ಬೆಕ್ಕು ಗೊಂಬೆಗೆ ಹಾಲನ್ನ ಬೇಡ..!

Share Button
V K Valpady

ವಿ.ಕೆ.ವಾಲ್ಪಾಡಿ

ನಾಯಿ ಬೆಕ್ಕು ಮಾತ್ರವಷ್ಟೇ ಅಲ್ಲ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅದೆಲ್ಲ ಇರಲಿ,ಇಲ್ಲಿ ನಾನು ಬರೆಯಲಿರುವುದು ನಮ್ಮ ಬೆಕ್ಕು ಗೊಂಬೆಯ ವಿಚಾರ. ‘ಬೆಕ್ಕಿನ ಮರಿಗಳಿವೆ ಕೊಂಡೊಯ್ಯುವುದಾದರೆ ಇವತ್ತು ನಾಳೆಯೇ ಬಾ’ ಅಂತ ನನ್ನ ಅಕ್ಕ ಶುಭ ಫೋನ್‌ನಲ್ಲಿ ತಿಳಿಸಿದಳು.ಸ್ವಲ್ಪ ದೊಡ್ಡದಾಗಲಿ,ಅನ್ನ ತಿನ್ನುವಷ್ಟಾದರೂ ಆಗಲಿ,ಬರೇ ಚಿಕ್ಕದಾದರೆ ನಂತರ ಸಾಯುತ್ತದೆ ಎಂದೆ.ಪಕ್ಕದ ಮನೆಯವರದ್ದು ಬೆಕ್ಕು ಮರಿ ಇಟ್ಟಿರೋದು.ಅವು ಈಗಲೇ ತಾಯಿ ಜೊತೆ ಸುತ್ತಾಡುತ್ತಿವೆ.ನಮ್ಮನೆಗೂ ಬರುತ್ತಿವೆ.ಇನ್ನು ಹಾಗೆ ಇದ್ದರೆ ಬೇರೆರೆಯವರು ಹಿಡಿದು ಕೊಂಡೊಯ್ಯುತ್ತಾರೆ’ ಅಂತ ಹೆದರಿಸಿದಳು ಬೇರೆ. ನನಗೂ ಬೆಕ್ಕು ಬೇಕಾಗಿತ್ತು.
 
ಅತೀ ಕಡಿಮೆ ಪ್ರಮಾಣದ ನಿದ್ದೆ ಮಾತ್ರೆಯೊಂದನ್ನು ಜೇಬಲ್ಲಿರಿಸಿಕೊಂಡು ಹೋದೆನು. ದೂರದಿಂದ ಮರಿಯನ್ನು ತರುವಾಗ ಅಲ್ಲಿ ಅದಕ್ಕೆ ಹಾಲಿನ ಜೊತೆ ಒಂದು ಸಣ್ಣ ತುಂಡು ನಿದ್ದೆ ಮಾತ್ರೆಯನ್ನು ಕೊಡುವುದು.ಅದ್ಯಾಕೆಂದರೆ ಬಸ್ಸಿನಲ್ಲಿ ಕೂಗುವುದಿಲ್ಲ ಮತ್ತು ಚೀಲದಿಂದ ಎದ್ದು ಹೊರಗೆ ಬರಲೆತ್ನಿಸುವುದಿಲ್ಲ, ಸ್ವಸ್ಥ ಮಲಗಿರುತ್ತದೆ. ಮನೆಗೆ ತಂದಕೂಡಲೆ ಅದಕ್ಕೆ ಮೊದಲಾಗಿ  “ಗೊಂಬೆ” ಎಂದು ಹೆಸರಿಟ್ಟಾಯಿತು.ಅದೆಲ್ಲ ನನ್ನದೇ ಆಯ್ಕೆ.ಮನೆಯಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿಗೆ ನಾನೇ ಹೆಸರಿಡುವುದು.ಎಮ್ಮೆ ಕರುಗಳಿಗೆ ಅಮ್ಮ ಹೆಸರಿಡುತ್ತಿದ್ದರು. –
 
ಬೆಕ್ಕು ದಿನಗಳೆದಂತೆಲ್ಲ ಚುರುಕಾಯಿತು. ಅಡುಗೆ ಕೋಣೆಯೊಳಗೆನೆ ಇದ್ದು ತಿಂದು ಮಲಗುತ್ತಿದ್ದ ಅದು ಮನೆ ಪೂರ್ತಿ ನಡೆದಾಡತೊಡಗಿತು. ಮಲ ಮೂತ್ರ ವಿಸರ್ಜನೆಗೆ ಅಂಗಳದತ್ತ ಹೋಗುವುದಕ್ಕೆ ಎಲ್ಲ ಅಭ್ಯಾಸ ಮಾಡಿಸಿಯಾಯಿತು.ಕುಡಿಯಲಿಕ್ಕೆ ಹಾಲು ಮಾತ್ರವೇ ಅಲ್ಲ ಅಲ್ಲಿರುವ ಹಾಲಿನ ಪುಡಿಯನ್ನೂ ಹಾಕುವುದು ಮಗಳು ಕೃಪಳ ಕೆಲಸವಾಗುತ್ತಿತ್ತು.ಅಷ್ಟಕ್ಕೂ ಬೆಕ್ಕಿನ ಬಣ್ಣ ಬಹಳ ಆಕರ್ಷಕವಾಗಿರುವುದು.ಹಿಂದೆ ನಮ್ಮಲ್ಲಿ “ರಾಣಿ” ಹೆಸರಿನ ಬೆಕ್ಕು ಇತ್ತು. ಆಕೆಗೆ ದಿನಾ ಸೇಮೆ (ಅಂಗಡಿಯಲ್ಲಿ ಸಿಗುವ ಕರಿದ ತಿಂಡಿ ‘ಸೇವು’ ಅಂತಾರಲ್ಲ,ಅದು) ತಂದು ತಿನಿಸುವುದಕ್ಕೆ ಪ್ರಾರಂಭಿಸಿ ಮತ್ತೆ ಅದುವೇ ಖಾಯಂ ಆಗಿಬಿಟ್ಟಿತ್ತು. ತಂದೆಯವರು ಬೆಳಿಗ್ಗೆ ,ಸಂಜೆ ರಾಣೀಗೆ ಸೇಮೆ ಹಾಕಲೇಬೇಕು.ಇಲ್ಲಾಂದ್ರೆ ಆಕೆ ಕಾಲಬುಡದಿಂದ ಆಚೆ ಹೋಗೋದೇ ಇಲ್ಲ.ಮೇಜಿನ ಮೇಲೆಯೂ ಬಂದು ಕುಳಿತು ಮಿಯಾಂ ಅನ್ನತ್ತಲೇ ಇರುತ್ತಿದ್ದಳು.
cat 1ಈ ಗೊಂಬೆಗೂ ಸೇಮೆ ತಿನ್ನಿಸಿ ಈಗ ಅನ್ನ ಹಾಲು ಮಜ್ಜಿಗೆ ಏನನ್ನೂ ತಿನ್ನುವುದೇ ಇಲ್ಲ.ಸೇಮೆ ತಿಂದು ಸೀದಾ ಹೋಗಿ ನೀರು ನೆಕ್ಕುವುದು.ದಿನಕ್ಕೆ ಎಷ್ಟು ಬಾರಿ ನೀರು ನೆಕ್ಕುತ್ತಿರುತ್ತಾಳೆಯೋ ಅವಳೀಗೇ ಗೊತ್ತು.ಮನೆಯಲ್ಲಿ ಒಳಗಡೆ ತಿರುಗಾಡುವುದೇ ಇಲ್ಲ.ಚಾವಡಿಗೆ ಬಂದು ಸೇಮೆಗೆ ಕೂಗುತ್ತಾಳೆ, ಆಮೇಲೆ ಸುಮ್ಮಗೆ ಬಿದ್ದುಕೊಳ್ಳುತ್ತಾಳೆ, ಸೀದಾ  ಹೊರಗೆ ಹೋಗಿ ನೀರು ಕುಡಿದು ಅಲ್ಲಿಯೇ ಗದ್ದೆ ಸುತ್ತ ಸುತ್ತಾಡುತ್ತಾಳೆ.ಸುತ್ತಲಿನ ಮನೆಯವರ ವಠಾರಕ್ಕೂ ಕೆಲವೊಮ್ಮೆ ವರಾಸರಿ ಹೋಗುವುದುಂಟು.ಎಷ್ಟು ಪುಕ್ಕಲು ಎಂದರೆ ನಾಯಿ,ದನ ಏನೇ ಬಂದರೂ ಒಳಗೆ ಓಡಿ ಬಂದು ತಿರುಗಿ ನಿಂತು ನೋಡುವುದು.ಅಂಗಳದಲ್ಲಿ ಆಚೆ ಈಚೆ ಇದ್ದಾಗ ನಾಯಿ ಬಂತೆಂದರೆ ಸರ್‍ರಂತ ತೆಂಗಿನ ಮರವನ್ನೇ ಹತ್ತುವುದು.ಒಮ್ಮೆ ಮಾವಿನ ಮರವನ್ನು ಹತ್ತಿದ್ದ ಗೊಂಬೆ ಕೆಳಗಿಳಿಯಲಿಕ್ಕಾಗದೆ ಮನೆ ಮಂದಿಯೆಲ್ಲರೂ ಸೇರಿ ಏನೇನೊ ಉಪಾಯ ಕಲ್ಪಿಸಿ ಮತ್ತೆ ಅರ್ಧಕ್ಕೆ ಮೇಲೆ ಹತ್ತಿಯೇ ಇಳಿಸಿದ್ದು.ಒಂದು ದಿನ ನಾನು ಮನೆಗೆ ಬರುವಾಗ  ರಾತ್ರಿ ಎಂಟು ಗಂಟೆ. ಮನೆಯೊಳಗೆ ಬರುತ್ತಿರುವಾಗಲೆ ವಾರ್ತೆ, ‘ಗೊಂಬೆ ಇಲ್ಲ..ಗೊಂಬೆ ಎಲ್ಲಿದ್ದಾಳೆ ಗೊತ್ತಿಲ್ಲ.‘ ನಾನು ಅಂಗಳ ಸುತ್ತ ನಡೆಯುತ್ತ ‘ಗೊಂಬೆ ಗೊಂಬೆ..ಮ್ಯಾಂವ್ ಮ್ಯಾಂವ್ ಎಂದು ಕೂಗಿ ಕರೆದರೂ ಸುದ್ದಿಯೇ ಇಲ್ಲ. ಲೈಟು ತಕ್ಕೊಂಡು ಮಾವಿನ ಮರದ ಬಳಿ ಹೋಗುತ್ತೇನೆ ಮ್ಯಾಂವ್ ಸ್ವರ ಕೇಳಿಸಿತು.ಹೇಗಾದರೂ ಕೆಳಗಿಳಿಸಿತು ಅನ್ನಿ.
ತೆಂಗಿನ ಮರಕ್ಕೆ ಮುಕ್ಕಾಲು ಪಾಲಿನಷ್ಟೆತ್ತರ ಹತ್ತಿ ಕೆಳಗಿಳಯುತ್ತಾಳೆ,ಆದರೂ ಅಲ್ಲಿಂದ ಕೆಳಗಿ ನೋಡಿ ಅಸಹಾಯಕಳಂತೆ ಕೂಗುವುದು ಬೇರೆ. ಬೇಕಾದರೆ ಕೆಳಗಿಳಿ ನಿನಗೆ ಮೇಲೆ ಹತ್ತಲಿಕ್ಕೆ ಹೇಳಿದ್ದಾರೆ ಯಾರು ಎಂದು ನಮ್ಮಲ್ಲಿ ನಾವೇ ಅವಳಿಗೆ ಬೈಯುತ್ತೇವೆ,ಅದು ಮತ್ತೆ ಕೆಳಗಿಳಿಯುತ್ತದೆ.ಒಂದು ದಿನ ರಾತ್ರಿ ಎಂಟು ಗಂಟೆಗೆ ನಾವೆಲ್ಲ ಹೊರಗೆ ಜಗಲಿಯಲ್ಲಿ ಕುಳಿತ್ತಿದ್ದೆವು.ಹುಣ್ಣಿಮೆಯ ಬೆಳಕು ಕೂಡಾ ಇತ್ತು. ಅಂಗಳದ ಗೋಡೆಯ ಹೊರಗಡೆ ಇದ್ದ ಗೊಂಬೆ ಇದ್ದಕ್ಕಿದ್ದಂತೆ ಬುಸ್..ಎಂದು ಸದ್ದು ಮಾಡುತ್ತ ಪಕ್ಕದಲ್ಲೇ ಬೆಳೆದು ನಿಂತಿದ್ದ ತೆಂಗಿನ ಮರ ಹತ್ತಿದಳು.ನೋಡ ನೋಡುತ್ತಿದ್ದಂತೆ ಮರದ ತುದಿಗೆ ಹೋಗಿ ಕೊಂಬೆಯನ್ನೇರಿದಳು. ಯಾರದೋ ನಾಯಿ ದಾರಿಯಲ್ಲಿ ಬಂದಾಗ ಈ ಬೆಕ್ಕು ಹೆದರಿ ಮರ ಹತ್ತಿದ್ದು.ನಮಗೆಲ್ಲ ಗಾಬರಿ. ಬೆಕ್ಕು ಕೊಂಬೆಯಲ್ಲಿದ್ದುಕೊಂಡು ಕೂಗುವುದು, ಕೆಳಗೆ ನಮ್ಮನ್ನು ನೋಡಿ ಕೂಗುವುದು.ಸೋಗೆ ಮೇಲೆ ನಡೆದು ಬಂದೆಲ್ಲಾದರೂ ಜಾರಿ  ನೆಲಕ್ಕೆ ಬಿದ್ದರೆ ಬೆಕ್ಕು ಸತ್ತೇಹೋಗುತ್ತದೆ ಎಂಬ ಭಯ ಬೇರೆ. ರಾತ್ರಿ ಹತ್ತಾದರೂ ಬೆಕ್ಕು ಕೆಳಗಿಳಿಯಲಿಲ್ಲ.ನಾಳೆ ಕೆಳಗಿಸುವುದಕ್ಕೆ ಸುರೇಶನಲ್ಲಿ ಹೇಳೋಣ ಅಂತ ನಾವೆಲ್ಲ ಮನೆಯೊಳಗೆ ಹೋಗಿ ಮಲಗಿದೆವು. ನಡುರಾತ್ರಿಯಲ್ಲಿ ಗೊಂಬೆ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಳು !
 –
ಹಳ್ಳಿ ಮನೆಯಲ್ಲಿ ಬೆಕ್ಕುಗಳು  ಹೆಚ್ಚು ಹೊತ್ತು ಇರುವುದು ಮತ್ತು ಮಲಗುವುದು ಅಡುಗೆ ಕೋಣೆಯಲ್ಲಿ.ಅವುಗಳಿಗೆ ಮೈ ಬೆಚ್ಚಗೆ ಇಟ್ಟುಕೊಳ್ಳುವುದೇ ಮುಖ್ಯವಾಗಿರುತ್ತದೆ.ಈ ಭೂಮಿಯಲ್ಲಿ ಸುಖೀ ಪ್ರಾಣಿಯೆಂದರೆ ಬೆಕ್ಕು ಅಂತೆ.ಒಲೆ ಬಾಗಿಲಲ್ಲೇ ಬಿದ್ದುಕೊಂಡಿರುವುದು ,ಮೈಮುರಿಯುತ್ತ ಜಡ ತೆಗೆಯುವುದು, ಅದಕ್ಕೆಂದೇ ಇರುವ ಗೆರಟೆಯಲ್ಲಿನ ಅನ್ನದ ಕಾಳುಗಳನ್ನು ಬಾಯಿಗೆ ಹಾಕ್ಕೊಳ್ಳುವುದು, ಬೇಕಾದರೆ ಮನೆಯೊಳಗೆ ಅಡ್ಡಾಡಿಕೊಂಡು ಮತ್ತೆ ಮೊದಲಿದ್ದ ಜಾಗಕ್ಕೇ ಬಂದು ಅಡ್ಡ ಮಲಗುವುದು.ಒಲೆಗೆ ಇಟ್ಟು ಉರಿಯುತ್ತಿರುವ ಸೌದೆಯ ಮೇಲೆಯೇ ತಲೆಯಿಟ್ಟು ನಿದ್ದೆ ಮಾಡುತ್ತಿರುತ್ತವೆ.ಸಾಮಾನ್ಯವಾಗಿ ಅವುಗಳ ಮೀಸೆ ತುದಿ ಸುಡುತ್ತಲೇ ಇರುತ್ತದೆ.ಕಪ್ಪು ಬೆಕ್ಕು ಆಗಿದ್ದಲ್ಲಿ ಮಸಿ ಅರಿವೆ( ಅಡುಗೆ ಪಾತ್ರೆ ಹಿಡಿದುಕೊಳ್ಳಲಿಕ್ಕೆ ಬಳಸುವ ತುಂಡು  ಹತ್ತಿ ಬಟ್ಟೆ) ಅದೇ ಅಂತ ಎತ್ತುವುದೂ ಆಗುತ್ತದೆ.’ಥೋ ನೀನ ಕತ್ತೆ..” ಅಂತ  ಬೆಕ್ಕನ್ನು ಕೆಳಗೆ ಹಾಕಿ ಅಥವಾ  ಹಿಂದಕ್ಕೆ ಬಿಸಾಡಿ ಮಸಿ ಅರಿವೆಯನ್ನು ಆ ಕಡೆಯಿಂದ ಎತ್ತಿಕೊಳ್ಳುವುದು ಉಂಟು.ಕೆಲವೊಮ್ಮೆ ಎಷ್ಟು ಊದಿದರೂ ಸೌದೆಗೆ ಬೆಂಕಿ ಹತ್ತೋದೆ ಇಲ್ಲ ಊದಿ ಊದಿ ವಸಡು ನೋವಾಗಿರುತ್ತದೆ ಮಾತ್ರವಲ್ಲ ತುದಿಗಾಲಲ್ಲಿ ಕುಳಿತು ಒಲೆಗೆ ಬಗ್ಗಿ ಊದುವಾಗ ಸೊಂಟವೂ ಬಚ್ಚಿರುತ್ತದೆ. ಕೆಂಡದ ಮೇಲೆಯೂ ಸಿಟ್ಟು ಬಂದಿರುತ್ತದೆ ಆಗೆಲ್ಲಾದರೂ ಬೆಕ್ಕು ಒಲೆ ಬದಿಯಲ್ಲಿ ಮಲಗಿಕೊಂಡಿರಬೇಕು ಊದುಗೊಳವೆಯಲ್ಲಿ ಒಂದು ಪೆಟ್ಟು ಕೊಟ್ಟೇ ಬಿಡುತ್ತಾರೆ.ಸೌದೆ ಕೆಂಡದ ಮೇಲಿನ ಸಿಟ್ಟು ಬೆಕ್ಕಿನ ಬೆನ್ನಿಗೆ ! ಆದರೆ ಬೆಕ್ಕಿಗೆ ಬೇಸರವಿಲ್ಲ ಎದ್ದು ಆಚೆ ಹೋಗಿ ಮಲಗುತ್ತದೆ ಇಲ್ಲಾಂದ್ರೆ ಹೊರಗೆ ಓಡಿಹೋಗಿ ಬೆನ್ನು ನೆಕ್ಕುತ್ತದೆ.
cat 2
ಈ ‘ಗೊಂಬೆ’ ಮಾತ್ರ ಒಲೆ ಬದಿಗೆ ಬಿಡಿ ಅಡುಗೆ ಮನೆಯೊಳಗೇ ಸುಳಿದಾಡುವುದಿಲ್ಲ.ರಾತ್ರಿ ಮಲಗೋದು ಕೂಡಾ ಚಾವಡಿಯಲ್ಲಿ ಕುರ್ಚಿಯ ಮೇಲೆ ಅಥವಾ ಖಾಲಿ ಮಂಚದಲ್ಲಿ. ಹೆಂಗಸರ ಕೆಂಗಣ್ಣಿಗೆ ಗುರಿಯಾಗುವುದಾಗಲಿ, ಕದ್ದು ಹಾಲು ನೆಕ್ಕಿದಳು, ಸಿಕ್ಕಕ್ಕೆ,ನಾಗೊಂದಿಗೆ ಹಾರಿ ಅದು ಇದು ಕೆಳಗೆ ಬೀಳಿಸಿದಳು ಇತ್ಯಾದಿ ಯಾವ ದೂರು ದುರ್ಜನಕ್ಕೂ ಅವಕಾಶವಿಲ್ಲದಂತೆ, ಈ ಹೆಂಗಸರ ಹಂಗೇ ಇಲ್ಲವೆಂಬಂತೆ ಹೊರಗಿಂದ ಹೊರಗೆನೇ ಇದ್ದು ಸೇಮೆ ತಿಂದು ಸ್ವಚ್ಚಂದವಾಗಿರುತ್ತಾಳೆ.ಮನೆಯ ಗೋಡೆಯಲ್ಲಿ ಅಡ್ಡಾಡುತ್ತ ಬಲ್ಲಿರೇನಯ್ಯಾ ಯಾರ ಈ  ಮನೆ ಗೋಡೆಗೆ ? ಎನ್ನುತ್ತಿದ್ದ ಹತ್ತಾರು ಹಲ್ಲಿಗಳು ಮಾತ್ರ ಎಲ್ಲವೂ ಗೊಂಬೆಯ ಆಹಾರವಾಗಿ ಮಾಯವಾಗಿವೆ. ಚಾವಡಿಯ ಹೊಸ್ತಿಲಿನಿಂದಲೇ ಗುರಿಮಾಡಿಕೊಂಡು ಗೋಡೆಗೆ ನೆಗೆದು ಹಲ್ಲಿಯನ್ನು ಬಾಯಲ್ಲಿ ಅಡ್ಡ ಕಚ್ಚಿಕೊಂಡೇ ಸಾಧಿಸುತ್ತಾಳೆ.ಇಲಿಗಳನ್ನು ಬೇಟೆಯಾಡಲಿ ಅಂತ ಅಟ್ಟಕ್ಕೆ ಹಾಕಿದರೆ ಒಂದೇ ಸುತ್ತು ಬಂದು ದಾರಿ ಹುಡುಕಿ ಕೆಳಗಿಳಿದಾಯಿತು. ಹಾಗಂತ ನಾವೇನು ಆಕೆಗೆ ಹೊಡೆಯುವುದೇ ? ಬಡಿಯುವುದೇ? ಛೇ ಛೇ ಸಾಧ್ಯವೇ ಇಲ್ಲ.ಮನೆ ಮಂದಿ ಎಲ್ಲರೂ ಆಕೆಯನ್ನು ಕೊಂಡಾಟ ಮಾಡುವುದೇ ಜಾಸ್ತಿ. ಅದು ಬೆಕ್ಕಿಗೂ ಗೊತ್ತು, ನಾನು ಈ ಮನೆಯವರಿಗೆ ಬೇಕೇ ಬೇಕು,ನಾನು ಏನೇ ಮಾಡಿದರೂ ಸಿಂಧು !
 –
ಅಂಗಳ,ಗದ್ದೆಗೆ ಹೋದವಳು ಅಲ್ಲಿ ಓತಿ,ಅರಣೆ ಮರಿ, ಕಪ್ಪೆ ಮುಂತಾದುವನ್ನು ಬೇಟೆಯಾಡಿ ತಿನ್ನುತ್ತಾಳೆ.ಮನೆಯೊಳಗೆ ಮಾತ್ರ ಸೇಮೆಯೊಂದೇ ಆಹಾರ. ನಿಮ್ಮ ಅನ್ನ ನೀವೇ ತಿನ್ನಿ,ನಿಮ್ಮ ಹಾಲು ನಿಮಗೇ ಇರಲಿ ಎಂಬಂತೆ ಬಾಲವನ್ನು ಎತ್ತಿ ಕುಂಡೆ ತೋರಿಸುತ್ತ ವೈಯಾರದಿಂದ ನಡೆಯುತ್ತಾಳೆ. ಅದು ಕೂಡಾ ನಮಗೆಲ್ಲರಿಗೂ ಖುಷಿಯಾಗುತ್ತದೆ. ನಾವು ಸಾಕಿದ ಪ್ರಾಣಿಗಳು ಹೇಗೆ ನಮ್ಮನ್ನು ಉಪಯೋಗಿಸಿಕೊಳ್ಳುತ್ತವೆ ನೋಡಿ !?.ಇದು ನನ್ನ ಮನೆ ಬೆಕ್ಕು ನಾಯಿ ಕತೆಯೇ ಅಲ್ಲ ಅನೇಕ ಮನೆಗಳಲ್ಲಿ  ಹೀಗೆ ಅಥವಾ ವಿಭಿನ್ನ ರೀತಿಯಲ್ಲಿ ಇರುತ್ತದೆ.
 
– ವಿ.ಕೆ.ವಾಲ್ಪಾಡಿ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: