ತುಝೇ ಸಲಾಂ! - ಬೆಳಕು-ಬಳ್ಳಿ

ಸನ್ನದ್ಧ – ಸಿಪಾಯಿ ಸದಾ ಸಿದ್ಧ

Share Button

 



ಅನುಕರಣ

ಸದಾ ಸಿದ್ಧ
ಯುದ್ಧ ಸನ್ನದ್ಧ
ಬಿಸಿಲಲ್ಲಿ, ಮಳೆಯಲ್ಲಿ
ಚುಮುಚುಮು ಬೆಳಕಲ್ಲಿ, ಕಟಗುಡುವ ಚಳಿಯಲ್ಲಿ,
ಶಿಸ್ತಿನ ನಡಿಗೆ 
ಗೈರತ್ತಿನ ದರ್ಪ ಶಿಷ್ಟಾಚಾರ
ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು
ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ
ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ
ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ
ದೇಶ ಪ್ರೇಮ, ಕರ್ತವ್ಯ ನಿಷ್ಠೆ
ನಿಜಕ್ಕೂ… ಸಿಪಾಯಿ 
ಸದಾ ಸಿದ್ಧ
ಯುದ್ಧ ಸನ್ನದ್ಧ.

ಅನುಸರಣ

ಮಲಗಿ ಸೂರೆಣಿಸುವಾಗ
ಮೊಂಬತ್ತಿಯ ಬೆಳಕಿಗೂ ಕರಗಿ 
ತೊಟ್ಟಿಕ್ಕುವ ಮಂಜುಗಲ್ಲುಗಳು,
ತಿನ್ನಲೂ, ಅರಗಿಸಲೂ ತಿಣುಕಾಡಬೇಕಾದ ಪರಿಸ್ಥಿತಿ
ಮೈಯ್ಯ ಮೂಳೆಮಜ್ಜೆಗಳೂ ಕರಗುವಂತಿಹ ಚಳಿಯ ಪಾಶ
ಕೃಶವಾಗಿ ನಿರ್ವರ್ಣವಾಗುತ್ತಿರುವ ದೇಹ
ಆದರೂ ಸಿಪಾಯಿ ಸದಾ ಸಿದ್ಧ

ಮಳೆಯಲ್ಲೋ ಬಿಸಿಲಲ್ಲೋ
ಬರದಲ್ಲೋ ನೆರೆಯಲ್ಲೋ
ಸಹಾಯ ಹಸ್ತದ ಮಹಾಪೂರ
ಕರ್ತವ್ಯನಿಷ್ಠೆಯ ಸಾಕಾರ
ಸಾವಿಗೂ ಜೀವನಕ್ಕೂ ಇರುವ 
ಕ್ಷಣಗಳ ಅಂತರದರಿವು ಅನುದಿನ ಪ್ರತಿಕ್ಷಣ
ತನ್ನವರ ವಿರಹದುರಿಯ
ಕಣ್ಣಾಳದ ನೋವಿನಲ್ಲೂ 
ಬಿಡುವಿಲ್ಲದ ಶ್ರಮದಲ್ಲೂ
ಸಿಪಾಯಿ ಸದಾ ಸಿದ್ಧ
ಯುದ್ಧ ಸನ್ನದ್ಧ

ಅನುಭೋಗ (ವಾನಪ್ರಸ್ಥ)

ಸ್ವಾರ್ಥ ಸಾಧಕರ ನಡುವೆ
ಮರೆತ ಬದುಕಿನ ವಿದ್ಯೆ 
ಬೊಗಸೆ ತುಂಬದ ಖುಶಿಯ
ಪ್ರೀತಿಯ ಎಲ್ಲೆಯಲ್ಲಿ
ಕಾನೂನಿನ ಚೌಕಟ್ಟು
ಮನದ ನಿರ್ವರ್ಣ ಘಾಯದಲ್ಲಿ
ಸವೆದೀತು ಬದುಕು
ಯುದ್ಧ ವಿರಾಮದಲ್ಲಿ
ವಿಷಣ್ಣ ಬದುಕಿನ 
ಚರಮ ಗೀತೆಯಲ್ಲಿ

ಸಿಪಾಯಿ ಸದಾ ಸಿದ್ಧ!!!
ಅದರೆ…… ಇಲ್ಲಿ
(ತನ್ನವರಲ್ಲೇ)
ಯುದ್ಧ ನಿಷಿದ್ಧ!!

– 

– ಬೆಳ್ಳಾಲ ಗೋಪಿನಾಥ ರಾವ್

7 Comments on “ಸನ್ನದ್ಧ – ಸಿಪಾಯಿ ಸದಾ ಸಿದ್ಧ

  1. ಭಾವನಾತ್ಮಕ, ಪ್ರಬುದ್ಧ, ಮನಮುಟ್ಟುವ ಕವನಗಳು!

  2. ಉತ್ತಮ ಕವನ. ದೇಶ ಸೇವೆ ಸಲ್ಲಿಸುತ್ತಿರುವ ಯೋಧರೆಲ್ಲರಿಗೂ ಹೃತ್ಪೂರ್ವಕ ನಮನ.

  3. ಕವನ ರಚನೆ ತುಂಬಾ ಇಷ್ಟವಾಯ್ತು. ಸಿಪಾಯಿಗಳ ಬಗೆಗಿನ ಕಷ್ಟ ಮತ್ತು ಪ್ರೀತಿ ಎರಡೂ ಕವನಗಳಲ್ಲಿ ವ್ಯಕ್ತವಾಗಿದೆ.

    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಹೇಮಾ

    2. ನಿಮ್ಮ ಸ್ಪೂರ್ತಿದಾಯಕ ಮೆಚ್ಚುಗೆಗೆ ಧನ್ಯವಾದಗಳು
      ashok K. G

  4. ಚೆನ್ನಾಗಿದೆ. ಮಳೆ,ಬಿಸಿಲು, ಚಳಿ, ಹಿಮ ಯಾವುದನ್ನು ಲೆಕ್ಕಿಸದೆ ನಮ್ಮ ದೇಶವನ್ನು , ನಮ್ಮನ್ನೂ ಕಾಯುವ ಸೈನಿಕರೇ ಗ್ರೇಟ್ . ನಮ್ಮ ನೆಮ್ಮದಿಯ ಬದುಕು ಅವರು ನಮಗೆ ನೀಡೋ ಭಿಕ್ಷೆ . ಇಂತಹ ಸೈನಿಕರ ಪ್ರತಿ ತುಸುವಾದರೂ ಕಾಳಜಿ , ಪ್ರೀತಿ, ಅನುಕಂಪ ಇರಬೇಕು ನಮ್ಮಲ್ಲಿ. ನಮ್ಮ ರಕ್ಷಣೆ ಮಾಡೋ ಯೋಧರು ನಮ್ಮ ದೇಶದ ಹೆಮ್ಮೆ

Leave a Reply to ashok K. G. Cancel reply

 Click this button or press Ctrl+G to toggle between Kannada and English

Your email address will not be published. Required fields are marked *