ಲಂಚೇಶ್ವರ ವ್ರತ ಕಥಾ..
ಗೊಂಡಾರಣ್ಯದಲ್ಲಿರುವ ತಮ್ಮ ಆಶ್ರಮದ ಬಳಿಯಿರುವ ವಟವೃಕ್ಷದ ಕೆಳಗೆ ಯೋಗನಿದ್ರೆಯಲ್ಲಿದ್ದ ಬ್ರಹ್ಮಾಂಡ ಮುನಿಗಳು ಸಹಜ ಸ್ಥಿತಿಗೆ ಮರಳಿದಾಗ ತಮ್ಮ ಸುತ್ತ ಶಿಷ್ಯವೃಂದವು ನೆರೆದಿರುವುದನ್ನು ಕಂಡು ಹರ್ಷಚಿತ್ತರಾದರು. ಆಶ್ರಮದಲ್ಲಿ ಕೆಲವೊಂದು ಸಲ ಶಿಷ್ಯರು ಹೀಗೆ ಜ್ಷಾನ ಪಿಪಾಸುಗಳಾಗಿ ತಮ್ಮಲ್ಲಿಯ ಸಮಸ್ಯೆಗೆ ಉತ್ತರವನ್ನು ದೊರಕಿಸಿಕೊಳ್ಳುವಲ್ಲಿ ವಿಫಲರಾಗಿ ಬ್ರಹ್ಮಾಂಡ ಮುನಿಗಳನ್ನು ಪ್ರಶ್ನಿಸುವುದುಂಟು. ಶಿಷ್ಯರನ್ನು ಉದ್ದೇಶಿಸಿ ಬ್ರಹ್ಮಾಂಡ ಮುನಿಗಳು ಇಂತೆಂದರು. ಎಲೈ ಶಿಷ್ಯರಿರಾ, ನಮ್ಮ ಈ ಗುರುಕುಲದಲ್ಲಿ ನಿಷ್ಣಾತರಾದ ಮಹಾಮಹೋಪಾಧ್ಯಾಯರಿದ್ದು, ನೀವೆಲ್ಲ ಅವರಿಂದ ವಿವಿಧ ವಿಷಯಗಳ ಬಗೆಗೆ ತಿಳಿದುಕೊಳ್ಳುತ್ತಿದ್ದರೂ ಗಹನವಾದ ವಿಷಯಗಳು ಬಂದಾಗ ನನ್ನ ಬಳಿ ಬಂದು ನನ್ನಿಂದ ಸುಜ್ಞಾನವನ್ನು ಪಡೆಯುತ್ತಿದ್ದೀರಿ. ಇಂದು ಅದ್ಯಾವ ವಿಷಯವು ನಿಮ್ಮನ್ನು ಕಾಡಿದೆ? ಎಂದೆನಲು ಶಿಷ್ಯವೃಂದವು ಪೂಜ್ಯರಿರಾ, ಈ ಬ್ರಹ್ಮಾಂಡವನ್ನು ಸಮಗ್ರವಾಗಿ ಅರಿತಿರುವುದರಿಂದಲೇ ನಿಮಗೆ ಬ್ರಹ್ಮಾಂಡ ಮುನಿಗಳೆಂಬ ಬಿರುದನ್ನು ಸಾಕ್ಷಾತ್ ಸೃಷ್ಟಿಕರ್ತನು ನೀಡಿರುವನು.
ಹೇ ಪರಮ ಗುರುವೇ, ಈ ಭೂಲೋಕದ ಜೀವನಕ್ರಮದಲ್ಲಿ ಅರ್ಥಸಂಚಯದ ವಿಷಯ ಬಂದಾಗ ಶ್ರೀಮಂತ, ಮಧ್ಯಮ ಮತ್ತು ಬಡವರೆಂಬ ಮೂರು ಪ್ರಭೇದಗಳು ನಮಗೆ ಕಂಡುಬರುತ್ತವೆ. ಸುಜ್ಞಾನಿಗಳು, ಸರ್ವಜ್ಞರು ತಾವೆಂದು ತಿಳಿದುಕೊಂಡು ಬದುಕಿನಲ್ಲಿ ಸುಖವನ್ನು ಹೊಂದಲು ಹಣವು ಬೇಕಾಗಿಲ್ಲ!
ಬಡತನವೆಂಬುದೊಂದು ಮಾನಸಿಕ ಸ್ಥಿತಿ! ಆತ್ಮತೃಪ್ತಿಯೊಂದಿದ್ದರೆ ಸಾಕು ಎಂದು ಬೊಗಳೆ ಬಿಡುತ್ತ ತಮ್ಮ ಶಿಷ್ಯಸಮೂಹದಿಂದ ಧನಕನಕಾದಿಗಳನ್ನು ಗುರುಕಾಣಿಕೆಯಾಗಿ ಪಡೆದ ಸ್ವಾಮೀಜಿಗಳು ತಾವು ಮಾತ್ರ ಸ್ವರ್ಗಸದೃಶ್ಯವಾದ ಆಶ್ರಮಗಳಲ್ಲಿ ವಾಸಿಸುತ್ತಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ತಾವು ಮಾತ್ರ ಈ ಪರ್ಣಕುಟೀರದಲ್ಲಿ ವಾಸಿಸುತ್ತಿದ್ದು, ತಾವೂ ಸುಖ ಪಡದೆ, ತಮ್ಮ ಶಿಷ್ಯವೃಂದಕ್ಕೂ ಸುಖಪಡಗೊಡದೆ ಇರುವುದು ನಮಗೆ ಬಹಳ ಚಿಂತೆಯನ್ನುಂಟು ಮಾಡಿದೆ. ನಮ್ಮೀ ಆಶ್ರಮವು ಕೂಡ ಭರತ ಖಂಡದ ಯಾವುದಾದರೊಂದು ಶ್ರೀಮಂತ ನಗರಕ್ಕೆ ಸ್ಥಳಾಂತಗೊಳಿಸುವ ಕುರಿತಂತೆ ತಾವು ಶೀಘ್ರ ನಿರ್ಣಯವನ್ನು ಕೈಗೊಳ್ಳಬೇಕೆಂಬುದೇ ನಮ್ಮ ವಿನಂತಿ.
ಹೇ ಪರಮ ಸುಜ್ಞಾನಿಯೇ, ಈ ಲೋಕದಲ್ಲಿ ಸದಾ ಅತೃಪ್ತಭಾವವನ್ನು ಹೊಂದಿ ಸ್ಥಾನಮಾನ ಗಳಿಕೆಗಾಗಿ ಹಾತೊರೆಯುವ ಶ್ರೀಮಂತವರ್ಗ, ವಸ್ತು ವಿಷಯಗಳೇ ಜೀವನದ ಸುಖ ಎಂದು ಭಾವಿಸಿರುವ ಮಧ್ಯಮವರ್ಗ ಹಾಗೂ ತಮ್ಮ ಭವಿಷ್ಯದ ಕನಸುಗಳನ್ನು ಕಾಣುತ್ತ ಬದುಕಿಗಾಗಿ ಹೋರಾಟ ನಡೆಸುತ್ತಿರುವ ಶ್ರಮಿಕ ವರ್ಗಗಳು ತಮ್ಮ ವಾಂಛಿತಗಳನ್ನು ಈಡೇರಿಸಿಕೊಂಡು ಧನಸಂಚಯ, ಅಧಿಕಾರ, ಸ್ಥಾನಮಾನಗಳನ್ನು ಪಡೆದು ಸಮೃದ್ಧಿಯಿಂದ ಬಾಳಲು ವ್ರತವಿಧಾನವೇನಾದರೂ ಇದೆಯೆ? ಅಂತಹ ವ್ರತವಿದ್ದಲ್ಲಿ ಆ ವ್ರತದ ಅಧಿದೇವತೆ ಯಾರು? ಈ ವ್ರತವನ್ನು ಯಾರು ಆಚರಿಸಬೇಕು? ಈ ವ್ರತಾಚರಣೆಯ ನಿಯಮಗಳೇನು? ಈ ಎಲ್ಲ ವಿಚಾರಗಳನ್ನು ನಮಗೆ ತಿಳಿಸಬೇಕು ಎಂದೆನಲಾಗಿ ಬ್ರಹ್ಮಾಂಡಮುನಿಗಳು ಶಿಷ್ಯವೃಂದಕ್ಕೆ ಇಂತೆಂದರು.
ಎಲೈ ಹಿಂಬಾಲಕರಿರಾ..!
ಈ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ನಿರ್ವಹಿಸಲು ತ್ರಿಮೂರ್ತಿಗಳಿದ್ದು ಅವರಲ್ಲಿ ಮಧ್ಯಮನಾದ ಮಹಾವಿಷ್ಣುವು ಭೂಲೋಕದಲ್ಲಿ ಧರ್ಮಸಂಸ್ಥಾಪನೆಗಾಗಿ ದಶಾವತಾರಗಳನ್ನು ಎತ್ತಿದ ಕಥೆಯು ನಿಮಗೆಲ್ಲ ತಿಳಿದೇ ಇದೆ. ಈ ಹಿಂದೆ ಈ ಅಧಿಕಾರವು ಮಹಾವಿಷ್ಣುವಿಗೆ ಮಾತ್ರವಿತ್ತು. ಆದರೆ ಇಂದು ಕಲಿಯುಗದಲ್ಲಿ ಈ ನಿಯಮವನ್ನು ಮೀರಿ ನಾನಾ ತರಹದ ದೇವತೆಗಳು ಅವತಾರವೆತ್ತಿ ಜನಪ್ರಿಯರಾಗುತ್ತಿದ್ದು ಮಹಾವಿಷ್ಣುವಿಗೆ ಅವತಾರಗಳನ್ನೆತ್ತಲು ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇರಲಿ, ಕಾಲಾಯ ತಸ್ಮೈ ನಮಃ.
ಕೆಲದಿನಗಳ ಹಿಂದೆ ತ್ರಿಲೋಕಸಂಚಾರಿಗಳಾದ ನಾರದರು ನಮ್ಮ ಆಶ್ರಮಕ್ಕೆ ಬಿಜಯಮಂಗೈದು ಈ ಕಲಿಯುಗದ ಜಂಬೂದ್ವೀಪದಲ್ಲಿನ ಭರತ ಖಂಡದಲ್ಲಿ ತ್ರೇತ ದ್ವಾಪರ ಯುಗಗಳ ಬಳಿಕ ಬಂದೊದಗಿದ ಕಲಿಯುಗದಲ್ಲಿ ಜನರು ತಮ್ಮ ಕಷ್ಟಕಾರ್ಪಣ್ಯಗಳ ನಿವಾರಣೆ, ಧನಸಂಚಯ, ಸ್ಥಾನಮಾನಾದಿಗಳ ಗಳಿಕೆಗಾಗಿ ಬಹುಶಕ್ತಿರೂಪಿಯಾದ ನೂತನ ದೈವವೊಂದರ ಆರಾಧನೆಯಲ್ಲಿ ತೊಡಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿರುವ ವಿಷಯವನ್ನು ನನಗರುಹಿ ಆ ದೈವದ ಮಹಿಮೆಯನ್ನು, ಅದರ ವ್ರತವಿಧಾನವನ್ನು ಅರುಹಿದ್ದಾರೆ. ಆ ದೈವದ ಮಹಿಮೆಯನ್ನು ಮತ್ತು ಅದರ ವ್ರತವಿಧಾನವನ್ನು ನಾರದರು ಅಪ್ಪಣೆ ಕೊಡಿಸಿದಂತೆ ನಾನೀಗ ನಿಮಗರುಹುವೆನು ಎಂದೆನಲು ಶಿಷ್ಯವರ್ಗವು ಜಯಜಯಾ, ಜಯಜಯಾ, ಧನ್ಯೋಸ್ಮಿ ಎಂದು ಬ್ರಹ್ಮಾಂಡ ಮುನಿಗಳಿಗೆ ವಂದಿಸಿ ವ್ರತವಿಧಾನವನ್ನು ಶ್ರದ್ಧೆಯಿಂದ ಆಲಿಸಿತು.
ಎಲೈ ಶಿಷ್ಯರಿರಾ,
ಕಲಿಯುಗದ ಜನರ ಕಷ್ಟಗಳನ್ನು ನಿವಾರಿಸಲು ಕಲಿಪುರುಷನು ಈ ದೈವವಾಗಿ ಭೂಲೋಕದಲ್ಲಿ ಅವತರಿಸಿದ್ದಾನೆ. ಈ ದೈವವು ಬಹುರೂಪಿಯಾಗಿ ಸರ್ವವ್ಯಾಪಿಯಾಗಿದ್ದು ಕ್ಷಿಪ್ರ ಫಲವನ್ನು ನೀಡುವಂತಹುದಾಗಿದೆ. ಭರತ ಖಂಡದಲ್ಲಿ ಈ ದೈವದ ಹೆಸರು ಬಹುಭಾಷಿಕರಿಂದ ಬಹುವಿಧವಾಗಿ ಕರೆಯಲ್ಪಡುತ್ತಿದ್ದು ಕರ್ಕೋಟಕ ರಾಜ್ಯದಲ್ಲಿ ಈ ದೈವವು ‘ಲಂಚೇಶ್ವರ‘ನೆಂಬ ಅಭಿದಾನದಿಂದ ಕರೆಯಲ್ಪಡುತ್ತಿದೆ. ಇದು ಕೆಲವೊಂದು ಸಲ ಖಾದಿ ಬಟ್ಟೆಯನ್ನು ಧರಿಸಿದರೆ, ಇನ್ನೊಮ್ಮೆ ಖಾಕಿ ಬಟ್ಟೆಯನ್ನು ಧರಿಸುವುದು. ಮತ್ತೊಂದು ಸಲ ಸೂಟುಬೂಟುಗಳನ್ನು ಧರಿಸಿ ಕಂಠ ಲಂಗೋಟಿಯನ್ನು ಬಿಗಿದುಕೊಂಡು ಇರಬಲ್ಲುದು.ಜವಾನನಿಂದ ಹಿಡಿದು ರಾಜನಾಗಿಯೂ, ಲೆಕ್ಕಿಗ, ಗುಮಾಸ್ತ, ವೈದ್ಯ, ನ್ಯಾಯಾಧೀಶ, ಶಾಸಕ, ಅಧಿಕಾರಿ ಮುಂತಾಗಿ ಬಹುರೂಪಿಯಾಗಿ ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಕಾಣಿಸಬಲ್ಲುದು. ಆಸ್ತಿಕರು, ಧರ್ಮಜ್ಞರು, ಆದರ್ಶವಂತರು ಮುಂತಾಗಿ ಈ ದೈವವನ್ನು ನೀಚ ದೈವವೆಂದು ಬಣ್ಣಿಸಿ ಇದರ ಆರಾಧನೆಯು ಸತ್ಯವಂತರಿಗೆ, ಪ್ರಾಮಾಣಿಕರಿಗೆ ತರವಾದುದಲ್ಲವೆಂದೂ, ಇದರ ಪೂಜೆ, ಆರಾಧನೆ, ವ್ರತಾಚರಣೆಗಳಿಂದ ಬಹುತರದ ಕ್ಲೇಶ, ಅಪಮಾನ, ಬಂಧನ, ಕಾರಾಗ್ರಹವಾಸ ಮುಂತಾದ ಅಶುಭ ಫಲಗಳು ಪ್ರಾಪ್ತವಾಗಿ ಮನುಷ್ಯನ ಅಧಃಪತನಕ್ಕೆ ಕಾರಣವಾಗುತ್ತವೆಂಬ ಸತ್ಯವನ್ನು ಸೋದಾಹರಣೆಯಾಗಿ ನೀಡುತ್ತಲಿದ್ದರೂ ಇದಾವುದನ್ನು ಲೆಕ್ಕಿಸದೆ ಕರ್ಕೋಟಕ ರಾಜ್ಯದ ಅಧಿಕಾರಿ ವರ್ಗ ಮತ್ತು ಪ್ರಜಾವರ್ಗವು ತಮ್ಮ ಬದುಕಿನ ಶ್ರೇಯೋಭಿವೃದ್ಧಿಗಾಗಿ ಈ ನೂತನ ದೈವವನ್ನು ಆರಾಧಿಸುತ್ತಿರುವುದು ನಿಜಕ್ಕೂ ಖೇದಕರವಾದ ವಿಷಯವೇ ಆಗಿದೆ ಎಂದು ಕ್ಷಣಕಾಲ ಬ್ರಹ್ಮಾಂಡ ಮುನಿಗಳು ತಮ್ಮ ನಯನದ್ವಯಗಳಿಂದ ವಿಷಾದಭಾಷ್ಪಗಳನ್ನು ಸುರಿಸಿ ಮೌನಿಗಳಾದರು.
ಬ್ರಹ್ಮಾಂಡ ಮುನಿಗಳ ಮುಂದೆ ಕುಳಿತ ಶಿಷ್ಯವರ್ಗವು ಓ ಮಹಾಮಹಿಮನೆ, ಹಳತೆಲ್ಲವನ್ನು ಮರೆತು ಹೊಸತನ್ನು ಸ್ವೀಕರಿಸುವುದು ಯುಗಧರ್ಮ ಎಂದೆನಿಸಿಕೊಳ್ಳುತ್ತದೆ. ಈ ಕಲಿಯುಗದಲ್ಲಿ ಭಕ್ತರ ಕಾಮಧೇನುವಾದ ಲಂಚೇಶ್ವರನ ಆರಾಧನೆಯು ಸ್ವಕಾರ್ಯ ಸಿದ್ಧಿಗಾಗಿ ಹೇಳಲ್ಪಟ್ಟಿದೆ ಎಂಬುದು ಜನಜನೀತವಾದ ವಿಚಾರವಾಗಿದೆ. ಪೂಜ್ಯರೇ, ಈ ದೈವದ ಆರಾಧನೆಯನ್ನು ಎಂತು ಮಾಡಬೇಕು? ಈ ದೈವದ ಆರಾಧನೆಗೆ ಶುಭ ದಿವಸ, ಮುಹೂರ್ತವೇನಾದರೂ ಇದೆಯೆ? ಈ ದೈವವನ್ನು ಎಲ್ಲಿ ಆರಾಧಿಸಬೇಕು? ವ್ರತ ಸಮಾಪ್ತಿಯ ನಂತರ ಈ ದೈವಕ್ಕೆ ಕಾಣಿಕೆಯಾಗಿ ಏನನ್ನು ಸಮರ್ಪಿಸಬೇಕು ಮುಂತಾದ ವಿಚಾರಗಳನ್ನು ಅಜ್ಞಾನಿಗಳಾದ ನಮಗೆ ಸವಿಸ್ತಾರವಾಗಿ ತಿಳಿಸಬೇಕು ಎಂದೆನಲು ಬ್ರಹ್ಮಾಂಡ ಮುನಿಗಳು ಇಂತೆಂದರು.
ಎಲೌ ಶಿಷ್ಯರಿರಾ, ಮುಂದೆ ನಾನು ಹೇಳುವ ಈ ದೈವದ ಆರಾಧನೆಯನ್ನು ಗಮನವಿಟ್ಟು ಕೇಳಿರಿ. ಈ ದೈವವು ಕಲಿಯುಗದಲ್ಲಿ ಕರ್ಕೋಟಕ ರಾಜ್ಯದಲ್ಲಿ ‘ಲಂಚೇಶ್ವರ’ ನೆಂಬ ಅಭಿಧಾನದಿಂದ ಮೆರೆಯುತ್ತಿದೆ. ಲಂಚೇಶ್ವರನೇ ಈ ವ್ರತದ ಪ್ರಧಾನ ದೇವತೆಯಾಗಿದ್ದು ಅವನ ಸುತ್ತ ನವಗ್ರಹೋಪಾದಿಗಳಾಗಿ ಅನ್ಯಉಪದೈವಗಳನ್ನು ಅವುಗಳ ಮಹಿಮೆ ಮತ್ತು ಶಕ್ತಿಗನುಗುಣವಾಗಿ ತೃಪ್ತಿಪಡಿಸಬೇಕಾಗುತ್ತದೆ. ಪೂರ್ಣಾಹುತಿಯನ್ನು ಮಾತ್ರ ಪ್ರಧಾನ ದೈವವಾದ ಲಂಚೇಶ್ವರನಿಗೆ ಕೊಡಬೇಕಾಗುತ್ತದೆ. ಈ ದೈವದ ಪೂರ್ಣಾಹುತಿಗಾಗಿ ನೀಡುವ ದ್ರವ್ಯವನ್ನು ಮತ್ತು ಮುಹೂರ್ತವನ್ನು ಈ ದೈವದ ಸುತ್ತ ಸುತ್ತುತ್ತಿರುವ ಚಿಲ್ಲರೆ ದೈವಗಳು ನಿರ್ಧರಿಸಿ ಯಜ್ಞದ ಕರ್ತೃವಿಗೆ ಅಶರೀರ ವಾಣಿಯ ಮೂಲಕ ತಿಳಿಸುತ್ತವೆ. ಈ ಯಜ್ಞದ ಪೂರ್ಣಾಹುತಿಯಲ್ಲಿ ವೈದಿಕ ಪದ್ಧತಿಯಲ್ಲಿ ನೀಡುವ ಆಜ್ಯ (ತುಪ್ಪ)ವು ವರ್ಜವಾಗಿದ್ದು ಈ ದೇವತೆಯನ್ನು ಸಂತೃಪ್ತಗೊಳಿಸಲು ಮದಿರಾದಿ ದ್ರವಗಳನ್ನು, ಬಾಡೂಟವನ್ನು ನೀಡಬಹುದಾಗಿದೆ. ನಂತರ ಈ ದೇವತೆಯನ್ನು ತೃಪ್ತಿಪಡಿಸಲು ಕಾಂಚನ ರೂಪದಲ್ಲಿ ಕಾಣಿಕೆಯನ್ನು ನೀಡಬೇಕು. ಪೂರ್ಣಾಹುತಿಯ ನಂತರ ರಾಜೋಪಚಾರ, ಪಂಚೋಪಚಾರಗಳಲ್ಲಿ ಪಲ್ಲಂಗ ಸೇವೆ, ಕಾಮಿನಿ ಸಂಗ ಸೇವೆಗಳನ್ನು ಹೆಚ್ಚಿನ ಫಲ ಪ್ರಾಪ್ತಿಗಾಗಿ ಮಾಡಿಸಬಹುದೆಂದು ಶ್ರೀ ಲಂಚೇಶ್ವರ ಪೂಜಾ ವಿಧಾನದಲ್ಲಿ ತಿಳಿಸಲಾಗಿದೆ. . ಪೂರ್ಣಾಹುತಿಯ ಸಂದರ್ಭದಲ್ಲಿ ಈ ದೈವಕ್ಕೆ ನೀಡುವ ಕಾಂಚನ ಸಮರ್ಪಣೆಯ ಶುಭಾವಸರದಲ್ಲಿ ಈ ದೈವವು ತನ್ನೆರಡು ಕೈಗಳಿಂದ ಕಾಂಚನ- ದ್ರವ್ಯಗಳನ್ನು ಸ್ವೀಕರಿಸುವ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದೆಂಬುದು ಇದನ್ನು ಆರಾಧಿಸಿದವರ ಪ್ರತ್ಯಕ್ಷ ಅನುಭವವಾಗಿದೆ.
ಇಷ್ಟಕ್ಕೆ ತೃಪ್ತವಾಗದ ಬ್ರಹ್ಮಾಂಡ ಮುನಿಗಳ ಶಿಷ್ಯವರ್ಗವು ಈ ಲಂಚೇಶ್ವರನ ಆರಾಧನೆಯನ್ನು ಹಿಂದೆ ಯಾರ್ಯಾರು ಗೈದರು? ಈ ದೈವವನ್ನು ಆರಾಧಿಸಿದವರಿಗೆ ನಿಜವಾಗಿಯೂ ಫಲ ಪ್ರಾಪ್ತಿಯಾಗಿದೆಯೆ? ಈ ವ್ರತ ಪೂಜಾ ಸಮಾಪ್ತಿಯ ಬಳಿಕ ಈ ದೈವದ ಮಹಿಮೆಯನ್ನು ಸಾರುವ ಅಧ್ಯಾಯಗಳನ್ನು ಕಥಾರೂಪದಲ್ಲಿ ಓದುವ ಸಂಪ್ರದಾಯವಿದೆಯೇ? ಇವೆಲ್ಲವನ್ನು ಸವಿಸ್ತಾರವಾಗಿ ತಿಳಿಸಬೇಕು ಎಂದೆನಲು ಬ್ರಹ್ಮಾಂಡ ಮುನಿಗಳು ಇಂತೆಂದರು.
ಎಲೈಶಿಷ್ಯರಿರಾ,
ಈ ಕಲಿಯುಗದಲ್ಲಿ ನಂಬಿಕೆಯೇ ದೈವವು. ಈ ಲಂಚೇಶ್ವರನನ್ನು ಆರಾಧಿಸಿ ಇಷ್ಟಾರ್ಥ ಸಿದ್ಧಿಯನ್ನು ಪಡೆದವರ ಸಂಖ್ಯೆ ಅಗಣಿತವಾಗಿದೆ. ಅಂತಹವರು ವ್ರತವನ್ನಾಚರಿಸಿದ ರೀತಿಯನ್ನು, ಹೊಂದಿದ ಧನಕನಕಾದಿ ಸಂಪತ್ತಿನ ವಿವರಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಸಾಧ್ಯವಿಲ್ಲವು. ಆದರೂ ಅಂತರ್ಜಾಲ ತಾಣದಲ್ಲಿ ‘ಬ್ರೈಬ್’ ಎಂಬ ಪದವನ್ನು ಟೈಪಿಸಿದಾಗ ಈ ಲಂಚೇಶ್ವರನಿಗೆ ಸಂಬಂಧಿಸಿದಂತೆ ವಿಸ್ತೃತವಾದ ಮಾಹಿತಿಗಳು ದೊರೆಯುತ್ತವೆ. ದೂರದರ್ಶನದ ವಿವಿಧ ಚಾನೆಲ್ ಗಳು ಈ ಲಂಚೇಶ್ವರನ ಮಹಾತ್ಮೆ ಮತ್ತು ಈ ದೈವವನ್ನು ಆರಾಧಿಸಿ ಧನಕನಕಾದಿ ಅಗಣಿತ ಸಂಪತ್ತನ್ನು ಹೊಂದಿದವರ ಪುಣ್ಯಕಥಾನಕಗಳನ್ನು ಪ್ರತಿ ದಿನವು ಬಿತ್ತರಿಸುತ್ತಿವೆ. ಇನ್ನು ದಿನ ಪತ್ರಿಕೆಗಳು ಕೂಡ ಈ ಲಂಚೇಶ್ವರ ಮಹಾತ್ಮೆಯನ್ನು ಹಾಡಿ ಹೊಗಳುತ್ತಿವೆ. ಇನ್ನು ಕೊನೆಯದಾಗಿ, ಈ ಲಂಚೇಶ್ವರನೆಂಬ ದೈವವು ನಿರ್ದಯಿಯೂ, ನಿರಾಕಾರಿಯೂ, ಅವಿನಾಶಿಯೂ ಆಗಿದ್ದು ಇದರ ಆರಾಧನೆಯನ್ನು ಯಾರು ಮಾಡುತ್ತಾರೋ, ಇದರ ಪುಣ್ಯ ಕಥಾನಕವನ್ನು ಯಾರು ಕೇಳುತ್ತಾರೋ ಅವರಿಗೆ ಇಹದಲ್ಲಿ ಸ್ವರ್ಗವೂ ಮತ್ತು ಪರದಲ್ಲಿ ನರಕವೂ ಪ್ರಾಪ್ತಿಯಾಗುವುದರಲ್ಲಿ ಸಂದೇಹವಿಲ್ಲವು ಎಂಬಲ್ಲಿಗೆ ಬ್ರಹ್ಮಾಂಡ ಮುನಿಗಳಿಂದ ಶಿಷ್ಯರಿಗೆ ಹೇಳಲ್ಪಟ್ಟ ‘ಶ್ರೀ ಲಂಚೇಶ್ವರ ವ್ರತ ಕಥೆ’ಯ ಪ್ರಥಮೋಧ್ಯಾಯ ಸಮಾಪ್ತಿಯು. ಶ್ರೀ ಲಂಚೇಶ್ವರಾರ್ಪಣಮಸ್ತು.
– ದಿವಾಕರ ಡೋಂಗ್ರೆ ಎಂ. (ಮಾಳವ)