ಆಲೆಮನೆ ನೆನಪುಗಳ ಬೆನ್ನುಹತ್ತಿ…
ಮನಸ್ಸೆಲ್ಲ ಆಲೆಮನೆಯಲ್ಲಿ ಅಲೆಯುತ್ತಿದೆ !….. ಇನ್ನೇನು ಬರೆಯುವುದಕ್ಕೆ ಸಾಧ್ಯ ? ನಾನು ನಾಲ್ಕನೆಯ ತರಗತಿಗೆ ಬರುವವರೆಗೆ ನಮ್ಮ ಮನೆಯಲ್ಲಿ ಕಬ್ಬು ಬೆಳೆಯುತ್ತಿದ್ದೆವು ಮತ್ತು ಆಲೆಮನೆ ನಡೆಯುತ್ತಿತ್ತು…. ಮತ್ತೆ ? …. ನರಿಗಳ ಕಾಟ ಅತಿಯಾಯಿತೆಂದೋ ಏನೋ ಕಬ್ಬು ಬೆಳೆಯುವುದನ್ನು ನಿಲ್ಲಿಸಿಬಿಟ್ಟರು !
ಬೆಳೆಯುತ್ತಿದ್ದ ಕಬ್ಬಿನಲ್ಲಿ ನರಿಪಾಲು-ಹಂದಿಪಾಲು-ಮೊಲದ ಪಾಲು ಆದ ನಂತರ ಉಳಿದದ್ದು ನಮಗೆ ! ರಾತ್ರಿಗಳಲ್ಲಿ ಕಬ್ಬಿನ ಗದ್ದೆ ಕಡೆಯಿಂದ “ಉವ್ವೋ” ಎಂಬ ನರಿ ಕೂಗು ಸಾಮಾನ್ಯ … ಕಬ್ಬು ಬೆಳೆದು ನಿಲ್ಲುವಾಗ, ಕಬ್ಬಿನ ಗದ್ದೆಯ ಮಧ್ಯದಲ್ಲಿ ಮೂರಡಿ ಎತ್ತರದಲ್ಲಿ ಆರಡಿಗೆ ಮೂರಡಿಯ ವಿಸ್ತಾರದ ಒಂದು ಅಟ್ಟಣಿಗೆ ಮನೆಯನ್ನು ನಿರ್ಮಿಸಲಾಗುತ್ತಿತ್ತು. ಅದರಲ್ಲಿ ಅಪ್ಪನೋ- ಅಣ್ಣನೋ ರಾತ್ರಿ ಮಲಗಿ ಕಬ್ಬಿನ ಗದ್ದೆಯನ್ನು ಕಾಯುತ್ತಿದ್ದರು. ಅಪರೂಪಕ್ಕೆ ಹೆಣ್ಮಕ್ಕಳು “ನಾವೇನು ಕಡಿಮೆ ?” ಎಂಬ ಭಾವದಲ್ಲಿ ರಾತ್ರಿ ಕಾವಲಿಗೆ ನಿಲ್ಲುತ್ತಿದ್ದೆವು…. ಅಲ್ಲ…. ಮಲಗುತ್ತಿದ್ದೆವು ! ಆ ಅಟ್ಟಣಿಗೆಯ ಮನೆಯಲ್ಲಿ ರಾತ್ರಿ ಕಳೆಯುವುದೂ ಒಂದು ರೋಚಕ ಅನುಭವ ! ಈಗ ನೆನಪಿಸಿಕೊಂಡರೆ ’ಮೈ ಜುಂ’ ಎನ್ನುತ್ತದೆ !
ನಾನೂ ಸಹ ಒಂದೋ ಎರಡೋ ಬಾರಿ ಆ ಅಟ್ಟಣಿಕೆ ಮನೆಯಲ್ಲಿ ಮಲಗಿದ್ದೇನೆ. ಭಯವೆಂದರೆ ಏನೆಂದು ತಿಳಿಯದ ದಿನಗಳವು….. ರಾತ್ರಿಯ ಕಗ್ಗತ್ತಲು…. ತೀಕ್ಷ್ಣತೆ ಇಲ್ಲದ ಟಾರ್ಚ್ (ಬ್ಯಾಟರಿ) ಬೆಳಕು… ರಾತ್ರಿ ಊಟದ ನಂತರ- ಕಾಡಿನ ದಾರಿಯಲ್ಲಿ ಅಕ್ಕನೊಂದಿಗೆ ನಡೆದು, ಮೇಲಿನ ಗದ್ದೆಯಲ್ಲಿದ್ದ ಕಬ್ಬಿನ ಹಿತ್ತಲಿನ ನಡುವಿನ ಅಟ್ಟಣಿಗೆಯನ್ನೇರಿ ಮಲಗಿದೆವೆಂದರೆ ನಮಗೇ ಗೊತ್ತಿಲ್ಲದಂತೆ ನಿದ್ರಾದೇವಿ ನಮ್ಮನ್ನು ಬರಸೆಳೆದು ಅಪ್ಪಿಕೊಂಡು ಬಿಡುತ್ತಿದ್ದಳು !ಬೆಳಗಿನ ಚುಮು ಚುಮು ಚಳಿ, ಪ್ರಕೃತಿಕರೆಯ ಅನಿವಾರ್ಯತೆಯಾದಾಗಲೇ ಎಚ್ಚರ ! ನಾವೇನು ಕಬ್ಬಿನ ಗದ್ದೆ ಕಾಯಲು ಬಂದಿದ್ದೀವಾ ? ಅಥವಾ ಕಬ್ಬಿನ ಗದ್ದೆಯೇ ನಮ್ಮನ್ನು ಕಾಯಿತಾ ? ಅನುಮಾನ ! ನಾವಲ್ಲಿ ಇರುವ ಸೂಚನೆ ಆ ನರಿಗಳಿಗೆ ಕೊಟ್ಟವರಾರು ? ಮನುಷ್ಯರ ವಾಸನೆಯನ್ನು ಗ್ರಹಿಸಿದ ನರಿಗಳು ಆ ದಿನ ಕಬ್ಬಿನ ಗದ್ದೆಗೆ ದಾಳಿ ಇಡುತ್ತಿರಲ್ಲಿಲ್ಲ. ಹಾಗೆಂದು ಒಂದು ದಿನ ಕಾವಲು ತಪ್ಪಿಸಿದರೆ ನರಿಗಳು ನಮಗೆ ಮೋಸಮಾಡುತ್ತಿರಲಿಲ್ಲ ! ಬಂದು ನಾಲ್ಕಾದರೂ ಕಬ್ಬಿನ ಕೋಲುಗಳನ್ನು ಮುರಿದು, ಹಾಳೆಬ್ಬಿಸಿ ಹೋಗಿರುತ್ತಿದ್ದವು ! ಅವುಗಳನ್ನು ಪೂರ್ತಿ ಮುರಿಯುವ ಸೌಭಾಗ್ಯ ನಮ್ಮದಾಗುತ್ತಿತ್ತು ! ಹಾಗೆಂದು ಮನೆಯ ಹಿರಿಯರು ಮನೆ ಮಕ್ಕಳಿಗೆ ಕಬ್ಬು ತಿನ್ನುವುದಕ್ಕೆ ಎಂದೂ ಬೇಡವೆಂದವರಲ್ಲ. ತಾವಾಗಿ ಬಲಿತ ಕಬ್ಬನ್ನು ಆರಿಸಿ ಕಡಿದು, ಕೀಸಿ ಕೊಡುತ್ತಿದ್ದರು…. ಅದೇ ಅಭ್ಯಾಸವಾಗಿ ಇಂದಿಗೂ ಕಬ್ಬನ್ನು ಕಚ್ಚಿ ತಿನ್ನುವುದರಲ್ಲಿ ನಾನು ನಿಷ್ಣಾತೆ ! ಇಡೀ ಒಂದು ಕಬ್ಬಿನ ಕೋಲನ್ನು ಬೇಕಾದರೂ ತಿನ್ನಬಲ್ಲೆ ! ಕೈ ನೋಯುವುದೂ ಇಲ್ಲ, ದವಡೆ ನೋಯುವುದೂ ಇಲ್ಲ ! ಈಗಿನವರಂತೆ ಹೆಚ್ಚಿದ ಕಬ್ಬಿನ ತುಂಡುಗಳನ್ನು ಜಗಿಯುವುದರಲ್ಲಿ ನನಗೆ ಖುಷಿ ಎನ್ನಿಸುವುದೇ ಇಲ್ಲ !!!
ಕಬ್ಬು ಬಲಿತ ನಂತರ ಆರಂಭವಾಗುತ್ತಿತ್ತು ಆಲೆಮನೆಯ ಸಂಭ್ರಮ ! ನಾಲ್ಕು ಕೋಣಗಳೊಂದಿಗೆ ಗಾಣ-ಕೊಪ್ಪರಿಗೆ ಸಮೇತ ಆಲೆಮನೆ ನಡೆಸುವವರು ಮೇಲಿನ ಗದ್ದೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು ! ಸಂಜೆ ಶಾಲೆ ಮುಗಿಸಿ, ನಮ್ಮ ಮನೆಯ ದಿಕ್ಕಿಗೆ ಬರುವ ಎಲ್ಲಾ ಸಹಪಾಠಿಗಳೊಂದಿಗೆ ಆಲೆಮನೆಗೆ ಬರುತ್ತಿತ್ತು ನಮ್ಮ ಗುಂಪು (ಶಾಲೆಯಲ್ಲಿ ಒಟ್ಟು ಇರುತ್ತಿದ್ದದ್ದೇ 30-40 ಮಕ್ಕಳು, ಇನ್ನು ನಮ್ಮ ಕಡೆ ಬರುತ್ತಿದ್ದದ್ದು 10-15 ಮಕ್ಕಳು ಅಷ್ಟೆ !).
ಸಹಪಾಠಿಗಳಿಗೆಲ್ಲ ಕುಡಿದಷ್ಟು ಕಬ್ಬಿನ ಹಾಲು, ಸಿದ್ಧವಿದ್ದರೆ ಒಂದಷ್ಟು ನೊರೆಬೆಲ್ಲ – ಇಲ್ಲದಿದ್ದರೆ ಸಿದ್ಧವಿರುವ ಜೋನಿ ಬೆಲ್ಲ. ಮತ್ತೆ ಐದಾರು ಗಣ್ಣುಗಳಿರುವ ಕಬ್ಬಿನ ಕೋಲು ಕೈಗೆ ಕೊಟ್ಟರೆ ಸಹಪಾಠಿಗಳೆಲ್ಲ ಸಂತೃಪ್ತರಾಗಿ ಅವರವರ ಮನೆ ಕಡೆ ಹೊರಡುತ್ತಿದ್ದರು. ಯಾವಾಗಾದರೊಮ್ಮೆ ಗಾಣಕ್ಕೆ ಕಬ್ಬು ಕೊಡುವ ಕೆಲಸಕ್ಕೂ ನಾವು ಕೂರುವುದಿತ್ತು. ಹಾಗೆ ಕುಳಿತು ತಾಜಾ ಕಬ್ಬಿನ ಹಾಲು ಕುಡಿದುಬಿಟ್ಟರೆ…. ನಮ್ಮ “ಗಾಣಕ್ಕೆ ಕಬ್ಬು ಕೊಡುವ ಕಾರ್ಯ” ಸಂಪನ್ನ ! ಅಷ್ಟೊತ್ತಿಗೆ ನೊರೆಬೆಲ್ಲದ ಪರಿಮಳ ಮೂಗಿಗೆ ಬಡಿಯುತ್ತಿತ್ತು ! ಪಕ್ಕದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದ ಧೂಪದ ಮರದ ದೊಡ್ಡ ಎಲೆಯ ಮೇಲೆ ನೊರೆ ಬೆಲ್ಲ ಹಾಕಿಸಿಕೊಂಡು, ನೆಕ್ಕಿ ತಿಂದು ಪಾವನರಾಗುತ್ತಿದ್ದೆವು ! ಇಂದಿಗೂ ಮೇಲಿನ ಗದ್ದೆಯ ಆ ಜಾಗದಲ್ಲಿ ಅದೇ ಧೂಪದ ಮರಗಳಿವೆ. ಆದರೆ ಆಲೆಮೆನೆಯೂ ಇಲ್ಲ- ನಾವಗಳೂ ಅಲ್ಲಿಲ್ಲ !
ಜೋನಿ ಬೆಲ್ಲವನ್ನೊಂದಿಷ್ಟು ಮನೆಗೆ ತಂದು ಪಾಕ ಬರಿಸಲಾಗುತ್ತಿತ್ತು. ಅದಕ್ಕೆ ಶುಂಠಿ, ಏಲಕ್ಕಿ, ಕೊಬ್ಬರಿ ಚೂರುಗಳನ್ನು ಹಾಕಿ ತಟ್ಟೆಗೆ ಹೊಯ್ದು, ಅದು ತಣಿದ ನಂತರ, ಚೌಕ-ಚೌಕ ತುಂಡುಗಳನ್ನು ಮಾಡಿಟ್ಟಳೆಂದರೆ ಅದು ಅಮ್ಮ ನಮಗಾಗಿ ಮಾಡುವ ಚಾಕ್ಲೇಟ್ ! ಆಲೆಮನೆ ಮುಗಿದು ತಿಂಗಳು ಕಳೆದರೂ ಈ “ಬೆಲ್ಲದ ಚಾಕ್ಲೇಟ್” ನಮ್ಮ ಪಾಲಿಗೆ ಅದ್ಭುತ ಸಮಯ ಕಳೆಯುವ ಸಾಧನ ! ಉಳಿದ ಬೆಲ್ಲ ಜೋನಿಬೆಲ್ಲವಾಗಿ ಡಬ್ಬಿ ಸೇರುತ್ತಿತ್ತು. ಅದನ್ನೇನು ಮಾರುವ ಉದ್ದೇಶವಿರುತ್ತಿರಲಿಲ್ಲ… ವರ್ಷದುದ್ದಕ್ಕೂ ಕಾಫಿಗೂ…. ದೋಸೆಗೂ… ಕೊನೆಗೆ ಅಕ್ಕಿ ತರಿ ಉಪ್ಪಿಟ್ಟಿಗೂ ಸಾಥ್ ಕೊಟ್ಟು ಅದು ಸಾರ್ಥಕಗೊಳ್ಳುತ್ತಿತ್ತು. ಕೆಲವೊಮ್ಮೆ ಹುಳಿಬಂದು, ಅದನ್ನೇ ಉಪಯೋಗಿಸುವ ಅನಿವಾರ್ಯತೆಯೂ ಬರುತ್ತಿತ್ತು…. ಮನೆಯಲ್ಲಿ ಗೊದ್ದಗಳ ಕಾಟ ವಿಪರೀತವಾಗುವುದಕ್ಕೂ ಈ ಜೋನಿಬೆಲ್ಲ ಕಾರಣವಾಗುತ್ತಿತ್ತು !
ಇನ್ನು ಆಲೆಮನೆ ಮುಗಿದ ಮೇಲೆ ಒಣಗಿದ ಕಬ್ಬಿನ ಒಲಿಗಳನ್ನು ಬೆಂಕಿ ಹೊತ್ತಿಸಿ, “ಸುಡು ಮಣ್ಣು” ಮಾಡುವುದರೊಂದಿಗೆ ಆ ವರ್ಷದ ಕಬ್ಬಿನ ಬೆಳೆಯ ಕತೆ ಮುಗಿಯುತ್ತಿತ್ತು. ಆ ಸುಡುಮಣ್ಣನ್ನು ಏರಿ ಮಾಡಿ, ತರಕಾರಿ ಬೀಜಗಳನ್ನು ಬಿತ್ತುವುದರೊಂದಿಗೆ ಅಪ್ಪ- ಅಣ್ಣನ ಗದ್ದೆ ಕೆಲಸ ಒಂದು ಹಂತವನ್ನು ಮುಟ್ಟುತ್ತಿತ್ತು. ಅಕ್ಕಂದಿರು ತರಕಾರಿ ಬೆಳೆಗಾಗಿ ಗದ್ದೆಯನ್ನು ವಹಿಸಿಕೊಳ್ಳುತ್ತಿದ್ದರು !
ಇದೇ ನೆನಪಿನಿಂದ ಉನ್ಮತ್ತಳಾಗಿ ನಾನು ಆಲೆಮನೆಯತ್ತ ಆಕರ್ಷಿತಳಾಗುತ್ತಿದ್ದೆ. ನನ್ನ ಕತೆ ಕೇಳಿದ ಚಿಕ್ಕಪೇಟೆಯ ಗೆಳತಿ ಮಾಲತಿಯ ತಂದೆ ನಾರಯಣ ಶೆಟ್ರು ನನ್ನನ್ನು ಒಮ್ಮೆ ಮಾಲತಿಯ ಅಜ್ಜಿ ಮನೆ- ಸಿದ್ಧಾಪುರದಲ್ಲಿ ನಡೆಯುತ್ತಿದ್ದ ಆಲೆಮನೆಗೆ ಕಳಿಸಿಕೊಟ್ಟಿದ್ದರು. ಮಾಲತಿಯೊಂದಿಗೆ ಸಿದ್ಧಪುರದ ಅವಳ ಅಜ್ಜಿ ಮನೆಗೆ ಹೋಗಿದ್ದು, ಕಬ್ಬಿನ ಹಾಲು ಕುಡಿದು- ನೊರೆ ಬೆಲ್ಲ ತಿಂದು, ಅಲ್ಲಿನ ಟೆಂಟ್ ನಲ್ಲಿ “ಕಾಡಿನ ರಾಜ” (ಟೈಗರ್ ಪ್ರಭಾಕರ್)ರ ಸಿನೆಮಾ ನೋಡಿದ್ದು, ಮೊಮ್ಮಗಳಿಗಾಗಿ ಮಾಡಿದ ವಿಶೇಷ ಅಡುಗೆಯನ್ನು ನಾನು ತಿನ್ನುವುದಿಲ್ಲವೆಂದು ತಿಳಿದ, ಮಾಲತಿ ಅಜ್ಜಿ ಮನೆಯವರು – ನನಗೆ ಸಿದ್ಧಾಪುರದ ಹೋಟೆಲ್ ನಲ್ಲಿ ಊಟ ಹಾಕಿಸಿದ್ದು…. ಎಲ್ಲವೂ ಸವಿನೆನಪುಗಳೇ………
– ಸುರೇಖಾ ಭೀಮಗುಳಿ
ಸುಮಾರು 35 ವರ್ಷಗಳಷ್ಟು ಹಿಂದಿನದ್ದನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸಿದ್ದೀರ .ಚನ್ನಾಗಿ ಮೂಡಿ ಬಂದಿದೆ .
Photo ನೆನಪನ್ನು ತುಂಬಾ ಹಿಂದಕ್ಕೆ ಕೊಂಡೊಯ್ದಿತು. ಆಲೆಮನೆಯ ಸುಂದರ ನೆನಪು