ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ

Share Button

 

Hema1

ಹೇಮಮಾಲಾ.ಬಿ

 

ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ  ನಾಡಗೀರ ಅವರು, ನೀವು ಧಾರವಾಡದಲ್ಲಿ 2015 ಜನವರಿ 16-18 ರ ವರೆಗೆ ಜರಗಲಿರುವ ಸಾಹಿತ್ಯ-ಸಂಭ್ರಮಕ್ಕೆ ಬನ್ನಿ, ಕಾರ್ಯಕ್ರಮಗಳು ಬಹಳ ಸೊಗಸಾಗಿರುತ್ತವೆ ಎಂದಾಗ, ಶ್ರುತಿಶರ್ಮಾ ಮತ್ತು ನಾನು ಖುಷಿಯಿಂದ ಹೊರಟೆವು.  ಮೈಸೂರಿನವರಾದ ಶ್ರೀ ಕೆ.ನಂಜುಂಡಸ್ವಾಮಿ ಮತ್ತು ಬೆಂಗಳೂರಿನ ಶ್ರೀ ಎಚ್.ಎಮ್.ಚಂದ್ರಶೇಖರಯ್ಯನವರನ್ನು ಅಲ್ಲಿ ಪರಿಚಯವಾಗಿ ನಾವೆಲ್ಲರೂ ಒಂದು ತಂಡವಾಗಿ ಇದ್ದೆವು.

Dharawada university

ಜನವರಿ 15 ರಂದು ಮೈಸೂರಿನಿಂದ ಹೊರಟ ನಾವು ಮರುದಿನ ಧಾರವಾಡ ತಲಪಿ, ಅಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣ ಸೇರಿ, ನೋಂದಣಿ ಪ್ರಕ್ರಿಯೆ ಮುಗಿಸಿದೆವು.  ಕಾರ್ಯಕ್ರಮಗಳ ವೇಳಾಪಟ್ಟಿ, ಊಟ-ತಿಂಡಿಯ ಕೂಪನ್ ಗಳು ಮತ್ತು ಕೆಲವು ಪುಸ್ತಕಗಳನ್ನೊಳಗೊಂಡ ಕಿಟ್ ಒಂದನ್ನು ಎಲ್ಲಾ ಪ್ರತಿನಿಧಿಗಳಿಗೂ ಕೊಟ್ಟಿದ್ದರು.  ಅಲ್ಲಿದ್ದ ಮೂರು ದಿನಗಳಲ್ಲೂ ನಮಗೆ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಸಂಭ್ರಮಗಳ ರಸದೌತಣವಾದರೆ, ಊಟದ ಹಾಲ್ ನಲ್ಲಿ ಉತ್ತರ ಕರ್ನಾಟಕ ಶೈಲಿಯ ರಸಗವಳ ಲಭಿಸಿತ್ತು. ಧಾರವಾಡದ  ಜೋಳದ ರೊಟ್ಟಿ, ಎಣ್ಣೆಗಾಯಿ, ಹುಗ್ಗಿ, ಮಾದಲಿ, ….. ಇತ್ಯಾದಿಗಳೊಡನೆ   ಬಿಸಿಬೇಳೆ ಬಾತ್, ಮೊಸರನ್ನಗಳೂ ಇದ್ದ ಊಟ ಬಹಳ ಚೆನ್ನಾಗಿತ್ತು.    ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಇದ್ದು, ನಮಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.  ಗೌಜು ಗದ್ದಲಗಳಿಲ್ಲದೆ ಪ್ರಶಾಂತವಾಗಿದ್ದ ಮತ್ತು ಸುಂದರವಾಗಿದ್ದ  ಯೂನಿವರ್ಸಿಟಿಯ ಆವರಣದಲ್ಲಿ, ಹಿತವಾದ ಹವಾಮಾನದಲ್ಲಿ ಸುಮ್ಮನೆ ನಡೆದಾಡುವುದು  ಕೂಡಾ ಬಹಳ ಸಂತೋಷ ಕೊಟ್ಟಿತು.

16 ಜನವರಿ 2015 ರಂದು ಸಚಿವೆ ಶ್ರೀಮತಿ ಉಮಾಶ್ರೀ ಅವರಿಂದ ಉದ್ಘಾಟನೆಗೊಂಡ ಸಾಹಿತ್ಯ-ಸಂಭ್ರಮವು  “ ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ” ಎಂದು ಪತ್ತೆ ಮಾಡುವ ಜಾಡಿನಲ್ಲಿ ಸಾಗಿತು. ಪ್ರತಿ ಗೋಷ್ಠಿಯಲ್ಲೂ ಸಂಪನ್ಮೂಲ ವ್ಯಕ್ತಿಗಳೊಡನೆ ಒಬ್ಬರು ನಿರ್ದೇಶಕರಿದ್ದರು. ಇಲ್ಲಿ ಏಕಮುಖವಾದ ಉದ್ದುದ್ದ ಭಾಷಣಗಳಿರಲಿಲ್ಲ. ಬದಲಾಗಿ ಅರ್ಥಪೂರ್ಣ ಸಂವಾದಗಳಿದ್ದುವು. ಸಭಿಕರಿಗೂ ಸಮಯದ ಪರಿಮಿತಿಯೊಳಗೆ ಪ್ರಶ್ನೆಗಳನ್ನು ಕೇಳುವ ಅವಕಾಶವಿತ್ತು. ಗೋಷ್ಠಿಯ ವಿಷಯಾಂತರವಾಗದಂತೆ  ನಿಗಾ ಇಟ್ಟಿದ್ದರು ಹಾಗೂ ಸಮಯಪಾಲನೆಯನ್ನು ಕಾಯ್ದುಕೊಂಡಿದ್ದರು.  ಇಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸಲಾಯಿತು.  ಮುಂದಿನ ಭಾಗದಲ್ಲಿ  ಲಲಿತ ಪ್ರಬಂಧಗಳ ಓದು ಸುಲಲಿತವಾಗಿ ರಸಮಯವಾಗಿತ್ತು. ಮಲೆಮಹದೇಶ್ವರ, ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗ ದೇವರ ಬಗ್ಗೆ ಜಾನಪದ ಶೈಲಿಯಲ್ಲಿ ರಚಿತವಾದ ಕಂಸಾಳೆ ಪದಗಳನ್ನು ಮೈಸೂರಿನ ಗುರುರಾಜ್ ಮತ್ತು ತಂಡ ಬಹಳ ಸೊಗಸಾಗಿ ಪ್ರಸ್ತುತ ಪಡಿಸಿದರು. ಕನ್ನಡದಲ್ಲಿ ಅನುವಾದಗಳ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸಕಾರ….ಹೀಗೆ ಗೋಷ್ಠಿಗಳು ಸಾಗಿದುವು. ಸಂಜೆ ಪಂ.ಎಂ. ವೆಂಕಟೇಶಕುಮಾರ ಅವರ ಶಾಸ್ತ್ರೀಯ ಸಂಗೀತವು  ಕೇಳುಗರನ್ನು ತನ್ಮಯಗೊಳಿಸಿತು.

Sahitya sambhrama-music

ಎರಡನೆಯ ದಿನವಾದ 17  ಜನವರಿಯಂದು, ‘ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣಪತ್ರಿಕೆಗಳ ಪಾತ್ರ’ದ ಬಗ್ಗೆ ಬೆಳಕು ಚೆಲ್ಲಲಾಯಿತು. ಗೋಷ್ಠಿ ಮುಂದುವರಿದು ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ’ ಎಂದು ಚರ್ಚಿಸಲಾಯಿತು.   ಲೇ.ಜ.ಎಸ್.ಸಿ.ದೇಶಪಾಂಡೆ ಅವರು ಬರೆದ ‘ ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ’ ಮತ್ತು  ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರ ‘ ಬೇಟೆಯ ಉರುಳು’ ಪುಸ್ತಕಗಳ ಬಿಡುಗಡೆಯಾಯಿತು.  ಕನ್ನಡದ ದಿಗ್ಗಜರಾದ ಪು.ತಿ.ನರಸಿಂಹಾಚಾರ್ ಮತ್ತು ವಿ.ಕೃ.ಗೋಕಾಕ್ ಅವರ ಕವಿತೆಗಳನ್ನು ಓದಲಾಯಿತು. ಊಟದ ವಿರಾಮದ ನಂತರ  ಕನ್ನಡ ಮಾಧ್ಯಮ ಮುಂದೇನು? ಎಂದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದುಹೋಗುತ್ತಿರುವ ಕನ್ನಡದ ಬಗ್ಗೆ ಚರ್ಚಿಸಿದರು.  ಆಮೇಲೆ, ಮಹಾಭಾರತ ಪರಂಪರೆಯ ಓದಿಗೆ ವಿದ್ವಾಂಸರು ದನಿಯಾದರು. ವೈದೇಹಿ ಕಥಾ ಪ್ರಸ್ತುತಿ, ನಾಟಕಕಾರರೊಂದಿಗೆ ನಾಟಕಕಾರ ಇತ್ಯಾದಿ ವಿಷಯಗಳ  ಗೋಷ್ಠಿಯಿಂದ ಸಂಪನ್ನಗೊಂಡ ಎರಡನೆಯ ದಿನವು  ಆನಂದಕಂದರ ಕಾವ್ಯಗಾಯನದಿಂದ ಮುಕ್ತಾಯಗೊಂಡಿತು.

Sahitya sambrama-gosthi18 ಜನವರಿ ಯಂದು,  ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಸ್ಥಾನ, ಕನ್ನಡ ಪುಸ್ತಕಗಳ ಓದುಗರ ಒಲವುಗಳು ಮಾತು ಈಗಿನ ಮಾಹಿತಿ ತಂತ್ರ ಜ್ಞಾನದಿಂದ ಆಗಿರುವ ಒಳಿತು-ಕೆಡುಕುಗಳ ಬಗ್ಗೆಯೂ ವಿಚಾರ ವಿನಿಮಯವಾಯಿತು.  ಶ್ರೀ ಟಿ.ಪಿ. ಅಶೋಕ ಅವರ ‘ಕಥನ ಕಾರಣ‘ ಮತ್ತು  ಶ್ರೀ ಸಿ.ಎನ್. ರಾಮಚಂದ್ರನ್ ಅವರ ‘ ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು’ ಪುಸ್ತಕಗಳು ಬಿಡುಗಡೆಗೊಂಡುವು. ‘ಸಾಹಿತಿಗಳೊಂದಿಗೆ ನಾವು – ಪ್ರಸಂಗಗಳು’  ಕಾರ್ಯಕ್ರಮದಲ್ಲಿ ಕೆಲವು ಖ್ಯಾತ ಸಾಹಿತಿಗಳೊಡನೆ ತಮಗಾದ ಅನುಭವಗಳನ್ನು ರಸವತ್ತಾಗಿ ಚಿತ್ರಿಸಿ ಸಭೆಯಲ್ಲಿ ನಗೆಗಡಲು ಸೃಷ್ಟಿಸಿದರು.  ಊಟದ ವಿರಾಮದ ನಂತರ ‘ರಂಗಪ್ರದರ್ಶನ‘ವನ್ನು ನೋಡಿ, ‘ಭಾಷೆ ಮತ್ತು ಅಭಿನಯದ‘ ಒಳಹೊಕ್ಕು ಈ ಮೌಲ್ಯಯುತವಾದ ಸಾಹಿತ್ಯ-ಸಂಭ್ರಮಕ್ಕೆ ತೆರೆ ಬಿದ್ದಿತು. ಕೊನೆಯದಾಗಿ ಶ್ರೀ ಪ್ರಕಾಶ್ ರೈ ಅವರ ‘ಒಗ್ಗರಣೆ’ ಚಲನಚಿತ್ರ ಪ್ರದರ್ಶನವಿತ್ತು.

ಅಲ್ಲಿದ್ದ ಪುಸ್ತಕ ಮಳಿಗೆಗಳಲ್ಲಿ  ರಿಯಾಯಿತಿ ದರದಲ್ಲಿ  ಹಳೆಯ-ಹೊಸ , ಹಿರಿಯ-ಕಿರಿಯ ಬರಹಗಾರರ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದುವು. ಇದೇ ಸ್ಥಳದಲ್ಲಿ ದೊಡ್ಡದಾದ ಟಿ.ವಿ ಪರದೆಯನ್ನು ಅಳವಡಿಸಿದ್ದರು. ಸಭಾಂಗಣದಲ್ಲಿ ಸ್ಥಳಾವಕಾಶ ಸಿಗದಿದ್ದವರಿಗೆ ಇಲ್ಲಿ ಕುಳಿತು ಕಾರ್ಯಕ್ರಮಗಳನ್ನು ನೋಡುವ ವ್ಯವಸ್ಥೆ ಇದಾಗಿತ್ತು.

ಒಟ್ಟಿನಲ್ಲಿ ನಮಗೆ ಇದೊಂದು ಸಾಹಿತ್ಯ, ಸಂಗೀತ ಮತ್ತು ಸಂಭ್ರಮಗಳ ಸಂಗಮ. ಇದಕ್ಕೆ ಮೂಲ ಕಾರಣ  ಫೇಸ್ ಬುಕ್ ಗೆಳೆಯರಾದ ಹುಬ್ಬಳ್ಳಿಯ  ಶ್ರೀ ರಂಗಣ್ಣ ನಾಡಗೀರ ಅವರು. ಅವರ ಸಂದೇಶವು ನಮ್ಮನ್ನು ಮೈಸೂರಿನಿಂದ ಹೊರಡಿಸಿ ಧಾರವಾಡ ತಲಪಿಸಿತು. ಸಾಹಿತ್ಯ-ಸಂಭ್ರಮದಲ್ಲಿ ನಾವಿಬ್ಬರು  ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡುವುದರ ಜೊತೆಗೆ, ತಮ್ಮ ಸಮಯವನ್ನು ಹೊಂದಿಸಿಕೊಂಡು, ನಮಗೆ  ಸಾಧನಕೇರಿಯಲ್ಲಿರುವ  ದ.ರಾ.ಬೇಂದ್ರೆಯವರ  ನಿವಾಸ, ಮಲಪ್ರಭಾ ಅಣೆಕಟ್ಟು, ಸವದತ್ತಿಯಲ್ಲಿರುವ ಎಲ್ಲಮ್ಮ ದೇವಾಲಯ, ಮರುಘಾ ಮಠ ಮತ್ತು ಸಿದ್ಧಾರೂಢ ಮಠಗಳನ್ನೂ ತೋರಿಸಿ, ತಮ್ಮ ನಿವಾಸಕ್ಕೂ ಕರೆದೊಯ್ದಿದ್ದರು. ಹಿತೈಷಿಯಾದ ಅವರನ್ನೂ, ಅವರ  ಮನೆಯವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

 

– ಹೇಮಮಾಲಾ.ಬಿ

4 Responses

  1. Bharathi Gopika says:

    ಹೇಮಕ್ಕ,,, ನಿಮ್ಮ ಕನ್ನಡ ಭಾಷಾಭಿಮಾನಕ್ಕೆ ನನ್ನದೊ೦ದು ನಮನ..
    ಒಳ್ಳೆಯ ಪದಗಳಿ೦ದ ಪೋಣಿಸಿದ ಕನ್ನಡ ಸುರಗಿ ಮಾಲೆ!

  2. Ranganna Nadgir says:

    Dhanyawadagalu, namagella mattomme samhitha sambhramada savi ruchiya nanapugalella marukalisidawu, uttamawada vivaranegalu photo sahita Chennagi moodi bandiddu, Nimma sahitya rachane munduwaresiri, Nadgir dampatigala shubha Haraikegalu

  3. Pushpa Nagathihalli says:

    ನಮ್ಮ ಕನ್ನಡಅಸಡ್ಡೆಗೊಳಗಾಗಿ ನಶಿಸಿ ಹೋಗುತ್ತಿರುವಾಗ ಕನ್ನಡದ ಬಗ್ಗೆ ಇಷ್ಟೊಂದು ಆಸಕ್ತಿ ಇಟ್ಟುಕೊಂಡಿರುವ ಹೇಮಾಮಾಲಾಅವರು ಅಭಿನಂದನಾರ್ಹರು.ಧಾರವಾಡದ ಸಾಹಿತ್ಯ ಸಂಗೀತ ಸಂಭ್ರಮದಲ್ಲಿ ನಾವೇ ಭಾಗವಹಿಸಿದಂತೆ ಅನ್ನಿಸಿತು.ಥ್ಯಾಂಕ್ಸ್ ಹೇಮಾ.

  4. savithrisbhat says:

    ಸಾಹಿತ್ಯ ಸಂಭ್ರಮ ವನ್ನು ಕಣ್ಣಿಗೆ ಕಟ್ಟುವ೦ತೆ ಬರೆದಿದ್ದೀರಿ .ಲೇಖನ ಚೆನ್ನಾಗಿ ಮೂಡಿ ಬ೦ದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: