ಲಹರಿ

‘ಮೈತ್ರಿ’ ಕನ್ನಡ ಸಿನೆಮಾ – ಒಂದು ನೋಟ

Share Button

 

Adarsha A
ಆದರ್ಶ. ಎ

ವರ್ಷಕ್ಕೆ ನೂರಾರು ಸಿನಿಮಾಗಳು ಬರುತ್ತವೆ ಹೋಗುತ್ತವೆ. ಅದರಲ್ಲಿ ಹಲವು ಕಮರ್ಶಿಯಲ್ಲು, ಕೆಲವು ಕಲಾತ್ಮಕ, ಒಂದಷ್ಟು ಬ್ಲಾಕ್ಬಸ್ಟರ್, ಉಳಿದವು ಫ್ಲಾಪ್ ಚಿತ್ರಗಳು. ಆದರೆ ಎದೆಯ ಕದವನ್ನು ತಟ್ಟುವ ಮನ ಮಿಡಿಯುವಂತೆ ಮಾಡುವ ಒಂದೇ ಒಂದು ಚಿತ್ರಗಳು ಸಿಗುವುದಿಲ್ಲ. ಆದರೆ ಇವೆಲ್ಲದಕ್ಕೂ ಹೊರತಾಗಿ ಚಿತ್ರರಂಗದ ಸಿದ್ದಸೂತ್ರಗಳನ್ನು ಗಾಳಿಗೆ ತೂರಿ ಹೀಗೂ ಒಂದು ಚಿತ್ರ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿ ಮೈತ್ರಿ ನಮ್ಮ ಮುಂದೆ ಬಂದಿದೆ. ಚಿತ್ರದಲ್ಲಿ ಎಲ್ಲೂ ನಾಯಕ ರೋಪ್ ಹಾಕಿಕೊಂಡು ಹೊಡೆಯುವುದಿಲ್ಲ, ನಾಯಕ ನಾಯಕಿಯ ವಿದೇಶದಲ್ಲಿ ನಡೆಯುವ ಡ್ರೀಮ್ ಸಾಂಗ್ ಇಲ್ಲಿಲ್ಲ, ಎಲ್ಲೂ ವೈಭವೋಪೇತ ಮಾತುಗಲಿಲ್ಲ, ಕಿವಿ ಗಡಚಿಕ್ಕುವ ಸಂಗೀತವಿಲ್ಲ. ಇರುವುದು ಮಕ್ಕಳು ದೇವರು, ದೇವರೂ ಒಂದು ಮಗು”, “ಮಕ್ಕಳ ಕೈಯಲ್ಲಿ ಗನ್ ಕೊಡೋ ಬದ್ಲು, ಪೆನ್ ಕೊಟ್ಟು ನೋಡಿ, ಇತಿಹಾಸಾನೇ ಬರಿತಾರೆ” ಎನ್ನುವಂತಹ ಅರ್ಥಪೂರ್ಣ ಸಂಭಾಷಣೆಗಳ ಗೊಂಚಲು. ಏನಿದೆ ಏನಿಲ್ಲ ಎನ್ನುವುದಕ್ಕಿಂತ ಇರುವಷ್ಟನ್ನು ಅತ್ಯಂತ ಸೂಚ್ಯವಾಗಿ ಸೂಕ್ಷ್ಮವಾಗಿ ಚೆಂದವಾಗಿ ಕಟ್ಟಿಕೊಟ್ಟಿದ್ದರೆ ನಿರ್ದೇಶಕ ಗಿರಿರಾಜ್.

ಸಿನೆಮಾ ಬರಿಯ ಮನರಂಜನೆಯ ಮಾದ್ಯಮವಾಗಿರದೆ ಅದು ಸಮಾಜದಲ್ಲಿ ನಡೆಯುವ ತವಕ ತಲ್ಲಣಗಳಿಗೆ ಕೈಗನ್ನಡಿಯಾಗಿರಬೇಕು ಎಂದು ನಂಬಿರುವವನು ನಾನು. ಕಳೆದ 12 ವರ್ಷಗಳಲ್ಲಿ ನಾನು ನೂರಾರು ಚಿತ್ರಗಳನ್ನು ನೋಡಿದ್ದೇನೆ. ಆದರೆ ಯಾವ ಸಿನೆಮಾವು ನನ್ನನ್ನು ಈ ಪರಿ ಕಾಡಲಿಲ್ಲ, ಚಿಂತನೆಗೆ ಹಚ್ಚಿಲ್ಲ. ಈ ಚಿತ್ರದಲ್ಲಿ ಸುತ್ತಲ ಬದುಕಿನ ಥರೇವಾರಿ ಪಾತ್ರಗಳನ್ನು ಅವು ಇದ್ದ ಹಾಗೆಯೇ ತೆರೆದಿಡಲಾಗಿದೆ. ಯಾವುದಕ್ಕೂ ಅತಿರೇಕದ ಬಣ್ಣಗಳಿಲ್ಲ.ಇದೊಂದು ಕಾಡುವ ಸಿನಿಮಾ, ಚಿಂತನೆಯ ಒರೆಗೆ ಹಚ್ಚುವ ಸಿನಿಮಾ. ಸಿದ್ದು ಎಂಬ ಹುಡುಗ ತನ್ನ ತಾಯಿಯ ಸಾವಿನ ನಂತರ ಕಾರಣಾಂತರಗಳಿಂದ ಬಾಲಾಪರಾಧಿ ಗೃಹಕ್ಕೆ ಸೇರುತ್ತಾನೆ. ಬರೀ ಆರನೇ ಕ್ಲಾಸ್ ಓದಿದ್ದರೂ ಅತೀ ಬುದ್ದಿವಂತನಾಗಿರುತ್ತಾನೆ ಸಿದ್ದು. ಇನ್ನೊಬ್ಬ ಬಾಲಾಪರಾಧಿ ಜಾನ್ಸನ್ ನೆರವಿನಿಂದ ರಿಮ್ಯಾಂಡ್ ಹೋಮ್‌ನಿಂದಲೇ ಸಿದ್ರಾಮ ಪುನೀತ್ ನಡೆಸಿಕೊಡುವ `ಕರುನಾಡ ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾನೆ. ಪುನೀತ್‍ನ ದೊಡ್ಡ ಅಭಿಮಾನಿಯಾಗಿರುವ ಸಿದ್ದು, ಕಾರ್ಯಕ್ರಮದಲ್ಲಿ ಕೊನೆಯ ಹಂತದವರೆಗೂ ಹೋಗುತ್ತಾನೆ. ಇನ್ನೇನು ಪ್ರಶಸ್ತಿ ಗೆಲ್ಲಬೇಕು ಅನಿಸುವಷ್ಟರಲ್ಲಿ ಒಬ್ಬ ವಿಜ್ಞಾನಿ ಎಂಟ್ರಿ ಕೊಟ್ಟು ಸಿದ್ದು ರಿಮ್ಯಾಂಡ್ ಹೋಮ್‍ಗೆ ಹೋಗುವುದಕ್ಕೆ ಕಾರಣಗಳನ್ನು ಪುನೀತ್ ಅವರಿಗೆ ತಿಳಿಸುತ್ತಾನೆ. ಹೀಗಿರುವಾಗ ಸಿದ್ದು ಕಾರ್ಯಕ್ರಮದಲ್ಲಿ ಬಹುಮಾನ ಗೆಲ್ಲುತ್ತಾನಾ ಅಥವಾ ಬಾಲಾಪರಾಧಿಗಳ ಗೃಹಕ್ಕೆ ವಾಪಸ್ಸು ಹೋಗುತ್ತಾನಾ ಎನ್ನುವುದು ಚಿತ್ರದ ಕಥೆ. ಈ ರೀತಿಯಾಗಿ ಸಮಾಜದಲ್ಲಿನ ಹುಳುಕುಗಳಿಗೆ, ಮನದ ಕಲ್ಮಶಗಳಿಗೆ ನಿಧಾನವಾಗಿಯೇ ತಮ್ಮ ಸಂಭಾಷಣೆಯಿಂದ, ಪಾತ್ರಗಳಿಂದ ಚಾಟಿ ಏಟು ಬೀಸಿದ್ದಾರೆ ನಿರ್ದೇಶಕರು.

mythri kananda movie

ಚಿತ್ರದ ಜೀವಾಳವೇ ಚಿತ್ರಕಥೆ ಹಾಗೂ ಚಿತ್ರದಲ್ಲಿ ಬರುವ ಪಾತ್ರಗಳ ನೈಜ ಅಭಿನಯ. ಈ ಚಿತ್ರದ ಮೂಲಕ ಉಳಿದ ಸ್ಟಾರ್ ಗಳಿಗಿಂತ ಪುನೀತ್ ಬೇರೆಯದೇ ಸ್ಥರದಲ್ಲಿ ನಿಲ್ಲುತ್ತಾರೆ. ಮೈತ್ರಿ ಸಿನೆಮಾ ನೋಡಿದ ನಂತರ ಅಣ್ಣಾವ್ರು ಇಲ್ಲ ಎಂಬ ಕೊರಗನ್ನು ಪುನೀತ್ ತುಂಬುತ್ತಾರೆ ಎನ್ನುವ ಭರವಸೆಯನ್ನು ಕೊಡುತ್ತದೆ. ಇನ್ನು ಮೋಹನ್ ಲಾಲ್ ಅವರು ವಿಜ್ಞಾನಿಯಾಗಿ, ತಂದೆಯಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಗೆ ಬೆಲೆ ಕೊಡುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ. ಅತುಲ್ ಕುಲಕರ್ಣಿ ಮತ್ತೊಮ್ಮೆ ತಮ್ಮ ಸಹಜ ಅಭಿನಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ಚಿತ್ರದಲ್ಲಿ ಬರುವ ಜಾನ್ಸನ್ ಹಾಗೂ ಸಿದ್ರಾಮ ಪಾತ್ರದ ಬಾಲನಟರು ಇವರೆಲ್ಲರನ್ನು ಮೀರಿಸುವಂತೆ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕನಿಲ್ಲ ಆದರೆ ಚಿತ್ರದ ನಿಜವಾದ ನಾಯಕ “ಕಲೆ ಎನ್ನುವುದು ಧ್ವನಿ ಇಲ್ಲದವರ ಪಾಲಿನ ಧ್ವನಿಯಾಗಬೇಕು” ಎನ್ನುವ ಗಿರಿರಾಜ್. ಜಟ್ಟ, ಅದ್ವೈತ, ನವಿಲಾದವರು ಈಗ ಮೈತ್ರಿ ಹೀಗೆ ಕನ್ನಡ ಚಿತ್ರರಂಗದಲ್ಲಿ ಕ್ರಿಯಾತ್ಮಕ ಚಿತ್ರಗಳ ಹೊಸ ಶಖೆಯನ್ನೆ ಆರಂಬಿಸಿದ್ದಾರೆ ಎನ್ನಬಹುದು.

ಮೈತ್ರಿ ಚಿತ್ರದ ಕೊನೆಯ ದೃಶ್ಯದಲ್ಲಿ ಪುನೀತ್ ಮೋಹನ್‌ಲಾಲ್ ಸರ್ ಗೆ ಹೇಳ್ತಾರೆ “ನಿಮ್ಮ ಮಗ ಬದುಕಿದ್ದರೆ ನಿಮ್ಮನ್ನ ನೋಡಿ ಹೆಮ್ಮೆ ಪಡ್ತಿದ್ದ”. ಅಗ ಮೋಹನ್‌ಲಾಲ್ ಪುನೀತ್‌ಗೆ, “ಈಗ ನಿಮ್ಮ ತಂದೆ ಇದ್ದಿದ್ದರೆ ನಿಮ್ಮನ್ನ ನೋಡಿ ತುಂಬಾ ಖುಷಿ ಪಡ್ತಿದ್ದರು” ಎನ್ನುವಂತಹ ಮಾತುಗಳು ಎಂತವರನ್ನು ಸಿನೆಮಾ ಹಾಲಿನಲ್ಲಿ ಗದ್ಗದಿತರಾಗುವಂತೆ ಮಾಡುತ್ತದೆ. ಕನ್ನಡದಲ್ಲಿ ಗುಣಮಟ್ಟದ ಕೊರತೆ ಇದೆ, ಕಥೆ ಇಲ್ಲ ಎಂದು ಮೂದಲಿಸುವವರಿಗೆ ‘ಮೈತ್ರಿ ನೋಡಿ ಆಮೇಲೆ ಕನ್ನಡ ಚಿತ್ರಗಳ ಬಗ್ಗೆ ಮಾತಾಡಿ’ ಎಂದು ಕನ್ನಡ ಚಿತ್ರ ಪ್ರೇಮಿ ಎದೆಯುಬ್ಬಿಸಿ ಹೇಳುವಷ್ಟರ ಮಟ್ಟಿಗೆ ಮೈತ್ರಿ ಮೂಡಿ ಬಂದಿದೆ. ಪ್ರತಿಯೊಬ್ಬ ತಂದೆ – ತಾಯಿ, ಪೊಷಕರು, ಶಿಕ್ಷಕರು ಹಾಗೂ ಮಕ್ಕಳು ನೋಡಲೆಬೇಕಾದ ಸಿನಿಮಾ ಮೈತ್ರಿ.

ಮಕ್ಕಳು ದೇವರು, ದೇವರೂ ಒಂದು ಮಗು – ಡಾ.ರಾಜ್. ಎನ್ನುವ ಕೊನೆ ಸಾಲಿನಿಂದಿಗೆ ಮೈತ್ರಿ ಚಿತ್ರ ಮನದ ಮೌಢ್ಯದ ಪರದೆಯನ್ನು ಸರಿಸುತ್ತದೆ.

 

 

– ಆದರ್ಶ. ಎ

 

2 Comments on “‘ಮೈತ್ರಿ’ ಕನ್ನಡ ಸಿನೆಮಾ – ಒಂದು ನೋಟ

  1. ಹೌದು….. ಮೈತ್ರಿ ಉತ್ತಮ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ….
    ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನ… ಬಾಲನಟರಿಬ್ಬರ ಅಭಿನಯ ಹಿರಿಯ ನಟರೆಲ್ಲರನ್ನು ಮೀರಿಸುವಂತಿದೆ.

  2. ಉತ್ತಮ ಬರವಣಿಗೆ . ಇನ್ನೂ ಇಂಥ ವಿಚಾರಗಳನ್ನು ಓದುಗರಿಗೆ ಕೊಡಿ .

Leave a Reply to krisnaveni kidoor Cancel reply

 Click this button or press Ctrl+G to toggle between Kannada and English

Your email address will not be published. Required fields are marked *