ಮತ್ತೊಮ್ಮೆ ಬಾ ಗೆಳೆಯ..ಲೂಯಿ ಮಹಾಶಯ

Share Button

B Gopinatha Rao

ಬೆಳ್ಳಾಲ ಗೋಪಿನಾಥ ರಾವ್

ಆ ದಿನ ಎಂದಿನಂತೆ ನನ್ನವಳು ಮತ್ತು ನಾನು ದೆಹಲಿಯ ಯುನಿವರ್ಸಿಟಿಯ ಇದಿರಿನ ರಸ್ತೆಯಲ್ಲಿ ಬೆಳಗಿನ ವಿಹಾರಕ್ಕಾಗಿ ಹೋಗುತ್ತಿರುವಾಗ ಅಕಾಸ್ಮಾತ್ತಾಗಿ ಒಬ್ಬ ಶ್ವಾನ ಮಹಾಶಯ ನಮ್ಮಜತೆ ಸೇರಿಕೊಂಡ.  ನಿಜವಾಗಿಯೂ ಹೇಳಬೇಕೆಂದರೆ ಆತ ನನ್ನವಳನ್ನೇ ಹೆಚ್ಚು ಹಚ್ಚಿಕೊಂಡ ಹಾಗೇ ಕಂಡು ಬಂತು. ಆದರೆ ಅವಳಿಗೆ ಶ್ವಾನ ಜಾತಿಯವರಲ್ಲೇ ಅಷ್ಟು ಕನಿಕರವೋ ಅಥವಾ ಅಕ್ಕರೆಯೋ ಇರಲೇ ಇಲ್ಲ. ಈತ ಅದ್ಯಾಕೋ ನಮ್ಮಿಬ್ಬರನ್ನೂ ನೋಡಿದ ಕೂಡಲೇ ಯಾರನ್ನು ಸರಿಯಾಗಿ ಆದರಿಸಿದರೆ ಒಳ್ಳೆಯದು ಅಂತ ಕಂಡು ಕೊಂಡ ಅಂತ ಕಾಣುತ್ತದೆ. ಇರಲಿ, ನೋಡಲು ಜಾತಿಯವನಾಗಿಯೂ, ಸರಿ ಸುಮಾರು ಪೇಟೆಯ ಪರಿಸರಕ್ಕೆ ಹೊಂದಿಕೊಂಡವನಾಗಿಯೂ ಕಂಡುಬಂದ. ಯಾಕೆಂದರೆ ಆ ನಾಲ್ಕು ಓಣಿಯ (ನಾಲ್ಕು ಲೇನ್ ನ) ಅಂಥಾ ದೊಡ್ಡ ವರ್ತುಲ ರಸ್ತೆಯನ್ನೂ ಆತ ನಮ್ಮ ಜತೆಯಲ್ಲಿಯೇ ನಾವು ನಿಂತಲ್ಲಿ ನಿಂತು ನಾವು ವೇಗವಾಗಿ ಹೆಜ್ಜೆ ಹಾಕಿದಲ್ಲಿ ತಾನೂ ಓಡಿ ತನ್ನ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ. ದಿನಾಲೂ ನಾವು ಗಮನಿಸಿದಂತೆ ಹಲಕೆಲವರು ಅಲ್ಲಿ ತಮ್ಮ ತಮ್ಮ ಶ್ವಾನರಾಯರನ್ನೂ  ಕರೆದು ಕೊಂಡು ಬರುತ್ತಿದ್ದರು, ಆಗೆಲ್ಲಾ ಯಾರು ಯಾರನ್ನು ಕರೆ ತಂದರು ಅನ್ನುವುದು ಸರಿಯಾಗಿ ಗೊತ್ತಾಗುವುದು ಕಷ್ಟ ಸಾಧ್ಯ.ಆದರೆ ಇವತ್ತು ಅವರೆಲ್ಲಾ ನಮ್ಮನ್ನೂ ಅವರ ಜತೆ ಸೇರಿಸಿಕೊಂಡ ಹಾಗೆ ಕಂಡು ಬಂತು. ನಾವು ನಮ್ಮ ವಿಹಾರವನ್ನು ಮುಗಿಸಿ ನಮ್ಮ ಕಾಲನಿಯ ಮುಖ್ಯ ಗೇಟಿನವರೆಗೆ ಬರುವಷ್ಟರಲ್ಲಿ ಅವನ ಎಷ್ಟೋ ಅಪರಿಚಿತ ಬಂಧುಗಳನ್ನೂ ಅವರ ಕಾಕ ಅಲ್ಲಲ್ಲ ಶ್ವಾನ ದೃಷ್ಟಿಗಳನ್ನೂ ತಪ್ಪಿಸಲೂ ಅನೇಕಾನೇಕ ಉಪಾಯಗಳನ್ನೂ, ಬುದ್ದಿಯನ್ನೂ, ಖರ್ಚು ಮಾಡಬೇಕಾಗಿ ಬಂತು. ಮುಖ್ಯ ಗೇಟಿನ ಕಾವಲಿನವ ನಮ್ಮಿಬ್ಬರನ್ನೂ ಒಂದು ಜಾತಿ ಶ್ವಾನ ಮಹಾಶಯನನ್ನೂ ನೋಡಿ ಗಲಿಬಿಲಿಗೊಂಡು ಅವನನ್ನು ನಮ್ಮಿಂದ ಬೇರೆ ಮಾಡಿಸಲೋಸುಗ ಕೈಯಲ್ಲಿದ್ದ ದೊಣ್ಣೆಯಿಂದ ಅಟ್ಟಿಸಲು ನೋಡಿದ, ನನಗೆ ಆಗ ಅದ್ಯಾವ್ ಮಂಕು ಕವಿದಿತ್ತೋ ಕಾಣೆ ನನ್ನವಳ ಕಣ್ಣ ನೋಟವನ್ನು ತಪ್ಪಾಗಿ ಅರ್ಥೈಸಿಕೊಂಡು, ಆತನನ್ನು ತಡೆದೆ. ಈತ ನಿರಾಯಾಸವಾಗಿ ನಮ್ಮ ಜತೆಯೇ ಬಂದು ಲಿಫ಼್ಟ್ ನೊಳಕ್ಕೆ ತೂರಿಕೊಂಡ.
.
ಈ ಬೆಳಗಿನ ವಿಹಾರ ಇದೆಯಲ್ಲಾ, ಅದು ನಮ್ಮ ಎಷ್ಟೋ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಷ್ಕಾರ ಮಾಡಿದೆ. ಬೆಳೆದ ಮತ್ತು ಬೆಳೆಯುತ್ತಿರುವ ಮಕ್ಕಳ ಇದಿರಲ್ಲಿ ಮಾತಾಡಲಾಗದ,ಪರಿಷ್ಕರಿಸಲಾಗದ ಎಷ್ಟೋ ವಿಷಯಯಗಳನ್ನು ನಾವು ಅಲ್ಲಿಯೇ ಅಂದರೆ ನಮ್ಮ ವಿಹಾರದಲ್ಲಿಯೇ ಪರಿಹರಿಸಿ, ನಿರ್ಧಾರಗಳನ್ನೂ ತೆಗೆದುಕೊಂಡದ್ದಿದೆ.ಪರ ಊರಿನಲ್ಲಿ ನಮ್ಮಭಾಷೆಯಾಡುವಾಗಿನ ಗಮ್ಮತ್ತೇ ಬೇರೆ. ಹಲಕೆಲವೊಮ್ಮೆ ನಾವು ನಮ್ಮ ಪಕ್ಕದಲ್ಲಿಯೆ ಹೋಗುತ್ತಿರುವ ಬೊಕ್ಕ ತಲೆಯ ಮಹಾಶಯರ, ಅಥವಾ ಅವರ ಪಕ್ಕದಲ್ಲಿಯೇ ವಯ್ಯಾರದಿಂದ ನಡೆಯುತ್ತಿರುವ ಲಲನಾಮಣಿಗಳ!!(ಅರೆರೆ ನೀವೇನೇನೋ ಊಹಿಸಬೇಡಿ! ನಿಜವಾಗಿಯೂ ಅದಲ್ಲ, ನಾನು ಪಕ್ಕಾ ಸಸ್ಯಾಹಾರಿ.) ಉಡುಪುಗಳ ಬಗ್ಗೆಯೂ ಮಾತನಾಡುತ್ತಾ ಹೋಗುತ್ತಿರುತ್ತೇವೆ, ಮತ್ತು ಅವರ ಇದಿರಲ್ಲೇ ಅವರ ಬಗೆಗೇ ಏನು ಹೇಳಿದರೂ ಗೊತ್ತಾಗುವುದಿಲ್ಲವಲ್ಲ. ಒಂದೊಮ್ಮೆ ಗೊತ್ತಾದರೂ ಸಹ ಕನ್ನಡದವರಾದರೆ ಒಂದೇ ಊರಿನವರು ಸಿಕ್ಕ ಖುಷಿಯಲ್ಲಿ ಅವರಾಗಲೇ ಮರೆತು ಬಿಟ್ಟಿರುತ್ತಾರೆ.  ಇಲ್ಲಿ ಒಂದು ಉದಾಹರಣೆ ನೀಡಲೇ ಬೇಕಾಗುತ್ತದೆ.ಹೀಗೇ ನಾವು ಹೋಗುತ್ತಿರುವಾಗ ಒಮ್ಮೆ ದಿನಾ ನೋಡುತ್ತಿರುವ ಮುದುಕರೊಬ್ಬರು ಕೇಳಿಯೇ ಬಿಟ್ಟಿದ್ದರು, “ಏನಮ್ಮಾ ನೀವೂ ಮತ್ತು ಇವರೂ ಒಂದೇ ಆಫೀಸಿನವರಾ ಅಂತ” ಅಂದರೆ ಇದರ ಅರ್ಥ ಇಬ್ಬರೂ ಒಂದೇ ಆಫೀಸಿನವರಾದರೆ ಮಾತ್ರ ಒಟ್ಟಿಗೆ ಹೋಗಬೇಕು.ಅಲ್ಲದೇ ಬೇರೆ ಯಾರೂ ಹೀಗೆ ಒಟ್ಟಿಗೇ ನಡೆಯುವುದು ದೆಹಲಿಯ ಜಾಯಮಾನಕ್ಕೆ ವಗ್ಗದು.
ಮಕ್ಕಳಿಬ್ಬರೂ ಈ ಹೊಸ ಸದಸ್ಯನನ್ನು ಯಾವ ಪರಿ ಹೊಂದಿಕೊಂಡರೆಂದರೆ ದೊಡ್ಡವ ಅನು “ಪಪ್ಪಾ ಈತ ಜರ್ಮನ್ ಪೊಮೆರಿಯನ್ ಇರಬಹುದು ಅದಕ್ಕೇ ಈತನ ಗಾತ್ರ ದೊಡ್ಡದೇ ಇದೆ ಈತನ ಹೆಸರು ಯಾವುದಿರಬಹುದು ಅಂತ ಯೋಚಿಸಿದರೆ, ಸಣ್ಣವ ರಾಗು ಶ್ಯಾಂಪು ತೆಗೆದುಕೊಂಡು ಬಂದು ನನಗೆ ಕೊಟ್ಟುಪಪ್ಪಾ ನೋಡಿ ಎಷ್ಟೋ ದಿನಗಳಿಂದ ಈತ ಸ್ನಾನಾನೇ ಮಾಡಿಲ್ಲ ಅಂತ ಕಾಣ್ಸತ್ತೆ ತಗೋಳ್ಳಿ ಮಾಡ್ಸಿ” ಅಂದ. ಈತನೋ ತನ್ನದೇ ಮನೆ ಎಂಬಂತೆ ಠೀವಿಯಿಂದ ಆಗಲೇ ಮನೆಯೆಲ್ಲವನ್ನೂ ಸರ್ವೇ ಮಾಡಿ ತನ್ನ ಪರಿಮಳದಿಂದ ಇಡೀ ಮನೆಯನ್ನೇ ಧನ್ಯವಾಗಿಸಿದ. ನನ್ನವಳು ನನ್ನ ಕಡೆಗೂಮ್ಮೆ ಪ್ರಶ್ನಾತೀತ ನೋಟವನ್ನೆಸೆದಳು.

ಲೂಯಿಯನ್ನು ಮೊದಲ ದಿನ ಕಟ್ಟಿ ಹಾಕಿದ್ದೆವು ಯಾಕೆಂದರೆ ಈತ ಸೀದಾ ಮನೆಯ ಇದಿರಿನ ವಿಶಾಲ ಜಾಗದಲ್ಲಿ ಅಡುತ್ತಿರುವ ಎಲ್ಲಾ ಮಕ್ಕಳಲ್ಲಿ ಒಂದು ರೀತಿಯ ಭಯದ ವಾತಾವರಣವನ್ನೇ ಸೃಷ್ಟಿಸಿದ್ದ, ಆತನೇನೋ ಮಕ್ಕಳೊಡನೆ ಆಡಲು ಹೋಗುತ್ತಿದ್ದನಾದ್ರೂ ಈತನ( ನಾಯಿ ಭಾಷೆ) ಆ ಹಿಂದಿಯ ಮಕ್ಕಳಿಗೆಲ್ಲಿ ಅರ್ಥವಾಗಬೇಕು, ಅವು ಈತನ ಅಬ್ಬರ ನೋಡಿ ಕೀಈಈಈಈಈಈ ಅಂತ ಚೀರಿ ಓಡಿದರೆ ಈತನಿಗೆ ಅದೇನೋ ಭಾರೀ ಮಜವಾಗಿ ಅಲ್ಲಿದ್ದ ಎಲ್ಲಾ ಚಿಣ್ಣರನ್ನೂ ಓಡಿಸತೊಡಗಿದ, ಈ ಚೀರಾಟ ನೋಡಿ ನನ್ನ ಇಬ್ಬರೂ ಮಕ್ಕಳು ಅವನನ್ನು ಎಳತಂದು ಲಿಫ಼್ಟನ ಹತ್ತಿರ ಕಟ್ಟಿ ಹಾಕಿದರು.

Angry manತಡೆಯಿರಿ, ನಾವು ಸಂತೆಗೆ ಹೋದ ಕಥೆ ಏನಾಯ್ತು ಅಂದಿರಾ ? ಅಲ್ಲಿಗೇ ಬರ್ತಾ ಇದ್ದೇನೆ, ಬಿಡಿ ನಾವು ಸಂತೆಯಿಂದ ಬಂದ ಮೇಲೆ ಹಾಗೆ ಏನೂ ವಿಶೇಷ ಘಟಿಸಲಿಲ್ಲ. ಸುಮಾರು ಒಂಬತ್ತು ಘಂಟೆಗೆ ನನ ಮೊಬೈಲ್ ಗುಣುಗುಣಿಸಿತು. ಎತ್ತಿದರೆ ನಮ್ಮ ಕಾಲೊನಿಯ ಪಕ್ಕದಲ್ಲೇ ಸಿಂಗಲ್ ಆಗಿ ವಾಸಿಸುತ್ತಿರುವ ನನ್ನ ಸ್ನೇಹಿತ ಕುಲಕರ್ಣಿಯವರದು. ಕೆಂಡಾಮಂಡಲವಾಗಿದ್ದಾರೆ, ಪ್ರಾಣಿ. ಏನಾಯ್ತು ಎಂದರೆ, ನಾವು ಸಂತೆಗೆ ಹೋಗಿದ್ದಾಗ ಇವರು ನಮ್ಮ ಮನೆಗೆ ಬಂದಿದ್ದಾರೆ. ಲಿಫ಼್ಟ್ ಕೆಟ್ಟು ಹೋಗಿರೋದರಿಂದ ಕಷ್ಟಪಟ್ಟು ಮೆಟ್ಟಲೇರಿ ಬಂದಿದ್ದಾರೆ. ಈತನ ವಿಷಯ ಅವರಿಗೆ ಗೊತ್ತಿಲ್ಲ, ಅವರ ವಿಷಯ ಈತನಿಗೆ ಗೊತ್ತಿಲ್ಲ, ಈಮೂರು ದಿನಗಳಲ್ಲಿ ಲೂಯಿ ಮನೆಗೆ ಬರುವ ಎಲ್ಲರನ್ನೂ ಬಹು ಚೆನ್ನಾಗಿ ಪರಿಶೀಲಿಸಿ ನೆನಪಿನಲ್ಲಿಟ್ಟಿದ್ದಾನೆ. ನಾವು ಹೊರಗೆ ಹೋದ ಕೂಡಲೇ ಈತ ನಮ್ಮ ಮನೆಯ ಕೆಳಗಿನ ಮೂರನೆಯ  ಮನೆಯಲ್ಲಿದ್ದು ಕಾಯುತ್ತಿದ್ದಾನೆ.ಕುಲಕರ್ಣಿಯವರು ನಡೆದು ಬರುವಾಗ ಈತ, ತಾನು ಈ ಮನೆಗೆ  ಬಂದ ಮೇಲೆ,ಇದುವರೆವಿಗೂ ಬರದೇ ಇದ್ದ ಕುಲಕರ್ಣಿಯವರನ್ನು ನೋಡಿ ಈ ಅಪರಿಚಿತ ವ್ಯಕ್ತಿಯ ಮೇಲೆ ಈತನಿಗೆ ಸಂಶಯಬಂದು ಅವರನ್ನೇ ಹಿಂಬಾಲಿಸಿ ಬಂದಿದ್ದಾನೆ.ಅವರು ಮನೆಯ ಕರೆಘಂಟೆ ಒತ್ತುವ ತನಕ ಸುಮ್ಮನಿದ್ದ ಈತ ಒಮ್ಮೆಗೇ ಅವರ ಕಾಲಿನ ಮೀನ ಕಂಡಕ್ಕೆ ಬಾಯಿ ಹಾಕಿದ್ದಾನೆ. ಇಷ್ಟು ಹೇಳುವಾಗ ಅವರ ಕೋಪ ಪುನಃ ತಾರಕಕ್ಕೇರಿತು. ಅಲ್ಲಾರೀ ನಿಮ್ಮ ಮನೆ ನಾಯಿ, ಮನೆ ಹಾಳಾಗ, ನಿಮಗೇನು ಬುದ್ದಿ ಇದೆಯೇನ್ರೀ, ಇಷ್ಟು ದೊಡ್ಡ ನಾಯಿ ಯಾರಾದ್ರೂ ಸಾಕ್ತಾರಾ? ನಾಯಿ ತಂದ ವಿಷಯ ನನಗೆ ಹೇಳಲು ನಿಮಗೇನು ನಾಯಿ ಕಡಿದಿತ್ತಾ? ನಿಮ್ಮ ಅಜ್ಜಿಗೆ, ನಿಮಗೆ, ಎಲ್ಲರಿಗೂ ಒಟ್ಟಿಗೇ ಆ ನಾಯಿ ಕಡೀಲಿ,” ಅವರು ಈ ಪಾಟಿ ಬಯ್ಯುವಾಗ (ಫ಼ೋನಿನಲ್ಲಿ) ನನಗೆ ನಗೆ ಉಕ್ಕುಕ್ಕಿ ಬಂತು.ಜೋರಾಗಿ ನಗುವ ಹಾಗೆಯೂ ಇಲ್ಲ, ಅವರಿಗೆ ಗೊತ್ತಾದರೆ ನನ್ನ, ನನ್ನವರ ಏಳೇಳು ಜನ್ಮ ಜಾಲಾಡಿಯಾರು, ಅನ್ನಿಸಿತು. ಅಲ್ಲ ಇದಕ್ಕೆ ಯಾರನ್ನು ದೂರಿ ಏನು ಪ್ರಯೋಜನ, ಅವರು ಬರುವ ಮೊದಲು ನನಗೆ ಈಗ ಮಾಡಿದ ಹಾಗೆ ಫ಼ೋನ್ ಮಾಡಿದ್ದರೆ?. ಲೂಯಿಯನ್ನ ನೋಡಿದರೆ ಅದು ಬಾಲ ಅಲ್ಲಾಡಿಸುತ್ತಾ ತಾನು ಮಾಡಿದ್ದರ ಬಗ್ಗೆ ನನ್ನಿಂದ ಪ್ರಶಂಸೆ ನಿರೀಕ್ಷಿಸುತ್ತಿದೆ ಅನ್ನಿಸಿತು.ಇದರ ಬಗ್ಗೆ ನಾನು ಅವರನ್ನು ಸಾರಿ ಕೇಳಿದೆ.

ಲೂಯಿಯನ್ನು ನೋಡಿದಾಗಲೆಲ್ಲಾ ನನಗೆ ತಂದೆಯವರು ಹೇಳುತ್ತಿದ್ದಮಾತು ನೆನಪಿಗೆ ಬರುತ್ತದೆ.ಋಣಾನುಬಂಧ ರೂಪೇಣಾಂ ಪಶು ಪತ್ನಿ ಸುತ ಆಲಯ”.ಇದು ಎಲ್ಲಿಯದ್ದೋ ಇದಕ್ಕೂ ನಮಗೂ ಎಂತಹಾ ಸಂಬಂಧ? ಅದಕ್ಕೆ ಹಾಕಿದ ಅನ್ನ ಮಾತ್ರದ ಕೃತಜ್ಞತೆ ಇದಾಗಿರಲಿಕ್ಕಿಲ್ಲ.ಒಂದು ದಿನ ಲೂಯಿ ಒಂದು ವಿಚಿತ್ರ ಸ್ವರದಲ್ಲಿ ಕೂಗಿಕೊಂಡಾಗ, ಇವಳು ಗಾಬರಿಯಾಗಿ ಕಟ್ಟಿದ್ದ ಹಗ್ಗ ಬಿಚ್ಚಿದಳು. ಲೂಯಿ ಸೀದಾ ಅಡುಗೆ ಮನೆಗೆ ಓಡಿ ಅಲ್ಲಿ ಎಲ್ಲಾ ಕಡೆ ಮೂಸುತ್ತಾ ಪುನಃ ವಿಚಿತ್ರ ಧ್ವನಿ ಹೊರಡಿಸತೊಡಗಿತಂತೆ.ಇವಳು ಗಾಬರಿಯಾಗಿ ನನಗೆ ಫ಼ೋನಾಯಿಸಿದಳು. ನಾನು ಆಫ಼ೀಸಿನಿಂದ ಓಡಿ ಬಂದೆ, ಹುಡುಕಿ ನೋಡಿದಾಗ ಹಾವೊಂದು ಕಂಡು ಬಂತು. ಪ್ರಾಯಶಃ ಇಲಿಯನ್ನು ಅರಸಿ ಪೈಪಿನ ಮುಖಾಂತರ ಮೇಲೆ ಬಂದಿತ್ತದು, ಮತ್ತು ನಮ್ಮ ಲೂಯಿಯ ಸೂಕ್ಷ್ಮ ಗೃಹಿಕೆಗೆ ಸಿಕ್ಕಿ ಅದು ನಮಗೆ ಮುನ್ಸೂಚನೆ ನೀಡಿತು.ಅದು ನಮಗೆ ತಿಳಿಸದಿದ್ದರೆ? ..ನನ್ನವಳ ಲೂಯಿಯ ಬಗೆಗಿನ ಅಭಿಪ್ರಾಯ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದ್ದ ಹಾಗೆ ಕಂಡಿತು.

ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಅದು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು ಬಂದಮೇಲೆ ಇದೆಲ್ಲಾ ಕೇಳಿದ ನಮಗೆ ಹೃದಯ ತುಂಬಿ ಬಂದರೆ ಲೂಯಿ ನಮ್ಮನ್ನೆಲ್ಲಾ ನೋಡಿ ತುಂಬಾನೇ ಸಂತಸ ಪಟ್ಟ.ಲೂಯಿಗೆ ನಮ್ಮ ಹಾಗೇ ಸಸ್ಯಾಹಾರ್ ಅಂದರೆ ತುಂಬಾ ಇಷ್ಟ. ಅದರಲ್ಲೂ ನಾನ್, ಐಸ್ ಕ್ರೀಮ್ ಎಂದರೆ ಪಂಚ ಪ್ರಾಣ.ನಾವು ಎಷ್ಟೇ ಅಡಗಿಸಿ ತಂದರೂ ಅವನಿಗೆ ತಿಳಿದು,ಅವ್ನಿಗೆ ಸಿಗುವವರೆಗೆ ಕಿರುಚಾಡುತ್ತಿರುತ್ತಾನೆ.ಮಕ್ಕಳಂತೂ ಅವನನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ, ಆದರೆ ಅದು ಪ್ರೀತಿಗಷ್ಟೇ ಸೀಮಿತ.
ಹೀಗಿರುವಾಗ ಬಂದೆರಗಿದ ಎರಡು ತರಹದ ವಿಪತ್ತು ನನ್ನನ್ನು ದೀರ್ಘ ಚಿಂತೆಯಲ್ಲಿ ಮುಳುಗಿಸಿತು. ಮೊದಲನೆಯದು, ನಮ್ಮ ಈ ಹೊಸ ಸದಸ್ಯನ ಆಗಮನ ಜಾತಕ, ಕುಂಡಲಿಗಳನ್ನು ನಂಬುವ ಮನೆತನದವರಾದ ನಮ್ಮ ಮನೆಯವರಲ್ಲಿ,ನಡೆದು ಬಂದ ಹಿಂದಿನ ಅಚಾರದ ಪ್ರಕಾರ, ಹೊರಗಿನಿಂದ ಬಂದ ನಾಯಿತಿಥಿ ಮಾಡಿಸುತ್ತದೆ, ಬಂದ ಬೆಕ್ಕು ಮದುವೆ ಮಾಡಿಸುತ್ತೆ ಅಂತ ಪ್ರಚಾರವಿದ್ದು, ನನ್ನ ತಾಯಿಯಿಂದ ಅವಳ ಸೊಸೆ ಅರ್ಥಾತ್ ನನ್ನ ಧರ್ಮಪತ್ನಿಗೆ ಎಲ್ಲಿಂದಲೋ ಬಂದ ಈ ಲೂಯಿಯನ್ನು ಇಟ್ಟುಕೊಳ್ಳಲೇ ಬಾರದು ಅಂತ ಅಪ್ಪಣೆಯಾಯಿತು, ಅಲ್ಲದೇ ಇದಕ್ಕೆ ಇಂಬು ಕೊಡುವಂತೆ ನನ್ನ ಸಹ ಧರ್ಮಿಣಿಯ ತಾಯಿಯವರಿಂದ ಕೂಡಾ ಇದೇ ವಿಷಯ ರವಾನೆಯಾಗಿ, ಲೂಯಿಯ ಕೊರಳಿಗೆ ಯಮ ಪಾಶವಾಗಿ ಪರಿಣಮಿಸಿತು.ಜತೆಯಲ್ಲೇ ನನಗೆ ಬೆಂಗಳೂರಿಗೆ ವರ್ಗಾವಣೆಯಾದ ವಿಷಯವೂ ಬರಸಿಡಿಲಿನಂತೆ ಬಂದೊರಗಿತು.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಡಿಮೆಯೆಂದರೆ ನಾಲ್ಕೈದು ತಿಂಗಳಾದರೂ ನಾನು ಒಬ್ಬನೇ ಬೆಂಗಳೂರಿನಲ್ಲಿರಬೇಕಾಗಿರುವುದರಿಂದ ಲೂಯಿಯ ಗತಿ? ಅವನು ನಮ್ಮನ್ನು ಎಷ್ಟು ಹೊಂದಿಕೊಂಡಿದ್ದಾನೆಂದರೆ ಮನೆಯವನೇ ಆಗಿದ್ದಾನೆ, ಆದರೆ ಗೃಹಮಂತ್ರಿ ಸುತರಾಂ ಒಪ್ಪಲಿಲ್ಲ, ಮನೆಯಲ್ಲಿ ಮೊದಲೇ ಇದ್ದ ಎರಡು ಪ್ರಾಣಿಗಳನ್ನೇ ತುಂಬಾ ಕಷ್ಟದಲ್ಲಿ ಸಾಕುತ್ತಿರುವಾಗ, ಇನ್ನೊಂದು ತಾಪತ್ರಯ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟಳು.ಅದು ನಿಜವೂ ಕೂಡಾ. ನನ್ನ ವರ್ಗಾವಣೆಯ ಟೆನ್ಷನ್, ಮಕ್ಕಳ ಓದು,ಮನೆಯ ಉಸ್ತುವಾರಿ,ಸಾಗಾಟದ ಪ್ಯಾಕಿಂಗ್, ಇವೆಲ್ಲದರ ಜತೆ ಲೂಯಿಯ ಹೊಸತೊಂದು ಸಮಸ್ಯೆ ಬೇಡವೇ ಬೇಡ,ಎಂದುದದರಿಂದ ನಾನು ಬೆಂಗಳೂರಿಗೆ ಹೋಗುವುದರೊಳಗಾಗಿ ಲೂಯಿಯನ್ನು ಹೇಗಾದರೂ, ಎಲ್ಲಾದರೂ ಸರಿಯಾದ ಜಾಗದಲ್ಲಿ ಸೇರಿಸುವ ಹೊಸದೊಂದು ಜವಾಬ್ದಾರಿ ನನ್ನ ಹೆಗಲಿಗೆ ಜೋತು ಬಿದ್ದಿತು.

ಪ್ರತಿದಿನ ನನಗಂತೂ ಆಫ಼ೀಸಿನಲ್ಲಿ ಅದರದ್ದೇ ವಿಷಯ, ಲೂಯಿಯ ಲೀಲಾಮೃತ ಹೇಳಿ ಎಂದೂ ದಣಿವೆನ್ನಿಸಲಿಲ್ಲ, ನನ್ನ ಸೆಕ್ಷನ್ ಸಹೋದ್ಯೋಗಿ ಆಶಾಲತ ಎಲ್ಲಾ ವಿಷಯ ಕೇಳಿ ಲೂಯಿಯನ್ನು ಯಾರ ಹತ್ತಿರ ಬಿಟ್ಟರೆಒಳ್ಳೆಯದು ಎಂದು ಪ್ಲಾನ್ ಮಾಡುತ್ತಿದ್ದರು.ಅಗೊಮ್ಮೆ ಇದೆಲ್ಲಾ ಕೇಳುತ್ತಿದ್ದ ತ್ರಿವೇಣಿ ಬಾಯಿ ಬಂದು “ಲೂಯಿಯನ್ನು ನನಗೆ ಕೊಡಿಸಾರ್, ನಾನು ಬಡವಳು ನಿಜನನ್ನ ಮನೆಯಲ್ಲಿ ನಾನೂ ನನ್ನ ಮಗ ಇಬ್ಬರೇ ಇರುವುದು, ನೀವು ಲೂಯಿಯನ್ನ ನನಗೆ ಕೊಟ್ಟರೆ ಮೂರು ಜನರಾದ ಹಾಗೆ ಆಯ್ತು. ನನಗೂ ಕಳ್ಳ ಕಾಕರ ಭಯ ತಪ್ಪಿದ ಹಾಗೆ ಆಯ್ತು, ಆಲೋಚನೆ ಮಾಡಿ ಹೇಳಿ ಸಾರ್” ಎಂದಳು. ನೋಡೋಣ, ಆಲೋಚನೆ ಮಾಡಿ ಹೇಳ್ತೇನೆ” ಎಂದೆ. ನಿಜ ಹೇಳಬೇಕೆಂದರೆ ಲೂಯಿಯನ್ನು ಅವಳಿಗೆ ಕೊಡಲು ಆಗ ನನ್ನ ಮನಸ್ಸೊಪ್ಪಲಿಲ್ಲ.

ಮೊದಲು, ನನ್ನ ಖಾಸಾ ದೋಸ್ತ್ ಅಗಿದ್ದ ಪರಶುರಾಮನಲ್ಲಿ ಇದನ್ನು ಹೇಳಿದಾಗ ಆತ ಚುಟಕಿ ಹಾಕೋದ್ರಲ್ಲಿ ಅದನ್ನು ಬಗೆಹರಿಸಿ ಬಿಡುವೆ, ನಿನ್ನ ನಾಯಿಯನ್ನು ನಾನೇ ಸಾಕುತ್ತೇನೆ ಎಂದಂದು ತನ್ನ ಕಾರಿನಲ್ಲಿ ಕೂಡಲೇ ನನ್ನ ಮನೆಗೆ ಹೊರಟ.ಕಷ್ಟಪಟ್ಟು ಲೂಯಿಯನ್ನು ಹಿಡಿದು ಕೆಳತಂದೆ. ಅದನ್ನು ನೋಡಿದ ಪರಶು ರಾಮ ಗಾಬರಿಯಲ್ಲಿ ” ನಾನೇನೋ ಇದನ್ನು ಸಣ್ಣ ಮರಿಯೆಂದುಕೊಂಡಿದ್ದೆ,ಇದು ದೊಡ್ಡ ನಾಯಿ” ಎಂದ. ನಾನು “ಇದು ದೊಡ್ಡದಲ್ಲ, ನೋಡಿ”ಎಂದು ಲೂಯಿಯನ್ನು ಎರಡೂ ಕೈಯ್ಯಲ್ಲಿಎತ್ತಿಕೊಂಡು (ಕುರಿಮರಿ ಎತ್ತುವ ಹಾಗೆ) ತೋರಿಸಿದೆ.ಲೂಯಿಗೇ ಇಷ್ಟವಾದ ಬಟರ್ ತುಂಡು ಕೊಟ್ಟು ಅವನಿಗೆ ಸ್ವಲ್ಪಾಭ್ಯಾಸ ಮಾಡಿಸಲು ಹೇಳಿದೆ, ಆತ ಕೊಟ್ಟ ಬಟರ್ ತಿಂದ ಲೂಯಿ ಅಷ್ಟು ಹೊತ್ತು ಅವನ ಆಜ್ಞಾಕಾರಿಯಾದ. ಆದರೆ ಆತ ಯಾವಾಗ ಇವನನ್ನು ಎತ್ತಿಕೊಳ್ಳಲು ಹೋದನೋ ತನ್ನ ಎಲ್ಲಾ ಹಲ್ಲುಗಳನ್ನೂ ಒಮ್ಮೆಲೇ ವಿಚಿತ್ರ ರೀತಿಯಲ್ಲಿ ತೋರಿಸಿಬಿಟ್ಟ.ಲೂಯಿಯ ತೆರೆದ ಬಾಯಿ ನೋಡಿದ ಪರಶುರಾಮ ಇಲಿಯಮರಿಯಾಗಿಬಿಟ್ಟ. ಹೇಗೆ ಬಂದಿದ್ದನೋ ಅವನ ಮಾರುತಿ ಕಾರಿನಲ್ಲಿ ಹಾಗೆಯೇ ವಾಪಾಸು ಹೋದ, ಸುತರಾಮ್ ಒಪ್ಪದೇ, ಆಫ಼ೀಸಿನಲ್ಲಿ ನನ್ನ ಬಂಗ್ಲೆಯಲ್ಲಿ ತುಂಬ ಚೆನ್ನಗಿ ಇರ್ತಾನೆ ಅವ, ಅವನಿಗೆ ಏನೂ ಕಮ್ಮಿಯಾಗದು, ನೋಡು ನಿನಗೆ ನಾನು ನಾಯಿ ಸಾಕುವುದು ಹೇಗೆ ಅಂತ ತೋರಿಸಿ ಕೊಡ್ತೇನೆ, ಎಂದೆಲ್ಲಾ ಹೇಳಿದ್ದ, ಆದರೆ ಈಗ ಹಾಗೆಯೇ ಹೊರಟು ಹೋಗಿದ್ದ. ನನ್ನ ಮೊದಲನೆಯ ಪ್ರಯತ್ನ ಫ಼ಲಿಸಲಿಲ್ಲ. ಮರನೆಯ ದಿನ ಈತ ಆಫೀಸಿನಲ್ಲಿ ಏನು ಹೇಳಿದನೋ ಮತ್ತಿಬ್ಬರು ದಿನಾ ನನ್ನ ಮುಖ ನೋಡದೇ, ನನ್ನ ಹತ್ತಿರ ಮಾತನಾಡದಿದ್ದರೆ ಬೆಳಗೇ ಆಗಲ್ಲ ಅಂತಿದ್ದವರು, ಆ ದಿನದಿಂದ ನನ್ನ ಹತ್ತಿರವೂ ಬರಲಿಲ್ಲ.

ಇನ್ನು ಬೇರೆ ಸೆಕ್ಷನಿನಲ್ಲಿದ್ದ ವೀಣಾ ರಾಣಿಯನ್ನು ಸಂಪರ್ಕಿಸಿದೆ. ಇವಳೂ ನಾನೂ ಮೊದಲೊಮ್ಮೆ ಒಟ್ಟಿಗೆ ಕೆಲಸ ಮಾಡಿದವರು,  ಹಿಂದಿನ ಒಂದು ವಾರದಿಂದ ಅವಳು ರಜೆಯಲ್ಲಿದ್ದಳು.ನನ್ನ ಸಂಸಾರದ ಹಾಗೇ ಅವಳದ್ದೂ ಸಣ್ಣ ಸಂಸಾರವೇ. ಲೂಯಿಯ ವಿಷಯ ನನ್ನಿಂದ ಕೇಳಿ, ಅದರ ವಿಡಿಯೋ ಚಿತ್ರವನ್ನು ನನ್ನ ಮೊಬಾಯಿಲ್ ನಲ್ಲಿ ನೋಡಿ, ಇವಳು ಆಸೆ ಪಟ್ಟಳು.ಅವಳ ಯಜಮಾನರು ಪ್ರೈವೇಟ್ ಕಂಪೆನಿಯಲ್ಲಿದ್ದಾರೆ. “ನಿಜ ಹೇಳಬೇಕೆಂದರೆ ನಮಗೂ ಇಂತಹಾ ಒಂದು ಒಳ್ಳೆಯ ಬುದ್ದಿವಂತ ನಾಯಿಯ ಅವಶ್ಯಕಥೆ ತುಂಬಾ ದಿವಸಗಳಿಂದ ಇತ್ತು, ದಿನದಲ್ಲಿಯಾದರೆ ನಮ್ಮ ಮನೆಯಲ್ಲಿ ನನ್ನ ಮುದಿ ಅತ್ತೆ ಮಾತ್ರ ಇರುತ್ತಾರೆ, ಕಾಂಪೌಂಡಿನ ಒಳಗೆ ನಾಯಿ ಇದ್ದರೆ ನಮಗೂ ಒಂದು ಧೈರ್ಯ. ನಾಳೆನೇ ನನ್ನ ಯಜಮಾನರೊಂದಿಗೆನಮ್ಮ ಹೊಸ ಸ್ಯಾಂಟ್ರೋ ಕಾರಲ್ಲಿ ಬಂದು ನಿಮ್ಮ ನಾಯಿಯನ್ನು ಕೊಂಡೊಯ್ಯುತ್ತೇವೆ” ಎಂದಳು. ನಾನು ಪರಶು ರಾಮನ ವಿಷಯ ಸೂಚ್ಯವಾಗಿ ತಿಳಿಸಿದೆ, ಅದಕ್ಕವಳು “ಹಾಗೆ ಎಲ್ಲರಿಗೂ ನಾಯಿ ಸಾಕಲು ಬರೋದಿಲ್ಲ ಇವರೇ, ನೋಡಿ, ನಾನು ನಿಮ್ಮ ನಾಯಿಯನ್ನು ಹೇಗೆ ಸಾಕ್ತೇನೆ, ನಿಮ್ಮ ನೆನಪೂ ಅದಕ್ಕೆ ಬರಲಿಕ್ಕಿಲ್ಲ” ಎನ್ನುತ್ತಾ ತನ್ನ ಜಂಬದ ಚೀಲ ತೆಗೆದುಕೊಂಡು ಒಂದು ರೀತಿಯಲ್ಲಿ ತಿರುವುತ್ತಾ ಹೊರಟು ಹೋದಳು ಮಹಾರಾಯಿತಿ. ನಾನು ನಿಜವಾಗಿಯೂ ಸಂತಸ ಪಟ್ಟೆ.

ಅಂತೂ ಸಂಡೇ ಹೇಳಿದಂತೆ ವೀಣಾ ರಾಣಿ ಮತ್ತು ಅವಳ ಯಜಮಾನರೂ ತಮ್ಮ ಸಾಂಟ್ರೋ ಕಾರಲ್ಲಿ ಬಂದರು ಸರಿ ಸುಮಾರು ಆರು ಘಂಟೆ ತಡವಾಗಿ, ನಾನು ಅವರಿಗಾಗಿ ಕಾದೂ ಕಾದೂ ಸುಸ್ತಾಗಿ ಮಾರ್ಕೇಟಿಗೆ ಹೋಗಿ ನಾಲ್ಕು ಘಂಟೆ ಶಾಪಿಂಗ್ ಮಾಡಿ ಮಧ್ಯಾಹ್ನ ಊಟ ಮುಗಿಸಿದರೂ ಅವರ ಸುಳಿವಿರದೇ ಬೇರೆ ಕೆಲಸಕ್ಕಾಗಿ ಹೋಗಿದ್ದೆ.ಎಂದಿನ ಹಾಗೆ ಕಾಫ಼ೀ ಲಘು ತಿಂಡಿ ಕೊಟ್ಟ ನನ್ನವಳು ಲೂಯಿಯನ್ನು ಅವರಿಗೆ ಪರಿಚಯಿಸಿಕೊಟ್ಟಳು.ನಿಜವಾದ ಬೀಳ್ಕೊಡುಗೆಯ ಸಮಯ ಬಂತು. ಈಸಾರಿ ನಾನೂ ಅವಳೂ ಒಂದು ಪ್ಲಾನ್ ಮಾಡಿದ್ದೆವು. ಅದರಂತೆ ಲೂಯಿಯನ್ನು ನನ್ನವಳು ಹೊರ ಕೆಳ ತಂದು ಅವನ ಪ್ರೀತಿಯ ತಿಂಡಿಯನ್ನು ಕೊಡುತ್ತಾ ತಾನು ಕಾರಲ್ಲಿ ಬಂದು ಕೂತಳು, ಅವಳ ಜತೆ ಲೂಯಿ ತಾನೂ ಹತ್ತಿ ಕುಳಿತಿತು, ಅಷ್ಟರಲ್ಲಿ ವೀಣಾ ರಾಣಿ ಯಜಮಾನರು ತಮ್ಮಲ್ಲಿದ್ದ ( ನಾವು ಮೊದಲೇ ಕೊಟ್ಟಿದ್ದ) ಲೂಯಿ ಬಿಸ್ಕಿಟ್ ಕೊಟ್ಟಾಗ ಆತ ಅದನ್ನು ಖುಷಿಯಲ್ಲಿ ಸವಿಯುತ್ತ ಕುಳಿತ, ನನ್ನವಳು ಪಕ್ಕದಿಂದ ಇಳಿದದ್ದೂ ಕಾರು ಹೊರಟಿದ್ದೂ ಅವನಿಗೆ ತಿಳಿಯಲೇ ಇಲ್ಲ.ನಾನು  ಮನೆಗೆ ಬಂದಾಗ ವಿಷಯವೆಲ್ಲ ತಿಳಿದದ್ದು. ಆದರೆ ಕೊನೆಯಲ್ಲಿ ಅವಳಂದ ಒಂದು ಮಾತು ನನ್ನನ್ನು ಅಲ್ಲಾಡಿಸಿಬಿಟ್ಟಿತು, ಕಾರು ತಿರುವಿನಲ್ಲಿ ಮರೆಯಾಗುವ ಮುನ್ನ ಲೂಯಿ ಘಾಬರಿಯಿಂದೆಂಬಂತೆ ತನ್ನ ಮುಂದಿನ ಕಾಲಲ್ಲಿ ಕಾರಿನ ಹಿಂದಿನ ಗ್ಲಾಸನ್ನು ಕೆರೆಯುತ್ತಲಿದ್ದನಂತೆ. ಖುಷಿಯಾದರೂ ಯಾಕೋ ಮನದಲ್ಲಿ ದುಗುಡ ಮನೆ ಮಾಡಿತ್ತು.

ಇದಾಗಿ ಎರಡು ದಿನ ಕಳೆದಿರಬಹುದು, ನಮ್ಮ ಬೆಳಗಿನ ತಿಂಡಿಯ ಸಮಯ, ಎಲ್ಲೋ ಕ್ಷೀಣವಾಗಿ ಗೆಜ್ಜೆಯ ಶಬ್ದ ಕೇಳಿಸಿತು. ಮುಚ್ಚಿದ ಬಾಗಿಲು ನೋಡಿ ಇದು ನನ್ನ ಭ್ರಮೆಯೇನೋ ಎಂದುಕೊಳ್ಳುವಷ್ಟರಲ್ಲಿ ಇನ್ನೊಮ್ಮೆ ಜೋರಾದ ಗೆಜ್ಜೆಯ ಸದ್ದೂ ಗಲಾಟೆಯೂ ಕೇಳಿಸಿತು,ನಾನು ತಡೆಯದೇ ಬಾಗಿಲು ಒಮ್ಮೆಲೇ ತೆರೆದೆ, ಏನಾಯಿತೆಂದು ಅರಿವಾಗುವಷ್ಟರಲ್ಲಿ ನನ್ನಮೈಮೇಲೆಯೇ ಆತ ಹಾರಿದ್ದ, ನಾನು ಕೆಳ ಬಗ್ಗಿದರೆ ಆತನನ್ನ ಮುಖವೆಲ್ಲಾ ತನ್ನ ನಾಲಿಗೆಯಿಂದ ಒದ್ದೆ ಮಾಡಿ ಬಿಟ್ಟ.ಎರಡು ಕೈಯಲ್ಲಿ ಆತನನ್ನೆತ್ತಿಕೊಂಡು ಸಂತೈಸಿದೆ, ಕಂಪಿಸುತ್ತಿದ್ದ ಆತ ತುಂಬಾ ದೂರದಿಂದ ಓಡಿ ಬಂದವರ ಹಾಗೆ ಉಸಿರು ಬಿಡುತ್ತಿದ್ದ, ಪಾದವೆಲ್ಲಾ ರಕ್ತಮಯ, ಅವನನ್ನು ಶುಶ್ರೂಷೆ ಮಾಡಿ ತಿಂಡಿ ತಿನ್ನಿಸಿ ನಾನು ಆಫೀಸಿಗೆ ನಡೆದೆ.

Brown dogವೀಣಾರಾಣಿ ನಿಮ್ಮ ನಾಯಿ ಹಾಗೆ ಹೀಗೆ ಎಂತೆಲ್ಲ ಲೂಯಿ ಮಾಡಿದ ಕಾರುಭಾರವನ್ನು ಸಾವಿರದೊಂದು ತಪ್ಪನ್ನಾಗಿ ಮಾಡಿ ಬೈದಳು.ಅದಕ್ಕೆ ತಾನು ಕಾರಲ್ಲೇ ತಂದು ಮನೆ ಬಾಗಿಲಿಗೆ ಬಿಟ್ಟೆ ಎಂದಳು, ಲೂಯಿಯ ಕಾಲಿನ ರಕ್ತ ಸತ್ಯ ಹೇಳುತ್ತಿತ್ತು. ಸರಿ ಬಿಡಿ, ಎಲ್ಲಾ ಪ್ರಾಣಿಗಳೂ ಎಲ್ಲರ ಜತೆಯೂ ಹೊಂದಿಕೊಳ್ಳಲಾರವು” ಎಂದೆ.”ಅದಕ್ಕೆ ನಿಮ್ಮ ನಾಯಿ ನಿಮ್ಮ ಜತೆಯೇ ಸರಿ, ಅಲೇ ಇರಲಿ ಬಿಡಿ” ಎಂದಳು.

ಅದೇ ದಿನ ಸಂಜೆ ತ್ರಿವೇಣಿ ಬಾಯಿ ಪುನಃ ನನ್ನ ಹತ್ತಿರ ಬಂದಳು.” ಸಾರ್ ದಯವಿಟ್ಟು ನನ್ನ ಹತ್ತಿರ ಲೂಯಿಯನ್ನು ಬಿಡಿ,ನಾನೂ ನನ್ನ ಮಗನೂ ಅದನ್ನು ಚೆನ್ನಾಗಿ ನೋಡಿಕೊಳುತ್ತೇವೆ, ಅವನಿಗೂ ಪ್ರಾಣಿಯೆಂದರೆ ತುಂಬಾ ಇಷ್ಟ, ಈಗಲೇ ಲೂಯಿ ಮನೆಗೆ ಬಂದರೆ ಏನೆಲ್ಲಾ ತರಬೇಕು, ಮಾಡಬೇಕು ಎಂತ ಪಟ್ಟಿ ಮಾಡಿ ಇಟ್ಟಿದ್ದಾನೆ ಆತ” ಎಂದಳು. ನಾನೆಂದೆ” ಅಮ್ಮಾ ನನ್ನ ಲೂಯಿ ಒಂದು ಪ್ರಾಣಿ ಅಲ್ಲ, ಅದರ ಅರಿವಳಿಕೆ ಯಾವುದೇ ಮನುಷ್ಯರಿಗಿಂತ ಕಡಿಮೆ ಇಲ್ಲ,ಅದು ಈಗಾಗಲೇ ನನಗೆ ಮನವರಿಕೆಯಾಗಿದೆ, ನಿನಗೆ ಅಷ್ಟು ಇಷ್ಟ ಆದರೆ, ಸ್ವಲ್ಪ ದಿನ ಇಟ್ಟುಕೊಂಡು ನೋಡು ಆತ ಅಲ್ಲಿ ಇದ್ದರೆ ನನಗೇನೂ ಅಭ್ಯಂತರವಿಲ್ಲ” ಎಂದೆ.”ಹಾಗಾದರೆ ಮಾರನೆಯ ದಿನವೇ ತಾನು ಬರುತ್ತೇನೆ” ಎಂದಳು ತ್ರಿವೇಣಿ ಬಾಯಿಎಲ್ಲಿಲ್ಲದ ಖುಶಿಯಿಂದ, ಅಲ್ಲಿ ಸಂತಸ ಜಿನುಗುತ್ತಿತ್ತು.

ಆ ದಿನ ಸಂಜೆ ಸಂಸಾರ ಸಮೇತ (ಅಂದರೆ ಲೂಯಿಯನ್ನೊಳಗೊಂಡು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?) ಹತ್ತಿರದ ಪಾರ್ಕ್ ನಲ್ಲಿ ತುಂಬಾನೇ ಸಂತಸದಿಂದ ಕಾಲ ಕಳೆದೆವು.ನಾನು ಲೂಯಿಯ ಮುಖವನ್ನು ಎರಡೂ ಕೈಯಲ್ಲಿ ಹಿಡಿದು ಮುದ್ದಿಸುತ್ತಾ ಹೇಳಿದೆ.” ನೋಡಯ್ಯಾ ಲೂಯಿ,ನಮ್ಮ ನಿನ್ನ ಋಣ ಇನ್ನೆಷ್ಟು ದಿನವೋ ಗೊತ್ತಿಲ್ಲ,ನಾನೂ ಬೆಂಗಳೂರಿಗೆ ಹೋದರೆ ನಿನ್ನನ್ನು ಸುತ್ತಾಡಿಸಲು ಯಜಮಾನತಿಯಿಂದಂತೂ ಆಗಲಿಕ್ಕಿಲ್ಲ, ಮಕ್ಕಳು ಅವರ ಕೆಲ್ಸ ಮಾಡಲೂ ಜನ ಬೇಕೆನ್ನುತ್ತಾರೆ, ಆಚೀಚೆಯ ಮನೆಯವರನ್ನು ನೀನು ಹೆದರಿಸುತ್ತಾ ಇರುವೆ, ನಿನ್ನ ಮೊದಲಿನ ಯಜಮಾನರ ಪತ್ತೆಯೇ ಇಲ್ಲ, ಹೀಗಿರುವಾಗ ನಿನ್ನ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ, ನೋಡು ನಾಳೆ ನಿನ್ನನ್ನು ಕರೆದೊಯ್ಯಲು ಹೊಸ ಯಜಮಾನತಿಯೊಬ್ಬಳು ಬರುತ್ತಿದ್ದಾಳೆ, ಅವಳ ಹತ್ತಿರ ಹಣ ಬಂಗ್ಲೆ ಕಾರು ಇಲ್ಲ, ಅದಿದ್ದವರೊಟ್ಟಿಗೆ ನಿನಗೆ ಸರಿ ಬರಲ್ಲ, ನಿನ್ನನ್ನು ಅವಳು ಪೀತಿಯಿಂದ ನೋಡಿಕೊಂಡಾಳು ಎಂಬ ನಂಬಿಕೆ ನನಗಿದೆ, ಮತ್ತೆ ಇದೆಲ್ಲಾ ಕೆಲವೇ ತಿಂಗಳು ಮಾತ್ರ, ಇನ್ನು ನಿನ್ನ ಇಷ್ಟ” ಎಂದೆ. ನನ್ನ ಮಾತು ಅರ್ಥವಾಯಿತೋ ಎಂಬಂತೆ ಲೂಯಿ ನನ್ನ ಮುಖ ನೆಕ್ಕಿದ,ಅವನ ಮೈದದವಿ ಅಪ್ಪಿಕೊಂಡೆ, ನಮ್ಮೆಲ್ಲರ ಕಣ್ಣುಗಳೂ ತೇವಗೊಂಡವು

 

– ಬೆಳ್ಳಾಲ ಗೋಪಿನಾಥ ರಾವ್

Follow

Get every new post on this blog delivered to your Inbox.

Join other followers: