ನಾನು,ಅವನು ಮತ್ತು..…
ನನ್ನ ಬಾಳಲ್ಲಿ ಅವನ ಪ್ರವೇಶ ಅಗುವಾಗ ನನಗೆ ಭರ್ತಿ ಮೂವತ್ತು ವರ್ಷ ಕಳ್ದಿತ್ತು. “ನಿಮಗಿಬ್ಬರಿಗೂ ಜೋಡಿ ಸರಿ ಬರಲ್ಲ” ಹೇಳಿ ಎಲ್ಲರು ಹೇಳಿದ್ರು. ನನಗೂ ಹಾಗೇ ಅನ್ನಿಸಿತ್ತು. ಅದರೆ ಎಂಥ ಮಾಡುದು ? ನಾನು ಬಿಟ್ರೂ ಅವನು ಬಿಡಲಾರ. ಹಾಗೂ ಹೀಗೂ ಕಷ್ಟ ಪಟ್ಟುಕೊಂಡು ಹತ್ತು ವರುಷ ಇವನೊಟ್ಟಿಂಗೇ ಇದ್ದೆ- ಇವನೊಟ್ಟಿಂಗೆ ನಾನು ಇದ್ದೆ ಹೇಳಿ ಗೊತ್ತಾಗದ್ದ ಹಾಗೆ. ಆದ್ರೆ ಎಷ್ಟು ದಿನ ಹೀಗೇ ನಡಿಯುತ್ತೆ ?
ನನ್ನದೇ ಸ್ಥಿತಿಯಲ್ಲಿದ್ದ, ಕದ್ದು ಮುಚ್ಚಿ ಸಂಧಾನ ಮಾಡಿಕೊಂಡಿದ್ದ, ನನ್ನ ಜೊತೆಯವರನ್ನ ನೋಡಿದಾಗ, ನಾನುದೇ ಹೀಗೇ ಇದ್ದುಬಿಡುವುದಾ ? ಹೇಳಿ ಯೋಚನೆ ಮಾಡಿಕೊಂಡಿದ್ದೆ. ಈಗಾಗ್ಲೇ ರಾಜಿಯಾಗಿದ್ದ ಗೆಳತಿಯರು ಹೇಳಿದರು “ನೀನು ನಮ್ಮ ಹಾಗೆ ಆಗ್ಬೇಡ, ಯಾವ ವಿಷ್ಯನ್ನು ಮುಚ್ಚಿ ಇಡಬೇಡ. ಹೇಗೆ ಇರತ್ತೋ ಹಾಗೆ ಒಪ್ಪಿಗೊ, ಇಲ್ಲದ್ರೇ ನಮ್ಮ ಹಾಗೆ ಆಗಿಬಿಡುತ್ತೆ, ನಾವಂತು ಹಿಂತಿರುಗಿ ಬಾರದ್ದಷ್ಟು ಮುಂದೆ ಹೋಗಿ ಆಗಿದೆ”. ಅವರ ಮಾತೂ ಸರಿ ಹೇಳಿ ಕಾಣತ್ತೆ. ಹೌದು…. ಅವನು ನನ್ನನ್ನ ಪೂರ್ತಿ ಆವರಿಸುವುದರ ಮೊದಲೇ ಹೊರ ಪ್ರಪಂಚಕ್ಕೆ ನನ್ನ-ಅವನ ಸಂಬಂಧ ಹೇಗಿದೆ ಹೇಳಿ ಹೇಳಿಬಿಡಬೇಕು…………
ಮೊನ್ನೆ ಮೊನ್ನೆ ನಾನು ಆ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಟ್ಟದ್ದು ಸತ್ಯ. ಆದರೆ ಅದರಿಂದ ಎಷ್ಟು ಉಪದ್ರ ಆಯಿತು ಗೊತ್ತಿದ್ಯಾ………….?
ನನ್ನ ಈ ಪ್ರಯತ್ನದಿಂದ ನನ್ನ ಮಕ್ಕಳಿಗೆ ತುಂಬಾ… ಕಿರಿಕಿರಿ ಆಯ್ತು. ಅವರ ದೋಸ್ತಿಗಳು ಎಲ್ಲರೂ ನನ್ನ ಬಗ್ಗೆಯೇ ಮಾತಾಡಿದ್ರೆ ಉಪದ್ರ ಆಗದೆ ಇರುತ್ತಾ ? ಆದ್ರೇ… ಮಕ್ಕಳಿಗೆ ಉಪದ್ರ ಅಗತ್ತೆ ಹೇಳಿ ನಾನು ಕಳ್ಳರಂಗೆ ಎಷ್ಟು ದಿನ ಇರೋಕಾಗುತ್ತೆ ? ನನ್ನ ಹಾಗೆ ತೊಂದರೆಯಲ್ಲಿ ಇರುವ 90 % ಜನ ಮಾಡುತ್ತಾ ಇರುವ ಹಾಗೆ, ನಾನು ಸಹ ಕಳ್ಳರ ಹಾಗೆ ಇದ್ದು ಬಿಡುವುದಾ ?
ನನ್ನ ಮಕ್ಕಳ ಗೆಳೆಯರಿಗೆ ಎಷ್ಟು ಸೊಕ್ಕು ಅಂತೀರಿ ? ನೇರವಾಗಿ ನನಗೇ ಆ ವಿಷ್ಯದ ಬಗ್ಗೆ ಪ್ರಶ್ನೆ ಕೇಳ್ತಾರೆ……….. ಎಂಥ ಉತ್ತರ ಕೊಡೋದು ಅವರಿಗೆ ?
ನನ್ನ ಹಾಗೆ ಕಳ್ಳ ಜೀವನ ಮಾಡುತಾ ಇರುವ, ನನಗಿಂತ ವಯಸ್ಸಿನಲ್ಲಿ ದೊಡ್ಡೋರು, ನನ್ನ ಬಗ್ಗೆ ಚುಚ್ಚಿ ಮಾತಾಡ್ತಾರೆ.
ಅಥವಾ ನನಗೆ ಹಾಗೆ ಕಾಣುವುದಾ ? ಗೊತ್ತಿಲ್ಲ.
ನನ್ನ ಹಣೆ ಬರಹಕ್ಕೆ ಎಲ್ಲಿಗೆ ಹೋದ್ರು ಅವನ ಬಗ್ಗೆಯೇ ಮಾತಾಡ್ತಾರೆ. ಮೊನ್ನೆ ಒಂದು ಸಮಾರಂಭಕ್ಕೆ ಹೋಗಿದ್ದೆವು. ಅಲ್ಲಿಗೆ ತಲುಪಿ ಇನ್ನು ಎರಡು ನಿಮಿಷವೂ ಆಗಿರಲಿಲ್ಲ. ಅವನ ಬಗ್ಗೆಯೇ ಪ್ರಶ್ನೆ ಕೇಳಿದ್ರು. ಮತ್ತೆ ಕೆಲವ್ರು ನಾನು ಕೇಳದೆ ಇದ್ದರೂ ಸಲಹೆ ಕೊಟ್ಟರು. ಇವರೆಲ್ಲರನ್ನು ಎಂಥ ಹೇಳಿ ಕರೆಯುವುದು ? ಹತ್ತಿರದ ನೆಂಟ್ರು ಬೇರೆ ? ಅವರನ್ನು ಬಿಡುವಹಾಗಿಲ್ಲ. ನನ್ನ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಳ್ಳುವುದಕ್ಕೆ ಬಿಡದ ಇವರನ್ನು ” ಹಿತ ಶತ್ರುಗಳು” ಅಂತ ಹೇಳಬೇಕಷ್ಟೆ ! ಅಲ್ಲವಾ ?
ನನ್ನ ಮುಂದೆ ಎರಡೇ ಆಯ್ಕೆ ಇರೋದು. ಒಂದು ಕಳ್ಳರ ಜೊತೆ ಕಳ್ಳರ ಹಾಗೆ ಇದ್ದು ಬಿಡುವುದು. ಸಾಯುವವರೆಗೆ ಕಳ್ಳರ ಹಾಗೆ ಜೀವನ ! ಇನ್ನೊಂದು ಯಾರು ಎಂಥ ಹೇಳ್ತಾರೆ ನೋಡದೆ ನನ್ನ-ಇವನ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡು ಬಿಡುಬಿಡುವುದು. ಆಗ ಈ ಹತ್ತು ವರ್ಷದ ಕಳ್ಳ ಬಾಳಿಗೆ ಒಂದು ಮುಕ್ತಾಯ ಹೇಳಿ ಆಗುತ್ತೆ. ಮುಂದಾದ್ರು ಅರಾಮಾಗಿ ಇರಬಹುದಲ್ಲ ! ನಿರ್ಧಾರ ಮತ್ತೆ ನನಗೇ ಬಿಟ್ಟದ್ದು ಅಲ್ಲವಾ ? ಇನ್ನಾದರೂ ಪ್ರಾಮಾಣಿಕಳಾಗಿ ಇರಬೇಕು ಹೇಳಿ ನಿರ್ಧಾರ ಮಾಡಿದೀನಿ. ನನ್ನ ಆಸೆಗೆ ನಿಮ್ಮೆಲ್ಲರ ಸಹಕಾರ- ಪ್ರೊತ್ಸಾಹ ಕೊಡ್ತೀರಲ್ವಾ ?
ಎಂತ ಇವಳ ಕಥೆ ?
ತಲೆಕೆಟ್ಟೋರ ಹಾಗೆ ಮಾತಾಡ್ತಾ ಇದ್ದಾಳಲ್ವಾ ? ಹೇಳಿ ತಲೆ ಬೆಸಿ ಮಾಡಿಕೊಂಡಿರೋ ಹೇಗೆ ? ನಾನು ರಾಜಿ ಅಗಬೇಕಿರೋದು ಬೇರೆ ಯಾರೊಟ್ಟಿಗೂ ಅಲ್ಲಪ್ಪ……….. ನನ್ನ ಪ್ರಬುದ್ಧತೆಯ ( ????) ಸಂಕೇತವಾಗಿರೋ “ಬೆಳಿ ಕೂದಲ” ಜೊತೆಯಲ್ಲಿ !!!!!!
ಗೊತ್ತಾಯ್ತಲ್ಲ ?
ಇನ್ನು ನೀವು ಸಹ ತಲೆ ಕೂದಲಿಗೆ ಬಣ್ಣ ಹಾಕದೆ, ನನಗೆ ಪ್ರೋತ್ಸಾಹ ಕೊಡ್ತೀರಲ್ವಾ(!!!! ????)…….. ನನ್ನ ಪಕ್ಷಕ್ಕೆ ಸೇರುತ್ತೀರಲ್ವಾ ?
– ಸುರೇಖಾ ಭಟ್ ಭೀಮಗುಳಿ, ಬೆಂಗಳೂರು.
Grow old gracefully !:)
ನನ್ನದೂ ಇದೇ ಕಥೆ.. ನಾನೂ ನೀವೂ ಒಂದೇ ದೋಣಿಯ ಪಯಣಿಗರು…