ನೆಗಡಿಯದಿ ಭಾನಾಗಡಿ
ಬಡವ ಸಿರಿವಂತನೆನ್ನುವ ಬೇಧವೆಣಿಸದೆ ಕಾಡುವ ನೆಗಡಿ ಯಾರಿಗೆ ತಾನೆ ಅಪರಿಚಿತ? ಬೇಡದ ಅತಿಥಿಯಾಗಿ ಬಂದು, ಬಲವಂತದಿಂದ ವಾರವಾದರು ತಳವೂರಿ ಕಾಡಿ ಕಂಗೆಡಿಸಿ ನಂತರವಷ್ಟೆ ಮರೆಯಾಗುವ ಇದರ ಪರಾಕ್ರಮದೆದುರು ಎಲ್ಲರೂ ದುರ್ಬಲರೆ. ಇದರ ಸಾಮರ್ಥ್ಯಕ್ಕೆ ಸೋತು, ಎದುರು ನಿಲ್ಲಲಾಗದಿದ್ದರು ಸರಿ ಕಡೆಗೆ ಕಥೆ, ಕವನ, ಪ್ರಬಂಧವಾದರು ಬರೆದು ಸೇಡು ತೀರಿಸಿಕೊಳ್ಳುತ್ತೇವೆಂದು ಹೊರಟ ಬರಹಗಾರರದೆಷ್ಟೊ..? ಏನೊ ಕಷಾಯ ಮಾಡಿ ಕುಡಿದು ಅದನ್ನು ನಿವಾರಿಸಿ ಜಯಿಸಿಬಿಡುವೆವೆಂದು ಹೊರಟವರು ಇನ್ನೆಷ್ಟೊ ? ಅಧುನಿಕ ವೈದ್ಯಕ್ಕೆ ಜಗ್ಗದಿರುವುದೆ? ಎಂದು ಹೊರಟವರೇನು ಕಮ್ಮಿಯಿಲ್ಲ. ಆದರೆ ಎಲ್ಲ ಮದ್ದಿಗು ಒಂದು ವಾರದ ಅವಧಿಯೆ ತಗುಲಿ ಯಾವುದು ಉತ್ತಮ, ಯಾವುದು ಅಧಮ ಎಂಬ ಮೂಲ ಸಂಶಯಕ್ಕೆ ಮತ್ತಷ್ಟು ಗೊಂದಲವೆರಚಿ ಪರಾರಿಯಾಗಿಬಿಡುತ್ತದೆ. ಇಷ್ಟೆ ಸಾಲದು ಎನ್ನುವಂತೆ ಏನೂ ಔಷಧಿ ತೆಗೆದುಕೊಳ್ಳದೆ ಇದ್ದವರೂ ಒಂದು ವಾರದಲ್ಲೆ ಗುಣಮುಖರಾದಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ಜಿಜ್ಞಾಸೆಗೆ ಮತ್ತಷ್ಟು ಬೆಂಕಿ ಸುರಿದು ಹೋಗಿಬಿಡುತ್ತದೆ. ಇಷ್ಟೆಲ್ಲಾ ಭಾನಾಗಡಿ ಮಾಡುವ ನೆಗಡಿಯ ಮೇಲೆ ನಾನೂ ಸೇಡು ತೀರಿಸಿಕೊಳ್ಳುವೆನೆಂದು ಹೊರಟಾಗ ಬರೆದ ಲಹರಿ ಈ ಕವನ – ‘ಸೊರಸೊರ’ ಎಂದುಕೊಂಡೆ ಬರೆದಿದ್ದು. ಯಾವುದಕ್ಕು ಒಂದೆರಡಡಿ ದೂರದಿಂದಲೆ ಓದಿ; ಹಾಳು ಅಂಟು ಜಾಡ್ಯದ ಜಾತಿಯದು – ಕವನದಿಂದ ನಿಮ್ಮ ಮೂಗಿಗೆ ನೇರ ಜಿಗಿದುಬಿಟ್ಟೀತು!
ನೆಗಡಿಯದಿ ಭಾನಾಗಡಿ
ಮಿತಿ ಮೀರಿತೆ ಬಾನ ಗಡಿ ?
ಸೊರಸೊರ ಮೂಗುದ್ದ ಗರ
ಬಡಿದಂತೆ ಸ್ವೇಚ್ಛೆ ಅವಸರ ||
ಹಾದಿ ಬೀದಿ ಒಳಗ್ಹೊರಗು
ಲೆಕ್ಕಿಸದೆ ಸುರಿವ ಕೊರಗು
ತಟ್ಟನುದಿಸಿ ತುಟ್ಟ ತುದಿಗೆ
ತೊಟ್ಟಿಕ್ಕುತ ಮುಜುಗರ ಹಗೆ ||
ಬಿರಡೆ ಬಿಟ್ಟ ನಲ್ಲಿ ಸಲಿಲ
ಕಣಿವೆಯೇರಿ ಅಂತರ್ಜಲ
ಕರೆದವರಾರೊ ಕೊರಮ ಬಾಬಾ
ಇಳಿದು ಬಾ ತಾಯಿ ಇಳಿದು ಬಾ ! ||
ಮೂಗುತಿ ಭಾರಕೆ ಸೋತು
ಏಗುತ ಹೆಣಗುವ ಜೋತು
ಎಲ್ಲಿತ್ತೊ ನೆಗಡಿಯಪಾರ ಭಾರ
ಬಲು ತೂಕ ದಿಢೀರ್ ಸಾಹುಕಾರ ! ||
ಕರವಸ್ತ್ರದಸ್ತ್ರ ನೆಪಕೆ ಬಗಲಲೆ
ಹರಿದ ಕೋಡಿ ಹಿಡಿತ ಮುಗಿಲೆ
ಹೂಡೆಲ್ಲ ಶಸ್ತ್ರ ಮುಗಿಯದ ಯುದ್ಧ
ಬಿಸಿಯುಪ್ಪು ನೀರು ಬಳಸೆ ಯೋಧ ! ||
– ನಾಗೇಶ , ಮೈಸೂರು
ನನ್ನಂತೂ ವರ್ಷವೀಡಿ ಕಾಡೋ ನೆಗಡಿಯಿದು ಗಲ್ಪ್ ರಾಷ್ಟ್ರದ ಕೊಡುಗೆ ಮಹಾ ಶಕೆ ಬೆವರೂ ಮೈ ಮೇಲಿನ ಬಟ್ಟೆ ಹುಮಿಡಿಟಿಯಿಂದಾಗಿ ಒಣಗೋದೆಯಿಲ್ಲ.ಹೊರಗಿಂದ ಒಳಗ ಬಂದರೆ ಎಸಿ ಚಳಿ ಆ ದೂಳು ಅಲರ್ಜಿ ಎಲ್ಲಾಸೇರಿ ನನ್ನ ಮೂಗಾಗಿದೆ ಮಲಪ್ರಭಾ ಹೊಳೆ .
ಹೆಚ್ಚುಕಡಿಮೆ ಸಿಂಗಪುರದ ತರದ ಕಥೆಯೆ ನಿಮ್ಮದು ಸಹ – ಇಲ್ಲು ರಣ ಬಿಸಿಲಿಗೆ ನೀರಾಗಿ, ಏಸಿಯಲ್ಲಿ ಹೆಣಗಾಡಬೇಕು. ಆಫೀಸಿನಲ್ಲಿ, ಶಾಪಿಂಗ್ ಮಾಲುಗಳಲ್ಲಿ, ಸಿನಿಮಾ ಟಾಕೀಸುಗಳಲ್ಲಿ ಸ್ವೆಟರೊ, ಜಾಕೆಟ್ಟೊ ಹಾಕಿಕೊಂಡೆ ಹೋಗುವುದು ಉಚಿತ ಎನ್ನುವ ಹಾಗಿರುತ್ತದೆ ಏಸಿಯ ಪ್ರಭಾವ ( ಅದಿರದಿದ್ದ ಕಡೆ ಬೆವರಿನ ಸ್ನಾನವಂತೂ ಗಟ್ಟಿ). ಅಂತು ನೆ’ಗಡಿ’ಗಿಲ್ಲ ‘ಗಡಿ’, ಸಿಕ್ಕಿಬಿದ್ದವರಿಗಷ್ಟೆ ‘ಗಡಿಬಿಡಿ’ 🙂