ನಮಗೆಲ್ಲರಿಗೂ ಯು.ಕೆ. ಇತಿಹಾಸ ಮತ್ತು ಈಗಿನ ವ್ಯವಸ್ಥೆ ಬಗ್ಗೆ ಅರಿವಾಯಿತು.

 

ವಿಮ್‌ಬಲ್ಡನ್ ಟೆನ್ನಿಸ್ ಕೋರ್ಟ್‌

ಮಧ್ಯಾಹ್ನ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ನಂತರ ನಾವು ಲಂಡನ್ ಹೈ (ಒನ್ ಆಫ್ ದಿ ಲಾರ್ಜೆಸ್ಟ್ ಅಬ್‌ಸರ್ ವೀಲ್ಸ್) ನಲ್ಲಿ ನಾವು 450 ಅಡಿ ಎತ್ತರದವರೆಗೆ ಹೋಗುವ ಕಾರಣ ಲಂಡನ್ ನಗರದ ಪೂರ್ಣ ವೀಕ್ಷಣೆ ಮಾಡಿದೆವು. ತುಂಬಾ ಆನಂದಕರವಾದ ಅನುಭವ. ನಂತರ ವಿಶ್ವದಲ್ಲೇ ಅತಿ ಪ್ರಸಿದ್ಧವಾದ ವಿಮ್‌ಬಲ್ಡನ್ ಟೆನ್ನಿಸ್ ಕೋರ್ಟ್‌ಗೆ ಹೋದೆವು. ಈ ಕೋರ್ಟ್‌ನಲ್ಲಿ ಟೆನಿಸ್ ನೋಡಬೇಕೆಂಬ ಆಸೆ ಹಲವಾರು ಬಾರಿ ನನಗೆ ಅನಿಸಿತ್ತು. ಟೆನಿಸ್ ಮ್ಯಾಚ್ ನೋಡಲು ಸಾಧ್ಯವಾಗದಿದ್ದರೆ ಬೇಡ ವಿಮ್‌ಬಲ್ಡನ್‌ಗೆ ಹೋಗಿ ಎಲ್ಲಾ ಟೆನಿಸ್ ಕೋಟ್‌ಗಳು, ಮ್ಯೂಸಿಯಂ ಸಂದರ್ಶನ ಕೊಠಡಿ ಎಲ್ಲವನ್ನೂ ನೋಡುವ ಅವಕಾಶ ಸಿಕ್ಕಿತು. ಲಂಡನ್‌ನಲ್ಲಿ 2 ದಿನಗಳ ಪ್ರವಾಸ ಮಾತ್ರ ಇದ್ದ ಕಾರಣ ನಾವು ಇಷ್ಟರಲ್ಲೇ ಸಂತುಷ್ಟರಾಗಬೇಕಾಗಿತ್ತು.

ಪ್ರವಾಸದ ಮೂರನೇ ದಿನ ಉಪಹಾರದ ನಂತರ ಪ್ಯಾರಿಸ್‌ಗೆ ಹೊರಡುವ ಸಂಭ್ರಮ ನಮದಾಗಿತ್ತು. ನಮ್ಮ ಗುಂಪಿನ ಎಲ್ಲರೂ ಸಿದ್ದರಾಗಿ ಲಂಡನ್‌ಗೆ ಬಾಯ್ ಬಾಯ್ ಹೇಳಿ ಪ್ಯಾರಿಸ್ ಕಡೆಗೆ ಹೊರಟೆವು. ನಮ್ಮ ಬಸ್ಸು ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಬಸ್ ಸಮೇತ ಟ್ರೈನ್‌ನಲ್ಲಿ ಪ್ರಯಾಣ ಮಾಡುವ ನೂತನ ಅನುಭವ ತುಂಬಾ ಸಂತಸ ನೀಡಿತು. ನಾವೆಲ್ಲರೂ ಬಸ್ ಇಳಿದು ಟ್ರೈನ್ ಬೋಗಿಯಲ್ಲೇ ಮಾತನಾಡುತ್ತ ಮೇಲೆ ಇಂಗ್ಲೀಷ್ ಚಾನಲ್ ಇರುವುದನ್ನು ಊಹಿಸಿಕೊಂಡು ಸಂಭ್ರಮ ಪಟ್ಟೆವು. ಇಂಗ್ಲೀಷ್ ಚಾನಲ್ ಅಡಿಯಲ್ಲಿ ನಿರ್ಮಿಸಿರುವ ಈ ರೈಲ್ವೆ ಲೈನ್ ಬಗ್ಗೆ ಮಾತನಾಡುತ್ತಾ ಮತ್ತು ತಾಂತ್ರಿಕ ಮತ್ತು ಶ್ರಮದ ಬಗ್ಗೆ ಕೊಂಡಾಡುತ್ತಾ ಸಾಗಿದೆವು. ಒಟ್ಟು 50.5  ಕಿ.ಮೀ. ಅನ್ನು ಇಂಗ್ಲೀಷ್ ಚಾನೆಲ್ ಅಡಿ ಪ್ರಯಾಣ ಮಾಡಿದ ನಂತರ ಪ್ಯಾರಿಸ್ ಹೋಗುವ ರಸ್ತೆಯನ್ನು ಸೇರಿದೆವು. ಈ ರೈಲ್ವೆ ಟನಲ್ 3 ಟನಲ್‌ಗಳನ್ನು ಹೊಂದಿದ್ದು ಒಂದು ಹೋಗುವ ಟ್ರೈನ್‌ಗಳಿಗೆ, ಇನ್ನೊಂದು ಬರುವ ಟ್ರೈನ್‌ಗಳಿಗೆ, ಮತ್ತೊಂದು ಮೈನ್‌ಟೆನೆನ್ಸ್‌ಗೆ ಸಂಬಂಧಿಸಿದೆ.

Eifel tower

ಐಫಲ್ ಟವರ್

ಪ್ಯಾರಿಸ್ ಹೆಸರು ಪಾರಿಸಾ ಟ್ರೈಬ್ ಎಂಬ ಮೂಲ ನಿವಾಸಿಗಳ ಹೆಸರಿನಿಂದ ಬಂದಿದೆ. ಪ್ಯಾರಿಸ್ ಹೆಸರು ಕೇಳಿದ ಕೂಡಲೇ ನಮಗೆ ನೆನಪು ಬರುವುದು ಐಫಲ್ ಟವರ್. ಇದನ್ನು1895ರಲ್ಲಿ ವರ್ಲ್ಡ್ ಫೇರ್‌ಗಾಗಿ ತಾತ್ಕಾಲಿಕವಾಗಿ ಕಟ್ಟಲಾಗಿತ್ತು. ಇದನ್ನು ರೂಪಿಸಿದ ಆರ್ಕಿಟೆಕ್ಟ್ ಐಫಲ್ ಎಂಬುವನು. ತದನಂತರ ಇದನ್ನು ಉಳಿಸಿಕೊಳ್ಳಲು ಯೋಚಿಸಿ ಹಾಗೇ ಬಿಡಲಾಯಿತು. ಈಗ ಈ ಟವರ್ ಜಗತ್ಪ್ರಸಿದ್ಧವಾಗಿದೆ. ಇದರ ಎತ್ತರ 3,276 ಅಡಿ.

ಫ್ರಾನ್ಸ್‌ನ ಹೆಸರು ಕೇಳಿದ ಕೂಡಲೇ ಫ್ರೆಂಚ್ ಕ್ರಾಂತಿ ಮನದ ಮುಂದೆ ಹಾಯ್ದುಹೋಗುತ್ತದೆ. ಕಲೆದು ಹೋದ ಚಾರಿತ್ರಿಕ ಘಟನೆಗಳು ಕಣ್ಣಮುಂದೆ ಒಂದೊಂದಾಗಿ ಬರುತ್ತವೆ. ಅದರಲ್ಲಿ ನೆಪೋಲಿಯನ್ ಬೋನೋಪಾರ್ಟೆಯನ್ನು ಮರೆಯುವಂತಿಲ್ಲ. ಇಡೀ ಜಗತ್ತಿನಲ್ಲಿ ಸಾಮಾಜಿಕ ಕ್ರಾಂತಿಗೆ ಅಡಿಪಾಯ ಹಾಕಿದ ದೇಶ. ಪ್ಯಾರಿಸ್ ಸುಂದರವಾದ ನಗರ. ಕಟ್ಟಡಗಳೇ ಹೆಚ್ಚಾಗಿ ಕಾಣಿಸಿದರೂ ನಗರದ ಸೌಂದರ್ಯದ ದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಹಳೆ ಕಟ್ಟಡಗಳು ಮಾನಿಮೆಂಟ್‌ಗಳನ್ನು ಕಾಪಾಡಿಕೊಂಡು ಬರಲಾಗಿದೆ.

ಸೇನ್ ನದಿ ಈ ನಗರವನ್ನು ಈ ನಗರವನ್ನು 2 ಭಾಗಗಳಾಗಿ ಮಾಡಲಾಗಿದ್ದು ಈ ನದಿಗೆ 32  ಸೇತುವೆಗಳಿವೆ. ಸೇತುವೆಗಳನ್ನು ಬಹಳ ಸುಂದರವಾಗಿ ಕಟ್ಟಲಾಗಿದೆ. ಸಾಯಂಕಾಲ ನಾವು ರಿವರ್ ಸೇನ್‌ನಲ್ಲಿ ರೂಸ್‌ಗೆ ಕರೆದುಕೊಂಡು ಹೋಗಲಾಯಿತು. ನದಿಯಲ್ಲಿ ದೋಣಿಯಲ್ಲಿ ಸಾಗುತ್ತಾ ನಗರದ ವೀಕ್ಷಣೆ ಮಾಡುವ ಅನುಭವ ರೋಮಾಂಚಕಾರಿಯಾಗಿತ್ತು. ಜೊತೆಗೆ ಇಬ್ಬರು ಗೈಡ್‌ಗಳು ನಗರದ ಅತಿ ಮುಖ್ಯ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾ ಸಾಗಿದರಿಂದ ಕಟ್ಟಡಗಳ ಐತಿಹಾಸಿಕದ ಬಗ್ಗೆಯೂ ತಿಳಿದುಕೊಂಡಂತಾಯಿತು. ಯೂರೋಪ್ ಬೇಸಿಗೆ ನಮ್ಮಲ್ಲಿನ ಚಳಿಗಾಲದಂತೆ ಇತ್ತು. ಹಾಗಾಗಿ ನಾವು ಇಡೀ ದಿನ ಪ್ರವಾಸ ಮಾಡಿದರೂ ಯಾವುದೇ ರೀತಿಯ ಶ್ರಮ ಆಗುತ್ತಿರಲಿಲ್ಲ.

ಪ್ಯಾರಿಸ್‌ನಲ್ಲಿ ನಾವು ರಾಡಿಸಂ ಹೋಟೆಲ್‌ನಲ್ಲಿ ತಂಗಿದ್ದೆವು. ಈ ಹೋಟೆಲ್ ಬಹಳ ಸುಂದರವಾದ ಸ್ಥಳದಲ್ಲಿದ್ದು ಅದೇ ಒಂದು ಪ್ರೇಕ್ಷಣೀಯ ಸ್ಥಳದಂತೆ ಇತ್ತು. ಗಾಫ್ ಕೋರ್ಟ್ ಮಧ್ಯೆ ಇದ್ದ ಕಾರಣ ಹಸಿರು ಕಣ್ಮನ ತಳಿಸುವಂತಿತ್ತು. ಬೆಳಗಿನ ಉಪಹಾರದ ನಂತರ ನಾವು ಅತಿ ಜಗತ್ಪ್ರಸಿದ್ಧವಾದ ಲ್ಯೂರ್ ಮ್ಯೂಸಿಯಂ ಹೋಗಲು ಸಿದ್ಧರಾದೆವು. ನಮ್ಮ ಪ್ರವಾಸದಲ್ಲಿ ಈ ಸ್ಥಳದ ವೀಕ್ಷಣೆ ಸೇರಿರಲಿಲ್ಲ. ಅದರ ಬದಲಿಗೆ ಡಿಸ್ನಿ ವರ್ಲ್ಡ್ ನೋಡುವ ಅವಕಾಶವಿತ್ತು. ಆದರೆ ನಾವು ಅಮೇರಿಕಾದಲ್ಲೇ ಇಂತಹ ಫನ್ ವರ್ಲ್ಡ್ ಸಾಕಷ್ಟು ನೋಡಿದ ಕಾರಣ ನಮ್ಮ ಸ್ನೇಹಿತರೆಲ್ಲರೂ ಲ್ಯೂರ್ ಮ್ಯೂಸಿಯಂ ನೋಡಲು ನಿರ್ಧರಿಸಿದರು. ನಮ್ಮ ಗುಂಪಿನ ಲೀಡರ್ ಮಿಸ್ಟರ್ ವಿಜಯಕುಮಾರ್ ರವರು ಮ್ಯಾಪ್ ನೋಡಿ ಡಿಸ್ನಿ ವರ್ಲ್ಡ್ ಸ್ಟೇಷನ್‌ನಿಂದ ಮೆಟ್ರೋ ಟ್ರೈನ್ ಹತ್ತಿ ಮ್ಯೂಸಿಯಂ ನಿಲ್ದಾಣದಲ್ಲಿ ಇಳಿದೆವು. ಈ ಮ್ಯೂಸಿಯಂ ತುಂಬಾ ವಿಶಾಲವಾದ, ಸುಂದರವಾದ ಭವ್ಯ ಕಟ್ಟಡ. ಮ್ಯೂಸಿಯಂನಲ್ಲಿರುವ ಪ್ರತಿಯೊಂದು ಕಲಾತ್ಮಕವಾದ ಕೃತಿಗಳನ್ನು ನೋಡಲು ಒಂದು ತಿಂಗಳೇ ಬೇಕೆನ್ನುವಷ್ಟು ಸಂಗ್ರಹಿಸಲಾಗಿದೆ. ನಾವು ಆರ್ಟ್ ಸೆಕ್ಷನ್ ಮಾತ್ರ ನೋಡಲು ನಿರ್ಧರಿಸಿ ಆ ವಿಂಗ್ ಮಾತ್ರ ಭೇಟಿ ನೀಡಿದೆವು. ಜಗತ್ಪ್ರಸಿದ್ಧ ಮೊನಾಲಿಸಾ ಕಲಾಕೃತಿ ಮತ್ತು ರಾಫೆಲ್ ಲಿಯಾನಾರ್ಡೊ ಡಾವೆನ್ಚಿ ರಚಿತ ಕೃತಿಗಳನ್ನು ನೋಡಿದೆವು. ಆದರೆ ಜಗತ್ಪ್ರಸಿದ್ಧ ವರ್ಸೇಲ್ಸ್ ಅರಮನೆ ನೋಡಲು ಸಾಧ್ಯವಾಗಲಿಲ್ಲ. ಪ್ಯಾರಿಸ್‌ನಲ್ಲಿ ನಾವು 2  ದಿವಸ ಉಳಿದ ಕಾರಣ ಪೂರ್ಣ ರೀತಿಯಲ್ಲಿ ಪ್ಯಾರಿಸ್ ಸೌಂದರ್ಯ ಸವಿಯಲು ಆಗಲಿಲ್ಲ. ಮಾರನೇ ದಿನ ಜರ್ಮನಿಗೆ ಹೋಗುವ ಮುನ್ನ ಐಫಲ್ ಟವರ್ ಮೇಲಿನವರೆಗೆ ಹೋಗಿ ಪ್ಯಾರಿಸ್ ನಗರವನ್ನು ವೀಕ್ಷಿಸುವ ಸುವರ್ಣಾವಕಾಶ ನಮ್ಮದಾಗಿತ್ತು. ಐಫಲ್ ಟವರ್ ಮೇಲಿನಿಂದ ನಗರವನ್ನು ವೀಕ್ಷಿಸಿದ ನಂತರ ನಮ್ಮ ಪ್ರಯಾಣ ಬ್ರೆಸಿಲ್ಸ್ ನಗರದ ಕಡೆ ಸಾಗಿತ್ತು.

Tulip garden

ಬೆಲ್ಜಿಯಮ್‌ನ ಮನಕಿನ್ ಪಿಸ್ ಸ್ಟಾಚ್ಯೂ ಗ್ರಾಂಡ್ ಪ್ಯಾಲೇಸ್ ಆಟೋನಿಯಮ್ ಇಲ್ಲಿ ಯೂರೋಪಿಯನ್ ಯೂನಿಯನ್‌ನ ಕಾನ್‌ಫರೆನ್ಸ್ ಸಮಯದಲ್ಲಿ ಕಟ್ಟಿದ ನವ್ಯ ಶೈಲಿಯ ಆಕೃತಿ. ಆಮ್‌ಸ್ಟಡಮ್‌ಗೆ ಹೋಗುವಾಗ ದಾರಿಯಲ್ಲಿ ಬೆಲ್ಜಿಯಮ್‌ನ ಮೇಲಿನ ಸ್ಥಳಗಳನ್ನು ವೀಕ್ಷಿಸುವ ಅವಕಾಶ ನಮ್ಮದಾಗಿತ್ತು. ನನಗೆ ಮೆಚ್ಚಿಗೆಯಾದ ಯೂರೋಪಿಯನ್ ದೇಶ ನೆದರ್‌ಲ್ಯಾಂಡ್ (ಹಾಲೆಂಡ್). ಈ ದೇಶವು ಸಮುದ್ರಮಟ್ಟಕ್ಕಿಂತ ಕೆಳಗಿದ್ದು ಮಣ್ಣನ್ನು ತುಂಬಿಸಿ ಭೂಮಿಯ ವಿಸ್ತೀರ್ಣವನ್ನು ಹೆಚ್ಚು ಮಾಡಿ ಕೊಳ್ಳಲಾಗಿದೆ. ಇದು ಟುಲಿಪ್ಸ್ ಗಾರ್ಡನ್‌ಗೆ ಹೆಸರಾದ ದೇಶ.

ನಾವು ಜೂನ್ ತಿಂಗಳಲ್ಲಿ ಬಂದಿದ್ದರಿಂದ ಟುಲಿಪ್ ಗಾರ್ಡನ್ ನೋಡುವ ಅವಕಾಶ ಸಿಗಲಿಲ್ಲ. ಸಿಲ್‌ಸಿಲಾ ಚಿತ್ರದಲ್ಲಿ ಅಮಿತಾಬಚ್ಚನ್ ರೇಖಾರವರ ಒಂದು ಹಾಡನ್ನು ಇಲ್ಲಿ ಚಿತ್ರೀಕರಿಸಿದ್ದು ಆ ದೃಶ್ಯವು ಕಣ್ಣಮುಂದೆ ಹಾದುಹೋಯಿತು. ಸಮುದ್ರ (ನಾರ್ಸಿ) ಮತ್ತು ನದಿಗಳೆರಡೂ ಇದ್ದು ಇಲ್ಲಿ ನೀರಿಗೆ ಕೊರತೆಯಿಲ್ಲ. ಇಲ್ಲಿನ ಜಗತ್ಪ್ರಸಿದ್ಧ ನಗರ ಆಮ್‌ಸ್ಟಡಮ್ಸ್ ವೆನಿಸ್ ಆಫ್ ನಾರ್ತ್ ಎಂದು ಕರೆಯಲಾಗುತ್ತದೆ. ಈ ನಗರವನ್ನು ನೋಡುವ ಮೊದಲು ವಾಲೆನ್‌ಡಾಮ್ ಎಂಬ ಹಳ್ಳಿಗೆ ಕರೆದೊಯ್ಯಲಾಯಿತು. ಸಮುದ್ರದ ದಂಡೆಯಲ್ಲಿರುವ ಈ ಹಳ್ಳಿ ತುಂಬಾ ಮನಮೋಹಕವಾಗಿತ್ತು. ಅಲ್ಲಿರುವ ಸುಂದರ ಮನೆಗಳು ಒಳ್ಳೇ ಕಲಾಕೃತಿಯಂತಿದ್ದವು. ಅಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡಿತು.

ವಾಲ್‌ಡಮ್‌ಗೆ ಹೋಗುವ ಮುಂಚೆ ಹಾಲೆಂಡ್‌ನ ವಿಶೇಷತೆ ಮನದಲ್ಲಿ ಮಾಡಿದ ಶೂಗಳ ಒಂದು ಹೋಂ ಇಂಡಸ್ಟ್ರಿ ನೋಡಿದೆವು. ಮರದಲ್ಲಿ ಮಾಡಿದ ಶೂಗಳು ತುಂಬಾ ಆಕರ್ಷಕವಾಗಿದ್ದವು. ಮಾಡುವ ವಿಧಾನವನ್ನು ಸಹ ತೋರಿಸಲಾಯಿತು. ನಂತರ ಆಮ್‌ಸ್ಟಡಮ್ ನಗರವನ್ನು ಕೆನಾಲ್ ಕ್ರೂಸ್‌ನಲ್ಲಿ ವೀಕ್ಷಿಸಿದೆವು. ಇಲ್ಲಿನ ಮತ್ತೊಂದು ವಿಶೇಷತೆ 4 ಚಕ್ರದ ವಾಹನಗಳಿಗಿಂತ ಬೈಸಿಕಲ್‌ಗಳೇ ಹೆಚ್ಚು. ಈ ದೇಶದಲ್ಲಿ 15,000 ಕಿ.ಲೋ. ಸೈಕಲ್ ಟ್ರಾಕ್ ಮಾಡಲಾಗಿದೆ. ಹಾಲೆಂಡ್‌ನಲ್ಲಿ ನೋಡಿದ 3 ನಗರಗಳು ಆಮ್‌ಸ್ಟಡಮ್, ರೋಟೆಡಮ್ ಮತ್ತು ಮಧುರಾಡಾಮ್. ಮಧುರಾಡಾಮ್‌ನಲ್ಲಿ ಮಿನಿಯೇಚರ್ ಆಫ್ ಹಾಲೆಂಡ್‌ನ್ನು ಮಾಡಲಾಗಿದೆ. ಕಟ್ಟಡಗಳನ್ನು ಚಿಕ್ಕಚಿಕ್ಕದಾಗಿ ಮಾಡಿ ಬಾನ್‌ಸಾಯ್ ಗಾರ್ಡನ್ ಟ್ರೈನ್, ಬಸ್, ಕಾರ್ ಎಲ್ಲವನ್ನೂ ಸಹ ಅದೇ ಮಾದರಿಯಲ್ಲಿ ಮಾಡಲಾಗಿದೆ. ಮಧುರಾಡಾಮ್ ವೀಕ್ಷಿಸಿದ ನಂತರ ತಂಗುದಾಣವಾದ ಹೋಟೆಲ್‌ಗೆ ಹಿಂದಿರುಗಿದೆವು.

ಮಾರನೇ ದಿನ ನಮ್ಮ ಪ್ರವಾಸ ಜರ್ಮನ್ ಕಡೆಗೆ ಸಾಗಿತ್ತು. ಮೊದಲು ಕೊಲೋನ್ ನಗರ ಇಲ್ಲಿ ಅತಿ ದೊಡ್ಡದಾದ ಗೋತಿಕ್ ಮಾದರಿಯ 300 ವರ್ಷಗಳ ಹಳೆಯದಾದ ಚರ್ಚನ್ನು ನೋಡಿದೆವು. ತುಂಬಾ ಸುಂದರವಾದ ಕೆತ್ತನೆಯನ್ನು ಒಳಗೊಂಡ ಹಳೇ ಚರ್ಚ್. ಚರ್ಚ್ ವೀಕ್ಷಣೆ ನಂತರ ರೈನ್ ನದಿಯಲ್ಲಿ ವಿಹಾರ. ಅಕ್ಕಪಕ್ಕದ ದ್ರಾಕ್ಷಿ ತೋಟಗಳ ಸುಂದರವಾದ ಮನೆಗಳು ಮತ್ತು ಬ್ಲಾಕ್ ಫಾರೆಸ್ಟ್‌ನ ಪರ್ವತ ಶ್ರೇಣಿಗಳು ನೋಡಲು ಅತಿ ರಮಣೀಯವಾದ ದೃಶ್ಯ. ನಮ್ಮ ಸ್ನೇಹಿತರ ಜೊತೆ ಕಾಫಿ ಕುಡಿಯುತ್ತಾ ನದಿಯಲ್ಲಿ ದೋಣಿ ವಿಹಾರ ಅತ್ಯದ್ಭುತವಾದ ಅನುಭವ. ನಂತರ ಪ್ರವಾಸ ಮುಂದುವರಿಸಿ ಮತ್ತೊಂದು ನಗರ ಹೈಡಲ್‌ಬರ್ಕ್ ಜಗತ್ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸ್ಟೆಫಿಗ್ರಾಪ್ ಹುಟ್ಟಿದ ಊರು. ಅತಿ ಸುಂದರವಾದ ನಗರ. ನೀಕರ್ ನದಿಯ ದಂಡೆಯ ಮೇಲೆ ಸ್ಥಾಪಿಸಿರುವ ನಗರ ಬಹಳ ರಮಣೀಯವಾಗಿತ್ತು. ನಗರ ವೀಕ್ಷಣೆ ಮಾಡಿ ನದಿದಂಡೆ, ಸೇತುವೆ ಎಲ್ಲೆಡೆ ಛಾಯಾಚಿತ್ರಗಳನ್ನು ತೆಗೆದುಕೊಂಡ ನಂತರ ನಮ್ಮ ಪ್ರಯಾಣ ಹೋಟೆಲ್ ಇರುವ ಫ್ರಾಂಕ್‌ಫರ್ಟ್ ನಗರದ ಕಡೆಗೆ ಸಾಗಿತ್ತು.

 

(ಮುಂದುವರಿಯುವುದು…)

ನನಸಾದ ಯುರೋಪ್ ನ ಕನಸು ಭಾಗ 2 ನ್ನು ಓದಲು ಇಲ್ಲಿ ಕ್ಲಿಕ್ಕಿಸಿ:   

– ನೀಲಮ್ಮ ಕಲ್ಮರಡಪ್ಪ, ಮೈಸೂರು.

 

8 Responses

  1. suragi says:

    ಬರಹ ತುಂಬಾ ಸೊಗಸಾಗಿದೆ. ಉಳಿದ ಭಾಗಗಳನ್ನು ಆದಷ್ಟು ಬೇಗ ಬರೆಯಿರಿ. ಕಾತರರಾಗಿದ್ದೇವೆ..

  2. Purnima says:

    ಸೊಗಸಾಗಿದೆ. ಫೋಟೋ ನೋಡಲು ಚೆನ್ನಾಗಿದೆ.

  3. Dayasindhu says:

    ನಿಮ್ಮ ಜೊತೆಯಲ್ಲಿ ನಾವುನು ಯೂರೋಪಿನ ಪ್ರವಾಸ ಮಾಡಿದ ಹಾಗೆ ಅನಿಸುತಿದೆ!

  4. saavithri s.bhat says:

    ಯುರೋಪ್ ಪ್ರವಾಸ ಚೆನ್ನಾಗಿ ಬರೆದಿರುವಿರಿ

  5. thank u all for your compliments

  6. thank u all for your compliments NEELAMMA

  7. ಯಶಸ್ವಿನಿ says:

    ತುಂಬಾ ಚೆನ್ನಾಗಿದೆ. ಓದಿ ಖುಷಿ ಆಯ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: