ಶ್ವಾನಪುರಾಣಕ್ಕೆ ಮಂತ್ರದ ಬ್ರೇಕ್!

Share Button
Surekha Bhimaguli1

ಸುರೇಖಾ ಭೀಮಗುಳಿ

ಓನರ್ ಮನೆಯಲ್ಲಿ ನಾಯಿ ತರುವ ತೀರ್ಮಾನ ಆದಾಗ ನನಗೆ ಭಯಂಕರ ಕಿರಿಕಿರಿ ಆಗಿದ್ದು ಸತ್ಯ. ನನಗೋ ಪ್ರಾಣಿಗಳು ಹೇಳಿದರೆ ಅಲರ್ಜಿ. (6 ನೇ ಕ್ಲಾಸಿನಲ್ಲಿದ್ದಾಗ ನಾಯಿ ಕಚ್ಚಿ- ಹೊಕ್ಕಳ ಸುತ್ತ 7 ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ – ನಾಯಿ ಕಂಡರೆ ಆಗೋಲ್ಲ). ವಿಧಿ ಇಲ್ಲದೆ ಮನುಷ್ಯ ಪ್ರಾಣಿಗಳ ಜೊತೆ ಹೊಂದಿಕೊಂಡಿದ್ದೀನಿ ! ಇನ್ನು ಮನೆ ಮುಂದೆ ಎಷ್ಟೊತ್ತಿಗೂ ನಾಯಿ ಕುಳಿತಿರುತ್ತೆ ಹೇಳುವ ಕಲ್ಪನೆಯೇ ಮನಸ್ಸಿನಲ್ಲಿ ಹೀಕರಿಕೆ ಹುಟ್ಟಿಸಿದ್ದು ಸತ್ಯ. ದೇವರ ಹತ್ರ ಹೇಳಬೇಕಷ್ಟೆ ! ನಾವು ಎಷ್ಟೇ ಹೇಳಿದರೂ ಬಾಡಿಗೆಗೆ ಇರುವವರು. ಕಮೆಂಟ್ ಮಾಡುವ ಹಕ್ಕಿಲ್ಲ !

ಸೋಮವಾರ ಆಫೀಸ್ ಕೆಲಸ ಮುಗಿಸಿ ಬಂದಾಗ ನಾಯಿ ತಂದಾಗಿರಲಿಲ್ಲ……… ಮಂಗಳವಾರವೂ ಕೆಲಸದಿಂದ ಬಂದಾಗ ನಾಯಿ ಇಲ್ಲ ! ನಾಯಿ ತರುವ ಪ್ಲಾನ್ ಕಾನ್ಸಲ್ ಆಗಿರಬಹುದು ಅಂತ ಗ್ರಹಿಸಿದೆ. ದೇವರಿಗೊಂದು ಥ್ಯಾ೦ಕ್ಸ್ ಫಾರ್ವರ್ಡ್ ಮಾಡಿದೆ !

ಬುಧವಾರ ಸಂಜೆ ಶ್ವಾನ ದರ್ಶನ ಆಯ್ತು…. ಮೊದಲ ಮಹಡಿಯ ನಮ್ಮ ಮನೆ ಬಾಗಿಲ ಹತ್ರವೇ- ಪ್ಯಾಸೇಜಿನ ಕೊನೆಯಲ್ಲಿ-  ಆ ನಾಯಿಗೊಂದು ಮನೆ ! ಅಯ್ಯೋ ಗ್ರಹಚಾರವೇ ! ಬಂದೇ ಬಿಟ್ಟಿತಲ್ಲ ! ದೇವರಿಗೊಂದು ವಾರ್ನಿಂಗ್ ನೋಟೀಸ್ ಕಳಿಸಿದೆ ” ನಮ್ಮ ಬಿಲ್ಡಿಂಗಿಗೆ ನಾಯಿ ಕಳಿಸ ಬೇಡ ಅಂತ 999 ಸಾರ್ತಿ ಹೇಳಿದ್ದೆ. ಆದ್ರು ಕಳಿಸಿದ್ದೆಂತಕ್ಕೆ ? ನೀನು ನನ್ನ ನಂಬಿಕೆಗೆ ದ್ರೋಹ ಮಾಡಿದೆ ……… ನಿಂಗೆ ಟೂ….ಟೂ…. ಟೂ…..”

ಜಾಗ ಬದಲಾದ ಕಾರಣವೋ ಎಂಥದೋ, ಅಂದು ರಾತ್ರಿ ಇಡೀ ನಮಗೆ ನಾಯಿ ಸಂಗೀತದ ಲಾಲಿ ಹಾಡು ! ನಿದ್ದೆ ಮಾಡಲು ಬಿಡಲಿಲ್ಲ ! ಮರುದಿನ ನಾಯಿಗೆ “come- go  – eat ಪಾಠ ಆಗ್ತಾಯಿತ್ತು !  ನಾಲ್ಕನೇ ದಿನಕ್ಕೆಲ್ಲ “ನಮ್ಮ ನಾಯಿಗೆ ಎಂತ ಬುದ್ಧಿ . come – go- drink – eat ಎಲ್ಲ ಅರ್ಥ ಆಗುತ್ತೆ !” ಹೊಗಳಿಕೆ ಬೇರೆ. ನನಗೋ ಮೈ ಎಲ್ಲ ಉರಿತಿತ್ತು !

ಈ ಕಡೆ ನಾನು ದೇವರಿಗೆ ವಾರ್ನಿಂಗ್ ಕೊಟ್ಟಿದ್ದೆ ! ಆದ್ರೆ ದೇವ್ರು ನಾಯಿ ಓಡಿಸಲಿಲ್ಲ !  ” ನಾನು, ಇನ್ ಮೇಲೆ ನಿನ್ನ ನಂಬಲ್ಲ” ಅಂತ ಬೆದರಿಕೆ ಹಾಕಿದೆ. “ನೀ ನಂಬದಿದ್ರೆ ಕತ್ತೆ ಬಾಲ !” ಹೇಳಿ ದೇವರು ಸುಮ್ನೆ ಕುಳಿತ ಹಾಗೆ ಕಾಣಿಸಿತು. ದೇವರ ಕೈಲಿ ಎಂಥದೂ ನಡೆಯಲಿಲ್ಲ. ಬದಲಿಗೆ ನಾಯಿ ಎಲ್ಲರ ಜೊತೆ ಸ್ನೇಹ ಸಂಪಾದನೆ ಮಾಡಿತು (ನನ್ನ ಒಬ್ಬಳನ್ನು ಬಿಟ್ಟು).  ನಾಯಿಗಾಗಿ ಮಾಡಿದ್ದ ಸಣ್ಣ ಮನೆ ನಮ್ಮ ಮನೆ ಮುಂಬಾಗಿಲ ಕಡೇಗಲ್ವಾ ? ಪ್ರತಿ ಸರ್ತಿ ಅದರ ಮನೆಗೆ ಹೋಗುವಾಗ ನಮ್ಮ ಮನೆ ಒಳ ಬರೋದಕ್ಕೆ ನೋಡ್ತಾ ಇತ್ತು ! ನನ್ನ ಸ್ನೇಹ ಮಾಡಿಕೊಳ್ಳೋದಕ್ಕೆ ಬರ್ತಾ ಇತ್ತೋ ಏನೋ ! ನಾಯಿ ನಾರಾಯಣ ಸ್ವರೂಪಿ ಹೇಳ್ತಾರೆ. ಆ ನಾಯಿ ನೋಡುವಾಗ ನಾರಾಯಣ ಖಂಡಿತ ನೆನಪಾಗ್ತಾ ಇದ್ದ. ಆದ್ರೆ ಭಕ್ತಿಲಲ್ಲ. ನನ್ನ ಬೈಗುಳ ತಿನ್ನೋದಿಕ್ಕೆ !

ಶನಿವಾರ ಬೆಳಿಗ್ಗೆ ದೇವರಿಂಗೆ ಧಮಕಿ ಹಾಕಿದೆ “ನಾಳೆ ಸಂಜೆ ಒಳಗೆ ನಾಯಿನ ನಮ್ಮ ಬಿಲ್ಡಿಂಗ್ ನಿಂದ ಹೊರಗೆ ಕಳಿಸದೆ ಇದ್ರೆ ……… ನೀನು ಇಲ್ಲ ಅಂತ ಪ್ರಚಾರ ಮಾಡೀನಿ. ನಿನಗೆ ಯಾರೂ ನಮಸ್ಕಾರ ಮಾಡದ ಹಾಗೆ… ಹೋಮ-ಹವನ ನಡೆಸದ ಹಾಗೆ ಮಾಡ್ತೀನಿ”.
.
ದೇವರು ಕೇಳಿಸಿಕೊಂಡನಾ ? ಇಲ್ವಾ ? ಅನುಮಾನ ಆಯ್ತು. ಮತ್ತೆ ಮತ್ತೆ ಮಂತ್ರದ ಹಾಗೆ ಹೇಳಿಕೊಂಡೇ ಇದ್ದೆ ! ರಾತ್ರಿ ಕನಸಲ್ಲಿ ಕಂಡ ದೇವರು “ಆಯ್ತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿ ಹೇಳಿದಂಗಾಯ್ತು !

Dog

ಭಾನುವಾರ ಬೆಳ್ಳಾಂಬೆಳಿಗ್ಗೆ  ಓನರ್  ಮನೆಯೋರೆಲ್ಲ ಯಾರದ್ದೋ ಮದುವೆಗೆ ಹೊರಟರು. ನಾಯಿ ಪಾತ್ರೆಗೆ ಒಂದಷ್ಟು ರಾಗಿ ಗಂಜಿ ಸುರಿದು, ನಾಯಿಗೆ ತಿನ್ನಿಸಿಯೇ ಹೊರಟರು.  ನಾನು ನೋಡಿಯೂ ನೋಡದಂತೆ ಇದ್ದೆ ! ಸದ್ಯ “ನಾಯಿಗೆ ಊಟ ಹಾಕ್ತೀರಾ ?” ಅಂತ ನನ್ನನ್ನ ಕೇಳಲಿಲ್ವಲ್ಲ . ಮನಸ್ಸಿನ ಒಳಒಳಗೇ ಸಮಾಧಾನ ಮಾಡಿಗೊಂಡೆ. ಒಂದು ಗಂಟೆ ಹೊತ್ತಿಂಗೆ ನಾಯಿ ಮನೆಯಿ೦ದ ಕೆಳ ಗೇಟ್ ಹತ್ತಿರಕ್ಕೆ ಎ೦ತದೋ ಸುರಿದ ಹಾಗೆ ಶಬ್ದ ! ನೋಡಿದರೆ – ನಾಯಿ ವಾಂತಿ ಮಾಡಿಕೊಳ್ತಾ ಇದೆ. ರಾಮ … ರಾಮ…ಇಶ್ಶೀಶ್ಶೀ……

ವಾಂತಿ ಮಾಡಿ, ನಾಯಿ ಸುಸ್ತಾಗಿ ಮಲಗಿತು. ನಾಲ್ಕು ಗಂಟೆಗೆ ಮದುವೆ ಮುಗಿಸಿ ಬಂದವರಿಗೆ ನಾಯಿ ವಾಂತಿಯ ಸ್ವಾಗತ ! ಕೆಟ್ಟ ವಾಸನೆ ಬೇರೆ ! ಬೈದುಗೊಂಡೇ ಒಳಬಂದರು  ಎಲ್ಲರು ! ಒಂದಿಷ್ಟು ನೀರು ಸುರಿದು ತೊಳೆದರು. ವಾಸನೆ ಹೋಗಲಿಲ್ಲ ! ಬ್ಲೀಚಿಂಗ್ ಪುಡಿ ಸುರಿದು ತಿಕ್ಕಿ ತೊಳೆದರು. ವಾಂತಿ ವಾಸನೆ ಹೋಗಿ, ಆಸ್ಪತ್ರೆ ವಾಸನೆ ಬರೋದಕ್ಕೆ ಶುರುವಾಯ್ತು. ಮಹಡಿ ಮೇಲೆ ಬಂದು, ನಾಯಿ ಚೈನ್ ಹಿಡಿದುಗೊಂಡು, ಹೊರಗೆ ಹೋದರು. ಎಲ್ಲಿಂದ ತಂದರೋ ಅಲ್ಲಿಗೆ ತೆಕ್ಕಂಡು ಹೋಗಿ ಬಿಟ್ಟರಿರಬೇಕು ! ಅಂತು ದೇವರು ಕಣ್ಣು ಬಿಟ್ಟಿದ್ದ ! ನಾಯಿಯಿಂದ ನನಗೆ ಮುಕ್ತಿ ಸಿಕ್ಕಿತ್ತು !
.
 ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತಾ- ಇಲ್ಲವಾ ? ಗೊತ್ತಿಲ್ಲ. ನಾಯಿ ಓಡಿಸಬಹುದು !  ಇದು ನನ್ನ ಅನುಭವ !

.

 

  .

– ಸುರೇಖಾ ಭೀಮಗುಳಿ, ಬೆಂಗಳೂರು

 

 

 

4 Responses

  1. Shruthi Sharma says:

    😀 😀 Soooper!

  2. ರುಕ್ಮಿಣಿ ಮಾಲಾ says:

    ನಿಮ್ಮ ಈ ಸಲಹೆ ನಾಯಿ ದ್ವೇಷಿಗಳಿಗೆ ಬಹಳ ಉಪಯುಕ್ತವಾಗಿದೆ! ನಾರಾಯಣ ಮೆಚ್ಚದಿದ್ದರೂ ಶ್ವಾನ ಅಪ್ರಿಯರು ಖಂಡಿತಾ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ!

  3. Venkataramana Bhat · says:

    Kala badalaagide, devarigoo hagoo naayeegoo- bbmp dog squad ondukade, prani hitarakshana samitigalu heege iruvaaga eega yeradoo aawa mantrakkagali bedarikegaagali bagguvudilla!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: