ಕ್ಷಮಯಾಧರಿತ್ರಿ ಇನ್ನೆಷ್ಟು ದಿನ ಕ್ಷಮಿಸುವೆ?
ಕೆಲವು ತಿಂಗಳುಗಳ ಹಿಂದೆ ನಮಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ(Obstetrics and gynecology) ವಿಭಾಗಕ್ಕೆ ಪೋಸ್ಟಿಂಗ್ಸ್ ಹಾಕಿದ್ದರು.ಅವತ್ತು ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೆರಿಗೆ ರೂಂ(ಲೇಬರ್ ರೂಂ) ಹೊಕ್ಕಿದ್ದೆ.ನಾಲ್ಕೈದು ತುಂಬು ಗರ್ಭಿಣಿಯರು ಹೆರಿಗೆ ನೋವಿನಿಂದ ನರಳುತ್ತಾ,ಸೂರು ಹಾರಿಹೋಗುವಂತೆ ನೋವಿನಿಂದ ಕಿರುಚುತ್ತಾ,ತಮ್ಮ ಕರುಳಿನ ಕುಡಿಯ ಆಗಮನವನ್ನೇ ನಿರೀಕ್ಷಿಸುತ್ತಾ ಬೆಡ್ ಮೇಲೆ ಮಲಗಿದ್ದರು.ಆ ಸನ್ನಿವೇಶವನ್ನು ಬರೆಯಲು,ಮಾತನಾಡಲು ಬಹಳ ಸುಲಭ.ಆದರೆ ಹೆರಿಗೆ ನೋವಿನಿಂದ ನರಳುತ್ತಿರುವ ಗರ್ಭಿಣಿ ಹೆಂಗಸಿನ ಕಷ್ಟ, ನೋವು ಇದೆಯಲ್ಲ ಅದು ಅಕ್ಷರ,ಮಾತುಗಳಿಗೆ ನಿಲುಕದ್ದು.ಪ್ರತಿ ಸಾರಿ ಗರ್ಭಕೋಶ ಸಂಕುಚಿತಗೊಂಡಾಗಲೂ ಗರ್ಭಿಣಿ ತಡೆಯಲಾಗದ ನೋವಿನಿಂದ ಕಿರುಚಾಡುತ್ತಾಳೆ.ಅದಕ್ಕೇ ಇರಬೇಕು ಹೆರಿಗೆ ನೋವನ್ನು (Mother of all pain) ಎಂದು ಕರೆಯುವುದು.ಕೆಲವರಂತೂ “ನನಗೆ ಈ ಮಗು ಬೇಡ.ನೋವು ತಡೆಯಲಾಗುತ್ತಿಲ್ಲ ಡಾಕ್ಟ್ರೇ,ಏನಾದರೂ ಮಾಡಿ ನೋವು ಕಡಿಮೆ ಮಾಡಿ” ಎಂದು ಅಳುತ್ತಾರೆ.ಅಂದರೆ ತಾನು ಒಂಭತ್ತು ತಿಂಗಳು ಬಹಳ ಜತನದಿಂದ ತನ್ನ ಓಡಲಲ್ಲಿ ಕಾಪಾಡಿಕೊಂಡು ಬಂದ ತನ್ನ ಮಗು,ತನ್ನದೇ ರಕ್ತ,ಮಾಂಸದ ಭಾಗವಾಗಿರುವ ಆ ಕಂದನ ಆಗಮನಕ್ಕೆ ಕಾತರದಿಂದ ಕಾದಿದ್ದು ಈಗ ಹೆರಿಗೆಯ ಸಮಯಕ್ಕೆ ನೋವು ತಾಳಲಾರದೇ ಮಗುವೇ ಬೇಡ,ನೋವು ಕಡಿಮೆಯಾದರೆ ಸಾಕು ಎಂದು ಕೂಗುತ್ತಾಳೆಂದರೆ ಆ ನೋವು ಎಷ್ಟು ತೀವ್ರವಾಗಿರಬಹುದು?ಅದನ್ನು ತಡೆದುಕೊಳ್ಳುವ ಆ ಸ್ತ್ರೀ ಎಷ್ಟು ಗಟ್ಟಿಗಳಿರಬಹುದು?ಆದರೂ ಪ್ರಾಣ ಹಿಂಡುವಂತೆ ಮಾಡುವ ಆ ನೋವನ್ನೂ ತಡೆದುಕೊಂಡು ಮಗುವಿಗೆ ಜನ್ಮ ನೀಡಿ ನಮ್ಮೆಲ್ಲರ ಅಸ್ತಿತ್ವಕ್ಕೆ ಕಾರಣಳಾಗುತ್ತಾಳಲ್ಲ ಆ ಹೆಣ್ಣು ಕ್ಷಮಯಾಧರಿತ್ರಿಯಲ್ಲದೇ ಮತ್ತಿನ್ನೇನು?
ಕೆಲವು ಗರ್ಭಿಣಿ ಮಹಿಳೆಯರು ನೋವಿನಿಂದ,ಒತ್ತಡದಿಂದ ಬಳಲಿ ಆಯಾಸಗೊಂಡು ಬಾಯಾರಿ “ಸ್ವಲ್ಪ ಕುಡಿಯಲು ನೀರು ಕೊಡಿ” ಎಂದು ಕೇಳುತ್ತಾರೆ.ನಮ್ಮಂಥ ವೈದ್ಯಕೀಯ ವಿದ್ಯಾರ್ಥಿಗಳು ಅವರ ಕೂಗು ಕೇಳಲಾರದೇ ನೀರು ಕೊಡಲು ಹೋದರೆ ನಮ್ಮ ಸೀನಿಯರ್ ಡಾಕ್ಟರ್ ಗಳು,ಪ್ರೊಫೇಸರ್ ಗಳು “Don’t give water she will vomit” ಎಂದು ನಮ್ಮನ್ನು ನೀರು ಕೊಡದಂತೆ ತಡೆಯುತ್ತಾರೆ.ಅವರ ದಾಹದ ಕೂಗನ್ನು ಕೇಳಲು ಸಾಧ್ಯವೇ ಇಲ್ಲ.ಗಂಟೆಗಟ್ಟಲೇ ನೀರಿನ ದಾಹವನ್ನೂ ತಡೆದುಕೊಂಡು,ತಡೆಯಲಸಾಧ್ಯವಾದ ನೋವನ್ನೂ ತಡೆದುಕೊಂಡು ಮಗುವಿಗೆ ಜನ್ಮನೀಡುತ್ತಾಳಲ್ಲ ಆಕೆ ಕ್ಷಮಯಾಧರಿತ್ರಿಯೇ ಸರಿ.ಹಾಗೆ ಗರ್ಭಿಣಿಯರು ನೀರು ಕೇಳಿದಾಗಲೆಲ್ಲಾ ಲೇಬರ್ ರೂಂನಲ್ಲಿರುವ ನಮಗೆ ಇನ್ನೊಂದು ಹೃದಯವಿದ್ರಾವಕ ಘಟನೆ ನೆನಪಾಗುತ್ತದೆ.ಕೆಲವು ತಿಂಗಳುಗಳ ಹಿಂದೆ ನಮ್ಮದೇ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಲೇಬರ್ ರೂಂನಲ್ಲಿ ಮಲಗಿದ್ದ ತುಂಬು ಗರ್ಭಿಣಿಯೊಬ್ಬಳು ದಾಹದಿಂದ ನೀರು ಕೇಳಿದಾಗ ಸಿಗದೇ ನಂತರ ಅರೆಪ್ರಜ್ಞಾವಸ್ಥೆಯಲ್ಲಿ ನೀರು ಎಂದು ತಿಳಿದು ಫಿನಾಯಿಲ್ ಕುಡಿದು ಮೃತಪಟ್ಟಿದ್ದಳು.ತಾಯಿಯ ಜೊತೆ ಜಗತ್ತನ್ನೇ ನೋಡದ ಮಗುವೂ ಶಿವನ ಪಾದ ಸೇರಿತ್ತು.ತನ್ನ ಕರುಳ ಕುಡಿಯನ್ನು ಈ ಪ್ರಪಂಚಕ್ಕೆ ತರುವ ಯುದ್ಧದಲ್ಲಿ ಆ ತಾಯಿ ತನ್ನ ಪ್ರಾಣವನ್ನೇ ಬಲಿಕೊಟ್ಟಳಲ್ಲ.ತಾಯ್ತನಕ್ಕಾಗಿ ಎಲ್ಲ ತ್ಯಾಗವನ್ನೂ ಮಾಡುವ ಕೊನೆಗೆ ತನ್ನ ಪ್ರಾಣವನ್ನೇ ಕೊಡುವ ಹೆಣ್ಣು ಕ್ಷಮಯಾಧರಿತ್ರಿಯಲ್ಲವೇ?
ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಮೇಲೆ ಅತ್ಯಾಚಾರ,ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ.ಎಲ್ಲ ಸಂಬಂಧಗಳನ್ನೂ ಮೀರಿ,ಎಲ್ಲ ತತ್ವದ ಎಲ್ಲೆ ಮೀರಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾವನೇ ಸೊಸೆಯ ಮೇಲೆ,ಅಪ್ಪ ಮಗಳ ಮೇಲೆ,ಅಣ್ಣ ತಂಗಿಯ ಮೇಲೆ ಅತ್ಯಾಚಾರವೆಸಗುತ್ತಿದ್ದಾರೆ.ಎರಡು ವರ್ಷದ ಹಸುಳೆಯ ಮೇಲೂ ಎಂಬತ್ತು ವರ್ಷದ ಮುದುಕಿಯ ಮೇಲೂ ಅತ್ಯಾಚಾರ ನಡೆಯುವುದು ಈಗೀಗ ಸಾಮಾನ್ಯ ಸಂಗತಿಯಾಗಿದೆ.ಅತ್ಯಾಚಾರದ ತವರು ನೆಲವಾಗುವತ್ತ ಭಾರತ ದಾಪುಗಾಲಿಡುತ್ತಿದೆ.ಮೇಲೆ ಗರ್ಭಿಣಿ ಹೆಂಗಸರ ಬಗ್ಗೆ ಏಕೆ ಬರೆದೆನೆಂದರೆ ಈ ಅತ್ಯಾಚಾರಿಗಳನ್ನೆಲ್ಲಾ ಹೆರಿಗೆ ರೂಂಗೆ ತೆಗೆದುಕೊಂಡು ಹೋಗಿ ಬಿಡಬೇಕು.ಅಲ್ಲಿ ಆ ಗರ್ಭಿಣಿಯರು ಅನುಭವಿಸುವ ನೋವನ್ನು ಅತ್ಯಾಚಾರಿಗಳು ನೋಡಬೇಕು.ಇಂಥ ನೋವನ್ನುಂಡೇ ಜೀವನ್ಮರಣ ಹೋರಾಟವನ್ನು ಮಾಡಿ ತಮ್ಮ ತಾಯಿ ತಮಗೆ ಜನ್ಮ ನೀಡಿದ್ದಾಳೆ.ಅವಳೂ ಒಂದು ಹೆಣ್ಣು.ಇಂಥ ಹೆರಿಗೆ ನೋವನ್ನು ಅನುಭವಿಸುವ ಹೆಣ್ಣಿನ ಮೇಲೆ ತಾವು ಅತ್ಯಾಚಾರವೆಸಗಿದ್ದೇವೆ.ನಿಜವಾಗಿಯೂ ಹೃದಯ,ಮನಸ್ಸು ಇರುವ ಮನುಷ್ಯನಾದರೆ ಎಂಥ ಕಲ್ಲು ಹೃದಯದವನಿಗೂ ಮಹಿಳೆಯರು ಹೆರಿಗೆ ಸಮಯದಲ್ಲಿ ಅನುಭವಿಸುವ ಕಷ್ಟಗಳನ್ನು ನೋಡಿದಾಗ ಹೃದಯ ಕರಗಲೇ ಬೇಕು.ಇದಕ್ಕೆ ಅತ್ಯಾಚಾರಿಗಳೂ ಹೊರತಲ್ಲ.ಹಾಗಾಗಿಲ್ಲವೆಂದಾದರೆ ಅವರು ಮನುಷ್ಯರೇ ಅಲ್ಲ.
ದೇವರು ತಾನೊಬ್ಬನೇ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲವೆಂದು ಹೆಣ್ಣನ್ನು ಸೃಷ್ಟಿಸಿರಬೇಕು. ತಾಯಿಯಾಗಿ, ತಂಗಿಯಾಗಿ, ಮಗಳಾಗಿ, ಹೆಂಡತಿಯಾಗಿ,ಅತ್ತಿಗೆಯಾಗಿ,ಅತ್ತೆಯಾಗಿ ಪ್ರೀತಿ,ಪ್ರೇಮ,ಮಮತೆ,ವಾತ್ಸಲ್ಯದ ಮುಸಲಧಾರೆಯನ್ನೇ ಉಣಬಡಿಸುವವಳು ಹೆಣ್ಣು.ಅವಳು ಮಾಡದ ಕೆಲಸವಿಲ್ಲ.ಮೊದಲು ಮನೆಯ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿ ಗೃಹಿಣಿಯಾಗಿದ್ದಳು ಅವಳು.ಆದರೆ ಯಾವಾಗ ಗೃಹಿಣಿಯಂಥ ಶ್ರೇಷ್ಟ ಜವಾಬ್ದಾರಿಗೆ ಸಿಗಬೇಕಾದ ಗೌರವ,ಮನ್ನಣೆ,ಪ್ರೀತಿ ಅವಳಿಗೆ ಮನೆಯಲ್ಲಿ ಸಿಗಲಿಲ್ಲವೋ ಆಗ ಪುರುಷನಿಗಿಂತ ತಾನೇನು ಕಮ್ಮಿಯಿಲ್ಲ ಎಂದು ತೋರಿಸಲು ಮನೆಯಿಂದ ಹೊರಗೆ ಬಂದು ಬಾಹ್ಯ ಪ್ರಪಂಚಕ್ಕೆ ತೆರೆದುಕೊಂಡಳು.ಹೆಚ್ಚೂ ಕಡಿಮೆ ಪುರುಷರು ಮಾಡುವ ಎಲ್ಲಾ ಕೆಲಸಗಳನ್ನೂ ನಿರ್ವಹಿಸತೊಡಗಿದಳು.ಆದರೆ ಅಲ್ಲೂ ಅವಳ ಮೇಲೆ ದಬ್ಬಾಳಿಕೆ,ದೌರ್ಜನ್ಯ,ಅನ್ಯಾಯಗಳು.ಮನೆಯ ಹೊರಗೆ ಇಂಥ ಕಿರುಕುಳಗಳನ್ನು ಸಹಿಸಿಕೊಂಡು ನೆಮ್ಮದಿ ಯನ್ನರಸಿ ಮನೆಗೆ ಬಂದರೆ ಅಲ್ಲೂ ಅವಳ ಮೇಲೆ ದಬ್ಬಾಳಿಕೆ,ದರ್ಪ.ತನ್ನ ನೋವನ್ನು,ಸಂಕಟವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಅವಳು ಇರುತ್ತಾಳೆ.ಬಹುತೇಕ ಸಂದರ್ಭದಲ್ಲಿ ಪ್ರತಿಭಟಿಸಲಾಗದೇ ಮೌನವಾಗಿ ರೋದಿಸಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳಲ್ಲ ಅದಕ್ಕೇ ಅವಳು ಕ್ಷಮಯಾಧರಿತ್ರಿ.
ಇಂದಿನ ಆಧುನಿಕ ಯುಗದಲ್ಲಿ ಮಹಿಳೆ ಆಡಳಿತ ಯಂತ್ರದಲ್ಲೂ ಕೈಜೋಡಿಸುತ್ತಿದ್ದಾಳೆ.ಐ.ಎ.ಎಸ್. ಐ.ಪಿ.ಎಸ್ ಮುಂತಾದ ಉನ್ನತ ತರಬೇತಿ ಪಡೆದು ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಆದರೆ ಎಷ್ಟು ಉನ್ನತ ಸ್ಥಾನಕ್ಕೆ ಹೋದರೂ ಕಥೆ ಇಷ್ಟೇ.ಅಲ್ಲೂ ಆಕೆ ಹೆಣ್ಣು ಎಂಬ ಕಾರಣಕ್ಕಾಗಿ ದಬ್ಬಾಳಿಕೆ,ದೌರ್ಜನ್ಯಗಳು,ನಿರಂತರ ಲೈಂಗಿಕ ಶೋಷಣೆ ಇಂದು ಸರ್ವೇಸಾಮಾನ್ಯ ಸಂಗತಿಯಾಗಿದೆ.ತಾನು ಪ್ರಾಮಾಣಿಕಳಾಗಿದ್ದರಂತೂ ಮುಗಿದೇ ಹೋಯಿತು.ಭ್ರಷ್ಟ ವ್ಯವಸ್ಥೆ ಅವಳನ್ನು ಸದಾ ಮುಗಿಸಲು ಹೊಂಚು ಹಾಕುತ್ತಿರುತ್ತದೆ.ಪ್ರಾಮಾಣಿಕಳು ಎಂಬ ಏಕಮಾತ್ರ ಕಾರಣಕ್ಕೆ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ.ಇಲ್ಲಿಯೂ ಅಷ್ಟೇ ಅವಳ ಗೋಳನ್ನು ಆಲಿಸುವವರು ಯಾರೂ ಇರುವುದಿಲ್ಲ.ತನ್ನ ಹೃದಯದಲ್ಲಿ ಕುದಿಯುತ್ತಿರುವ ಲಾವಾರಸವನ್ನು ಅರಗಿಸಿಕೊಳ್ಳಲೂ ಆಗದೇ ಹೊರಬಿಡಲೂ ಆಗದೇ ನೋವು ಅನುಭವಿಸುವ ಅವಳು ಕ್ಷಮಯಾಧರಿತ್ರಿ.
ಇಂಥ ಕ್ಷಮಯಾಧರಿತ್ರಿ ಇಂದು ತೀವ್ರ ಆತಂಕಕ್ಕೆ ಸಿಲುಕಿದ್ದಾಳೆ.ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ.ಎಲ್ಲೆಲ್ಲೂ ಅತ್ಯಾಚಾರ,ಅನಾಚಾರಗಳಿಂದ ಅವಳ ಪಾತಿವ್ರತ್ಯಕ್ಕೆ ನಿರಂತರ ಧಕ್ಕೆಯಾಗುತ್ತಿದೆ.ತನಗೆ ತಾನೇ ಸಾಂತ್ವಾನ ಹೇಳಿಕೊಂಡು ಸ್ತ್ರೀ ಮಾನಸಿಕವಾಗಿ ದಿನೇ ದಿನೇ ಸಾಯುತ್ತಿದ್ದಾಳೆ.ಅಷ್ಟಕ್ಕೂ ಅವಳು ಎಲ್ಲವನ್ನೂ ಎದುರಿಸುತ್ತೇನೆ,ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ಹೋದರೂ ಅದಕ್ಕೆ ಸಮಾಜದ ಬೆಂಬಲ ಸಿಗುವುದಿಲ್ಲ.ಬದಲಿಗೆ ಅವಳನ್ನೇ ಅನುಮಾನದ ಕಣ್ಣುಗಳಿಂದ ನೋಡುತ್ತಾರೆ.ಅತ್ಯಾಚಾರಿಯು ದೈಹಿಕ ಅತ್ಯಾಚಾರವನ್ನು ಮಾಡಿದರೆ ಸುತ್ತಮುತ್ತಲಿನ ಸಮಾಜ ಪ್ರತಿದಿನವೂ ಅವಳ ಮೇಲೆ ಮಾನಸಿಕ ಅತ್ಯಾಚಾರ ಮಾಡುತ್ತಲೇ ಇರುತ್ತದೆ.
ಒಂದು ಕಡೆ ನಿರಂತರ ದೌರ್ಜನ್ಯ,ಇನ್ನೊಂದು ಕಡೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಅರಚುವ ಕೆಲವು ವಿಚಾರವಾದಿಗಳು,ಮತ್ತೊಂದೆಡೆ ಮಿತಿಮೀರಿದ ಸ್ವೇಚ್ಛಾಚಾರದಿಂದ ಸಂಸ್ಕೃತಿಯನ್ನು ಹಾಳುಗೆಡವುತ್ತಿರುವ ಆಧುನಿಕ ಯುಗದ ಯುವಜನರು.ಈ ಎಲ್ಲದರ ಮಧ್ಯೆ ಅಮಾಯಕ ಶ್ರೀಸಾಮಾನ್ಯ ಸ್ತ್ರೀಯ ಸ್ಥಿತಿಯ ಬಗ್ಗೆ ನಾವು ಸ್ವಲ್ಪ ಆಲೋಚಿಸಬೇಕು.‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ’ ಎಂಬ ಸಂಸ್ಕೃತದ ಮಾತು ಕೇವಲ ಮಾತಾಗಿಯೇ ಉಳಿಯಬಾರದು.ಸದಾ ಅವಳ ದೇಹದ ಮೇಲೆಯೇ ಕಣ್ಣು ಹಾಕುವ ಎಲ್ಲರೂ ಆಕೆಗೆ ಮನಸ್ಸು,ಹೃದಯಗಳಿವೆ ಎಂಬುದನ್ನೂ ಆಲೋಚಿಸಬೇಕು.ಆಕೆ ಮನಸ್ಸಿನಲ್ಲೇ ಹಿಡಿಶಾಪ ಹಾಕಿದರೆ ನಂತರ ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ.ಅವಳು ಕ್ಷಮಯಾಧರಿತ್ರಿ,ಏನು ಮಾಡಿದರೂ ಸಹಿಸಿಕೊಳ್ಳುವಳು ಎಂದು ಸದಾ ದೌರ್ಜನ್ಯವೆಸಗಿದರೆ ಮುಂದೊಂದು ದಿನ ಸ್ತ್ರೀ ಸಂತತಿಯೇ ನಾಶವಾಗಿ ಬ್ರಹ್ಮಾಂಡವೇ ಅಂತ್ಯವಾಗುತ್ತದೆ.
ಕ್ಷಮಯಾಧರಿತ್ರಿಯಾಗಿದ್ದ ಹೆಣ್ಣು ಇನ್ನು ಮುಂದೆ ಉಗ್ರಕಾಳಿಯ ರೂಪವನ್ನು ತಾಳಬೇಕು.ಹೆಚ್ಚೂ ಕಡಿಮೆ ಈ ಜಗತ್ತಿನಲ್ಲಿರುವ ಎಲ್ಲಾ ವಿದ್ಯೆಗಳನ್ನೂ ಕಲಿತಿರುವ ಹೆಣ್ಣಿಗೆ ತನ್ನ ಆತ್ಮರಕ್ಷಣೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ಕಷ್ಟವೇನಲ್ಲ.ತನ್ನ ಮೇಲೆ ದೌರ್ಜನ್ಯ,ದಬ್ಬಾಳಿಕೆ ಮಾಡುವವರನ್ನು ಯಾವ ಕಾರಣಕ್ಕೂ ಕ್ಷಮಿಸಬಾರದು.ತನ್ನೊಬ್ಬಳಿಂದ ಏನು ಸಾಧ್ಯ ಎಂದು ಸುಮ್ಮನೇ ಕುಳಿತುಕೊಳ್ಳಬಾರದು.ಮಹಿಷಾಸುರನಂಥ ದೈತ್ಯ ರಾಕ್ಷಸನನ್ನು ಸಂಹರಿಸಿದವಳೂ ಹೆಣ್ಣೇ.ಇಂದು ಕೋಟ್ಯಂತರ ಸಂಖ್ಯೆಯಲ್ಲಿರುವ ಇಂಥ ಮಹಿಷಾಸುರರನ್ನು ದಮನ ಮಾಡಬೇಕಾದಳೂ ಹೆಣ್ಣೇ.
ಕ್ಷಮಯಾಧರಿತ್ರಿ ಇನ್ನೆಷ್ಟು ದಿನ ಕ್ಷಮಿಸುವೆ?ಎದ್ದೇಳು ಉಗ್ರರೂಪಿಯಾಗು..
,
– ಲಕ್ಷ್ಮೀಶ ಜೆ.ಹೆಗಡೆ
ಉತ್ತಮ ಸಕಾಲಿಕ ಬರಹ…. ಲಕ್ಷ್ಮೀಶ್ ಅವರೇ.
ಸರ್..ಬರಹ ಉತ್ತಮವಾಗಿದೆ…ಹೌದು…ಮೈಸೂರಿನಲ್ಲಿ ಒಬ್ಬಾಕೆಗೆ ಯಾರೋ ದುಷ್ಕರ್ಮಿಗಳು ತೊಂದರೆ ಕೊಟ್ಟರೆಂದು … ಆಕೆ ರೊಚ್ಚಿಗೆದ್ದು ಓಡಾಡಿಸಿಕೊಂಡು ಒಡೆದಿದುದು ನ್ಯೂಸ್ ಆಗಿತ್ತು..
ತುಂಬಾ ಚೆನ್ನಾಗಿ ನಿರೂಪಿಸಿದ್ದೀರ ಲಕ್ಷ್ಮೀಶ ಅವರೇ! ಇದೇ ವಿಷಯವನ್ನು ಹಲವರು ಬರೆದ ಲೇಖನವನ್ನು ಓದಿದ್ದೇನೆ. ಆದರೆ ಇಷ್ಟು ಪ್ರಭಾವಶಾಲಿ ಆಗಿ ಬರೆದುದು ನೀವು ಮಾತ್ರ 🙂
Thanks every one for reading and commenting..
ಚೆನ್ನಾಗಿದೆ ಲಕ್ಷ್ಮೀಶ್ 🙂
Tumba prastuta vichara; Odi arthamadikollali Sarvasanghigalu…
ನಿಮ್ಮಂಥ ಯುವಕರಲ್ಲಿ ಇಂಥ ಸಂವೇದನಾಶೀಲ ವಿಚಾರಗಳು ಹುಟ್ಟಿಕೊಳ್ಳುವುದು ನಿಜಕ್ಕೂ ಮಹಿಳೆಯ ಅಭದ್ರತೆಯನ್ನು ಹೊಸೆದು ಹಾಕಲು
ಒಂದು ಪ್ರೇರಣೆ ಹಾಗು ಶಕ್ತಿ . ಲೇಖನ ಮನ ಮುಟ್ಟುವಂತೆ ಮೂಡೀ ಬಂದಿದೆ
ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ ಬಹಳ ಚೆನ್ನಾಗಿ ಬರೆದಿದ್ದೀರಿ .
ಮನಸ್ಸನ್ನು ಹಿಡಿದು ಅಲ್ಲಾಡಿಸಿದ ಬರಹವಿದು .ಮಾನವೀಯ ಮೌಲ್ಯವುಳ್ಳ ಒಬ್ಬ ವೈದ್ಯರ ಮನದ ಮಾತು ವಾಸ್ತವಿಕತೆಗೆ ಹಿಡಿದ ಕನ್ನಡಿ . ಹೆರಿಗೆ ನೋವಿನಿಂದ ಜೀವ ಮೇಲೆ ಹೋಗಿ ಕೆಳಗೆ ಬಂದರೂ ಸ್ತ್ರೀ ಮಾತೃತ್ವ ವನ್ನು ಧಿಕ್ಕರಿಸಲಿಲ್ಲ. ತಾಯಿ ಆಗಲಾರೆ ಎಂದು ಹಠ ಮಾಡಿದ್ದೆ ಆದರೆ ಪ್ರಪಂಚ ಮುಂದುವರೆಯುತ್ತಿರಲಿಲ್ಲ.ಅಪರೂಪದ ಬರಹ ,ಅತ್ತ್ಯುತ್ತಮ ಕೂಡಾ .
..
ಮನ ಮುಟ್ಟುವ ..ಸಮಕಾಲೀನ ಬರಹ…ಹೆಣ್ಣಿಗೆ ಸೆಟೆದು ನಿಲ್ಲುವ ಛಾತಿ ಬರಲಿ…