ಮೈಮನಗಳ ಸುಳಿಯಲ್ಲಿ ಸಿಲುಕದಿರಲಿ ಯೌವ್ವನ

Spread the love
Share Button
Lakshmisha J Hegade1

ಲಕ್ಷ್ಮೀಶ ಜೆ.ಹೆಗಡೆ

           

ಟೀನೇಜ್ ಹಂತಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬರ ದೇಹದಲ್ಲಿ ಮನಸ್ಸಿನಲ್ಲಿ ಹತ್ತು ಹಲವು ಬದಲಾವಣೆಗಳಾಗಲು ಆರಂಭವಾಗುತ್ತದೆ.ಬಾಲ್ಯವನ್ನು ಕಳೆದು ಯೌವ್ವನಾವಸ್ಥೆಗೆ ದಾಟುವ ಸಂಕ್ರಮಣ ಕಾಲವದು.ಇಂಥ ಟೀನೇಜ್ ನಲ್ಲಿಯೇ ಎಲ್ಲರೂ ತಮ್ಮ ವಿದ್ಯಾರ್ಥಿ ಜೀವನದ ಅತೀ ಮಹತ್ವದ ಘಟ್ಟದಲ್ಲಿರುತ್ತಾರೆ.ಅಂದರೆ ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿಗಳಲ್ಲಿ ಓದುತ್ತಿರುತ್ತಾರೆ.ಇಂಥ ಸಂದರ್ಭದಲ್ಲಿ ಯೌವ್ವನಾವಸ್ಥೆಗೆ ಕಾಲಿಟ್ಟಾಗ ದೇಹದಲ್ಲಿ ಆಗುವ ಬದಲಾವಣೆಗಳಿಂತಲೂ ಹೆಚ್ಚು ಬದಲಾವಣೆಗಳು ಮನಸ್ಸಿನಲ್ಲಿ ಆಗುತ್ತವೆ.ಯಾವಾಗಲೂ ದೇಹ ಒಂದನ್ನು ಬಯಸಿದರೆ ಮನಸ್ಸು ಇನ್ನೊಂದನ್ನು ಬಯಸುವುದು ಎಲ್ಲರಲ್ಲಿಯೂ ಸಾಮಾನ್ಯವಾದರೂ ಟೀನೇಜ್ ನಲ್ಲಿ ಈ ದೇಹ ಮತ್ತು ಮನಸ್ಸುಗಳ ನಡುವೆ ಅತೀ ಹೆಚ್ಚಾಗಿ ಜಟಾಪಟಿ ಏರ್ಪಡುತ್ತದೆ.

ಯೌವ್ವನಕ್ಕೆ ಕಾಲಿಡುವಾಗ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳಾಗಿ ಈ ಹಾರ್ಮೋನ್ ಗಳೇ ನಮ್ಮ ದೇಹವನ್ನು,ಮನಸ್ಸನ್ನು,ವ್ಯಕ್ತಿತ್ವವನ್ನು ಬದಲಾವಣೆಗೆ ಒಡ್ಡುತ್ತವೆ.ಇಂಥ ಟೀನೇಜ್ ಬಂದಾಗ ಎಲ್ಲರಿಗೂ ತಾವು ಸರ್ವಸ್ವತಂತ್ರರು,ಏನು ಬೇಕಾದರೂ ಮಾಡಬಲ್ಲೆವು,ಸಿಕ್ಕಿರುವ ಪ್ರತಿ ಘಳಿಗೆಯನ್ನೂ ಎಂಜಾಯ್ ಮಾಡುತ್ತಾ ಖುಷಿ ಖುಷಿಯಾಗಿ ಕಳೆಯಬೇಕು ಅನ್ನಿಸುತ್ತದೆ.ಹೆಚ್ಚು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಲು,ಹೆಚ್ಚಾಗಿ ಬಾಹ್ಯ ಜಗತ್ತಿಗೆ ತಮ್ಮನ್ನು ತಾವು ಚೆನ್ನಾಗಿ ಪ್ರೆಸೆಂಟ್ ಮಾಡಿಕೊಳ್ಳಲು ಟೀನೇಜರ್ಸ್ ಕಾತರರಾಗಿರುತ್ತಾರೆ.ಈ ಸಂದರ್ಭದಲ್ಲಿ ದೊರೆಯುವ ಸ್ನೇಹಿತರು,ಸಿಗುವ ಅವಕಾಶಗಳು ಒಬ್ಬರ ಬದುಕನ್ನೇ ಬದಲಿಸಿಬಿಡಬಹುದು. ಒಂದು ಒಳ್ಳೆಯ ನಿರ್ಧಾರದಿಂದ ಪ್ರತಿ ಕ್ಷಣವೂ ಆನಂದದಿಂದಿರುವಂತಾಗಬಹುದು ಅಥವಾ ಬದುಕಿಡೀ ಪಶ್ಚಾತ್ತಾಪ ಪಡುವಂತೆಯೂ ಆಗಬಹುದು.

ಯೌವ್ವನದಲ್ಲಿ ಮೈ ಮನಸ್ಸುಗಳ ನಡುವೆ ನಡೆಯುವ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಬಹಳ ಕಷ್ಟ.”ಬಾ ಮಚ್ಚಾ ಏನೂ ಆಗೋಲ್ಲ,ಒಂದು ಧಮ್ ಹೊಡಿ ಸಾಕು” ಎಂದು ಫ್ರೆಂಡ್ ಒಬ್ಬ ಸಿಗರೇಟ್ ಕೈಯಲ್ಲಿ ಹಿಡಿದು ಒತ್ತಾಯಿಸುತ್ತಾನೆ.ಈಗಲ್ಲದೇ ಇನ್ಯಾವಾಗ,ಸುಮ್ನೇ ಟ್ರೈ ಮಾಡಿಬಿಡೋಣ.ಒಂದು ರೌಂಡ್ ಸಿಗರೇಟ್ ಸೇದೋಣ ಅಂತ ಅನ್ನಿಸುತ್ತದೆ.ಆದರೆ ಅದೇ ಸಮಯದಲ್ಲಿ ಒಳಗಿನ ಮನಸ್ಸು ಅಲರಾಂ ಹೊಡೆದುಕೊಳ್ಳಲು ಶುರು ಮಾಡುತ್ತದೆ.“ನೀನು ತಪ್ಪು ಹೆಜ್ಜೆ ಇಡುತ್ತಿದ್ದೀಯ,ಮುಂದೆ ಅದೇ ನಿನಗೆ ಚಟವಾಗಬಹುದು,ಓದಿನಲ್ಲಿ ಹಿಂದೆ ಬೀಳಬಹುದು.ನಿನ್ನ ಆರೋಗ್ಯವೂ ಹಾಳು ಜೊತೆಗೆ ಅದಕ್ಕಾಗಿ ಅನಾವಶ್ಯಕ ಹಣವನ್ನು ಪೋಲು ಮಾಡುತ್ತೀಯ” ಎಂದು ನಮ್ಮ ಮನಸ್ಸು ನಮಗೆ ಮಾತ್ರ ಕೇಳುವಂತೆ ಹೇಳುತ್ತದೆ.ಇಂಥ ಸಂದರ್ಭದಲ್ಲಿ ಮನಸ್ಸಿನ ಮಾತು ಕೇಳುವುದೋ ಅಥವಾ ಏನಾದರಾಗಲಿ ಸಿಕ್ಕ ಅವಕಾಶವನ್ನು ಎಂಜಾಯ್ ಮಾಡಬೇಕು ಅಂತ ನಮಗೆ ಅನ್ನಿಸಿದಂತೆ ಮಾಡುವುದೋ?ಇಂಥ ದ್ವಂದ್ವಕ್ಕೆ ಸಿಲುಕಿ ಅನೇಕ ಟೀನೇಜ್ ಜನರು ಮೈಮನಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.ಕೆಲವರು ಆ ಸುಳಿಯಿಂದ ಹೊರಬರಲಾರದೇ ಒದ್ದಾಡುತ್ತಾರೆ.ಆದರೆ ಇಂಥ ಸಂದರ್ಭದಲ್ಲಿ ಯುವಕ ಯುವತಿಯರು ಎಂಥ ಹೆಜ್ಜೆ ಇಡುತ್ತಾರೆ ಎಂಬುದರ ಮೇಲೆ ಅವರ ಭವಿತವ್ಯ ನಿರ್ಧರಿತವಾಗುತ್ತದೆ.

ನನ್ನ ಫ್ರೆಂಡ್ 2000 ರೂಪಾಯಿಯ ಬ್ರಾಂಡೆಡ್ ಬಟ್ಟೆ ಖರೀದಿಸಿ ಮೆರೆಯುತ್ತಿದ್ದಾಳೆ.ನಾನೂ ಇಂಥ ಬಟ್ಟೆ ಧರಿಸಬೇಕೆಂದು ಹುಡುಗಿಗೆ ಅನ್ನಿಸುತ್ತದೆ.ಆ ಡ್ರೆಸ್ ಗೆ ಆಗುವಷ್ಟು ಹಣ ಮನೆಯಲ್ಲಿ ಸಿಗುವುದಿಲ್ಲ.ಮನಸ್ಸು “ನಿನ್ನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಆಲೋಚಿಸು.ಬ್ರಾಂಡೆಡ್ ಅಲ್ಲದೇ ಹೋದರೂ ಚೆನ್ನಾಗಿರುವಂಥ ಬಟ್ಟೆಗಳನ್ನೇ ಮನೆಯಲ್ಲಿ ಅಪ್ಪ ಕೊಡಿಸಿದ್ದಾರೆ.ಅದನ್ನು ಹಾಕಿಕೊಂಡರೆ ನಿನಗೇನೂ ನಷ್ಟವಿಲ್ಲ.ಬ್ರಾಂಡೆಡ್ ಬಟ್ಟೆಯೇ ಬೇಕೆಂದು ಹಾತೊರೆಯಬೇಡ” ಎಂದು ಹೇಳಬಹುದು.ಆದರೆ ಮನುಷ್ಯರ ಆಸೆಗಳು ಹಲವಾರು ಬಾರಿ ಮನದ ಮಾತನ್ನು ಕೇಳುವುದೇ ಇಲ್ಲ.ಮತ್ತೆ ದೇಹ ಮತ್ತು ಮನಸ್ಸುಗಳ ನಡುವೆ ಯುದ್ಧ ಆರಂಭವಾಗುತ್ತದೆ.ಮನಸ್ಸಿನ ಮಾತು ಕೇಳುವುದೋ ಅಥವಾ ದೇಹ ಏನನ್ನು ಬಯಸುತ್ತದೋ ಹಾಗೆ ನಡೆದುಕೊಳ್ಳುವುದೋ ಎಂಬ ದ್ವಂದ್ವದಲ್ಲಿ ಹುಡುಗಿ ಬೀಳುತ್ತಾಳೆ.ಕೆಲ ಸಮೀಕ್ಷೆಗಳು ಹೇಳುವಂತೆ ಅನೇಕ ಹುಡುಗಿಯರು ಇಂಥ ಸಣ್ಣ ಸಣ್ಣ ವಿಷಯಕ್ಕೇ ತಲೆಕೆಡಿಸಿಕೊಂಡು ಡಿಪ್ರೆಷನ್ ಗೆ ಒಳಗಾಗುತ್ತಾರಂತೆ.

love

ಯೌವ್ವನದಲ್ಲಿ ಜಗತ್ತೆಲ್ಲಾ ಸುಂದರವಾಗಿ ಕಾಣುತ್ತದಂತೆ.ಅನೇಕರ ಮನದ ಮೊಗಿಲಲ್ಲಿ ಮೊಹಬ್ಬತ್ ಎಂಬ ಮೋಡ ಕಟ್ಟಿ ಪ್ರೇಮಧಾರೆಯಾಗುವ ಸಮಯ.ಆದರೆ ಈ ಹಂತದಲ್ಲಿ ಆಗುವುದು ನಿಜವಾದ ಪ್ರೀತಿಯೋ ಅಥವಾ ದೈಹಿಕ ಆಕರ್ಷಣೆಯೋ ಎಂಬುದು ಇದುವರೆಗೂ ಅರ್ಥವಾಗಿಲ್ಲ.ಸುಮ್ಮನೇ ದೈಹಿಕ ಆಕರ್ಷಣೆಯೇ ಆಗಿದ್ದರೆ ಅದು ಕ್ಷಣಿಕ.ಪ್ರೀತಿ ಅರಸಿ ಬಂದ ಜೀವಿಗಳು ಕೆಲಕಾಲದ ನಂತರ ಉತ್ತರ ದಕ್ಷಿಣ ಧ್ರುವಗಳಾಗುತ್ತಾರೆ.ಆದರೆ ಅದಕ್ಕೂ ಮೊದಲು ಪ್ರೀತಿ ಮೊಳಕೆಯೊಡೆಯುವಾಗಲೂ ಹುಡುಗ ಹುಡುಗಿ ಇಬ್ಬರಲ್ಲಿಯೂ ಮೈಮನಗಳ ನಡುವೆ ಘರ್ಷಣೆ ಏರ್ಪಡುತ್ತದೆ.ಪ್ರೀತಿ ಕುರುಡು ಅನ್ನುತ್ತಾರೆ.ಹಾಗೆಯೇ ಲವ್ ನಲ್ಲಿ ಬಿದ್ದವರು ಎಲ್ಲವನ್ನೂ ಮರೆಯುತ್ತಾರೆ,ತಮ್ಮದೇ ಸ್ವಚ್ಛಂದ ಲೋಕದಲ್ಲಿ ವಿಹರಿಸುತ್ತಾರೆ ಎನ್ನುವವರೂ ಇದ್ದಾರೆ.ಆದರೆ ಅಂಥ ಹದಿಹರೆಯದ ಪ್ರೇಮಿಗಳ ಮನದಲ್ಲಿ ಸದಾ ಅವ್ಯಕ್ತ ಭಯ ಕಾಡುತ್ತಲೇ ಇರುತ್ತದೆ.ತಮ್ಮ ಪ್ರೀತಿ ಮುಂದೆ ಏನಾಗಬಹುದು,ಸಮಾಜ ನಮ್ಮ ಬೆಂಬಲಕ್ಕೆ ನಿಲ್ಲುವುದೋ ಇಲ್ಲವೋ ಇಂಥ ಹತ್ತು ಹಲವು ಆಲೋಚನೆಗಳು ಅವರಲ್ಲಿರುತ್ತದೆ.

“ಅವನ ಪ್ರೀತಿಯನ್ನು ಒಪ್ಪಿಕೋ,ಈಗ ನಿಷ್ಕಲ್ಮಶವಾದ ಮನಸ್ಸಿನಿಂದ ಆತನನ್ನು ಪ್ರೇಮಿಸಿ ಮುಂದೆ ಲೈಫ್ ನಲ್ಲಿ ಸೆಟ್ಲ್ ಆದ ಮೇಲೆ ಮದುವೆಯಾಗುವಂತೆ” ಎಂದು ಹುಡುಗಿಯ ಮನಸ್ಸು ಹೇಳಿದರೆ,”ಅವಳನ್ನು ಸಾಧ್ಯವಾದಷ್ಟು ಬೇಗ ಮದುವೆಯಾಗು,ಲೈಫ್ ಅನ್ನು ಎಂಜಾಯ್ ಮಾಡು ಆಮೇಲೇನಾಗುತ್ತದೆ ಎಂದು ಯೋಚಿಸಬೇಡ” ಎಂದು ಹುಡುಗನ ಮನಸ್ಸು ಆತನಿಗೆ ಹೇಳಬಹುದು.ಪ್ರೀತಿಯ ವಿಷಯದಲ್ಲಿ ಬಹುತೇಕ ಮನಸ್ಸು ನಮ್ಮ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತದೆ,ಆದರೆ ಬಾಹ್ಯಪ್ರಪಂಚದ ಭಯಕ್ಕೆ ನಾವು ನಮ್ಮ ಮನಸ್ಸಿಗೆ ವ್ಯತಿರಿಕ್ತವಾಗಿ ವರ್ತಿಸಬಹುದು.ಇಲ್ಲಿಯೂ ಅಷ್ಟೇ ಪ್ರೀತಿಯ ವಿಷಯದಲ್ಲಿ ಮೈಮನಗಳ ಸುಳಿಯಲ್ಲಿ ಸಿಲುಕಿ,ತಲೆ ಕೆಡಿಸಿಕೊಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹದಿಹರೆಯದವರು ಅನೇಕರಿದ್ದಾರೆ.

ಮೈಮನಗಳ ನಡುವಿನ ಹೋರಾಟದಲ್ಲಿ ಯಾವುದು ಗೆಲ್ಲಬೇಕು ಎಂಬುದನ್ನು ನಿರ್ಧರಿಸುವುದು ನಾವೇ.ಮೈ ಮನಸ್ಸು ಎರಡನ್ನೂ ನಮಗೆ ಬೇಕಾದಂತೆ ನಿಯಂತ್ರಿಸುವ ಸಾಮರ್ಥ್ಯವನ್ನು ದೇವರು ನಮಗೆ ಕೊಟ್ಟಿದ್ದಾನೆ.ಹಾಗಾಗಿ ಟೀನೇಜ್ ಹಂತದಲ್ಲಿ,ವಿದ್ಯಾರ್ಥಿ ಜೀವನದ ಬಹುಮುಖ್ಯ ಕಾಲಘಟ್ಟದಲ್ಲಿ ನಾವು ತೆಗೆದುಕೊಳ್ಳುವ ಒಂದೊಂದು  ನಿರ್ಧಾರವೂ ನಮ್ಮ ಬದುಕನ್ನು ನಿರ್ಣಯಿಸುತ್ತದೆ.ವಿದ್ಯೆ,ಉದ್ಯೋಗ,ಪ್ರೀತಿ,ಪ್ರೇಮ,ಸಂಸಾರ ಎಲ್ಲವೂ ಬದುಕಿಗಾಗಿ.ಜಗತ್ತಿನಲ್ಲಿ ಬದುಕಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.ಹಾಗಾಗಿ ಯೌವ್ವನದಲ್ಲಿ ಏನೋ ತೊಂದರೆ ಬಂತೆಂದು ಮೈಮನಗಳ ಸುಳಿಯಲ್ಲಿ ಸಿಲುಕಿ ಹೊರಬರಲಾರದೇ ಬದುಕನ್ನೇ ಅಂತ್ಯಗೊಳಿಸುವಂಥ ದುಸ್ಸಾಹಸಕ್ಕೆ ಕೈ ಹಾಕಬಾರದು.ಟೀನೇಜರ್ಸ್ ಸಮಾಜಕ್ಕೆ ಹೆಚ್ಚು ಹೆಚ್ಚಾಗಿ ತೆರೆದುಕೊಂಡರೆ,ಒಳ್ಳೊಳ್ಳೆ ಸ್ನೇಹಿತರನ್ನು ಸಂಪಾದಿಸಿಕೊಂಡರೆ, ಸರಿಯಾಗಿ ಆಲೋಚಿಸಿ ನಿರ್ಧಾರಗಳನ್ನು ಕೈಗೊಂಡರೆ ಮೈಮನಗಳ ಸುಳಿಯಲ್ಲಿ ಸಿಲುಕದೇ ಸುಂದರ ಬದುಕನ್ನು ತಮ್ಮದಾಗಿಸಿಕೊಳ್ಳಬಹುದು.

 

– ಲಕ್ಷ್ಮೀಶ ಜೆ.ಹೆಗಡೆ

3 Responses

  1. Nishkala Gorur says:

    ಯಲ್ಲರೂ ಇದನ್ನ ಅರ್ಥ ಮಾಡಿಕೊಂಡರೆ ಸಾಕು

  2. Jennifer Shawn says:

    Very true, well written

  3. Hema says:

    ಉತ್ತಮ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: