ದೆವ್ವಗಳ ಅಸ್ತಿತ್ವ…ಈ ಕಾರ್ಯಕ್ರಮ ಬೇಕೆ?

Share Button
Hema trek Aug2014

ಹೇಮಮಾಲಾ.ಬಿ

 

ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ ಬಿಳಿ ಆಕೃತಿಯೊಂದು ಕೂತಿರುವುದು, ಬಾಲಕಿಯೊಬ್ಬಳು ನಿದ್ದೆಯಲ್ಲಿ ಎದ್ದು ನಿಂತು ನಡುಗುತ್ತಾ ಇರುವುದು, ಬಿಳಿ ಬಟ್ಟೆ ಧರಿಸಿದ ಮನುಷ್ಯಾಕಾರವೊಂದು ನಡುರಾತ್ರಿಯಲ್ಲಿ ಜೀಪು ಡ್ರೈವ್ ಮಾಡುವವನನ್ನು ಹಿಂಬಾಲಿಸುವುದು, ಆಫೀಸಿನಲ್ಲಿ ಮಧ್ಯರಾತ್ರಿ ಖಾಲಿಕುರ್ಚಿಗಳು ಅತ್ತಿತ್ತ ಓಡಾಡುವುದು, ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಯಾರೋ ಅಡ್ಡಬಂದ ಹಾಗೆ ಅನಿಸಿ, ಕಾರು ನಿಲ್ಲಿಸಿದಾಗ ಆತ/ಆಕೆ ಅದೃಶ್ಯವಾಗುವುದು …..ಇತ್ಯಾದಿ.

ಕಾರ್ಯಕ್ರಮದ ಪ್ರಕಾರ ಇವೆಲ್ಲಾ ನಿಜ ಘಟನೆಗಳು, ಸಿ.ಸಿ.ಟಿ.ವಿ ಯಲ್ಲಿ ಸೆರೆಯಾದುವುಗಳು. ಇವುಗಳನ್ನೆಲ್ಲಾ ನಾನು ನಂಬಲಾರೆ. ಯಾಕೆಂದರೆ, ಈಗಿನ ತಾಂತ್ರಿಕತೆಯನ್ನು ಬಳಸಿ ನಮಗೆ ಬೇಕಾದ ಆಕಾರದ ದೆವ್ವಗಳನ್ನು ಸೃಷ್ಟಿಸುವುದು ಸುಲಭ.

ghostದೆವ್ವಗಳಿಗೆ ಕ್ಷಣಮಾತ್ರದಲ್ಲಿ ಬೇಕಾದ ಕಡೆ ಪ್ರತ್ಯಕ್ಷವಾಗುವ ‘ತಾಕತ್ತು ಇರುವುದಾದರೆ’ ಅವುಗಳಿಗೆ ತಮಗೆ ಬೇಕಾದ ಕಡೆ ರೊಯ್ಯನೆ ಬಂದಿಳಿದು Gracious Presence ಕೊಡಬಹುದಲ್ಲವೇ? ಅದರ ಬದಲು ಸಾಮಾನ್ಯ ಮನುಷ್ಯ ಚಾಲನೆ ಮಾಡುವ ಕಾರು, ಬೈಕ್, ಜೀಪು ಹತ್ತಿ…..ಸದ್ದಿಲ್ಲದೆ ಹಿಂದೆ ಕುಳಿತು…..ರಸ್ತೆ ನಿಯಮ ಪಾಲಿಸಿ… ಸಿಗ್ನಲ್ ನಲ್ಲಿ ಕಾದು….ಪುಕ್ಕಟೆ ಪ್ರಯಾಣಿಸುವ ಅನಿವಾರ್ಯತೆ ಅವಕ್ಕಿದೆಯೆ?

ಸಾಮಾನ್ಯವಾಗಿ ಏರು-ತಗ್ಗು ಇರುವ ಅಥವಾ ದುರ್ಗಮ ಬೆಟ್ಟಪ್ರದೇಶಗಳ ಸುತ್ತು-ಬಳಸಿನ ದಾರಿಯ ಪ್ರಯಾಣಕ್ಕೆ ಜೀಪನ್ನು ಬಳಸುತ್ತಾರೆ. ಇಂಥಹ ಕಡೆ ರಸ್ತೆಯೇ ಪ್ರಯಾಣಕ್ಕೆ ಯೋಗ್ಯವಾಗಿರುವುದಿಲ್ಲ. ಹಾಗಿರುವಾಗ, ಸಿ.ಸಿ.ಟಿ.ವಿ ಅಳವಡಿಕೆ ಇದ್ದು, ಅದು ದೆವ್ವದ ಫೋಟೊ ಕ್ಲಿಕ್ಕಿಸಿದೆ ಎಂದರೆ ನಂಬಲರ್ಹವೇ? ಅಷ್ಟಕ್ಕೂ ಶಕ್ತಿಯುತವಾದ ದೆವ್ವ, ಬಡಪಾಯಿಯಂತೆ ಯಾಕೆ ಹಿಂಬಾಲಿಸಬೇಕು? ಜೀಪಿನೊಳಗೆ ನುಗ್ಗಿ, ಡ್ರೈವರ್ ನನ್ನು ತಳ್ಳಿ, ತಾನೇ ಓಡಿಸಬಹುದಲ್ಲ?

ಮಕ್ಕಳು ತಮಗೆ ಸರಿ ಎನಿಸಿದ ರೀತಿ ಆಟವಾಡುವುದು, ಕನಸಿನಲ್ಲಿ ಬೆದರುವುದು, ನಿದ್ದೆಯಲ್ಲಿ ಎದ್ದು ಕೂರುವುದು, ಕೆಲವೊಮ್ಮೆ ನಿದ್ದೆಯಲ್ಲಿ ಮಾತನಾಡುವುದು, ಹಿರಿಯರ ಗಮನ ಸೆಳೆಯಲೆಂದೇ ವಿಚಿತ್ರವಾಗಿ ವರ್ತಿಸುವುದು…ಇವೆಲ್ಲಾ ಮಾಮೂಲಿ ಸಂಗತಿಗಳೆ.ಇದಕ್ಕೂ ದೆವ್ವವನ್ನು ‘ಟ್ಯಾಗ್’ ಮಾಡಬೇಕೆ?

ದೆವ್ವದ ಅಸ್ತಿತ್ವದ ಬಗ್ಗೆ ನಂಬಿಕೆ ಅವರವರ ಅನುಭವ, ಅಭಿಪ್ರಾಯಕ್ಕೆ ಬಿಟ್ಟಿದ್ದು. ಆದರೆ ಎಲ್ಲಾ ಜನರ ಮನೋಭಾವ ಮತ್ತು ಜೀವನದ ಬೇಡಿಕೆಗಳು ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ, ದೆವ್ವದ ಬಗ್ಗೆ ಭೀತಿಯಿರುವ ಒಬ್ಬಾತನಿಗೆ ಇಂತಹ ಕಾರ್ಯಕ್ರಮವನ್ನು ನೋಡಿದರೆ, ಕಾರ್ಖಾನೆಗೆ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವಾಗ ತನ್ನ ಬೈಕ್ ನ ಹಿಂದಿನ ಸೀಟ್ ನಲ್ಲಿ ‘ದೆವ್ವ ಕೂತಿದ್ದರೆ’ ಎಂದು ಭಯವಾಗಬಹುದು. ಕತ್ತಲಲ್ಲಿ ಮನೆಯ ಹೊರಗೆ ಕಾಲಿಡಲು ಭಯ ಪಡುವ ಮಕ್ಕಳಿಗೆ ಇನ್ನಷ್ಟು ಭಯವಾಗಬಹುದು.

ಒಂದು ವೇಳೆ ಇವೆಲ್ಲಾ ನಿಜವಾಗಿ ನಡೆದ ಘಟನೆಗಳು ಅಂತ ಒಪ್ಪಿಕೊಂಡರೂ, ಅದನ್ನು ತಿಳಿದುಕೊಂಡು ಯಾರಿಗೆ ಏನು ಪ್ರಯೋಜನವಿದೆ?

ನನ್ನ ಸ್ಕೂಟರ್ ನಲ್ಲೋ, ಕಾರಿನಲ್ಲೋ ಹಿಂದಿನ ಸೀಟ್ ನಲ್ಲಿ ಅಕಸ್ಮಾತ್ ದೆವ್ವ ಬಂದು ಕುಳಿತರೆ, “ ಅಯ್ಯಾ, ನನಗೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತುವ ಆಸೆ- ಆದರೆ ಸಾಕಷ್ಟು ದುಡ್ಡಿಲ್ಲ, ರಜೆಯಿಲ್ಲ……ಎವರೆಸ್ಟ್ ಮೇಲೇರುವ ಆಸೆ-ಆದರೆ ಇದಕ್ಕೆ ತಕ್ಕ ಆರೋಗ್ಯವಿಲ್ಲ, ನಿನ್ನ ಅತಿಮಾನುಷ ಶಕ್ತಿಯನ್ನು ಬಳಸಿ, ಈ ಎರಡು ಆಸೆಗಳನ್ನು ನೆರವೇರಿಸಿ ಪುಣ್ಯ ಕಟ್ಟಿಕೋ…. “ ಎನ್ನುತ್ತೇನೆ!!!!.

 

– ಹೇಮಮಾಲಾ.ಬಿ

8 Responses

  1. krisnaveni kidoor says:

    ಜನರ ಮನಸ್ಸಿನಲ್ಲಿ ಹೆದರಿಕೆಯ ಬೀಜ ಬಿತ್ತುವ ವಿಧಾನವಿದು .ಸುಲಭವಾಗಿ ದೆವ್ವದ ಹೆಸರು ಬಳಸಿಕೊಳ್ಳಬಹುದು. ಊರಲ್ಲಿ ಅಂತೂ ಹತ್ತಾರು ಹೆಸರಿನ ದೈವಗಳಿಗೆ ನಡೆದುಕೊಳ್ಳುವವರು ಇರುತ್ತಾರೆ . ಅತ್ತ್ಯುತ್ತಮ ವಿಚಾರ ಇಲ್ಲಿ ಪ್ರಸ್ತ್ತುತವಾಗಿದೆ .

  2. ಬಸವರಾಜ ಜೋತಿಬಾ ಜಗತಾಪ says:

    ಕಾಡು ಮೇಡು ಸುತ್ತೊರಿಗೆ ದೆವ್ಬ ಕಾಣಸಲ್ಲರಿ.ಆಕಸ್ಮಾತ ಇದ್ದರೂ ಅವ ನಿಮಗ ಹೆದರತಾವ ಇದ್ಯಾವದ ನಮಗಿಂತ ದೊಡ್ಡ ದೆವ್ವಂತ.ನಾವು ಮೆಣಸಿನಕಾಯಿ ಕಳ್ಳರಿಂದ ಕಾಯಾಕ ರಾತ್ರೊ ರಾತ್ರಿ ಹೊಲಕ ಹೊಗಿವಿ ಆದರ ಎಲ್ಲಿ ದೆವ್ವ ಬೆಟ್ಟಿಯಾಗಿಲ್ಲ.ಊರಾಗ ಇದ್ದಿದ್ದ ನೋಡೆನಿ ಸೊಮಾರಿಗಳ ಮಯ್ಯಾಗ.

  3. Poornima Iyer says:

    Nicely written.. Devvagalige nijakku ashtu shakthi iddiddare avugala jote deshada samasyegala bagge charchisabahudittu

  4. Guru Vittal says:

    ಹ ಹ, ಚೆನ್ನಾಗಿದೆ ನಿಮ್ಮ ದೆವ್ವ ಪುರಾಣ, ಕೊನೆಯ para ಸೂಪರ್, TV ನವರು ಜನ ನೋಡಿ ಮರುಳಾಗಲಿ ಅಂತ ಮನ ಬಂದಂತೆ ಸುಳ್ಳು programs ಮಾಡುತ್ತಾರೆ, ಬದುಕಿರುವ ಮನುಷ್ಯರಿಗೆ ಹೆದರಿರಿ, ಸತ್ತು ಹೋದ ಮನುಷ್ಯರು …ದೆವ್ವಗಳಿಗಲ್ಲ (ಪಾಪ)

  5. Nishkala Gorur says:

    ನನ್ನ ಪ್ರಕಾರ ದೇವರು ಇರುವುದು ಎಷ್ಟು ನಜವೊ ಆತ್ಮಗಳ ಸಂಚಾರವೂ ಅಷ್ಟೇ ನಿಜ!!!!!!!

  6. Prakash Deshpande says:

    ದೆವ್ವ ಭೂತಗಳು ಮೂಢನಂಬಿಕೆಯಲ್ಲ ,ಸುಳ್ಳೂ ಅಲ್ಲ ದೇವರು ಇರುವದು ಅದೆಷ್ಟು ಸತ್ಯವೋ ದೆವ್ವಗಳೂ ಇರುವದೂ ಕೂಡ ಅಷ್ಟೇ ಸತ್ಯ.ನನಗಂತು ಇವುಗಳ ಅನುಭವ ಸಾಕಷ್ಟು ಆಗಿದೆ.ಭೂತಗಳ ಸಂದಷ೵ನವನ್ನು ಮಾಡಿರುವ ನನಗೆ ಅವು ಹೇಳಿದ ಹಲವರ ಭವಿಶ್ಯ ನಿಜವಾಗಿದೆ.ನನ್ನ ” ಪ್ರತ್ಯಕ್ಷ” ಪುಸ್ತಕದಲ್ಲಿ “ಭೂತಾಯಣ” ಪ್ರಕರಣ ದೆವ್ವಗಳ ಅಸ್ತಿತ್ವ ಅರುಹುತ್ತದೆ.

  7. Krishna Pramod Mudipu says:

    ದೆವ್ವ ಹಾಗು ನಮ್ಮ ಸ್ಥಳೀಯರು ನಂಬುವ ದೈವಗಳು ಬೇರೆ. ದೆವ್ವ ಅಂದರೆ ಅದು ದುಷ್ಟ ಶಕ್ತಿಯೇ .. ಮನುಷ್ಯನ ಶರೀರಕ್ಕೆ ಈ ಭೂಲೋಕದಲ್ಲಿ ಇರುವಾಗ ಆಸೆ ಪಟ್ಟದ್ದು ಸಿಕ್ಕದೆ ಹೋದರೆ ಅದು ದೆವ್ವ ಅಥವಾ ಪ್ರೇತವಾಗಿ ಕಾಡುತ್ತೆ, ವೈಜ್ಞಾನಿಕ ಯುಗದಲ್ಲೂ ಕೆಲವರಿಗೆ ಇದರ ಅನುಭವ ಆಗಿದೆ. ಆಗುತ್ತಲೇ ಇದೆ. ನಾವು ನಂಬುವ ದೇವರು ಅನ್ನುವ ಶಕ್ತಿಯಂತೆ ದೆವ್ವ ಇತ್ಯಾದಿಗಳು ಇರೋದು ನಿಜವೇ ಸರಿ..

  8. ಸದ್ಯದ ಪರಿಸ್ಥಿತಿಯಲ್ಲಿ ಬದುಕಿರುವ ಜನರಿಗೇ ಜೀವಿಗಳಿಗೇ ಜಾಗವಿಲ್ಲ – ದೆವ್ವಗಳಿಗೆ ಎಲ್ಲಿಂದ ಜಾಗ ಸಿಗುವುದೋ ತಿಳಿಯದು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: