ಹಾಗಾದ್ರೆ ನೀವು ಫ಼ೇಸ್ ಬುಕ್ ನಲ್ಲಿಲ್ವಾ??

Share Button
Jayashree May2015

ಜಯಶ್ರೀ ಬಿ, ಕದ್ರಿ.

ಹಾಗಾದ್ರೆ ನೀವು ಫ಼ೇಸ್ ಬುಕ್ ನಲ್ಲಿಲ್ವಾ” ಎಂದು ನಾಲ್ಕು ವರ್ಷದ ಹಿಂದೆ ಯಾರೋ ಕೇಳಿದಾಗ ನನಗೆ ಕಂಪ್ಯೂಟರ್ ಅನಕ್ಶರಸ್ಥೆಯಂತೆ ಮುಜುಗರವಾಯಿತು. ಇನ್ನೂ ಸ್ಮಾರ್ಟ್ ಫೋನನ್ನು, ಅದರಲ್ಲಿರುವ ಛಪ್ಪನ್ನೈವತ್ತಾರು ಆಪ್ಷನ್ ಗಳನ್ನು ಸರಿಯಾಗಿ ಬಳಸಲು ಅರಿಯದವರಿಗೆ ಮೊಬೈಲ್ ನಲ್ಲಿ ಸರಿಯಾಗಿ ಮಾತನಾಡುವುದೇ ಸಂಭ್ರಮ. ಹಾಗೂ ಹೀಗೂ ಸೋಷಿಯಲ್ ನೆಟ್ ವರ್ಕಿಂಗ್ ವಲಯಕ್ಕೆ ಕಾಲಿಟ್ಟದ್ದೇ ಅದೊಂದು ವಿಭ್ರಮೆಯ ಲೋಕ. ಮೊದಮೊದಲು ಫೋಟೊ ಮಾಡಲೂ ಅರಿಯದೆ ಬೈಸಿಕೊಂಡು ಆಮೇಲಾಮೇಲೆ ಎಕ್ಸ್ ಪರ್ಟ್ ಆಗಿದ್ದಾಯಿತು. ಇರುವುದಕ್ಕಿಂತ ಜಾಸ್ತಿ ಚಂದದ ಪ್ರೊಫ಼ೈಲ್ ಫೋಟೋಕ್ಕೆ ಬಂದ ಲೈಕುಗಳನ್ನು, ಕಾಮೆಂಟುಗಳನ್ನು ನೋಡಿ ಸಂಭ್ರಮಿಸುವುದೇನು, ನಮ್ಮದೇ ಆಸಕ್ತಿಯಿರುವವರ ಸ್ನೇಹ ಸಿಕ್ಕಿತೆಂದು ಹಿಗ್ಗುವುದೇನು, ಆಗೊಮ್ಮೆ ಈಗೊಮ್ಮೆ ಲೇಖನ ಪ್ರಕಟವಾದರೆ ಅದನ್ನು ಹಾಕಿ ಖುಶಿ ಪಡುವುದೇನು… ಅದೊಂದು ಸುಂದರ ಭ್ರಮೆಯ ಲೋಕ.

ಪ್ರತೀ ಕನಸಿಗೂ ಒಂದು ಕೊನೆಯಿರುವಂತೆ ನನ್ನ ಫ಼ೇಸ್ ಬುಕ್ ಕನಸಿಗೂ ವಾಸ್ತವದ ಝಳ ಸರಿಯಾಗಿಯೇ ಹೊಡೆಯಲಾರಂಭಿಸಿತು. ನಮ್ಮ ಪಾಡಿಗೆ ನಾವಿದ್ದರೆ ಸಡನ್ ಆಗಿ ಯಾವುದೋ ಮಹಾಶಯರುಗಳಿಂದ ರಾತ್ರಿ, ಹಗಲು, ಬೆಳಗು, ಮುಂಜಾನೆ ಎಂದಿಲ್ಲದೆ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್ ಇತ್ಯಾದಿಗಳ ಸುರಿಮಳೆ. ಕಂಪ್ಯೂಟರ್ ತೆರೆಯಲಿಕ್ಕಿಲ್ಲ ಕರ್ನಾಟಕದ ಯಾವುದೋ ಮೂಲೆಗಳಿಂದ ಬೇರೆ ಬೇರೆ ವಯಸ್ಸು, ಭಂಗಿಗಳ ವ್ಯಕ್ತಿಗಳಿಂದ ಫ಼್ರೆಂಡ್ ರಿಕ್ವೆಸ್ಟ್. ಅವನ್ನೇನಾದರೂ ಒಪ್ಪಿಕೊಂಡರೆ ಚಾಟ್ ಗೆಳಸುವ ಮಂದಿ. ಕೇಳುವ ಮಿಕ ಸಿಕ್ಕರೆ ನಾನೂ ಗೊತ್ತುಗುರಿಯಿಲ್ಲದೆ ಹರಟುವುದು ಹೌದಾದರೂ ಜೀವನದಲ್ಲಿ ಒಮ್ಮೆಯೂ ನೋಡದವರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ‌ಎಂದೇ ನನ್ನ ಭಾವನೆ. ಈ ವಿಷಯದಲ್ಲಿ ನಮ್ಮ ಯುವಕ ಯುವತಿಯ್ರನ್ನು ಮೆಚ್ಚಿಕೊಳ್ಳಬೇಕು. ತಮ್ಮ ಫ಼ೇಸ್ ಬುಕ್ ಸ್ಟೇಟಸ್ ನ್ನು ಅಪ್ಪ ಅಮ್ಮರಾದಿಯಾಗಿ ಕಾಲೇಜು ಮೇಷ್ಟ್ರುಗಳೆಲ್ಲ ನೋಡುವುದು ಬೇಡವೆಂದೇ ಅವರು ವಾಟ್ಸ್ ಅಪ್ ನಂತಹ ಇನ್ನೂ ಏನೇನೋ ವಲಯಗಳಲ್ಲಿ ಖುಶಿಯಾಗಿದ್ದಾರೆ. ಈಗ ಫ಼ೇಸ್ ಬುಕ್ನಲ್ಲಿ ಹೆಚ್ಚು ಸಕ್ರಿಯರಾಗಿರುವವರು ಮುವತ್ತರಿಂದ ಐವತ್ತು ವಯೋಮಾನದ, ಆಧುನಿಕತೆಯನ್ನು ತಮ್ಮದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಜಾಗತೀಕರಣದ ಭರಾಟೆಯನ್ನು ಕಂಗಾಲಾಗಿಯೂ, ಕುತೂಹಲದಿಂದಲೂ ನೋಡುತ್ತಿರುವ ಒಂದು ವರ್ಗ. ( ನಿಜ ಜೀವನದಂತೆ ವರ್ಚುವಲ್ ಜಗತ್ತಿನಲ್ಲಿಯೂ ಮಹಿಳೆಯರು ಕಡಿಮೆ)

 

Facebook

ಇನ್ನು ಫ಼ೇಸ್ಬುಕ್ನಲ್ಲಿ ಚರ್ಚಿತವಾಗದ ವಿಷಯಗಳೆ ಇಲ್ಲ ಎನ್ನಬಹುದು. ಯಾರೋ ಒಬ್ಬರು ಭಗ್ನ ಪ್ರೇಮಿಯಂತೆ ಕವಿತೆ ಬರೆದರೆ ಅದಕ್ಕೆ ಸಮಾಧಾನ ಹೇಳಲು ಒಂದಷ್ಟು ಮಂದಿ. ಹದಿಹರಯದವಳೊಬ್ಬಳು ವ್ಯವಸ್ಥೆಯ ಬಗ್ಗೆ ಆಕ್ರೋಶದಿಂದ ಬರೆದರೆ ಅದಕ್ಕೆ ಬೆಂಬಲಿಸಲು ಕೆಲವರು. ವಿವಿಧ ಅಭಿರುಚಿ, ಆಸಕ್ತಿಗಳ, ಹವ್ಯಾಸಗಳ ದೊಡ್ದದಾದ ಬಳಗ ಅದು. ಕೆಲವೊಮ್ಮೆ ಕೇಳುವವರೇ ಇಲ್ಲದ ಪ್ಯಾದೆಯಂತೆ ನಮ್ಮ ಫ಼ೇಸ್ ಬುಕ್ ಅಕೌಂಟ್ ಇದ್ದರೆ ಇನ್ನು ಕೆಲವೊಮ್ಮೆ ದೊಡ್ಡ ದೊಡ್ಡ ಸಂಸ್ಠೆ, ವೇದಿಕೆಗಳ ಮುಖಂಡರಿಂದೆಲ್ಲ ಫ಼್ರೆಂಡ್ ರಿಕ್ವೆಸ್ಟ್ ಬಂದು ಕಂಗಾಲಾಗುತ್ತೇವೆ. (ಬಹುಶ: ಅವರಿಗೆ ಈ ಅಕೌಂಟ್ ಸಂಭಾಳಿಸಲು ಯಾರಾದರೂ ಇರಬಹುದು!)
ಇವಿಷ್ಟು ಫ಼ೇಸ್ ಬುಕ್ ನ ಋಣಾತ್ಮಕ ಅಂಶಗಳಾದರೆ ಧನಾತ್ಮಕ ಅಂಶಗಳೂ ಹಾಗೆಯೇ ಇವೆ. ಉದಾಹರಣೆಗೆ ಅಂತಸ್ತು, ಜಾತಿ, ಮತ ಇವನ್ನೆಲ್ಲ ಮೀರಿ ವಿಚಾರಗಳನ್ನು ಹಂಚಿಕೊಳ್ಳಬಹುದು. ಯಾರಾದರೂ ಹೆಚ್ಚು ಕಾಟ ಕೊಟ್ಟಲ್ಲಿ ಅನ್ ಫ಼್ರೆಂಡ್ ಮಾಡಿದರಾಯಿತು. (ನಮ್ಮ ಫ಼ೆಂಡ್ ಶಿಪ್ ಬೇಡದವರು ಈ ಜಗತ್ತಿನಲ್ಲಿ ಇದ್ದಾರೆ ಎನ್ನುವುದೂ ವ್ಯಕ್ತಿತ್ವ ವಿಕಾಸದ ವಿಷಯವೇ.) ಹುಂಬತನದಿಂದ, ಅವಿವೇಕದಿಂದ ದುರಂತಗಳನ್ನು ಕೈಯಾರೆ ತಂದುಕೊಳ್ಳದಿರುವ ವಿವೇಚನೆಯಂತೂ ಅತ್ಯಗತ್ಯ. ಇನ್ನು ಮನೆಯಲ್ಲೇ ಬೋರೆದ್ದು ಹೋಗುವ ಗೃಹಿಣಿಯರಿಗೆ, ತಮ್ಮ ಬರಹಗಳನ್ನು ಯಾರಾದರೂ ವಿಮರ್ಶಿಸಲೆಂದು ಆಸೆ ಇರುವ ಸಾಹಿತ್ಯಾಸಕ್ತರಿಗೆ, ಫ಼ೇಸ್ ಬುಕ್ ಒಂದು ಉತ್ತಮ ವೇದಿಕೆಯೇ. ಇಪ್ಪತ್ತನಾಕುಗಂಟೆ ಅದರಲ್ಲೇ ಕಳೆದು ಹೋಗದಿ‌ಉವ ಜಾಣತನ, ಶಿಸ್ತು ಇದ್ದಲ್ಲಿ ಫ಼ೇಸ್ ಬುಕ್ ಒಂದು ಸಬಲೀಕರಣದ ಸಾಹನವೂ ನಮ್ಮ ಕೌಶಲ್ಯಗಳನ್ನು ವ್ಯಕ್ತಗೊಳಿಸುವ ಒಂದು ವೇದಿಕೆಯೂ‌ಆಗಬಲ್ಲುದು.

 

– ಜಯಶ್ರೀ ಬಿ, ಕದ್ರಿ.

 

4 Responses

  1. Pushpalatha Mudalamane says:

    ಇದು ನಾನೇ ಬರೆದದ್ದೇನೋ ಅನ್ನಿಸುವಷ್ಟು ,ನನ್ನಫೇಸ್ಬುಕ್ ಅನುಭವಗಳೇ ,ಜಯಶ್ರೀ ಯವರೇ !:)

  2. Hema says:

    ಸೂಪರ್ ಬರಹ.
    ನನಗೆ ಇಷ್ಟವಾದ ತೋಚಿದ್ದನ್ನು ಗೀಚುವ ಹವ್ಯಾಸಕ್ಕೆ ಫೇಸ್ ಬುಕ್ ಉತ್ತಮ ವೇದಿಕೆಯಾಗಿದೆ ಮತ್ತು ಸಮಾನಾಸಕ್ತರನ್ನು ಒಂದುಗೂಡಿಸಿದೆ.

  3. Nishkala Gorur says:

    ನಿಜವಾಗಿಯೂ ಫೇಸ್ಬುಕ್ ಒಂದು ಭ್ರಮಾ ಲೋಕ

  4. ಮುಸ್ತಫಾ ಗಡಿಯಾರ್ says:

    ಚೆಂದದ ಬರಹ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: