ಏಳು ಹೆಜ್ಜೆ, ಏಳು ಕತೆ…!!
ನನ್ನ ನಾನು ಮರೆತು ಬೆರೆತು
ಭೇದ ಭಾವ ಇರದೆ ಕಲೆತು
ರೆಕ್ಕೆ ಬಿಚ್ಚಿ ಹಾರುತಿರಲು
ನೋವು ತಡೆಯಲಾರದಿರಲು
ಮತ್ತೆ ಮತ್ತೆ ಅತ್ತೆ
ಸುತ್ತ ಕತ್ತಲೆ, ಒಂಟಿಯಾಗಿ ಅವಿತೆ..!!
********
ಮನದ ತುಂಬಾ ಪ್ರೀತಿ ಗುಂಗು
ಕೆನ್ನೆ ಮ್ಯಾಲೆ ಕೆಂಪು ರಂಗು
ಖುಷಿಯ ಗಳಿಗೆ ಮಾಸದಿರಲು
ಮಾಯವಾದ ಕನಸು ಮುರಿದು
ಬಿಕ್ಕಿ ಬಿಕ್ಕಿ ಅತ್ತೆ
ವಿರಹ ರಾಗ, ತಂದಿತೊಂದು ಕವಿತೆ..!!
********
ಹಣೆಯ ಬಿಂದಿ ಕುಂಕುಮ ಏರಿ
ಸೀರೆಯ ನೆರಿಗೆ ನಿಲ್ಲದೆ ಜಾರಿ
ಆಸೆಗಳೆಲ್ಲ ಗರಿಕೆದರಿ
ನವ ಮಾಸಕೂ ಹೊಸ ಪರಿ
ಖುಷಿ ಖುಷೀಲಿ ಅತ್ತೆ
ಕುವರಿ ಬಂದಳು ಅಳುತ್ತಾ ಮತ್ತೆ..!!
********
ಮನೆಯ ಒಡತಿ ಒಡಲು ಕರಗಿ
ಕರುಳ ಕುಡಿಯ ಬಾಳು ಬೆಳಗಿ
ತನ್ನ ಕಾರ್ಯ ಮುಗಿದು ಮರುಗಿ
ದೂರವಾದ ಮಗುವ ಕೂಗಿ
ಕೇಳಬೇಕು ಬಳಿಗೆ ಸಾಗಿ
ಹೇಳು ನನ್ನ ಜೀವ ಯಾರಿಗಾಗಿ…??
********
ಮರಣದಾಗೂ ಒಂದು ವ್ಯಥೆ
ಪತಿಯು ಇಲ್ಲದ ಎನ್ನ ಕತೆ
ಚುಚ್ಚಿ ಚುಚ್ಚಿ ಅಳುವುದಂತೆ
ಈ ಜಗವೇ ಒಂದು ಚಿತ್ರ ಸಂತೆ
ಬೂದಿ ಮುಚ್ಚಿದ ಕೆಂಡದಂತೆ
ಬಣ್ಣವೆಲ್ಲ ಹೀರಿ ಸುಡುವ ಬೆಂಕಿಯಂತೆ..!!
********
ಈಗ ನೋಡಿ ನನ್ನ ಸರದಿ
ಕೂದಲೆಲ್ಲಾ ನೆರೆತ ದಾದಿ
ಪತಿಯೂ ಇಲ್ಲ ಮಕ್ಕಳಿಲ್ಲ
ಎನಗೆ ಯಾರ ಹಂಗೂ ಇಲ್ಲ
ಹತ್ತು ಊರು ಕೇರಿ ಅಲೆದು
ನಡೆದೆ ಆ-ಶ್ರಮದ ದಾರಿ ಹಿಡಿದು..!!
********‘
ಎನಗೆ ಬೇಕು ಒಂದು ಹೆಜ್ಜೆ
ಎನ್ನ ಜೀವಕೆ ಜೀವವಾಗಿ
ಮತ್ತೆ ನೋವು ಕಾಣದೆ
ಕಣ್ಣ ನೀರು ಜಾರದೆ
ನವ ಸಮಾಜದ ಬದುಕಿಗಾಗಿ..!!
********
– ಅಶೋಕ್ ಕೆ. ಜಿ. ಮಿಜಾರ್.
ಚೆನ್ನಾಗಿದೆ 🙂
ವಾಹ್..! ಸೂಪರ್!
ಇಷ್ಟವಾಯಿತು…