ಇಂತಹದ್ದೊಂದು ಕಾನೂನು ತ್ವರಿತವಾಗಿ ಜಾರಿಯಾಗಲಿ…!

Share Button
veeralinganagoudar s (1)

ಕೆ.ಬಿ.ವೀರಲಿಂಗನಗೌಡ್ರ.

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆನೊ ನಿಜ. ಆದರೆ ಈ ಕುರಿತು ನಾವು ವಾಸ್ತವಿಕ ನೆಲೆಗಟ್ಟಿನಲ್ಲಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳೆಲ್ಲ ಖಾಸಗಿ (ಕಾನ್ವೆಂಟ್ ಮಾದರಿಯ) ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ ಸಂಗತಿ ಏನೆಂದರೆ, ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರೆ ತಮ್ಮ ಮಕ್ಕಳನ್ನು ಖಾಸಗಿ (ಕಾನ್ವೆಂಟ್) ಶಾಲೆಗಳಿಗೆ ಹಾಕಿದ್ದಾರೆ. ಈ ಮೂಲಕ ಸರಕಾರಿ ಶಾಲೆಗಳ ಗುಣಮಟ್ಟ ಸಂಪೂರ್ಣ ಕುಸಿದಿದೆ ಅನ್ನೊ ಸತ್ಯವನ್ನು ಸರಕಾರಿ ಶಾಲಾ ಶಿಕ್ಷಕರೆ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಇನ್ನು ಸಮಾಜವಾದಿ ವ್ಯಕ್ತಿಯೊರ್ವ ತನ್ನ ಮಗುವನ್ನು ಸರಕಾರಿ ಶಾಲೆಯಲ್ಲಿ ಓದಿಸಲು ಇಚ್ಛಿಸಿದರೆ, ಆತನ ಪತ್ನಿ ಖಾಸಗಿ ಶಾಲೆಯಲ್ಲಿಯೇ ಓದಿಸಬೇಕೆಂದು ಹಠ ಹಿಡಿಯುತ್ತಿದ್ದಾಳೆ. ಕಾರಣ ಆಕೆಯ ಅಕ್ಕ ಮತ್ತು ಅಕ್ಕಪಕ್ಕದವರ ಮಕ್ಕಳೆಲ್ಲಾ ನಿತ್ಯ ಖಾಸಗಿ ಶಾಲೆಯ ಬಸ್ಸು ಹತ್ತುತ್ತಿದ್ದಾರೆ ಬಲು ಶಿಸ್ತಿನಿಂದ.

ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ ಹಾಗೂ ಸರಕಾರಿ ಬಸ್ಸುಗಳೆಂದರೆ ಅವು ಕೆಳದರ್ಜೆಯವರ ಆಯ್ಕೆಗಳೆಂಬುದು ಸ್ಪಷ್ಟವಾಗಿದೆ. ಇಂದು ಹೆಚ್ಚುಕಮ್ಮಿ ಎಲ್ಲರೂ ಖಾಸಗೀಕರಣವನ್ನೆ ಅವಂಬಿಸಿದ್ದಾರೆ, ಆದರೆ ಸರಕಾರಿ ನೌಕರಿ ಅಂದ್ರೆ ಮಾತ್ರ ಎಲ್ಲರೂ ಜೊಲ್ಲು ಸುರಿಸುತ್ತಾರೆ. ಇದರರ್ಥ ಸರಕಾರದ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆ ಅನ್ನೊದನ್ನು ಈ ಮೂಲಕ ನಾವು ಊಹಿಸಿಕೊಳ್ಳಬಹುದು. ಸರಕಾರ ಮತ್ತು ಶಿಕ್ಷಣ ಇಲಾಖೆಯವರ ನಿರ್ಲಕ್ಷ್ಯವನ್ನು ಅರಿತುಕೊಂಡೆ ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರಸ್ಥರು ಕೂಡಾ ಇಂದು ಎಲ್ಲಡೆ ಖಾಸಗಿ ಶಾಲೆಗಳನ್ನು ತೆರೆದುಕೊಂಡು ತಮ್ಮ ಕುಲಕಸಬಗಿಂತ ಈ ‘ಕಾನ್ವೆಂಟ್ ಸ್ಕೂಲ್ ಕಸಬೆ’ ಚೆನ್ನಾಗಿದೆ ಎಂದು ಮನದಟ್ಟು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯ ಬಿ.ಎಂ.ಗುರುಸ್ವಾಮಿ ಬರೆದ ಚುಟುಕು ನೆನಪಾಗುತ್ತದೆ. ‘ವಿದ್ಯೆ ಉದ್ಯಮವಾದಾಗ ಕಾಲೇಜು ಕಾರ್ಖಾನೆಯಾಗುತ್ತದೆ’

school  for rich

ಇಂದು ಓಣಿಗೊಂದೊಂದು ಶಾಲೆ ತೆರೆದುಕೊಂಡು ಗರಿಗರಿಯಾದ ಬಟ್ಟೆತೊಟ್ಟು, ಚಹಾಪುಡಿ ಮಾರುವವರು ಕೂಡಾ ದುಬಾರಿ ಕಾರಿನಲ್ಲಿ ಅಲೆದಾಡುತ್ತಾ ಶಾಲೆಯ ಚೇರ್‍ಮನ್ನರಾಗಿದ್ದಾರೆ. ಇಂಥವರ ಸಂಸ್ಥೆಯಲ್ಲಿ ಪದವಿ, ಪಿ.ಹೆಚ್.ಡಿ.ವರೆಗೆ ಓದಿಕೊಂಡವರು ಚೇ(ಚೊ)ರ್‍ಮನ್ನನ ವಿಚಿತ್ರ ಚಿತ್ರಹಿಂಸೆಯನ್ನು ಎಲ್ಲೂ ಚಿತ್ರಿಸಲಾಗದೆ ಚಿಂತೆ ಎಂಬ ಚಿತೆಯಲ್ಲಿ ನಿತ್ಯ ಬೇಯುತ್ತಲೇ ಇದ್ದಾರೆ. ‘ಅಶಿಕ್ಷಿತರ ಕೈ ಕೆಳಗೆ ಸುಶಿಕ್ಷಿತರ ಗೋಳಾಟ’ ಈ ಕುರಿತು ಒಂದು ಅಧ್ಯಯನವೂ (ಸಂಶೋಧನೆ) ನಡೆಯಬೇಕಿದೆ. ಎಲ್ಲ ವಿಶ್ವ ವಿದ್ಯಾಲಯಗಳಲ್ಲಿಂದು ದಾಖಲಾಗಿರುವ ಸಂಶೋಧನಾ ಪ್ರಬಂಧಗಳ ವಿಷಯವೇ ತುಂಬಾ ವಿಚಿತ್ರವಾಗಿವೆ, ಜ್ವಲಂತ ಸಮಸ್ಯೆಗಳನ್ನು ಮುಚ್ಚಿಟ್ಟು ಕಾಟಾಚಾರದ ವಿಷಯಗಳನ್ನೆ ಮುಂದಿಟ್ಟುಕೊಂಡು ಡಾಕ್ಟರೇಟ್ ಪದವಿ ಪ(ಹೊ)ಡೆದುಕೊಂಡವರ ಸಂಖ್ಯೆ ಅತೀಯಾಗಿರುವುದು ಶೋಚನೀಯ.

ಇತರೆ ಇಲಾಖೆಗಳಲ್ಲಿರುವ ಭ್ರಷ್ಟಾಚಾರಕ್ಕಿಂತ, ಶಿಕ್ಷಣ ಇಲಾಖೆಯಲ್ಲಿರುವ ಭ್ರಷ್ಟಾಚಾರದಿಂದ ಸಮಾಜಕ್ಕೆ ಅದರಲ್ಲೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಬಹುದೊಡ್ಡ ಹಾನಿಯಿದೆ. ಆದರೆ ಈ ಕುರಿತು ಸರಕಾರವಾಗಲಿ ಅಥವಾ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಲಿ ಅಷ್ಟೊಂದು ಗಂಭೀರವಾಗಿ ಅದೇಕೊ ಆಲೋಚನೆ ಮಾಡುತ್ತಿಲ್ಲ. ನಾಡು ನುಡಿಯ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಗತಿಪರ ಚಿಂತಕರ, ಸಾಹಿತಿಗಳ, ಸಮಾಜ ಪರಿವರ್‍ತನಾ ಕಾರ್‍ಯಕರ್‍ತರ ಆಶಯ, ಕನಸು ಸಾಕಾರಗೊಳಿಸಲು ಸರಕಾರ ಸಕಾರತ್ಮಕವಾಗಿ ಸ್ಪಂದಿಸುತ್ತಿಲ್ಲ. ಒಂದರ್ಥದಲ್ಲಿ ಸರಕಾರಕ್ಕೆ ಕಣ್ಣು, ಕಿವಿ ಇಲ್ಲವೇನೊ.. ಅನ್ನೊ ವಾತವರಣ ನಿರ್ಮಾಣವಾಗಿದೆ. ಪ್ರಾಯಶಃ ಈ ಕಾರಣಕ್ಕಾಗಿಯೇ ಮುಷ್ಕರದಂತಹ ಸಂದರ್ಭಗಳಲ್ಲಿ ಸರಕಾರದ ಕಣ್ತೆರೆಸಲು ಸರಕಾರಿ ಬಸ್ಸುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರಬಹುದೇನೊ..!

ಸಮಾಜವಾದಿಗಳೆಲ್ಲ ಮುಂದೊಂದು ದಿನ ‘ಬಂಧುಗಳೆ.. ನಿಮ್ಮ ಮಕ್ಕಳನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಲು ಸಾಧ್ಯವಾಗದಂತಹ ಸಂದಿಗ್ಧತೆಯಲ್ಲಿ ನೀವಿದ್ದರೆ, ಕೊನೆಯ ಪಕ್ಷ ಒರ್ವ ದಲಿತ ಅಥವಾ ಹಿಂದುಳಿದ ಮಗುವನ್ನು ನಿಮ್ಮ ಮನೆಯಲ್ಲಿಟ್ಟುಕೊಂಡು, ನಿಮ್ಮ ಮಗುವಿನೊಡನೆ ಆ ಮಗುವನ್ನು ನಿಮ್ಮಿಚ್ಚೆಯ ಶಾಲೆ/ಮಾಧ್ಯಮದಲ್ಲಿ ಓದಿಸಿರಿ. ಹೀಗೆ ಮಾಡುವುದರ ಮೂಲಕವಾದರೂ ಸಮಾಜವಾದದ ಆಶಯವನ್ನು ಸಾಕಾರಗೊಳಿಸಬೆಕೆಂದು ಕರೆ ನೀಡುವಂತಹ ವಾತವರಣ ನಿರ್ಮಾಣವಾದರೆ ನಾವೆಲ್ಲ ಅಚ್ಚರಿ ಪಡಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಿಗಾಗುವ ಅಪಾಯಗಳ ಕುರಿತು ನಾವು ಈಗಲೇ ಗಂಭೀರವಾಗಿ ಆಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯ ಚಟುವಟಿಕೆಗಳೆಂದರೆ ಕವಿ, ಕಲಾವಿದ, ಸಾಹಿತಿಗಳಿಗೆ ಮಾಶಾಸನ, ಪ್ರಶಸ್ತಿ, ಪುರಸ್ಕಾರ, ಸಂಘ-ಸಂಸ್ಥೆಗಳಿಗೆ ಧನ ಸಹಾಯ ಇವಿಷ್ಟನ್ನು ಹೊರತು ಪಡಿಸಿ ನೋಡಿದರೆ ಅಂತಹ ಗುರತರವಾದ ಹೆಜ್ಜೆಗಳು ನನಗಂತೂ ಕಾಣಿಸಿಲ್ಲ. ವಿಶೇಷವಾಗಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಉಳುವಿಗಾಗಿ ಇಲಾಖೆ ತಳೆದ ನಿಲುವುಗಳು ತುಂಬಾ ಕಡಿಮೆ ಅಂತಾ ನನಗನ್ನಿಸಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಮೂರು ಸಂಸ್ಥೆಗಳು ಒಂದೇ ಸೂರಿನಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾದರೆ ಪ್ರಾಯಶಃ ‘ಕರ್ನಾಟಕ ರಕ್ಷಣಾ ವೇದಿಕೆ’ಯಂತಹ ಸರಕಾರೇತರ ಸಂಘಟನೆಗಳು ಈ ನಾಡಿನಲ್ಲಿ ಜೀವ ತಳೆಯುತ್ತಿರಲಿಲ್ಲವೇನೊ..!

ಸರಕಾರ ನಿಗದಿ ಪಡಿಸಿದ ಕಬ್ಬಿನ ದರವನ್ನು ಸಕ್ಕರೆ ಕಾರ್ಖಾನೆಯ ಮಾಲಿಕರು ಅರ್ಥಾತ್ ಸರಕಾರದ ಸಚಿವರು, ಶಾಸಕರು ರೈತರಿಗೆ ನಿಗದಿತ ದರವನ್ನು ನೀಡಲಾಗುವುದಿಲ್ಲವೆಂದು ಇಂದು ನೇರವಾಗಿ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಅಬಕಾರಿ ಸಚಿವ ಸತೀಶ್ ಜಾರಿಕಿಹೊಳಿ ‘ಸಕ್ಕರೆ ಕಾರ್ಖಾನೆಗಳು ಚಾರಿಟೆಬಲ್ ಟ್ರಸ್ಟ್‌ಗಳಲ್ಲ. ಅದು ಶುದ್ಧ ವ್ಯಾಪಾರ. ಕಾರ್ಖಾನೆ ಮುಚ್ಚಿಕೊಂಡು ಕಬ್ಬು ಬೆಳೆಗಾರರಿಗೆ ಹೆಚ್ಚಿನ ದರ ನೀಡುವುದು ಅಸಾಧ್ಯ’ವೆಂದು ಹೇಳಿದರು. (ಪ್ರ.ವಾ, ದಿ-೫-೧-೧೫. ಪು-೯) ಮುಂದೊಂದು ದಿನ ಕನ್ನಡ ಭಾಷೆ, ಸಂಸ್ಕೃತಿಯ ಕುರಿತು ಸರಕಾರ ಒಂದು ಗಟ್ಟಿಯಾದ ಕನ್ನಡ ಪರ ನಿಲುವು ತಳೆದರೆ ಅದನ್ನು ಜಾರಿಗೊಳಿಸಬೇಕಾದಂತಹ ಶಿಕ್ಷಣ ಸಂಸ್ಥೆಗಳ ಚೇರ್‍ಮನ್ನರು ಅರ್ಥಾತ್ ಶಾಸಕ, ಸಚಿವರು ಸರಕಾರದ ನಿಲುವಿನ ವಿರುದ್ದವೇ (ಅಬಕಾರಿ ಸಚಿವರಂತೆ) ತಿರುಗಿ ಬಿದ್ದರೆ ನಾವೆಲ್ಲಾ ಆಶ್ಚರ್ಯ ಪಡಬೇಕಾಗಿಲ್ಲ. ಇಂದು ಬಹುತೇಕ ಸರಕಾರದ ಧ್ವಂಧ್ವ ಹೇಳಿಕೆ/ನಿಲುವುಗಳನ್ನು ಗಮನಿಸಿದಾಗ ಪ್ರಜ್ಞಾವಂತರು ಈ ನಾಡಿನ ಭವಿಷ್ಯ ಕುರಿತು ಚಿಂತೆಗೀಡಾಗಿದ್ದಾರೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಎಲ್ಲ ಸರಕಾರಿ ನೌಕರರು, ಶಾಸಕರು, ಸಚಿವರು ಕಡ್ಡಾಯವಾಗಿ (ಅನಿವಾರ್ಯ ಪರಿಸ್ಥಿತಿಗಳನ್ನು ಹೊರತು ಪಡಿಸಿ) ಸರಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ಓದಿಸಬೇಕು, ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುವುಂತಾಗಬೇಕು, ಪ್ರಾಯಶಃ ಇಂತಹದ್ದೊಂದು ಕಾನೂನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಯಾದರೆ ಖಂಡಿತಾ ಕನ್ನಡ ಶಾಲೆಗಳು ನಿಚ್ಚಳವಾಗಿ ಉಳಿಯುತ್ತವೆ ಮತ್ತು ಬೆಳೆಯುತ್ತವೆ. ಕಾಗದದಲ್ಲಿ ಕ್ರಿಯಾಶೀಲವಾಗಿರುವ ಬಹುತೇಕ ಸರಕಾರಿ ಆಸ್ಪತ್ರೆಗಳು ಬಡಜನರ ಆರೈಕೆಗೆ ಅಣಿಯಾಗುತ್ತವೆ. ನಿರ್ಭಯದಿಂದ ಹಾಗೂ ನಿರಾಳತೆಯಿಂದ ನೌಕರಿ ಮಾಡುತ್ತಾ ಅಥವಾ ಶ್ರಮಪಡದೆ ಸ(ಗಿ)ಂಬಳ ಪಡೆಯುತ್ತಿರುವ ಅದೇಷ್ಟೊ ಸರಕಾರಿ ಸಿಬ್ಬಂದಿಗಳಿಗೆ ಇಂತಹ ಕಾನೂನಿಂದ ಒಂದು ಸ್ಪಷ್ಟ ಸಂದೇಶ ಮತ್ತು ಅರಿವನ್ನು ರವಾನಿಸುವುದರ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒಂದು ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ, ಜೊತೆಗೆ ಸಮಾಜವಾದಿಗಳ ಆಶಯವೂ ಸಾಕಾರಗೊಳ್ಳುತ್ತದೆ. ತನ್ನಿಮಿತ್ಯ ಸರಕಾರ ಕೂಡಲೇ ಇಂತಹದ್ದೊಂದು ಕಾನೂನು ಜಾರಿಮಾಡುವತ್ತ ಗಮನಹರಿಸಬೇಕಿದೆ.

ಕನ್ನಡ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಸಂಬಂಧಪಟ್ಟಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನ. ಪತ್ರ, ಕತೆ, ಕವಿತೆ ಎಲ್ಲವುಗಳನ್ನೂ ಒಂದಡೆ ಸಂಗ್ರಹಿಸಿ, ಅವುಗಳ ಉದ್ದೇಶವನ್ನು ಜಾರಿಗೊಳಿಸಲು ಸರಕಾರ, ಇಲಾಖೆ, ಆಕಾಡೆಮಿಗಳ ಕಣ್ತೆರೆಸುವ ಕಾರ್ಯವನ್ನು ಮತ್ತು ಮೇಲೆ ಸೂಚಿಸಿದ ಕಾನೂನನ್ನು ಜಾರಿಗೊಳಿಸಲು ‘ಕನ್ನಡ ಸಾಹಿತ್ಯ ಪರಿಷತ್ತು’ ಶ್ರಮಿಸಲೆಂಬ ಸದಾಶಯ ನನ್ನದು.

 

– ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ

3 Responses

  1. Shruthi Sharma says:

    ಅಪ್ಪಟ ಸತ್ಯ!

  2. Hema says:

    ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ…

  3. ಬಸವಾರಾಜ.ಜೋ.ಜಗತಾಪ says:

    ಒಳ್ಳೆಯ ಮಾಹಿತಿಯನ್ನೊಳಗೊಂಡ ಲೇಖನವಾಗಿದೆ ನೀಮ್ಮದು.ಮತ್ತು ಬಳಸಿದ ಚೇ(ಚೋ)ರಮನ್ ಸಂ(ಗಿ)೦ಬಳ ಅನ್ನೊ ಶಬ್ದಗಳು ಓದುಗರ ಮನಸ ಹೊತ್ತಿಸುವ ಬರಹದ ಕಿಡಿಯಾಗಿವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: