ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-2

Spread the love
Share Button
Anant Deshpande

ಅನಂತ ದೇಶಪಾಂಡೆ

ಮರುದಿನ ಬೆಳಿಗ್ಗೆ 5.00 ಘಂಟೆಗೆ ಟೀ ರೆಡಿ ಎಂಬ ವಿಷಲ್. ಆ ದಿನ ನಮಗೆ ಸಾಂಕ್ರಿಯಲ್ಲೇ. ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಒಂದು ದಿನದ ಅವಕಾಶ. ಬೆಳಿಗ್ಗಿನ ವ್ಯಾಯಾಮಕ್ಕೆ ಸಾಂಕ್ರಿ ಗ್ರಾಮದ ಈಶ್ವರ ದೇವಸ್ಥಾನದ ಪಕ್ಕದ ಸುಂದರ ಜಾಗಕ್ಕೆ ಕರೆದುಕೊಂಡು ಹೋದರು. ನಂತರ ತಿಂಡಿಗೆ ಉದ್ದಿನ ವಡೆ, ಚಟ್ನಿ ಸಾಂಬರ್ ಹಾಗೂ ಪಾಯಸ (ದಲಿಯಾ ಅಂತಾರೆ). ನಂತರ ಫೀಲ್ಡ್ ಡೈರೆಕ್ಟರ್ ಹಾಗೂ ಕ್ಯಾಂಪ್ ಲೀಡರ್ ನಮ್ಮ ಎಲ್ಲ್ಲಾ ದಿನಗಳ ಕಾರ್ಯಕ್ರಮ, ಬರಬಹುದಾದ ಕಷ್ಟ ನಷ್ಟಗಳ ಬಗ್ಗೆ ತಿಳುವಳಿಕೆ ನೀಡಿದ್ರು. ನಂತರ  3+3  ಕಿ.ಮೀ ನ ಚಿಕ್ಕ ಚಾರಣ ಮುಗಿಸಿ ಊಟ. ರೋಟಿ, ದಾಲ್ ಹಾಗೂ ಚಾವಲ್ ಊಟಕ್ಕೆ. ಮಧಾಹ್ನ ಸಲ್ಪ ರೆಸ್ಟ್. ನಂತರ ನಮಗೆ ಮುಂದಿನ 5 ದಿನದ ಚಾರಣಕ್ಕೆ ಅಗತ್ಯವಿರುವ ಬಟ್ಟೆ ಬರೆಗಳನ್ನು ಮಾತ್ರ ಬ್ಯಾಕ್ ಪ್ಯಾಕ್‌ನಲ್ಲಿಟ್ಟುಕೊಂಡು ಉಳಿದವುಗಳನ್ನು ಬೇರೆ ಬ್ಯಾಗ್‌ನಲ್ಲಿ ಹಾಕಿ ಡಿಪಾಸಿಟ್ ಮಾಡಿದ್ದು. ಅಲ್ಲಿಗೆ ನಮ್ಮ ನಿಜವಾದ ಚಾರಣಕ್ಕೆ ತಯಾರಿ. ಚಾರಣ ಸ್ವಲ್ಪ ಕಠಿಣವಾಗಿಯೇ ಇದೆ, ಆದರೆ ರಮಣೀಯ ಎಂಬ ವಿಷಯ ಚಾರಣ ಮುಗಿಸಿಬಂದ ತಂಡದವರಿಂದ ಗೊತಾಯು. ಸಂಜೆ ಟೀ ಜೊತೆ ಫಿಂಗರ್ ಚಿಪ್ಸ್ ಹಾಗೂ ಆಲೂ ಪ್ಯಾಟಿಸ್ ಕೊಟು. ನಂತರ ಸಾಂಕ್ರಿ ಗ್ರಾಮದಲ್ಲಿ ಒಂದು ಸಣ್ಣ ರೌಂಡ್.

ಆ ದಿನ ರಾತ್ರಿ ‘ಬಡಾಖಾನಾ’.’ ಕೆಲವು ಕ್ಯಾಂಪ್ ಲೀಡರ್‍ಸ್‌ಗೆ ಹಾಗೂ ತರಭೇತಿದಾರರಿಗೆ ಕೊನೆಯ ದಿನ. ಹೀಗಾಗಿ ವಿಶೇಷ ಊಟ. ಅದ್ಬುತವಾಗಿತ್ತು. ಹಲವಾರು ಕಾಳುಗಳನ್ನು ಬೇಯಿಸಿ ಸಲಾಡ್ ಮಾಡಿ ಸುಂದರವಾಗಿ ಜೋಡಿಸಿದ್ದರು. ರೋಟಿ ಜೊತೆ ಸ್ಟಫ್ಡ್ ಕ್ಯಾಪ್ಪಿಕಮ್, ಬೈಂಗನ್, ಕರೇಲಾ, ದಾಲ್ ಮಟರ್, ಗೀರೈಸ್, ಮೂಂಗ್ ದಾಲ್ ಕಿ ಹಲ್ವಾ ಹಾಗೂ ಕಸ್ಟರ್ಡ್ ಫ್ರೂಟ್ ಸಲಾಡ್. Five Star Dinner. ಎಲ್ಲರೂ ಕತ್ತರಿಸಿದ್ದೇ ಕತ್ತರಿಸಿದ್ದು. ಕ್ಯಾಂಪ್ ಫೈರ್ ನಂತರ ನಿದ್ರೆಗೆ ಜಾರಿದೆವು.

ಬೆಳಿಗ್ಗೆ 5.00 ಘಂಟೆಗೆ ಚಹಾಕ್ಕಾಗಿ ವಿಷಲ್.  6.30 ಗೆ ತಿಂಡಿ, ನೂಡಲ್ಸ್ ಮತ್ತು ದಲಿಯ, ಬಾಕ್ಸ್‌ಗೆ ಪರಾಠಾ ತೊಗೊಂಡು 7.30 ಗೆ ಚಾರಣ ಶುರು ಆಗೇ ಹೋಯ್ತು. ಸಾಂಕ್ರಿಯಿಂದ 11 ಕಿ.ಮೀ ದೂರದಲ್ಲಿ ತಾಲೂಕಾ ಎಂಬ ಗ್ರಾಮವಿದೆ. ಅಲ್ಲಿವರೆಗೆ ಸ್ಥಳೀಯ ಜೀಪ್‌ಗಳು ಹೋಗ್ತವೆ. ಅವುಗಳಲ್ಲಿ ನಾವು ತಾಲಾಕಾಗೆ ಪ್ರಯಾಣಿಸಿದೆವು. ಬಹಳ ದುರ್ಗಮವಾದಂತಹ ರಸ್ತೆ. ಎರಡು ಮೂರು ಕಡೆ ಝರಿಗಳಲ್ಲೇ ಜೀಪು ದಾಟಿ ಹೋಗಬೇಕು. ಚಾಲಕರು ಜೀಪು ಚಾಲನೆ ಮಾಡುವುದನ್ನು ನೋಡಿದ್ರೆ ಮೈ ಝಂ ಅನ್ನಬೇಕು. ಕೆಲವರು ಕಣ್ಣುಮುಚ್ಚಿ ಕುಳಿತುಬಿಟ್ಟಿದರು. 45 ನಿಮಿಷಗಳ ಭಯಾನಕ ಪ್ರಯಾಣ ಮುಗಿಸಿ ತಾಲೂಕಾಗೆ ಇಳಿದಾಗ ನಮ್ಮ ಗೈಡ್ ತಯಾರಿದ್ದ. ಅವನೊಟ್ಟಿಗೆ ಆ ದಿನದ 12 .ಕಿ.ಮೀ ಚಾರಣ ಸೀಮಾ ಕ್ಯಾಂಪ್‌ಗೆ ಶುರು ಆಯ್ತು. ತಾಲೂಕಾ, ಇದು ಎಲ್ಲ ಸಂರ್ಪಕಗಳ ಕೊನೆಯ ಕೊಂಡಿ. ಇಲ್ಲಿನ ನಂತರ ವಿದ್ಯುತ್ ಆಗಲೀ, ದೂರವಾಣಿಯಾಗಲೀ, ವಾಹನಗಳಾಗಲೀ ಯಾವುದೇ ಸಂರ್ಪಕವಿಲ್ಲ. ಸಾಂಕ್ರಿಯಲ್ಲಿ ವಿದ್ಯುತ್ ಇತ್ತು. ಬಿ‌ಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಸಿಕ್ಕತ್ತೇ ಅಂತಾ ಹೇಳ್ತಾ ಇದ್ದರು. ಆದರೆ ಕೆಲವರಿಗೆ ಮಾತ್ರ ಸಿಕ್ಕಿತ್ತು ಅಂತ ಕಾಣುತ್ತೆ. ಇವೆಲ್ಲ ಸಂಪರ್ಕಗಳಿಲ್ಲದ ಜನಜೀವನ ಹೇಗಿರಬಹುದು. ಆ ಕಷ್ಟ ಜೀವಿಗಳನ್ನು ನೋಡಿ ಆಶ್ಚರ್ಯವಾಯಿತು. ಬಹುಶಃ ಇಂತಹ ಜೀವನ ಶಹರುಗಳ ಎಷ್ಟೋ ಜನಕ್ಕೆ ಕಲ್ಪನೆಯಲ್ಲೂ ಇರಲಿಕ್ಕಿಲ್ಲ. ಆಸ್ಪತ್ರೆ, ಶಾಲೆಗಳಂತು ಇಲ್ಲವೇ ಇಲ್ಲ.

Har-ki-dun 360

ಸೀಮಾ ಮತ್ತು ಓಸ್ಲಾ ಅಕ್ಕಪಕ್ಕದಲ್ಲೆ ಇರುವ ಗ್ರಾಮಗಳು. ಸೀಮಾ, ಸಮದ್ರಮಟ್ಟದಿಂದ 8750  ಅಡಿ ಎತ್ತರದಲ್ಲಿದೆ. ಅಂದ್ರೆ ನಾವು ಈ ದಿನ 12 ಕಿ.ಮೀ ನಲ್ಲಿ ಸುಮಾರು 2500  ಅಡಿಗಳಷ್ಟು ಎತ್ತರಕ್ಕೆ ಏರಬೇಕು. ಚಾರಣ ಸ್ಪಲ್ಪ ಕಷ್ಟಕರವಾದದ್ದೇ. ಆದರೆ ಎಂಥ ಚಂದದ ನಿಸರ್ಗ. ಸುಸ್ತಾದಾಗ ಎರಡು ನಿಮಿಷ ನಿಂತು ವೀಕ್ಷಿಸಿದರೆ ತಕ್ಷಣ ಪರಿಹಾರ. ತಾಲೂಕಾದಿಂದ ಹಿಡಿದು ಸೀಮಾವರೆಗೂ ರುಫಾಲಿ ನದಿಯ ದಂಡೆಯನ್ನು ಹಿಡಿದೇ ಚಾರಣ ಮಾಡಬೇಕು. ರುಫಾಲಿ ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಹರಿಯುತ್ತಾ ಇದ್ದರೆ, ಮತ್ತೊಮ್ಮೆ ನಾವು ಬೆಟ್ಟ ಏರಿದಾಗ ಕೆಳಗೆ ಆಳವಾದ ಕಣಿವೆಯಲ್ಲಿ ಅವಳು ಬಳಕುವುದನ್ನು ನೋಡಬೇಕು. ಎಂಥ ಅದ್ಭುತ ದೃಶಗಳು. ದೇವತೆಗಳು ನೆಲಸಿದ ನಾಡು ಅಂತ ಕರೆಯೋದು ತಪ್ಪೇನಿಲ್ಲ. ಏಕೆಂದರೆ ದೇವತೆಗಳಿಗೆ ಇದಕ್ಕಿಂತ ಸುಂದರ ಪ್ರದೇಶ ಮತ್ತೆಲ್ಲಿ ಸಿಕ್ಕುತ್ತದೆ. ಹಾಲಿನಂತೆ ಬೆಳ್ಳಗೇ ಹರಿಯುವ ರುಫಾಲಿಯನ್ನೇ ನೋಡುವ ಕೆಲಸ ನಮಗೆ. ಬಂಡೆಗಳ ಮೇಲೆ ಧುಮುಕುವುದೇನು, ಚಿಕ್ಕ ಚಿಕ್ಕ ಸೇತುವೆಗಳ ಕೆಳಗೆ ನುಸುಳುವುದೇನು, ಕಿವಿಗಡಗಚ್ಚುವ ಶಬ್ದದಲ್ಲಿ ಮೇಲಿನಿಂದ ಜಲಪಾತವಾಗಿ ಜಾರುವುದೇನು, ಅಬ್ಬಾ ಎಷ್ಟು ವರ್ಣಿಸಿದರೂ ಅಸಾಧ್ಯ. ಬೆಟ್ಟಗಳ ಸಾಲುಗಳಂತೂ ಮುಗಿಯೋದೆ ಇಲ್ಲ. ಹಿಮ ಆವರಿಸಿದ ಬೆಟ್ಟಗಳು ಹತ್ತಿರ ಹತ್ತಿರ ಬರುತ್ತಾ ಇದ್ದವು.

ನಾವು ಮುಂದೆ ಮುಂದೆ ಹೋದಂತೆ. ಒಂದೆರೆಡು ಸಣ್ಣಸಣ್ಣ ಹಳ್ಳಿಗಳು. ಮುಗ್ದ ಮಕ್ಕಳು ಬಹಳ ಸುಂದರವಾಗಿದ್ದವು. ಬಟ್ಟೆಗಳು ಮಾತ್ರ ಕೊಳಕು. ಒಂದೆರಡು ಕಡೆ ಆಯಾಸ ಪರಿಹರಿಸಿಕೊಂಡು ನಿಧಾನವಾಗಿ ಸಾಗುತ್ತಾ ಇದ್ದೆವು. ಸ್ವರ್ಗದಲ್ಲೇ ತಿರುಗಾಡಿದ ಅನುಭವ. ಕೆಲವೊಮ್ಮೆ ಕನಸೇನೋ ಅನ್ನಿಸೋದು. 4 ಘಂಟೆಗೆ ಸೀಮಾ ಕ್ಯಾಂಪ್‌ನ್ ಟೆಂಟ್‌ಗಳು ಕಾಣಿಸಿದಾಗ, ಇವತ್ತಿನ ಚಾರಣ ಮುಗೀತು ಅಂತ ನಿಟ್ಟುಸಿರು ಬಿಟ್ವಿ. ಸುಸ್ತಾಗಿತ್ತು. ಬಹಳ ಸುಂದರವಾದ ಕ್ಯಾಂಪ್. ಚಿಕ್ಕ ಚಾರಣ ರಸ್ತೆಯ ಒಂದು ಪಕ್ಕ ರುಫಾಲಿಯ ಹರಿತ. ಸಿಕ್ಕಾಪಟ್ಟೆ ಶಬ್ಧ ಮಾಡ್ತಾ ಇದ್ದಾಳೆ. ಇನ್ನೊಂದು ಬದಿ ನಮ್ಮ ಕ್ಯಾಂಪ್. ಈ ರಾತ್ರಿ ನಮಗೆ ಈ ರುಫಾಲಿಯ ಭಾರೀ ಶಬ್ದದ ಜೋಗಳವೇ ಗತಿ ನಿದ್ರೆಗೆ ಅನ್ಕೊಂಡ್ವಿ. ಆದರೆ ಆ ಜೋಗಳ ನಮ್ಮನ್ನು ಚೆನ್ನಾಗಿ ಮಲಗಿಸಿತ್ತು ಆವತ್ತು, ಕ್ಯಾಂಪ್‌ಗೆ ಹೋದ ಮೇಲೆ ಬಿಸಿ ಬಿಸಿ ಸೂಪ್ ಕೊಟ್ಟ್ರು. ಸಾಂಕ್ರಿಗಿಂತ ಹೆಚ್ಚು ಚಳಿ ಇಲ್ಲಿ. ಸಣ್ಣಕೆ ಮಳೆ ಬೇರೆ ಬರ್‍ತಾ ಇತ್ತು. ಚಾರಣದಲ್ಲೂ ಕೂಡ ಸುಮಾರು ದೂರ ಮಳೆ ಸಿಕ್ಕಿತು. ಸ್ಲೀಪಿಂಗ್ ಬ್ಯಾಗ್, ರಗ್ಗು ತಗೊಂಡು ಟೆಂಟ್ ಹೊಕ್ಕು ಬೆಚ್ಚ್ಚಗೆ ಮಲಗಿಬಿಟ್ವಿ. ಮತ್ತೇ 6.30 ಗೆ ಊಟಕ್ಕಾಗಿ ವಿಷಲ್ ಹಾಕಿದ್ರು. ಇಲ್ಲಿ ಲೈಟ್ ಇಲ್ಲ. ಹೀಗಾಗಿ ಕತ್ತಾಲಾಗುವುದರೊಳಗೆ ಊಟ ಮುಗಿಸಿಬಿಡಬೇಕು. ರೋಟಿ, ದಾಲ್, ರೈಸ್, ಕಸ್ಟರ್ಡ್ ಕೊಟ್ಟ್ರು. 7.30 ಗೆಲ್ಲಾ ಎಲ್ರೂ ಗೊರಕೆ ಹೊಡೆಯೋಕೆ ಶುರು.

YHAI ನ ವಿಶೇಷ ಅಂದ್ರೆ, ಇಲ್ಲಿ ಸಂಸಾರ ಸಮೇತ ಬಂದರೂ ಸಹಿತ ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ ಟೆಂಟ್‌ಗಳು. ಬಹಳ ಸುಸಜ್ಜಿತವಾದ ಟೆಂಟ್‌ಗಳು. ಒಂದು ಟೆಂಟ್‌ನಲ್ಲಿ 10 ರಿಂದ 12 ಜನ ಇರಬಹುದು. ಬೇರೆ ಬೇರೆ ರಾಜ್ಯಗಳಿಂದ ಬರುವ ಎಲ್ಲಾ ಚಾರಣಗರೂ ಇಲ್ಲಿ ಒಂದಾಗಿ ಬೆರೆಯುವ ಸದಾವಕಾಶ. ನಮ್ಮ ತಂಡದಲ್ಲಿ ಮಹಾರಾಷ್ಟ, ಗುಜರಾತ್, ಆಂಧ್ರ, ಕೇರಳ, ಪಶ್ಚಿಮ ಬಂಗಾಳದಿಂದ ಚಾರಣಿಗರು ಬಂದಿದ್ದರು. ಕಾರ್ಯಕ್ರಮ ಮುಗಿದಾಗ ಎಲ್ಲರ ಮಧ್ಯ ಸ್ನೇಹದ ಕೊಂಡಿ ಬೆಸೆದಿತ್ತು.

Har-ki-Don5

ಬೆಳ್ಳಿಗೆ 5  ಘಂಟೆಗೆ ಎದ್ದು ಎಲ್ಲರೂ ರೆಡಿ ಆಗಿದ್ದು. ಇವತ್ತಿನ ಚಾರಣ ಸ್ಪಲ್ಪ ಚಾಲೇಂಜಿಂಗ್. 11700 ಅಡಿ ಎತ್ತರದಲ್ಲಿರುವ ಹರ್-ಕಿ-ದುನ್‌ಗೆ ಸುಮಾರು 16 ಕಿ.ಮೀ ಚಾರಣ. ಸೀಮಾದಿಂದ ಸುಮಾರು 4000  ಅಡಿ ಎತ್ತರಕ್ಕೆ ಏರುತ್ತಾ ಹೋಗಬೇಕು. ಕೊಂಚ ತಡವಾದರೂ ಪರವಾಗಿಲ್ಲ ಸಾವಕಾಶವಾಗಿ ಚಾರಣವನ್ನು ಯಶ್ವಸಿ ಮಾಡಿಕೊಳ್ಳಬೇಕು ಎನ್ನುವ ಛಲ ಎಲ್ಲರಲ್ಲಿತ್ತು. ಯುವಕರಲ್ಲಿ ಬೇಗ ತಲುಪಬೇಕು ಅನ್ನುವ ತವಕ. ತಿಂಡಿಗೆ ರೋಟಿ, ದಾಲ್, ಕೊಟ್ರು. ಈ ವಾತಾವರಣಕ್ಕೆ ತಿಂಡಿ, ಊಟ ಸೇರುವುದೇ ಕಷ್ಟ ಆಗಿತ್ತು. ಆದರೆ ಯಾರಿಗೂ ಹಸಿವಿನ ಚಿಂತೆ ಇಲ್ಲಾ. ಎಲ್ಲರಲ್ಲೂ ಒಂದೇ ಹಠ. ಚಾರಣ ಪೂರ್ತಿಗೊಳಿಸೊದು ಯಶ್ವಸಿಯಾಗಿ. 8.00 ಘಂಟೆಗೆ ಶುರು ಮಾಡಿದೆವು. ಬೆಳಿಗ್ಗೆಯೇ ಇವತ್ತು ವರುಣನ ಕಾಟ. ಆದರೆ ನಮ್ಮದು ಹಿನ್ನಡೆ ಇಲ್ಲ. ರೇನ್ ಕೋಟ್ ಏರಿಸಿಕೊಂಡು ಹೊರಟಿದ್ದೇ. ಇಡೀ ದಿನ ವರುಣನ ದರ್ಶನ ಇತು. ಯಾರಿಗೂ ಅದು ಕಾಟಾ ಅನಿಸಲೇ ಇಲ್ಲ. ಬಿಸಿಲು ಇದ್ದಿದ್ರೇ ಕಷ್ಟ ಅಂದಕ್ಕೊಳ್ಳುತ್ತಾ ವರುಣನಿಗೆ ಥ್ಯಾಂಕ್ಸ್ ಹೇಳ್ತಾನೇ ಸಾಗ್ತಾ ಇದ್ವಿ. ಇವತ್ತು ನಮ್ಮ ಜೊತೆಯಲ್ಲಿದ್ದವಳು ಸುಫಾಲಿ ನದಿ. ರುಫಾಲಿಗಿಂತ ಇನ್ನೂ ಬೆಳ್ಳಗೆ. ಇವರಿಬ್ಬರೂ ಮೋರಿ ಎಂಬಲ್ಲಿ ಸೇರುತ್ತಾರೆ. ಅಲ್ಲಿ ಅವರಿಗೆ ಹೊಸ ಹೆಸರು ‘ಟಾನ್ಸ್’.

ನಾವು ಹರ್-ಕಿ- ದುನ್ ತಲುಪಿದಾಗ ಸಂಜೆ 6.00 ಘಂಟೆ. ಚಾರಣ, ಪ್ರಯಾಸದಿಂದ ಕೂಡಿತ್ತಾದರೂ ಮನಸ್ಸಿನ ಉಲ್ಲಾಸಕ್ಕೆ ಏನೂ ಕೊರತೆ ಇರಲಿಲ್ಲ. ಹರ್-ಕಿ-ದುನ್‌ನ ನಮ್ಮ ಕ್ಯಾಂಪ್ ಅಂತೂ ಅದ್ಭುತ. ಸುಫಾಲಿ ನದಿಯ ದೊಡ್ಡ ಸಮತಟ್ಟಾದ ದಂಡೆ. ಸುತ್ತಲೂ ಬೃಹತ್ ಪರ್ವತಗಳು. ಅಲ್ಲಿಯೇ ಕಾಣುತ್ತಾಳೆ ಹಿಮದಿಂದ ಆವೃತಳಾದ ‘ಸ್ವರ್ಗಾರೋಹಿಣಿ’. ಪಾಂಡವರು ಅಂತಿಮ ಯಾತ್ರೆ ಕೈಗೊಂಡ ಪರ್ವತರಾಣಿ. ಅದನ್ನು ನೋಡುವುದೇ ಒಂದು ಅದ್ಭುತ ಹಾಗೂ ಜೀವನ ಪಾವನ ಅನ್ಕೋಬೇಕು. ಇದನ್ನು ನೋಡಬೇಕೆಂದರೆ ಕನಿಷ್ಠ 75  ಕಿ.ಮೀ ಚಾರಣ ಮಾಡಲೇಬೇಕು. ಬೇರೆ ದಾರಿಗಳೇ ಇಲ್ಲ. ಮಂತ್ರ, ಮುಗ್ಧರಾಗಿ ನೋಡ್ತಾನೇ ಇದ್ವಿ. ಮಳೆ ಕೂಡ ಕಡಿಮೆಯಾಗಿತ್ತು. ಸೂರ್ಯಾಸ್ತದ ಹೊಂಬಣ್ಣದ ಬೆಳಕು ಸ್ವರ್ಗಾರೋಹಿಣಿ ಮೇಲೆ ಬಿದ್ದು ಬಂಗಾರದ ಹಾಗೆ ಹೊಳೀತಾ ಇದ್ಲು. ಪಕ್ಕದಲ್ಲಿಯೇ ಇರುವ ಕಾಲನಾಗ್, ಆಟಾಪೀಕ್ ಮುಂತಾದ ಪರ್ವತಗಳು ಕೂಡ ನೋಡಲು ಸುಂದರ.

Har-Ki-Don4

ಅಷ್ಟೇ, ಚಳಿ, ನಡುಕ ಶುರುವಾಗಿ ಬಿಡ್ತು. 1 ರಿಂದ 2, ಡಿಗ್ರಿ ಟೆಂಪರೇಚರ್ ಇತ್ತೇನೋ. ಸ್ಲೀಪಿಂಗ್ ಬ್ಯಾಗ್, ರಗ್ಗು ತಗೊಂಡು ಟೆಂಟ್ ಹೊಕ್ಕು ಮಲಗೇ ಬಿಟ್ವಿ. ಊಟನೂ ಬೇಡ ಅನ್ಸಿತ್ತು.

ಮರುದಿನ ಬೆಳಗ್ಗೆ ತಿಂಡಿಗೆ ಪೂರಿ, ಚನಾ ಮಸಾಲಾ ಹಾಗೂ ದಲಿಯಾ ಕೊಟ್ರು. 8.00 ಗಂಟೆಗೆ ಸರಿಯಾಗಿ 2 ಕಿ.ಮೀ ದೂರದಲ್ಲಿರುವ ಆಟಾ ಪೀಕ್ ಗ್ಲೇಸಿಯರ್‌ಗೆ ಹೋಗೋಣ ಅಂತ ನಿರ್ಧಾರ ಮಾಡಿದ್ವಿ. ಹರ್-ಕಿ- ದುನ್‌ಗೆ ಸಮೀಪದಲ್ಲಿ ಅಂದ್ರೆ 6 ಕಿ.ಮೀ ದೂರ ಜಮಧರ್ ಗ್ಲೇಸಿಯರ್ ಮತ್ತು 3 ಕಿ.ಮೀ. ದೂರದಲ್ಲಿ ಮಿರಾಂಡಾ ಸರೋವರ ಇದೆ. ಮಳೆ ವಾತಾವರಣ ಇದ್ದದ್ದರಿಂದ ಸ್ವಲ್ಪ ಸಮೀಪದಲ್ಲಿರುವ ಅಟಾಪೀಕ್‌ಗೆ ಹೋಗೋದು ಸರಿ ಎನ್ನಿಸಿತ್ತು. 2 ಕಿ.ಮೀ. ದೂರ ಸುಮಾರು 12500 ಅಡಿ ಎತ್ತರ ಹತ್ತೋಕ್ಕೆ 4 ಗಂಟೆ ಸಮಯ ತಗೊಳ್ತು. ಐಸ್ ಹತ್ತಿರವೇ ಹೋಗಿ ಸ್ವಲ್ಪ ಆಟ ಆಡಿದೆವು. ದಾರಿಯಲೆಲ್ಲಾ ಬೆಟ್ಟದ ಮೇಲೆ ಚಿಕ್ಕ ಚಿಕ್ಕ ಬಣ್ಣ ಬಣ್ಣದ ಹೂಗಳ ರಾಶಿ. ಆಗಸ್ಟ್ ತಿಂಗಳಿನಲ್ಲಿ ಬಂದರೆ ಬೆಟ್ಟಗಳೆಲ್ಲೆಲ್ಲಾ ಹೂಗಳೇ ತುಂಬಿ ಬಣ್ಣ ಬಣ್ಣದ ಬೆಟ್ಟಗಳಾಗಿ ಕಾಣುತ್ತವಂತೆ. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಒಳ್ಳೆಯ ಸಮಯ ಇಲ್ಲಿ ಚಾರಣ ನಡೆಸಲು. ಆಗಸ್ಟ್‌ನಲ್ಲಿ ಆಗುವ ಲಾಭವೆಂದರೆ ಈ ಕಣಿವೆಗಳೆಲ್ಲಾ ಬಣ್ಣ ಬಣ್ಣದ ಹೂಗಳಿಂದ ತುಂಬಿ ಕಂಗೊಳಿಸುತ್ತಿರುತ್ತವೆ. ಮತ್ತೆ ಸೇಬುಗಳ ಮರಗಳಲ್ಲಿ ಸೇಬು ಹಣ್ಣುಗಳು ತುಂಬಿ ಬಿಟ್ಟಿರುತ್ತವೆ. ಆದರೆ ಹಿಮದ ಬೆಟ್ಟಗಳಲ್ಲಿ ಹಿಮ ಕರಗಿ ಬಿಟ್ಟಿರುತ್ತದೆ. ಮಧ್ಯಾಹ್ನ 2.00 ಗಂಟೆಗೆ ವಾಪಸ್ಸು ಬಂದು ಫುಲ್ ರೆಸ್ಟ್ ಮಾಡಿದ್ವಿ. ಕೆಲವು ಹುಡುಗರು ಮಿರಾಂಡಾ ಸರೋವರಕ್ಕೆ ಹೋಗಿ ಬಂದರು. ತುಂಬಾ ಕಷ್ಟಕರವಾದ ದಾರಿ ಅಂದರು.

ಮರುದಿನ ಬೆಳಗ್ಗೆ ನಮಗೆ ವಾಪಸ್ಸು ಹೊರಡುವ ಚಾರಣ. ಬೇಗ ಹೊರಟು, ಬೇಗ ತಲುಪುವ ವಿಚಾರ ಮಾಡಿದೆವು. ಏಕೆಂದರೆ ಮಧ್ಯಾಹ್ನ ಸಾಮಾನ್ಯವಾಗಿ ಮಳೆ ಬರುವ ಸಮಯ. ಮಳೆ ಶುರುವಾದರೆ ಚಾರಣದ ವೇಗ ಕಡಿಮೆಯಾಗಿ ಬಿಡುತ್ತದೆಯಾದ್ದರಿಂದ ಬೇಗ ತಲುಪಿ ಬಿಡೋಣ ಅಂದುಕೊಂಡು 6.30 ಕ್ಕೆ ಹೊರಟೆವು. ಒಗ್ಗರಣೆ ಅವಲಕ್ಕಿ ತಿಂಡಿ ಮಾಡಿದ್ರು. ಸ್ವಲ್ಪ ಬಾಯಲ್ಲಿ ಹಾಕಿಕೊಂಡು ಹೊರಟೇಬಿಟ್ವಿ. ಹಿಂದಿನ ದಿನ ಜೋರಾಗಿ ಮಳೆ ಬಂದಿದ್ದರಿಂದ ರಸ್ತೆಯಲ್ಲಾ ಹಸಿಯಾಗಿ ಜಾರುತ್ತಿತ್ತು. ಇಳಿಯುವಾಗ ಸುಸ್ತಾಗುವುದಿಲ್ಲವಾದರೂ, ಕಾಲು ನೋವು ಬರ್‍ತಾ ಇತ್ತು. ಸದ್ಯಕ್ಕೆ ಮಳೆ ಸಿಕ್ಕಲಿಲ್ಲ. ಹೀಗಾಗಿ ಪೋಟೋ ತೆಗೆಯೋಕೆ ಸಹಾಯವಾಯ್ತು. ಗಂಗಾಡ ಗ್ರಾಮದಲ್ಲಿ ಸ್ವಲ್ಪ ಸಮಯ ಕಳೆದ್ವಿ. ನೀರಿನ ರಭಸದಿಂಧ ತಿರುಗುವ ಹಿಟ್ಟಿನ ಗಿರಣಿಯನ್ನು ನೋಡಿದ್ವಿ. ಬಹಳ ಆಶ್ಚರ್ಯವಾಯ್ತು. ದೊಡ್ಡ ದೊಡ್ಡ ಮರದ ತೊಲೆಗಳನ್ನು ಹೊತ್ತುಕೊಂಡೇ ಸಾಗಿಸುವ ಪರಿಶ್ರಮ ಜೀವಿಗಳನ್ನು ನೋಡಿದ್ವಿ. ಚಾಣಾಕ್ಷತನದಿಂದ ಮರದ ಬೊಡ್ಡೆಗಳನ್ನು ಜಾರಿಸುವ ಕಲೆಯನ್ನು ನೋಡಿದ್ವಿ. ಸಾಮಾನುಗಳನ್ನು ಸಾಗಿಸುವ ಮ್ಯೂಲ್‌ಗಳನ್ನು ನೋಡಿದ್ವಿ. ಬೆನ್ನಿನ ಮೇಲೆ ರಾಶಿ ರಾಶಿ ಸಾಮಾನು ಹೊತ್ತು ತಿರುಗುವ ಸುಂದರ ಹೆಂಗಸರು, ಮಕ್ಕಳನ್ನು ನೋಡಿದ್ವಿ. ಗಲೀಜು ಬಟ್ಟೆ ಹಾಕಿಕೊಂಡು, ಮೂಗಿನಲ್ಲಿ ಸಿಂಬಳ ಸುರಿಸುತ್ತಿರುವ ಮುದ್ದು ಕೂಸುಗಳನ್ನು ನೋಡಿದ್ವಿ. 8-10  ಕಿ.ಮೀ. ದೂರ ನಡೆದು ಶಾಲೆಗೆ ಹೋಗಿ ಬರುವ ಮಕ್ಕಳನ್ನು ನೋಡಿದ್ವಿ, ಮಾತಾಡಿಸಿದ್ವಿ. ಒಂದು ವಿಚಿತ್ರ ಲೋಕವೇನೋ ಅನ್ಸಿಸಿಬಿಟ್ಟಿತ್ತು.

Har-ki-dun 380   Har-ki-dun 366

ಮಧ್ಯಾಹ್ನ 1.00 ಗಂಟೆಗೆಲ್ಲಾ ಓಸ್ಲಾ ಗ್ರಾಮಕ್ಕೆ ಬಂದು ಬಿಟ್ವಿ. ಅಲ್ಲಿನ ಒಂದು ಪುಟ್ಟ ಹೋಟೆಲ್‌ನವನು ನಮಗೆ ಕೂಡ್ರಿಸಿ ಬಿಸಿ ಬಿಸಿಯಾದ ಕಿಚಿಡಿ ಮಾಡಿಕೊಟ್ಟ. ಚೆನ್ನಾಗಿ ತಿಂದ್ವಿ. ಒಂದೆರೆಡು ಗಂಟೆ ಅಲ್ಲೇ ಕಳೆದು ಅಲ್ಲಿಂದ 1 ಕೀ.ಮೀ ದೂರದಲ್ಲಿರುವ ಸೀಮಾ ಕ್ಯಾಂಪ್‌ಗೆ ಹೋಗಿ ಸೇರಿದ್ವಿ. ಮಳೆ ಶುರುವಾಗಿ ಬಿಡು. ರಾತ್ರಿ ಊಟಕ್ಕೆ ಜೀರಾರೈಸ್, ಕಸ್ಟರ್ಡ್ ಎಲ್ಲಾ ಇದ್ರನೂ ಮಳೆಯಲ್ಲಿ ಟೆಂಟ್ ಹೊರಗಡೆ ಹೋಗೋದೆ ಬೇಡವಾಗಿತ್ತು. ಬೇಗ ಮಲಗಿ ಬಿಟ್ವಿ.

ಮರುದಿನ ನಮ್ಮ ಕೊನೆಯ ದಿನದ ಚಾರಣ. ಸೀಮಾದಿಂದ ತಾಲೂಕಾವರೆಗೆ. ಈ ದಿನವಂತೂ ಇನ್ನೂ ಬೇಗ ಹೊರಡುವ ವಿಚಾರ ಮಾಡಿ, ಬೆಳಗ್ಗೆ ತಿಂಡಿಗೂ ಕಾಯದೆ 6.00 ಗಂಟೆಗೆ ಹೊರಟು ಬಿಟ್ವಿ. 12.00 ಗಂಟೆಗೆ ತಾಲೂಕಾ ತಲುಪಿ ಕೇಕೆ ಹಾಕಿದ್ದಾಯ್ತು, ಯಶಸ್ವಿಯಾಗಿ ಚಾರಣ ಮುಗಿಸಿದ್ದಕ್ಕೆ. ಅಲ್ಲಿಂದ ಜೀಪಿನಲ್ಲಿ ಸಾಂಕ್ರಿ ತಲುಪಿದಾಗ 2 ಗಂಟೆ. ಸಾಂಕ್ರಿಯ ಒಂದು ಚಿಕ್ಕ ಹೋಟೇಲ್‌ನಲ್ಲಿ ಊಟ ಮಾಡಿದ್ವಿ. ಫ್ರೆಶ್ ಆಡೂ ಹಾಗೂ ಪ್ಲಮ್ ಹಣ್ಣುಗಳು ಸಿಕ್ಕವು. ತಿಂದು ಆನಂದಿಸಿದೆವು. ಕ್ಯಾಂಪ್‌ಗೆ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿ ನಮ್ಮ ಬ್ಯಾಗ್‌ಗಳನ್ನು ವಾಪಸ್ ತೆಗೆದುಕೊಂಡು ರೀ ಪ್ಯಾಕ್ ಮಾಡಿಕೊಂಡ್ವಿ. ಬೆಳಗ್ಗೆ ನಮ್ಮ ಪ್ರಯಾಣ ನಮ್ಮ ಊರಿನತ್ತ. ರಾತ್ರಿ ಒಳ್ಳೆಯ ಊಟ ಮಾಡಿ ಮಲಗಿದ್ವಿ, ಯಶಸ್ವಿಯಾಗಿ ಚಾರಣ ಮುಗಿಸಿದ್ದಕ್ಕೆ ಪ್ರಮಾಣ ಪತ್ರ ನೀಡಿದರು. ಬೆಳಗ್ಗೆ 6 ಘಂಟೆಗೆ ನಮ್ಮ ಬಸ್. ಡೆಹರಾಡೂನ್ ವರಗೆ ನಮ್ಮ ತಂಡದ ಎಲ್ಲರೂ ಒಟ್ಟಿಗೆ ಪ್ರಯಾಣಿಸಿದ್ವಿ. ನಂತರ ಎಲ್ಲರನ್ನೂ ಬೀಳ್ಕೊಟ್ಟು ಸುಂದರ ನೆನಪುಗಳನ್ನು ಹೊತ್ತು ನಮ್ಮೂರಿಗೆ ಹಿಂದಿರುಗಿದ್ವಿ.

Har-ki-Don6ನಿಜಕ್ಕೂ ಹರ್-ಕಿ.-ದುನ್ ಚಾರಣ ಅದ್ಭುತ ನೆನಪಾಗಿಯೇ ಉಳಿಯುವುದರಲ್ಲಿ ಸಂದೇಹವಿಲ್ಲ.

(ಮುಗಿಯಿತು)

ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-1

 

– ಅನಂತ ದೇಶಪಾಂಡೆ

 

 

2 Responses

  1. ಮಾಲಾ says:

    ಚಾರಣದ ಅದ್ಭುತ ಆನಂದ ಸವಿಯಲು ಹಿಮಾಲಯಕ್ಕೆ ಹೋಗಬೇಕು. ಲೇಖನ ಓದಿ ಸಂತಸವಾಯಿತು.

  2. savithri s bhat says:

    ನಿಮ್ಮ ಚಾರಣ ಅನುಭವಗಳನ್ನು ಸುರಹೊಂನೆಗೆ ಹ೦ಚಿದ ನಿಮಗೆ ವ೦ದನೆಗಳು .ಮು ೦ದಿನ ಲೇಖನ ಯಾವಾಗ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: